ದೀಪದ ದೆವ್ವ (ದೆವ್ವದ ಕಥೆಗಳು – ಭಾಗ ೩):ಗುರುಪ್ರಸಾದ್ ಕುರ್ತಕೋಟಿ

(ಇದು ಸಂಗೀತಾ ಕೇಶವ ಅವರಿಗಾದ ಅನುಭವದ ಎಳೆಯ ಮೇಲೆ ಹೆಣೆದ ಕತೆ)


ನಾನಾಗ ಪೀಯುಸಿ ಮೊದಲ ವರ್ಷದಲ್ಲಿ ಓದುತ್ತಿದ್ದೆ. ನಾವಿದ್ದದ್ದು ನನ್ನ ಊರಾದ ಚಿಕ್ಕೋಡಿಯಲ್ಲಿ. ಅದು ಬೆಳಗಾವಿ ಜಿಲ್ಲೆಯಲ್ಲಿದೆ. ಹವಾಮಾನದ ವಿಷಯದಲ್ಲಿ ಅದಕ್ಕೂ ಬೆಳಗಾವಿಗೂ ಏನೂ ವ್ಯತ್ಯಾಸವಿರಲಿಲ್ಲ. ಅದು ಆಗಿನ ಸಂಗತಿ. ಈಗ ಬಿಡಿ ಬೆಳಗಾವಿಯ ಹವಾಮಾನವೂ ಪ್ರಕೃತಿ ವೈಪರಿತ್ಯಕ್ಕೆ ಬಲಿಯಾಗಿ ಹದಗೆಟ್ಟಿದೆ. ಆಗೆಲ್ಲಾ ಬೆಳಗಾವಿಯಲ್ಲಿ ಮಳೆ ಯಾವ ಪರಿ ಸುರಿಯುತ್ತಿತ್ತೆಂದರೆ… ಸುರಿಯುತ್ತಿತ್ತು ಅಷ್ಟೆ! ಒಮ್ಮೆ ಶುರುವಾಯಿತೆಂದರೆ ನಿಲ್ಲುವ ಮಾತೆ ಇರಲಿಲ್ಲ. ಚಿಕ್ಕೋಡಿಯ ಪರಿಸ್ಥಿತಿಯೂ ಹೆಚ್ಚು ಕಡಿಮೆ ಹಾಗೇ ಇತ್ತು.  ಅಗೆಲ್ಲಾ, ಅಲ್ಲಿನ ಹೆಚ್ಚಿನ ಮನೆಗಳು ಹೆಂಚಿನ (ಮಂಗಳೂರು) ಮಾಡಿನವು. ನಮ್ಮ ಮನೆಯೂ ಹಾಗೇ ಇತ್ತು. ದೊಡ್ಡ ದೊಡ್ಡ ಕೋಣೆಗಳು, ವಿಶಾಲವಾದ ವರಾಂಡ. ಅಡಿಗೆಮನೆ ಮತ್ತು ಬಚ್ಚಲುಮನೆಗಳು ಕೂಡ ಅಷ್ಟೆ ದೊಡ್ಡವು. ಅದೂ ಅಲ್ಲದೆ ಮನೆಯ ಮುಂದೊಂದು ತೋಟ. ಆ ತರಹದ ಮನೆ ಈಗಿನ ಬೆಂಗಳೂರಿನಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ವಿಲ್ಲಾ ಕಿಂತಲೂ ದೊಡ್ಡದಿತ್ತು ಅಂದರೆ ಅತಿಶಯೋಕ್ತಿಯಾಗಲಾರದು! ಆದರೆ ಅಂಥ ಮನೆಗಳ ವಾಸ್ತುಶಿಲ್ಪ ಹೆಚ್ಚು ಕಡಿಮೆ ಒಂದೇ ಥರ ಇರುತ್ತಿತ್ತು. ಅದಕ್ಕೆ ನಮ್ಮ ಮನೆಯೂ ಹೊರತಾಗಿರಲಿಲ್ಲ. ಅದು ಉದ್ದಕ್ಕೆ ರೈಲಿನ ಬೋಗಿ ತರಹ ಇತ್ತು. ಮೊದಲು ವರಾಂಡಾ, ಸಾಲಾಗಿ ಮೂರು ಕೋಣೆಗಳು, ನಂತರ ಅಡುಗೆಮನೆ ಕೊನೆಗೊಂದು ಬಚ್ಚಲು ಮನೆ. ಎಲ್ಲಕ್ಕೂ ಒಂದೊಂದು ಬಾಗಿಲು. ಇವೆಲ್ಲವನ್ನು ಸೇರಿಸುವ ಒಂದೇ ಒಂದು ಪ್ಯಾಸೇಜ್.  

ನಾನಾಗ ಪೀಯುಸಿ ಯ ಮೊದಲ ವರ್ಷದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ನನ್ನ ಪ್ರೀತಿಯ ವಿಷಯವಾಗಿದ್ದ ಅರ್ಥಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಗಳಿಸುವ ಎಕೈಕ ಉದ್ದೇಶ ನನ್ನದಾಗಿತ್ತು. ಆ ಉದ್ದೇಶಕ್ಕೊಂದು ಕಾರಣವೂ ಇತ್ತು! ಹಾಗೆ ಅಂಕ ಗಳಿಸಿ,  ಒಬ್ಬ ಹುಡುಗನ ಮೆಚ್ಚುಗೆ ಗಳಿಸಬೇಕಿತ್ತು.  ಆ ಹುಡುಗ ನನ್ನ ಅಕ್ಕನ ಸಹಪಾಠಿಯಾಗಿದ್ದ. ಅವನೂ ಅದೇ ವಿಷಯದಲ್ಲಿ ನೂರು ಅಂಕ ಗಳಿಸಿದ್ದ. ಆ ಅಂಕ ಗಳಿಸುವ ಕನಸು ಎಷ್ಟು ತೀವ್ರವಾಗಿತ್ತೆಂದರೆ, ಬೆಳಿಗ್ಗೆ ನಾಲ್ಕಕ್ಕೆಲ್ಲಾ ಎದ್ದು ಅಭ್ಯಾಸ ಮಾಡುತ್ತಿದ್ದೆ. ನನ್ನ ಜೊತೆಗೆ ನನ್ನ ಅಕ್ಕನೂ ಅಭ್ಯಾಸ ಮಾಡಲು ಕೂಡುತ್ತಿದ್ದಳು. ಅವಳು ತನ್ನ ಪೀಯುಸಿ ಎರಡನೇ ವರ್ಷದ ಸಿದ್ಧತೆಯಲ್ಲಿದ್ದಳು. ಹೀಗೆ ಒಂದು ಸಲ ರಾತ್ರಿ ಒಂದು ಥರದ ಶಬ್ದ ನನ್ನನ್ನು ನಿದ್ದೆಯಿಂದ ಬಡಿದೆಬ್ಬಿಸಿತು. ನಿದ್ದೆಯಲ್ಲಿದ್ದುದರಿಂದ ಅದೇನೆಂಬುದು ಸರಿಯಾಗಿ ಗ್ರಹಿಸಲಾಗಲಿಲ್ಲವಾದರೂ, ಅದೊಂಥರ ಪ್ಲ್ಯಾಸ್ಟಿಕ್ ಮಡಚಿದಾಗ ಆಗುವಂತಹ ಶಬ್ದ ಅನಿಸಿತು. ನಾನೆದ್ದು ನೋಡಿದಾಗ ಬಚ್ಚಲು ಮನೆಯ ವಿದ್ಯುತ್ ದೀಪ ಹತ್ತಿದ್ದು ನಾನು ಮಲಗಿದ ಕೋಣೆಯಿಂದ ಕಾಣಿಸಿತು. ಯಾರೋ ದೀಪವನ್ನು ಆರಿಸಿರಲಿಕ್ಕಿಲ್ಲವೆಂದುಕೊಂಡು ಎದ್ದು ಹೋಗಿ ಬಚ್ಚಲುಮನೆಯ ಸ್ವಿಚ್ ಆರಿಸಿ ಬಂದು ನನ್ನ ಕೋಣೆಯಲ್ಲಿ ಮಲಗಿದೆ. 

ಮರುದಿನ ಬೆಳಿಗ್ಗೆ ಮಾಮೂಲಿಯಂತೆ ನಾವಿಬ್ಬರೂ ಎದ್ದು ಓದಲು ತೊಡಗಿದ್ದೆವು. ಅಚಾನಕ್ಕಾಗಿ ಮತ್ತೆ ಬಚ್ಚಲು ಮನೆಯ ವಿದ್ಯುತ್ ದೀಪ ತಂತಾನೆ ಹತ್ತಿತು! ನಮಗಿಬ್ಬರಿಗೂ ಅಶ್ಚರ್ಯವಾಯಿತು. ಮನೆಯಲ್ಲಿ ಎಚ್ಚರವಿದ್ದವರು ನಾವಿಬ್ಬರೇ. ಉಳಿದವರು ನಮ್ಮ ಪಕ್ಕದ ಕೋಣೆಯಲ್ಲೇ ಮಲಗಿದ್ದರು. ಬಚ್ಚಲು ಮನೆ ಇದ್ದದ್ದು ನಮ್ಮ ಇನ್ನೊಂದು ಪಕ್ಕಕ್ಕೆ. ಹಾಗಾದರೆ ದೀಪವನ್ನು ಉರಿಸಿದವರು ಯಾರು? ಅದನ್ನು ಎದ್ದು ಹೋಗಿ ಪರೀಕ್ಷಿಸಲು ನಮಗೆ ಧೈರ್ಯ ಬರಲಿಲ್ಲ. ಸ್ವಲ್ಪ ಹೊತ್ತಿಗೆ ದೀಪ ತಂತಾನೆ ಆರಿತು! ಆಗ ನಮ್ಮ ಹೆದರಿಕೆ ಇನ್ನಷ್ಟು ಜಾಸ್ತಿಯಾಗಿ ಕಂಗಾಲಾದೆವು. ಆಮೇಲೆ ಓದುವುದು ಹಾಗಿರಲಿ ಮಲಗಿದರೆ ನಿದ್ದೆಯೂ ಬರದಂತಹ ಸ್ಥಿತಿ ನಮ್ಮದು. ನಮ್ಮ ಚಾದರಗಳನ್ನು ಅಡಿಯಿಂದ ಮುಡಿಯವರೆಗೆ ಹೊದ್ದು ಬೆಳಗಾಗುವುದೇ ಕಾಯುತ್ತ ಮಲಗಿದೆವು. 

ನನಗೆ ಆ ದೆವ್ವದ ಚಿಂತೆಗಿಂತ, ಹೀಗೆಯೇ ಮುಂದುವರಿದರೆ ನನ್ನ ಅಭ್ಯಾಸವೂ ಹಾಳಾಗಿ ನನ್ನ ಹುಡುಗನನ್ನು ಇಂಪ್ರೆಸ್ ಮಾಡಲಾಗುವುದಿಲ್ಲವೆಂಬ ಚಿಂತೆ ಜಾಸ್ತಿಯಾಗಿತ್ತು! ಹೀಗಾಗಿ ಮರುದಿನ ನನ್ನ ಎಲ್ಲಾ ಧೈರ್ಯವನ್ನು ಒಟ್ಟು ಮಾಡಿ ಮತ್ತೆ ಬೆಳಿಗ್ಗೆ ನಾಲ್ಕು ಗಂಟೆಗೆ ಓದಲು ಕುಳಿತೆ. ಅಕ್ಕನನ್ನು ಹೇಗೋ ಪುಸಲಾಯಿಸಿ ಜೊತೆಗೆ ಕೂರಿಸಿಕೊಂಡೆ. ಸ್ವಲ್ಪ ಸಮಯದ ಬಳಿಕ ಮತ್ತದೇ ಶಬ್ದ! ದೀಪ ಉರಿಯಿತು, ಮತ್ತೆ ಆರಿತು. ನಮ್ಮ ಬಾಯಿಯ ಪಸೆಯೂ ಅರಿತ್ತು! ಮತ್ತೆ ನಮ್ಮ ಚಾದರಗಳೇ ನಮಗೆ ರಕ್ಷಣೆ ನೀಡಿದ್ದು.

ಈ ಘಟನೆಯನ್ನು ನಾವು ನಮ್ಮ ಅಪ್ಪ ಅಮ್ಮನ ಎದುರು ಹೇಳಿಕೊಳ್ಳುವ ಹಾಗಿರಲಿಲ್ಲ. ಯಾಕೆಂದರೆ ನಾವು ಅಧುನಿಕ ಜಗತ್ತಿನ, ವೈಜ್ನ್ಯಾನಿಕ ವಿಚಾರಧಾರೆಯುಳ್ಳ ಹುಡುಗಿಯರಾಗಿದ್ದರಿಂದ, ನಮ್ಮ ಆ ಖ್ಯಾತಿಯನ್ನು ಉಳಿಸಿಕೊಳ್ಳಲೇಬೇಕಾಗಿತ್ತು. ಅವರೆದುರು ಹೇಳಿ ಇಂಥದ್ದೆಲ್ಲಾ ನಂಬುತ್ತಿರುವ ನೀವ್ಯಾವ ಅಧುನಿಕ ಹುಡುಗಿಯರೇ ಅಂತ ನಗೆಪಾಟಲಿಗೀಡಾಗುವುದು ನಮಗೆ ಬೇಕಿರಲಿಲ್ಲ. ಹೀಗೆ ಒಂದು ದಿನ ಬೆಳಿಗ್ಗೆ ನಮ್ಮ ಪಕ್ಕದ ಮನೆಯ ಹುಡುಗಿಯರೊಂದಿಗೆ ಹಾಳು ಹರಟೆ ಹೊಡೆಯುತ್ತಿದ್ದೆವು. ಹುಡುಗಿಯೊಬ್ಬಳು ಒಂದು ವಿಷಯ ಪ್ರಸ್ಥಾಪಿಸಿದಳು. ಅದೇನೆಂದರೆ ನಾವಿದ್ದ ಚಾಳ್ ಮೊದಲೊಂದು ರುದ್ರಭೂಮಿಯಾಗಿತ್ತಂತೆ. ಮೊದಲೆಲ್ಲ ತುಂಬಾ ಜನ ಇಲ್ಲಿ ದೆವ್ವಗಳನ್ನು ನೋಡಿದ್ದರಂತೆ. ಅವಳಿಗೆ ಬೈದು ಬುದ್ಧಿ ಹೇಳುವ ನೈತಿಕತೆ ಅಥವ ಧೈರ್ಯವನ್ನು ನಾನು ಕಳೆದುಕೊಂಡಿದ್ದೆ. ಆ ರುದ್ರಭೂಮಿಯ ಮೇಲೆಯೇ ನಮ್ಮ ಮನೆ ಇತ್ತು. ಹೀಗಾಗಿ ದೆವ್ವಗಳು ನಮ್ಮ ಮನೆಯಲ್ಲೇ ಠಿಕಾಣಿ ಹೂಡಿರುವುದು ನಮಗೂ ಮನದಟ್ಟಾಗಿತ್ತು. 

ಆ ಘಟನೆ ನಮ್ಮನ್ನು ಎಷ್ಟು ಪರಿ ಹಿಂಡತೊಡಗಿತೆಂದರೆ, ಎಲ್ಲರ ಜೊತೆಗೆ ರಾತ್ರಿ ಊಟಕ್ಕೆ ಕೂತಾಗಲೂ, ಯಾರಾದರೂ ಬಚ್ಚಲು ಮನೆಯ ದೀಪ ಬೆಳಗಿಸಿದರೆ ಬೆಚ್ಚಿ ಬೀಳುತ್ತಿದ್ದೆವು. ರಾತ್ರಿ ಬಚ್ಚಲು ಮನೆಗೆ ಹೋಗಲೇ ಭಯವಾಗುತ್ತಿತ್ತು. ಒಂದು ಸಲವಂತೂ ರಾತ್ರಿ ಬಚ್ಚಲು ಮನೆಗೆ ಅಕ್ಕ ಹೋದಾಗ ವಿದ್ಯುತ್ ಮಂಡಳಿಯವರು ವಿದ್ಯುತ್ ಕಡಿತ ಮಾಡಿ ಬಿಟ್ಟರು. ಒಳಗಿದ್ದ ನನ್ನಕ್ಕ ಇದು ಭೂತದ್ದೇ ಆಟ ಅಂದುಕೊಂಡು ಕಿಟಾರನೇ ಕಿರುಚಿದ್ದಳು.  

ಮತ್ತೆ ಮತ್ತೆ ದಿನವೂ ಭೂತ ಚೇಷ್ಟೆ ಮುಂದುವರಿಯಿತು. ಒಂದು ದಿನ ನನಗಂತೂ ಸಾಕಾಗಿ ಹೋಗಿತ್ತು. ನನ್ನಲ್ಲಿದ್ದ ತಾಳ್ಮೆಯ  ಮಿತಿಯೂ ಮೀರಿತ್ತು. ನಾನು ಆ ದೆವ್ವವನ್ನು ಇವತ್ತು ಹಿಡಿಯಲೇಬೇಕೆಂದು ನಿರ್ಧರಿಸಿದ್ದೆ. ಅವತ್ತು ನಸುಕಿನಲ್ಲಿ ಮತ್ತೆ ಅದೇ ಶಬ್ಧ, ಅದರ ಜೊತೆಗೇ ದೀಪ ಬೆಳಗೇಬಿಟ್ಟಿತು. ಇದ್ದುದರಲ್ಲೇ ನನ್ನಕ್ಕನಿಗಿಂತ ನಾನು ಧೈರ್ಯವಂತಳು. ಇದ್ದ ಬದ್ದ ಭಂಡ ಧೈರ್ಯವ ಒಟ್ಟುಗೂಡಿಸಿ, ನೆನಪಿಗೆ ಬಂದ ಒಂದೆರಡು ದೇವರ ಹೆಸರು ಹೇಳಿಕೊಂಡು ಬಚ್ಚಲ ಮನೆಯ ಕಡೆಗೆ ಕಿತ್ತೂರ ಚೆನ್ನಮ್ಮನಂತೆ ಮುನ್ನುಗ್ಗಿದೆ. ಅಲ್ಲಿ ಚೇಷ್ಟೆ ಮಾಡುತ್ತಿದ್ದ ಭೂತ ಕಂಡೇ ಹೋಯಿತು! ಆದರೆ ನಾನು ಜೋರಾಗಿ ನಗತೊಡಗಿದ್ದೆ. ಅಕ್ಕನಿಗದು ಇನ್ನೂ ಭಯವಾಯ್ತೇನೋ! ಒಳಗೆ ಕೋಣೆಯಲ್ಲಿದ್ದ ಅವಳನ್ನೂ ಎಳೆದುಕೊಂಡೆ ಹೋಗಿ ಆಲ್ಲಿದ್ದ ಭೂತವನ್ನು ತೋರಿಸಿದೆ. 

ಅದೇನಾಗಿತ್ತೆಂದರೆ, ಆಗೆಲ್ಲಾ ಮನೆಗಳಲ್ಲಿ ಬಳಸುತ್ತಿದ್ದ ಸ್ವಿಚ್ ಗಳು ಕಪ್ಪಗೆ ದೊಡ್ಡನೆಯ ಸ್ವಿಚ್ ಗಳು. ಅವುಗಳ ಹಿಡಿಕೆ ಮುಂದುಗಡೆ ಸ್ವಲ್ಪ ಉದ್ದಕ್ಕೆ ಚಾಚಿಕೊಂಡಿರುತ್ತಿತ್ತು. ಹೆಂಚಿನ ಮನೆಯಾದ್ದರಿಂದ ಮೇಲಿನಿಂದ ಹೆಗ್ಗಣಗಳು ಮನೆಯೊಳಗೆ ತೂರಿಕೊಂಡು ಬರಲಿಕ್ಕೆ ಈ ಸ್ವಿಚ್ ಗಳು ಅವುಗಳಿಗೆ ಆಸರೆ ನೀಡುತ್ತಿದ್ದವು. ಹಾಗೆ ಅವು ಕೆಳಗೆ ಬರುವಾಗ ಶಬ್ಧವಾಗುತ್ತಿತ್ತು, ಅಲ್ಲದೆ ಸ್ವಿಚ್ಚಿನ ಹಿಡಿಕೆ ಅರ್ಧಕ್ಕೆ ಬಂದು ನಿಲ್ಲುತ್ತಿತ್ತು ಅದರಿಂದಾಗಿ ದೀಪ ಹತ್ತುತ್ತಿತ್ತು. ಸ್ವಿಚ್ಸಿನ ಒಳಗಡೆ ಸ್ಪ್ರಿಂಗು ಇರುತ್ತಿದ್ದುದರಿಂದ ಹಿಡಿಕೆ ತಂತಾನೇ ಮೇಲೆ ಮೊದಲಿನ ಸ್ಥಿತಿಗೆ ಹೋಗಿ ದೀಪ ಆರುತ್ತಿತ್ತು. ಅಂತೂ ಈ ರಹಸ್ಯವನ್ನು  ಭೇದಿಸಿ, ಭೂತದ ಸ್ವಿಚ್ಚು ಆಫ್ ಮಾಡಿದ್ದೆವು! ನನ್ನ ಅಭ್ಯಾಸವೂ ನಿರಾತಂಕವಾಗಿ ಸಾಗಿ ಪರೀಕ್ಷೆ ಬರೆದೆ… ಮುಂದೇನಾಯ್ತು ಅನ್ನೋದು ನಿಮಗ್ಯಾಕೆ ಹೇಳಬೇಕು?! 


ಇದರಿಂದ ಕೆಲವು ಸಂಗತಿಗಳು ಸ್ಪಷ್ಟವಾಗುತ್ತವೆ. ಯಾವಾಗಲೂ ಭೂತದ ಸೃಷ್ಟಿಯಾಗೋದು ಕತ್ತಲಲ್ಲೆ. ಭೂತದ ಭಯಕ್ಕೆ ಇನ್ನೊಂದು ಕಾರಣ ಎಂದರೆ ವಿನಾಕರಣದ(!) ಶಬ್ದ! ಅದಕ್ಕೆ ಇರಬೇಕು, ಹಾರರ್ ಚಿತ್ರಗಳಲ್ಲಿ ನಿಜಕ್ಕೂ ಭಯ ತರಿಸೋದು ಅವರು ಸೃಷ್ಟಿ ಮಾಡುವ ವಿಚಿತ್ರ ಶಬ್ದಗಳೇ ಹೊರತು ಮಾಸ್ಕ್ ಹಾಕಿಕೊಂಡು ಜೋಕರ್ ಗಳಂತೆ ಕಾಣುವ ಭೂತಗಳಲ್ಲ!


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

32 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
10 years ago

ಚೆನ್ನಾಗಿದೆ. ಹೀಗೆಯೇ ಮೂಡಿ ಬರಲಿ.
ಧನ್ಯವಾದಗಳು.

Guruprasad Kurtkoti
10 years ago

ಅಖಿಲೇಶ, ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು!

ಅನಿತಾ ನರೇಶ್ ಮಂಚಿ
ಅನಿತಾ ನರೇಶ್ ಮಂಚಿ
10 years ago

ಛೇ.. ಭೂತ ಇದ್ದಿರಬಹುದು.. ಆ ದಿನ ಹೆಗ್ಗಣ ಕಂಡು ಹೆದರಿಕೆಯಾಗಿ ಓಡಿರಬಹುದೇನೋ 🙂 🙂 

Guruprasad Kurtkoti
10 years ago

ಅನಿತಾ, ದೆವ್ವನಂಥ ಹೆಗ್ಗಣಗಳಿಗೆ ಹೆದರಿದ ದೆವ್ವಗಳು ಅಂತೀರಾ?.. ಇದ್ದರೂ ಇರಬಹುದು :). ಧನ್ಯವಾದಗಳು!

Roopa Satish
Roopa Satish
10 years ago

Guruprasad, 
saraNi kathegaLu chennaagi moodibaruttive…
by the way, horror movies nangishta 🙂 

Guruprasad Kurtkoti
10 years ago
Reply to  Roopa Satish

ರೂಪಾ, ಸರಣಿ ಇಷ್ಟವಾಗಿದ್ದು ಕೇಳಿ ಖುಷಿಯಾಯ್ತು! ನಿಮ್ಮ ಪ್ರೋತ್ಸಾಹಕ್ಕೆ ಋಣಿ. ಇನ್ನೂ ಒಳ್ಳೊಳ್ಳೆ ಕತೆಗಳಿವೆ. ಓದಲು ಮರೆಯದಿರಿ 🙂

Raju
Raju
10 years ago

Guruprasad,

(kannadadalli type madalaguttilla, kshame irali).   This series has come out very well.  Simple and makes one read. I go back to my earlier comment that you seem to be in a hurry and in constraint of space. Please expand and explore few more threads and depth for the charecters. You did quite well for the house but similar justice is reserved by other parts ofthe story. 

 

That said, your writing is awesome!

Guruprasad Kurtkoti
10 years ago
Reply to  Raju

ರಾಜು, ಸರಣಿ ಚೆನ್ನಾಗಿ ಮೂಡಿ ಬರುತ್ತಿದೆ ಎಂದು ನಿಮಗನಿಸಿದ್ದು ಕೇಳಿ ಖುಷಿಯಾಯ್ತು! ನಿಜವಾಗಿಯೂ, ನಿಮ್ಮ ಮುಕ್ತ ಅನಿಸಿಕೆಗಳು ನನ್ನನ್ನು ಎಚ್ಚರಿಕೆಯಿಂದ ಬರೆಯುವಂತೆ ಮಾಡುತ್ತವೆ. ಧನ್ಯವಾದಗಳು!

ಅಂದ ಹಾಗೆ ನಿಮ್ಮ ಪೂರ್ತಿ ಹೆಸರು ತಿಳಿದುಕೊಳ್ಳಬಹುದೆ?

umesh desai
umesh desai
10 years ago

ಏನ್ರೀ ಇದು ದೆವ್ವದ ಗುಂಗು ಹಿಡಿಸಿರಿಪಾ,ಹೋಗಲಿ ಮುಂದಿನ ಸಲಾ ಖರೆಖರೆ ದೆವ್ವದ ಕತಿ ಹೇಳರಿ..

Guruprasad Kurtkoti
10 years ago
Reply to  umesh desai

ದೇಸಾಯ್ರ, ಮುಂದಿನ ಸಲ ದೆವ್ವದ ಆಣಿಗೂ ಖರೆ ಖರೆ ದೆವ್ವದ ಕಥಿ ಬರೀಲಿಖತ್ತೀನಿ. ಓದೋದು ಮರೀಬ್ಯಾಡ್ರಿ!

Shwetha
Shwetha
10 years ago

The story is very well written containing all the aspects required in a story.Indeed i love horror stories a lot & i enjoy reading such kind of stories.

Guruprasad Kurtkoti
10 years ago
Reply to  Shwetha

ಶ್ವೇತಾ, ಕಥೆಯನ್ನು ಓದಿ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು! ದೆವ್ವದ ಕಥೆಗಳು ನಿಮಗೆ ಇಷ್ಟವಾಗುತ್ತಾವೆಂದರೆ ಈ ಇಡೀ ಸರಣಿಯನ್ನು ನೀವು ಖಂಡಿತವಾಗಿ ಇಷ್ಟಪಡುವಿರಿ! ಮುಂದಿನ ಕಂತುಗಳನ್ನೂ ಓದಿ.

Jeevan Shetty
Jeevan Shetty
10 years ago

Very well written article. .Keep up the good work. .

Guruprasad Kurtkoti
10 years ago
Reply to  Jeevan Shetty

ಜೀವನ್, ಬರಹವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು!

Geeta
Geeta
10 years ago

Good one…..

Guruprasad Kurtkoti
10 years ago
Reply to  Geeta

ಗೀತಾ, ಧನ್ಯವಾದಗಳು!

Sadanand
Sadanand
10 years ago

ಚೆನ್ನಾಗಿದೆ.. ನಿಮ್ಮ ಕಥೆಗlu ಹೀಗೆ ಮೂdi ಬರಲಿ ಎndu ಹರೈಸುತ್ತೆನೆ.

Guruprasad Kurtkoti
10 years ago
Reply to  Sadanand

ಸದಾನಂದ, ನಿಮ್ಮ ಪ್ರೋತ್ಸಾಹಕ್ಕೆ ಋಣಿ!

amardeep.p.s.
amardeep.p.s.
10 years ago

ದೀಪದ ದೆವ್ವದ ಕಥೆ ಚೆನ್ನಾಗಿದೆ…..ಸರ್. ನಿಜ, ಕೆಲವು ಸಂಗತಿಗಳನ್ನು ಪ್ರತ್ಯಕ್ಷವಾಗಿ ನೋಡಿದರೇನೇ.. ಬಗೆಹರಿಯುವುದು.

Guruprasad Kurtkoti
10 years ago
Reply to  amardeep.p.s.

ಅಮರ್, ಬರಹವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು!

ಲಕ್ಷ್ಮೀಶ ಜೆ.ಹೆಗಡೆ

ಹೊಸ ರೀತಿಯ ಭೂತದ ಕಥೆ.ಚೆನ್ನಾಗಿದೆ.ಇನ್ನೂ ಮುಂದೆ ಸಾಗಿ ಪುಸ್ತಕ ರೂಪದಲ್ಲಿ ಬರುವಂತಾಗಲಿ.

Guruprasad Kurtkoti
10 years ago

ಲಕ್ಶ್ಮೀಶ, ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು!

ಶ್ರೀಧರ್ ಗೋಪಾಲ ಕೃಷ್ಣ ರಾವ್ ಮುಳಬಾಗಲು
ಶ್ರೀಧರ್ ಗೋಪಾಲ ಕೃಷ್ಣ ರಾವ್ ಮುಳಬಾಗಲು
10 years ago

ದೆವ್ವ ಎನ್ನುವುದು ಭ್ರಮೆ ಕಳಚುವರೆಗೆ ಸತ್ಯವಾಗಿದ್ದುದು ,ತರುವಾಯ ಹೆಗ್ಗಣದ ಸತ್ಯದಿಂದ ದೆವ್ವ ಭ್ರಮೆಯಾಗಿದ್ದು ,ಚೆನ್ನಾಗಿ ಮೂಡಿಬಂದಿದೆ . ಚಿಕ್ಕಂದಿನ ದೈರ್ಯ ,ಮಾನಸಿಕ ಸ್ತಿತಿ ,ಪ್ರೇರಕ ವಾಗಿ ವಿಜ್ಞಾನ ಸಂಮೀಳನ ಸಾಹಿತ್ಯ ನಿಮ್ಮ ಅದ್ಭುತ ಶೈಲಿ ಪ್ರಶಂಸನೀಯ .

 

Guruprasad Kurtkoti
10 years ago

ಗುರುಗಳೆ, ನಿಮ್ಮ ಪ್ರೋತ್ಸಾಹಕ್ಕೆ ಋಣಿ! ಹೀಗೆ ಹರಸುತ್ತಿರಿ 🙂

Venkatesh
Venkatesh
10 years ago

Very nice. Enjoyed !!

Guruprasad Kurtkoti
10 years ago
Reply to  Venkatesh

ವೆಂಕಟೇಶ, ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು!

Prakasha Kulamaruva
Prakasha Kulamaruva
10 years ago

Nice story…. enjoyed reading….:)

Guruprasad Kurtkoti
10 years ago

ಪ್ರಕಾಶ, ಪ್ರೀತಿಯಿಂದ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು!

ramesh
ramesh
10 years ago

ಗುರುಗಳೆ,
ದೆವ್ವದ ಕತೆ ಸರಣಿ ತು೦ಬಾ ಚೆನ್ನಾಗಿ ಬರುತ್ತಿದೆ…..

ರಾಮ್ಗೊಪಲ್ ವರ್ಮ ರ ಕೈಗೆ ಸಿಗದ ಹಾಗೆ ನೊಡಿಕೊಳ್ಳಿ…..

🙂

 

Guruprasad Kurtkoti
10 years ago
Reply to  ramesh

ರಮೇಶ, ಅಭಿಮಾನದಿಂದ ಓದಿ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು! ರಾಮ್ ಗೋಪಾಲ್ ವರ್ಮಾ ಗೆ ದೆವ್ವ ಸಿಗದ ಹಾಗೆ ನೋಡ್ಕೋಬೇಕಾ ಇಲ್ಲಾ ಕಥೆನಾ? 🙂

ಸೌಮ್ಯ ಜಿ ಜೆ

ಇಷ್ಟವಾಯ್ತು

Shivakumar.M.N
Shivakumar.M.N
5 years ago

Nice story sir…

32
0
Would love your thoughts, please comment.x
()
x