ಪಂಜು-ವಿಶೇಷ

ದೀಪ..!!: ಸಚಿನ್ ಎಂ. ಆರ್.

ದೀಪ..!!

ಕತ್ತಲೆಯ ಬಾಳಲ್ಲಿ ನೀನಾಗುವೆಯಾ ದೀಪ…?

ಅರಸುತಿದೆ ಮನವು ಮುಗ್ಧತೆಯ ಪಾಪಾ..

ಹಳೆಯ ನೋವೆಲ್ಲವೂ ಘನಘೋರ ಶಾಪ..

ಬೇಡ ನನಗಾವುದೇ ಅನುಕಂಪದ ತಾಪ..

ದೀಪದ ಬುಡದಲ್ಲಿ ಕತ್ತಲೆ… ಕತ್ತಲೆಯ ಮೇಲೊಂದು ದೀಪ…

ನನ್ನ ಬಾಳಿನ ಕತ್ತಲೆಗೆ ನೀನಾಗುವೆಯಾ ದೀಪ.. ನಂದದಾ ದೀಪ..

ಹುಡುಕುತಿದೆ ಮನವು ಬೆಳಕು ಕರೆದ ಎಡೆಗೆ..

ಕಿಡಿಗೇಡಿ ಬುದ್ಧಿಗೆ, ನನಬಾಳು ಒಡೆದ ಗಡಿಗೆ…

ದುಡುಕಿದ ಮನಕೆ ಬೇಕೊಂದು ಭಾವ..

ಮಡಿದ ಮನಸಿಗೆ ಕೊಡುವೆಯಾ ಜೀವ…!!

ಹಾಳಾದ ಮನಸು ಈ ಲೆವೆಲ್‌ಗೆ ಕವನ ಗೀಚ್ಕೊಂಡು, ಬಡಬಡಾಯಿಸಿಕೊಂಡು ಬಿದ್ದಿದೆ ಅಂದ್ರೆ ಯಾವ್ ರೇಂಜಲ್ಲಿ ದುಃಖ ಆಗಿರಬಹುದು ಅನ್ನೋದು ನಿಮಗ್ಯಾರಿಗೂ ಊಹೆಗೂ ಮೀರದ ಅಂಶ ಇದರಲ್ಲಿ ಅಡಕವಾಗಿದೆ..! ಹೀಗೆ ಬೀದೀಲಿ ಬಿದ್ದಿದ್ದು ಯಾವುದೋ ಲವ್ ಫೇಲ್ಯೂರ್ ಯುವಕನಲ್ಲ.., ಜಿಗುಪ್ಸೆಗೊಂಡ ಕುಡುಕನೂ ಅಲ್ಲ.. ಹುಚ್ಚನೂ ಅಲ್ಲ.. ಗ್ರಾಜುಯೇಟ್ ಭಿಕ್ಷುಕನೂ ಅಲ್ಲ…!! ಅದು ಸಮಾಜದಿಂದ ತಿರಸ್ಕೃತಗೊಂಡ ಒಂದು ಹೆಣ್ಣು ಮಗಳು ಅಂದ್ರೆ ನಂಬೋದು ತುಸು ಕಷ್ಟವೇ..!

ಆಕೆಯೇನು ಹುಚ್ಚಿಯಲ್ಲ.. ಆದರೆ ಸಮಾಜದ ಕಾಮುಕರಿಂದ ಸಾಮೂಹಿಕ ಅತ್ಯಾಚಾರಗೊಂಡು, ಮರ್ಯಾದೆಗೆ ಹೆದರಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಮನೆಯವರ ಕಂಡು, ಅತ್ತ ಸಾಯಲೂ ಆಗದ ಇತ್ತ ಬದುಕಲೂ ಬಾರದ ದುಸ್ಥಿತಿಯಲ್ಲಿರುವ ಒಬ್ಬ ಅಮಾಯಕಳ ಕೂಗು ಯಾರಿಗೂ ಕೇಳದಿದ್ದದ್ದು ಮಾತ್ರ ಸಮಾಜದ ದುರಂತ..! ಹುಚ್ಚಿ-ಅರೆಹುಚ್ಚಿ ಎಂದು ನಾಮಪಟ್ಟಿ ಅಂಟಿಸಿಕೊಂಡು ನಿರಂತರ ಶೋಷಣೆಗೆ ಒಳಗಾಗುತ್ತಿರುವ ಅವಳ ಬಾಳಿನಲ್ಲಿ ದೀಪ ಹಚ್ಚೋರು ಬಂದೇ ಇಲ್ಲ..! ಬಂದೋರೆಲ್ಲ ಬೆಂಕಿ ಇಟ್ಟು ಹೊಂಟೋದರು..! ಮಾಧ್ಯಮದವರಿಂದ ಹಿಡಿದು ರಾಜಕಾರಣಿಗಳವರೆಗೂ ಎಲ್ಲರೂ ಅವಳ ಹೆಸರಿಡಿದು ತಮ್ಮ ಬೆಲೆ ಹೆಚ್ಚಿಸಿಕೊಂಡರು, ಬೇಳೆ ಜೊತೆಗೆ ಕಾಳು ಕೂಡ ಬೇಯಿಸಿಕೊಂಡರು. ಯಾವೊಬ್ಬನ ಅನುಕಂಪದ ಅಲೆಯೂ ಅವಳ ಬಾಳಲ್ಲಿ ನವಿರಾಗಿ ಬರಲಿಲ್ಲ.. ಮುಂದೊಂದು ದಿನ ಡಾಕ್ಟರ್ ಆಗಬೇಕೆನ್ನುವ ಅವಳ ಹಂಬಲ ಬರೀ ಡೈರಿ ಪುಟಗಳಲ್ಲೇ ಉಳಿದಿತ್ತು. 

ಅವಳು ಮೊದಲು ಹೀಗಿರಲಿಲ್ಲ. ನೋಡಲು ಸುಂದರಿ, ಮೇಲಾಗಿ ಬುದ್ಧಿವಂತೆ. ಎಲ್ಲವನ್ನೂ ಚಾಕುಚಕ್ಯತೆಯಿಂದ ನಿಭಾಯಿಸುವ ಜಾಣೆ. ಮನೆಯವರ ಬೆಂಬಲವಿಲ್ಲದಿದ್ದರೂ ಸಹ ಚೆನ್ನಾಗಿ ಓದಿ ಡಾಕ್ಟರ್ ಆಗಬೇಕೆಂದು ಹಗಲಿರುಳು ಶ್ರಮಿಸುತ್ತಿದ್ದ ಕಷ್ಟಜೀವಿ. ಅದಕ್ಕಾಗಿ ಪಡಬಾರದ ಪಾಡು ಪಡುತ್ತಿದ್ದ ಅವಳಿಗೆ ಹತ್ತು ಹಲವರ ಕೆಟ್ಟಕಣ್ಣು ಬಿದ್ದಿದ್ದರೂ ಯಾವುದಕ್ಕೂ ತಲೆಬಾಗದೇ, ತಲೆಕೆಡಿಸಿಕೊಳ್ಳದೇ ಮುನ್ನುಗ್ಗುತ್ತಿದ್ದ ಅವಳು ಸ್ವಾಭಿಮಾನಿ. ನೋಡುಗರ ಕಣ್ಣಿಗೆ ನಿಜಕ್ಕೂ ಮಾದರಿ ಹೆಣ್ಣು. ಆದರೆ ಆ ದಿನದ ಕರಾಳ ರಾತ್ರಿಯಲ್ಲಿ, ಈ ಕೆಟ್ಟ ಪ್ರಪಂಚದಲ್ಲಿ ಅವಳು ಹೆಣ್ಣಾಗಿದ್ದೇ ತಪ್ಪು ಎಂಬಂತ ಪರೀಸ್ಥಿತಿ ನಿರ್ಮಾಣವಾಗಿತ್ತು. ಹೈಸ್ಕೂಲ್ ಮಕ್ಕಳಿಗೆ ಮನೆಪಾಠ ಹೇಳಿಕೊಟ್ಟು ಮನೆಗೆ ಹಿಂತಿರುಗುವಾಗ ಕಿಡಿಗೇಡಿ ಕಾಮುಕರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ತೀವ್ರ ಅಸ್ವಸ್ಥಗೊಂಡಿದ್ದರೂ ಧೃತಿಗೆಡದೇ ಹೇಗೋ ಮನೆಸೇರಿದ್ದಳು. ಈ ಸ್ಥಿತಿಗೆ ಕಾರಣರಾದವರನ್ನು ಸದೆಬಡಿದು ಈ ಬದುಕಿನಲ್ಲಿ ಸಾಧನೆಗೆ ಇದ್ಯಾವುದೂ ಅಡ್ಡಿಯಾಗಬಾರದೆಂದು ಬಯಸಿದ್ದಳು. ಆದರೆ ಅವಳಿಗೆ ಸಮಾಜದಿಂದಾಗಲಿ, ಮನೆಯವರಿಂದಾಗಲಿ ಒಂದಿಷ್ಟೂ ಆಸರೆ ದೊರಕಲಿಲ್ಲ. ದಿನಂಪ್ರತಿ ಚುಚ್ಚುಮಾತು ಮನೋಸ್ಥೈರ್ಯ ಕುಗ್ಗಿಸುವ ಹುಚ್ಚು ಕಾಯಕ. ಇವಳದಲ್ಲದ ತಪ್ಪಿಗೆ ಇವಳ ಹೆಸರು ಹಳಿ ಹೀಯಾಳಿಸಿ ಕೊನೆಗೂ ಆತ್ಮಹತ್ಯೆಗೆ ಶರಣಾದ ಕೆಳಮಧ್ಯಮ ವರ್ಗದ ಪುಕ್ಕಲು ತಂದೆತಾಯಿ ಪಡೆದದ್ದು ವಿಧಿಯಾಟ. ಇದು ಅವಳನ್ನು ಮಾನಸಿಕವಾಗಿ ಮತ್ತಷ್ಟು ಘಾಸಿಗೊಳಿಸಿತ್ತು. ಕೊನೆಕೊನೆಗೆ ಮೌನವಾಗಿದ್ದ ಅವಳನ್ನು ಹುಚ್ಚಿ ಪಟ್ಟ ಕಟ್ಟಿ ಸಂಬಂಧಿಕರೆಲ್ಲಾ ಸೇರಿ ಹುಚ್ಚಾಸ್ಪತ್ರೆಗೆ ನೂಕಿ ಕೈ ತೊಳೆದುಕೊಂಡರು. 

ಹೀಗೆ ನಿರಂತರ ಶೋಷಣೆಗೆ ಒಳಗಾದ ಅವಳ ಜೀವ ಕೂಡ ಅವಳಿದ್ದ ಹುಚ್ಚಾಸ್ಪತ್ರೆಯ ಸಿಬ್ಬಂದಿಯಿಂದಲೇ ಮತ್ತೆ ಮತ್ತೆ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದದ್ದು ಮಾತ್ರ ಸಮಾಜದ ವ್ಯಂಗ್ಯಕ್ಕೆ ಹಿಡಿದ ಕತ್ತಲೆ..!! ಅವಳು ಸತ್ತ ನಂತರ ಈ ನಮ್ಮ ಸಮಾಜಕ್ಕೆ ಹೇಗೋ ಏನೋ ಸಡನ್ ಜ್ಞಾನೋದಯವಾಗಿ ಪ್ರತಿಭಟನೆಗಳೆಲ್ಲಾ ಜೋರಾಗಿ ನಡೆಯುತ್ತಿತ್ತು. ಇತ್ತ ಅವಳ ಶವವು ನಗುತ್ತಿತ್ತು..!  ಜನರ ಮೆರವಣಿಗೆ…. ಮೊಂಬತ್ತಿಯ ದೀಪದ ಕಾವಿಗೆ ಮೇಣದ ಹಣತೆ ಕರಗುತ್ತಿತ್ತು. 

ದೀಪದ ಬುಡದಲ್ಲಿ ಕತ್ತಲೆ… ಸಾಬೀತಾಯಿತು ಮತ್ತದೇ ಮತ್ತಲ್ಲೇ…!

ಇದ್ದಾಗ ನಕ್ಕರು.. ಸತ್ತಾಗ ಅತ್ತರು.. ಆದರೆ ಅವರ್‍ಯಾರಿಗೂ ಕಾಣಲೇ ಇಲ್ಲ ಸುರಿಯುತ್ತಿದ್ದ ಅವಳ ಕೆಂಪು ನೆತ್ತರು…!!

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ದೀಪ..!!: ಸಚಿನ್ ಎಂ. ಆರ್.

Leave a Reply

Your email address will not be published. Required fields are marked *