ವಾಸುಕಿ ಕಾಲಂ

ದಿ ಡೈವಿಂಗ್ ಬೆಲ್ ಅಂಡ್ ದಿ ಬಟರ್-ಫ್ಲೈ: ವಾಸುಕಿ ರಾಘವನ್

“ದಿ ಡೈವಿಂಗ್ ಬೆಲ್ ಅಂಡ್ ದಿ ಬಟರ್-ಫ್ಲೈ” 2007ರಲ್ಲಿ ತೆರೆಕಂಡ ಫ್ರೆಂಚ್ ಚಿತ್ರ ನನಗೆ ತುಂಬಾ ಪ್ರಿಯವಾದ ಚಿತ್ರಗಳಲ್ಲಿ ಒಂದು. ಪರಾಲಿಸಿಸ್ ಇಂದ ಇಡೀ ದೇಹದ ಸ್ವಾಧೀನ ಕಳೆದುಕೊಳ್ಳುತ್ತಾನೆ ಜೀನ್ ಡೊಮಿನಿಕ್ ಬಾಬಿ; ತನ್ನ ಎಡಗಣ್ಣನ್ನು ಹೊರತುಪಡಿಸಿ. ಕೇವಲ ಕಣ್ಣು ಮಿಟುಕಿಸಿ ಒಂದು ಪುಸ್ತಕವನ್ನು ಬರೆಯುತ್ತಾನೆ. ಇದೇನಪ್ಪಾ ನಂಬಲಸಾಧ್ಯವಾದ ಕಥೆ ಅಂದ್ರಾ? ನಿಮಗೆ ಆಶ್ಚರ್ಯ ಆಗಬಹುದು, ಇದು ಎಲ್ ಮ್ಯಾಗಜಿನ್ ಎಡಿಟರ್ ಒಬ್ಬನ ನೈಜ ಕಥೆಯನ್ನು ಆಧರಿಸಿದ ಚಿತ್ರ!

ಚಿತ್ರ ಶುರು ಆಗುವುದು, ಮೂರು ವಾರದ ಕೋಮಾ ಇಂದ ನಾಯಕ ಎಚ್ಚರಗೊಳ್ಳುವುದರಿಂದ. ಮೊದಲ ನಲವತ್ತು ನಿಮಿಷ ನಿಮಗೆ ನಾಯಕನ ಮುಖವನ್ನೇ ತೋರಿಸುವುದಿಲ್ಲ, ಪ್ರತಿ ದೃಶ್ಯವೂ ಬಾಬಿಯ POV (ಪಾಯಿಂಟ್ ಆಫ್ ವ್ಯೂ) ಇಂದ ತೋರಿಸಲಾಗುತ್ತದೆ. ಒಂದು ಸಾಧಾರಣ ಸಿನಿಮಾ ಆಗಿದ್ದರೆ ನಾಯಕನ ವಿರೂಪಗೊಂಡ ಮುಖವನ್ನು ತೋರಿಸಿ, ಅವನು ಪಡುತ್ತಿರುವ ಕಷ್ಟಗಳ ಪರಿಚಯ ಮಾಡಿಸಿ, ಅನುಕಂಪ ಹುಟ್ಟಿಸುವ ಪ್ರಯತ್ನ ನಡೆಯುತ್ತಿತ್ತು. ಆದರೆ ತನ್ನ ಜಾಣ್ಮೆಯನ್ನು ಉಪಯೋಗಿಸಿರುವ ನಿರ್ದೇಶಕ ನಮ್ಮನ್ನು ಬಾಬಿಯ ಜಾಗದಲ್ಲಿ ಕೂರಿಸಿ ಕಥೆ ಹೇಳುತ್ತಾನೆ. ಕೋಮಾದಿಂದ ಎಚ್ಚರಗೊಂಡ ಬಾಬಿಗೆ ತಾನು ಆಸ್ಪತ್ರೆಯಲ್ಲಿ ಮಲಗಿದ್ದೇನೆ ಎಂದು ತಿಳಿಯುತ್ತದೆ. ಡಾಕ್ಟರ್, ನ್ಯೂರೋ ಸ್ಪೆಷಲಿಸ್ಟ್, ಸ್ಪೀಚ್ ಥೆರಪಿಸ್ಟ್ ಅವನನ್ನು ಬಂದು ನೋಡುತ್ತಾರೆ. ಅವನಿಗೆ ತುಂಬಾ ವಿರಳವಾದ ‘ಲಾಕ್ಡ್ ಇನ್ ಕಂಡೀಶನ್’ ಆಗಿದೆ. ಇದು ವಾಸಿ ಆಗೋಲ್ಲ, ಆದಷ್ಟು ದಿನ ಅವನ ಜೀವವನ್ನು ಉಳಿಸುವ ಪ್ರಯತ್ನ ಅಷ್ಟೇ ಅಂತ ಮನವರಿಕೆ ಮಾಡಿಕೊಡುತ್ತಾರೆ. ಇನ್ಫೆಕ್ಷನ್ ಆಗುತ್ತೆ ಅಂತ ಅವನ ಬಲಗಣ್ಣನ್ನು ಹೊಲೆದುಬಿಡುತ್ತಾರೆ. ಅವನ ಮನದಾಳದ ಮಾತುಗಳು ನಮಗೆ ಕೇಳುತ್ತೆ ಆದರೆ ಹೊರಗಿನವರ ಪ್ರಕಾರ ಅವನು ಆಲ್ಮೋಸ್ಟ್ ಜೀವಂತ ಶವದಂತೆ. ಅವನೆಲ್ಲಾ ನೋವು, ಹತಾಶೆ, ಅಸಹಾಯಕತನ ಎಲ್ಲವನ್ನೂ ನಾವು ಅವನ ಜಾಗದಿಂದ ನೋಡುವ ಅನುಭವ ಆಗುತ್ತದೆ. ಬರೀ ಅಷ್ಟೇ ಅಲ್ಲ, ಅವನ ಸ್ಥೈರ್ಯ, ಆಶಾವಾದ, ಹಾಸ್ಯಪ್ರಜ್ಞೆಯ ಪರಿಚಯ ಕೂಡ ಆಗುತ್ತೆ. ನಾಯಕನ ಮುಖ ನೋಡುವುದಕ್ಕೂ ಮುಂಚೆಯೇ ನಿಮಗೆ ಅವನು ಅಷ್ಟು ಹತ್ತಿರದವನಾಗಿಬಿಟ್ಟಿರುತ್ತಾನೆ.

ಇಷ್ಟೊಂದು ಸೀರಿಯಸ್ ಕಥೆ ಆದರೂ ಎಲ್ಲೂ ಮೆಲೋಡ್ರಾಮಾ ಆಗೋದಿಲ್ಲ. ತನ್ನ ಪರಿಸ್ಥಿತಿ ಗೊತ್ತಾದಾಗಲೂ ಬಾಬಿ ತನ್ನನ್ನು ಚಿಯರ್ ಅಪ್ ಮಾಡುತ್ತಿರುವ ಡಾಕ್ಟರ್ ಬಗ್ಗೆ ಮನಸ್ಸಿನಲ್ಲೇ ತಮಾಷೆ ಮಾಡುತ್ತಾನೆ, ವೈದ್ಯೆಯರನ್ನು ಕಂಡು ಮೋಹಗೊಳ್ಳುತ್ತಾನೆ. ತನ್ನ ನೋವನ್ನೆಲ್ಲಾ ಮೀರಿ ಒಂದು ನಿರ್ಧಾರಕ್ಕೆ ಬರುತ್ತಾನೆ – “ನಾನು ನನ್ನ ಬಗ್ಗೆಯೇ ಮರುಕ ಪಡುವುದಿಲ್ಲ. ಪರಾಲಿಸಿಸ್ ಆಗದೆ ಉಳಿದಿರುವುದು ಕೇವಲ ನನ್ನ ಎಡಗಣ್ಣು ಮಾತ್ರ ಅಲ್ಲ – ನನ್ನ ನೆನಪುಗಳ ಖಜಾನೆ ಮತ್ತು ನನ್ನ ಕಲ್ಪನಾಲೋಕ ಕೂಡ ಜೀವಂತವಾಗಿವೆ”.

ಬಾಬಿಯ ಸ್ಪೀಚ್ ಥೆರಪಿಸ್ಟ್ ಹೆನ್ರಿಯೆಟ್ “ಪಾರ್ಟ್ನರ್ ಅಸ್ಸಿಸ್ಟೆಡ್ ಸ್ಕ್ಯಾನಿಂಗ್” ಟೆಕ್ನಿಕ್ ಇಂದ ಇವನನ್ನು ಸಂಭಾಷಿಸಲು ಸಶಕ್ತಗೊಳಿಸುತ್ತಾಳೆ. ಮೊದಲಿಗೆ ಬರೀ ಹೌದು/ಇಲ್ಲ ಥರದ ಪ್ರಶ್ನೆಗಳು. ಒಂದು ಸಲ ಕಣ್ಣು ಮಿಟುಕಿಸಿದರೆ ಹೂ ಅಂತ, ಎರಡು ಸಲಕ್ಕೆ ಇಲ್ಲ ಅಂತ. ಮುಂದಿನ ಹಂತದಲ್ಲಿ ಬಾಬಿ ಮನಸ್ಸಿನಲ್ಲಿ ಒಂದು ಪದವನ್ನು ಇಟ್ಟುಕೊಳ್ಳುತ್ತಾನೆ. ಹೆನ್ರಿಯೆಟ್ ಒಂದೊಂದು ಅಕ್ಷರವಾಗಿ ಹೇಳುತ್ತಾ ಹೋಗುತ್ತಾಳೆ, ಅವನು ಯಾವ ಅಕ್ಷರ ಬಂದಾಗ ಕಣ್ಣು ಮಿಟುಕಿಸುತ್ತಾನೋ ಅದನ್ನು ಬರೆದುಕೊಳ್ಳುವುದು.. ಮೊದಮೊದಲಿಗೆ ಇದು ತುಂಬಾ ಕಷ್ಟಕರ ಅನ್ನಿಸುತ್ತೆ. ಅಕ್ಷರಗಳನ್ನು ತುಂಬಾ ನಿಧಾನವಾಗಿ ಹೇಳಿದರೆ ತನ್ನ ಅಕ್ಷರ ಬರುವವರೆಗೂ ಕಣ್ಣು ಮಿಟುಕಿಸದೇ ಕಾಯುತ್ತಿರಬೇಕು, ತುಂಬಾ ವೇಗವಾಗಿ ಹೇಳಿದರೆ ಅವನು ಕಣ್ಣು ಮಿಟುಕಿಸಿದ್ದು ಈ ಅಕ್ಷರಕ್ಕೋ, ಹಿಂದಿನ ಅಕ್ಷರಕ್ಕೋ ಅಂತ ಗೊತ್ತಾಗಲ್ಲ. ಇದನ್ನು ಕೊಂಚ ಸರಳೀಕರಿಸಲು ಅಕ್ಷರಗಳನ್ನು ಅಲ್ಫಬೆಟಿಕ್ ಆರ್ಡರ್ ಬದಲು, E S A R I N…ಹೀಗೆ ಯಾವ ಅಕ್ಷರ ಹೆಚ್ಚು ಬಳಕೆ ಆಗುತ್ತದೋ ಆ ಆರ್ಡರ್ ಅಲ್ಲಿ ಹೇಳಲು ಶುರು ಮಾಡುತ್ತಾಳೆ. ಹೀಗೆ ಅಕ್ಷರಕ್ಕೆ ಅಕ್ಷರ ಸೇರಿ ಪದ, ವಾಕ್ಯ, ಪ್ಯಾರ ಕಡೆಗೆ ತಾನು ಅಂದುಕೊಂಡಿದ್ದ ಇಡೀ ಪುಸ್ತಕವನ್ನು ಬರೆಯಿಸಿ ಮುಗಿಸುತ್ತಾನೆ.

ಈ ಒಂದು ಸನ್ನಿವೇಶವನ್ನು ನೆನೆಸಿಕೊಂಡರೆ ನಂಗೆ ಈಗಲೂ ಮೈ ಜುಮ್ಮೆನ್ನುತ್ತೆ. ಬಾಬಿ ಆಸ್ಪತ್ರೆಯಲ್ಲಿ ಇರುವಾಗ ಅವನ ಅಪ್ಪನ ಫೋನ್ ಕಾಲ್ ಬರುತ್ತೆ. ಅಪ್ಪನಿಗೆ ತುಂಬಾ ವಯಸ್ಸಾಗಿದೆ, ಅಪಾರ್ಟ್ ಮೆಂಟ್ ಇಂದ ಆಚೆ ಕೂಡ ಬರೋಕೆ ಆಗದಿರುವಷ್ಟು. ಜೊತೆಗೆ ಇತ್ತೀಚಿನಿಂದ ಮರೆವು ಕೂಡ. ಬಾಬಿ ಒಂದೊಂದೇ ಅಕ್ಷರವಾಗಿ ಮಾತಾಡುತ್ತಿದ್ದರೆ, ಅವನ ಅಪ್ಪನಿಗೆ ಮುಂದೇನು ಮಾತಾಡಬೇಕು ಎಂದುಕೊಂಡಿದ್ದು ಮರೆತೇ ಹೋಗುತ್ತಿರುತ್ತೆ. ನೀನು ಹೇಗೆ ದೇಹದ ಒಳಗೆ ಬಂಧಿತನಾಗಿದ್ದೀಯೋ ನಾನು ಹಾಗೆ ಈ ಮನೆಯ ಒಳಗೆ ಬಂಧಿತನಾಗಿದ್ದೀನಿ ಅನ್ನುತ್ತಾನೆ. ಅಪ್ಪನ ಪಾತ್ರದಲ್ಲಿ ಮ್ಯಾಕ್ಸ್ ವಾನ್ ಸಿಡವ್ ಎರಡೇ ಸೀನಲ್ಲಿ ಬರೋದು, ಆದರೆ ಅದೆಂಥಾ ಪವರ್ಫುಲ್ ಅಭಿನಯ!

ಇನ್ನೊಂದು ಮನಕಲಕುವ ಸನ್ನಿವೇಶ ಇದೆ. ಬಾಬಿಯನ್ನು ನೋಡಲು ಅವನ ಮೊದಲ ಪ್ರೇಯಸಿ (ಹಾಗು ಅವನ ಮಕ್ಕಳ ತಾಯಿ) ಸೆಲೀನ್ ಇರುವ ವೇಳೆಯಲ್ಲಿ ಅವನ ಹಾಲಿ ಪ್ರೇಯಸಿ ಜೋಸೆಫೀನ್ ಳ ಫೋನ್ ಕಾಲ್ ಬರುತ್ತೆ. ಬಾಬಿಯನ್ನು ನೋಡಲು ಒಮ್ಮೆಯೂ ಆಸ್ಪತ್ರೆಗೆ ಬರದೇ ಹೋದರೂ ಜೋಸೆಫೀನ್ ಕಂಡ್ರೆ ಬಾಬಿಗೆ ಅತೀವವಾದ ಪ್ರೀತಿ, ಅವಳ ಫೋನ್ ಕಾಲ್ ಅನ್ನು ಸೆಲೀನ್ ಇಷ್ಟ ಪಡೋದಿಲ್ಲ, ಆದರೂ ಅವರಿಬ್ಬರ ಸಂಭಾಷಣೆಗೆ ಇವಳೇ ಮಧ್ಯವರ್ತಿ ಆಗಬೇಕಾದ ಪರಿಸ್ಥಿತಿ. ಉಸಿರುಗಟ್ಟಿಸುವಷ್ಟು ಇಂಟೆನ್ಸ್ ಆಗಿದೆ ಈ ಸೀನ್.

ಮೇಲ್ನೋಟಕ್ಕೆ ಇದು ಕೇವಲ ಬಾಬಿಯ ಅಂಗವೈಕಲ್ಯದ ಕಥೆ ಅನ್ನಿಸಬಹುದು. ಆದರೆ ಇದು ಅದನ್ನು ಮೀರಿದ ಚಿತ್ರ. ಅಸಹಾಯಕ ಪರಿಸ್ಥಿತಿಯಲ್ಲಿ ಮನುಷ್ಯ ತನ್ನ ಜೀವನವನ್ನು ಅವಲೋಕಿಸುವ ರೀತಿ, ಅವನ ಪಶ್ಚಾತ್ತಾಪ, ಎಲ್ಲಾ ಸಂದಿಗ್ಧದ ನಡುವಿನ ಹೋರಾಟ, ಮನುಷ್ಯನ ಏಲಿಯನೇಶನ್, ನಮ್ಮ ಒಳಗಿನ ದನಿ ಬೇರೆಯವರಿಗೆ ಕೇಳಿಸದಿರುವುದು – ಹೀಗೆ ಹತ್ತು ಹಲವು ಥೀಮ್ ಇರುವ ‘ಮಲ್ಟಿ ಲೇಯರ್ಡ್’ ಚಿತ್ರ ಇದು. ಮನುಷ್ಯ ಎಂಥಾ ವಿಚಿತ್ರ ಪ್ರಾಣಿ ನೋಡಿ. ಜೀವನದಲ್ಲಿ ಎಲ್ಲಾ ಸುಖಸೌಲಭ್ಯಗಳು ಇದ್ದರೂ ಏನಾದರೂ ಒಂದು ಗೋಳಾಡುತ್ತಾನೆ. ಅದೇ ಎಷ್ಟೇ ಕಷ್ಟಗಳು ಬಂದರೂ ಅವುಗಳನ್ನು ಎದುರಿಸಿ ಹೋರಾಡಿ ಗೆಲ್ಲುತ್ತಾನೆ. ಆಳಕ್ಕೆ ಎಳೆದೊಯ್ಯುತ್ತಿರುವ ಡೈವಿಂಗ್ ಬೆಲ್ ಒಂದೆಡೆ, ಮುಗಿಲೆತ್ತರದಲ್ಲಿ ಹಾರಾಡಲು ಬಯಸುವ ಮನದ ಚಿಟ್ಟೆ ಇನ್ನೊಂದೆಡೆ, ಇವೆರಡರ ನಡುವೆ ನಡೆಯಲೇ ಬೇಕಲ್ವಾ ಬದುಕಿನ ಈಜಾಟ?

-ವಾಸುಕಿ ರಾಘವನ್

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ದಿ ಡೈವಿಂಗ್ ಬೆಲ್ ಅಂಡ್ ದಿ ಬಟರ್-ಫ್ಲೈ: ವಾಸುಕಿ ರಾಘವನ್

  1. ಬದುಕುಳಿಯುವ ಮನುಜನ ಜೀವನೋತ್ಸಾಹ, ಮನಸ್ಸು ಸಾಯಗೊಡದಂತೆ ಕಾಯ್ದುಕೊಳ್ಳುವ ಆತ್ಮ ವಿಶ್ವಾಸ… ಅನುಕಂಪ ಪ್ರೀತಿ ಸ್ಪೂರ್ತಿ ಎಲ್ಲವನ್ನೂ ಒಳಗೊಳ್ಳುವ ಕಥಾನಕದ ಪರಿಚಯ ಇಷ್ಟವಾಯಿತು.

  2. “ನಾನು ನನ್ನ ಬಗ್ಗೆಯೇ ಮರುಕ ಪಡುವುದಿಲ್ಲ. ಪರಾಲಿಸಿಸ್ ಆಗದೆ ಉಳಿದಿರುವುದು ಕೇವಲ ನನ್ನ ಎಡಗಣ್ಣು ಮಾತ್ರ ಅಲ್ಲ – ನನ್ನ ನೆನಪುಗಳ ಖಜಾನೆ ಮತ್ತು ನನ್ನ ಕಲ್ಪನಾಲೋಕ ಕೂಡ ಜೀವಂತವಾಗಿವೆ”.
    ಈ ಸಾಲುಗಳಿಗಾಗಿಯಾದರೂ ಚಿತ್ರ ನೋಡಬೇಕೆನಿಸುತ್ತಿದೆ…ಚಂದದ ವಿವರಣೆ…ಇಷ್ಟವಾಯಿತು…

  3. ಅತ್ಯುತ್ತಮ ಚಿತ್ರ. ಆಕ್ಟಿ೦ಗ್ ಸೂಪರ್.  ಲೋಕ ಸಿನೆಮಾದ ರುಚಿ ಸಿಕ್ಕ ಮೊದಲ ದಿನಗಳಲ್ಲಿ ನೋಡಿದ್ದೆ. ಯುರೋಪಿಯನ್ ಚಿತ್ರಗಳು ಜೀವನಕ್ಕೆ ಹತ್ತಿರವಾಗಿರುತ್ತವೆ.  "ಮಾರ್ ಅದೆ೦ಟ್ರೋ" ಸ್ಪಾನಿಶ್ ಚಿತ್ರ ಕೂಡ ಮೆಡಿಕಲ್ ಕ೦ಡೀಷನ್ ಮೇಲಿನ ನಿಜ ಜೀವನಾಧರಿತ ಒಳ್ಳೆಯ ಚಿತ್ರ. ನೋಡಿಲ್ಲವಾದರೆ ನೋಡಿ

Leave a Reply

Your email address will not be published. Required fields are marked *