ದೀಪಾವಳಿಗೆ ಇನ್ನೆರೆಡು ದಿನವಿರಬೇಕಾದರೆ, ರಾತ್ರಿ ಜ್ವರ ಜೊತೆಗೆ ವಿಪರೀತ ನಡುಕ. ಬೆಳಗ್ಗೆ ವೈದ್ಯರಿಗೆ ತೋರಿಸಿದಾಗ ವೈರಾಣು ಸೋಂಕಿನಿಂದ ಜ್ವರ ಬಂದಿದೆ ಎಂದು ಪ್ಯಾರಾಸಿಟಮಲ್ ಮಾತ್ರೆ ಕೊಟ್ಟರು. ಮತ್ತೆ ರಾತ್ರಿ ಜ್ವರ ವಿಪರೀತ ನಡುಕ. ಬೆಳಗ್ಗೆ ಎದ್ದು ಮೂತ್ರಕ್ಕೆಂದು ನಿಂತರೆ ಅಸಾಧ್ಯ ಉರಿ. ಮೂತ್ರದ ಬಣ್ಣ ತಿಳಿಗೆಂಪು. ವಿಪರೀತ ಸುಸ್ತು. ಡ್ಯೂಟಿಗೆ ಹೋಗಲೇಬೇಕಾದ ಅನಿವಾರ್ಯತೆಯಿತ್ತು. ಬಹುಶ: ನೀರು ಕಡಿಮೆಯಾಗಿ ಹೀಗಾಗಿದೆ ಎಂದುಕೊಂಡು ಕೊತ್ತಂಬರಿ ಹಾಕಿ ಕುದಿಸಿದ ೨ ಲೀಟರ್ ನೀರು ಕುಡಿದಿದ್ದಾಯಿತು. ಮತ್ತೆ ವೈದ್ಯರಿಗೆ ಹೇಳಿದಾಗ ಮೂತ್ರಪರೀಕ್ಷೆ ಮಾಡುವ ಎಂದರು. ಮೂತ್ರಪರೀಕ್ಷೆಯ ಫಲಿತಾಂಶ ಬಂದಾಗ ಮೂತ್ರನಾಳದಲ್ಲಿ ಸೋಂಕಿದೆ ಎಂದರು. ಆಂಟಿಬಯಾಟಿಕ್ ಹಾಕಲೇಬೇಕು ಎಂದರು. ಸರಿ ಆಂಟಿಬಯಾಟಿಕ್, ಜ್ವರ ಮತ್ತು ಹೊಟ್ಟೆಯುರಿಗೆ ಮಾತ್ರೆ ನುಂಗಿದ್ದಾಯಿತು. ಕಾಲುಗಂಟೆಗೊಂದು ಬಾರಿಯಂತೆ ಕಾಲು ಲೀಟರ್ ನೀರು ಹೊಟ್ಟೆ ಸೇರಿತು. ಜೊತೆಗೆ ಬಾರ್‍ಲಿ, ಸೋನಮುಖಿ, ಅರಾರೋಟ್, ಎಳನೀರು, ಮಜ್ಜಿಗೆ, ರೇಣುಕೆ ಬೀಜದ ನೀರು ಹೀಗೆ ಕುಡಿ-ಕುಡಿದು ಬಚ್ಚಲಿನಲ್ಲೇ ಹೆಚ್ಚು ಸಮಯ ಕಳೆಯುವ ಪರಿಸ್ಥಿತಿ ಬಂತು. ನಿಧಾನವಾಗಿ ಸೋಂಕು ಕಡಿಮೆಯಾಗುತ್ತಾ ಬಂತು. ಆದರೆ, ೬ ಅಡಿ ದೇಹದಲ್ಲಿ ಒಂದಿನಿತು ಶಕ್ತಿಯಿಲ್ಲ. ನಿದ್ದೆ ದೂರ. ರಾತ್ರಿ ಕಳೆಯುವುದೆಂದರೆ ನರಕ. ಟಿವಿಯಲ್ಲಿ ಬರುವ ಎಲ್ಲಾ ಅಪದ್ಧಗಳನ್ನು ನೋಡಿ ಸುಸ್ತಾಯಿತು. ದುರದೃಷ್ಟಕ್ಕೆ ಪ್ರಾಣಿಗಳ ಲೋಕದ ಚಾನಲ್‌ಗಳಲ್ಲೂ ನೋಡಿದ ಪ್ರೋಗ್ರಾಂಗಳ ಪುನರಾವರ್ತನೆ. ಏನಾದರಾಗಲೀ, ಎಂದು ಕನ್ನಡ ನ್ಯೂಸ್ ಚಾನೆಲ್ ಹಾಕಿದರೆ, ಆಂಧ್ರಪ್ರದೇಶದಲ್ಲಿ ಪಟಾಕಿ ಗೋಡೌನ್‌ಗೆ ಬೆಂಕಿ-೨೦ ಸಾವು. ರಾಯಚೂರಿನಲ್ಲಿ ಪಟಾಕಿಯಿಂದ ಎರಡೂ ಕಣ್ಣುಗಳನ್ನು ಕಳೆದುಕೊಂಡ ದೃಶ್ಯ, ಉತ್ತರಭಾರತದಲ್ಲೊಂದು ಪಟಾಕಿ ಕಾರ್ಖಾನೆಗೆ ಬೆಂಕಿ ೭ ಜನರ ಸಜೀವ ದಹನ. ಇದರ ಮಧ್ಯೆ ಬಂಗಾರದ ಆಭರಣಗಳನ್ನು ಸ್ಪೆಶಲ್ ರೇಟಿನಲ್ಲಿ ಖರೀಸಿದಿ ಎಂಬ ಜಾಹಿರಾತುಗಳು. ಮುಂದುವರೆದು ಸಾರ್ವಜನಿಕರು ಪಟಾಕಿ ಹೊಡೆದು ದೀಪಾವಳಿಯನ್ನು ಸಂಭ್ರಮಿಸಿದರು ಎಂಬುದನ್ನು ಇನ್ನೂ ಸಂಭ್ರಮದಿಂದ ಉಲಿಯುವ ವಾರ್ತಾವಾಚಕಿ!! ಇತ್ಯಾದಿಗಳು. ಟಿವಿ ಸಹವಾಸವೇ ಬೇಡ ಎನ್ನುವಷ್ಟರಲ್ಲಿ ದಿನಪತ್ರಿಕೆ ಬಂದಿತ್ತು. ೩೦-೪೦ ಪುಟಗಳ ದೀಪಾವಳಿ ಸ್ಪೆಶಲ್ ಎಡಿಷನ್. ಮುಖಪುಟದಲ್ಲೇ ಜಾಹೀರಾತು. ಒಳಪುಟಗಳಲ್ಲಿಯೂ ಜಾಹೀರಾತು, ಮಧ್ಯೆ-ಮಧ್ಯೆ ಒಂದಿಷ್ಟು ರಾಜಕೀಯ-ಭ್ರಷ್ಟಾಚಾರ-ಬಲತ್ಕಾರ-ಪಟಾಕಿಯಿಂದಾದ ಬೆಂಕಿ ಅನಾಹುತದ ಸುದ್ದಿಗಳು.
ಒಂದಿಷ್ಟು ಗಂಜಿ ಕುಡಿದು, ಮಾತ್ರೆ ನುಂಗಿದ ನಂತರ ಇಂಜಕ್ಷನ್ ತೆಗೆದುಕೊಳ್ಳಲು ಪೇಟೆಗೆ ಹೋಗಬೇಕು. ಒತ್ತಾಯದಿಂದ ಪ್ಯಾಂಟೇರಿಸಿ, ಹೊರಟು ಅರ್ಧ ಕಿ.ಮಿ. ಬರುವಷ್ಟರಲ್ಲಿ ಹತ್ತಾರು ದನ-ಕರುಗಳ ಕೊರಳಲ್ಲಿ ಮಾಲೆ, ಒಂದರ ಕೊರಳಿನ ಮಾವಿನೆಲೆಯನ್ನು, ಚೆಂಡುಹೊವನ್ನು ತಿನ್ನಲ್ಲು ಪರಸ್ಪರ ಪೈಪೋಟಿ. ಮೈಗೆಲ್ಲಾ ಬಣ್ಣ ಬಳಿಸಿಕೊಂಡು ಕುಣಿಯುತ್ತಿರುವ ಕರುಗಳು, ಕಪ್ಪು ಪ್ಲಾಸ್ಟಿಕ್ ಚೀಲದಿಂದ ಒಂದೊಂದೇ ಪಟಾಕಿಯನ್ನು ತೆಗೆದು ಅಣ್ಣನಿಗೆ ಕೊಡುತ್ತಿರುವ ಪೋರ. ಉತ್ತಾರಾಭಿಮುಖವಾಗಿ ನಿಲ್ಲಿಸಿದ ದೊಡ್ಡ-ದೊಡ್ಡ ಕಾರುಗಳು, ಅವುಗಳಿಗೆ ಭರ್ಜರಿ ಪುಷ್ಪಾಲಂಕಾರ, ಅರ್ಚಕರಿಂದ ಮಂಗಳಾರತಿ ಪೂಜೆ, ಕಾರಿನ ನಾಲ್ಕೂ ಚಕ್ರದಡಿಗೆ ನಾಲ್ಕು ನಿಂಬೆಹಣ್ಣುಗಳು, ಸ್ಟೆಫ್ಣಿ ಚಕ್ರಕ್ಕೆ ಈ ಭಾಗ್ಯವಿಲ್ಲ, ಹೆಡ್‌ಲೈಟ್ ಹಾಕಿ, ಹಾಂ! ಈಗ ನಿಂಬೆಹಣ್ಣಿನ ಮೇಲೆ ಹತ್ತಿಸಿ, ಹಾಂ! ಹಾಂ! ನಾಲ್ಕೂ ನಿಂಬೆಹಣ್ಣುಗಳು ಅಪ್ಪಚ್ಚಿಯಾದ ಮೇಲೆ ಅರ್ಚಕರು ಯಜಮಾನನಿಗೆ ಪ್ರಸಾಧ ನೀಡಿದರು, ಯಜಮಾನ ದಕ್ಷಿಣೆ ನೀಡಿದರು. ಪೇಟೆಗೆ ಬರುತ್ತಿದ್ದಂತೆ ಪಟಾಕಿಗಳ ಅಬ್ಬರ ಹೆಚ್ಚಾಯಿತು. ಅದೇಕೊ ಅವಸರಪಟ್ಟವರಂತೆ ಕತ್ತಲಾಗುವುದಕ್ಕೂ ಕಾಯದೆ ಹಗಲಿನಲ್ಲೇ ನೆಲಚಕ್ರವನ್ನು ಹಚ್ಚಿದ್ದ. ಔಷಧದಂಗಡಿಯವನು ರೋಗಿಗಳಿಗೆ ಮಾತ್ರೆ ಕೊಡುವುದನ್ನು ಮರೆತು ಪಟಾಕಿ ಸರಕ್ಕೆ ಬೆಂಕಿ ಹಚ್ಚುತ್ತಿದ್ದ. ಅಲ್ಲೇ ಪಕ್ಕದಲ್ಲಿ ಐಷಾರಾಮಿ ಕಾರೊಂದು ಭರ್ಜರಿ ಹೂವಿನ ಶೃಂಗಾರ ಮಾಡಿಕೊಂಡು ಪೂಜೆ ಮಾಡಿಸಿಕೊಳ್ಳಲು ಭಟ್ಟರಿಗೆ ಕಾಯುತ್ತಿತ್ತು. ದಾರಿಯಲ್ಲಿ ಹೋಗುವ ಗೋವೊಂದು ಹೂವಿನ ಹಾರಕ್ಕೆ ಬಾಯಿ ಹಾಕಿತು. ಕುಂಬಾರನಿಗೆ ವರುಷ-ದೊಣ್ಣೆಗೆ ನಿಮಿಷ ಎಂಬಂತೆ, ದನ ಬಾಯಿಹಾಕಿ ಎಳೆಯುತ್ತಿದ್ದಂತೆ ಇಡೀ ಅಲಂಕಾರ ಕಳಚಿಕೊಂಡು ನೆಲಕ್ಕೆ ಬಿತ್ತು. ಮಾಲೀಕನಿಗೆ ವಿಪರೀತ ಕೋಪ ಬಂದು ಗೋ-ಪೂಜೆಯೆಂಬುದನ್ನು ಮರೆತು ಅಲ್ಲೇ ಇದ್ದ ರೀಪ್ ಪೀಸ್ ತೆಗೆದುಕೊಂಡು ದನದ ಹಿಂದಿನ ಭಾಗಕ್ಕೆ ಹೊಡೆದ, ಬಾಲಕ್ಕೆ ಕುಂಕುಮ ಹಚ್ಚಿದ ಜಾಗದಲ್ಲಿ ಚರ್ಮ ಕಿತ್ತುಬಂದು, ಕುಂಕುಮದೊಂದಿಗೆ ರಕ್ತವೂ ಸೇರಿಕೊಂಡು ಇನ್ನೂ ಕೆಂಪಾಯಿತು.
ದೇಹದಲ್ಲಿ ಸಂಚಯವಾಗುವ ದ್ರವರೂಪದ ಉಚ್ಚಿಷ್ಠಗಳನ್ನು ದೇಹದಿಂದ ಹೊರಹಾಕಲು ದೇಹದಲ್ಲಿ ಇರುವ ವ್ಯವಸ್ಥೆಯೇ ಮೂತ್ರಕೋಶ ವ್ಯೂಹ (ಯೂರಿನರಿ ಟ್ರ್ಯಾಕ್ಟ್), ಇದರಲ್ಲಿ ಮೂತ್ರಪಿಂಡ, ಮೂತ್ರಕೋಶ, ಮೂತ್ರನಾಳ ಅಥವಾ ಮೂತ್ರ ವಿಸರ್ಜನಾ ನಾಳ. ಈ ಭಾಗದಲ್ಲಿ ಆಗುವ ಸೋಂಕಿಗೆ ಇಂಗ್ಲೀಷ್‌ನಲ್ಲಿ ಯೂರಿನರಿ ಟ್ರ್ಯಾಕ್ಟ್ ಇನ್‌ಫೆಕ್ಷನ್ ಎಂದು ಕರೆಯುತ್ತಾರೆ. ಸೂಕ್ತ ಚಿಕಿತ್ಸೆ ನೀಡಿದಲ್ಲಿ ಬೇಗ ಗುಣವಾಗಬಲ್ಲ ಈ ಸೋಂಕು, ನಿರ್ಲಕ್ಷ್ಯ ಮಾಡಿದರೆ ಮೂತ್ರಪಿಂಡಗಳಿಗೆ ತೊಂದರೆ ಮಾಡುವ ಸಂಭವವಿರುತ್ತದೆ. ಸಾಮಾನ್ಯವಾಗಿ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವ ಮೂತ್ರಕೋಶದ ಸೋಂಕು, ಗರ್ಭೀಣಿ ಸ್ತ್ರೀಯರನ್ನು ಹೆಚ್ಚಾಗಿ ಕಾಡುತ್ತದೆ. ಇದಕ್ಕೆ ದೈಹಿಕ ರಚನೆಯೂ ಕಾರಣವಾಗಿದೆ. ಅಂದರೆ, ಗಂಡಸರಲ್ಲಿ ಮೂತ್ರ ವಿಸರ್ಜನಾ ನಾಳ ೨೦ ಸೆಂಟೀಮೀಟರ್ ಉದ್ದವಿದ್ದರೆ, ಮಹಿಳೆಯರಲ್ಲಿ ಇದರ ಗಾತ್ರ ಬರೀ ೪ ಸೆಂಟೀಮೀಟರ್ ಆಗಿದೆ. ಸಾಮಾನ್ಯವಾಗಿ ನಮ್ಮ ಹೊಟ್ಟೆಯಲ್ಲಿರುವ ಸೋಂಕುಕಾರಕ ಜೀವಾಣುಗಳು ಕೆಲವೊಮ್ಮೆ ಮೂತ್ರಕೋಶ ವ್ಯೂಹಕ್ಕೆ ಪ್ರವೇಶಿಸಿ, ಸೋಂಕಿಗೆ ಕಾರಣವಾಗುತ್ತವೆ. ಅಲ್ಲಿ ಅವು ತಮ್ಮ ಸಂಖ್ಯೆಯನ್ನು ವೃದ್ಧಿಸಿಕೊಂಡು ತೊಂದರೆಗೆ ಕಾರಣವಾಗುತ್ತವೆ. ಇನ್ನಿತರ ಕಾರಣಗಳೆಂದರೆ, ದೇಹಕ್ಕೆ ಬೇಕಾದ ಪ್ರಮಾಣದ ಶುದ್ಧ ನೀರು ಸೇವಿಸದೇ ಇರುವುದು, ಅಶುಚಿಯಿಂದ ಕೂಡಿದ ಸಾರ್ವಜನಿಕ ಮೂತ್ರಿಗಳನ್ನು ಉಪಯೋಗಿಸುವುದು, ಶೌಚದ ನಂತರ ಸರಿಯಾಗಿ ಶುದ್ದವಾಗದೇ ಇರುವುದು, ಮೂತ್ರಕೋಶ ಸೋಂಕಿರುವವರೊಡನೆ ಲೈಂಗಿಕ ಕ್ರಿಯೆ ನಡೆಸಿದಾಗ, ಮಧುಮೇಹ ರೋಗ ಇತ್ಯಾದಿಗಳು.
ಮೂತ್ರಕೋಶದ ಸೋಂಕುಂಟಾದ ವ್ಯಕ್ತಿಗೆ ಪದೇ-ಪದೇ ಮೂತ್ರ ಮಾಡಬೇಕು ಅನಿಸುವುದು. ಆದರೆ, ಪೂರ್ಣಪ್ರಮಾಣದಲ್ಲಿ ಮೂತ್ರ ಮಾಡಲು ಸಾಧ್ಯವಾಗದೇ ಇರುವುದು. ಕೆಳಹೊಟ್ಟೆಯ ಭಾಗದಲ್ಲಿ ನೋವು ಹಾಗೂ ಕೆಲವೊಮ್ಮೆ ಬೆನ್ನುನೋವು ಕಾಣಿಸಿಕೊಳ್ಳಬಹುದು. ಮೂತ್ರಪರೀಕ್ಷೆಯಿಂದ ಸುಲಭದಲ್ಲಿ ಸೋಂಕನ್ನು ಪತ್ತೆಹಚ್ಚಬಹುದು. ಪ್ರತಿಜೀವಕಣ (ಆಂಟಿಬಯಾಟಿಕ್) ಹಾಗೂ ಜ್ವರನಿವಾರಕಗಳ ಮಾತ್ರೆಗಳನ್ನು ರೋಗಿಗೆ ನೀಡಲಾಗುತ್ತದೆ. ಹಾಗೂ ೧೫-೨೦ ನಿಮಿಷಗಳಿಗೊಮ್ಮೆ ನೀರನ್ನು ಕುಡಿಯುತ್ತಾ ಇದ್ದಾಗ, ಬಲುಬೇಗ ಮೂತ್ರಕೋಶದ ಸೋಂಕಿನಿಂದ ಗುಣವಾಗಬಹುದು. ಮೂತ್ರಕೋಶದ ಸೋಂಕುಂಟಾದ ವ್ಯಕ್ತಿಯು ಅತೀವ ಸುಸ್ತಿನಿಂದ ಬಳಲುತ್ತಾನೆ. ನಿಯಮಿತವಾದ ಚಿಕಿತ್ಸೆಯಿಂದ ಇದನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಯಾವುದಾದರೂ ವ್ಯಕ್ತಿಗೆ ಅತಿಹೆಚ್ಚು ಸೋಂಕುಂಟಾಗಿದ್ದಾಗ, ಅಭಿದಮನಿಯ ಮೂಲಕ ದ್ರವರೂಪದ ಸೋಂಕುನಿವಾರಕಗಳನ್ನು ಚುಚ್ಚಲಾಗುತ್ತದೆ. ಅಲ್ಲದೇ ಬಾರ್‍ಲಿಯನ್ನು ನೀರಿನಲ್ಲಿ ಕುದಿಸಿ, ಪದೇ-ಪದೇ ಕುಡಿಯುವುದರಿಂದಲೂ ಕೂಡ ಸ್ವಲ್ಪಮಟ್ಟಿನ ಶಮನವಾಗುತ್ತದೆ.
ಹೀಗೆ ೩ ದಿನಗಳ ಆಂಟಿಬಯಾಟಿಕ್ ಮಾತ್ರೆಗಳನ್ನು ಸೇವಿಸಿದ್ದರಿಂದ ಸೋಂಕು ಸುಮಾರು ೭೦% ಕಡಿಮೆಯಾಯಿತಾದರೂ, ಸೋಂಕಿನಿಂದಾದ ಸುಸ್ತು ಬಹಳವಾಗಿ ಜೀವವನ್ನು ಹಣ್ಣು ಮಾಡಿತು. ಹೊಟ್ಟೆಯಲ್ಲಿರುವ ಕಲ್ಮಶದಲ್ಲಿರುವ ಒಂದು ಅತಿಚಿಕ್ಕ ವೈರಾಣು ಮೂತ್ರಕೋಶಕ್ಕೆ ಸೇರಿ ಒಬ್ಬ ವ್ಯಕ್ತಿಯನ್ನು ಈ ಪರಿ ಹಣ್ಣು ಮಾಡುವುದನ್ನು ಸ್ವತ: ಅನುಭವಿಸಬೇಕಾಯಿತು. ಸೋಂಕು ಅತಿಯಾಗಿ ಕಾಡುವಾಗ, ಯಾಕಾದರೂ ಈ ಜೀವ ಇದೆಯೋ ಅನಿಸಿತ್ತು.
ಹಾಗೆಯೇ ಈ ಭೂಮಿಯನ್ನು ನಮ್ಮ ದೇಹಕ್ಕೆ ಹೋಲಿಸಿಕೊಳ್ಳೋಣ. ನಮ್ಮ ದೇಹಕ್ಕಿಂತ ಭೂಮಿಯ ರಚನೆ ಸಂಕೀರ್ಣವಾದದು. ನಿಸರ್ಗಸಹಜವಾಗಿ ನಡೆಯುವ ಎಲ್ಲಾ ರೀತಿಯ ಕ್ರಿಯೆಗಳು ಭೂಮಿಯ ಆರೋಗ್ಯಕ್ಕೆ ಪೂರಕವಾಗಿಯೇ ಇರುತ್ತವೆ. ಚಿರತೆ ಜಿಂಕೆಯನ್ನು ಕೊಂದು ತಿನ್ನುವುದು ನಿಸರ್ಗಸಹಜ ಕ್ರಿಯೆ. ಚಿರತೆಗಳು ಬಿಟ್ಟದ್ದನ್ನು ಸ್ವಚ್ಚ ಮಾಡಲು ನೈಸರ್ಗಿಕ ಜಾಡಮಾಲಿಗಳಾದ ಹದ್ದುಗಳಿವೆ. ಜೇಡ ಬಲೆಕಟ್ಟಿ ಕೂರುವುದು ನೈಸರ್ಗಿಕ ಕ್ರಿಯೆ. ಹೀಗೆ ಅಗಾಧ ವಿಶ್ವದಲ್ಲಿ ಅಸಂಖ್ಯಾತ ಈ ತರಹದ ಕ್ರಿಯೆಗಳು ನಡೆಯುತ್ತವೆ. ಇದರಿಂದ ಭೂಮಿಯ ಆರೋಗ್ಯದಲ್ಲೇನೂ ಏರುಪೇರು ಆಗುವುದಿಲ್ಲ. ಹಾಗೆಯೇ ಮನುಷ್ಯನ ಬದುಕೂ ನಿಸರ್ಗ ಸಹಜವಾದದೇ ಆಗಿದೆ. ಇಲ್ಲಿ ಒಂದೇ ಒಂದು ತೊಡಕು ಎಂದರೆ, ನಾವು ಹೆಚ್ಚು ಕ್ರಿಯಾಶೀಲರು, ಕುತೂಹಲಿಗಳು, ಸಂತೋಷವನ್ನು ಕೃತಕವಾಗಿ ಸೃಷ್ಟಿಮಾಡುವ ಸಾಮರ್ಥ್ಯವುಳ್ಳವರು ಆಗಿರುವುದು. ಉದಾಹರಣೆಯಾಗಿ, ದೀಪಾವಳಿಯಲ್ಲಿ ಆಚರಿಸ್ಪಡುವ ಸಾಂಪ್ರಾದಾಯಿಕ ಆಚರಣೆಗಳು ಹಾನಿಕಾರಕವಲ್ಲ. ಕೃತಕವಾಗಿ ಸಂತೋಷವನ್ನು ಅರಸುವ ನಾವು ಹೊಸ-ಹೊಸ ರೀತಿಯ ಪಟಾಕಿಗಳ ಮೊರೆ ಹೋಗುತ್ತೇವೆ. ಪಟಾಕಿ ಹೊಡೆಯುವುದು ನಮಗೆ ಪ್ರತಿಷ್ಠೆಯ ಪ್ರಶ್ನೆಯಾಗುತ್ತದೆ. ಹಬ್ಬದಂದು ಹೆಚ್ಚು-ಹೆಚ್ಚು ವಸ್ತುಗಳು ಮಾರಾಟವಾಗುತ್ತವೆ. ಬಂಗಾರದ ವಹಿವಾಟು ಹೆಚ್ಚುತ್ತದೆ. ಝಗಮಗಿಸುವ ದೀಪಾಲಂಕಾರಗಳು ನಮಗೆ ಕೋಡು ಮೂಡಿಸುತ್ತವೆ. ಹೀಗೆ ಈ ತರಹದ ಪ್ರಕ್ರಿಯೆಗಳು ಈ ಭೂಮಿಯ ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಅಸಹಜವಾದದು ಮತ್ತು ಭೂಮಿಯ ಆರೋಗ್ಯಕ್ಕೆ ಧಕ್ಕೆ ತರುವಂತಹದು ಆಗಿವೆ. ಪಟಾಕಿಯಿಂದ ವಾಯು-ಶಬ್ಧ-ಜಲ-ದೃಶ್ಯ ಮಾಲಿನ್ಯಗಳು ಆಗುತ್ತವೆ ಎಂಬುದನ್ನು ಪ್ರತಿಪಾಧಿಸುವವರನ್ನು ತೆಗಳುವ ಗುಂಪೂ ಇದೆ. ಅವರ ವಿಷಯ ಇಲ್ಲಿ ಬೇಡ ಬಿಡಿ. ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಪತ್ರಿಕೆಯೊಂದರ ಲೇಖನದಲ್ಲಿ ಪಟಾಕಿ ವಿರೋಧಿಸುವವರನ್ನು ವಾಚಾಮಗೋಚರ ತೆಗಳಿ, ದೀಪಾವಳಿಯಲ್ಲಿ ಪಟಾಕಿ ಹೊಡೆಯುವುದು ಹಿಂದೂಗಳ ಆಜನ್ಮಸಿದ್ದ ಹಕ್ಕು ಎಂಬುದನ್ನು ಪ್ರತಿಪಾತಿಸಲಾಗಿತ್ತು. ೭೦೦ ಚಿಲ್ಲರೆ ಕೋಟಿ ವೈರಾಣುಗಳ ದಾಳಿಯಿಂದ ಈ ಭೂಮಿ ಉಳಿದೀತೇ?
ದೀಪಾವಳಿ ಹಬ್ಬದ ದಿನದಂದೇ ಮೂತ್ರಕೋಶದ ಸೋಂಕಿಗೆ ತುತ್ತಾಗಿ, ಹೈರಾಣಾಗಿ, ಚಿಕಿತ್ಸೆ ಪಡೆಯಲು ಅನಿವಾರ್ಯವಾಗಿ ಪೇಟೆಗೆ ಬಂದವನಿಗೆ ಕಂಡ ವಿ(ಶೇ)ಷಗಳಿವು. ಭವ್ಯ ಭಾರತದ ಒಂದೂರಿನಲ್ಲೇ ಭೂಮಿಯ ಮೇಲೆ ಇಷ್ಟು ಸೋಂಕು ಹರಡುತ್ತದೆ ಎಂದರೆ ಇಡೀ ಭಾರತದಲ್ಲಿ ಇದರ ಮಟ್ಟ ಎಷ್ಟು?. ಈ ಭೂಮಿಗೆ ಹಬ್ಬಿದ ಈ ಸೋಂಕನ್ನು ಗುಣಪಡಿಸಲು ನಮ್ಮಲ್ಲ್ಯಾವ ಔಷಧಗಳಿವೆ, ಯಾವ ವೈದ್ಯರಿದ್ದಾರೆ ಎಂದು ಕೇಳಿದರೆ ಯಾರಲ್ಲೂ ಉತ್ತರ ಸಿಗುವುದಿಲ್ಲ. ಈ ಭೂಮಿಗೆ ವಕ್ಕರಿಸಿದ ರೋಗಗಳು ನಾವೇ ಮತ್ತು ಚಿಕಿತ್ಸೆಯನ್ನೂ ನಾವೇ ಮಾಡಬೇಕು. ಮೊಟ್ಟ ಮೊದಲಿಗೆ ವಿವೇಚನೆಯುಕ್ತವಾಗಿ ಬಾಳುವುದು ಹೇಗೆ ಎಂಬುದನ್ನು ಪ್ರತಿಯೊಬ್ಬರು ಚಿಂತಿಸಬೇಕು. ಆಸೆಗೊಂದು ಮಿತಿ ಬೇಕು.
*****