ಕಲೆ-ಸಂಸ್ಕೃತಿ

ದಾರಿ ತೋರುವ ದುರಂತನಾಯಕ: ಚೈತ್ರಾ ಎಸ್.ಪಿ.


ಅವನೆಂದರೆ ಥಟ್ಟನೆ ನೆನಪಾಗುವುದು ಹೆಸರು ದುರಂತನಾಯಕ. ಮಹಾಕಾವ್ಯದ ದುರಂತನಾಯಕ. ಅಸಹಾಯಕ ಪರಿಸ್ಥಿತಿಯಲ್ಲಿ ಸಿಕ್ಕಿ ಒದ್ದಾಡಿದ ನತದೃಷ್ಟ.ಅವಮಾನಗಳಲ್ಲಿ ಬೆಂದು ಮಿಂದೆದ್ದವ. ತಿರಸ್ಕಾರಗಳನ್ನೆ ಕಂಡವ. ಹುಟ್ಟಿದಾಗ ತಾಯಿಗೆ ಬೇಡವಾದ. ಗುರುಕುಲದಲ್ಲಿ ಗುರುಗಳಿಗೆ ಬೇಡವಾದ.ಸ್ವಯಂವರದಲ್ಲಿ ಮೆಚ್ಚಿದ ಹುಡುಗಿಗೆ ಬೇಡವಾದ. ಹೇಗೆ ಬದುಕಿರಬಹುದು ತನ್ನ ಬಾಳನ್ನು ? ಬೇಸರದಲ್ಲೇ ? ಖಿನ್ನತೆಯಲ್ಲೇ ? ಕಂಡಿರದ ತಂದೆ-ತಾಯಿಗಾಗಿ ಹಂಬಲಿಸಿದನೇ ? ಮಾಡಿದ ತಪ್ಪಿಗಾಗಿ ಪರಿತಪಿಸಿದನೇ ? ಬೆರಳು ತೋರಿಸಿದರೆಂದು ಮರುಗಿದನೇ ? ಜನ್ಮದತ್ತವಾಗಿ ಐಶ್ವರ್ಯ, ಕ್ಷಾತ್ರಪಂಥದ ಹೆಗ್ಗುರುತಾದ ಎದೆಗವಚಗಳನ್ನು ಹೊತ್ತು ಬಂದರೂ ಸೂತಪುತ್ರನೆಂಬ ಹಣೆಪಟ್ಟಿಯಿಂದ ಕಂಗೆಟ್ಟನೆ ? ಅಲ್ಲ, ಜನ್ಮರಹಸ್ಯವನ್ನರಸುತ್ತಾ ಪರಿತಪಿಸಿದನೇ ?

ಇಲ್ಲ, ಇರಲಿಲ್ಲ ಅವನೀಥರ. ತಿರಸ್ಕರಿಸಿದ ಪಾಂಚಾಲಿಯೇ ಮಾತ್ಸರ್ಯ ಹೊತ್ತು ಅವನತ್ತ ದೃಷ್ಟಿಸುವಂತೆ ಮಾಡಿದ. ಹುಟ್ಟುತ್ತಲೇ ರಕ್ತಗತವಾದ ಅವನ ಕ್ಷತ್ರೀಯತೆಯನ್ನು ಮೆರೆದ ಆ ೧೮ ದಿನಗಳ ಯುದ್ಧದಲ್ಲಿ. ತನ್ನ ಜೀವನದ ಗುರಿಯನ್ನು ಸುಯೋಧನನ ಬಳಿಯಲ್ಲಿ ಕಂಡುಕೊಂಡ ಅತಿರಥ. ಅವನನ್ನು ತನ್ನ ಸ್ನೇಹದ ಸೆಲೆಯಲ್ಲಿ ಬರಸೆಳೆದು ಜೀವವನ್ನೇ ತೆತ್ತ ಗೆಳೆಯ. ಗಾಢೀವಿಯಂತಹವನನ್ನೆ ಸ್ವಯಂವರದಲ್ಲಿ ಸೋಲಿಸಿದವ ತನ್ನ ಜೀವನದಲ್ಲಿ ಸೋತು ಗೆದ್ದ.ಹುಟ್ಟಿನಿಂದ ತಾನು ಹಂಬಲಿಸಿದ ತಾಯಿಯೇ ಎದುರು ಬಂದಾಗಲೂ ತನ್ನ ನಿರ್ಧಾರ ಬದಲಿಸದ ಗಟ್ಟಿಗ.  ಯುದ್ಧಭೂಮಿಯಲ್ಲಿಯೂ ತಾಯಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಗಂಡು . 

ತನ್ನ ಹಣೆಬರಹಕ್ಕೆ ಪರಿತಪಿಸದೆ ಸುಯೋಧನನ ಅನ್ನದ ಋಣವನ್ನು ತೀರಿಸಿದ. ತನಗೊಂದು ಬದುಕು, ವ್ಯಕ್ತಿತ್ವ, ಪ್ರೀತಿಯನ್ನು ಕೊಟ್ಟ ಕೌರವನಿಗಾಗಿ ’ಅದೇ ಕರ್ಣ’ನಾಗಿ ಉಳಿದ, ಹೌದು ! ಕೌರವನಿಂದ ಸಾಕಲ್ಪಟ್ಟ ಕರ್ಣ, ಕೌರವನಿಂದ ರಾಜ್ಯಭಾರ ಮಾಡಿದ ಕರ್ಣ, ಕೌರವನ ಆಪ್ತಮಿತ್ರ ಕರ್ಣ, ಕೌರವನನ್ನು ಆರಾಧಿಸುವ ಕರ್ಣ.ಎಂದಿಗೂ ಆತ ಬದಲಾಗಲಿಲ್ಲ. ಯಾವುದೇ ಆಮಿಶಕ್ಕೂ ಬಲಿಯಾಗಲಿಲ್ಲ. 

ಇಂತಹ  ಸೂರ್ಯಪುತ್ರ ಕೊನೆಯ ದಿನಗಳಲ್ಲಿ ಅದೆಷ್ಟು ವೇದನೆಯನ್ನುಭವಿಸಿದನೋ ! ಕೊನೆಯವರೆಗೂ ಪ್ರಶ್ನಾರ್ಥಕವಾಗಿದ್ದ ತನ್ನ ಜನ್ಮರಹಸ್ಯವನ್ನು ತಿಳಿಯಬಾರದಾಗಿದ್ದ ಕ್ಷಣಗಳಲ್ಲಿ ತಿಳಿದ. ಆ ದೇವೊತ್ತಮನ ಲೀಲಾ-ನಾಟಕದಲ್ಲಿ ಪಾತ್ರಧಾರಿಯಾದ. ತನ್ನ ಜೀವದ ಭಾಗವಾದ ಕರ್ಣಕುಂಡಲ-ಕವಚಗಳನ್ನು ದಾನಗೈದ ದಾನಶೂರ ಇಂದ್ರನ ಮೋಸದ ಜಾಲದಲ್ಲಿ ಸಿಲುಕಿದ. ಹೆತ್ತ ತಾಯಿಯ ಮಾತಿನಂತೆ ತನ್ನ ತಮ್ಮಂದಿರನ್ನು ಉಳಿಸಿದ ಕೌಂತೇಯ, ತನ್ನ ಪ್ರಾಣವನ್ನರ್ಪಿಸಿದ. ರಣವಿಕ್ರಮಿ ಅಭಿಮನ್ಯುವ ಕೊಂದ ಮೋಸದ ಜಾಲದಲ್ಲಿ ಭಾಗಿಯಾಗಿ, ಅವ ತನ್ನ ಮಗನೆಂದು ತಿಳಿದು ಅದೆಷ್ಟು ಮರುಗಿದನೋ ! ಹುಟ್ಟಾ ವಿರೋಧಿಯಾದ ಆ ಗಾಂಢೀವಿ ತನ್ನ ಸಹೋದರನೆಂದು ಅರಿತೂ ಅವನೊಂದಿಗೇ ಯುದ್ಧ ಮಾಡುವ ಆ ಅನಿವಾರ್ಯ ಪರಿಸ್ಥಿತಿಯಲ್ಲಿ ಸಿಲುಕಿ ಒದ್ದಾಡಿದ ಮಹಾರಥಿ. ಪರಶುರಾಮರಿಂದಲೇ ಶಹಬ್ಬಾಸ್ ಎನಿಸಿಕೊಂಡ ಈ ಶಿಷ್ಯ ಅವರಿಂದಲೇ ಶಾಪಕ್ಕೊಳಗಾದ, ಬ್ರಹ್ಮಾಸ್ತ್ರವನ್ನು ಪ್ರಯೋಗಿಸದಾದ. ಆದರೆ ವಿಜಯಧಾರಿಯಾದ. ವಸುಸೇನ ಆ ೧೮ ದಿನಗಳಲ್ಲಿ ವಿಜಯ ಕಾಣದಿರಬಹುದು, ಆದರೆ ಜೀವನದಲ್ಲಿ ನಿಜವಾದ ವಿಜಯಧಾರಿಯೇ.

ಓದಿದ ಸಾಲುಗಳು ನೆನಪಾಗುತ್ತಿವೆ, ಕುಂತಿಯ ಮೊದಲ ಮಗ 
             ಪಾಂಡವರ ಹಿರಿಯಣ್ಣ
             ಪರಶುರಾಮರ ಮೆಚ್ಚಿನ ಶಿಷ್ಯ
             ದುರ್ಯೋಧನನ ಆಪ್ತಮಿತ್ರ
             ಅರ್ಜುನನ ಪರಮ ಶತ್ರು
             ಭೀಷ್ಮರ ಕಣ್ಣಲ್ಲಿ ಸಿಡಿಮಿಡಿ
             ಭೀಮನ ಪಾಲಿನ ಅಸೂಯೆ
             ದ್ರೌಪದಿಯಂತಹ ದ್ರೌಪದಿಯ ಎದೆಯಲ್ಲೂ ಆಸೆಯ ತರಂಗ ಎಬ್ಬಿಸಿದ ಸುಂದರಾಂಗ, ಅಂಗರಾಜ, ರಾಧೇಯ ಆದರೆ…… 
             ಮಹಾಭಾರತದ ದುರಂತ ನಾಯಕ……
             ಮಹಾಭಾರತ ಮುಗಿದ ಮೇಲೂ ಕರ್ಣ ನೆನಪಾಗುತ್ತಾನೆ, ಪ್ರಾರ್ಥನೆಯಂತೆ, ಕರುಣೆಯಂತೆ, ಜೋಗುಳದಂತೆ……

ಕರ್ಣನಂತಹಾ ಕರ್ಣನನ್ನು ಮೊದಲಿನಿಂದಲೂ ನಾಯಕನನ್ನಾಗಿ ಆರಾಧಿಸುತ್ತಾ ಬಂದ ನನಗೆಂದೂ ಆತ ದುರಂತವಾಗಲಿಲ್ಲ. ದಾರಿ ತೋರಿದ. ತಿರಸ್ಕರಿಸಿದರೆ, ಅವಮಾನಿಸಿದರೆ, ತಪ್ಪಾದರೆ, ನಿಕೃಷ್ಟವಾಗಿಸಿದರೆ ಹೇಗೆ ತಲೆ ಎತ್ತಿ ತೋರಿಸಬೇಕೆಂಬ ಛಲ ತುಂಬಿದ. ತನ್ನದೇ ಹಾದಿಯನ್ನು ಹೇಗೆ ಹುಡುಕಿ ಗುರಿ ಸೇರಬೇಕೆಂಬುದನ್ನು ತೋರಿಸಿದ. ಕೈಗೊಂಡ ನಿರ್ಧಾರಗಳನ್ನು ಕೊನೆಯ ವರೆಗೂ ಹೇಗೆ ಉಳಿಸಿ ತನ್ನ ಹೆಸರು ಮೆರೆಸಬೇಕೆಂದು ತೋರಿಸಿದ. ಗೆಳೆತನದ ಮಹತ್ವವನ್ನು ಲೋಕಕ್ಕೆ ಸಾರಿದ. ತನ್ನ ಬದುಕನ್ನು ನಮ್ಮೆಲ್ಲರ ಮುಂದೆ ತೆರೆದ ಪುಸ್ತಕವಾಗಿಸಿದ. ಈ ಮಹಾನಾಯಕನ ಆರಾಧನೆಯತ್ತ ಮೊದಲ ಹೆಜ್ಜೆ…..

*****                      

                              

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ದಾರಿ ತೋರುವ ದುರಂತನಾಯಕ: ಚೈತ್ರಾ ಎಸ್.ಪಿ.

  1. ಚೈತ್ರ ಕರ್ಣನ ಕುರಿತು ಚೆನ್ನಾಗಿ ಬರೆದಿದ್ದೀರಿ…. ಆಲ್ ದಿ ಬೆಸ್ಟ್…..

Leave a Reply

Your email address will not be published. Required fields are marked *