ದಿಗಂಬರ ಸತ್ಯ! (ಭಾಗ ೧): ಗುರುಪ್ರಸಾದ ಕುರ್ತಕೋಟಿ

ನನಗೆ ತುಂಬಾ ಚೆನ್ನಾಗಿ ನೆನಪಿದೆ. ಕನ್ನಡ ಸಂಘದ ಕಾರ್ಯಕ್ರಮವೊಂದಕ್ಕೆ ಅಲ್ಲಿನ ಗೆಳೆಯರೊಬ್ಬರು ಕರೆದುಕೊಂಡು ಹೋಗಿದ್ದರು. ಅದೇ ಮೊದಲ ಸಲ ತುಂಬಾ ಜನ ಕನ್ನಡಿಗರು ಒಟ್ಟಿಗೆ ಸೇರಿದ್ದು ನೋಡಿ ಸಹಜವಾಗಿ ಸಿಕ್ಕಾಪಟ್ಟೆ ಖುಷಿ ಆಗಿತ್ತು. ಅದೂ ಅಲ್ಲದೆ ನಮ್ಮ ಕನ್ನಡಿಗರು ಅಲ್ಲಿ ಕನ್ನಡ ಮಾತಾಡುತ್ತಿದ್ದರು! ಅದು ಮತ್ತೊಂದು ದೊಡ್ಡ ಅದ್ಭುತವಾಗಿತ್ತು. ಕನ್ನಡಿಗರು ಒಂದಾಗಬೇಕು ಹಾಗೂ ಕನ್ನಡ ಮಾತಾಡಬೇಕು ಅಂದರೆ ಅವರು ವಿದೇಶದಲ್ಲಿ ನೆಲಸಿರಬೇಕು ಅನ್ನೋದು ನನಗೆ ಆಗ ಮನದಟ್ಟಾಯಿತು.

ಕನ್ನಡ ಸಂಘದಲ್ಲಿ ಪ್ರತಿ ಹಬ್ಬಕ್ಕೆ ಅಂತ ಒಂದು ಕಾರ್ಯಕ್ರಮ ಮಾಡುತ್ತಾರೆ. ಅದಕ್ಕೊಂದು ಅಧ್ಯಕ್ಷೀಯ ಮಂಡಳಿ ಇರುತ್ತದೆ. ಅ ಮಂಡಳಿಯಲ್ಲಿ ಹಲವಾರು ಸಮೀತಿಗಳು. ಮುಂದಿನ ಸಾಲಿನ ಸಮೀತಿಗಳ ಆಯ್ಕೆ ಮಾಡುವ ಸಮಯ ಬಂದಿತ್ತು. ಅದಾಗಲೇ ನಾನು ತುಂಬಾ ಕನ್ನಡಿಗರಿಗೆ ಪರಿಚಯವಾಗಿದ್ದೆ. ಅವತ್ತೊಂದು ಕಾರ್ಯಕ್ರಮದಲ್ಲಿ ಕುಳಿತಿದ್ದಾಗ ಸಂಘದ ಹಾಲಿ ಅಧ್ಯಕ್ಷರು ನನ್ನ ಬಳಿ ಬಂದು ನಿಮ್ಮನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಿಸುವ (Cultural Committee) ಸಮೀತಿಗೆ ಆಯ್ಕೆ ಮಾಡಿದ್ದೇವೆ ಅಂದರು. ಹೊಸ ಸಮೀತಿಯನ್ನು ರಚಿಸುವುದು ಅದ್ಯಕ್ಷರಾಗಿ ನಿರ್ಗಮಿಸುತ್ತಿದ್ದ ಅವರ ಜವಾಬ್ದಾರಿಯಾಗಿತ್ತು. ಅರೆರೇ..! ಅಮೆರಿಕೆಗೆ ಬಂದು ಕೆಲವೇ ತಿಂಗಳುಗಳಲ್ಲೇ ನನ್ನ ಟ್ಯಾಲೆಂಟ್ ಇವರಿಗೆ ಗೊತ್ತಾಗಿಬಿಟ್ಟಿತಲ್ಲ ಅಂತ ನನ್ನ ಬಗ್ಗೆ ನನಗೆ ಸಿಕ್ಕಾಪಟ್ಟೆ ಹೆಮ್ಮೆ ಆಯ್ತು. ಒಳಗೊಳಗೇ ಬಹಳಷ್ಟು ಖುಷಿ ಅನುಭವಿಸುತ್ತಿದ್ದೆನಾದರೂ ಅಷ್ಟೊಂದು ತೋರ್ಪಡಿಸದೆ ಆಯ್ತು ಅಂದೇ. ಅಲ್ಲಿಂದ ಕನ್ನಡ ಸಂಘದ ಒಡನಾಟ ಶುರು ಆಯ್ತು. ಆದರೆ ಹೋಗ್ತಾ ಹೋಗ್ತಾ ಗೊತ್ತಾಗಿದ್ದೇನಪಾ ಅಂದ್ರೆ ಅಲ್ಲಿನ ಸಮಿತಿಗಳಲ್ಲಿ ಸೇರಿಕೊಳ್ಳಲು ಜನ ಮುಂದೆ ಬರುತ್ತಿರಲಿಲ್ಲ. ಸುಮ್ಮನೆ ಜವಾಬ್ದಾರಿ ತಲೆ ಮೇಲೆ ಹಾಕಿಕೊಳ್ಳೋದು ಅಂದರೇನು ತಮಾಷೆನಾ? ಹೀಗಾಗಿ ಆದಷ್ಟು ಹೊಸಬರನ್ನೇ ಇಂತಹ ಸಮೀತಿಗಳಿಗೆ ಅರಿಸಿಬಿಡುತ್ತಿದ್ದರು. ಅದೇನೇ ಇರಲಿ ನನಗೂ ಆ ಪರಿಸ್ಥಿತಿಯಲ್ಲಿ ಒಂದು ಒಳ್ಳೆಯ ಟೈಮ್ ಪಾಸ್ ಬೇಕೇ ಬೇಕಿತ್ತು. ಆಗಿದ್ದು ಒಳ್ಳೆಯದೇ ಆಗಿತ್ತು. ಆದರೂ ಅಷ್ಟು ಜನ ಹೊಸಬರಲ್ಲಿ ನನ್ನನ್ನೇ ಅರಿಸಿದ್ದರಲ್ಲ ನನ್ನ ಪ್ರತಿಭೆ ಅವರಿಗೆ ಗೊತ್ತಾಗಿದ್ದಕ್ಕೆ ಅಲ್ಲವೇ ಅಂತ ಹೆಂಡತಿ ಎದುರು ಕೊಚ್ಚಿಕೊಂಡೆ. ಅವಳೂ ಕೂಡ ಹೌದು ಕಣ್ಲಾ ಅಂತ ಸಮಾಧಾನ ಮಾಡಿದಳು. ಅವಳು ತುಂಬಾ ಒಳ್ಳೆಯವಳು ಕಣ್ರೀ!

ನಮ್ಮ ಅಪಾರ್ಟ್ ಮೆಂಟ್ ನಲ್ಲಿ ಕೂಡ ಕೆಲವು ಜನ ಪರಿಚಯ ಆದರು. ಬರಿ ಕನ್ನಡಿಗರೇ ಅಲ್ಲ ಒಂದಿಷ್ಟು ಆಂಧ್ರದವರು, ತಮಿಳಿಗರೂ ಇದ್ದರು. ಆಂಧ್ರದವರು ಅಮೆರಿಕೆಗೆ ಬರಲು ಬಿದ್ದು ಸಾಯುತ್ತಾರೆ. ಅಲ್ಲಿರುವಷ್ಟು ಆಂಧ್ರದವರು ಆಂಧ್ರಪ್ರದೇಶದಲ್ಲಿರುವ ಜನಸಂಖ್ಯೆಗಿಂತ ಜಾಸ್ತಿ ಅಂತ ಒಂದು ಅದ್ಭುತ ಜೋಕನ್ನು ಗಜನಿ ಎದುರು ಹೇಳಿ ನಕ್ಕಿದ್ದೆ. ಅವನು ನಗಲಿಲ್ಲ! ಅದಕ್ಕೆ ಬದಲಾಗಿ USA ಅಂದರೆ ‘ಯುನೈಟೆಡ್ ಸ್ಟೇಟ್ಸ್ ಆಫ್ ಆಂಧ್ರಪ್ರದೇಶ’ ಅಂತ ತಾನೂ ಒಂದು ಜೋಕ್ ಹೇಳಿದ್ದ. ನಾನೂ ಅದಕ್ಕೆ ನಗಲಿಲ್ಲ ಬಿಡಿ! ಪಕ್ಕದ ಫ್ಲಾಟ್ ನಲ್ಲೆ ಆಂಧ್ರ ಮೂಲದ ಒಂದು ಕುಟುಂಬ ವಾಸವಾಗಿತ್ತು. ಒಬ್ಬ ಮಹಿಳೆ ಹಾಗೂ ಅವಳ ಮಗ ಅಲ್ಲಿ ಇರುತ್ತಿದ್ದರು. ಅವಳ ಹೆಸರು ಸಿರಿ ಮಗನ ಹೆಸರು ಫಿಲಿಪ್ ಅಂತ ಇರಲಿ. ಹುಡುಗ ತುಂಬಾ ನಾಚಿಗೆ ಸ್ವಭಾವದವನು ಅನಿಸುತ್ತಿದ್ದ. ಅವನು ಮಾತಾಡಿದ್ದೆ ನೋಡಿರಲಿಲ್ಲ. ಎಂಟು ವರ್ಷದ ನನ್ನ ಮಗಳಿಗಿಂತ ವಾರಿಗೆಯಲ್ಲಿ ಚಿಕ್ಕವನಾಗಿದ್ದರೂ ಮಾತು ಬಾರದಷ್ಟು ಸಣ್ಣವ ಆಗಿರಲಿಲ್ಲ. ಕೆಲವು ಮಕ್ಕಳಿಗೆ ಮಾತು ತಡವಾಗಿ ಬರುತ್ತದಲ್ಲ ಅದಕ್ಕೆ ಇರಬೇಕು ಅಂದುಕೊಂಡಿದ್ದೆವು. ನನ್ನ ಮಗಳ ಜೊತೆ ಆಡಲು ಒಳ್ಳೆಯ ಕಂಪನಿ ಅಂತೂ ಸಿಕ್ಕಿತ್ತು. ಆದರೆ ಒಂದೇ ಒಂದು ಶಬ್ದ ಹೊರಡಿಸಲೂ ಅವನಿಗೆ ಬರುತ್ತಿರಲಿಲ್ಲ. ಅವನಿಗೆ ಕೋಪ ಬಂದಾಗ ಮಾತ್ರ ತನ್ನ ಅಮ್ಮನಿಗೆ ಜೋರಾಗಿ ಹೊಡೆಯುತ್ತಿದ್ದ. ಆಗ ಅವನ ಮುಖ ನೋಡಿದರೆ ನಾಗವಲ್ಲಿಯಾಗಿ ಬದಲಾಗುತ್ತಿದ್ದ ಅಪ್ತಮಿತ್ರ ಸಿನಿಮಾದ ಸೌಂದರ್ಯಳ ಮುಖ ಭಾವ ನೆನಪಾಗುತ್ತಿತ್ತು! ಅಷ್ಟು ಬದಲಾವಣೆ ಅವನ ಮುಖದಲ್ಲಿ ನಿಚ್ಚಳವಾಗಿ ಕಾಣುತ್ತಿತ್ತು. ತುಂಬಾ ಮುದ್ದಾಗಿ ಬೆಳೆಸಿದರೆ ಹೀಗೆ ಆಗೋದು ಅಂತ ನನಗೆ ಅನಿಸಿತ್ತು. ಫಿಲಿಪ್ ನ ತಂದೆ ಇನ್ನೊಂದು ಯಾವುದೋ ಊರಿನಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ವಾಸವಾಗಿದ್ದು ಆಗಾಗ ಬಂದು ಹೋಗಿ ಮಾಡುತ್ತಿದ್ದ. ಹಾಗೆ ಒಂದು ಸರ್ತಿ ಬಂದಾಗ ಅವನದೂ ಪರಿಚಯವಾಯ್ತು. ಅವಳೊಂದು ತೀರ, ಇವನೊಂದು ತೀರ, ಒಬ್ಬನೇ ಮಗ… ಒಟ್ಟಿಗೆ ಇರಲಾರದೆ ದುಡ್ಡಿನ ಹಿಂದೆ ಬಿದ್ದು ಕೆಲಸಕ್ಕೆ ಮುಡಿಪಾಗಿಡುವ ಅವರದೂ ಒಂದು ಜೀವನವೇ ಅನಿಸಿತು.

ಅವನು ತಾನೊಬ್ಬ ಸ್ನೂಕರ್ ಆಟಗಾರ ಅಂತ ಹೇಳಿಕೊಂಡಿದ್ದ. ಅದು ಇದು ಮಾತಾಡುತ್ತ ತನ್ನ ಮಗ ಫಿಲಿಪ್ ಕೂಡ ತುಂಬಾ ಚೆನ್ನಾಗಿ ಸ್ನೂಕರ್ ಆಡುತ್ತಾನೆ ಇಲ್ಲಿದೆ ನೋಡಿ ಅಂತ ಒಂದು ವೀಡಿಯೊ ತೋರಿಸಿದ. ಅದರಲ್ಲಿ ಅವನ ಮಗ ಸ್ನೂಕರ್ ಹೊಡೆತಗಳನ್ನು ತುಂಬಾ ಚೆನ್ನಾಗಿಯೇ ಹೊಡೆಯುತ್ತಿದ್ದುದು ಗಮನಿಸಿದೆ. ಅದರ ಜೊತೆಗೆ ಇನ್ನೊಂದು ವಿಚಿತ್ರವನ್ನೂ ಆಲಿಸಿದೆ. ಆ ವೀಡಿಯೊದಲ್ಲಿ ಅವನ ಮಗ ನಿಚ್ಚಳವಾಗಿ ಮಾತಾಡುತ್ತಿದ್ದ! ನನ್ನ ಮುಖದಲ್ಲಿ ಆದ ಬದಲಾವಣೆಯನ್ನು ಗಮನಿಸಿದ ಅವನು, ತನ್ನ ಮಗ ಮನೆಯಲ್ಲಿ ಅಪ್ಪ ಅಮ್ಮ ಇಬ್ಬರನ್ನು ಬಿಟ್ಟು ಬೇರೆ ಯಾರ ಜೊತೆಗೂ ಮಾತಾಡಲಾರ ಹಾಗೂ ಅವನ ಆ ಸ್ಥಿತಿಯನ್ನು selective mutism ಅಂತಾರಂತೆ ಎಂದು ಹೇಳಿದ. ಅದು ಕ್ರಮೇಣ ಸುಧಾರಿಸುವ ಸ್ಥಿತಿ ಅಂತೆ. ಈ ತರಹದ ಒಂದು ಪರಿಸ್ಥಿತಿ ಮಕ್ಕಳಿಗೆ ಬರುವುದೆಂಬ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ಪಾಪ ಅನಿಸಿತು. ಮತನಾಡಲು ಸಾಧ್ಯವಾಗದೆ ತನ್ನ frustration ಅನ್ನು ತನ್ನ ಅಮ್ಮನನ್ನು ಹೊಡೆಯುವ ಮೂಲಕ ಹೊರ ಹಾಕುತ್ತಿದ್ದ ಅಂತ ನನಗೆ ಅರ್ಥವಾಯ್ತು. ಕ್ರಮೇಣ ನನ್ನ ಮಗಳ ಜೊತೆಗೆ ಮಾತಾಡಲು ಶುರು ಮಾಡುತ್ತಾನೆ ಅಂತ ಅವನಪ್ಪ ಹೇಳಿದ. ನಾನೂ ಕೂಡ ಅವನಿಗೆ ಬೇಗನೆ ಮಾತು ಬರಲು ಸಹಾಯ ಮಾಡೋಣ ಅಂತ ನನ್ನ ಕೈಲಾದ ಪ್ರಯತ್ನ ಶುರು ಮಾಡಿದೆ. ನಮ್ಮ ಮನೆಗೆ ಫಿಲಿಪ್ ಬಂದಾಗಲೆಲ್ಲ ಕ್ವಿಜ್ ತರಹ ಮಾಡಿ ಅವನಿಗೆ ಪ್ರಶ್ನೆ ಕೇಳೋದು, ಕತೆ ಹೇಳುತ್ತಾ ಸಡನ್ ಆಗಿ ಅವನತ್ತ ಒಂದು ಪ್ರಶ್ನೆ ಎಸೆಯೋದು ಹೀಗೆಲ್ಲ ಮಾಡಲು ಶುರು ಮಾಡಿದೆ. ಅವನು ಹೇಗಾದರೂ ನನ್ನ ಜೊತೆಗೆ ಮಾತಾಡಲು ಶುರು ಮಾಡಬಹುದು ಎಂಬುದು ನನ್ನ ಸದುದ್ದೇಶ ಆಗಿತ್ತು. ಏನೇ ತಿಪ್ಪರಲಾಗ ಹಾಕಿದರೂ ಆಸಾಮಿ ತುಟಿ ಪಿಟಕ್ ಅನ್ನುತ್ತಿರಲಿಲ್ಲ. ನಾನು ಹಾಗೆಲ್ಲ ಮಾಡಿದ್ದು ದೊಡ್ಡ ತಪ್ಪು ಆಗಿತ್ತು ಅನ್ನೋದು ನನಗೆ ಆಮೇಲೆ ಅರಿವಾಯ್ತು. selective mutism ಇರುವ ಮಕ್ಕಳಿಗೆ ಹಾಗೆ ಬಲವಂತವಾಗಿ ಮಾತಾಡಿಸಲು ಪ್ರಯತ್ನಿಸಬಾರದಂತೆ. ಹಾಗೆ ಮಾಡಿದರೆ ಅವರಿಗೆ ಇನ್ನೂ anxiety ಜಾಸ್ತಿಯಾಗುತ್ತಂತೆ. ಅವನು ತನ್ನ ಅಮ್ಮನೆದುರು ನಾನು ಹಾಗೆ ಬಲಬಂತವಾಗಿ ಮಾತನಾಡಿಸುತ್ತೇನೆ ಅಂತ ಚಾಡಿ ಹೇಳಿದ್ದ. ಅವತ್ತಿನಿಂದ ಹಾಗೆ ಮಾಡುವುದ ಬಿಟ್ಟೆ. ಗೂಗಲ್ಲವ್ವನನ್ನು ಕೇಳಿ ಅವನ ಸ್ಥಿತಿಯ ಬಗ್ಗೆ ಓದಿದೆ. ಆಗ ಅವನು ಮಾಡುತ್ತಿದ್ದ ಎಲ್ಲ ವಿಚಿತ್ರಗಳು ಸಹಜ ಅನಿಸಲು ಶುರುವಾದವು. ಕ್ರಮೇಣ ಅವನು ನನ್ನ ಮಗಳ ಜೊತೆ ಪಿಸುಗುಡಲು ಶುರು ಮಾಡಿದ್ದ. ನನ್ನನ್ನು ನೋಡಿದಾಕ್ಷಣ ನಿಲ್ಲಿಸುತ್ತಿದ್ದ. ನನ್ನ ಮೇಲೆ ಇನ್ನೂ ಕೋಪ ತಣಿದಿರಲಿಲ್ಲ ಅನಿಸುತ್ತೆ. ಆಮೇಲಾಮೇಲೆ ಮಗಳ ಜೊತೆಗೂ ಜೋರಾಗಿಯೇ ಮತಾಡಲು ತೊಡಗಿದ್ದ, ನಾನಿದ್ದಾಗ ಕೂಡ. ಅದನ್ನು ನೋಡಿ ಖುಷಿ ಪಟ್ಟಿದ್ದೆ. ಅವರಪ್ಪನೂ ನಿಮ್ಮ ಮಗಳು ಇದ್ದುದಕ್ಕೆ ಅವನು ಇಷ್ಟೊಂದು ಮಾತಾಡಲು ಕಲಿತ ಅಂತ ಹೇಳಿ ಖುಷಿ ಪಟ್ಟಿದ್ದ.

ಆದರೆ ಮಗ ಮಾತು ಕಲಿಯುವುದರೊಳಗೆ ಫಿಲಿಪ್ ನ ಅಪ್ಪ ಅಮ್ಮ ಮಾತು ಬಿಟ್ಟಿದ್ದರು! ಅವತ್ತೊಂದು ದಿನ ಅವನ ಅಪ್ಪ ಬಂದು ತಾನು ಸಿರಿಗೆ divorse ಮಾಡುತ್ತಿದ್ದೇನೆ. ಅವಳು ತುಂಬಾ ಹಟಮಾರಿ ಹಾಗೆ ಹೀಗೆ ಅಂತ ಹೇಳಿದ. ಅವಳೂ ಕೂಡ ಅವನು ಸರಿ ಇಲ್ಲ ಅಂತ ನನ್ನ ಹೆಂಡತಿ ಎದುರು ಹೇಳಿದ್ದಳು. ಒಟ್ಟಿನಲ್ಲಿ ಅವರಿಬ್ಬರಿಗೂ ಹೊಂದಲಿಲ್ಲ ಅಂತಾಯ್ತು. ಈಗಾಗಲೇ ಗಂಡ ಹೆಂಡಿರ ಜಗಳ ಬಿಡಿಸಲು ಹೋಗಿ ಅದು ಅಸಾಧ್ಯವೆಂದು ಅರಿತಿದ್ದ ನಾನು ಇಲ್ಲಿ ಯಾವುದೇ ರೀತಿಯ ಅಧಿಕಪ್ರಸಂಗ ಮಾಡದೆ ಅವರಿಬ್ಬರ ಮಧ್ಯ ರಾಜಿ ಮಾಡಿಸುವ ಯಾವುದೇ ವ್ಯರ್ಥ ಪ್ರಯತ್ನ ಮಾಡದೆ ಮೂಕ ಪ್ರೇಕ್ಷಕನಾಗಿ ಉಳಿದೆ. ಆದರೂ ಎಷ್ಟೋ ವರ್ಷಗಳ ಸಂಸಾರ ಮಾಡಿದ ಮೇಲೆ ಅದು ಹೇಗೆ ಒಮ್ಮೆಲೇ ಹೊಂದಿಕೆ ಕಷ್ಟ ಅನಿಸುತ್ತೆ ಎಂದು ಹನ್ನೆರಡು ವರ್ಷಗಳಿಂದ ಒಂದೇ ಹೆಂಡತಿಯ ಜೊತೆ ಸಂಸಾರ ಮಾಡುತ್ತಿದ್ದ ನನಗೆ ಅಚ್ಚರಿ ಆಗಿದ್ದು ಹೌದು. ಮದುವೆ ಅನ್ನೋದೇ ಇಬ್ಬರ ಅವಗುಣಗಳನ್ನು ಅರಿತು ಒಪ್ಪಿಕೊಂಡು ಅಪ್ಪಿಕೊಳ್ಳೋದು ಅಲ್ಲವೇ? ಮೊದಲಿನ ಕಾಲದಲ್ಲೂ ಗಂಡ ಹೆಂಡತಿ ಜಗಳ ಆಡುತ್ತಿದ್ದರು. ಉಂಡು ಮಲಗಿದ ಮೇಲೆ ಒಂದಾಗುತ್ತಿದ್ದರು! ಇಂದಿನ ಜಗಳಗಳು ವಿಚ್ಛೇದನ ಆಗುವ ತನಕ ಎಂಬಂತಾಗಿದೆ. ಇವೆಲ್ಲಕ್ಕೆ ಸ್ವಪ್ರತಿಷ್ಠೆಯೇ ಕಾರಣವೇ? ಹೆಣ್ಣು ಸ್ವತಂತ್ರವಾಗಿರುವುದನ್ನು ಸಹಿಸಲು ಗಂಡಸಿಗೆ ಸಾಧ್ಯ ಆಗುತ್ತಿಲ್ಲವೇ? ಅಥವಾ ಹೆಣ್ಣು ಕೂಡ ಗಂಡಸಿಗೆ ಕಿರಿ ಕಿರಿ ಆಗಲಿ ಎಂದು ಹಾಗೆ ಮಾಡುತ್ತಿದ್ದಾಳೆಯೇ? ಏನೇ ಆದರೂ ಚಪ್ಪಾಳೆ ಆಗೋದು ಎರಡೂ ಕೈಯಿಂದಲೇ! ಆಮೇಲೆ ಅವನನ್ನು ಮತ್ತೆ ನೋಡಲಿಲ್ಲ. ಅವಳು ಇನ್ನೂ ಅಲ್ಲೇ ಇದಾಳೆ. salary ಕೂಡ ಅಷ್ಟೊಂದು ಇಲ್ಲ. ಆದರೂ ಭಾರತಕ್ಕೆ ವಾಪಸ್ಸು ಹೋಗಲು ಪ್ರತಿಷ್ಠೆ ಅಡ್ಡವಾಗುತ್ತೆ. ಹೋಗಲು ಟಿಕೆಟ್ ಗೆ ದುಡ್ಡು ಕೂಡ ಇಲ್ಲ ಅಂತಲೂ ಒಮ್ಮೆ ಹೇಳಿದ್ದಳು. ಹೀಗೆ ಎಷ್ಟೋ ಜನ ಅಲ್ಲಿ ಇರದೇ ಇಲ್ಲಿಗೆ ಬರದೆ ಒದ್ದಾಡಿಕೊಂಡು ಇದ್ದಾರೆ. ಆದರೂ ಅವಳಿಗೆ ಅಮೆರಿಕೆಯ ಬಗ್ಗೆ ತುಂಬಾ ಅಭಿಮಾನ ಇತ್ತು. ಅಲ್ಲಿನ ಜನರು ತುಂಬಾ blessed ಅಂತ ಒಮ್ಮೆ ಹೇಳಿದ್ದಳು. ಯಾಕೆ ಅಂದರೆ ಅಲ್ಲಿನ ಎಲ್ಲಾ ಸೀಸನ್ ಗಳು ಸರಿಯಾದ ಸಮಯಕ್ಕೆ ಆಗುತ್ತಂತೆ. ಇರಬಹುದು… ಆದರೆ ಎಷ್ಟೋ ತಿಂಗಳ ಚಳಿಗೆ ಮರುಗಟ್ಟಿ ಹೋಗಿದ್ದ ನನಗೆ, ಅದ್ಹೇಗೆ ಇದು ಬ್ಲೆಸ್ಸಿಂಗ್ ಆಗುತ್ತೆ ಅನ್ನುವ ಪ್ರಶ್ನೆ ಮನದಲ್ಲಿ ಮೂಡಿದರೂ, ಅವಳ ಅಂಧಾಭಿಮಾನಕ್ಕೆ ಏನು ಹೇಳಬೇಕೆಂದು ತಿಳಿಯದೆ ಮೂಕ ವಿಸ್ಮಿತನಾಗಿದ್ದೆ!
ಗುರುಪ್ರಸಾದ ಕುರ್ತಕೋಟಿ


(ಮುಂದುವರಿಯುವುದು…)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

9 Comments
Oldest
Newest Most Voted
Inline Feedbacks
View all comments
ನಾರಾಯಣ ಎಂ ಎಸ್
ನಾರಾಯಣ ಎಂ ಎಸ್
3 years ago

ತುಂಬಾ ಚೆನ್ನಾಗಿದೆ ಬರಹ. ಮುಂದೆ ಓದಲು ಕಾತುರನಾಗಿದ್ದೇನೆ.

Pradeep
Pradeep
3 years ago

ತುಂಬಾ ಚೆನ್ನಾಗಿದೆ ಸಾರ್.

Gerald Carlo
Gerald Carlo
3 years ago

ಬಹಳಷ್ಟು ತಿಳಿಯಿತು.
* ಅಮೆರಿಕದಲ್ಲಿ ಭಾರತಿಯರೆಲ್ಲಾ ಒಗ್ಗಟ್ಟಾಗಿ ಹೆಚ್ಚು ಕಮ್ಮಿ ಒಂದೇ ಕಡೆ ವಾಸಿಸುತ್ತಾರೆ. ಬಾಷೆ, ಥರ್ಮ ಗೌಣ.
*ಕನ್ನಡಿಗರಿಗೆ ಬಾಷೆಮ ಸಂಸ್ಕೃತಿಯ ಮೇಲೆ ಎಲ್ಲಿಲ್ಲದ ಮೋಹ.
* Selective mutism ಹೊಸದಾಗಿ ಕೇಳಿದ್ದು. ಕುತೂಹಲಕಾರಿಯಾಗಿದೆ. ಪಾಪ ಪಿಲಿಫ್ ಯಾರ ಜೊತೆಗಿದ್ದಾನೋ!

ಗುರುಪ್ರಸಾದ ಕುರ್ತಕೋಟಿ

ಪ್ರದೀಪ್,

ಬರಹವನ್ನು ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು! 🙂

ಗುರುಪ್ರಸಾದ ಕುರ್ತಕೋಟಿ

ಕಾರ್ಲೋ ಸರ್,

ನಿಮ್ಮ ಪ್ರತಿಕ್ರಿಯೆಗಳನ್ನು ಓದುವುದೇ ಖುಷಿ! ತುಂಬಾ ಧನ್ಯವಾದಗಳು!

ಭಾರತೀಯರು ಒಂದಾಗೋದು ಸ್ವಲ್ಪ ಅಪರೂಪವೇ ಸರ್. ದೊಡ್ಡ ಸಂಖ್ಯೆಯಲ್ಲಿ ಇದ್ದಾಗ ನಮ್ಮವರು ಮತ್ತೆ ಜಾತಿ ಉಪಜಾತಿ ಧರ್ಮ ಭಾಷೆ ಉಪಭಾಷೆ ಹೀಗೆ ಗ್ರುಪ್ಪುಗಳನ್ನು ಮಾಡಿಕೊಂಡು ಇದ್ದೆ ಇರುತ್ತಾರೆ. ಅದಕ್ಕೆ ಅಮೆರಿಕೆಯೂ ಹೊರತಲ್ಲ. ನಾವು ಬಹುಶಃ ಒಂದಾಗಿದ್ದು ಬ್ರಿಟಿಷರನ್ನು ಓಡಿಸುವಾಗ ಮಾತ್ರ ಅಂದುಕೊಳ್ಳುತ್ತೇನೆ. ವೈರಿಗಳ ವಿರುದ್ಧ ಎಲ್ಲ ವೈವಿಧ್ಯಗಳ ಮರೆತು ಒಂದಾಗೋದೂ ಕೂಡ ನಮ್ಮ ವೈಶಿಷ್ಟ್ಯವೇ ಅಲ್ಲವೇ? 🙂 .. ಆದರೆ ಅಲ್ಲಿನ ಕನ್ನಡಿಗರು ಮಾತ್ರ ತುಂಬಾ ಅನ್ಯೋನ್ಯವಾಗಿದ್ದಾರೆ. ಅಂದಹಾಗೆ ಫಿಲಿಪ್ ತನ್ನ ಅಮ್ಮನ ಜೊತೆ ಇದ್ದಾನೆ.

Narayana
Narayana
3 years ago

ಬರಹ ಬಹಳ ಇಷ್ಟವಾಯಿತು ಎರಡನೇ ಕಂತಿಗೆ ಎದುರು ನೋಡುತ್ತಿದ್ದೇನೆ

Narayana M S
Narayana M S
3 years ago

ಬರಹ ತುಂಬಾ ಚೆನ್ನಾಗಿದೆ ಸರ್, ಮುಂದೆ ಓದಲು ಕುತೂಹಲ ಮೂಡಿದೆ

ಗುರುಪ್ರಸಾದ ಕುರ್ತಕೋಟಿ

ನಾರಾಯಣ್,

ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ! ಮುಂದಿನ ಕಂತು ಬರೆಯಲು ಇದು ದೊಡ್ಡ ಟಾನಿಕ್! 🙂

9
0
Would love your thoughts, please comment.x
()
x