ಹಾರರ್ / ಸಸ್ಪೆನ್ಸ್ ಚಿತ್ರಗಳು ಅಂದಾಕ್ಷಣ ಮೊದಲು ನೆನಪಿಗೆ ಬರುವ ಹೆಸರೇ ಅಲ್ಫ್ರೆಡ್ ಹಿಚ್ಕಾಕ್. ಸುಮಾರು ಐವತ್ತು ಚಿತ್ರಗಳನ್ನು ನಿರ್ದೇಶಿಸಿದ್ದಾರೆ ಇವರು. ಒಂದು ಚಿತ್ರಪ್ರಕಾರದೊಂದಿಗೆ ಒಬ್ಬ ನಿರ್ದೇಶಕ ಈ ಮಟ್ಟಿಗೆ ಗುರುತಿಸಿಕೊಳ್ಳುವುದು ತುಂಬಾನೇ ವಿರಳ. ಇಂಗ್ಲೆಂಡಿನಲ್ಲಿ ಇಪ್ಪತ್ತರ ದಶಕದಲ್ಲೇ ತಮ್ಮ ವೃತ್ತಿಜೀವನ ಆರಂಭಿಸಿದ ಹಿಚ್ಕಾಕ್, ಖ್ಯಾತಿಯ ಉತ್ತುಂಗಕ್ಕೆ ಏರಿದ್ದು ಮಾತ್ರ ಹಾಲಿವುಡ್ಡಿಗೆ ಬಂದ ಮೇಲೆ. ಅವರ ಅತ್ಯುತ್ತಮ ಚಿತ್ರಗಳು 1954ರಿಂದ 1960ರಲ್ಲಿ ಬಂದವು. ಡಯಲ್ ಎಂ ಫಾರ್ ಮರ್ಡರ್, ರೇರ್ ವಿಂಡೋ, ವರ್ಟಿಗೋ, ನಾರ್ತ್ ಬೈ ನಾರ್ತ್ ವೆಸ್ಟ್, ಸೈಕೋ ಒಂದಕ್ಕಿಂತ ಒಂದು ವಿಭಿನ್ನ ಹಾಗೂ ಶ್ರೇಷ್ಠ ಚಿತ್ರಗಳು. ಒಂದೇ ಚಿತ್ರಪ್ರಕಾರಕ್ಕೆ ಜೋತುಬಿದ್ದಿದ್ದರೂ, ಅಯ್ದುಕೊಳ್ಳುತ್ತಿದ್ದ ಕಥಾವಸ್ತುವಿನಿಂದ ಹಿಡಿದು, ಹಿನ್ನಲೆ ಸಂಗೀತ, ಕ್ಯಾಮೆರಾ ಆಂಗಲ್ಲುಗಳು, ಸಂಕಲನ ಮುಂತಾದುವುಗಳಲ್ಲಿ ಹೊಸ ಪ್ರಯೋಗಗಳನ್ನು ಮಾಡಿ, ನೋಡುಗರನ್ನು ಹೊಸಹೊಸ ಬಗೆಗಳಲ್ಲಿ ಬೆಚ್ಚಿಬೀಳಿಸುವಲ್ಲಿ ಹಿಚ್ಕಾಕ್ ಗೆದ್ದಿದ್ದರು!
1963ರಲ್ಲಿ ಬಿಡುಗಡೆಯಾದ “ದಿ ಬರ್ಡ್ಸ್” ಅವರ ಅತ್ಯುನ್ನತ ಚಿತ್ರಗಳ ಸಾಲಿನಲ್ಲಿ ನಿಲ್ಲದಿದ್ದರೂ, ಒಂದು ಬಹು ಮುಖ್ಯ ಚಿತ್ರ ಅಂತ ಪರಿಗಣಿಸಲ್ಪಡುತ್ತದೆ. ಬಹುಷಃ ಅವರ ಕಟ್ಟಕಡೆಯ ಉತ್ತಮ ಚಿತ್ರ ಇದು. ಹೆಸರೇ ಸೂಚಿಸುವಂತೆ ಇದು ಪಕ್ಷಿಗಳನ್ನು ಕಥಾವಸ್ತುವಾಗಿಟ್ಟುಕೊಂಡು ತೆಗೆದಿರುವ ಚಿತ್ರ.
ಚಿತ್ರ ಶುರುವಾಗುವುದೇ ಒಂದು ಬರ್ಡ್ ಶಾಪಿನಲ್ಲಿ. ತನ್ನ ತಂಗಿಯ ಹುಟ್ಟುಹಬ್ಬಕ್ಕೆಂದು ಲವ್ ಬರ್ಡ್ಸ್ ಕೊಂಡುಕೊಳ್ಳಲು ಹೋಗಿರುವ ಮಿಚ್ ಗೆ, ಖ್ಯಾತ ಸೊಶಿಯಲೈಟ್ ಮೆಲನಿ ಪರಿಚಯ ಆಗುತ್ತದೆ. ತನಗೆ ಬೇಕಿದ್ದ ಪಕ್ಷಿಗಳು ಸಿಗದ ಕಾರಣ ಮಿಚ್ ಹಾಗೇ ಹೊರಟುಹೋಗುತ್ತಾನೆ. ಮೆಲನಿ ಬೇರೊಂದು ಅಂಗಡಿಯಿಂದ ಲವ್ ಬರ್ಡುಗಳನ್ನು ಖರೀದಿಸಿ, ಅವನ ವಿಳಾಸ ಹೇಗೋ ಪತ್ತೆಹಚ್ಚಿ, ಅವನನ್ನು ಹಿಂಬಾಲಿಸಿಕೊಂಡು “ಬೊಡೆಗಾ ಬೇ” ಅನ್ನುವ ಒಂದು ಪುಟ್ಟ ಊರಿಗೆ ಹೋಗುತ್ತಾಳೆ.
ತನ್ನ ಅಮ್ಮ ಲಿಡಿಯ ಮತ್ತು ತಂಗಿ ಕ್ಯಾಥಿಯನ್ನು ನೋಡಲು ಬಂದಿರುವ ಮಿಚ್, ತನ್ನೂರಿನಲ್ಲಿ ಮೆಲನಿಯನ್ನು ಕಂಡು ಆಶ್ಚರ್ಯಗೊಳ್ಳುತ್ತಾನೆ, ನಿಧಾನವಾಗಿ ಇಬ್ಬರಿಗೂ ಸ್ನೇಹ ಉಂಟಾಗುತ್ತದೆ. ಮಿಚ್ ಅನ್ನು ಭೇಟಿ ಮಾಡಲು ಬರುತ್ತಿರುವಾಗ, ಪಕ್ಷಿಯೊಂದು ಬಡಿದು ಮೆಲನಿಗೆ ಸಣ್ಣ ಗಾಯ ಆಗುತ್ತದೆ. ಕ್ಯಾಥಿ ತನ್ನ ಹುಟ್ಟುಹಬ್ಬಕ್ಕೆ ಉಡುಗೊರೆ ತಂದ ಮೆಲನಿಯನ್ನು ತುಂಬಾ ಹಚ್ಚಿಕೊಳ್ಳುತ್ತಾಳೆ. ಆದರೆ ಮಿಚ್ ನ ಪೊಸೆಸೀವ್ ಅಮ್ಮ ಲಿಡಿಯ ಮೆಲನಿಯ ಆಗಮನವನ್ನು ಇಷ್ಟಪಡುವುದಿಲ್ಲ. ಆದರೂ ಮಿಚ್ ನ ಬಲವಂತಕ್ಕೆ ಒಂದೆರಡು ದಿನ ಆ ಊರಲ್ಲಿ ಉಳಿಯಲು ನಿರ್ಧರಿಸುವ ಮೆಲನಿ, ಅಲ್ಲಿನ ಸ್ಕೂಲ್ ಟೀಚರ್ ಆನೀ ಮನೆಯಲ್ಲಿ ಉಳಿದುಕೊಳ್ಳುತ್ತಾಳೆ. ಆನೀ ಒಂದು ಕಾಲದಲ್ಲಿ ಮಿಚ್ ನ ಪ್ರೇಯಸಿಯಾಗಿದ್ದವಳು. ಅದೇ ವೇಳೆಯಲ್ಲಿ ಪಕ್ಷಿಗಳು ಆ ಊರಿನ ಜನರ ಮೇಲೆ ದಾಳಿ ಮಾಡಲು ಶುರುಮಾಡುತ್ತವೆ. ಇಡೀ ಊರಿನಲ್ಲಿ ಭಯದ ವಾತಾವರಣ ಉಂಟಾಗುತ್ತದೆ.
ಪ್ರಕೃತಿ ಮನುಷ್ಯನ ಮೇಲೆ ತಿರುಗಿ ಬಿದ್ದರೆ ಏನಾಗಬಹುದು ಅನ್ನುವ ಚಿತ್ರಣವನ್ನು ಈ ಚಿತ್ರ ಕೊಡುತ್ತದೆ. ಚಿತ್ರದಲ್ಲಿನ ಒಬ್ಬ ಪಕ್ಷಿವಿಜ್ಞಾನಿ ಹೇಳುವಂತೆ – ಪಕ್ಷಿಗಳು ನಿರುಪದ್ರವಿ, ಅವು ಭೂಮಿಯ ಮೇಲೆ ಹದಿನಾಲ್ಕು ಕೋಟಿ ವರ್ಷಗಳಿಂದ ವಾಸವಾಗಿವೆ. ಮನುಷ್ಯನ ಮೇಲೆ ಅವಕ್ಕೆ ಕೋಪವಿದ್ದಿದ್ದರೆ ಇಷ್ಟು ವರ್ಷಗಳ ಕಾಲ ಸಹಿಸಿಕೊಳ್ಳುತ್ತಿರಲಿಲ್ಲ ಅಲ್ಲವೇ ಅನ್ನುವ ಪ್ರಶ್ನೆಯನ್ನು ಮುಂದಿಡುತ್ತಾಳೆ. ಪಕ್ಷಿಗಳು ನಮ್ಮ ಮೇಲೆ ಅಟ್ಯಾಕ್ ಮಾಡಿದರೆ, ಅವನ್ನು ಗುಂಡಿಟ್ಟು ಕೊಂದುಬಿಡೋಣ ಅಂತ ಒಬ್ಬ ಸಲಹೆ ಕೊಟ್ಟಾಗ, ನೂರು ಶತಕೋಟಿಗೂ ಹೆಚ್ಚು ಪಕ್ಷಿಗಳು ಭೂಮಿಯ ಮೇಲಿವೆ, ಎಷ್ಟನ್ನು ಕೊಲ್ಲುವಿರಿ ಅಂತ ಅವಳು ನಕ್ಕುಬಿಡುತ್ತಾಳೆ. ಮನುಷ್ಯ ಅತ್ಯಂತ ಬುದ್ಧಿವಂತ ಪ್ರಾಣಿಯಿರಬಹುದು, ಅವನ ಸಾಮರ್ಥ್ಯಕ್ಕೆ ಚಾಣಾಕ್ಷತೆಗೆ ಯಾರೂ ಸರಿಸಾಟಿಯಿಲ್ಲ ಅಂತ ಅವನು ನಂಬಿರಬಹುದು. ಆದರೆ ಪ್ರಕೃತಿಯ ಒಂದು ಸಣ್ಣ ಹೊಡೆತ ಅವನ ಮಿತಿಯನ್ನು ಅವನಿಗೆ ಸ್ಪಷ್ಟವಾಗಿ ಮನದಟ್ಟು ಮಾಡಿಕೊಡುತ್ತದೆ.
ಚಿತ್ರಕ್ಕೆ ಇನ್ನೊಂದು ಆಯಾಮ ದೊರಕುವುದು “ಪಕ್ಷಿ” ಹೆಣ್ಣಿನ ರೂಪಕ ಅಂತ ಪರಿಗಣಿಸಿದಾಗ. “ಸೈಕೋ” ಚಿತ್ರದಲ್ಲೂ ನೀವು ಗಮನಿಸಿರಬಹುದು, ಪಕ್ಷಿಗಳನ್ನು “ಸ್ಟಫ್” ಮಾಡುವ ಹವ್ಯಾಸವುಳ್ಳ ಬೇಟ್ಸ್ “ನನ್ನ ಅಮ್ಮನಿಂದ ಯಾರಿಗೂ ತೊಂದರೆಯಿಲ್ಲ, ಆಕೆ ನಿರುಪದ್ರವಿ, ಈ ಪಕ್ಷಿಗಳಂತೆ” ಅಂತ ಹೇಳಿರುತ್ತಾನೆ. “ದಿ ಬರ್ಡ್ಸ್” ಚಿತ್ರದಲ್ಲಿ ಮಿಚ್ ಒಬ್ಬನೇ ಗಂಡು ಪಾತ್ರಧಾರಿ. ಅವನನ್ನು ಆರಾಧಿಸುವ ತಂಗಿ, ಅವನ ಪೊಸೆಸೀವ್ ಅಮ್ಮ, ಅವನನ್ನು ಇನ್ನೂ ಪ್ರೀತಿಸುತ್ತಿರುವ ಹಳೆಯ ಪ್ರೇಯಸಿ, ಅವನೆಡೆಗೆ ಆಕರ್ಷಿತಳಾಗಿರುವ ಹೊಸ ಗೆಳತಿ ಹೀಗೆ ಹೆಂಗಸರಿಂದಲೇ ಸುತ್ತುವರಿದಿದೆ ಅವನ ಪಾತ್ರ. ಇಷ್ಟೆಲ್ಲಾ ಸಂಕೀರ್ಣತೆಗಳು ಇದ್ದರೂ ಅವನ ಜೀವನ ಸುಸೂತ್ರವಾಗೇ ಸಾಗಿದೆ. ಪ್ರಕೃತಿಯೆಡೆಗೆ ಮಾನವನ ಧೋರಣೆ ಹೇಗೆ “ಟೇಕನ್ ಫಾರ್ ಗ್ರಾಂಟೆಡ್” ಆಗಿದೆಯೋ, ಮಿಚ್ ಕೂಡ ತನ್ನ ಜೀವನದಲ್ಲಿರುವ ಹೆಂಗಸರೆಡೆಗೆ ಅಸಡ್ಡೆ ತೋರಿದ್ದನಾ ಅನ್ನುವ ಪ್ರಶ್ನೆ ಮೂಡಿ ಬರುತ್ತದೆ. ಅವನಿಗೆ ಸ್ಪೇಸ್ ಕೊಡದೇ, ಅವನನ್ನು ಒಂದು ಬಗೆಯಲ್ಲಿ ಉಸಿರುಗಟ್ಟಿಸುವ ಅಮ್ಮನ ಪಾತ್ರ ನೋಡಿದಾಗ, ಎಲ್ಲಾ ಹೆಂಗಸರೂ ತಿರುಗಿ ಬಿದ್ದರೆ, ಗಂಡಸರ ಪರಿಸ್ಥಿತಿ ಹೇಗಿರಬಹುದು ಅನ್ನುವ ಸಬ್ ಟೆಕ್ಸ್ಟ್ ಕೂಡ ಇದೆ ಅನಿಸುತ್ತದೆ!
“ದೃಶ್ಯವೈಭವ”ವೇ ಜೀವಾಳವಾಗಿರುವ ಇವತ್ತಿನ ಚಿತ್ರಗಳಿಗೆ ಹೋಲಿಸಿದರೆ “ದಿ ಬರ್ಡ್ಸ್” ಚಿತ್ರದ “ಗ್ರಾಫಿಕ್ಸ್” ತುಂಬಾ ಕಳಪೆ ಅನಿಸಿಬಿಡುತ್ತದೆ. ದಂಡುದಂಡಾಗಿ ಬರುವ ಪಕ್ಷಿಗಳ ಸ್ಪೆಷಲ್ ಎಫೆಕ್ಟ್, ಟೊಮೇಟೊ ಕೆಚಪ್ ನೆನಪಿಸುವ ರಕ್ತದ ಕಲೆಗಳು ಬಾಲಿಶ ಅನಿಸದಿರದು. ಆದರೆ ಅದೆಲ್ಲವನ್ನು ಮೀರಿ ಚಿತ್ರ ಹುಟ್ಟಿಸುವ ಭಯ ಇದೆಯಲ್ಲಾ, ಅದನ್ನು ಕೇವಲ ಇವತ್ತಿನ ತಾಂತ್ರಿಕ ಮುನ್ನಡೆ ಕೊಡಲಾಗದು. ಈಗಲೂ ಒಟ್ಟಿಗೆ ಕೂತಿರುವ ಒಂದಿಪ್ಪತ್ತು ಕಾಗೆಗಳನ್ನು ನೋಡಿದರೆ, ಹಿಚ್ಕಾಕ್ ನೆನಪಾಗುತ್ತಾನೆ, ಕಿವಿಯಲ್ಲಿ ಆ “ಕೀಚ್ ಕೀಚ್” ಅನ್ನುವ ಇಲೆಕ್ಟ್ರಾನಿಕ್ ಮ್ಯೂಸಿಕ್ ಗುಂಯ್ ಗುಟ್ಟುತ್ತದೆ!
*****
"ಈಗಲೂ ಒಟ್ಟಿಗೆ ಕೂತಿರುವ ಒಂದಿಪ್ಪತ್ತು ಕಾಗೆಗಳನ್ನು ನೋಡಿದರೆ, ಹಿಚ್ಕಾಕ್ ನೆನಪಾಗುತ್ತಾನೆ, ಕಿವಿಯಲ್ಲಿ ಆ “ಕೀಚ್ ಕೀಚ್” ಅನ್ನುವ ಇಲೆಕ್ಟ್ರಾನಿಕ್ ಮ್ಯೂಸಿಕ್ ಗುಂಯ್ ಗುಟ್ಟುತ್ತದೆ!"
+1
ರಾಘವನ್ ಅವರೇ ಆಲ್ಫ್ರೆಡ್ ಹಿಚ್ಕಾಕ್ ಬಗ್ಗೆ ಐ ಎಂ ಡಿ ಬಿ ನಲ್ಲಿ ಓದಿ ಅವರ ಸಿನಿಮಾ ಸರ್ಚ್ ಮಾಡಿ ಡೌನ್ಲೋಡ್ ಮಾಡಿ ನಾನು ನೋಡಿದ ಮೊದಲ ಸಿನ್ಮ ಇದೇ ..
ಕೆಲ ವರ್ಷಗಳ ಹಿಂದೆ ನಮ್ಮೂರಲ್ಲಿ ಕತ್ತಲೆಯಲ್ಲಿ ಪಾಳು ಬಿದ್ದ ಮನೆಯತ್ತ ಹೋದಾಗ ಬಾವಲಿಗಳ ಆಟೋಟ ಕಂಡು ಭಯ ಬಿದ್ದಿದ್ದೆ . ಆಮೇಲೆ ಬಾವಲಿಗಳ ಬಗೆಗಿನ ಆಂಗ್ಲ ಸಿನೆಮ ನೋಡಿದ್ದೆ ..
ಆದರೆ ೧೯೬೩ ರಲ್ಲಿ ಸೀಮಿತ ಲಭ್ಯತೆಗಳೊಂದಿಗೆ ಮನಮುಟ್ಟುವಂತೆ ತೆಗೆದ ಈ ಸಿನೆಮ ಕ್ಲಾಸಿಕ್ ನಿಜ /
ಈ ಪಕ್ಷಿಗಳ ರೀತಿಯದ್ದೇ ಧಾಳಿ ನಡೆವ ರೀತಿ ಸನ್ನಿವೇಶವನ್ನು ರೆಸಿಡೆಂಟ್ ಎವಿಲ್ ಚಿತ್ರದಲ್ಲಿ ಉಪಯೋಗಿಸಿರುವರು. .
ಸ್ಕೂಲಿನ ಮಕ್ಕಳು ಪಕ್ಷಿಗಳ ಧಾಳಿಗೆ ತುತ್ತಾಗುವ ಸನ್ನಿವೇಶ ಮನಕಲ್ಕಿತ್ತು ..
ಸಿನೆಮ ಸಂಬಂಧಿ ವಿಷ್ಯ ಬಂದಾಗ ಬಾರಿ ಹಿಚ್ಕಾಕ್ ಮತ್ತು ಅಕಿರಾ ಕುರಸೋವ ಹೆಸರು ಕೇಳಿ ಬರುವುದು ..
ವಿಭಿನ್ನ ವಿಶಿಸ್ತ ಕಥಾ ವಸ್ತುವಿನ ಸಿನೆಮಾಗಳನ್ನು ತೆಗೆದ ಹಿಚ್ಕಾಕ್ ಯಾವತ್ತೂ ಅಮರ ..
ಅವರ ಇನ್ನಸ್ಟು ಚಿತ್ರಗಳನ್ನು ನೋಡಲಿಕ್ಕಿದೆ ..
ಒಳ್ಳೆ ವಿಮರ್ಶೆ
ಶುಭವಾಗಲಿ
\। /
Alfred Hitchcock ನ ನೆಚ್ಚಿನ ರೋಚಕ ಕತೆಗಳು ಎಂಬ ಇಂಗ್ಲಿಷ್ ಕತಾ ಸಂಕಲನದಲ್ಲಿ ಇಂಗ್ಲಿಷ್ ಲೇಖಕಿ ಢ್ಯಾಫ್ನಿ ದು ಮುರಿಯೆ (Daphne Du Maurier) ಇವರ 'ದಿ ಬರ್ಡ್ಸ್' ನೀಳ್ಗತೆಯನ್ನು ಸುಮಾರು ಮುವ್ವತೈದು ವರ್ಷಗಳ ಹಿಂದೆ ಓದಿದ್ದೆ. ಮತ್ತೊಮ್ಮೆ ಓದುವ ಆಸೆಯಾಗಿ, ಅಂತರ್ಜಾಲದಲ್ಲಿ ಓದುವ ಅವಕಾಶ ಸಿಕ್ಕಿತು. ಸಿನೆಮಾ ನೋಡುವ ಅವಕಾಶ ಆಗಿಲ್ಲ. ನೀವು ಹೇಳುವ ಕತೆ ನೋಡಿದರೆ, ಸಿನೆಮಾಕ್ಕೂ ಮೂಲ ಕತೆಗೂ ಅಜಗಜಾಂತರ. Loosely adapted ೆ ಎಂಬ ವಿವರಣೆ ಸಿಕ್ಕಿತು.