ಕಥಾಲೋಕ

ದೀಪಗೃಹದಲ್ಲಿ ಒಂದು ರಾತ್ರಿ…..: ಜೆ.ವಿ.ಕಾರ್ಲೊ.

ಇಂಗ್ಲಿಷ್ ಮೂಲ: ಜೆ.ಎಸ್.ಫ್ಲೆಚರ್
ಅನುವಾದ: ಜೆ.ವಿ.ಕಾರ್ಲೊ.

‘ಶಿವರಿಂಗ್ ಸ್ಯಾಂಡ್’ ದೀಪಗೃಹಕ್ಕೆ ಮತ್ತೊಬ್ಬ ಕಾವಲುಗಾರನಾಗಿ ಮೊರ್ಡೆಕಾಯ್ ಚಿಡ್ಡೋಕ್ ಬಂದು ಇಳಿದಾಗ , ಜೆಝ್ರೀಲ್ ಕಾರ್ನಿಶ್ ತನ್ನ ಪಾಲಿನ ಪಾಳಿಯನ್ನು ಮುಗಿಸಿ ಆಗ ತಾನೇ ನಿದ್ದೆ ಹೋಗಿದ್ದ. ಕಾರ್ನಿಶ್ ನಿದ್ದೆಯಿಂದ ಏಳುವಾಗ ತಾನು ಎದುರುಗೊಳ್ಳಲಿರುವ ಮನುಷ್ಯ ಯಾರು, ಎಂತವನು ಎಂದು ಅವನಿಗೆ ಆ ಗಳಿಗೆಯಲ್ಲಿ ಗೊತ್ತಾಗಿರುವ ಸಂಭವವಿರಲಿಲ್ಲ. ಗೊತ್ತಿದ್ದರೆ ಅವನು ಆಗಷ್ಟೇ ತಿಂಗಳ ರೇಶನ್ ಮತ್ತು ಚಿಡ್ಡೋಕನನ್ನು ಇಳಿಸಿ ಹಿಂದುರಿಗಿದ ದೋಣಿಯನ್ನು ಹತ್ತುವುದರಲ್ಲಿ ಯಾವುದೇ ಸಂಶಯವಿರಲಿಲ್ಲ!

ಚಿಡ್ಡೋಕ್ ಬರುವ ಮುನ್ನ ನಾವಿಬ್ಬರೇ ಶಿವರಿಂಗ್ ಸ್ಯಾಂಡ್ ದೀಪಗೃಹದಲ್ಲಿದ್ದೆವು. ಇದೊಂದು ಅಸಮರ್ಪಕ ವ್ಯವಸ್ಥೆಯಾಗಿತ್ತೆಂಬುದರಲ್ಲಿ ಯಾವುದೇ ಸಂಶಯವಿರಲಿಲ್ಲ. ಇದರಿಂದ ಹೆಚ್ಚು ತೊಂದರೆಯಾಗಿದ್ದು ನನಗೇ. ಒಮ್ಮೆ ರೂಬಿ ಕ್ಲಿಯರ್ ಹುಶಾರು ತಪ್ಪಿ ಹಾಸಿಗೆ ಹಿಡಿದ. ಅದೂ, ಆ ತಿಂಗಳ ರೇಶನ್ ಇಳಿಸಿ ಹೋದ ಒಂದೆರಡು ದಿನಗಳಲ್ಲೇ! ಅವನ ಪಾಲಿನ ಡ್ಯೂಟಿಯಲ್ಲದೆ ಅವನ ಶುಶ್ರೂಷೆಯ ಹೊಣೆಯನ್ನೂ ನಾನೇ ಹೊರಬೇಕಾಯಿತು. ಅವನ ನಂತರ ಬಂದವನು ಫೆರೋಹ ನಂಜುಲಿಯನ್. ಅವನು ಮತ್ತೊಬ್ಬ ಸೂಕ್ಷ್ಮ ಪ್ರಕೃತಿಯ ಯುವಕ. ಶಿವರಿಂಗ್ ಸ್ಯಾಂಡ್ ದೀಪಗೃಹದ ಏಕತಾನತೆಗೆ ಹೊಂದಿಕೊಳ್ಳಲು ಅವನಿಂದ ಆಗಲೇ ಇಲ್ಲ. ಅವನು ಮಾನಸಿಕವಾಗಿ ಕುಗ್ಗಿ ಹೋದ. ದಿನವಿಡೀ ಬೈಬಲ್ ಕೀರ್ತನೆಗಳನ್ನು ಹಾಡುತ್ತಾ ಸಮುದ್ರದ ಹಕ್ಕಿಗಳಿಗೆ ಬೈಬಲನ್ನು ಬೋಧಿಸತೊಡಗಿದ. ಆ ತಿಂಗಳುವಿಡೀ ಹವಮಾನ ಬೇರೆ ಮುನಿಸಿಕೊಂಡಿತ್ತು. ಚಂಡಮಾರುತದ ಹೊಡೆತ ಕಡಿಮೆಯಾಗಲೇ ಇಲ್ಲ. ತಿಂಗಳಿಗೊಮ್ಮೆ ರೇಶನ್ ಹೊತ್ತು ಬರುತ್ತಿದ್ದ ದೋಣಿ ಹದಿನೈದು ದಿನ ತಡವಾಗಿ ಬಂದಿತು. ಇಪ್ಪತ್ತನಾಲ್ಕು ಗಂಟೆ ಡ್ಯೂಟಿ ಮತ್ತು ಅದರ ಮೇಲೆ ಮಾನಸಿಕ ಅಸ್ವಸ್ಥನಾಗಿದ್ದ ನಂಜುಲಿಯನ್ನನನ್ನು ಸಂಭಾಳಿಸುವ ಹೊಣೆ ನನ್ನನ್ನು ಹೈರಾಣನನ್ನಾಗಿಸಿತ್ತು. ಈ ಪರಿಸ್ಥಿತಿಯಲ್ಲಿ ಅವರು ಬೇರೊಬ್ಬನನ್ನು ಕಳಿಸಲೇ ಬೇಕಿತ್ತು.

ಹೀಗೆ, ಮೂರನೆಯವನಾಗಿ ಬಂದವನೇ ಚಿಡ್ಡೋಕ್. ಅವನು ಬಂದಿಳಿಯುವ ಮುನ್ನ ನನಗಾಗಲೀ ಕಾರ್ನಿಶನಿಗಾಗಲೀ ಅವನು ಯಾರೆಂಬುದು ಗೊತ್ತಾಗುವಂತೆಯೇ ಇರಲಿಲ್ಲ. ಸಪ್ಟೆಂಬರ್ ತಿಂಗಳಲ್ಲಿ ನಂಜುಲಿಯನನ ಬದಲಿಗೆ ಮತ್ತೊಬ್ಬ ಬರುವವನೆಂದಷ್ಟೇ ನಮಗೆ ಗೊತ್ತಿತ್ತು.

ಅದೊಂದು ಸುಂದರ ಮುಂಜಾವು. ದೋಣಿ ಲಂಗರು ಹಾಕಿ ಅವನು ಇಳಿದು ಬರುತ್ತಿರುವುದನ್ನು ನಾನು ಕುತೂಹಲದಿಂದ ಗಮನಿಸತೊಡಗಿದೆ. ಮಧ್ಯ ಪ್ರಾಯದ, ಗಡ್ಡ ಬಿಟ್ಟುಕೊಂಡಿದ್ದ ಕಟ್ಟುಮಸ್ತಾದ ಆಳು, ದಟ್ಟ ಕಡು ಕಪ್ಪು ಬಣ್ಣದ ಗುಂಗುರು ಕೇಶರಾಶಿ, ಸ್ವಲ್ಪ ಕುಳ್ಳೇ ಎನ್ನಬಹುದು. ಅತ್ತಿತ್ತ ಚಲಿಸುತ್ತಿದ್ದ ಅವನ ಚಂಚಲ ಕಣ್ಣುಗಳು ನನಗ್ಯಾಕೋ ಇಷ್ಟವಾಗಲಿಲ್ಲ. ನನಗೆ ವಂದಿಸಿ ಅವನು ತನ್ನ ಲಗೇಜನ್ನು ಹಿಡಿದು ಬಂದ. ನಂತರ ನಾವಿಬ್ಬರೂ ಸೇರಿ ದೋಣಿಯಿಂದ ಆ ತಿಂಗಳಿನ ರೇಶನನ್ನು ಇಳಿಸಿದೆವು.
“ನಾನು ಮೊರ್ಡೆಕಾಯ್ ಚಿಡ್ಡೋಕ್.” ಕೈಯನ್ನು ನನ್ನೆಡೆಗೆ ಚಾಚುತ್ತಾ ಅವನು ತನ್ನ ಪರಿಚಯವನ್ನು ಹೇಳಿಕೊಂಡ.

“ಜಾನ್ ಗ್ರೇಬರ್ನ್.” ಅವನ ಕೈ ಕುಲುಕುತ್ತಾ ನಾನು ಹೇಳಿದೆ. ಹೊಗೆಸೊಪ್ಪಿನ ತುಣುಕೊಂದನ್ನು ನನಗೆ ಕೊಡುತ್ತಾ ಅವನು ಸುತ್ತಲೂ ಒಮ್ಮೆ ದೃಷ್ಟಿ ಹರಿಸಿದ.
“ನಾನು ನೋಡಿದ್ದ ಜಾಗಗಳಲ್ಲಿ ಇದು ಅತ್ಯಂತ ಏಕಾಂತ ಪ್ರದೇಶವೆನ್ನಬಹುದು.” ಅವನ ಮುಖ ಬಾಡಿತ್ತು.

“ಇಲ್ಲಿ ನಾವು ಈಗ ಮೂವರಾಗುತ್ತೇವೆ. ಆದ್ದರಿಂದ ಅಷ್ಟೇನೂ ಕಷ್ಟವಾಗಲಾರದು ಅನಿಸುತ್ತೆ.” ಸಮಧಾನ ಪಡಿಸುತ್ತಾ ನಾನೆಂದೆ.
ಅವನ ದೃಷ್ಟಿ ಮೆಟ್ಟಿಲುಗಳ ಬುಡದಿಂದ ಮೇಲಕ್ಕೆ ಹರಿಯಿತು ಮೆಟ್ಟಿಲ ತುದಿಯಲ್ಲಿ ಅವನು ಇನ್ನೊಬ್ಬನನ್ನು ನಿರೀಕ್ಷಿಸಿದ್ದನೆಂದು ತೋರುತ್ತದೆ. ಆದರೆ ಅಲ್ಲಿ ಯಾರೂ ಕಾಣಿಸಲಿಲ್ಲ.

“ಅವನು ಮತ್ತೊಬ್ಬ ಹೇಗೋ?!” ಅವನ ದನಿಯಲ್ಲಿ ಆತಂಕ ಎದ್ದು ಕಾಣುತ್ತಿತ್ತು.
“ನೀನು ಜೆಝ್ರೀಲ್ ಕಾರ್ನಿಶನ ಬಗ್ಗೆ ಕೇಳುತ್ತಿರಬೇಕು? ಅವನು ಪಾಪದ ವ್ಯಕ್ತಿ. ಹೋದ ತಿಂಗಳಷ್ಟೇ ಬಂದಿದ್ದಾನೆ.” ನಾನೆಂದೆ.
ಅವನು ಒಮ್ಮೆಲೆ ನನ್ನ ಕಡೆಗೆ ತಿರುಗಿದ. ಅವನ ಕಣ್ಣುಗಳು ಸಣ್ಣಗಾದವು.
“ಜೆಝ್ರೀಲ್? ಇದೆಂತ ವಿಚಿತ್ರ ಹೆಸರು!… ಈ ಹೆಸರು ಮೊದಲೆಲ್ಲೋ ಕೇಳಿದಂತಿದೆಯಲ್ಲಾ ಮಿ.ಗ್ರೇಬರ್ನ್. ಅವನ ಪೂರ್ತಿ ಹೆಸರು ಏನಿರಬಹುದು?” ಅವನು ಕೇಳಿದ.
“ಕಾರ್ನಿಶ್, ಜೆಝ್ರೀಲ್ ಕಾರ್ನಿಶ್.” ನಾನೆಂದೆ.

ನಾನು ಹೀಗೆ ಹೇಳುತ್ತಿದ್ದಂತೆಯೇ ಚಿಡ್ಡೋಕನ ಮುಖ ಬಿಳುಚಿಕೊಳ್ಳತೊಡಗಿತು. ಹಣೆಯ ಮೇಲೆ ಬೆವರ ಹನಿಗಳು ಸಾಲುಗಟ್ಟತೊಡಗಿದವು.ಅವನು ನನ್ನ ಹತ್ತಿರಕ್ಕೆ ಬಂದ. ಅವನ ಗಡ್ಡ ಅದುರತೊಡಗಿತು.

“ಜೆಝ್ರೀಲ್ ಕಾರ್ನಿಶ್?.. ಅದೇ ಗಿಣಿ ಮೂಗಿನವನು? ಕೆಂಚು ಕೂದಲು? ಇಲಿ ಕಣ್ಣುಗಳು.. ಅವನೇ ತಾನೆ?” ಅವನ ದನಿ ಕಂಪಿಸುತಿತ್ತು.
“ಇರಬಹುದೇನೋ, ಏನೀಗ?” ಅವನನ್ನೇ ದಿಟ್ಟಿಸುತ್ತಾ ನಾನೆಂದೆ.
ಅವನೊಮ್ಮೆ ಧೀರ್ಘ ಶ್ವಾಸವನ್ನು ಹೊರಬಿಡುತ್ತಾ ಸಮುದ್ರದ ಕಡೆಗೆ ನೋಡಿದ. ಅವನನ್ನು ಈಗ ತಾನೇ ಇಳಿಸಿ ವಾಪಸ್ಸಾದ ದೋಣಿಯನ್ನು ಕೈ ಬೀಸಿ ಹಿಂದಕ್ಕೆ ಕರೆಯುತ್ತಾನೋ ಎಂದು ಭಾಸವಾಯಿತು. ಆದರೆ ದೋಣಿ ದೂರ ದಿಗಂತದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಕಾಣಿಸುತ್ತಿತ್ತು. ಅವನು ನಿರಾಶೆಯಿಂದ ನನ್ನ ಕಡೆಗೆ ನೋಡಿದ.
“ಅವನೇನಾದರೂ ನಾನೆನೆಸಿರುವ ಜೆಝ್ರೀಲನೇ ಆಗಿದ್ದರೆ, ದೇವರೇ ನನ್ನನ್ನು ಕಾಪಾಡಬೇಕು. ಆ ದೋಣಿಯಲ್ಲೇ ನಾನು ವಾಪಸ್ಸಾಗಿದ್ದಿದ್ದರೆ ಚೆನ್ನಾಗಿತ್ತು.” ಅವನು ನಿಜಕ್ಕೂ ಹತಾಶನಾಗಿದ್ದ. ಅಷ್ಟರಲ್ಲಿ ನಿದ್ದೆಯಿಂದ ಎದ್ದು ಕಾರ್ನಿಶ್ ಕಣ್ಣುಗಳನ್ನುಜ್ಜುತ್ತಾ ಮೆಟ್ಟಿಲ ತುದಿಯಲ್ಲಿ ಬಂದು ನಿಂತುಕೊಂಡ. ಅಷ್ಟರಲ್ಲಿ ಚಿಡ್ಡೋಕನ ಬಲಗೈ ಮಿಂಚಿನ ವೇಗದಲ್ಲಿ ಅವನ ಪ್ಯಾಂಟಿನ ಹಿಂಬದಿಯ ಜೇಬಿನ ಕಡೆಗೆ ಸರಿಯಿತು. ನನಗೆ ಅಲ್ಲಿ ಏನಿದೆ ಎಂದು ಊಹಿಸಿಕೊಳ್ಳುವುದು ತಡವಾಗಲಿಲ್ಲ..

“ನೀನು ಪಿಸ್ತೂಲನ್ನು ಹೊರತೆಗೆಯಲು ನೋಡುತ್ತಿದ್ದರೆ ಜಾಗ್ರತೆ! ನಾನು ಇಲ್ಲಿಯ ಬಾಸ್.” ಅಧಿಕಾರವಾಣಿಯಿಂದ ನಾನು ಹೇಳಿದೆ.
ನನ್ನ ಎಚ್ಚರಿಕೆ ಅವನ ಮಿದುಳಿಗೆ ತಾಕಿತೋ ಇಲ್ಲವೋ ಗೊತ್ತಾಗಲಿಲ್ಲ. ಅವನ ಪರಿಸ್ಥಿತಿ ಬಯಲಿನಲ್ಲಿ ಬೆಕ್ಕಿನ ಕೈಗೆ ಸಿಕ್ಕಿಬಿದ್ದ ಇಲಿಯಂತಾಗಿತ್ತು. ನಾನು ಆತಂಕದಿಂದ ಕಾರ್ನಿಶನ ಕಡೆಗೊಮ್ಮೆ ದೃಷ್ಟಿ ಹಾಯಿಸಿದೆ.

ಸ್ವಭಾವತ ಕಾರ್ನಿಶನೊಬ್ಬ ಭೋಳೆ ಮನುಷ್ಯ ಎನ್ನುವುದರಲ್ಲಿ ಸಂಶಯವಿರಲಿಲ್ಲ. ಅವನು ಚಿಡ್ಡೋಕನ ಕಡೆಗೆ ಗಮನ ಹರಿಸಿದಂತೆ ಕಾಣಿಸಲಿಲ್ಲ. ಅವನು ಸಾವಕಾಶವಾಗಿ ಮೆಟ್ಟಿಲುಗಳನ್ನು ಇಳಿದು ಕೆಳಗೆ ಬಂದ. ಕೊನೆಗೂ ಅವನ ದೃಷ್ಟಿ ಚಿಡ್ಡೋಕನ ಮೇಲೆ ಹರಿದಾಗ ಅವನ ಮುಖ ಕತ್ತರಿಸಿದ ಕಲ್ಲಂಗಡಿಯಂತಾಯಿತು. ಅವನ ಕಣ್ಣುಗಳಲ್ಲಿ ಒಬ್ಬ ಕೊಲೆಗಾರ ನರ್ತಿಸತೊಡಗಿದ. ಶಿಕಾರಿಯ ಮೇಲೆ ಜಿಗಿಯುವ ಹಿಂಸ್ರ ಪಶುವಿನಂತೆ ಅವನು ಬಾಗಿದ. ಅವನ ಮೂಗಿನ ಹೊಳ್ಳೆಗಳು ಹಿಗ್ಗಿ ಅವನು ಸಶಬ್ಶವಾಗಿ ಉಸಿರು ಬಿಡಲಾರಂಭಿಸಿದ. ಮುಂದಿನ ತಿಂಗಳು ದೋಣಿ ಬರುವುದರೊಳಗೆ ನನಗೆ ಹೆಚ್ಚುವರಿ ಕೆಲಸವಿರುವುದು ಮನದಟ್ಟಾಯಿತು. ಇಬ್ಬರೂ, ಹಲ್ಲು ಕಿರಿದು ಒಂದರ ಮೇಲೊಂದು ಜಿಗಿಯುವ ಸಂದರ್ಭಕ್ಕೆ ಕಾಯುತ್ತಿರುವ ನಾಯಿಗಳಂತೆ ಒಬ್ಬರಿಗೊಬ್ಬರು ಪ್ರದಕ್ಷಿಣೆ ಹಾಕತೊಡಗಿದರು.

ಮೊದಲಿಗೆ ಕಾರ್ನಿಶನೇ ಮೌನವನ್ನು ಮುರಿದ. ನನ್ನನ್ನು ಉದ್ದೇಶಿಸಿ ಅವನು ಮಾತನಾಡಿದ. ಅವನ ಗಡಸು ದನಿಯನ್ನು ಕೇಳಿ ನಾನು ಒಮ್ಮೆಲೇ ಬೆಚ್ಚಿ ಬಿದ್ದೆ.
“ಇವನೇ ಏನು ಹೊಸ ಕಾವಲುಗಾರ?”
“ಹೌದು, ಇವನೇ. ಮೊರ್ಡೆಕಾಯ್ ಚಿಡ್ಡೋಕ್ ಅವನ ಹೆಸರು. ನೀವಿಬ್ಬರೂ ಪರಸ್ಪರ ಪರಿಚಿತರೆಂದು ಊಹಿಸಬಲ್ಲೆ. ಒಂದು ವಿಷಯ. ನೀವಿಬ್ಬರೂ ಆತ್ಮೀಯರಲ್ಲವೆಂದು ನನಗೆ ಗೊತ್ತಾಗುತ್ತಿದೆ. ಅದರ ಬಗ್ಗೆ ನನಗೇನೂ ಆಗಬೇಕಿಲ್ಲ. ನೀವು ಇಲ್ಲಿ ಇರುವವರೆಗೆ ಯಾವದೇ ಅನಾಹುತಗಳಾಗುವುದಕ್ಕೆ ನಾನು ಅಸ್ಪದವನ್ನೀಯುವುದಿಲ್ಲ. ನೆನಪಿರಲಿ!” ನಾನು ಗಂಭೀರವಾಗಿ ಎಚ್ಚರಿಸಿದೆ.
“ಅಂದರೆ .. ಈ ಸೈತಾನ ‘ಶಿವರಿಂಗ್ ಸ್ಯಾಂಡ್’ ನಲ್ಲಿ ನನ್ನ ಜೊತೆ ಇರುತ್ತಾನೆ?” ಥುಪ್ಪನೆ ಉಗಿಯುತ್ತಾ ಕೇಳಿದ ಕಾರ್ನಿಶ್.

“ಅವನು ನನ್ನ ಜೊತೆಯೂ ಇರುತ್ತಾನೆ ಕಾರ್ನಿಶ್. ನೀವಿಬ್ಬರೂ ನನ್ನ ಕೈಕೆಳಗೆ ಇದ್ದೀರೆನ್ನುವುದನ್ನು ಮರೆಯಬೇಡಿ.” ನಾನು ಇಬ್ಬರಿಗೂ ಜ್ಞಾಪಿಸಿದೆ.
ಕಾರ್ನಿಶ್ ಮತ್ತೊಮ್ಮೆ ಕ್ಯಾಕರಿಸಿ ಉಗಿಯುತ್ತಾ, “ನನ್ನ ಕೈಗೆ ಸಿಕ್ಕಿದರೆ ನಿನ್ನನ್ನು ಉದ್ದುದ್ದ ಸಿಗಿದು ತೋರಣ ಹಾಕುತ್ತೇನೆಂದು ಹೇಳಿದ್ದು ಮರೆತಿಲ್ಲ ತಾನೆ? ಈಗ ಸಲೀಸಾಗಿ ನನ್ನ ಕೈಗೆ ಸಿಕ್ಕಿ ಬಿದ್ದಿದ್ದೀಯಾ! ಖಂಡಿತ ನೀನು ಹುಟ್ಟಿಲ್ಲ ಎನಿಸಿಬಿಡುತ್ತೇನೆ ನೋಡ್ತಾ ಇರು.”
ಮುಂದಿನ ನಡೆ ಎಷ್ಟೊಂದು ಕ್ಷಿಪ್ರವಾಗಿ ಘಟಿಸಿತೆಂದರೆ ನಾನು ಕ್ಷಣಕಾಲ ಚಕಿತನಾದೆ. ಚಿಡ್ಡೋಕನ ಕೈಯಲ್ಲಿ ಪಿಸ್ತೂಲು ರಾರಾಜಿಸುತ್ತಿತ್ತು. ಚಿಡ್ಡೋಕ್ ಕಾರ್ನಿಶನ ಹಣೆಯ ಕಡೆಗೆ ಗುರಿ ಇಟ್ಟಿದ್ದ. ಅವನು ಟ್ರಿಗ್ಗರ್ ಎಳೆಯಬೇಕೆನ್ನುವಷ್ಟರಲ್ಲಿ ನನ್ನ ಎಡಗಾಲಿನ ಪಾದ ಮಿಂಚಿನಂತೆ ಅವನ ಕೈಗೆ ಅಪ್ಪಳಿಸಿತ್ತು. ಅವನ ಕೈಯಿಂದ ಪಿಸ್ತೂಲು ಹಾರಿ ಬಂಡೆಗಳ ಮೇಲೆ ಬಿದ್ದು ಉರುಳುತ್ತಾ ಮರೆಯಾಗಿ ಸಮುದ್ರದ ಪಾಲಾಯಿತು. ಪಿಸ್ತೂಲು ಕಳೆದು ಕೊಂಡ ಚಿಡ್ಡೋಕ್ ತೀರಾ ಅಸಹಾಯಕನಾಗಿ ಕಂಡು ಬಂದ. ಗಾಬರಿಯಿಂದ ಬಿಳುಚಿಕೊಂಡ ಅವನ ಮುಖವನ್ನು ನನ್ನಿಂದ ನೋಡಲಾಗಲಿಲ್ಲ.
“ನೀವು ಏನು ಮಾಡಿದಿರಿ ಮಿಸ್ಟರ್ ಗ್ರೇಬರ್ನ್? ಅವನು ಖಂಡಿತವಾಗಿಯೂ ನನ್ನನ್ನು ಸಾಯಿಸುತ್ತಾನೆ.!”

“ನಾನು ಇಲ್ಲಿ ಇರೋವರೆಗೂ ಅದು ಸಾಧ್ಯವಿಲ್ಲ ಚಿಡ್ಡೋಕ್! ನಿಮ್ಮ ಮಧ್ಯೆ ಹೊಗೆಯಾಡುತ್ತಿರುವ ಇಷ್ಟೊಂದು ದ್ವೇಷಕ್ಕೆ ಕಾರಣವಾದರೂ ಏನು?”
ಅವನು ಮಾತನಾಡಲಿಲ್ಲ. ತಪ್ಪಿಸಿಕೊಳ್ಳಲು ಎಲ್ಲಾ ಹಾದಿ ಮುಚ್ಚಿಕೊಂಡಿದ್ದು ಅಸಹಾಯಕತೆಯಿಂದ ಚಡಪಡಿಸುತ್ತಿದ್ದ ಪ್ರಾಣಿಯಂತಾಗಿತ್ತು ಅವನ ಸ್ಥಿತಿ. ತನ್ನಷ್ಟಕ್ಕೇ ಏನೇನೋ ಬಡಬಡಿಸುತ್ತಿದ್ದ. ಎಲ್ಲಿಂದಲೋ, ಹೇಗೋ ಒಂದು ದೋಣಿ ಬಂದು ತನ್ನನ್ನು ರಕ್ಷಿಸುತ್ತದೆ ಎಂಬಂತೆ ಅವನು ಪದೇ ಪದೇ ಸಮುದ್ರದ ಕಡೆಗೆ ನೋಡುತ್ತಿದ್ದ.
“ಮುಂದಿನ ತಿಂಗಳು ನಮಗೆ ರೇಶನ್ ಹೊತ್ತು ದೋಣಿ ಬರುವವರೆಗೂ ಇಲ್ಲಿ ನಾವು ಮೂವರೇ ಮಿಸ್ಟರ್ ಚಿಡ್ಡೋಕ್! ಇದನ್ನು ನೀನು ಈಗಲೇ ಮನದಟ್ಟು ಮಾಡಿಕೊಳ್ಳುವುದು ಒಳ್ಳೆಯದು! ನಿಮ್ಮಿಬ್ಬರ ಮಧ್ಯದ ಸಮಸ್ಯೆ ಏನೆಂದು ನನಗೆ ಹೇಳಿದರೆ ಪರಿಹರಿಸಲು ಸಹಾಯ ಮಾಡಬಹುದು.”

ಅವನು ನನ್ನೆಡೆಗೆ ತಿರುಗಿದ. ಅವನ ಕಣ್ಣುಗಳು ಬೆಂಕಿ ಕಾರುತ್ತಿದ್ದವು.
“ಮಿಸ್ಟರ್ ಗ್ರೇಬರ್ನ್ ನೀವು ಮಧ್ಯೆ ಬಾರದಿದ್ದಿದ್ದರೆ ನಾನು ಅವನನ್ನು ಮುಗಿಸಿ ಸಮಾಧಾನದಿಂದಿರುತ್ತಿದ್ದೆ.”

“ನೋಡಪ್ಪಾ ಚಿಡ್ಡೋಕ್, ಇಲ್ಲಿ ನಮ್ಮ ಮಧ್ಯೆ ಯಾವುದೇ ಆಯುಧಗಳಿಲ್ಲ. ಆಯುಧವೆನ್ನುವುದಾದರೆ ನನ್ನ ಬಳಿ ಒಂದು ಏರ್ ಗನ್ ಇದೆ. ಅದರಲ್ಲಿ ಹಕ್ಕಿಗಳನಷ್ಟೇ ಬೇಟೆಯಾಡಬಹುದು. ಅದೂ ಕೂಡ ನನ್ನ ಸುಪರ್ಧಿಯಲ್ಲಿದೆ. ನೀನು ಆರಾಮವಾಗಿರು.”
ನಾನು ಸುಳ್ಳು ಹೇಳಿದ್ದೆ. ನನ್ನ ಬಳಿ ಒಂದು ಪಿಸ್ತೂಲು ಇತ್ತು. ಅದು ಯಾರಿಗೂ ಗೊತ್ತಿರಲಿಲ್ಲ. ಆಪತ್ಕಾಲದಲ್ಲಿ ನರೆವಿಗೆ ಬರುತ್ತದೆಂದು ನಾನು ಯಾರಿಗೂ ಹೇಳಿರಲಿಲ್ಲ. ನಾನು ಹೇಳಿದ್ದು ಚಿಡ್ಡೋಕನ ಮನಸ್ಸಿಗೆ ನಾಟಿತೋ ಇಲ್ಲವೋ ನಾ ಕಾಣೆ. ಅವನದೊಂದೇ ರಾಗ: :”ಅವನು ಖಂಡಿತ ನನ್ನನ್ನು ಸಾಯಿಸುತ್ತಾನೆ. ಅವನಿಂದ ನನ್ನನ್ನು ರಕ್ಷಿಸಿಸುವುದು ನಿಮ್ಮ ಜವಬ್ದಾರಿ. ನನಗೆ ವಿಪರೀತ ಹಸಿವಾಗುತ್ತಿದೆ. ನಿದ್ದೆಯೂ ಬರುತ್ತಿದೆ. ಹೇಗೆ ಆರಾಮವಾಗಿರಲಿ?”

ನನಗೆ ಸಿಟ್ಟು ಬಂದಿತು. “ನೀನೊಬ್ಬ ಹೇಡಿ ಮಿಸ್ಟರ್ ಚಿಡ್ಡೋಕ್. ನೀನು ಇಲ್ಲೇ ಬಂಡೆಯ ಮೇಲೆ ಕುಳಿತಿರು. ನಾನು ಕಾರ್ನಿಶನನ್ನು ಮೇಲೆ ಕರೆದುಕೊಂಡು ಹೋಗಿ ಮಾತನಾಡಿಸಿ ಬರುತ್ತೇನೆ.
“ನೋಡು ಕಾರ್ನಿಶ್, ನಾನು ಇಲ್ಲಿಯ ಬಾಸ್. ಈಗ ನಿಮ್ಮಿಬ್ಬಿರ ಮಧ್ಯದ ವ್ಯಾಜ್ಯ ಇತ್ಯರ್ಥವಾಗುವುದು ಬಹಳ ಮುಖ್ಯ.”

“ಕಳೆದ ಭಾರಿ ಅವನು ನನ್ನಿಂದ ಕೂದಲಂತರದಲ್ಲೇ ತಪ್ಪಿಸಿಕೊಂಡ. ಈಗ? ನಾನು ಕಾಯ ಬಲ್ಲೆ. ಹೋದರೂ ಎಲ್ಲಿಗೋಗುತ್ತಾನೆ? ಸಮುದ್ರದ ಮೇಲಿಂದ ಓಡಿಹೋಗುತ್ತಾನಾ? ಇಲ್ಲ, ಆಕಾಶದಲ್ಲಿ ಹಾರಿ ಹೋಗುತ್ತಾನಾ? ಈ ಶಿವರಿಂಗ್ ಸ್ಯಾಂಡ್ ದೀಪಗೃಹದಿಂದ ಅವನು ಖಂಡಿತವಾಗಿಯೂ ಜೀವಂತ ಹಿಂದಿರುಗುವುದಿಲ್ಲ.”
“ಅವನು ನಿನಗೆ ಅಂಥ ಅನ್ಯಾಯ ಮಾಡಿರುವುದಾದರೂ ಏನು ಕಾರ್ನಿಶ್?”
ದೀರ್ಘ ಮೌನದ ನಂತರ ಕಾರ್ನಿಶ್ ಹೇಳತೊಡಗಿದ:
“ಅವನು ಮನುಷ್ಯನೆನೆಸಿಕೊಳ್ಳಲು ಖಂಡಿತಾ ನಾಲಾಯಕ್ ಮಿಸ್ಟರ್ ಗ್ರೇಬರ್ನ್. ಅವನೊಬ್ಬ ರಾಕ್ಷಸ. ಬಹಳ ವರ್ಷಗಳ ಹಿಂದೆ ನಾನು, ಅವನೂ ಒಂದೇ ಹಡಗಿನಲ್ಲಿ ಕೆಲಸ ಮಾಡುತ್ತಿದ್ದೆವು. ಹೇಗೆ ಅಂತ ಕೇಳಬೇಡಿ. ನಮಗೆ ಒಂದು ದೊಡ್ಡ ನಿಧಿ ಸಿಕ್ಕಿತು. ಎಂತಾದ್ದೋ ಜ್ವರದಲ್ಲಿ ನಾನು ಹಾಸಿಗೆ ಹಿಡಿದೆ. ನನ್ನ ಪಾಲಿನ ನಿಧಿಯನ್ನು ಇಂಗ್ಲೆಂಡಿನಲ್ಲಿರುವ ನನ್ನ ಕುಟುಂಬಕ್ಕೆ ಪಾವತಿಸಲು ರಜೆಗೆ ಹೊರಟಿದ್ದ ಚಿಡ್ಡೋಕನಿಗೆ ಕೋರಿದೆ. ಅಷ್ಟೇ. ನಂತರ ನನ್ನ ಜ್ವರ ಉಲ್ಬಣಿಸಿ ನನ್ನನ್ನು ಯಾವುದೋ ಆಸ್ಪತ್ರೆಗೆ ಸೇರಿಸಿದರು. ನಾನು ಗುಣಮುಖನಾದ ಎಷ್ಟೋ ಸಮಯದ ನಂತರ ಈ ಧೂರ್ತ ನನಗೆ ಮೋಸಮಾಡಿರುವುದು ಗೊತ್ತಾಯಿತು. ಅಷ್ಟೇ ಅಲ್ಲ. ಈ ನೀಚ, ನನ್ನ ಆರೋಗ್ಯ ತುಂಬಾ ಭಿಗಡಾಯಿಸಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದೇನೆಂದು ನನ್ನ ಹೆಂಡತಿಯನ್ನು ನಂಬಿಸಿ ನನ್ನ ಆಸ್ಪತ್ರೆಯ ಖರ್ಚಿಗೆಂದು ಮನೆಯನ್ನೂ ಮಾರಿಸಿ ಆ ದುಡ್ಡನ್ನೂ ಲಪಟಾಯಿಸಿದ್ದಾನೆ ನೀಚ! ನಾನು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ಹೋದಾಗ ನನ್ನ ಮಡದಿ ಮಕ್ಕಳನ್ನು ಅನಾಥರನ್ನಾಗಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈಗ ನೀವೇ ಹೇಳಿ ಮಿಸ್ಟರ್ ಗ್ರೇಬರ್ನ್, ಇವನು ಜೀವಂತವಾಗಿ ಈ ಭೂಮಿಯ ಮೇಲೆ ಬದುಕಿರಲು ಯೋಗ್ಯನೇ?”

ನೀನು ಹೇಳುತ್ತಿರುವುದು ನಿಜವೇ ಆಗಿದ್ದರೆ ಚಿಡ್ಡೋಕನಿಗೆ ಯಾವ ಶಿಕ್ಷೆಯೂ ಜುಜುಬಿಯೇ ಎನ್ನಬಹುದು ಮಿಸ್ಟರ್ ಕಾರ್ನಿಶ್. ಆದರೂ ನನ್ನ ಹೊಣೆಗಾರಿಕೆಯ ವ್ಯಾಪ್ತಿಯಲ್ಲಿ ರಕ್ತಪಾತವಾಗುವುದನ್ನು ಸಹಿಸಿಕೊಂಡಿರಲು ನಾನು ತಯಾರಿಲ್ಲ.”
“ನಾನು ಅವನನ್ನು ಇವತ್ತೇ, ಇಲ್ಲ ನಾಳೆಯೇ ಸಾಯಿಸಿಬಿಡುತ್ತೇನೆಂದು ಹೇಳುತ್ತಿಲ್ಲ.” ಕಾರ್ನಿಶ್ ಹೇಳಿದ. “ನನಗೆ ಏನೂ ಅವಸರವಿಲ್ಲ. ಅವನು ಇಲ್ಲಿಂದ ಎಲ್ಲಿಗೆ ತಪ್ಪಿಸಿಕೊಂಡು ಹೋದಾನು? ಜೀವ ಭಯದಿಂದ ಅವನಿಗೆ ನಿದ್ರೆ ಬಂದರೆ ತಾನೆ?! ಬೆಕ್ಕು ಮತ್ತು ಇಲಿಯ ಆಟ ನೋಡುತ್ತಲೇ ಇರಿ ಗ್ರೇಬರ್ನ್. ಅವನನ್ನು ಹೇಗೆ ಮುಗಿಸಬಹುದೆಂದು ಯೋಚಿಸಲು ನನಗೆ ಒಂದು ತಿಂದು ತಿಂಗಳ ಕಾಲಾವಕಾಶವಿದೆ. ನನಗಿಲ್ಲಿ ಬೇರೆ ಕೆಲಸವಾದರೂ ಏನಿದೆ?!”

“ಸಿಟ್ಟು, ದ್ವೇಷ ಒಬ್ದ ಮನುಷ್ಯನ ವಿವೇಚನಾ ಶಕ್ತಿಯನ್ನು ಕುಂದಿಸುತ್ತದೆ ಕಾರ್ನಿಶ್.” ನಾನೆಂದೆ.
“ನೀವು ಏನೇ ಹೇಳಿ ಮಿಸ್ಟರ್ ಗ್ರೇಬರ್ನ್. ಮುಂದಿನ ತಿಂಗಳು ದೋಣಿ ಬರುವಾಗ ಖಂಡಿತವಾಗಿಯೂ ಅದರೊಳಗೆ ಚಿಡ್ಡೋಕ್ ಹತ್ತುತ್ತಾನೆ. ಆದರೆ ಜೀವಂತವಾಗಿಯಲ್ಲ! ಹೆಣವಾಗಿ!!” ಕಾರ್ನಿಶ್ ಕ್ರೋಧದಿಂದ ಹೇಳಿದ.
“ಹಾಗಾದರೆ ನೀನು ನೇಣುಗಂಭ ಏರಲು ತಯಾರಾಗಿದ್ದೀಯಾ ಅನ್ನು? ಈ ದ್ವೀಪದಿಂದ ನಿನಗೆ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.”
“ನನ್ನ ಹೆಂಡತಿ ಸತ್ತ ದಿನದಿಂದ ನಾನು ಬದುಕಿರಬೇಕೆಂಬ ಆಸೆಯೇ ಬತ್ತಿ ಹೋಗಿದೆ ಮಿಸ್ಟರ್ ಗ್ರೇಬರ್ನ್. ನಾನು ಬದುಕಿರುವುದು ಒಂದೇ ಒಂದು ಕಾರಣಕ್ಕಾಗಿ: ಚಿಡ್ಡೋಕನ ಮೇಲೆ ಮುಯ್ಯಿ ತೀರಿಸಲು. ಬೇಟೆ ತಾನಾಗಿಯೇ ಶಿಕಾರಿಯನ್ನು ಹುಡುಕಿಕೊಂಡು ಬಂದಿದೆ! ಅವನನ್ನು ಮುಗಿಸಿದ ನಂತರ ನನಗೆ ಏನಾದರೂ ಚಿಂತೆಯಿಲ್ಲ.” ಎಂದು ಕಾರ್ನಿಶ್ ವಿಲಕ್ಷಣವಾಗಿ ನಕ್ಕ.

ಅವನ ಕ್ರೂರ ನಗೆ ನನ್ನ ಮೈಮೇಲಿನ ರೋಮಗಳನ್ನು ನಿಮಿರಿಸಿದವು. ಅವನನ್ನು ಅಲ್ಲೇ ಬಿಟ್ಟು ನಾನು ಮೆಟ್ಟಿಲಿಳಿದು ಕೆಳಗೆ ಬಂದೆ. ಚಿಡ್ಡೋಕ್ ನನ್ನನ್ನೇ ಬೆದರು ಕಂಗಳಿಂದ ನೋಡತೊಡಗಿದ.
“ಕಾರ್ನಿಶ್ ನಿನ್ನ ಬಗ್ಗೆ ಹೇಳಿದ್ದು ನಿಜವೇ ಆಗಿದ್ದರೆ, ನಿನಗಿಂತ ನೀಚ ಕ್ರಿಮಿ ಈ ಜಗತ್ತಿನಲ್ಲಿ ಬೇರೊಂದಿರಲಾರದು ಚಿಡ್ಡೋಕ್! ಜೀವಂತವಾಗಿ ನಿನ್ನ ಚರ್ಮವನ್ನು ಸುಲಿದು ಉಪ್ಪು ಸವರಿದರೂ ಅದು ಕಮ್ಮಿಯೇ ಎನ್ನಬಹುದು!”
“ನನಗೆ ಗೊತ್ತಿತ್ತು. ನೀವೂ ಅವನ ಪಕ್ಷಪಾತಿಯೇ. ನನಗೇನಾದರೂ ಆದರೆ ಅದಕ್ಕೆ ನೀವೂ ಜವಬ್ದಾರರೆಂದು ಮರೆಯಬೇಡಿ ಮಿಸ್ಟರ್ ಗ್ರೇಬರ್ನ್!” ಅವನು ಅಳತೊಡಗಿದ.
“ನನ್ನ ಜವಬ್ದಾರಿಯ ಬಗ್ಗೆ ನೀನು ಹೇಳಬೇಕಿಲ್ಲ ಚಿಡ್ಡೋಕ್. ಹೆಂಗಳೆಯರಂತೆ ಅಳುವುದನ್ನು ಬಿಟ್ಟು ಒಬ್ಬ ಗಂಡಸಿನಂತೆ ಕೊಂಚವಾದರೂ ರೋಷ ತೋರಿಸು. ತಗೋ, ಊಟ ಮಾಡುವಿಯಂತೆ.” ನಾನೆಂದೆ.

ಅವನು ನಾನು ತಂದಿದ್ದ ಊಟವನ್ನು ಗಬಗಬನೆ ತಿನ್ನತೊಡಗಿದ. ನನ್ನ ತಲೆಯೊಳಗೆ ಒಂದು ಯೋಜನೆ ಮೊಳೆಯತೊಡಗಿತು. ಅಂದರೆ ಅವರಿಬ್ಬರೂ ಒಬ್ಬರನ್ನೊಬ್ಬರು ಭೇಟಿಯಾಗದಂತೆ ನೋಡಿಕೊಳ್ಳುವುದು. ಚಿಡ್ಡೋಕನ ಬಳಿ ಪಿಸ್ತೂಲು ಇದ್ದಿದ್ದರೆ ಅವನು ಇಷ್ಟೊತ್ತಿಗಾಗಲೇ ಅವನನ್ನು ಮುಗಿಸಿರುತ್ತಿದ್ದ. ಆದರೆ ಈಗ ಕಾರ್ನಿಶ್ ಅವನನ್ನು ಸಾಯಿಸುವುದಂತೂ ಖಚಿತ. ಮೂವರೊಳಗೆ ಆಯುಧವಿರುವುದು ನನ್ನ ಬಳಿ ಮಾತ್ರ! ನಾನು ನನ್ನ ಕೋಣೆಗೆ ಹೋದೆ. ಪಿಸ್ತೂಲಿಗೆ ಗುಂಡುಗಳನ್ನು ತುಂಬಿಸಿ ಕಾರ್ನಿಶನ ಎದುರಿಗೆ ಬಂದು ಕುಳಿತುಕೊಂಡೆ. ಅವನು ಊಟ ಮುಗಿಸಿದ್ದನಾದರೂ ಅಲ್ಲೇ ಕುಳಿತಿದ್ದ. ಅವನು ಈ ಜಗತ್ತಿನಲ್ಲಿ ಇದ್ದಂತೆ ಕಾಣುತ್ತಿರಲಿಲ್ಲ. ಅವನು ಎಚ್ಚರಗೊಂಡು ನನ್ನೆಡೆಗೆ ನೋಡಿದಾಗ ನಾನು ಪಿಸ್ತೂಲನ್ನು ಅವನ ಹಣೆಗೆ ಗುರಿ ಇಟ್ಟಿರುವುದನ್ನು ನೋಡಿ ಒಮ್ಮೆಲೇ ಹೌಹಾರಿದ.
“ಏನಿದರ ಉದ್ದೇಶ ಮಿಸ್ಟರ್ ಗ್ರೇಬರ್ನ್?!” ಅವನು ತಡಬಡಾಯಿಸಿದ.
“ನಾನು ಇಲ್ಲಿಯ ಬಾಸ್ ಎಂದು ನೆನಪಿಸಲು ಅಷ್ಟೇ ಕಾರ್ನಿಶ್! ನೀವಿಬ್ಬರೂ ಪರಸ್ಪರ ಭೇಟಿಯಾಗದಂತೆ ನೋಡಿಕೊಳ್ಳುವುದು ನನ್ನ ಜವಬ್ದಾರಿ. ನನ್ನ ಬಳಿ ಆಯುಧವಿದೆ ಎನ್ನುವುದು ಜ್ಞಾಪಕವಿರಲಿ. ಈಗ ನಿನ್ನ ಪಾಳಿ. ಮೆಟ್ಟಿಲು ಹತ್ತಿ ನೀನು ಮೇಲಕ್ಕೆ ಹೋಗು. ನಿನ್ನ ಪಾಳಿ ಮುಗಿಯುವವರೆಗೆ ಕೆಳಗೆ ಇಳಿಯುವಂತಿಲ್ಲ. ನೀನು ಮೇಲೆ ಹತ್ತುತ್ತಿದ್ದಂತೆ ನಾನು ಮೆಟ್ಟಿಲುಗಳ ಬುಡದಲ್ಲಿರುವ ಬಾಗಿಲಿಗೆ ಬೀಗ ಜಡಿಯುತ್ತೇನೆ. ನಿನ್ನ ಪಾಳಿ ಮುಗಿಯುವವರೆಗೆ ಚಿಡ್ಡೋಕನಿಗೆ ಅವನ ಕೋಣೆಯಲ್ಲಿ .ಬಂಧಿಯಾಗಿರಿಸುತ್ತೇನೆ. ನಿನ್ನ ಪಾಳಿ ಮುಗಿಸಿ ನೀನು ನಿನ್ನ ಕೋಣೆಗೆ ಹೋಗುತ್ತಿದ್ದಂತೆ ಚಿಡ್ಡೋಕ್ ಮೇಲೆ ಹತ್ತುತ್ತಾನೆ. ಅವನಿಗೂ ಬೀಗ ಹಾಕುತ್ತೇನೆ. ನನ್ನ ಕೆಲಸ ಅಡುಗೆ ಮಾಡುವುದು ಮತ್ತು ನಿಮ್ಮಿಬ್ಬರನ್ನು ಕಾಯುವುದು, ಅಷ್ಟೇ. ಮುಂದಿನ ಭಾರಿ ದೋಣಿ ಬರುತ್ತಿದ್ದಂತೆಯೇ ನಿಮ್ಮಿಬ್ಬರಲ್ಲಿ ಒಬ್ಬರು ಅದನ್ನು ಏರುತ್ತೀರಿ!”

“ನಾನು ‘ಆಗುವುದಿಲ್ಲ’ವೆಂದು ಹೇಳಿದರೆ ಏನು ಮಾಡುತ್ತಿರಿ ಮಿಸ್ಟರ್ ಗ್ರೇಬರ್ನ್?”
“ಆ ಪ್ರಶ್ನೆಯೇ ಉದ್ಭವಿಸಲಾರದು. ಈಗ ನೀನು ಏಳಬಹುದು ಮಿಸ್ಟರ್ ಕಾರ್ನಿಶ್!”
ಅವನಿಗೇನನ್ನಿಸಿತೋ! ಪಿಸ್ತೂಲಿನ ಮೇಲೆ ಒಂದು ಕಣ್ಣಿಟ್ಟು ಅವನು ಎದ್ದು ನಿಂತ.
“ನಾನು ಸ್ಟೋರ್ ರೂಮಿಗೆ ಹೋಗಿ ಬರಲು ನಿಮ್ಮ ಅಭ್ಯಂತರವಿಲ್ಲ ತಾನೆ? ನನಗೆ ಹೊಗೆಸೊಪ್ಪು ಬೇಕಿತ್ತು.” ಅವನು ಕೇಳಿದ.

“ನನ್ನದೇನೂ ಅಬ್ಯಂತರವಿಲ್ಲ. ನಿನ್ನ ಕೆಲಸ ಮುಗಿಸಿ ಮೇಲಕ್ಕೆ ಹೋಗಬೇಕು ಅಷ್ಟೇ.”
ಅವನು ವಟಗುಟ್ಟುತ್ತಾ ಸ್ಟೋರ್ ರೂಮಿಗೆ ಹೋದ. ಹೊರಬಂದಾಗ ಅವನ ಮುಖ ಸಿಟ್ಟಿಂದ ಕಪ್ಪಿಟ್ಟಿತ್ತು. ಏನೂ ಮಾತನಾಡದೆ ಅವನು ಮೆಟ್ಟಿಲುಗಳನ್ನು ಹತ್ತಿ ಮೇಲಕ್ಕೆ ಹೋದ. ನಾನು ಬಾಗಿಲನ್ನು ಎಳೆದು ಬೀಗ ಜಡಿದೆ.

ಮೊದಲು, ನಿಮಗೆ ದೀಪ ಗೃಹಗಳ ಬಗ್ಗೆ ಕೊಂಚ ವಿವರಣೆ ಕೊಡುವುದು ಅಗತ್ಯವೆಂದು ನನ್ನ ಭಾವನೆ. ಶಿವರಿಂಗ್ ಸ್ಯಾಂಡ್ಸ್ ಎಂಬ ಈ ದೀಪಗೃಹವನ್ನು ಸಮುದ್ರ ತೀರದಿಂದ ಸುಮಾರು ಹದಿನೈದು ಕಿ.ಮಿ., ದೂರದಲ್ಲಿ ಒಂದು ಮಹಾನ್ ಹೆಬ್ಬಂಡೆಯ ಮೇಲೆ ಕಟ್ಟಲಾಗಿದೆ. ದೀಪಗೃಹದ ಗೋಪುರಕ್ಕೆ ಹತ್ತುವ ಮೊದಲು ಬಂಡೆಯ ಮೇಲೆ ಕತ್ತಲಾಗಿರುವ ಇಪ್ಪತ್ತು ಮೆಟ್ಟಿಲುಗಳನ್ನು ಹತ್ತ ಬೇಕು. ಜೋಡಿ ಬಾಗಿಲನ್ನು ದಾಟಿ ಒಳಗೆ ಪ್ರವೇಶಿಸಿದರೆ ಮೊದಲು ಸಿಗುವುದೇ ನಡುಕೋಣೆ. ವೃತ್ತಾಕಾರದ ದೀಪಗೃಹದಲ್ಲಿ ಮೊದಲರ್ಧ ನಡುಕೋಣೆಯಾದರೆ ಉಳಿದ ಅರ್ಧದಲ್ಲಿ ನಾಲ್ಕು ಕೋಣೆಗಳಿದ್ದವು. ಅದು ದೀಪಗೃಹದ ಕಾವಲುಗಾರರ ಖಾಸಗಿ ಕೋಣೆಗಳು. ನಡುಕೋಣೆಯಿಂದ ದೀಪಗೃಹದ ಗೋಪುರಕ್ಕೆ ಹತ್ತುವ ತಿರುಗು ಮೆಟ್ಟಿಲುಗಳಿದ್ದವು. ಮೆಟ್ಟಿಲಿಗೆ ಒಂದು ಬಾಗಿಲಿತ್ತು. ಕಾರ್ನಿಶ್ ಅವನ ಪಾಳಿ ಮುಗಿಸುವ ಮುನ್ನ ಕೆಳಗೆ ಬರದಂತೆ ನಾನು ಬಾಗಿಲಿಗೆ ಬೀಗ ಜಡಿದಿದ್ದೆ. ದೀಪಗೃಹದ ಗೋಪುರಕ್ಕೆ ಬರೋಬರಿ ಎಂಭತ್ತೊಂಭತ್ತು ಮೆಟ್ಟಿಲುಗಳಿದ್ದವು. ತಿರುಗುತ್ತಿರುವ ದೀಪದ ಕೆಳಗೆ ಒಬ್ಬರು ಆರಾಮವಾಗಿ ಕುಳಿತುಕೊಳ್ಳುವಷ್ಟು ಜಾಗವಿತ್ತು. ದೀಪ ಆರದಂತೆ ನೋಡಿಕೊಳ್ಳುವುದಷ್ಟೇ ಕಾವಲುಗಾರನ ಕೆಲಸ.

ಕಾರ್ನಿಶ್ ಮತ್ತು ಚಿಡ್ಡೋಕ್ ಪರಸ್ಪರ ಭೇಟಿಯಾಗದಂತೆ ನೋಡಿಕೊಳ್ಳುವುದು ಕಷ್ಟದ ಕೆಲಸವಲ್ಲವೆಂದು ನನಗೆ ಖಾತರಿಯಾಗಿತ್ತು. ಒಬ್ಬನ ಪಾಳಿ ಮುಗಿಯುವ ಸ್ವಲ್ಪ ಮುನ್ನ ಇನ್ನೊಬ್ಬನನ್ನು ಅವನ ಕೋಣೆಯೊಳಗೆ ಕೂಡಿ ಹಾಕುವುದು. ಪಾಳಿ ಮುಗಿಸಿ ಅವನು ಬಂದಂತೆ ಅವನನ್ನು ಅವನ ಕೋಣೆಯಲ್ಲಿ ಬಂಧಿಸಿ ಇವನನ್ನು ಮೇಲೆ ಹತ್ತಿಸುವುದು. ಅಷ್ಟೇ. ಕಾರ್ನಿಶ್, ಚಿಡ್ಡೋಕನಿಗಿಂತ ಹೆಚ್ಚು ಆಕ್ರಮಣಕಾರಿಯಾಗಿ ಕಾಣಿಸುತ್ತಿದ್ದರಿಂದ ಅವನ ಹಿಂದೆ ನಾನು ಬಾಗಿಲಿಗೆ ಎರಡು ಬೀಗಗಳನ್ನು ಜಡಿದೆ.

ಕಾರ್ನಿಶ್ ಮೇಲೆ ಹತ್ತುತ್ತಿದ್ದಂತೆಯೇ ನಾನು ಚಿಡ್ಡೋಕನನ್ನು ಒಳಗೆ ಕರೆದು ಅವನಿಗೆ ನನ್ನ ಯೋಜನೆಯನ್ನು ವಿವರಿಸಿದೆ. “ನೋಡಪ್ಪ, ನೀನು ಮೂರರಲ್ಲಿ ಒಂದು ಪಾಳಿ ಮಾಡಲು ಬಂದಿರುವೆಯಾದರೂ, ಬದಲಾದ ಸಂದರ್ಭದಿಂದಾಗಿ ನೀವಿಬ್ಬರೂ ನನ್ನ ಪಾಳಿಯನ್ನೂ ಮಾಡಬೇಕಾಗಿದೆ. ನಿನಗೆ ಇಷ್ಟವಿದ್ದರೆ ಮಾಡಬಹುದು. ಇಲ್ಲದಿದ್ದಲ್ಲಿ ನೀವಿಬ್ಬರು ಏನು ಬೇಕಾದರೂ ಮಾಡಿಕೊಳ್ಳಿ, ನನಗೇನು ಆಗಬೇಕಿಲ್ಲ.”

“ನೀವು ಏನು ಮಾಡಿದರೂ ಅವನು ಕೆಣಕಿದ ಸರ್ಪದಂತಾಗಿದ್ದಾನೆ. ಅವನನ್ನು ನಾನು ಚೆನ್ನಾಗಿ ಬಲ್ಲೆ. ನನ್ನ ಪಿಸ್ತೂಲು ನನ್ನ ಕೈಯಲ್ಲಿದ್ದಿದ್ದರೆ!”” ಅವನು ಕೈ ಕೈ ಹಿಸುಕಿದ.
ನಾನು ಮಾತನಾಡಲಿಲ್ಲ. ಎದ್ದು ಅಡುಗೆಯ ಸಿದ್ಧತೆಯಲ್ಲಿ ತೊಡಗಿಸಿಕೊಂಡೆ.ಚಿಡ್ಡೋಕ್ ಹಸಿದ ಕಂಗಳಿಂದ ನನ್ನನ್ನೇ ಗಮನಿಸತೊಡಗಿದ.

ಗೆಳೆಯನಿಗೂ, ಅವನ ಮಡದಿಗೂ ದ್ರೋಹವೆಸಗಿದವನ ಜೊತೆ ಊಟ ಕೂಡ ಮಾಡುವುದು ನನಗೆ ಅಸಹ್ಯವೆನಿಸಿತು. ವಾಡಿಕೆಯಂತೆ ನಾನು ಅವನ ಪಾಲಿನ ರಮ್ಮನ್ನು ಗ್ಲಾಸಿಗೆ ಹುಯ್ದು ಕೊಟ್ಟೆ. ಅವನ ‘ಚಿಯರ್ಸ್’ ಗೆ ಮರು ಚಿಯರ್ಸ್ ಹೇಳುವ ಉತ್ಸಾಹವೂ ನನಗಿರಲಿಲ್ಲ. ನಾನು ನನ್ನ ಕೋಣೆಗೆ ಹೋಗಿ ಕಿಟಕಿಯಿಂದ ಅಲೆಗಳ ಏರಿಳಿತವನ್ನು ನೋಡುತ್ತಾ ರಮ್ಮನ್ನು ಹೀರತೊಡಗಿದೆ. ಹಾಗೆಯೇ ನಾನು ನಿದ್ರೆಗೆ ಜಾರಿರಬೇಕು! ಹಠಾತ್ತಾಗಿ ನನಗೆ ಎಚ್ಚರವಾದಗ ಕಾರ್ನಿಶನ ಮೆಂಪು ಮೂತಿ ನನ್ನ ಮೂಗಿನ ತುದಿಗೇ ತಾಕುತ್ತಿರುವಂತೆ ಭಾಸವಾಯಿತು. ನಾನು ಪೂರ್ತಿ ಎಚ್ಚರಗೊಂಡಾಗ ನನ್ನನ್ನು ಒಂದು ದಪ್ಪ ಹಗ್ಗದಲ್ಲಿ ಕಟ್ಟಿ ಹಾಕಿರುವ ಅನುಭವವಾಯಿತು. ಮೈಯಲ್ಲಿ ಕೆಲವು ಕಡೆ ನೋವಾಗುತ್ತಿತ್ತು. ನನ್ನ ಪಿಸ್ತೂಲು ಅವನ ಕೈಯಲ್ಲಿತ್ತು.

“ನನ್ನನ್ನು ನೀವು ಸ್ಟೋರ್ ರೂಮಿಗೆ ಕಳುಹಿಸಿದ್ದೇ ತಪ್ಪಾಯಿತು ಮಿಸ್ಟರ್ ಗ್ರೇಬರ್ನ್! ಕಾಫಿಗೂ ನಾನು ಅಮಲನ್ನು ಬೆರೆಸಿದ್ದೆ! ನೀವು ಎರಡು ಬೀಗ ಜಡಿದಿದ್ದರಲ್ಲವೇ? ನೂರು ಅಡಿ ಹಗ್ಗದ ಸಹಾಯದಿಂದ ನಾನು ಕೆಳಗಿಳಿದು ಬರಬಲ್ಲೆನೆಂದು ನೀವು ಎಣಿಸಿರಲಿಲ್ಲ ಅಲ್ಲವೇ? ನಾನು ಚಿಡ್ಡೋಕನನ್ನು ಸಾಯಿಸುವುದು ಶತಃಸಿದ್ಧ ಎಂದು ಮೊದಲೇ ನಿಮಗೆ ಹೇಳಿದ್ದೆ.” ಅವನು ವ್ಯಂಗ್ಯದಿಂದ ಹೇಳಿದ.

“ಅವನನ್ನು ಸಾಯಿಸಿದೆಯಾ?” ನಾನು ದಿಗ್ಭ್ರಮೆಯಿಂದ ಕೇಳಿದೆ.
“ಇನ್ನೂ ಇಲ್ಲ. ನಾನು ಅಷ್ಟು ಕ್ರೂರಿಯಲ್ಲ ಮಿಸ್ಟರ್ ಗ್ರೇ ಬರ್ನ್! ಅವನಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಹೇರಳ ಕಾಲಾವಕಾಶ ಕೊಟ್ಟಿದ್ದೇನೆ. ಅವನು ಸಾಯುವ ದೃಶ್ಯವನ್ನು ನೀವು ಕಣ್ಣಾರೆ ನೋಡಲೇ ಬೇಕು! ಖಂಡಿತವಾಗಿಯೂ ಅದೊಂದು ಅಪೂರ್ವವಾದ ದೃಶ್ಯ.”

ಕುತ್ತಿಗೆ ಹಿಡಿದು ದಬ್ಬಿಕೊಂಡು ಹೋಗುವಂತೆ ಅವನು ನನ್ನನ್ನು ಹೊರಗೆ ಎಳೆದುಕೊಂಡು ಬಂದ. ಮೆಟ್ಟಿಲುಗಳನ್ನು ಇಳಿದು ನಾವು ಕೆಳಗೆ ಬಂದೆವು. ಎಲ್ಲೆಡೆ ಬೆಳದಿಂಗಳು ಹರಡಿತ್ತು. ಸಮುದ್ರ ಶಾಂತವಾಗಿತ್ತು. ಇಂತಾ ಪ್ರಶಾಂತ ವಾತಾವರಣದೊಳಗೆ ಯಾರಲ್ಲೂ ಹಿಂಸಾ ಪ್ರವೃತ್ತಿ ಹುಟ್ಟುವ ಸಾಧ್ಯತೆಗಳೇ ಇರಲಿಲ್ಲ. ಆದರೆ.. ಕಾರ್ನಿಶ್? ಅವನು ಮನುಷ್ಯನಾಗಿ ಉಳಿದಿರಲಿಲ್ಲ. ಅವನ ಮೈಮೇಲೆ ರಾಕ್ಷಸ ಸವಾರಿ ಮಾಡುತ್ತಿದ್ದ.
“ಯಾರ ಬಗ್ಗೆಯೂ ಕಿಂಚಿತ್ತೂ ಕರುಣೆ ತೋರದ ಚಿಡ್ಡೋಕ್ ಈಗ ಪ್ರಾಣ ಭಿಕ್ಷೆಯನ್ನು ಬೇಡುತ್ತಿರುವ ದೃಶ್ಯವನ್ನು ನೀವು ನೋಡಲೇ ಬೇಕು ಮಿಸ್ಟರ್ ಗ್ರೇಬರ್ನ್!” ಎನ್ನುತ್ತಾ ಕಾರ್ನಿಶ್ ನನ್ನುನ್ನು ಎಳೆದುಕೊಂಡೇ ಮುಂದಕ್ಕೆ ಹೋದ. ದೀಪಗೃಹಕ್ಕೆ ಹೊಂದಿಕೊಂಡಂತೆ, ಒಂದು ದೊಡ್ಡ ಬೋಗುಣಿಯಲ್ಲಿದ್ದ ಬೆಣ್ಣೆ ಮುದ್ದೆಯಿಂದ ಒಂದು ಸೌಟು ಬೆಣ್ಣೆ ಬಗೆದು ತೆಗೆದಂತೆ ಒಂದು ಪ್ರಪಾತವಿತ್ತು. ಕಾರ್ನಿಶ್ ನನ್ನನ್ನು ಅಲ್ಲಿಗೆ ಎಳೆದುಕೊಂಡು ಹೋದ. ಕಾರ್ನಿಶನ ಬುದ್ಧಿವಂತಿಕೆಗೆ ಮೆಚ್ಚಲೇ ಬೇಕು. ಆ ಪ್ರಪಾತದೊಳಗೆ ಚಿಡ್ಡೋಕ್ ನೇತಾಡುತ್ತಿದ್ದ! ಆವನ ಸೊಂಟ ಮತ್ತು ಭುಜಗಳಿಗೆ ಹಗ್ಗ ಕಟ್ಟಿ ಇಳಿಸಲಾಗಿತ್ತು. ಜೀವಭಯದಿಂದ ಅವನು ಚೀರಾಡುತ್ತಿದ್ದ.
ಒಂದು ರಾಕ್ಷಸಗಾತ್ರದ ಅಲೆ ಬಂದು ಚಿಡ್ಡೋಕನನ್ನು ಸೊಂಟದವರೆಗೆ ತೋಯಿಸಿ ಹೋಯಿತು. ಹೀಗೆ ಅಲೆಗಳ ಹೊಡೆತವನ್ನು ಚಿಡ್ಡೋಕ್ ಎಲ್ಲಿಯವರೆಗೆ ಸಹಿಸಿಕೊಂಡು ಬದುಕಿರಬಲ್ಲ? ಅವನು ಸಾಯುವುದಂತೂ ಖಚಿತ. ಕಾರ್ನಿಶನ ಕ್ರೌರ್ಯವನ್ನು ಕಂಡು ನನಗೆ ಸಿಟ್ಟು ನೆತ್ತಿಗೇರಿತು.. ನನ್ನನ್ನು ಕಟ್ಟಿ ಹಾಕಿದ್ದರಿಂದ ನಾನು ಏನೂ ಮಾಡುವಂತಿರಲಿಲ್ಲ.

‘ನೀನೊಬ್ಬ ರಾಕ್ಷಸ ಕಾರ್ನಿಶ್!” ನಾನು ಚೀರಿದೆ.
ಅವನು ಪಿಸ್ತೂಲನ್ನು ನನ್ನ ಹಣೆಗೆ ಚುಚ್ಚುತ್ತಾ, “ಮಿಸ್ಟರ್ ಗ್ರೇಬರ್ನ್, ನೀವು ಬದುಕಿ ನನಗೇನೂ ಆಗಬೇಕಿಲ್ಲ.. ಆದರೆ, ಒಂದು ವಿಷ್ಯ ತಿಳಿದುಕೊಳ್ಳಿ. ನಾನು ಕೊಲೆಗಾರನಲ್ಲ. ಅವನು ಮಾಡಿದ್ದ ತಪ್ಪಿಗೆ ಶಿಕ್ಷೆ ವಿಧಿಸುತ್ತಿದ್ದೇನೆ ಅಷ್ಟೇ! ಈಗ ನೋಡಿ ಹೇಗೆ ಕುಂಯ್ ಗುಡುತ್ತಿದ್ದಾನೆ! ನಾಯಿಗಿಂತ ಕಡೆ! ಥೂ ಇವನ ಜನ್ಮಕ್ಕೆ!!”
ನನ್ನನ್ನು ನೋಡುತ್ತಿದ್ದಂತೆ ಚಿಡ್ಡೋಕನ ಅಕ್ರಂದನ ಮುಗಿಲು ಮುಟ್ಟಿತು. ನಂತರ ಅವಾಚ್ಯ ಬೈಗುಳಗಳ ಸುರಿಮಳೆ. ಕಾರ್ನಿಶ್ ದೆವ್ವ ಹಿಡಿದವನಂತೆ ಗಹಗಹಿಸಿ ನಗತೊಡಗಿದ.

ಪ್ರಪಾತದೊಳಗೆ ಸಮುದ್ರದ ನೀರು ಏರುತ್ತಲೇ ಇತ್ತು. ಈಗ ಚಿಡ್ಡೋಕನ ತಲೆ ಮಾತ್ರ ಮೇಲಕ್ಕೆ ಕಾಣಿಸುತ್ತಿತ್ತು. ಸಮುದ್ರ ಉಬ್ಬರಿಸಿದಾಗ ನೀರು ಎಷ್ಟು ಎತ್ತರಕ್ಕೇರುತ್ತದೆಂಬ ಅರಿವು ನನಗಿತ್ತು. ಇನ್ನು ಐದು ನಿಮಿಷಗಳೊಳಗೆ ಚಿಡ್ಡೋಕ್ ನೀರು ಪಾಲಾಗುವುದರಲ್ಲಿ ಯಾವುದೇ ಅನುಮಾನಗಳಿರಲಿಲ್ಲ. ಇದು ಕಾರ್ನಿಶನಿಗೂ ಗೊತ್ತಿತ್ತು. ಅವನ ನಗು ಹೆಚ್ಚಾಗುತ್ತಿದ್ದಂತೆಯೇ ನನ್ನ ರಕ್ತ ತಣ್ಣಗಾಗತೊಡಗಿತು.

“ಇನ್ನೇನು ಚಿಡ್ಡೋಕನ ಕತೆ ಮುಗಿದಂತೆಯೇ! ಅವನಿಗೆ ಅಂತಿಮ ವಿದಾಯವನ್ನು ಹೇಳಿ ಬರುತ್ತೇನೆ.” ಎಂದು ಕಾರ್ನಿಶ್ ಅವನನ್ನು ನೇತು ಬಿಟ್ಟಿದ್ದ ಜಾಗದೆಡೆಗೆ ಹೆಜ್ಜೆ ಹಾಕಿ ಚಿಡ್ಡೋಕನಿಗೆ ಕಿಚಾಯಿಸಲು ಹಗ್ಗವನ್ನು ಜಗ್ಗತೊಡಗಿದ. ಸುರುಳಿ ಬಿದ್ದಿದ್ದ ಹೆಚ್ಚುವರಿ ಹಗ್ಗ ಹಾವಿನಂತೆ ಏಳುಬೀಳುತ್ತಾ ಅವನ ಕಾಲಿಗೆ ಸುತ್ತಿಕೊಂಡು ಕಾರ್ನಿಶ್ ಆಯ ತಪ್ಪಿ ಪ್ರಪಾತದೊಳಗೆ ಬಿದ್ದು ಬಿಟ್ಟ! ನಾನು ಬಿಟ್ಟ ಕಂಗಳಿಂದ ನೋಡುನೋಡುತ್ತಿದ್ದಂತೆಯೇ ಕಾರ್ನಿಶ್ ಒಂದು ಬಂಡೆಗೆ ಅಪ್ಪಳಿಸಿ ಏರುತ್ತಿದ್ದ ನೀರಿನೊಳಗೆ ಮರೆಯಾದ. ಮತ್ತೆ ಕಾಣಿಸಲೇ ಇಲ್ಲ.

ಚಿಡ್ಡೋಕನ ಅಂತಿಮ ಅಕ್ರಂದನ ನನ್ನ ಕಿವಿಗೆ ತಾಕುತ್ತಲೇ ನಾನೂ ಪ್ರಜ್ಞೆ ತಪ್ಪಿ ಬಿದ್ದೆ.
ನನಗೆ ಎಚ್ಚರವಾದಾಗ ಸೂರ್ಯನ ಪ್ರಖರ ಬಿಸಿಲು ಬಂಡೆಗಳ ಮೇಲೆ ರಾಚುತ್ತಿತ್ತು. ನಾನು ತೆವಳಿಕೊಂಡೇ ಮುಂದಕ್ಕೆ ಹೋದೆ. ಈಗ ಸಮುದ್ರದ ನೀರು ಇಳಿದಿತ್ತು. ಚಿಡ್ಡೋಕ್ ಸತ್ತು ಹೋಗಿದ್ದ. ಅವನ ನಿರ್ಜೀವ ದೇಹ ಗಾಳಿಗೆ ತೂಗಾಡುತ್ತಿತ್ತು. ತಲೆ ಭುಜದ ಮೇಲೆ ವಾಲಿಕೊಂಡಿತ್ತು.
ನಾನು ಏನೂ ಮಾಡದ ಅಸಹಾಯಕ ಸ್ಥಿತಿಯಲ್ಲಿದ್ದೆ. ಕಾರ್ನಿಶ್ ನನ್ನನ್ನು ಬಲವಾಗಿಯೇ ಕಟ್ಟಿದ್ದ. ಬಿರು ಬಿಸಿಲು, ಬಾಯಾರಿಕೆ, ಹಸಿವೆಯಿಂದ ನಾನು ಕಂಗೆಟ್ಟು ನಾನು ಹುಚ್ಚನಂತಾಗಿದ್ದೆ.

ಹಿಂದಿನ ರಾತ್ರಿ ‘ಶಿವರಿಂಗ್ ಸ್ಯಾಂಡ್ಸ್’ ನ ಗೋಪುರದಲ್ಲಿ ದೀಪ ಉರಿದಿರಲಿಲ್ಲ. ಯಾವತ್ತೂ ನಂದದ ದೀಪ ಆರಿರುವುದು ನೋಡಿ ಕಡಲ ತೀರದ ಜನರು ಕುತೂಹಲಗೊಂಡಿರಬೇಕು! ಆ ಕುತೂಹಲವೇ ನನ್ನನ್ನು ಬದುಕಿಸಿತು ಎನ್ನಬಹುದು.

ಮಧ್ಯ ರಾತ್ರಿಯಷ್ಟರಲ್ಲಿ ನೌಕದಳದ ಸ್ಪೀಡ್ ಬೋಟು ಶಿವರಿಂಗ್ ಸ್ಯಾಂಡ್ಸ್ ಗೆ ಬಂದಿತು.
ನಾನು, ಹಗ್ಗಕ್ಕೆ ನೇತಾಡುತ್ತಿದ್ದ ಚಿಡ್ಡೋಕ್ ಮತ್ತು ಒಂದು ಬಂಡೆಯನ್ನು ಕವುಚಿ ಹಿಡಿದುಕೊಂಡು ಸತ್ತುಬಿದ್ದಿದ್ದ ಕಾರ್ನಿಶ್ ಅವರನ್ನು ಎದುರುನೋಡುತ್ತಿದ್ದೆವು.

-ಜೆ.ವಿ.ಕಾರ್ಲೊ.


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *