ಆಗ ತಾನೇ ಹೈಸ್ಕೂಲು ಮೆಟ್ಟಿಲೇರಿದ್ದ ನಿರೋಷಾಗೆ ತನ್ನ ದೇಹದಲ್ಲಾಗುತ್ತಿದ್ದ ಬದಲಾವಣೆಗಳನ್ನು ಕಂಡು ತನ್ನೊಳಗೇ ತಾನು ಹೆಮ್ಮೆಪಡಲಾರಂಭಿಸಿದಳು. ಇತರ ಹೆಣ್ಮಕ್ಕಳಿಗಿಂತ ಭಿನ್ನವಾಗಿ ಆಲೋಚಿಸತೊಡಗಿದಳು. ಮುಗ್ದತೆ ತುಂಟತನ ಮಾಯವಾಗಿ ಗಂಭೀರ ಸ್ವಭಾವ ದಿನೇ ದಿನೇ ಹೆಚ್ಚಾಗತೊಡಗಿತು. ಅವಳ ಬದಲಾವಣೆಯನ್ನು ಗಮನಿಸಿದ ಅವಳ ತಾಯಿ ಸುಜಾತಳಿಗೂ ತನ್ನ ಮಗಳು ಬೆಳೆದು ದೊಡ್ಡವಳಾಗುತ್ತಿದ್ದಾಳೆ ಎಂಬ ಹೆಮ್ಮೆ ಒಂದು ಕಡೆಯಾದರೆ ಈಗಿನ ಸಮಾಜದಲ್ಲಿ ಬೆಳೆದ ಹೆಣ್ಣುಮಕ್ಕಳು ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ ಎನ್ನುವ ಆತಂಕವೂ ಅವಳನ್ನು ಕಾಡಿತ್ತು. ಚಿಕ್ಕವಯಸ್ಸಿಗೆ ಗಂಡನನ್ನು ಕಳೆದುಕೊಂಡು ಬದುಕುತಿದ್ದ ಒಂಟಿ ಜೀವ ಅದು. ಗಂಡಿನ ಆಸರೆಯಿಲ್ಲದ ಹೆಣ್ಣನ್ನು ಸಮಾಜ ನೋಡುವ ದೃಷ್ಟಿಯೇ ಬೇರೆ. ಬಡತನದಿಂದ ಹುಟ್ಟಿ ಬಂದಿದ್ದರೂ ಗುಣ ನಡತೆಗೇನೂ ಬಡತನವಿರಲಿಲ್ಲ. ಹೊಟ್ಟೆ ಪಾಡಿಗಾಗಿ ಮನೆಯಲ್ಲಿಯೇ ಹೊಲಿಗೆ ಯಂತ್ರವನ್ನಿಟ್ಟುಕೊಂಡು ಸುತ್ತಮುತ್ತಲಿನವರ ಬಟ್ಟೆ ಹೊಲಿಯುತ್ತಿದ್ದ ಸುಜಾತಳಿಗೆ ಇದ್ದ ಒಬ್ಬಳೇ ಮಗಳನ್ನು ಚೆನ್ನಾಗಿ ಓದಿಸಿ ಉನ್ನತ ಹುದ್ದೆಯಲ್ಲಿ ನೋಡಬೇಕೆನ್ನುವ ಹೆಬ್ಬಯಕೆ. ತನ್ನ ಗಂಡನಿದ್ದಾಗಲೂ ಎಷ್ಟೋ ಸಾರಿ ತನ್ನ ಮಗಳ ಭವಿಷ್ಯದ ಬಗ್ಗೆ ಅವನೊಂದಿಗೆ ಹೇಳಿಕೊಂಡಿದ್ದ ಮಾತುಗಳು ಈಗಲೂ ಸುಜಾತಳ ಮನಸಿಂದ ದೂರವಾಗಿರಲಿಲ್ಲ.
ಅತ್ತೆ ಮಾವ ಇಲ್ಲದ ಸುಜಾತಳಿಗೆ ಆಸರೆಯಾಗಿದ್ದಿದ್ದು ತನ್ನ ಗಂಡ ಹಾಗು ಅಮ್ಮ ಮಾತ್ರ. ಇರಲೊಂದು ಪುಟ್ಟ ಮನೆ ಬಿಟ್ಟರೆ ಬೇರೆ ಯಾವ ಆಸ್ತಿಯೂ ಇರಲಿಲ್ಲ. ಇದ್ದ ಒಂದೇ ಆಸ್ತಿಯೆಂದರೆ ಅದು ತನ್ನ ಮಗಳು ನಿರೋಷ. ಆಕಸ್ಮಿಕ ಅಪಘಾತವೊಂದರಲ್ಲಿ ಗಂಡ ಇಹಲೋಕ ತ್ಯಜಿಸಿದ್ದ. ವಯಸ್ಸಾದ ಅಮ್ಮನೂ ತೀರಿಕೊಂಡಾಗ ಸುಜಾತಳಿಗೆ ಬದುಕೇ ಬೇಡವೆನಿಸಿಬಿಟ್ಟಿತ್ತು. ಎಷ್ಟೋ ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯೂ ತಲೆಗೆ ಬಂದಿತ್ತು. ಆವಾಗೆಲ್ಲ ತನ್ನ ಮಗಳು ನಿರೋಷ ಕಣ್ಮಮುಂದೆ ಬರುತ್ತಿದ್ದಳು. ಏನೂ ಅರಿಯದ ಪುಟ್ಟ ಕಂದಮ್ಮನ ಮುಖ ನೋಡಿ ಏನೇ ಕಷ್ಟ ಬರಲಿ ಎದುರಿಸೋಣ ಎನ್ನುವ ಛಲ ಅವಳಲ್ಲಿ ಹೆಚ್ಚುತ್ತಿತ್ತು. ಅಷ್ಟೇನೂ ಓದಿಕೊಂಡಿರದ ಸುಜಾತ ಓದು, ಬರಹ, ಸರಳ ಲೆಕ್ಕಾಚಾರದ ಪಾಠಗಳನ್ನು ಕಲಿತಿದ್ದಳು. ತನ್ನಂತೆ ತನ್ನ ಮಗಳು ಅರ್ಧಕ್ಕೆ ಓದು ನಿಲ್ಲಿಸಬಾರದು, ಅವಳ ವಿದ್ಯಾಭ್ಯಾಸವೇ ತನ್ನ ಜೀವನದ ಗುರಿಯೆಂದು ತೀರ್ಮಾನಿದ್ದ ಸುಜಾತ ಮಗಳು ಬೆಳೆದು ದೊಡ್ಡವಳಾಗುತ್ತಿದ್ದು ಸಂಸಾರದ ಖರ್ಚುವೆಚ್ಚಗಳು ಹೆಚ್ಚಾಗುತ್ತಿದ್ದಂತೆ ತನ್ನ ದುಡಿಮೆ ಸಂಸಾರ ಸಾಗಿಸಲು ಸಾಲುತ್ತಿಲ್ಲವೆನಿಸಿದಾಗ, ದೂರದ ಊರಿನಲ್ಲಿದ್ದ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡಳು. ಗಂಡಸರ ವಕ್ರದೃಷ್ಟಿಯಿಂದ ಪಾರಾಗಲು ಬಿಚ್ಚಿಟ್ಟಿದ್ದ ತಾಳಿ ಹಾಗೂ ಕಾಲುಂಗುರಗಳನ್ನು ಮತ್ತೆ ತೊಟ್ಟುಕೊಂಡಳು. ಅಕ್ಕಪಕ್ಕದವರ ಮೂದಲಿಕೆ ಮಾತುಗಳಿಗೂ ತಲೆಕೆಡಿಸಿಕೊಳ್ಳದ ಸುಜಾತ ತನ್ನ ಮಾನ ಕಾಪಾಡಿಕೊಳ್ಳಲು ಕಂಡುಕೊಂಡ ಉಪಾಯವಿದು.
ಹೀಗೆ ನಿರೋಷಾಳು ತನ್ನ ಅಮ್ಮ ತನಗಾಗಿ ಪಡುತ್ತಿದ್ದ ಪರಿಪಾಟಲನ್ನು ಕಣ್ಣಾರೆ ಕಂಡು ತಾನು ದೊಡ್ಡವಳಾದ ಮೇಲೆ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಮಹದಾಸೆಯನ್ನು ಹೊತ್ತಿದ್ದಳು. ಇನ್ನೇನು ಈ ವರ್ಷ ಎಸ್.ಎಸ್.ಎಲ್.ಸಿ. ಮುಗಿಸಿ ಕಾಲೇಜಿಗೆ ಪಟ್ಟಣಕ್ಕೆ ಹೋಗಬೇಕಾದಾಗ ಸುಜಾತ ತಾನು ಕೆಲಸಕ್ಕೆ ಹೋಗುತ್ತಿದ್ದ ಪಟ್ಟಣದಲ್ಲಿರುವ ಕಾಲೇಜಿಗೆ ಸೇರಿಸಿ ಮನೆ ಬದಲಾಯಿಸಬೇಕೆಂದುಕೊಂಡಿದ್ದಳು. ಅಂದು ಸಂಜೆ ಎಂದಿನಂತೆ ಸುಜಾತ ಕೆಲಸದಿಂದ ಮನೆಗೆ ಬಂದಾಗ ನಿರೋಷ ಶಾಲೆಯಿಂದ ಬಂದವಳು ಯಾಕೋ ಸುಸ್ತಾದವಳಂತೆ ಹಾಸಿಗೆ ಮೇಲೆ ಮಲಗಿದ್ದಳು. ಸುಜಾತ ಬಂದಕೂಡಲೆ ಮನಸಿಲ್ಲದ ಮನಸಿನಿಂದ ಎದ್ದು ಕುಳಿತಳು. ಸುಜಾತ ಗಾಬರಿಯಿಂದ ‘ಏನಾಯ್ತು ನಿರೋಷ ಯಾಕೆ ಹೀಗೆ ಮಂಕಾಗಿ ಕುಳಿತಿದ್ದೀಯ?’ ಎಂದು ಕೇಳಿದಳು ನಿರೋಷ ‘ಏನಿಲ್ಲ ಬಿಡಮ್ಮ ಸ್ವಲ್ಪ ತಲೆನೋಯ್ತಿದೆ ಅಷ್ಟೆ’ ಅಂದಳು. ‘ಅಷ್ಟೇನಾ ಸರಿ ಕಾಫಿ ಕುಡಿ ತಲೆನೋವು ಕಡಿಮೆಯಾಗುತ್ತದೆ’ ಅಂತ ಲೋಟದಲ್ಲಿ ಕಾಫಿ ಹಿಡಿದು ಬಂದ ಸುಜಾತ ನಿರೋಷಳ ಪಕ್ಕದಲ್ಲಿ ಕುಳಿತು ತಾನೂ ಕಾಫಿ ಹೀರುತ್ತಾ, “ನಾನು ಎಷ್ಟೋಸಲ ಸಾಯಬೇಕೆಂದು ತೀರ್ಮಾನಿಸಿದಾಗ ನಿನ್ನ ಭವಿಷ್ಯವನ್ನು ನೆನೆದು ಏನೇ ಬರಲಿ ನಿನಗಾಗಿ ಬದುಕಬೇಕೆಂದು ಗಟ್ಟಿಮನಸು ಮಾಡಿ ಬದುಕುತಿರುವೆ. ನಮಗೆ ಬೇರೆ ಯಾರೂ ಇಲ್ಲ ನಿನಗೆ ನಾನು ನನಗೆ ನೀನು” ಹಾಗಾಗಿ ನಿನಗೇನೆ ಕಷ್ಟವಾದರೂ ನನ್ನ ಬಳಿ ಹೇಳಿಕೊ ಸಂಕೋಚ ಪಡಬೇಡ ಎಂದು ಧೈರ್ಯತುಂಬಿದಳು. ಏನೋ ಮುಚ್ಚಿಡ್ತಾ ಇದಾಳೆ ಅಂತ ಸುಜಾತಳಿಗೂ ಅನಿಸಿತ್ತು. ಆದರೆ ಆ ವಯಸ್ಸಿನ ಸೂಕ್ಷ್ಮ ಮನಸ್ಸನ್ನು ದಾಟಿ ಬಂದಿದ್ದ ಸುಜಾತ ಮಗಳ ಮನಸ್ಸನ್ನು ನೋಯಿಸದೆ ಅವಳ ಸ್ನೇಹಿತೆಯಾಗಿ ಅವಳ ಸಮಸ್ಯೆಯೇನೆಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಳು.
ಮಾರನೆ ದಿನವೂ ನಿರೋಷ ಯಥಾಪ್ರಕಾರ ಮನೆಗೆ ಬಂದವಳೆ ನಿರುತ್ಸಾಹಿಯಾಗಿ ಹಾಸಿಗೆ ಹಿಡಿದಿದ್ದಳು. ಇವತ್ತು ನನ್ನ ಮನಸಿನ ತಳಮಳವನ್ನು ಅಮ್ಮನ ಬಳಿ ಹೇಳಿಕೊಂಡು ಬಿಡಬೇಕೆಂದು ನಿರ್ಧರಿಸಿದ ನಿರೋಷ ಅಮ್ಮನ ಬರುವಿಕೆಗಾಗಿ ಕಾದು ಕುಳಿತಿದ್ದಳು. ಸುಜಾತ ಕೂಡ ಇಂದು ಏನಾದರಾಗಲಿ ನಿರೋಷಳ ನಿರುತ್ಸಾಹಕ್ಕೆ ಕಾರಣ ತಿಳಿಯಲೇಬೇಕೆಂದು ತೀರ್ಮಾನಿಸಿ ಸ್ವಲ್ಪ ಬೇಗನೇ ಮನೆಗೆ ಬಂದಳು. ಅಮ್ಮ ಬಂದಕೂಡಲೇ ನಿರೋಷ ಓಡೋಡಿ ಬಂದು ಅಮ್ಮನನ್ನು ತಬ್ಬಿ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದಳು. ಸುಜಾತಳಿಗೆ ಆಶ್ಚರ್ಯವಾಯಿತು ಮಗಳನ್ನು ಸಮಾಧಾನ ಪಡಿಸಿ “ಯಾಕಮ್ಮಾ ನಿರೋಷ ಏನಾಯ್ತು ನಿಂಗೆ ? ಯಾಕ್ ಅಳ್ತಿದಿಯಾ ? ಹೊಟ್ಟೆ ಏನಾದ್ರೂ ನೋಯ್ತಿದ್ಯಾ ? ಸ್ಕೂಲಲ್ಲಿ ಯಾರಾದ್ರು ಏನಾದ್ರು ಅಂದ್ರಾ ? ಹೀಗೆ ಪ್ರಶ್ನೆಗಳ ಸುರಿಮಳೆಗೈದಳು. ಆದರೂ ನಿರೋಷ ಮಾತ್ರ ಬಿಕ್ಕಿ ಅಳುವುದನ್ನು ನಿಲ್ಲಿಸಲಿಲ್ಲ. ಕೊನೆಗೆ ಸುಜಾತ ತನ್ನ ತೊಡೆಯ ಮೇಲೆ ನಿರೋಷಾಳನ್ನು ಮಲಗಿಸಿಕೊಂಡು ಸಮಾಧಾನ ಮಾಡುತ್ತಾ ಏನಾಯ್ತು ಹೇಳಮ್ಮಾ ಸುಮ್ನೆ ಅಳ್ತಿದ್ರೆ ನಂಗೇನ್ ಅರ್ಥ ಆಗುತ್ತೆ? ಧೈರ್ಯದಿಂದ ಹೇಳು ಅದೇನೆ ಸಮಸ್ಯೆ ಇರ್ಲಿ ನಾನು ಪರಿಹಾರ ಸೂಚಿಸ್ತೀನಿ ಅಂದಾಗ ಸಾವರಿಸಿಕೊಂಡ ನಿರೋಷ ಅಮ್ಮಾ ನಿನ್ನಿಂದ ಒಂದು ವಿಷಯ ಮುಚ್ಚಿಟ್ಟಿದ್ದೆ ಅದನ್ನ ಹೇಳಬೇಕು ಆಂತ ಎಷ್ಟೋ ಸಲ ಅಂದುಕೊಂಡ್ರು ಹೇಳೋಕೆ ಧೈರ್ಯ ಬರಲಿಲ್ಲ. ಈಗ ಹೇಳಬೇಕೆನಿಸಿದೆ ಎನ್ನುತ್ತಾ ನಮ್ಮ ಶಾಲೆಯ ದೈಹಿಕ ಶಿಕ್ಷಕ ಪ್ರಶಾಂತ್ ನನ್ನ ಪ್ರೀತಿಸ್ತಿದೀನಿ ಅಂತ ಒಂದು ವರ್ಷದಿಂದ ಪೀಡಿಸ್ತಾ ಇದಾನೆ ಅವನಿಗೆ ಈಗಾಗಲೇ ಮದುವೆಯಾಗಿ ಒಂದು ಮಗೂನು ಇದ್ಯಂತೆ. ನಾನು ಎಷ್ಟೇ ನಿರಾಕರಿಸಿದರೂ ನಾನು ನಿಮ್ಮ ಅಮ್ಮನನ್ನು ಒಪ್ಪಿಸುತ್ತೇನೆ ನಾವಿಬ್ಬರೂ ಮದುವೆಯಾಗೋಣ ಅಂತ ದಿನಾಲು ದುಂಬಾಲು ಬೀಳುತ್ತಾನೆ. ನನ್ನ ಸ್ನೇಹಿತರಿಗೂ ಹಿಂದೆ ಇದೇ ರೀತಿ ಮಾಡಿದ್ದನಂತೆ, ಹೆಡ್ ಮಾಸ್ಟರ್ ಗೆ ಹೇಳಿದರೆ ಅವರು ನಮ್ಮನ್ನೇ ಬೈಯುತ್ತಾರೆ ಹಾಗಾಗಿ ಈ ವಿಷಯವನ್ನು ನಿನಗೆ ಹೇಳಿದರೆ ಎಲ್ಲಿ ನನ್ನ ಶಾಲೆ ಬಿಡಿಸಿಬಿಡ್ತೀಯೋ ಅನ್ನೋ ಭಯದಿಂದ ಹೇಳಲು ಹಿಂಜರಿದೆ. ಈಗ ಪರೀಕ್ಷೆ ಹತ್ತಿರ ಇದೆ. ಅವನ ಕಾಟ ಹೆಚ್ಚಾಗ್ತಿದೆ ಏನು ಮಾಡಬೇಕೆಂದು ತಿಳಿಯದೆ ಮನಸ್ಸಿಗೆ ತುಂಬಾ ಬೇಸರವಾಗಿತ್ತು ಅದಕ್ಕೇ ಎರಡು ದಿನದಿಂದ ಸರಿಯಾಗಿ ಊಟ ನಿದ್ದೆ ಸೇರಲಿಲ್ಲ. ಈಗ ಇದಕ್ಕೊಂದು ಪರಿಹಾರ ನೀನೆ ಹೇಳಬೇಕು ನಾನು ಪರೀಕ್ಷೆ ಬರೆಯಲೇಬೇಕು. ಮುಂದೆ ಚೆನ್ನಾಗಿ ಓದಿ ದೊಡ್ಡ ಹುದ್ದೆಗೆ ಸೇರಬೇಕು ಪ್ಲೀಸ್ ನನ್ನ ಓದಿಗೆ ಅಡ್ಡಿ ಆಗದಂತೆ ಏನಾದ್ರೂ ಮಾಡು ಅಂತ ಮತ್ತೆ ಜೋರಾಗಿ ಅಳಲಾರಂಭಿಸಿದಳು. ಸುಜಾತ ಅವಳ ತಲೆಯನ್ನು ನೇವರಿಸುತ್ತಾ ಇಷ್ಟೆ ತಾನೆ ಇದನ್ನ ನಾನು ಪರಿಹರಿಸುತ್ತೇನೆ. ನೀನೇನೂ ಚಿಂತೆ ಮಾಡಬೇಡ ನಿನ್ನ ಓದಿನ ಕಡೆ ಗಮನ ಹರಿಸು ಅಂತ ಹೇಳಿ ಸಮಾಧಾನ ಪಡಿಸಿ, ಧೈರ್ಯ ತುಂಬಿದಳು, ಸುಜಾತಳಂತೆ ಎಲ್ಲ ಅಮ್ಮಂದಿರು ತಾಳ್ಮೆಯಿಂದ ಸಮಾಧಾನವಾಗಿ ತಮ್ಮ ಮಕ್ಕಳ ಸಮಸ್ಯೆಗಳನ್ನು ಆಲಿಸಿದರೆ ಎಳೆ ವಯಸಿನ ಅದೇಷ್ಟೋ ಮಕ್ಕಳ ಬದುಕು ಬಂಗಾರವಾಗುವುದು.
ಮಾರನೇ ದಿನ ಸುಜಾತ ಕೆಲಸಕ್ಕೆ ರಜಾಹಾಕಿ ಸೀದಾ ಮಗಳೊಂದಿಗೆ ಶಾಲೆಗೆ ಹೋಗಿ ಹೆಡ್ಮಾಸ್ಟರ್ ಹತ್ತಿರ ಕುಳಿತು ತನ್ನ ಮಗಳ ಸಮಸ್ಯೆಯನ್ನು ಹೇಳಿ ಆ ದೈಹಿಕ ಶಿಕ್ಷಕನಿಗೆ ತಕ್ಕ ಶಾಸ್ತಿ ಮಾಡಿಸಿ ಇಲ್ಲವಾದರೆ ನಾನೆ ಪೋಲೀಸ್ ಕಂಪ್ಲೇಂಟ್ ಕೊಟ್ಟು ಅವರ ಜೊತೆ ನಿಮಗೂ ತಕ್ಕ ಶಾಸ್ತಿ ಮಾಡಿಸುತ್ತೇನೆಂದು ಜೋರು ಮಾಡಿದಾಗ ತಬ್ಬಿಬ್ಬಾದ ಹೆಡ್ಮಾಸ್ಟರ್ ಸುಜಾತಳಿಗೆ ಕೈ ಮುಗಿದು ದಯಮಾಡಿ ಹಾಗೆಲ್ಲ ಪೋಲೀಸ್ ಕೇಸ್ ಅಂತ ಹೋಗಬೇಡಮ್ಮ ನಮ್ಮ ಶಾಲೆಯ ಮರ್ಯಾದೆ ಹೋಗುತ್ತದೆ ನಾನು ಆವನಿಗೆ ಬುದ್ಧಿ ಕಲಿಸುತ್ತೇನೆ. ಎಂದು ದೈಹಿಕ ಶಿಕ್ಷಕ ಪ್ರಶಾಂತ್ ನನ್ನು ಕರೆದು ಎಚ್ಚರಿಕೆ ನೀಡಿ ನಿರೋಷ ಹಾಗೂ ಸುಜಾತಳ ಬಳಿ ಕ್ಷಮೆ ಕೇಳುವಂತೆ ಹೇಳುತ್ತಾರೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಪ್ರಶಾಂತ್ ಇಬ್ಬರಿಗೂ ಕ್ಷಮೆ ಕೋರಿ ಇನ್ನು ಮುಂದೆ ಯಾವುದೇ ಹೆಣ್ಮಕ್ಕಳನ್ನು ಕೆಟ್ಟದೃಷ್ಟಿಯಿಂದ ನೋಡಲ್ಲ ಎಂದು ಭಾಷೆ ನೀಡುತ್ತಾನೆ. ಅಲ್ಲಿಗೆ ನಿರೋಷಳ ಮನಸು ನಿರಾಳವಾಗಿ ಓದಿನ ಕಡೆ ಹೆಚ್ಚು ಗಮನ ಹರಿಸುತ್ತಾಳೆ ಆ ವರ್ಷ ಇಡೀ ಶಾಲೆಗೆ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತೀ ತರುತ್ತಾಳೆ.
ಅಲ್ಲಿಂದ ಮುಂದೆ ಪಟ್ಟಣಕ್ಕೆ ಹೋದ ನಿರೋಷ ಕಾಲೇಜಿನಲ್ಲಿಯೂ ಮೊದಲಿಗಳಾಗಿ ಓದಿ ಮುಂದೆ ಐ.ಎ.ಎಸ್. ಪರೀಕ್ಷೆಯನ್ನು ಪಾಸು ಮಾಡಿ ಉನ್ನತ ಹುದ್ದೆಯನ್ನು ಪಡೆಯುತ್ತಾಳೆ. ಅಮ್ಮನ ಕಷ್ಟವನ್ನು ಪರಿಹರಿಸಬೇಕೆಂದು ಹಾಗೂ ಅಮ್ಮನಂತಹ ಅದೆಷ್ಟೋ ಹೆಣ್ಣುಮಕ್ಕಳಿಗೆ ಜೀವನಾಧಾರವಾಗಲೆಂದು ದೊಡ್ಡ ಗಾರ್ಮೆಂಟ್ ಫ್ಯಾಕ್ಟರಿಯೊಂದನ್ನು ಪ್ರಾರಂಭಿಸಿ, ನೂರಾರು ಮಹಿಳೆಯರಿಗೆ ಉದ್ಯೋಗ ಒದಗಿಸಿದ್ದಲ್ಲದೆ, ಅದರಿಂದ ಬರುವ ಲಾಭದ ಹಣವನ್ನು ಬಡತನದಲ್ಲಿ ಓದುವ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೀಸಲಿಟ್ಟು ಇಡೀ ಹೆಣ್ಣು ಕುಲವೇ ಹೆಮ್ಮೆ ಪಡುವಂತಾದಳು ನಿರೋಷ. ನಿರೋಷಳನ್ನು ಈ ಮಟ್ಟಕ್ಕೆ ಬೆಳೆಸಿದ ಸುಜಾತಳಂತ ತಾಯಂದಿರು ಎಲ್ಲರಿಗು ಸಿಗಲೆಂಬುದು ನಿರೋಷಾಳ ಬಯಕೆ.
–ದೇವರಾಜ್ ನಿಸರ್ಗತನಯ