ದಿಗಂಬರ ಸತ್ಯ (ಭಾಗ ೨): ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ

ಚಳಿಗಾಲ ಬಂದರೆ ಹೇಗೆ ಟೈಮ್ ಪಾಸು ಮಾಡೋದು ಅನ್ನುವ ಪ್ರಶ್ನೆಗೆ ಅಲ್ಲಿನ ಎನ್ನಾರೈ ಹೈಕ್ಳು ಕೆಲವು ವಿಧಾನಗಳನ್ನು ಹೇಳಿಕೊಟ್ಟರು. ಅವುಗಳಲ್ಲಿ ನನಗೆ ತುಂಬಾ ಇಷ್ಟವಾಗಿದ್ದು ಅಂದರೆ “spiritual” ದಾರಿ. ಅಯ್ಯೋ ಆಧ್ಯಾತ್ಮ, ದೇವರು, ಭಜನೆ ಅಲ್ಲಾ ರೀ… ನಾ ಹೇಳಿದ ‘ಸ್ಪಿರಿಟ್’ ಬೇರೆಯದು! ಭಾರತದಲ್ಲಿ ‘ಚಾ ಮಾಡ್ಲಾ’ ಅಂತ ಕೇಳಿದಂಗೆ ಅಲ್ಲಿನ ಗೆಳೆಯರ ಮನೆಗೆ ಹೋದಾಗ ‘ನಿಮಗೆ ಯಾವುದು ಅಡ್ಡಿ ಇಲ್ಲ? ಅಂತ ಸ್ಪಿರಿಟ್ ಗಳ ಹಲವಾರು ಬಗೆಗಳನ್ನು ತೋರಿಸಿ ಬಾಯಲ್ಲಿ ನೀರು ಹರಿಸಿ ದೇಹಕ್ಕೆ ಒಂದು ಎನರ್ಜಿ ತಂದುಕೊಡೋರು! ಎಲ್ಲಾರೂ ಖಂಡಿತ ಹಾಗಿರಲಿಲ್ಲ. ತುಂಬಾ non spiritual ಪ್ರಜೆಗಳು ಕೂಡ ಇದ್ದರು. ಅವರ ಜೊತೆ ಚಹಾನೇ ಕುಡಿಯುತ್ತಿದ್ದೆ. ಒಟ್ಟಿನಲ್ಲಿ ನನಗೆ ಮಾತು ಬೇಕು, ಅದು ಚಹಾದ ಜೊತೆಗೋ ವಿಸ್ಕಿ ಮತ್ತು ಚೂಡಾ ಜೊತೆಗೋ ಅಷ್ಟೊಂದು ಮುಖ್ಯ ಅನಿಸುತ್ತಿರಲಿಲ್ಲ. ಅದು ಅಲ್ಲದೆ ನಾನೇನು ಗಟಗಟ ಕುಡುಕ ಅಲ್ಲ ಸುಮ್ಮನೆ ಹಾಗೆ ಅವಾಗವಾಗ ಅನ್ನುವ ತರಹದವನು. ಅದರಲ್ಲಿಯೂ ಸಿಕ್ಕಾಪಟ್ಟೆ ಚಳಿ ಬೇರೆ; ಮದಿರೆ ಇಲ್ಲದಿದ್ರೆ ಜೀವಾನೇ ಹೋದೀತು ಅನ್ನುವ ನೆಪ ಬೇರೆ! ಅಪ್ಪು ಗೌಡಾ ಅಂತೂ ತನ್ನ ಮನೆಯಲ್ಲಿ ಒಂದು ಶೆಲ್ಫ್ ತುಂಬ ಇಟ್ಟಿರುತ್ತಿದ್ದ. ಬಗೆಬಗೆಯ ಸಿಂಗಲ್ ಮಾಲ್ಟ್ ಗಳು ಅವನ ಶೆಲ್ಫನ್ನು ಅಲಂಕರಿಸಿರುತ್ತಿದ್ದವು. ಆದರೆ ಅವನ ಅಪ್ಪ ಅಮೆರಿಕೆಗೆ ಬಂದಾಗಲೊಮ್ಮೆ ಆ ಶೆಲ್ಫ್ ಅನ್ನು ಬೇರೆ ರಹಸ್ಯ ಸ್ಥಳಕ್ಕೆ ಸಾಗಿಸಿ ಇಟ್ಟಿರುತ್ತಿದ್ದ. ತೀರ್ಥ ಸೇವನೆ ಕೆಲವೇ ಕೆಲವು ಮಿತ್ರರ ಜೊತೆಗೆ ಮಾತ್ರ ಇರುತ್ತಿತ್ತು. ಅದೂ ನನ್ನ ಹೆಂಡತಿ ಅನುಮತಿ ಕೊಟ್ಟರೆ. ಮೊದಮೊದಲು ಬೇಡ ಅನ್ನುತ್ತಿದ್ದವಳು ಆಮೇಲಾಮೇಲೆ ಹೂಂ ಅಂತ ಹೇಳುತ್ತಿದ್ದಳು. ಯಾಕಂದರೆ ವಾಪಸ್ಸು ಮನೆಗೆ ಹೋಗುವಾಗ ಕಾರ್ ಚಲಾಯಿಸುವ ಅವಕಾಶ ಸಿಗುತ್ತಿತ್ತಲ್ಲ! ಬೇರೆ ಹೊತ್ತಿನಲ್ಲಿ ನಿನಗಿನ್ನೂ ರೂಡಿಯಿಲ್ಲ ಅನ್ನುತ್ತಿದ್ದ ಗುಂಡಾಡಿ ಗಂಡ spiritual ಆದಾಗ ತನ್ನ ಕೈಗೆ ಸ್ಟೀರಿಂಗ್ ಕೊಟ್ಟೆ ಕೊಡುತ್ತಾನೆ ಎಂಬ ಅಚಲ ನಂಬಿಕೆ ಅವಳಿಗಿತ್ತು!

ಈ ತರಹದ ಪಾರ್ಟಿಗಳು ಯಾವಾಗಲೋ ಒಮ್ಮೆ ಇರುತ್ತಿದ್ದವು. ಉಳಿದ ಸಮಯ ಏನು ಮಾಡೋದು? ಮಗಳಿಗೆ ಇಷ್ಟದ ಕೆಲವು ತರಬೇತಿ ಕೊಡಿಸಲು ಶುರು ಮಾಡಿದ್ದೆವು. ಜಿಮ್ನ್ಯಾಸ್ಟಿಕ್ ಕಲಿಯಲು ಹೋಗುತ್ತಿದ್ದಳು. ಅಲ್ಲಿನ ಒಂದು ವಿಧಾನ ನನಗೆ ಇಷ್ಟವಾಗಿತ್ತು. ಕೇವಲ ಒಂದೇ ವಾರದಲ್ಲಿ ಜಿಮ್ನ್ಯಾಸ್ಟಿಕ್ನಲ್ಲಿ ಅವಳ ಪ್ರೋಗ್ರೆಸ್ ನೋಡಿ ಮುಂದಿನ ಶ್ರೇಣಿಗೆ ಅವರೇ ಹಾಕಿದ್ದರು. ಈ ವಿಧಾನದಿಂದ ಪ್ರತಿಭೆಯಿದ್ದವರು ಮುಂದಿನ ಮೆಟ್ಟಿಲುಗಳನ್ನು ಬಹು ಬೇಗನೆ ಏರಬಹುದು ಅನಿಸಿತು. ಅದರ ಜೊತೆಗೆ ಅಲ್ಲೊಂದು ಈಜು ಕಲಿಸುವ ಸಂಸ್ಥೆ ಇತ್ತು. ಮಗಳಿಗೂ ಬಹು ದಿನಗಳಿಂದ ಅದನ್ನು ಕಲಿಯುವ ಹಂಬಲ ಇತ್ತಾದ್ದರಿಂದ ಅಲ್ಲಿಗೆ ಕರೆದೊಯ್ದೆವು. ನನಗೂ ಈಜು ಕಲಿಯುವ ಹಂಬಲ ಇದ್ದೇ ಇತ್ತು. ಆದರೆ ವಯಾಸ್ಸಾದಂತೆ ಹೆದರಿಕೆಗಳಲ್ಲಿಯೇ ಈಜಾಡುವ ನಾವು ನೀರಿಗೆ ಇಳಿಯುವ ಪ್ರಶ್ನೆಯೆಲ್ಲಿ? ಮಗಳಿಗೆ ತರಬೇತಿ ಕೊಡುತ್ತಿದ್ದ ಮಹಿಳೆಯ ಹೆಸರು ಕ್ರಿಸ್ಟಿನಾ. ಅವಳಿಗೆ ಇಪ್ಪತ್ತೋ ಇಪ್ಪತ್ತೆರಡೋ ಇದ್ದೀತು. ನೋಡಲು ಫಿಟ್ ಆಗಿ ಆಕರ್ಷಕವಾಗಿ ಕಾಣುತ್ತಿದ್ದಳು. ಅಲ್ಲಿ ಎರಡು ನಮೂನೆ ಜನರನ್ನ ನೋಡಿದ್ದೆ. ತುಂಬಾ ತೆಳ್ಳಗೆ ಫಿಟ್ ಆಗಿ ಇರೋವ್ರು ಇಲ್ಲವೇ ಅತಿ ಬೊಜ್ಜು ಇರುವವರು. ಇವಳು ಮೊದಲನೇ ಕೆಟಗರಿ. ಅದೂ ಅಲ್ಲದೆ ಅವಳಿಗೆ ಈಗಾಗಲೇ ಎರಡು ಮಕ್ಕಳಿರುವುದನ್ನು ತಿಳಿದು ನನಗೆ ಆಶ್ಚರ್ಯ ಆಗಿತ್ತು. ಈಜು ಹೇಳಿಕೊಡುವ ವಿಧಾನವೂ ಅಲ್ಲಿ ಬೇರೆ ತರಹ ಇತ್ತು. ನಿಧಾನವಾಗಿ ಸುರಕ್ಷತಾ ವಿಧಾನಗಳನ್ನು ಅನುಸರಿಸಿ ಹೇಳಿಕೊಡುತ್ತಿದ್ದಳು. ಬೆಂಗಳೂರಿನ ಸ್ವಿಮ್ಮಿಂಗ್ ತರಬೇತಿ ಕೇಂದ್ರವೊಂದರಲ್ಲಿ ಎತ್ತಿ ಒಗೆದುಬಿಡುತ್ತಿದ್ದರು. ಇಲ್ಲಿರುವವರೆಗೂ ಅವರು ಎತ್ತಿ ಒಗೆಯುವ ರಭಸಕ್ಕೆ ನನ್ನ ಮಗಳು ಅತ್ತು ಅತ್ತು ಸ್ವಿಮ್ಮಿಂಗ್ ಪೂಲಿನ ನೀರಿನ ಮಟ್ಟ ಜಾಸ್ತಿ ಆಯ್ತೆ ಹೊರತು ಅವಳು ಈಜು ಕಲಿತಿರಲಿಲ್ಲ! ಹಾಗಂತ ಇವಳ ಜೊತೆಗಿದ್ದ ಎಷ್ಟೋ ಮಕ್ಕಳು ಈಜು ಕಲಿತಿದ್ದರು. ಬಹುಶಃ ಎಲ್ಲರಿಗೂ ಒಂದೇ ವಿಧಾನ ಕೆಲಸ ಮಾಡದು. ಅಮೆರಿಕೆಯ ಸಿವ್ಮ್ಮಿಂಗ್ ಪೂಲ್ ನಲ್ಲಿ ಕೆಲವೇ ದಿನಗಳಲ್ಲಿ ಈಜು ಕಲಿತಳು. ಇದರಿಂದ ಸ್ಪೂರ್ತಿಗೊಳಗಾಗಿ ನಾನೂ ಈಜು ಕಲಿಯಬೇಕೆಂಬ ನನ್ನ ಬಯಕೆ ಇನ್ನೂ ತೀವ್ರ ಆಯ್ತು. ಆ ಸ್ಪೂರ್ತಿಗೆ ಕ್ರಿಸ್ಟೀನಾಳೆ ಕಾರಣ ಆಗಿರಬಹುದಾ ಅಂತ ಆಶಾಗೆ ಬಲವಾದ ಸಂಶಯ ಬಂದಿತ್ತು. ಯಾಕಂದರೆ ಒಂದು ದಿನ ಕ್ರಿಸ್ಟೀನಾ ನಾವಿಬ್ಬರೂ ಕುಳಿತಲ್ಲಿ ಬಂದು ನಿಮ್ಮ ಮಗಳು ಚೆನ್ನಾಗಿ ಈಜು ಕಲಿಯುತ್ತಿದ್ದಾಳೆ. ನೀವೂ ಕಲಿಯುವುದಿದ್ದರೆ ಹೇಳಿ ನಿಮ್ಮಿಬ್ಬರಿಗೂ ನಾನೇ ಕಲಿಸುವೆ ಅಂತ ಹೇಳಿದ್ದಳು. ಮಗಳು ಕಲಿತು ಮುಗಿಸಲಿ ಆಮೇಲೆ ನಾವು ಕಲಿಯೋಣ ಅಂತ ಇವಳು ಸ್ವಲ್ಪ ಮುಂದೆ ಹಾಕಿದ್ದಳು. ಆಶಾ ನನ್ನ ಉತ್ಸಾಹಕ್ಕೆ ತಣ್ಣೀರು ಎರಚಿ ನಿರಾಸೆಯುಂಟುಮಾಡಿದ್ದಳು!

ಮಗಳನ್ನು ವಾರಕ್ಕೆ ಕೆಲವು ದಿನಗಳು ಅಲ್ಲಿಗೆ ಕರೆದೊಯ್ಯುವುದು, ಶಾಪಿಂಗ್ ಮಾಡೋದು ಇವೆ ಮೊದಲಾದ ಕೆಲಸಗಳನ್ನು ಮಾಡುತ್ತಾ ಕಾಲವನ್ನು ಕಳೆಯುತ್ತಿದ್ದೆವು. ಮಗಳು ಚೆನ್ನಾಗಿ ಈಜಾಡುವ ಮಟ್ಟಕ್ಕೆ ಬಂದಿದ್ದಳು. ಆಮೇಲೆ ಯಾಕೊ ಎರಡು ಮೂರು ಸರ್ತಿ ಕ್ರಿಸ್ಟಿನಾಳನ್ನು ನೋಡಲೇ ಇಲ್ಲ. ಅವಳು ಕೆಲಸ ಬಿಟ್ಟಿದ್ದಾಳೆ ಅಂತ ಗೊತ್ತಾಯಿತು. ಈಗ ನಾವು ಈಜು ಕಲಿಯಬಹುದು ಅಂತ ಆಶಾ ಪರ್ಮಿಷನ್ ಕೊಟ್ಟಳು! ಅಷ್ಟೊತ್ತಿಗೆ ನಮಗೆ ಬೇರೆಯ instructor ಬಂದಿದ್ದಳು.

ಬಟ್ಟೆ ಬದಲಾಯಿಸಲು ಹಾಗೂ ಸ್ನಾನ ಮಾಡಲು ಈಜುಕೊಳದ ಸಾರ್ವಜನಿಕ bathroom ಗೆ ಮೊದಲ ಸಲ ಹೋದಾಗ ಒಂದು ವಿಚಿತ್ರವನ್ನು ಗಮನಿಸಿ ದಂಗಾಗಿ ಹೋದೆ. ಒಳಗಡೆ ನೋಡಿದರೆ ಎಲ್ಲೆಲ್ಲೂ ದಿಗಂಬರರೆ! ಬಟ್ಟೆ ಬದಲಿಸಲು ಅಲ್ಲಿಗೆ ಬಂದಿದ್ದ ಯಾವ ಒಬ್ಬ ವಯಸ್ಕನೂ ಬಟ್ಟೆಯನ್ನೇ ತೊಟ್ಟಿರಲಿಲ್ಲ. ಅಕ್ಷರಶಃ ಒಂದು ತುಂಡು ಬಟ್ಟೆ ಕೂಡ ಹಾಕಿರದಿದ್ದ ಅವರು ಯಾವುದೇ ಮುಜುಗರ ಇಲ್ಲದೆ ಓಡಾಡುತ್ತಿದ್ದರು. ಅಲ್ಲಿದ್ದ ಶವರ್ ಗಳೂ ಕೂಡ ಸಾಮೂಹಿಕವಾಗಿ ಸ್ನಾನ ಮಾಡುವ ತರಹವೇ ಇದ್ದವು. ಮೊದಮೊದಲು ಆ ದಿಗಂಬರರ ನಡುವೆ ಚಡ್ಡಿ ಹಾಕಿಕೊಂಡು ಸ್ನಾನ ಮಾಡುತ್ತಿದ್ದ ನನಗೇ ನಾಚಿಕೆಯಾಗುತ್ತಿತ್ತು! ಅಮೆರಿಕನ್ನರ ಸ್ವೇಚ್ಛೆಯ ಬಗ್ಗೆ ಕೇಳಿ ತಿಳಿದಿದ್ದೆನಾದರೂ ಈ ‘ನಗ್ನ’ ಸತ್ಯವನ್ನು ಕಣ್ಣಾರೆ ನೋಡುತ್ತೇನೆಂದು ಯಾವತ್ತೂ ಅಂದುಕೊಂಡಿರಲಿಲ್ಲ. ಹಾಗಂತ ನಾನೂ ಅವರ ತರಹ ದಿಗಂಬರ ಆಗಲು ಸಾಧ್ಯವೇ? ನೀನು ನೀನೆ ಇಲ್ಲಿ ನಾನು ನಾನೇ ಅಂತ ಅವರೆದುರು ಧೈರ್ಯದಿಂದ ಬಟ್ಟೆ ಹಾಕಿಕೊಂಡೆ ಅಡ್ದಾಡುತ್ತಿದ್ದೆ!

ಮುಂದೊಂದು ದಿನ ಕ್ರಿಸ್ಟಿನಾ ನನ್ನ ಮೊಬೈಲ್ ಗೆ ಮೆಸೇಜ್ ಮಾಡಿದಳು. ಹೇಗಿದ್ದೀಯಾ ಅಂತ ಕೇಳಿದೆ. ತನಗೆ ಒಂದು ಅಪರೂಪದ ಕ್ಯಾನ್ಸರ್ ಅಗಿದೆಯಂತಲೂ, ಅರೈಕೆಯಲ್ಲಿದ್ದೀನಿ ಹಾಗೂ ಅದರಿಂದಾಗಿ ಕೆಲಸವನ್ನೂ ಕಳೆದುಕೊಂಡೆ ಅಂತ ಹೇಳಿದಳು. ಅಷ್ಟೊಂದು fit ಇದ್ದ ಅವಳಿಗೆ ಕ್ಯಾನ್ಸರ್ ಬಂತೆ ಅಂತ ಆಶ್ಚರ್ಯ ಆಯ್ತು. ಪೂರ ತಲೆ ಬೋಳಾದ ತನ್ನ ಭಾವ ಚಿತ್ರವನ್ನೂ ಕಳಿಸಿದಳು. ತನ್ನ ಜೀವನ ನಿರ್ವಹಣೆಗಾಗಿ ದೇಣಿಗೆ ಎತ್ತುತ್ತಿದ್ದೇನೆ ಸಾಧ್ಯವಾದಷ್ಟು ಸಹಾಯ ಮಾಡಿ ಅಂತ ಹೇಳಿದಳು. ನಮ್ಮ ದೇಶದಲ್ಲೇ ಇಷ್ಟೊಂದು ಬಡತನ ಇದೆ ಅಮೇರಿಕನ್ನರೆಲ್ಲ ಶ್ರೀಮಂತರೆ ಅನ್ನುವ ಭ್ರಮೆ ಕಳಚಿ, ಅಷ್ಟಿಷ್ಟು ಉಳಿತಾಯ ಮಾಡಿಕೊಂಡಿರುವ ನಮ್ಮ ದೇಶದ ಜನರೇ ಪರವಾಗಿಲ್ಲ ಅನಿಸಿತು. ಅವಳ ದಿನ ನಿತ್ಯದ ಕರ್ಚಿಗೆ ಹಾಗೂ ಆಸ್ಪತ್ರೆಯ ಫೀಸ್ ಗೆ ಕೂಡ ಗತಿಯಿಲ್ಲದಷ್ಟು ನಿರ್ಗತಿಕಳಾಗಿದ್ದಳಾ ಕ್ರಿಸ್ಟಿನಾ? ಅವಳು ಸುಳ್ಳು ಹೇಳಿರಲಿಕ್ಕಿಲ್ಲ ಅಂದುಕೊಂಡೆ. ಎಷ್ಟೊಂದು ಚಿಕ್ಕ ವಯಸ್ಸಿನಲ್ಲೇ ಎರಡು ಮಕ್ಕಳನ್ನೂ ಹೆತ್ತಿರುವ ಅವಳು ಗಂಡನ ಜೊತೆಗಾದರೂ ಇರುವ ಸಾಧ್ಯತೆಯೂ ಇರಲಿಲ್ಲ. ಇದ್ದರೂ ಕೂಡ ಅವರವರ ಲೆಕ್ಕಾಚಾರವೇ ಬೇರೆ ಬೇರೆ ಅಲ್ಲಿ. ವಿಚಿತ್ರ ದೇಶ ವಿಚಿತ್ರ ಜನ ಎಂಬ ಭಾವನೆ ಬರಲು ಶುರುವಾಗಿತ್ತು. ಯಾಕೋ ಸಿರಿ ಮತ್ತು ಕ್ರಿಸ್ಟಿನಾ ಇಬ್ಬರ ಬದುಕಿನಲ್ಲೂ ತುಂಬಾ ಸಾಮ್ಯತೆ ಕಾಣಿಸಿತ್ತು. ಅವಳಿಗೊಂದಿಷ್ಟು ನಮ್ಮ ಕೈಲಾದ ಸಹಾಯ ಮಾಡಿ ನಿನಗೆ ಬೇಗನೆ ಹುಷಾರಗಲಿ ಅಂತ ಅಶಿಸಿದೆವು… –ಗುರುಪ್ರಸಾದ ಕುರ್ತಕೋಟಿ


(ಮುಂದುವರಿಯುವುದು)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x