ಇತ್ತೀಚೆಗೆ (26-08-2018) ಹುಬ್ಳಳ್ಳಿ-ಧಾರವಾಡ ನಗರಗಳನ್ನು ಸುತ್ತ-ಮುತ್ತ ಬೆಳೆದರೂ ತನ್ನ ಸೊಗಡನ್ನು ಕಳೆದುಕೊಳ್ಳದ ಸುತಗಟ್ಟಿ ಗ್ರಾಮದಲ್ಲಿ ಮಕ್ಕಳ ನಾಟಕವೊಂದನ್ನು ವೀಕ್ಷಿಸುವ ಭಾಗ್ಯ ಸಿಕ್ಕಿತ್ತು. ಆ ನಾಟಕದಲ್ಲಿ ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ ಎಂಬ ಮಾತಿನಂತೆ ಗ್ರಾಮೀಣ ಪ್ರದೇಶದ ಬಡ ಕುಟುಂಬದ ಹಿನ್ನಲೆಯ ಬಾಲಕಿಯೋರ್ವಳು ತನಗೆದುರಾಗುವ ಸಂಕಷ್ಟಗಳನ್ನು ಸಮಯೋಚಿತವಾಗಿ ಜಾಣ್ಮೆಯಿಂದ ಎದುರಿಸುವ ಕಥಾನಕದ ಕು.ಬಿಂದು ಮತ್ತಿಕಟ್ಟಿ ರಚನೆಯ ‘ಸಮಸ್ಯೆಗಳ ಮೆಟ್ಟಿ ನಿಂತ ಬಾಲಕಿ’ ನಾಟಕವನ್ನು ಹುಬ್ಬಳ್ಳಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುತಗಟ್ಟಿಯ ವಿದ್ಯಾರ್ಥಿ ಮಕ್ಕಳು ಶಾಲಾ ಆವರಣದ ರಂಗಮಂದಿರದಲ್ಲಿ ಪ್ರದರ್ಶನ ನೀಡಿದರು.
ಈ ಮಕ್ಕಳ ನಾಟಕ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರು ಮಕ್ಕಳ ರಂಗತರಬೇತಿ ಕಾರ್ಯಕ್ರಮದ ಭಾಗವಾಗಿ ‘ಚಿಣ್ಣರ ಚಿಲುಮೆ’ ಯೋಜನೆಯಡಿ ಧಾರವಾಡದ ಗಣಕರಂಗ ಸಂಸ್ಥೆಯ ಸಂಯಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿಜಯ ದೊಡಮನಿ ನಿರ್ದೇಶನ ಮಾಡಿದ್ದ ಈ ನಾಟಕಕ್ಕೆ ಹಿರಿಯ ರಂಗಸಂಗೀತಗಾರ ಮಹ್ಮದಶಫಿ ನೂಲಕರ ಮಕ್ಕಳಿಗಾಗಿ ವಿಶೇಷವಾದ ಸಂಗೀತ ನೀಡಿದ್ದರು. ಅವರಿಗೆ ತಬಲಾ ಸಾಥಿ ಕೃಷ್ಣ ಕೊಡಗು, ಹಿನ್ನಲೆ ಗಾಯಕಿಯರಾಗಿ ಮಧುರಾ ಹಿರೇಮಠ, ಸುನಂದಾ ನಿಂಬನಗೌಡರ ಸಹಕರಿಸಿದ್ದರು.
ಸಾಮಾನ್ಯವಾಗಿ ಕೊನೆಯತನಕ ತಮ್ಮೊಂದಿಗಿದ್ದು ಮುಪ್ಪಿನ ಕಾಲದಲ್ಲಿ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುವನೆಂಬ ಪೂವರ್Àನಿರ್ಧಾರಿತ ಮನೋಭಾವದ ಪಾಲಕರು ಗಂಡು ಮಗನಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾ, ದೊಡ್ಡವಳಾದ ನಂತರ ಮದುವೆಯಾಗಿ ಬೇರೊಂದು ಮನೆ ಸೇರುವ ಹೆಣ್ಣು ಮಗಳಿಗೆ ಯಾಕೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು ಮತ್ತು ಅವಳ ಹೆಚ್ಚಿನ ಕಲಿಕೆಯಿಂದ ನಮಗೇನು ಲಾಭ ಎಂಬ ಲೆಕ್ಕಾಚಾರದ ಬಡ ಕುಟುಂಬವೊಂದರ ಬಾಲಕಿಯು ಶಾಲೆಗೆ ಹೋಗುವುದೇ ದೊಡ್ಡ ಸಮಸ್ಯೆಯಾಗಿರುತ್ತದೆ. ಇಂಥಹ ಸಮಸ್ಯೆಗಳ ನಡುವೆಯು ಶಾಲೆಗೆ ಹೋಗುವ ಬಾಲಕಿಯು ಬಾಲಕರೊಂದಿಗೆ ಮಾತನಾಡಿದಳು ಎಂಬ ಕ್ಷುಲ್ಲಕ ಕಾರಣಕ್ಕೆ ಶಾಲೆ ಬಿಡಿಸಿ, ಮನೆಗೆಲಸ ಮಾಡಲು ಹೇಳುವ ಸಂಶಯದ ಪಾಲಕರು.
ಇದರ ನಡುವೆಯೂ ಓದಿನ ಕುರಿತಾದ ಉತ್ಸಾಹ ಕಳೆದುಕೊಳ್ಳದ ಬಾಲಕಿಯು ಮಕ್ಕಳು ಮತ್ತು ಮಹಿಳಾ ರಕ್ಷಣಾ ವೇದಿಕೆಯೆಂಬ ಸಂಸ್ಥೆಯೊಂದರ ಸಹಾಯದಿಂದ ಮನೆಯಲ್ಲಿ ಕುಳಿತು ಬಾಹ್ಯವಿದ್ಯಾರ್ಥಿಯಾಗಿ ಪದವಿ ಪಡೆದು, ಅದೇ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡು ಹೆಚ್ಚಿನ ಓದು ಮುಂದುವರೆಸುತ್ತಾಳೆ. ಕೊನೆಗೆ ಐಎಎಸ್ ಪರೀಕ್ಷೆ ಬರೆದು ಯಶಸ್ವಿಯಾಗಿ ಅದೇ ಜಿಲ್ಲೆಗೆ ಯುವಜಿಲ್ಲಾಧಿಕಾರಿಣಿಯಾಗಿ ಕರ್ತವ್ಯಕ್ಕೆ ಹಾಜರಾಗುವ ಸಂದರ್ಭದಲ್ಲಿ ತಮ್ಮ ಊರಿನ ಬಾಲಕಿ ಎಂದು ಕಚೇರಿ ಕೆಲಸವೊಂದಕ್ಕೆ ಬಂದಿದ್ದ ಬಾಲಕಿಯ ಊರಿನವರು ಗುರುತಿಸುತ್ತಾರೆ. ವಿಚಾರ ತಿಳಿದು ಅಲ್ಲಿಗೆ ಆಗಮಿಸುವ ತಂದೆ-ತಾಯಿಗಳು ಮಗಳ ಸಾಧನೆಗೆ ಸಂತಸಗೊಳ್ಳುವುದು ಒಂದೇಡೆಯಾದರೆ, ಮತ್ತೊಂದೆಡೆ ತಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುತ್ತಾರೆ. ಮಕ್ಕಳಲ್ಲಿ ಬೇಧಭಾವ ಮಾಡಬಾರದೆನ್ನುವ ಶಿಕ್ಷಣದ ಮಹತ್ವದ ಅರಿವಿನ ಸಂದೇಶದೊಂದಿಗೆ ನಾಟಕ ಮುಕ್ತಾಯವಾಗುತ್ತದೆ.
ನಾಟಕದ ಕಥೆಯ ವೇಗಕ್ಕೆ ದಕ್ಕೆಯಾಗದಂತೆ ಹಲವಾರು ಹಾಸ್ಯದ ಪ್ರಸಂಗಗಳು ಕ್ಲಾಸ್ ರೂಮಿನಲ್ಲಿ, ಆಟದ ಅಂಗಳದಲ್ಲಿ, ಗೆಳತಿಯರ ನಡುವೆ, ಊರಿನ ಹರಟೆಕಟ್ಟೆ, ಹಿರಿಯರ ಪೆದ್ದುತನದಂತಹ ದೃಶ್ಯಗಳಲ್ಲಿ ಮಕ್ಕಳು ಲೀಲಾಜಾಲವಾಗಿ ಅಭಿನಯಿಸಿ, ಪ್ರೇಕ್ಷಕರ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿಕೊಂಡರು. ಪ್ರಥಮ ಬಾರಿಗೆ ನಾಟಕದಲ್ಲಿ ಪಾತ್ರವಹಿಸಿದ ಮಕ್ಕಳು ದೃಶ್ಯ ಮುಗಿದಾಗ ಬಣ್ಣದ ದೀಪಗಳು ಆನ್-ಆಪ್ ಆಗುವಿಕೆ, ಸಂಭಾಷಣೆಗೆ ಹಿನ್ನಲೆಗೆ ಸಣ್ಣಗೆ ಸಂಗೀತ, ವೇಷಭೂಷಣಗಳ ಅಲಂಕಾರ, ಮೇಕಪ್ಪು ಮುಂತಾದ ಸಂಗತಿಗಳನ್ನು ಕೇಳಿ ತಿಳಿದುಕೊಳ್ಳುತ್ತಾ ಸಂಭ್ರಮಿಸಿದ ಮಕ್ಕಳು ನಾಟಕದ ಕೊನೆಯಲ್ಲಿ ಪರಿಚಯವನ್ನು ವಿಶಿಷ್ಟವಾಗಿ ಮಾಡಿಕೊಂಡಿದ್ದು ನಿರ್ದೇಶಕರ ಕ್ರೀಯಾಶೀಲತೆಗೆ ಸಾಕ್ಷಿಯಾಗಿತ್ತು. ಇಂಥಹ ನಾಟಕ ಪ್ರದರ್ಶನದ ಹಿನ್ನಲೆಯಲ್ಲಿ ಗಣಕರಂಗದ ಹಿಪ್ಪರಗಿ ಸಿದ್ಧರಾಮ ಅವರ ಕ್ರೀಯಾಶೀಲ ಸಂಘಟನೆ ಪೂರಕವಾಗಿತ್ತು. ಕಾನ್ವೆಂಟ್ ಸ್ಕೂಲಿನ ನಿರಂತರ ಕಟ್ಟುನಿಟ್ಟಿನ ಕ್ಲಾಸ್‍ರೂಂ ಮತ್ತು ಹೋಮ್‍ವರ್ಕಗಳ ಯಾಂತ್ರಿಕ ಒತ್ತಡಗಳ ನಡುವೆ ಸೃಜನಶೀಲತೆಯಿಂದ ವಂಚಿತರಾಗುವ ಮಕ್ಕಳಿಗೆ ಸರಕಾರಿ ಶಾಲೆಯ ಮಕ್ಕಳ ಈ ನಾಟಕ ಪ್ರದರ್ಶನವು ಅಂಕಗಳಿಗಾಗಿ ಮಾತ್ರ ಶಿಕ್ಷಣವಲ್ಲ, ಸಾಮಾಜಿಕ ಸಾಮರಸ್ಯೆ ಮತ್ತು ಜ್ಞಾನದೀವಿಗೆಯ ಭವಿಷ್ಯದ ಬದುಕಿನ ಬೆಳಕಿಗಾಗಿ ಎಂಬುದನ್ನು ತಮ್ಮ ಪ್ರದರ್ಶನದ ಮೂಲಕ ಸಾಬೀತು ಪಡಿಸಿದರು. ಇಂತಹ ಯೋಜನೆಗಳ ಸಮರ್ಥ ಅನುಷ್ಟಾನದ ಉಸ್ತುವಾರಿ ಹೊತ್ತಿರುವ ಮತ್ತು ಯುವಪೀಳಿಗೆಗೆ ಮಾರ್ಗದರ್ಶನದೊಂದಿಗೆ ಮಕ್ಕಳೊಂದಿಗೆ ಮಕ್ಕಳಂತಾಗುವ ಚಿಲಿಪಿಲಿಯ ಶಂಕರ ಹಲಗತ್ತಿಯಂಥಹ ಹಿರಿಯರು ಅಭಿನಂದನಾರ್ಹರು. ‘ಸಮಸ್ಯೆಗಳ ಮೆಟ್ಟಿ ನಿಂತ ಬಾಲಕಿ’ ನಾಟಕವು ಮಕ್ಕಳಿಂದ ಎಲ್ಲೆಡೆ ಹೆಚ್ಚು ಪ್ರದರ್ಶನ ಕಾಣಲಿ ಎಂಬುದು ನಮ್ಮ ಹಾರೈಕೆ.
-ಪ್ರೊ.ಅನ್ನಪೂರ್ಣ ತಳಕಲ್
ಉತ್ತಮ ಲೇಖನ, ಜೊತೆಗೆ ಮಕ್ಕಳ ನಾಟಕಗಳ ಕುರಿತು ಬರೆಯುವವರು ಬಹಳ ಅಪರೂಪ. ಅಪರೂಪದ ಲೇಖನ. ಧನ್ಯವಾದಗಳು ಮೆಡಮ್…
ಹಿಪ್ಪರಗಿ ಸಿದ್ಧರಾಮ, ರಂಗಕರ್ಮಿ, ಧಾರವಾಡ