ದಾಳ..: ಸತೀಶ್ ಶೆಟ್ಟಿ ವಕ್ವಾಡಿ..

ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಬೇಸಿಗೆಯ ಬಿಸಿಲಿನ ಭರಕ್ಕೆ ಬಳಲಿದ ಧರೆ ತಂಪಾಗಿತ್ತು. ಮಧ್ಯಾಹ್ನವಾದರೂ , ಆಗಸದಲ್ಲಿ ಕಪ್ಪುಗಟ್ಟಿದ ಮೋಡಗಳ ದಾಳಿಗೆ ಬೆದರಿ ಸೂರ್ಯ ಕಣ್ಣು ತೆರೆದಿರಲಿಲ್ಲ. ಇಂದು ಸಹ ಭುವಿಯ ಮೇಲೆ ಮತ್ತೆ ದಾಳಿ ಮಾಡಲು ಮೋಡಗಳ ದಂಡು ಸಜ್ಜಾಗುತ್ತಿತ್ತು, ಪಡುವಣದ ಕಡಲ ಕಡೆಯಿಂದ ಬೀಸುತ್ತಿರುವ ಗಾಳಿ ಸಂಜೆಯ ಮೇಘರಾಜನ ಅಬ್ಬರಕ್ಕೆ ಪಕ್ಕವಾದ್ಯವೆಂಬಂತೆ ಜೋರಾಗಿ ಬೀಸುತ್ತಿತ್ತು. ಇಂತಹ ತಣ್ಣಗಿನ ವಾತಾವರಣದಲ್ಲೂ ಅಲ್ಲಿ ನೆರೆದವರೆಲ್ಲ ಬೆವತ್ತಿದ್ದರು. ನರಹರಿ ಒಳಬೈಲು ಅವರ ಮನೆಯ ಫ್ಯಾನುಗಳು ಅವಿರತವಾಗಿ ಕಾರ್ಯನಿರ್ವಹಿಸುತ್ತಿದ್ದರೂ , ಮನೆಯ ಜಗುಲಿಯಲ್ಲಿ ನೆರೆದಿದ್ದವರ ಮಖದ ಮೇಲೆ ಬೆವರಿನ ಪ್ರವಾಹವೇ ಉಕ್ಕುತ್ತಿತ್ತು. ಯಾರು ಎಂದೂ ನೋಡದ ನರಹರಿಯವರ ಇನ್ನೊಂದು ಮುಖ ಇಂದು ಅಲ್ಲಿದ್ದವರಿಗೆ ಅಕ್ಷರಶಃ ಭಯ ಹುಟ್ಟಿಸಿತ್ತು. ಪಾಪದ ಜನ ಅಂತ ಸುತ್ತ ಮುತ್ತಲಲ್ಲೆಲ್ಲ ಹೆಸರು ಮಾಡಿದ್ದ ಓಳಬೈಲು ಇಂದು ಜಮದಗ್ನಿಯಾಗಿದ್ದರು..

” ಯಾವನ್ ಅವ್ನು ದಯಾನಂದ ರಾವ್, ಅವನಿಗೇನು ಗೊತ್ತು ರಾಜಕೀಯ ?. ರಾಜಧಾನಿಯಲ್ಲಿ ಕುತ್ಕೊಂಡು ಒಂದಷ್ಟು ದುಡ್ಡ್ ಮಾಡ್ಕಂಡ್ , ಹೈಕಮಾಂಡಿನ ಕೆಲವ್ ನಾಯಿಗಳಿಗೆ ಬಿಸ್ಕೆಟ್ ಹಾಕಿ ಟಿಕೆಟ್ ತಕಂಬದಂದ್ರೆ ಏನ್. ಹಂಗಾರ್ ನಾವೆಲ್ಲಾ ಕತ್ತೆಗಳಾ ?. ಮೂವತ್ತು ವರ್ಷ ಕತ್ತೆ ತರ ಪಕ್ಷಕ್ಕಾಗಿ ಕೆಲಸ ಮಾಡಿದ್ದೆ. ಕಳ್ದ್ ಐದ್ ವರ್ಷ ಸ್ವಂತ ವ್ಯವಹಾರ ಬಿಡ್ಕಂಡ್, ಬಿದ್ದ್ ಹೋದ್ ಪಕ್ಷನ ಎತ್ತಿ ಕಟ್ಟಿದ್ದೀನಿ. ಎಲ್ ಹೊಯ್ದ ಅಂವ ಇಸ್ಟ್ ಟೈಮ್. ಮನಿ ಕಟ್ಟುಕ್ ನಾವ್ ಬೇಕು , ಕಟ್ಟಿದ್ ಮನೆಯಲ್ ಬದ್ಕುಕ್ ಅವ್ನ. ಅಂವ ಕ್ಷೇತ್ರಕ್ಕೆ ಕಾಲ್ ಇಡ್ಲಿ. ನಾನ್ ಜೈಲಿಗೆ ಹೋಪುದಾರು ಅಡ್ಡಿಲ್ಲ ಅಂವಂದ್ ಕಾಲ್ ಕತ್ತರಿಸಿ ನಾಯಿ ನರಿಗೆ ಹಾಕ್ತಿನಿ. ಏನ್ ಅಂತ ತಿಳ್ಕಂಡಿದ್ದ ಈ ನರಹರಿ ಒಲಬೈಲ್ನ್ನು ”

ನರಹರಿಯವರ ಆಕ್ರೋಶದ ಆರ್ಭಟಕ್ಕೆ ಇಡೀ ಮನೆ ನಡುಗುತ್ತಿತ್ತು. ಕೋಪ ಮತ್ತು ಹತಾಶೆಯ ಬೇಗುದಿಯಲ್ಲಿ ನರಹರಿಯವರ ಇಡೀ ದೇಹ ದೈವ ಆವರಿಸಿದ ಪಾತ್ರಿಯಂತೆ ನಡುಗುತ್ತಿತ್ತು. ಅತ್ತ ನಿಲ್ಲಲ್ಲು ಆಗದೆ, ಇತ್ತ ಕೂರಲು ಆಗದೆ ಪೆಟ್ರೋಲ್ ಕುಡಿದ ಶ್ವಾನದಂತೆ ಮನೆಯ ಜಗುಲಿಯ ಸುತ್ತ ಗುರುಗುಟ್ಟುತ್ತ ಅಡ್ಡಾಡುತ್ತಿದ್ದರು. ಅಲ್ಲಿದ ಯಾರಿಗೂ ಅವರನ್ನು ಸಮಾಧಾನಿಸುವ ಧೈರ್ಯ ಇರಲಿಲ್ಲ. ಸಮಾಧಾನಿಸಲು ಹೋದ ಅವರ ಅಣ್ಣನ ಮಗನಿಗೆ ಟಿವಿ ರಿಮೋಟಿನಿಂದ ಹೊಡೆದು ಬಿಟ್ಟಿದ್ದರು. ಸುಮಾರು ಅರ್ಧ ಗಂಟೆಯಿಂದ ಅವರ ಉಸಿರಿನ ಶಬ್ದ ಬಿಟ್ಟರೆ ಬೇರೆಯವರು ಉಸಿರಾಟವನ್ನು ಮರೆತರೋ ಎನ್ನುವಷ್ಟರ ಮಟ್ಟಿನ ಬಿಗು ಪರಿಸ್ಥಿತಿ ಅಲ್ಲಿತ್ತು.

ಕೊನೆಗೂ ಧೈರ್ಯ ಮಾಡಿದ ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ಪ್ರಭು ಅವರು ” ಹರಿಯಣ್ಣ ಸ್ವಲ್ಪ ಸಮಾಧಾನ ಮಾಡಿಕೊಳ್ಳಿ. ಇನ್ನು ಟಿಕೆಟ್ ಘೋಷಣೆಯಾಗಿಲ್ಲ , ಅಂವ ಅರ್ಜಿ ಹಾಕಿದ್ದಾನೆ ಅಷ್ಟೇ. ನಮ್ ಜಿಲ್ಲಾ ಪ್ರೆಸಿಡೆಂಟ್ ಏನೋ ಅವ್ನ್ ಹೆಸರನ್ನು ನೊಮಿನಟ್ ಮಾಡಿದ್ದಾರೆ ಅಷ್ಟೇ. ಅದೇ ಫೈನಲ್ ಅಲ್ಲಾ. ಈಗಾಗ್ಲೇ ಗುರುರಾಜ ಹೊಸಳ್ಳಿ ಹತ್ರ ಮಾತಾಡಿದ್ದೀರಲ್ಲ. ಅವರ್ ಹೈಕಮಾಂಡ್ ಹತ್ರ ಮಾತಾಡ್ತಾರೆ. ಅವ್ರ್ ಮಾತಿಗೆ ಯಾರು ಇಲ್ಲ ಅನ್ನೋಲ್ಲ ಬಿಡಿ. ಒಂದು ವೇಳೆ ಎಲ್ಲವೂ ಕೈಮೀರಿದ್ರೆ , ನಾವು ರಾಜಧಾನಿಗೆ ಹೋಗಿ ಪಾರ್ಟಿ ಆಫೀಸ್ ಮುಂದೆ ಗಲಾಟೆ ಮಾಡೋಣ , ನಾವ್ ಇರೋತನಕ ಅದ್ಹೇಗೆ ನಿಮ್ಮನ್ನು ಬಿಟ್ಟು ಬೇರೆ ಯಾರಿಗೆ ಹೇಗೆ ಟಿಕೆಟ್ ಕೊಡ್ತಾರೆ ನೋಡೇ ಬಿಡೋಣ ” ಒಂದಷ್ಟು ಧೈರ್ಯ ತುಂಬುವ ಪ್ರಯತ್ನ ಮಾಡಿದರು. ಪ್ರಭುಗಳ ಮಾತಿಗೆ ಅಲ್ಲಿ ಸೇರಿದ್ದ ಇನ್ನೂರಕ್ಕೂ ಹೆಚ್ಚು ಜನ ಧ್ವನಿಗೂಡಿಸಿ ನಾವಿದ್ದೇವೆ ಎಂಬಂತೆ ಇಲ್ಲಿ ತನಕ ಬಿಗಿಹಿಡಿದಿದ್ದ ಉಸಿರನ್ನು ಹೊರ ಹಾಕಿ ತಲೆಯಾಡಿಸಿದ್ದರು.


ಹೌದು, ರಾಜ್ಯಾದ್ಯಂತ ವಿಧಾನಸಭಾ ಚುನಾವಣೆಯ ರಂಗೇರಿದೆ. ಎಲ್ಲ ಪಕ್ಷಗಳು ಟಿಕೆಟ್ ಹಂಚಿಕೆಯ ಭರಾಟೆಯಲ್ಲಿ ಮುಳುಗಿ ನರಳಾಡುತ್ತಿವೆ. ರಾಜ್ಯಾದ್ಯಂತ ರಾಜಕೀಯ ಪಕ್ಷಗಳ ಕಾರ್ಯಕರ್ತರಲ್ಲಿ ಹಬ್ಬದ ಸಂಭ್ರಮ ಕುಣಿದಾಡತೊಡಗಿದೆ. ಈ ಹಿಂದೆ ನಿರ್ದಾರವಾದಂತೆ ನರಹರಿ ಓಳಬೈಲು ಸಹ ಕುಂದವಾಡಿ ವಿಧಾನಸಭಾ ಕ್ಷೇತ್ರದಿಂದ ಜನಹಿತ ಪಕ್ಷದಿಂದ ಚುನಾವಣೆಗೆ ನಿಲ್ಲಲು ಸಂಪೂರ್ಣ ಸಜ್ಜಾಗಿದ್ದರು. ಎದುರಾಳಿ ಪ್ರಜಾತಂತ್ರ ಪಕ್ಷದ ಹಾಲಿ ಶಾಸಕ ಹರಿದಾಸ ಸುವರ್ಣಮಕ್ಕಿ ವಿರುದ್ಧ ಗೆಲ್ಲುವ ಎಲ್ಲಾ ಲಕ್ಷಣಗಳು ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಮೂಡಿದ್ದವು. ಕಳೆದ ಐದು ವರ್ಷ ಪ್ರಜಾತಂತ್ರ ಪಕ್ಷದ ಆಡಳಿತ ಮತ್ತು ಅವರದ್ದೇ ಪಕ್ಷದ ಶಾಸಕರ ಕಾರ್ಯವೈಖರಿ ಬಗ್ಗೆ ಜನಕ್ಕೆ ವೈರಾಗ್ಯ ಮೂಡಿತ್ತು. ಕಳೆದ ಚುನಾವಣೆಯಲ್ಲಿ ಜನಹಿತ ಪಕ್ಷದ ಗುರುರಾಜ್ ಹೊಸಳ್ಳಿಯನ್ನು ಸೋಲಿಸಿದ ಮೇಲೆ ಸುವರ್ಣಮಕ್ಕಿ ಕ್ಷೇತ್ರದಲ್ಲಿ ಕಾಣಿಸಿಕೊಂಡಿದೆ ಕಡಿಮೆ. ಸತತ ಮೂರೂ ಬಾರಿ ಶಾಸಕರಾಗಿದ್ದ ಹೊಸಳ್ಳಿಯವರು ನಾಲ್ಕನೇ ಬಾರಿ ಚುನಾವಣೆಯಲ್ಲಿ ಸೋತಾಗ ” ನಾನಿನ್ನು ಚುನಾವಣೆಗೆ ನಿಲ್ಲೋಲ್ಲ ” ಅಂದು ರಾಜಕೀಯ ನಿವೃತ್ತಿ ಘೋಷಿಸಿದ್ದರು. ರಾಜ್ಯದಲ್ಲಿ ಸತತ ಎರಡು ಅವಧಿಗೆ ಅಧಿಕಾರ ನೆಡೆಸಿದ್ದ ಜನಹಿತ ಪಕ್ಷ ಕಳೆದ ಚುನಾವಣೆಯಲ್ಲಿ ಅಕ್ಷರಶ: ನೆಲಕಚ್ಚಿತ್ತು. ಮುಖ್ಯಮಂತ್ರಿ ಸೇರಿ ಪಕ್ಷದ ದೊಡ್ಡ ದೊಡ್ಡ ನಾಯಕರೆಲ್ಲ ಸೋತಿದ್ದರು. ರಾಜ್ಯಾದ್ಯಂತ ಪಕ್ಷ ಸಂಪೂರ್ಣ ಅಧ:ಪತನಗೊಂಡಿತ್ತು. ಕುಂದವಾಡಿ ಕ್ಷೇತ್ರವೂ ಸೇರಿದಂತೆ ವಿಜಯದುರ್ಗ ಜಿಲ್ಲೆಯ ಎಲ್ಲಾ ಎಂಟು ಕ್ಷೇತ್ರಗಳಲ್ಲೂ ಜನಹಿತ ಪಕ್ಷ ಇನ್ನಿಲ್ಲದಂತೆ ಸೋತು ಸುಣ್ಣವಾಗಿತ್ತು.

ವಯಸ್ಸು ಎಪ್ಪತ್ತು ದಾಟಿದ್ದ ಗುರುರಾಜ ಹೊಸಳ್ಳಿ ರಾಜಕೀಯ ನಿವೃತ್ತಿ ಘೋಷಿಸಿದಾಗ ಕ್ಷೇತ್ರಕ್ಕೆ ಮುಂದ್ಯಾರು ಅನ್ನುವ ಪ್ರಶ್ನೆಗೆ ಸಿಕ್ಕ ಉತ್ತರವೇ ನರಹರಿ ಒಳಬೈಲು. ಹೊಸಳ್ಳಿಯವರೆ ತಮ್ಮ ನಿವೃತ್ತಿ ಘೋಷಣೆಯ ಸಮಯದಲ್ಲಿ ಇಷ್ಟು ಕಾಲ ತಮ್ಮ ಬಲಗೈ ಬಂಟನಂತಿದ್ದ ಒಳಬೈಲು ಅವರನ್ನ ತನ್ನ ಉತ್ತರಾಧಿಕಾರಿ ಎಂದು ಘೋಷಿಸಿದ್ದರು. ಒಳಬೈಲು ಅವರ ಆಯ್ಕೆಗೆ ಯಾರದ್ದು ತಕರಾರು ಇರಲಿಲ್ಲ. ಯಾಕೆಂದರೆ ಅವರು ಆವಾಗಲೇ ಒಬ್ಬ ಸಮರ್ಥ ಸಂಘಟಕ ಮತ್ತು ನಾಯಕ ಅನ್ನಿಸಿಕೊಡಿದ್ದರು. ಯಾವಾಗ ತಾನು ಪಕ್ಷದ ಮುಂದಿನ ಎಮ್ಮೆಲ್ಲೆ ಅಭ್ಯರ್ಥಿ ಅಂತ ನಿರ್ಧಾರವಾಯಿತೋ ಆ ಕ್ಷಣಕ್ಕೆ ಕುಂದವಾಡಿಯ ಜನಹಿತ ಪಕ್ಷದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು , ತನ್ನ ಸ್ವಂತ ವ್ಯವಹಾರವನ್ನು ಅಣ್ಣನಿಗೆ ವಹಿಸಿ , ತಾವು ಸಂಪೂರ್ಣವಾಗಿ ಬಿದ್ದುಹೋಗಿರುವ ಪಕ್ಷ ಕಟ್ಟಲು ಎದ್ದುನಿಂತರು. ಮುಂದಿನ ಐದು ವರ್ಷ ನರಹರಿ ಒಂದು ಕ್ಷಣ ನಿಲ್ಲಲಿಲ್ಲ , ಕಾಲಿಗೆ ಚಕ್ರ ಕಟ್ಟಿಕೊಂಡು ಹಳ್ಳಿ ಹಳ್ಳಿ , ಮನೆ ಮನೆ ಸುತ್ತಿದರು. ನರಹರಿ ಗೊತ್ತಿಲ್ಲ ಅಂತ ಯಾರು ಅನ್ನದ ಮಟ್ಟಿಗೆ ಎಲ್ಲರೊಂದಿಗೂ ಬೆರೆತರು. ಕಾರ್ಯಕತರ ಪಾಲಿಗೆ ಪ್ರೀತಿಯ ಹರಿಯಣ್ಣ ಆದರು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಾನೇ ಸೂಚಿಸಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬಂದರು. ಕುಂದವಾಡಿಯ ತಾಲೂಕ್ ಪಂಚಾಯತ್ ಹತ್ತು ವರ್ಷದ ನಂತರ ಜನಹಿತ ಪಕ್ಷದ ಪಾಲಾಯಿತು. ಜಿಲ್ಲಾ ಪಂಚಾಯಿತ್ ಗೆ ತಾಲೂಕಿನ ಏಳರಲ್ಲಿ ಐದು ಸ್ಥಾನಗಳನ್ನು ಜನಹಿತ ಗೆದ್ದಿತ್ತು. ಮುಕ್ಕಾಲು ಭಾಗದಷ್ಟು ಗ್ರಾಮ ಪಂಚಾಯತನ ಅಧಿಕಾರವನ್ನು ತಮ್ಮ ಬೆಂಬಲಿಗರ ಕೈಗಿಡುವುದರಲ್ಲಿ ಒಳಬೈಲು ಯಶಕಂಡಿದ್ದರು. ಈ ಎಲ್ಲ ಸಾಧನೆಯಿಂದ ಅವರನ್ನು ಕುಂದವಾಡಿಯ ಮುಂದಿನ ಶಾಸಕ ಅಂತಾನೆ ಜನ ಮತ್ತು ಮಾಧ್ಯಮಗಳು ಬಿಂಬಿಸಿದ್ದವು. ಚುನಾವಣೆ ಘೋಷಣೆಯಾಗುತ್ತಿದ್ದಂತೆ ನರಹರಿ ಪ್ರಚಾರವನ್ನು ಆಗಲೇ ಆರಂಭಿಸಿ ಬಿಟ್ಟಿದ್ದರು.. ಆದರೆ ಪಕ್ಷದ ಜಿಲ್ಲಾಧ್ಯಕ್ಷರು ಹೈಕಮಾಂಡಿಗೆ ಸಲ್ಲಿಸಿದ್ದ ಜಿಲ್ಲೆಯ ಎಂಟು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ಒಳಬೈಲು ಅವರ ಹೆಸರು ನಾಪತ್ತೆಯಾಗಿ, ಸದ್ದಿಲ್ಲದೇ ದಯಾನಂದ ರಾವ್ ಹೆಸರು ಪ್ರತ್ಯಕ್ಷವಾಗಿತ್ತು.

ದಯಾನಂದ ರಾವ್ ಮೂಲತ: ಕುಂದವಾಡಿಯವರೆ. ಇವರ ತಂದೆ ಜಿಲ್ಲಾ ಪರಿಷತ್ ಸದಸ್ಯರಾಗಿದ್ದರು. ಓದು ಮುಗಿಸಿ ರಾಜಧಾನಿ ಸೇರಿದ್ದ ರಾವ್ ಅಲ್ಲೇ ಸ್ವಲ್ಪ ಕಾಲ ನೌಕರಿ ಮಾಡಿ , ಆ ಮೇಲೆ ತನ್ನದೇ ಆದ ಒಂದು ಸಣ್ಣ ಟ್ರೇಡಿಂಗ್ ಬಿಸಿನೆಸ್ ಆರಂಭಿಸಿದ್ದರು. ನಿಧಾನವಾಗಿ ಚಿಗುರೊಡೆದ ಅವರ ವ್ಯವಹಾರ ಇಂದು ದೊಡ್ಡ ಉದ್ಯಮವಾಗಿ ಬೆಳೆದುನಿಂತಿದೆ. ಹರಿದು ಬಂದ ಸಂಪತ್ತು , ಒಂದಷ್ಟು ಹೆಸರು ಗಳಿಸುವ ಕನಸು ಬಿತ್ತಿತ್ತು. ಕನಸಿನ ಬೆನ್ನು ಹತ್ತಿದ ದಯಾನಂದ ರಾವ್ ಜನಹಿತ ಪಕ್ಷದ ಸೇವಾದಳವನ್ನು ಸೇರಿಕೊಂಡರು ಮತ್ತು ಅದಕ್ಕೆ ಒಂದಷ್ಟು ಭಾರಿ ಅನ್ನಿಸಬಹುದಾದ ದೇಣಿಗೆಯನ್ನು ನೀಡಿದ್ದರು ಮತ್ತು ಈ ಮೂಲಕ ಪಕ್ಷದ ಹೈಕಮಾಂಡಿಗೆ ಒಂದಷ್ಟು ಹತ್ತಿರ ಕೂಡ ಆಗಿದ್ದರು.. ಕಳೆದ ಚುನಾವಣೆಯಲ್ಲಿ ಖರ್ಚಿಗೆಂದು ಗುರುರಾಜ್ ಹೊಸಳ್ಳಿಯವರಿಗೆ ಒಂದಷ್ಟು ಮೊತ್ತವನ್ನು ನೀಡಿದ್ದರಿಂದ ಕುಂದವಾಡಿಯ ಪಕ್ಷದ ಕಾರ್ಯಕರ್ತರಿಗೆ ಇವರ ಮುಖ ಪರಿಚಯವಾಗಿತ್ತಷ್ಟೆ.


“ಇಲ್ಲ ನರಹರಿ, ದಯಾನಂದ ಒಪ್ಪತಾ ಇಲ್ಲ. ಟಿಕೆಟ್ ಕೊಟ್ಟಿಲ್ಲ ಅಂದ್ರೆ ಪಕ್ಷೇತರನಾಗಿ ನಿಲ್ತಿನಿ ಅಂತಿದ್ದಾನೆ. ಹೈಕಮಾಂಡು ಯಾಕೋ ಅವ್ನ ಕಡೆನೇ ಇದ್ದಂತಿದೆ. ಎರಡು ದಿನ ನಾನ್ ಮಾಡಿದ ಪ್ರಯತ್ನ ಯಾಕೋ ಕೈಗೂಡುತ್ತೆ ಅನ್ನಿಸ್ತಾ ಇಲ್ಲ.” ರಾಜಾಧಾನಿಯಿಂದ ಗುರುರಾಜ್ ಹೊಸಳ್ಳಿ ಕರೆ ಮಾಡಿ ತಿಳಿಸಿದ ವಿಷಯ ನರಹರಿ ಪಾಲಿಗೆ ಬಿಸಿ ತುಪ್ಪದಂತಿತ್ತು.

“ಅಲ್ಲ ಅಣ್ಣ. ಹಾಂಗಾರೆ ಪಕ್ಷಕ್ಕಾಗಿ ಕೆಲಸ ಮಾಡೋರಿಗೆ ಬೆಲೆನೇ ಇಲ್ಲವ ?. ಬರೀ ದುಡ್ಡಿದ್ರೆ ಸಾಕಾ. ನಿಮ್ಮ ಮಾತನ್ನು ಹೈಕಮಾಂಡ್ ಕೇಳೋಲ್ಲ ಅಂದ್ರೆ ಹೆಂಗೆ. ನಮಗೆಲ್ಲಒಂದು ತೊಟ್ಟು ವಿಷ ಕೊಟ್ಟು ಬಿಡಿ” ಅನ್ನುವಷ್ಟರಲ್ಲಿ ನರಹರಿಗೆ ದುಃಖ ಕಟ್ಟೆಯೊಡೆದು ಅಳುವಿನ ಪ್ರವಾಹವಾಯಿತು.
“ಹತಾಶನಾಗಬೇಡ ಹರಿ. ಒಂದ್ ಕೆಲಸ ಮಾಡು. ಈಗ್ಲೇ ರಾಜಧಾನಿಗೆ ಬಂದುಬಿಡು. ನಿಮ್ಮಿಬ್ಬರನ್ನು ರಾಜ್ಯಾಧ್ಯಕ್ಷರ ಹತ್ರ ಕರ್ಕೊಂಡು ಹೋಗ್ತೀನಿ. ಕೊನೆ ಪ್ರಯತ್ನ ಮಾಡೋಣ , ದೇವರಿದ್ದಾನೆ, ಕೈಬಿಡೋಲ್ಲ. ” ಹೊಸಳ್ಳಿಯವರ ಸಮಾಧಾನದ ಮಾತು ನರಹರಿಗೆ ಸಹ್ಯವಾಗಿತ್ತು. ಕಮರಿ ಹೋಗಬಹುದೇನೋ ಅನ್ನಿಸಿದ್ದ ಬಹುದಿನದ ಆಸೆಗೆ ಮತ್ತೆ ಜೀವಬಂದಂತಾಗಿ ನರಹರಿ ಒಲಬೈಲು ಮನೆದೇವರಿಗೆ ಪೂಜೆ ಮಾಡಿಸಿ ಕಾರನ್ನೇರಿ ರಾಜಧಾನಿಯತ್ತ ಹೊರಟರು.


ನಾಲ್ಕು ದಿನ ಅವ್ಯಾಹತ ವಾಗಿ ಸುರಿದಿದ್ದ ಬಿರು ಬೇಸಿಗೆ ಮಳೆ ಚುನಾವಣೆಯ ಅಬ್ಬರಕ್ಕೆ ಹೆದರಿ ಕಾಲು ಕಿತ್ತಿತ್ತು. ಮಳೆರಾಯನ ನಿರ್ಗಮನದಿಂದ ಉಲ್ಲಾಸಿತನಾದ ಸೂರ್ಯ ಇನ್ನಷ್ಟು ವ್ಯಗ್ರನಾಗಿದ್ದ. ಸುಡುವ ಬಿಸಿಲು ಮತ್ತು ಸಮುದ್ರದ ಕಾದ ನೀರಿನ ಸಹವಾಸದಿಂದ ಬಿಸಿಯಾದ ಗಾಳಿ ಊರನ್ನೇ ಓವೊನ್ ಆಗಿಸಿತ್ತು. ಇಂತಹ ಬಿಸಿಯ ವಾತಾವರಣಕ್ಕೆ ಚುನಾವನ್ನೇ ಇನ್ನಷ್ಟು ಕಾವು ನೀಡಿತ್ತು, ನಿಗದಿಯಾದಂತೆ ರಾಜ್ಯಾದ್ಯಂತ ನಿರ್ವಿಘ್ನವಾಗಿ ಚುನಾವಣೆ ನೆಡೆಯಿತು. ನಿರೀಕ್ಷೆಯಂತೆ ಜನಹಿತ ಪಕ್ಷಕ್ಕೆ ಜನ ಅಧಿಕಾರ ನೀಡಿದ್ದು, ಪಕ್ಷದ ರಾಜ್ಯಾಧ್ಯಕ್ಷರೇ ಮುಖ್ಯಮತ್ರಿ ಪಟ್ಟ ಏರಿದರು. ವಿಜಯದುರ್ಗಾ ಜಿಲ್ಲೆಯ ಎಂಟು ಸ್ಥಾನಗಳ ಪೈಕಿ ಕುಂದವಾದಿಯೂ ಸೇರಿದಂತೆ ಏಳರಲ್ಲಿ ಜನಹಿತ ಪಕ್ಷ ವಿಜಯ ಸಾಧಿಸಿದ್ದು, ಕುಂದವಾಡಿ ಬಿಟ್ಟು ಜಿಲ್ಲೆಯ ಬೇರೆ ಕ್ಷೇತ್ರ ಗಳಲ್ಲಿ ಗೆದ್ದವರೆಲ್ಲ ಹೊಸಬರೇ ಆಗಿದ್ದರಿಂದ ಮೊದಲ ಬಾರಿಗೆ ಕುಂಡವಾದಿಗೆ ಮಂತ್ರಿ ಸ್ಥಾನವು ಒಲಿಯಿತು. ನಾಲ್ಕನೇ ಬಾರಿ ವಿಧಾನಸಭೆ ಪ್ರವೇಶಿಸಿದ್ದ ಗುರುರಾಜ ಹೊಸಳ್ಳಿ ಮೊದಲ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲೇ ಮಂತ್ರಿಯಾದರು. ಸಾರಿಗೆ ಖಾತೆಯ ಜೊತೆಗೆ ಹೆಚ್ಚುವರಿಯಾಗಿ ವಸತಿ ಖಾತೆಯನ್ನೂ ಬಗಲಿಗೇರಿಸಿಕೊಂಡರು. ಮೊದಲ ಬಾರಿ ಮಂತ್ರಿ ಸ್ಥಾನ ಪಡೆದ ಹುರುಪಿನಲ್ಲಿ ಜನಹಿತ ಪಕ್ಷರ ಕಾರ್ಯಕರ್ತರು ಕುಂದವಾಡಿಯ ತುಂಬೆಲ್ಲಾ ಹರ್ಷಾಚರಣೆಯ ಹಬ್ಬದ ಮೆರಗು ಮೂಡಿಸಿದ್ದರು. ಪ್ರತಿದಿನ ದೇವಸ್ಥಾನದ ರಥಬೀದಿಯನ್ನು ಗುಡಿಸುವವ , ಜಾತ್ರೆಯ ಸಮಯದಲ್ಲಿ ಎಲ್ಲೊ ಕಳೆದು ಹೋಗಿ, ಜಾತ್ರೆ ಮುಗಿದು ತೇರು ಕಳಿಚಿದ ಮೇಲೆ ಮತ್ತೆ ಪೊರಕೆಯೊಡನೆ ಪ್ರತ್ಯಕ್ಷನಾಗುವಂತೆ , ಅಧಿಕಾರ ಸಿಕ್ಕ ಸಂಭ್ರಮದ ಭರಾಟೆಯಲ್ಲಿ ಕಾಣೆಯಾಗಿದ್ದ ನರಹರಿ ಒಳಬೈಲು, ಈಗ ಸಂಭ್ರಮದ ಜಾತ್ರೆ ಮುಗಿದ ಮೇಲೆ ಕಣ್ಣಿಗೆ ಬೀಳಲಾರಂಭಿಸಿದ್ದರು. ನಿನ್ನೆ ನೂತನ ಸಚಿವರಿಗೆ ಸನ್ಮಾನ ಮುಗಿದ ಮೇಲೆ ಬೀಕೋ ಅನ್ನುತ್ತಿದ್ದ ಪಕ್ಷದ ಕಚೇರಿಯಲ್ಲಿ , ಕುಳಿತಿದ್ದ ಅವರು ಅಕ್ಷರಶ: ಏಕಾಂಗಿಯಾಗಿದ್ದರು. ನಿರೀಕ್ಷಿಸದ ರೀತಿಯಲ್ಲಿ ಅವರ ರಾಜಕೀಯ ಬದುಕು ಪಾತಾಳಕ್ಕೆ ಕುಸಿದು ಹೋಗಿತ್ತು. ರಾಜಕೀಯ ಒಳಪಟ್ಟುಗಳನ್ನು ಸರಿಯಾಗಿ ಅರಿಯದ , ಎಲ್ಲರನ್ನು , ಎಲ್ಲವನ್ನು ಪೂರ್ವಾಗ್ರಪೀಡಿತರಾಗದೆ ನಂಬುವ ಅವರ ವ್ಯಕ್ತಿತ್ವವೇ ಇಂದು ರಾಜಕೀಯವಾಗಿ ಅವರನ್ನು ಹಿಮ್ಮೆಟ್ಟಿತ್ತು.


ಅಂದು ರಾಜಧಾನಿಯಲ್ಲಿ ಯಾರು ನೀರೀಕ್ಷಿಸದ ರೀತಿಯಲ್ಲಿ ಘಟನೆ ನೆಡೆದು ಹೋಯಿತು. ಪಕ್ಷದ ರಾಜ್ಯಾಧ್ಯಕ್ಷರ ಮುಂದೆ ಹೊಸಳ್ಳಿಯವರ ಸಮಕ್ಷಮದಲ್ಲಿ ನೆಡೆದ ಸಂಧಾನದಲ್ಲಿ ದಯಾನಂದ ರಾವ್ ಹಿಡಿದ ಪಟ್ಟನ್ನು ಬಿಡಲೇ ಇಲ್ಲ. “ನಾನು ಪಕ್ಷಕ್ಕಾಗಿ ಕೋಟಿಗಟ್ಟಲೆ ಖರ್ಚುಮಾಡಿದ್ದೇನೆ , ನನಗೆ ಕುಂದವಾಡಿಯ ಟಿಕೆಟ್ ಬೇಕೇ ಬೇಕು.” ಎಂದು ಹಠ ಹಿಡಿದಿದ್ದ. ಮೊದಲಿಗೆ ಯಾರ ಮಾತಿಗೂ ಜಗ್ಗದ ಆತ ಕೊನೆಗೊಂದು ಬಾಂಬ್ ಹಾಕಿ ” ಒಂದು ವೇಳೆ ಗುರುರಾಜ ಹೊಸಳ್ಳಿಯವರು ಕ್ಯಾಂಡಿಡೇಟ್ ಆಗುವುದಾದರೆ ನನಗೆ ಅಡ್ಡಿಯಿಲ್ಲ” ಎಂದುಬಿಟ್ಟಿದ್ದ. ಈ ಒಂದು ಮಾತು ಕುಂದವಾಡಿಯ ಇಡೀ ರಾಜಕೀಯದ ಚಿತ್ರಣವನ್ನೇ ತಲೆಕೆಳಗಾಗಿಸಿತ್ತು. “ಏಯ್ ದಯಾನಂದ ಏನು ಹೇಳ್ತಾ ಇದ್ದೀಯ , ನಾನ್ ನಿಲ್ಲೋದ. ಸಾಧ್ಯನೇ ಇಲ್ಲ , ನನಗೆ ವಯಸ್ಸಾಗಿದೆ, ಓಡಾಡ್ಲಿಕ್ಕೆ ಆಗೋಲ್ಲ ಅದಲ್ಲದೆ ಚುನಾವಣೆಗೆ ಖರ್ಚುಮಾಡಲು ದುಡ್ಡು ಸಹ ಇಲ್ಲ” ಹೊಸಳ್ಳಿಯವರ ಅರೆಮನಸ್ಸಿನ ಹಿಂಜರಿಕೆಯ ಮಾತಿಗೆ ಬ್ರೇಕ್ ಹಾಕಿದ ರಾಜ್ಯಾಧ್ಯಕ್ಷರು ” ಅಲ್ಲ ಹೊಸಳ್ಳಿಯವರೇ , ನರಹರಿ ಮತ್ತು ದಯಾನಂದರಂತಹ ಜೋಡೆತ್ತುಗಳು ಎಡಬಲದಲ್ಲಿ ಇರುವವಾಗ ಯಾಕೆ ಭಯ. ನಿಮಗೇನೇ ಟಿಕೆಟ್ , ನೀವೇ ನಿಂತು ಬಿಡಿ , ಇಲ್ಲಿಗೆ ಸಮಸ್ಸೆ ಪರಿಹಾರವಾಯ್ತಲ್ಲ ” ಅಂತ ತೀರ್ಪು ನೀಡಿಯೇ ಬಿಟ್ಟಿದ್ದರು.. ಅಲ್ಲಿಗೆ ಸನ್ಯಾಸ ದೀಕ್ಷೆ ಪಡೆದಿದ್ದ ಗುರುರಾಜ ಹೊಸಳ್ಳಿಗೆ ದೇವರು ಮತ್ತೆ ಹಸೆಮಣೆ ಏರುವ ಭಾಗ್ಯ ಕರುಣಿಸಿದ್ದ. ತನಗೆ ಟಿಕೆಟ್ ಸಿಗಬಹುದೆಂಬ ಆಸೆಯಲ್ಲಿ ರಾಜಧಾನಿಗೆ ಬಂದಿದ್ದ ನರಹರಿ ಒಲಬೈಲು ಬರಿಗೈಯಲ್ಲಿ ಊರಿಗೆ ಮರಳುವಂತಾಗಿತ್ತು. ಈಗ ಅದೆಲ್ಲ ಮುಗಿದ ಇತಿಹಾಸ. ಗುರುರಾಜ ಹೊಸಳ್ಳಿ ಕಳೆದ ಐದು ವರ್ಷದಲ್ಲಿ ನರಹರಿ ಕಷ್ಟಪಟ್ಟು ಕಟ್ಟಿದ ಮನೆಗೆ ನಿರಾಯಾಸವಾಗಿ ಯಜಮಾನನಾಗಿದ್ದ.

“ಅಲ್ಲ ಅಣ್ಣ ಆ ಮುದುಕ ಹೊಸಳ್ಳಿ, ದಯಾನಂದ ರಾವ್ ಅನ್ನೋ ಕುದುರೆನ ಮುಂದೆ ಬಿಟ್ಟು, ನಿಮ್ಮನ್ನು ಒಳ್ಳೆ ದಾಳ ಮಾಡಿಕೊಂಡು ಮಂತ್ರಿ ಆಗ್ಬಿಟ್ಟನಲ್ಲ. ಕಳೆದ ಐದು ವರ್ಷ ಕಷ್ಟ ಪಟ್ಟು ಪಕ್ಷ ಕಟ್ಟಿದ್ದು ನೀವು. ಅಧಿಕಾರ ಸಿಕ್ಕಿರೋದು ಅವ್ನಿಗೆ. ” ಒಂಟಿಯಾಗಿ ಕೂತಿದ್ದ ನರಹರಿಗೆ ಆಗಷ್ಟೇ ಪಕ್ಷದ ಕಚೇರಿಗೆ ಬಂದಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸುರೇಂದ್ರ ನಾಯಕ್ ಸಮಾಧಾನ ಪಡಿಸುವ ಯತ್ನಕ್ಕೆ ಕೈ ಹಾಕಿದರು.

“ನಾಯಕರೇ ಇದೆಲ್ಲ ರಾಜಕೀಯದ ಭಾಗ. ನಾವು ನೀವೆಲ್ಲ ಇಲ್ಲಿ ಇನ್ನೂ ಪ್ರೈಮರಿ ಸ್ಟುಡೆಂಟ್ಸ್ಕ್ ಅಷ್ಟೇ , ಅಧಿಕಾರ ಯಾರಿಗೆ ಕಹಿ ಸ್ವಾಮಿ. ಅದಕ್ಕೆ ವಯಸ್ಸು ಅಂತ ಏನಾದರೂ ಇದೆಯಾ ? ನಿಮಗೆ ಪೂರ್ತಿ ವಿಷಯ ಗೊತ್ತಿಲ್ಲ ಸ್ವಾಮಿ, ಹೊಸಳ್ಳಿ ನನ್ನನು ಮಾತ್ರ ದಾಳ ಮಾಡ್ಕೊಂಡಿಲ್ಲ, ದಯಾನಂದನನ್ನು ಸಹ ದಾಳ ಮಾಡಿ ಕೊಂಡಿದ್ದಾನೆ. ಅವನ ಕೈಲಿ ಟಿಕೆಟ್ ಗಾಗಿ ಅರ್ಜಿ ಕಾಕ್ಸಿದ್ದು ಈ ಮುದುಕನೇ , ಆಮೇಲೆ ಜಿಲ್ಲಾಧ್ಯಕ್ಷರ ಪಟ್ಟಿಯಲ್ಲಿ ದಯಾನಂದನ ಹೆಸರು ಹಾಕ್ಸಿದ್ದುಈ ಹೊಸಳ್ಳಿಯೇ , ಅದಲ್ಲದೇನೇ ರಾಜ್ಯಾಧ್ಯಕ್ಷರ ಮುಂದೆ ಹೊಸಳ್ಳಿ ನಿಲ್ಲೊದಾದರೆ ನನ್ನ ಅಡ್ಡಿ ಇಲ್ಲ ಅಂತ ದಯಾನಂದ ಬಾಯಿಂದ ಸಹ ಹೇಳ್ಸಿದ್ದು ಸಹ ಇವನೇ. ಹೆಂಗಿದ್ರು ಪಕ್ಷ ಅಧಿಕಾರಕ್ಕೆ ಬರುತ್ತೆ, ನಾನು ಗೆದ್ರೆ ಮಂತ್ರಿ ಆಗ್ತೀನಿ, ನೀನು ಚುನಾವಣೆಯಲ್ಲಿ ನನ್ನ ಖರ್ಚುವೆಚ್ಚ ನೋಡ್ಕೋ, ಆಮೇಲೆ ಹೈಕಮಾಂಡಿಗೆ ಹೇಳಿ ನಿನ್ನ ಎಮ್ಮೆಲ್ಸಿ ಮಾಡ್ತೀನಿ ಅಂತ ದಯಾನಂದ ರಾವ್ ಗೆ ಹೇಳಿ ಅವನ ಕೈಲಿ ತನ್ನ ಚುನಾವಣಾ ಖರ್ಚು ಮಾಡ್ಸ್ಕೊಂಡ್ ಬಿಟ್ಟ ಈ ಹೊಸಳ್ಳಿ. ಈಗ ನೋಡಿ ಪಾಪ ಆ ದಯಾನಂದನಿಗೆ ಎಮ್ಮೆಲ್ಸಿ ಪೋಸ್ಟು ಇಲ್ಲದಂಗಾಗಿದೆ. ವಿಜಯದುರ್ಗದಲ್ಲಿ ಪಕ್ಷ ದಾಖಲೆಯ ಸ್ಥಾನ ಗೆದ್ದಿತ್ತಲ್ಲ , ಅದಕ್ಕೆ ಜಿಲ್ಲಾದ್ಯಕ್ಷರನ್ನೇ ಎಮ್ಮೆಲ್ಸಿ ಮಾಡ್ತಾ ಇದ್ದರಂತೆ. ರಾಜಕೀಯ ಅಂದ್ರೆ ಹಿಂಗೇ ಕಣ್ರೀ ” ನರಹರಿ ಒಲಬೈಲು ಅವರ ವಿಷಾದ ನುಡಿಗಳಿಂದ ಸುರೇಂದ್ರ ನಾಯಕರಿಗೆ ಪ್ರಸಕ್ತ ರಾಜಕೀಯ ನಗ್ನ ದರ್ಶನವಾಗಿತ್ತು. ಎದುರಿನ ಗೋಡೆಯಲ್ಲಿ ತೂಗುಹಾಕಿದ್ದ ದೂಳು ಹಿಡಿದಿದ್ದ ಫೋಟೋದಲ್ಲಿದ್ದ ಮಹಾತ್ಮಾ ಗಾಂಧಿ ಈ ಎಲ್ಲ ಮಾತುಗಳನ್ನು ಕೇಳಿಸಿಕೊಂಡು ನಸು ನಕ್ಕಂತ್ತಿತ್ತು. ಪಡುವಣದ ಕಡಲಲ್ಲಿ ಅರ್ಧಮುಗುಳಿದ ಸೂರ್ಯನ ಅಳಿದುಳಿದ ಕಿರಣಗಳು ಆ ಫೋಟೋವನ್ನು ಹಾಯ್ದು ನಗುವಿನ ರಂಗನ್ನು ಮತ್ತಷ್ಟು ಪ್ರಕಾಶಮಾನವಾಗಿಸಿತ್ತು…

ಸತೀಶ್ ಶೆಟ್ಟಿ ವಕ್ವಾಡಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Prethesh kumar
Prethesh kumar
4 years ago

Super political.. Story

ravi.palegar@gmail.com
ravi.palegar@gmail.com
4 years ago

Very good narration. Super’b sir.

Amar shetty
Amar shetty
4 years ago

Nice story….

3
0
Would love your thoughts, please comment.x
()
x