ಪ್ರಶಸ್ತಿ ಅಂಕಣ

ದೀಪಾವಳಿ: ಪ್ರಶಸ್ತಿ ಅಂಕಣ


ಪೀಠಿಕೆ:

ಮುಂಚೆಯೆಲ್ಲಾ ದೀಪಾವಳಿ,ದಸರಾಗಳೆಂದರೆ ಮನೆ ತುಂಬಾ ಜನ. ಎಲ್ಲೇ ಇದ್ದರೂ ವರ್ಷಕ್ಕೊಮ್ಮೆಯಾದರೂ ಹಬ್ಬದ ಸಂದರ್ಭ ಮಕ್ಕಳೆಲ್ಲಾ ತಮ್ಮ ಮೂಲಮನೆಗೆ ಹೋಗೋದು ಪದ್ದತಿ. ಎಲ್ಲಾ ಸೇರಿ ಖುಷಿ ಖುಷಿಯಾಗಿ ಹಬ್ಬ ಆಚರಿಸುತ್ತಿದ್ದ ಖುಷಿಯೇ ಬೇರೆ. ಅವಿಭಕ್ತ ಕುಟುಂಬಗಳೆಲ್ಲಾ ಕಡಿಮೆಯಾಗುತ್ತಿದ್ದಂತೆಯೇ, ಜನರಲ್ಲಿ ಸ್ವಾರ್ಥ, ಅಸೂಯೆಗಳು ಹೆಚ್ಚಾಗುತ್ತಾ ಬರುತ್ತಿದ್ದಂತೆಯೇ, ಹಳ್ಳಿಗಳಿಂದ ಪಟ್ಟಣಗಳತ್ತ ವಲಸೆ ಮುಂದುವರೆದಂತೆಯೇ ಈ ಖುಷಿ, ನಗು ಕಮ್ಮಿಯಾಗುತ್ತಾ ಬರುತ್ತಿದೆ. ಎಂದೂ ಮುಗಿಯದ ಮಕ್ಕಳ ಎಕ್ಸಾಮಿನ ಟೆನ್ಷನ್ನು, ಅವರು ಏನೂ ಮಾಡಿರದಿದ್ದರೂ ಅವರನ್ನು ಯಾಕೆ ಕರೆಯಬೇಕೆಂಬ ಹಳ್ಳಿಯವರ ಬೇಸರವೂ, ನಮಗೆ ಸರಿಯಾದ ಆತಿಥ್ಯ ಮಾಡಿಲ್ಲವೆಂಬ ದೊಡ್ಡ ಪಟ್ಟಣದವರ ಸಣ್ಣತನವೂ ಮೇಳೈಸಿ ಸಂಬಂಧಗಳು ಸಾಯುತ್ತಿವೆ. ಹಬ್ಬಗಳ ಸೊಬಗು ಸಣ್ಣದಾಗುತ್ತಿದೆ. ಅದರ ಬಗ್ಗೆಯೇ ಒಂದು ಕತೆ.. ದೀಪಾವಳಿ.

ಕತೆಗೆ ಬರೋದಾದ್ರೆ..:

ಊರ ಸಾಹುಕಾರನ ಮನೆ. ಈಗಿರೋ ಸಾಹುಕಾರ ಹೆಸರಲ್ಲಿ ಸಾಹುಕಾರನಾದ್ರೂ ಮಕ್ಕಳು ಬೆಳ್ಳಿಯ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟುವಷ್ಟು ಸಾಹುಕಾರನೇನಾಗಿರಲಿಲ್ಲ. ಭೂಸುಧಾರಣೆಯ ಹೊತ್ತಲ್ಲಿ ಈಗಿರೋ ಸಾಹುಕಾರ ಅಮಿತನ ತಂದೆ ಅನಂತಪತಿಯವರು ತಮ್ಮೂರಲ್ಲಿದ್ದ  ಜಮೀನನ್ನೆಲ್ಲಾ ಹಂಚಿ  ಈ ಊರಿನಲ್ಲಿದ್ದ ಸಣ್ಣ ಜಮೀನಲ್ಲಿ ಬಂದು ನೆಲೆಸಿದ್ದರಂತೆ. ಯಾರು ಏನು ಕಷ್ಟವೆಂದರೂ ನೆರವಾಗುತ್ತಿದ್ದ, ದೇಹಿ ಎಂದು ಬಂದವರಿಗೆ ಎಂದೂ ನಾಸ್ತಿಯೆನ್ನದ ಜನರು ಎಂಬ ಗುಣ ಶ್ರೀಮಂತರೆಂಬ ಕಾರಣಕ್ಕೆ ಇಂದೂ ಸಾಹುಕಾರ್ರು ಎಂಬ ಹೆಸರು ಆ ಮನೆತನಕ್ಕೆ ಮುಂದುವರೆದಿತ್ತು. ಅಮಿತನಂತೆಯೇ ಆತನ ಪತ್ನಿ ವಿಶಾಲೆಯದೂ ಹೆಸರಿಗೆ ತಕ್ಕಂತ ವಿಶಾಲ ಮನೋಭಾವ. ಮನೆಗೆ ಮಧ್ಯರಾತ್ರಿ ಬಂದು ನೆಂಟರು ಬಾಗಿಲು ತಟ್ಟಿದರೂ ಬೇಸರಿಸದೆ ಅವರಿಗೆ ಏನಾದರೂ ತಯಾರಿಸಿ ಉಣಬಡಿಸೋ  ಅನ್ನಪೂರ್ಣೇಶ್ವರಿಯವಳು.ಇವರಿಗೆ  ಒಬ್ಬ ಮಗ ಗುಣ ಮತ್ತು ಮಗಳು ಸುಗುಣ. . ಅಗರ್ಭ ಶ್ರೀಮಂತಿಕೆಯಿಲ್ಲದಿದ್ದರೂ ಇದ್ದುದರಲ್ಲೇ ಸಂತೃಪ್ತ ಸುಖಸಂಸಾರ. ದೊಡ್ಡ ಸಾಹುಕಾರನ ದೊಡ್ಡ ಮಕ್ಕಳೆಲ್ಲರೂ ಊರಲ್ಲಿದ್ದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎಂಬ ಕಾರಣವೊಡ್ಡಿ ಪಟ್ಟಣ ಸೇರಿದ್ದರು. ಅಲ್ಲಿ ದೊಡ್ಡ ದೊಡ್ಡ ಉದ್ಯೋಗದಲ್ಲಿದ್ದರೂ ಊರಿಗೆ ಬಂದು ಪ್ರತೀ ಬಾರಿಯೂ ತಂದೆಯ ಹತ್ತಿರವಿದ್ದ ಅಳಿದುಳಿದ ಹಣಕ್ಕೆ ಪೀಡಿಸುತ್ತಲೂ, ಜಮೀನಲ್ಲಿ ಬಂದ ಪಸಲಲ್ಲಿ ತಮಗೆ ಸರಿಯಾದ ಪಾಲಿತ್ತಿಲ್ಲವೆಂಬ ಕಾರಣಕ್ಕೆ ಜಗಳವನ್ನೂ ಆಡುತ್ತಿದ್ದರು. ತಮ್ಮ ಮಕ್ಕಳ ಈ ದುರ್ಬುದ್ದಿಗೆ ಆ ತಂದೆ ಕೊರಗುತ್ತಾ ತನ್ನ ಕೊನೆಯ ದಿನಗಳನ್ನು ದೂಡುತ್ತಿರುವಾಗಲೇ ವರ್ಷದ ದೀಪಾವಳಿ ಹಬ್ಬ ಬಂದಿತ್ತು.

ದೀಪಾವಳಿಯೆಂದರೆ ದೊಡ್ಡ ಹಬ್ಬವೆಂದೇ ಪ್ರತೀತಿಯಲ್ಲಿ. ಸಾಹುಕಾರನ ಪಟ್ಟಣದಲ್ಲಿರೋ ಮಕ್ಕಳು , ತಮ್ಮ ಹೆಂಡತಿ ಮಕ್ಕಳೊಂದಿಗೆ,ಹೆಣ್ಣು ಮಕ್ಕಳು ಅಳಿಯಂದಿರೊಂದಿಗೆ  ಊರಿಗೆ ದಾಂಗುಡಿಯಿಡುತ್ತಿದ್ದ ಸಂದರ್ಭ. ಮನೆಯೆಲ್ಲಾ ಗಿಜಿ ಗಿಜಿ. ಪಟ್ಟಣದ ಮಕ್ಕಳು ಹೊಸ ಬಟ್ಟೆ ತೊಟ್ಟು ಜಗುಲಿಯಲ್ಲಿ ಇಸ್ಪೀಟಿಗೆ ಕೂತುಬಿಟ್ಟರೆ ಮುಗಿದೋಯ್ತು. ಹೊರಜಗತ್ತಿನ ಅರಿವೇ ಇರುತ್ತಿರಲಿಲ್ಲ. ಹಬ್ಬದ ತಯಾರಿಯಿಂದ , ದನ ಕರುಗಳನ್ನು ತಯಾರು ಮಾಡೋವರೆಗೆ, ಆಯುಧಗಳನ್ನು ತೊಳೆಯೋದರಿಂದ ಮನೆ ಕೆಲಸಕ್ಕೆ ಬಂದ ಕೆಲಸದವರ ಊಟ, ತಿಂಡಿ, ಕಾಪಿಗಳು ಸರಿಯಾಗಿ ಆಯ್ತೇ ಎಂದು ವಿಚಾರಿಸುವುದರವರೆಗೆ ಎಲ್ಲಾ ಕೆಲಸಗಳೂ ಅಮಿತನ ಮೇಲೆಯೇ ಬೀಳುತ್ತಿದ್ದವು. ಅತ್ತಿಗೆಯಂದಿರೂ ಒಂದು ಕಾಸಿನ ಕಡ್ಡಿ ಕೆಲಸ ಮಾಡದೇ, ಕುಡಿದ ಕಾಪಿ ಲೋಟ ತೊಳೆಯದೇ ಊರು ಸುತ್ತೋಕೆ ಹೊರಡುತ್ತಿದ್ದರೂ ಬೇಸರಿಸದ ವಿಶಾಲೆಗೆ ಹರಿದ ತನ್ನ ಹಳೆಯ ಸೀರೆಗಿಂತಲೂ ಹಬ್ಬದ ಸಂದರ್ಭದಲ್ಲೂ ಹಳೆಯ ಬಟ್ಟೆ ಹಾಕಬೇಕಾದಂತಹ ತನ್ನ ಗಂಡನ ಮಗ್ಗೆ, ಹಬ್ಬಕ್ಕೆ ಹಾಕಲೂ ಹೊಸ ಬಟ್ಟೆ ಸಿಗದ ತನ್ನ ಮಕ್ಕಳನ್ನು ನೆನೆದು ಮರುಕವಾಗುತ್ತಿತ್ತು.  ಅಡಿಕೆಗೆ ಕೊಳೆ ರೋಗ ಬಂದು ಸಿಕ್ಕ ಅಲ್ಪ ಪಸಲಿನಲ್ಲಿ ತಮ್ಮ ವರ್ಷವಿಡೀ ಹೇಗೆ ಜೀವನ ನಡೆಸಬೇಕು ಎಂಬ ಅಲ್ಪ ಅರಿವೂ ಇಲ್ಲದೇ ಆ ದುಡ್ಡಲ್ಲೂ ಪಾಲು ಕೇಳಲು ಬಂದಿರೋ, ದೀಪಾವಳಿಯನ್ನು ನಿಲ್ಲಿಸಬಾರದೆಂದು ತಮ್ಮಅದಕ್ಕಾಗೇ ಎಷ್ಟು ಸಾಲ ಮಾಡಿರಬಹುದು ಎಂದು ಒಂದಿನಿತೂ ಯೋಚಿಸದೇ ಇಲ್ಲಿ ಬಂದು ಆರಾಮಗಿರೋವಂತಹ ಭಾವಂದಿರಿಗಿಂತಲೂ ತಂದೆಯ ಕೊನೆಗಾಲ ಸಮೀಪಿಸುತ್ತಿರುವುದನ್ನು ಅರಿಯದೇ ಅವರನ್ನು ಕಾಡುತ್ತಿರೋ ಪರಿಯ ಬಗ್ಗೆ ಸಿಟ್ಟೂ , ಮಾವನವರ ಬಗ್ಗೆ ಅನುಕಂಪವೂ ಮೂಡುತ್ತಿತ್ತು.  

ನೀರು ತುಂಬೋ ಭೂರಿ ಹುಣ್ಣಿಮೆ ಬಂತು. ಹಂಡೆ, ಭಾವಿಯನ್ನೆಲ್ಲಾ ರಂಗೋಲಿಯೆಳೆದು , ಕಾಡಲ್ಲಿ ಸಿಗುತ್ತಿದ್ದ ಅಂಡೆಕಾಯಿ ಬಳ್ಳಿಯಿಂದ ಸುತ್ತುವರೆದು ಸಿಂಗರಿಸಿದ ಬಳಿಕ ಮನೆಯವರಿಗೆಲ್ಲಾ ಎಣ್ಣೆ ಸ್ನಾನ. 

ಭರ್ಜರಿ ಸ್ನಾನವಾಗಿ ಭೂರಿ ಭೋಜನವೂ ಆಗಿ ಎಲೆಯಡಿಕೆ ಮೆಲ್ಲುತ್ತಾ  ಕುಳಿತಿದ್ದ ಅನಂತ ಪತಿಯ ದೊಡ್ಡ ಮಗ  ತಂದೆಯನ್ನು ಮಾತಿಗೆಳೆದ. ಅಪ್ಪಾ, ಇನ್ನೆಷ್ಟು ವರ್ಷ ಅಂತ ನಾವು ಇಲ್ಲಿ ಬಂದು ಜಮೀನಿನ ಫಸಲಿನ ಪಾಲು ಕೇಳೋದು. ಪ್ರತೀ ಸಲ ಕೇಳೋಕೆ ನಮಗೂ ಒಂತರ ಬೇಜಾರಾಗುತ್ತೆ. ನಮ್ಮ ನಮ್ಮ ಪಾಲು ಎಷ್ಟೂಂತ ಹಿಸೆ ಮಾಡಿ ಕೊಡು. ಅದನ್ನ ಮಾರಿ, ಬಂದ ಹಣ ತಗೊಂಡು ಹೋಗಿ ಬಿಡ್ತೇವೆ. ಪ್ರತೀ ಸಲ ಕೇಳೋದು ಇರಲ್ಲ ಅಂದ. ಅಲ್ರೋ, ನಿಮ್ಮನ್ನೆಲ್ಲಾ ದೊಡ್ಡ ದೊಡ್ಡ ಓದಿಗೆ , ಬಿಸಿನೆಸ್ಸಿಗೆ ಅಂತ ಅಷ್ಟೆಲ್ಲಾ ಖರ್ಚು ಮಾಡಿದೀನಿ. ಕಿರಿಯ ಮಗನಿಗೆ ಅಂತ ಏನೂ ಕೊಟ್ಟಿಲ್ಲ. ಇರೋ ಒಂದೂವರೆ ಎಕರೆ ತೋಟಕ್ಕೂ ಪ್ರತೀ ವರ್ಷ ಕೊಳೆ ಬರ್ತಾ ಇದೆ. ಆದ್ರೂ ಅದರಲ್ಲಿ ಪಾಲು ಕೇಳೋ ಪಾಪಿಗಳಿಗೆ ಒಂದು ಮಾತೂ ಆಡದ ಆ ಪುಣ್ಯಾತ್ಮ ಬಂದಿದ್ದರಲ್ಲೇ ಪಾಲು ಕೊಡ್ತಾ ಇದ್ದಾನೆ. ಅವನ ಹರುಕು ಬಟ್ಟೆ, ಸ್ಥಿತಿ ನೋಡಿದ ಮೇಲೆ ಸಹಾಯ ಮಾಡೋಕೆ ಬರೋ ಬದ್ಲು ತೋಟದಲ್ಲಿ ಹಿಸೆ ಕೇಳ್ತಾ ಇದ್ದೀರಲ್ಲೋ, ಏನೋ ಕಮ್ಮಿಯಾಗಿದೆ ನಿಮ್ಗೆ ಅಂದ ಅನಂತ ಪತಿ. ಅಪ್ಪಾ, ಅವನ ಕರ್ಮ ನಮಗೆ ಗೊತ್ತಿಲ್ಲ. ನೀನು ಪಾಲು ಕೊಡ್ಲೇ ಬೇಕು. ಕೊಡ್ತೀಯೋ ಇಲ್ವೋ ? ಇಲ್ಲ ಅಂದ್ರೆ ಹೇಳ್ಬಿಡು. ಅದು ಹೇಗೆ ತಗೋಬೇಕು ಅಂತ ಗೊತ್ತಿದೆ ನಮ್ಗೆ ಅಂದಿದ್ದ ಮಧ್ಯದ ಮಗ.

ಹಬ್ಬ ಕಳೀಲಿ ನೋಡೋಣ ಅಂದಿದ್ದ ಅಪ್ಪ.  

ದೊಡ್ಡಬ್ಬ ಬಂದೇ ಬಿಡ್ತು. ಗೋಪೂಜೆ, ಲಕ್ಷ್ಮಿಪೂಜೆ, ಆಯುಧ ಪೂಜೆ ಅಂತ ಇಬ್ರು ಅಣ್ಣಂದಿರೂ ಮಡಿಯುಟ್ಟುಕುಂಡು ಕೂತೇ ಬಿಟ್ರು. ದನಕರುಗಳಿಗೆ ಬಣ್ಣ ಹಚ್ಚೋದ್ರಿಂದ, ಆಯುಧ ತೊಳೆದು ಜೇಡಿ ಕೆಮ್ಮಣ್ಣು ಹಚ್ಚೋದು, ಹೊರಗೆ ಅಣ್ಣಂದಿರು ಒಡೆಯಲು ಬೇಕಾದ ಕಾಯಿ ಸುಲಿದುಕೊಡೋದು ಹೀಗೆ ಹೊರಗಿನ ಕೆಲಸಗಳೆಲ್ಲಾ ತಮ್ಮನ ಮೇಲೇ ಬಿತ್ತು. ಅದೆಲ್ಲಾ ಮುಗಿಸಿ ಆತನ ಸ್ನಾನ ಆಗೋದ್ರೊಳಗೆ ಪೂಜೆ ಮುಗಿಯುತ್ತಾ ಬಂದಿತ್ತು. ಹಬ್ಬದ ದಿನವೂ ಮಧ್ಯಾಹ್ನ ಸ್ನಾನ ಮಾಡ್ತೀಯಲ್ಲೋ ಕೊಳೆಯ ಅಂತ ಬೈಸ್ಕೊಳ್ಳಬೇಕಾಗೂ ಬಂತು ಪ್ರತೀ ವರ್ಷದಂತೆಯೇ ! ನನಗೆ ಮಂತ್ರ , ತಂತ್ರಗಳೇನೂ ಗೊತ್ತಿಲ್ಲ ದೇವರೇ. ನನ್ನ ಅಣ್ಣಂದಿರು ಚೆನ್ನಾಗೇ ಪೂಜೆ ಸಲ್ಲಿಸಿದ್ದಾರೆ ಅಂದುಕೊಳ್ಳುತ್ತೀನಿ. ಕಾಯಕವೇ ಕೈಲಾಸ ಎಂದು ತೋಟ, ಗದ್ದೆ ಕೆಲಸಗಳಲ್ಲೇ ಮುಳುಗಿ  ನಿನ್ನ ಪೂಜಿಸೋ ವಿಧಿಯನ್ನರಿಯದೇ ನಾನೆಸಗಿದ ತಪ್ಪುಗಳನ್ನೆಲ್ಲಾ ಮನ್ನಿಸಿ ನಮ್ಮ ಪೂಜೆಯನ್ನು ಸ್ವೀಕರಿಸಿ ನಮ್ಮನ್ನು ಎಂದಿನಂತೇ ಕಾಪಾಡೋ ಪ್ರಭುವೆ ಎಂದು ಬೇಡಿಕೊಂಡ. ಹಬ್ಬದ ಊಟವಾಗುತ್ತಿದ್ದಂತೆಯೇ ಒಬ್ಬೊಬ್ಬರೇ ಖಾಲಿಯಾದರು. ರಾತ್ರಿ ತನಕ ಉಳಿದರೆ ತಮ್ಮ ಮಕ್ಕಳು ಪಟಾಕಿ ಪಟಾಕಿ ಅನ್ನುತ್ತಾರೆ. ಅವರಿಗೆ ಅಂತ ಮಾತ್ರವೇ ತರೋಕ್ಕಾಗದೇ ಎಲ್ಲರಿಗೂ ಪಟಾಕಿ ತರಬೇಕಾದ ಖರ್ಚು ಎಂಬ ದೂರಾಲೋಚನೆ !! 

ಮುಂದಿನ ಬಾರಿ ದೀಪಾವಳಿ ಬಂದಿತ್ತು. ಇತ್ತೀಚೆಗೆ ಹಲವು ವರ್ಷಗಳಿಂದ ಕೊಳೆ ಬರುತ್ತಿದ್ದ ಮರಗಳಿಗೆ ಈ ವರ್ಷ ಕೊಳೆ ಬಾರದ್ದರ ಜೊತೆಗೆ ಹೊಸದಾಗಿ ಶುರು ಮಾಡಿದ್ದ ಎರೆಗೊಬ್ಬರದಿಂದಲೂ ಅಲ್ಪ ಲಾಭ ಬರೋಕೆ ಶುರುವಾಗಿದ್ದರಿಂದ ಸಹಜವಾಗೇ ಖುಷಿಯಲ್ಲಿದ್ದ ಅಮಿತ. ಹಿಂದಿನ ವರ್ಷದ ಹಬ್ಬವಾದ ಮೇಲೆ ಅಪ್ಪನ ಆರೋಗ್ಯ ಹದಗೆಡುತ್ತಿದ್ದರೂ ತಿಂಗಳಿಗೊಮ್ಮೆಯೂ ಫೋನ್ ಮಾಡದ ಅಣ್ಣಂದಿರೆಗೆಲ್ಲಾ ಮತ್ತೆ ಮತ್ತೆ ಫೋನ್ ಮಾಡಿ ಹಬ್ಬ ಹತ್ತಿರ ಬರೋದನ್ನ ನೆನಪಿಸಿ ಕರೆಯುತ್ತಿದ್ದರೂ ಅವರು ಬರ್ತೀನಿ ಅಂತಲೂ ಅನ್ನದೇ, ಬರೋಲ್ಲ ಅಂತಲೂ ಅನ್ನದೆ, ಮುಂಚಿನಂತೆ ಚೆನ್ನಾಗಿ ಮಾತನ್ನೂ ಆಡದೇ ಫೋನಿಡುತ್ತಿದ್ದರು. ನಾನೇ ಹೋಗಿ ಅವರನ್ನು ಹಬ್ಬಕ್ಕೆ ಕರೆದುಬರುತ್ತೇನೆ. ಅಕ್ಕಂದಿರನ್ನು ದೀಪಾವಳಿಗೆ ಕರೆಯದಿರೋದು ಚೆನ್ನಾಗಿರೋಲ್ಲ ಅಂತ ಅಮಿತ. ಬೇಡ ಕಣೋ ಮಗನೇ,ಸುಮ್ಮನೇ ಅಲ್ಲಿಗೆ ಹೋಗಿ ಯಾಕೆ ಅವಮಾನ ಅನುಭವಿಸ್ತೀಯ ಅಂದ ಅನಂತಪತಿ. ಹೌದು ಕಣ್ರಿ, ನಮ್ಮ ಕಷ್ಟದ ಕಾಲದಲ್ಲಿ ಸಹಾಯ ಮಾಡ್ತಿಲ್ಲ ಅಂತಲ್ಲ. ನಮ್ಮ ಬಡತನದ ಬಗ್ಗೆ, ನಮ್ಮ ಮಕ್ಕಳ ಬಗ್ಗೆ ಕೊಂಕು ಮಾತಾಡ್ತಾರೆ ಅಂತಲೂ ಅಲ್ಲ  ಆದರೆ ನಿಮ್ಮ ಬಗ್ಗೆ, ಮಾವನವರ ಬಗ್ಗೆಯೂ ಅವರು ಚುಚ್ಚೋದು ನಂಗೆ ಇಷ್ಟ ಆಗೋಲ್ಲ ಕಣ್ರಿ.  ಅವರಿಗೆ ಇಷ್ಟ ಇಲ್ಲ ಅಂದ್ರೆ ನೀವ್ಯಾಕೆ ಒತ್ತಾಯ ಮಾಡ್ತೀರಿ . ಬೇಡ ಬಿಡಿ ಅಂದ್ಲು ವಿಶಾಲು. ಅಮಿತ ಅರೆಕ್ಷಣ ಮೌನವಾಗಿದ್ದ. ಆತ ಏನು ಹೇಳಬಹುದೆಂಬ ಕುತೂಹಲ ಎಲ್ಲರಿಗೂ ಇತ್ತು. ನೀ ಹೇಳೋ ಮಾತು ನನಗೂ ಅರ್ಥವಾಗುತ್ತೆ ವಿಶಾಲು. ನೀ ಹೇಳೋದು ಸರಿನೇ ಆದ್ರೂನು ಮೂಲ ಮನೆಯಲ್ಲಿರೋ ತಮ್ಮನಾಗಿ ಬೇರೆ ಕಡೆ ಇರೋ ಅಣ್ಣ-ಅಕ್ಕಂದಿರನ್ನು ಹಬ್ಬಕ್ಕೆ ಕರೀದೆ ಇರೋದು ಸರಿ ಇರಲ್ಲ. ಕರೆದು ಬರ್ತೀನಿ ಅಂತ ಅವರ ಉತ್ತರಕ್ಕೂ ಕಾಯದೇ ಪಟ್ಟಣದ ಬಸ್ಸು ಹತ್ತಿದ ಅಮಿತ. 

ಹಬ್ಬಕ್ಕೆ ಕರೆಯೋಕೆ ಬಂದ ಇವನಿಗೆ ಅಲ್ಲಿ ಸಿಕ್ಕ ಸತ್ಕಾರಗಳನ್ನು ಮರೆಯುವಂತೆಯೇ ಇಲ್ಲ!  ನಿಮ್ಮ ತಮ್ಮ ಇವತ್ತೇನಾದ್ರೂ ಇಲ್ಲೇ ಝಾಂಡಾ ಹೂಡಿದ್ರೆ ಏನು ಕತೆ ? ನೋಡಿದ್ರೆ ಹಾಗೇ ಅನ್ಸುತ್ತೆ. ಈಗ್ಲೇ ಹೇಳಿ ಬಿಡ್ತೇನೆ. ನಾನೆಂತೂ ಅಡಿಗೆ ಬೇಯಿಸಿ ಹಾಕೋದಿಲ್ಲ , ಮನೆಗೆ ಬಂದ ಅಬ್ಬೆಪಾರಿಗಳಿಗೆಲ್ಲಾ ಅಡಿಗೆ ಬೇಯಿಸಿ ಹಾಕೋಕೆ ಇದೇನು ಛತ್ರವೇ ಎಂದು ಗಂಡನನ್ನು ಅಡಿಗೆ ಮನೆಗೆ ಕರೆದೊಯ್ದು ಜಗಳಕ್ಕಿಳಿದಿದ್ದ ಮೊದಲ ಅತ್ತಿಗೆಯ ಮಾತನ್ನು ಕೇಳಿದರೂ ಕೇಳಿಸಿಕೊಳ್ಳದಂತೆ ಬೇರೇನೂ ತುರ್ತು ಕೆಲಸವಿದೆಯೆಂದು ಅವರ ಮನೆಯಲ್ಲಿ ನೀರೂ ಕುಡಿಯದಂತೆ ಹೊರಟುಬಿಟ್ಟಿದ್ದ.   ನಂತರ ಹೋಗಿದ್ದು ಹಿರಿಯ ಅಕ್ಕನ ಮನೆಗೆ. ಎದುರಿಗೆ ಬಂದು ಸ್ವಾಗತಿಸಿದ ಭಾವ ನಸುನಕ್ಕು ಸ್ವಾಗತಿಸಿದರೂ ಅವರು ಒಳಗೆ ಅಕ್ಕನನ್ನು ಕರೆಯಲು ಹೋದಾಗ ಒಳಮನೆಯಲ್ಲಿ ಅವಳು ಭಾವನೊಂದಿಗೆ ಆಡುತ್ತಿದ್ದ ಮಾತುಗಳು ಕೇಳಿ ಅಮಿತನಿಗೆ ಬೇಸರವಾಯ್ತು. ಸುಮ್ಮನೇ ಅಲ್ಲಿಯವರೆಗೆ ಯಾಕೆ ಹೋಗಬೇಕುರಿ ? ಸುಮ್ಮನೇ ದುಡ್ಡು ದಂಡ. ಹಿರಿಯ ಮಗಳಿಗೆ ಕಾಲು ಭಾಗ ಆಸ್ತಿಯನ್ನೂ ಬರೆದುಕೊಡದ ಆ ತಂದೆಯ ಮುಖ ನೋಡಲೂ ಇಷ್ಟವಿಲ್ಲ. ಇನ್ನು ಆ ಅಮಿತನ ಸಂಸಾರವೋ.. ಭಿಕ್ಷುಕರ ಬಿಡಾರದಂತಿದೆ. ನನ್ನ ಮಕ್ಕಳ ಒಳ್ಳೆ ಬಟ್ಟೆಗಳನ್ನು, ನನ್ನ ರೇಷ್ಮೆ ಸೀರೆಯನ್ನು  ಆ ವಿಶಾಲೆ ಮತ್ತವಳ ಮಕ್ಕಳು ಜೊಲ್ಲು ಸುರಿಸುತ್ತಾ ನೋಡೋದನ್ನ ನೆನೆಸಿಕೊಂಡ್ರೆ ನಂಗೆ ಅಸಹ್ಯವಾಗುತ್ತೆ. ನಾನಂತೂ ಬರೋಲ್ಲ ಅನ್ನುತ್ತಿದ್ದಳು ಅಕ್ಕ. ಅಬ್ಬಾ, ಇವಳು ನನ್ನ ಸ್ವಂತ ಅಕ್ಕನೇ ಅನಿಸಿಬಿಟ್ಟಿತ್ತು ಅಮಿತನಿಗೆ. ಅಲ್ಲೇ, ನಿನ್ನ ಮದುವೆಯ ಹೊತ್ತಿಗೆ, ತಮ್ಮ ಯಾವುದೋ ಮನೆ ಮಾರಿ ನಾನೊಂದು ಬಿಸಿನೆಸ್ ತೆಗೆಯೋಕೆ ಸಹಾಯ ಮಾಡಿದ್ದ, ನಾನು ಲಾಸಿನಲ್ಲಿದ್ದಾಗ ಎಷ್ಟೋ ಸಲ ಸಹಾಯ ಮಾಡಿದ್ದ ನಿಮ್ಮ ಅಪ್ಪ, ತಮ್ಮನ ಬಗ್ಗೆ ಹೀಗೆಲ್ಲಾ ಮಾತನಾಡ್ತೀಯಲ್ಲ ನೀನು, ಈಗೋನೋ ಮೂರ್ನಾಲ್ಕು ವರ್ಷದಿಂದ ಅಡಿಕೆಗೆ ಕೊಳೆಬಂದು ಅನ್ನುತ್ತಿದ್ದ ಭಾವನ ಮಾತನ್ನ ಅರ್ಧಕ್ಕೇ ತಡೆದ ಅಕ್ಕ, ಹೂಂ ಕಣ್ರೀ, ನಾನಿರೋದೇ ಹೀಗೆ. ನಿಮಗೆ ಸಹಾಯ ಮಾಡೋದು  ಅವರ ಕರ್ತವ್ಯವಾಗಿತ್ತು ಮಾಡಿದಾರೆ. ಅದರಲ್ಲೇನಿದೆ ? ನನಗೆ ಆಸ್ತಿ ಕೊಡೋವರೆಗೋ ನಾನು ಆ ಕಡೆ ತಲೆನೂ ಹಾಕಲ್ಲ, ನೀವೂ ಆ ಕಡೆ ಹೋಗೋ ಹಾಗಿಲ್ಲ ಅಂದಿದ್ದಳು. 

ಅಲ್ಲಿಂದಲೂ ಅನಿವಾರ್ಯ ಕಾರಣ ಹೇಳಿ ಎರಡನೇ ಅಣ್ಣನ ಮನೆಗೆ ಹೋಗಿದ್ದ ಅಮಿತನಿಗೆ ಬಾಗಿಲ ಬೀಗ ಸ್ವಾಗತ ಮಾಡಿತ್ತು. ಪಕ್ಕದಲ್ಲೇ ಇದ್ದ ಅಂಗಡಿಯಿಂದ ಫೋನ್ ಮಾಡಿದರೆ ಅಯ್ಯೋ, ನೀನು ಫೋನ್ ಮಾಡಿ ಬರೋದಲ್ಲವೇನೋ, ನನಗೆ ಆಫೀಸಲ್ಲಿ ಅರ್ಜೆಂಟ್ ಕೆಲಸವಿದೆ. ಬರೋದು ರಾತ್ರಿಯಾಗುತ್ತೆ ಅಂದ ಅಣ್ಣ. ಸರಿ, ಅತ್ತಿಗೆ, ಮಕ್ಕಳು ? ಅವರು ಇಲ್ಲೇ ಮಾರ್ಕೇಟಿಗೆ ಹೋಗಿರ್ಬೇಕು. ಸರಿ ಬಿಡು ಅಣ್ಣ. ಅವರು ಬರೋವರಿಗೆ ಇಲ್ಲೇ ಕಾಯ್ತೀನಿ.. ಅಯ್ಯಯ್ಯೋ ಬೇಡಪ್ಪ, ಅವಳು ಅವಳಪ್ಪನ ಮನೆಗೆ ಹೋಗಬೇಕುಂತಿದಾಳೆ ಮಾರ್ಕೆಟ್ಟಿಂದ ಬಂದ ಅವಳಿಗೆ ನಿನ್ನ ಜೊತೆ ಮಾತಾಡ್ತಾ ಕೂತ್ರೆ ಅಪ್ಪನ ಮನೆಗೆ ಹೋಗೋಕೆ ಲೇಟಾಗುತ್ತೇಂತ ಬೈಕೋತಾಳೆ. ಇನ್ನೊಂದ್ಸಲ ಬರೋದಾದ್ರೆ ಫೋನ್ ಮಾಡ್ಕೊಂಡು ಬಾರೋ.. ಹಲೋ ಹಲೋ..ಕೇಳ್ತಾ ಇದಿಯಾ.. ಹಲೋ. ಹಲೋ.. ಎಂದು ಫೋನ್ ಕುಕ್ಕಿದ್ದ. ಅನಪೇಕ್ಷಿತ ಅತಿಥಿಯಾಗಿರಲು ಇಷ್ಟವಿಲ್ಲದೇ ಎರಡನೇ ಅಕ್ಕನಿಗೆ ಅಲ್ಲಿಂದಲೇ ಫೋನ್ ಮಾಡಿದ್ದ. ಪಟ್ಟಣಕ್ಕೆ ಬಂದಿದ್ದೇನೆಂದು ಹೇಳಿದರೂ ಅವಳು ಮನೆಗೆ ಕರೆದಿರಲಿಲ್ಲ. ಬರುತ್ತೇನೆ ಎಂದು ಇವನೂ ಹೇಳಲಿಲ್ಲ. ಎರಡು ದಿನ ಇದ್ದು ಎಲ್ಲರನ್ನೂ ಕರೆದುಬರುತ್ತೇನೆ ಎಂದಿದ್ದವನಿಗೆ ಮಧ್ಯಾಹ್ನದ ಒಳಗೇ ಎಲ್ಲರನ್ನೂ ಕರೆದು ಮುಗಿದಿದ್ದರಿಂದ ತಕ್ಷಣವೇ ಊರು ಬಸ್ಸು ಹತ್ತಿ ರಾತ್ರಿಗೆ ಮನೆಗೆ ಮುಟ್ಟಿದ್ದ.

ಭೂರಿ ಹುಣ್ಣಿಮೆ ಬಂದೇ ಬಿಟ್ಟಿತು. ಹದಿನೈದು ಜನರ ಬದಲು ಐದು ಜನರೇ ಇದ್ದರೂ ಈ ಸಲದ ದೀಪಾವಳಿಯಲ್ಲಿ ಏನೂ ಖುಷಿ ತುಂಬಿ ತುಳುಕುತ್ತಿತ್ತು. ಮನೆಯಲ್ಲಿ ಹಿಂದಿನ ಹಬ್ಬಗಳಲ್ಲಿರುತ್ತಿದ್ದ, ಗಲಾಟೆ, ನಗುಗಳ ಕಳೆ ಇಲ್ಲದಿದ್ದರೂ ಮನೆ ತುಂಬಾ ಓಡಾಡುತ್ತಿದ್ದ ಗುಣ, ಸುಗುಣರ ಓಟ, ಆಟಗಳೇ ಒಂದು ಚಲುವನ್ನು ಮೂಡಿಸಿದ್ದವು. ಸುಗುಣನಿಗೇ ಒಂದು ಅಡ್ಡಮಡಿಯುಡಿಸಿ ಕೂರಿಸಿದ್ದ ದೀಪಾವಳಿಯ ದಿನವಂತೂ ಆ ಭಗವಂತನೇ ಹುಡುಗನ ರೂಪದಲ್ಲಿ ಮನೆಗೆ ಬಂದಿದ್ದಾನೇನೋ ಅನಿಸುತ್ತಿತ್ತು. ಲಂಗಧಾವಣಿಯುಟ್ಟು , ಆರತಿ ದೀಪಗಳ ಬಟ್ಟಲು ಹಿಡಿದು ಗುಣನ ಜೊತೆಗೇ ತಿರುಗುತ್ತಿದ್ದ ಸುಗುಣಳನ್ನು ನೋಡೋದೇ ಒಂದು ಸೊಬಗಾಗಿತ್ತು. ಪಟಾಕಿಗಳ ಆರ್ಭಟವಿಲ್ಲದಿದ್ದರೂ ಮನೆಯ ಸುತ್ತಲಿಟ್ಟ ದೀಪಗಳ ಚೆಲುವು, ಗಂಟೆ, ಜಾಗಟೆಗಳ ನಾದದಲ್ಲಿ ಈ ಬಾರಿಯ ಹಬ್ಬದ ರಾತ್ರಿ ಎಲ್ಲಿಗೋ ಕರೆದೊಯ್ದಿತ್ತು. ರಾತ್ರೆ ಬಂದ ಹಬ್ಬ ಆಡೋರು(ಅಂಟಿಗೆ-ಪಿಂಟಿಗೆ) ಯವರಲ್ಲೂ ಏನೋ ಚೆಲುವು ಕಾಣುತ್ತಿತ್ತು. ಕೊಳೆಯಿರದ ಮರ, ಕೈ ಹಿಡಿಯುತ್ತಿರುವ ಗೊಬ್ಬರ, ಸರಿಯಾಗುತ್ತಿರುವ ಅಪ್ಪನ ಆರೋಗ್ಯ.. ಹೀಗೆ ಎಲ್ಲವೂ ಅಮಿತನ ಶುದ್ದ ಮನಸ್ಸಿನ ಪ್ರಾರ್ಥನೆಗೆ ಒಲಿದಂತಿತ್ತು..

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ದೀಪಾವಳಿ: ಪ್ರಶಸ್ತಿ ಅಂಕಣ

  1. ಅ೦ದವಾಗಿರುವ ಬರಹದ ಜೊತೆಗೆ ಒ೦ದೆರಡು ಚಿತ್ರಗಳು ಇದ್ದಲ್ಲಿ ಚೆನ್ನಾಗಿರುತಿತ್ತು….
    ಉರ್ಬಾನ್ ಡಿ'ಸೋಜ

Leave a Reply

Your email address will not be published. Required fields are marked *