ಗೆಳೆಯನ ಮದುವೆಗೆ ಬೆಳಗಾವಿಯ ಚಿಕ್ಕೋಡಿಗೆ ಹೋಗಬೇಕೆಂದಾಗ ಪ್ರವಾಸ ಪ್ರಿಯನಾದ ನಾನು ಸಹಜವಾಗೇ ಜೈಯೆಂದಿದ್ದೆ. ಮದುವೆಯ ಮುಂಚಿನ ದಿನ ದಾಂಡೇಲಿಗೆ ಹೋಗಿ ಅಲ್ಲಿನ ಕಾಳೀ ನದಿಯಲ್ಲಿ ರಿವರ್ ರಾಫ್ಟಿಂಗ್ ಮಾಡೋಣ ಅಂದಾಗೆಂತೂ ತಗೋ, ಸ್ವರ್ಗಕ್ಕೆ ಮೂರೇ ಗೇಣು. ಗೆಳೆಯರ ಬಾಯಲ್ಲಿ ಈ ರಿವರ್ ರಾಫ್ಟಿಂಗ್ ಬಗ್ಗೆ ಹಲವು ಸಲ ಕೇಳಿದ್ದವನಿಗೆ ಅದನ್ನೊಮ್ಮೆ ನೋಡಬೇಕೆಂಬ ಬಯಕೆ ಮುಂಚಿಂದಲೂ ಇತ್ತೆಂದು ಬೇರೆ ಹೇಳಬೇಕಿಲ್ಲವೆಂದುಕೊಂಡು ಮುಂದುವರೆಯುತ್ತೇನೆ. .ಶುಕ್ರವಾರ ಸಂಜೆ ಐದುಮುಕ್ಕಾಲಕ್ಕೆ ಮೆಜೆಸ್ಟಿಕ್ಕಿಂದ ಹುಬ್ಬಳ್ಳಿಯ ಟ್ರೈನು. ಆಫೀಸಿಂದ ನಾಲ್ಕಕ್ಕೇ ಹೊರಟರೂ ಬೆಂದಕಾಳೂರಿನ ಟ್ರಾಫಿಕ್ಕಿಗೆ ಸಿಲುಕಿ ಆರೂವರೆ ಆಗ್ತಾ ಬಂದ್ರೂ ಇನ್ನೂ ಕಾರ್ಪೋರೇಷನ್ ಸರ್ಕಲ್ ದಾಟಿರ್ಲಿಲ್ಲ.ನಾನೊಬ್ನೇ ಆಗಿದ್ರೆ ಅಯ್ಯೋ ಶಿವನೇ, ರೈಲು ಮಿಸ್ಸೇ ಇವತ್ತು ಅಂದ್ಕೊಂತಿದ್ನೇನೋ. ಆದ್ರೆ ನನ್ನ ಬಸ್ಸಿನಲ್ಲೇ ಇನ್ನೂ ಇಬ್ರಿದ್ರು ನನ್ನ ಜೊತೆ ಮದುವೆಗೆ ಬರೋರು. ಆದ್ರೆ ಅವರಿಬ್ಬರಿಂದ ಟೆನ್ಷನ್ನು ಕಮ್ಮಿಯಾಗೋ ಬದ್ಲು ಜಾಸ್ತಿಯಾಗುತ್ತಿತ್ತು. ನಾನು ಈ ಟ್ರೈನು ಹೋದ್ರೆ ಏನ್ಮಾಡಕ್ಕಾಗುತ್ತೆ , ಹೆಂಗಿದ್ರೂ ಬಟ್ಟೆ ತಂದಿದೀನಿ ಸೀದಾ ಶಿವಮೊಗ್ಗೆಯ ಊರ ಬಸ್ಸು ಹತ್ತಿ ಬಿಡೋದು ಅಂತ ತಮಾಷೆ ಮಾಡ್ತಾ ಇದ್ದೆ. ಆದ್ರೆ ಅವ್ರ ಮುಖಭಾವಗಳು ಊಹೂಂ.. ಹೇ, ಇದು ಮಿಸ್ಸಾದ್ರೆ ಯಶವಂತಪುರಕ್ಕೆ , ಅಲ್ಲೂ ಸಿಗ್ಲಿಲ್ಲ ಅಂದ್ರೆ ತುಮಕೂರವರೆಗೆ, ಅಲ್ಲೂ ಸಿಗ್ಲಿಲ್ಲ ಅಂದ್ರೆ ಟ್ರೈನು ಸಿಕ್ಕೋವರೆಗೆ ಟ್ಯಾಕ್ಸಿ ಮಾಡಿಸ್ಕೊಂಡು ಹೋಗಾದ್ರೂ ಈ ಟ್ರೈನು ಹಿಡಿಲೇಬೇಕು ಕಣೋ ಅಂತಿದ್ದ ಸಹೋದ್ಯೋಗಿ ಉಮಾಕಾಂತ. ನಂದಿನಿಯ ಮುಖದ ಚಿಂತೆಯೇನೂ ಕಮ್ಮಿಯಿರ್ಲಿಲ್ಲ. ಮೈಸೂರ್ ಬ್ಯಾಂಕು ಸರ್ಕಲ್ಲೊಂದು ದಾಟಿ ಬಿಡ್ಲಿ. ಆಮೇಲೆ ಅಲ್ಲಿ ಬಸ್ಸು ಟ್ರಾಫಿಕ್ಕಲ್ಲಿ ಸಿಕ್ಕಾಕಿಕೊಂಡ್ರೂ ಅದನ್ನಿಳಿದು ಓಡೇ ಬಿಡೋಣ ಅಂತ ಸಮಾಧಾನ ಮಾಡಿದ್ರೂ .ಹೌದಾ ? ಅಲ್ವಾ ಅನ್ನೋದು ಬಿಟ್ರೆ ಬೇರೆ ಮಾತಿರಲಿಲ್ಲ ಅವಳ ಬಾಯಲ್ಲಿ. ಅದ್ರ ಮಧ್ಯೆ ಆಗಲೇ ಮೆಜೆಸ್ಟಿಕ್ಕಿನ ರೈಲ್ವೇ ಸ್ಟೇಷನ್ ತಲುಪಿದ್ದ ದಿಲೀಪನಿಂದ ಐದಾರು ಕಾಲುಗಳು. ಎಲ್ಲಿದ್ದೀರ , ಎಲ್ಲಿದ್ದೀರ ಅಂತ. ಬಸ್ಸು ಮುಂದೆ ಹೋದ್ರೆ ತಾನೇ ಏನಾದ್ರೂ ಹೇಳೋದು ? ಕಾಲುಘಂಟೆಯಿಂದ ಬಸ್ಸು ಒಂದೆರಡು ಸ್ಟಾಪು ದಾಟಿತ್ತೇನೋ ಅಷ್ಟೇ. ಈ ಸಿಗ್ನಲ್ಲುಗಳು, ಈ ಜ್ಯಾಮು.. ಅಬ್ಬಬ್ಬಾ ? ನೋಡುನೋಡುತ್ತಿದ್ದಂಗೇ ಐದೂ ನಲವತ್ತು ಆಗೇಹೋಗ್ತು. ಇನ್ನು ಐದು ನಿಮಿಷದಲ್ಲಿ ಕಾರ್ಪೋರೇಷನ್ನಿನಿಂದ ಮೆಜೆಸ್ಟಿಕ್ಕಿಗೆ ಯಾವ ಮಾಯದಲ್ಲೂ ಹೋಗೋಕೆ ಸಾಧ್ಯವಿಲ್ಲ. ಟ್ರೈನು ಹೋಗಿ ಬಿಡುತ್ತಲ್ಲ ಅನ್ನೋ ಬೇಸರ. ಅಷ್ಟರಲ್ಲಿ ಮತ್ತೆ ದಿಲೀಪನ ಕಾಲು. ಟ್ರೈನು ಐದು ಐವತ್ತಕ್ಕಂತೆ ಅಂತ. ಇದೊಂತರ ಪ್ರವಾಹದಲ್ಲಿ ಕೊಚ್ಚಿಹೋಗ್ತಿದ್ದವನಿಗೆ ಕೋಲು ಸಿಕ್ಕಂತ ಖುಷಿ. ಹತ್ತು ನಿಮಿಷದಲ್ಲಿ ಮೆಜೆಸ್ಟಿಕ್ ತಲುಪೋದು ಡೌಟು ಅನಿಸಿದ್ರೂ ಮನದ ಮೂಲೆಯಲ್ಲೊಂದು ಆಸೆ. ಕಾರ್ಪೋರೇಷನ್ ದಾಟೋಕೆ ಮತ್ತೆ ಮೂರು ನಿಮಿಷ ಬೇಕಾದಾಗ ಮತ್ತೆ ಆತಂಕ. ಪುಣ್ಯಕ್ಕೆ ಮೈಸೂರು ಬ್ಯಾಂಕ್ ಸರ್ಕಲ್ಲಲ್ಲಿ ಹೆಚ್ಚೊತ್ತು ನಿಲ್ಲದೇ ಮುಂದೆ ಬಂದು ಬಿಟ್ಟೆವು. ಆದ್ರೂ ಆಮೆಗತಿಯಲ್ಲಿ ನರ್ತಕಿ ಥಿಯೇಟರ್ ಹತ್ರ ಬರೋ ಹೊತ್ತಿಗಾಗ್ಲೇ ಐದೂ ಮುಕ್ಕಾಲು. ಅಷ್ಟರಲ್ಲಿ ಮತ್ತೆ ಫೋನು. ಟ್ರೈನು ಆರುಘಂಟೆಗಂತೆ ಅಂತ. ಅಂತೂ ಒಂದು ಉಸಿರು ತಗೊಂಡು ಎದುರಿಗೆ ಕಂಡ ಗಣೇಶನಿಗೊಂದು ಅಡ್ಡಬೀಳುವಂತ ಕೃತಜ್ನತಾ ಭಾವ. ಐದು ಐವತ್ತಕ್ಕೆ ಮೆಜೆಸ್ಟಿಕ್ಕು. ಇನ್ನು ಯಾವುದೇ ಕಾರಣಕ್ಕೂ ರೈಲು ತಪ್ಪಿಸಿಕೊಳ್ಲೇಬಾರ್ದು . ನಡಿರಿ ಓಡೋಣ ಅಂದೆ.
ರೈಲು ಆರೂಹತ್ತಕ್ಕೆ ಅನ್ನೋ ಸುದ್ದಿ ಗೊತ್ತಾದ್ರೂ ತಡಮಾಡಬಾರ್ದು ಅಂತ ಓಡೋಕೆ ಶುರು ಮಾಡಿದ್ವಿ. ಸ್ವಲ್ಪ ಹೆಜ್ಜೆ ಹಾಕೋ ಹೊತ್ತಿಗೆ ನನ್ನ ಪಕ್ಕ ಇಲ್ಲ ಓಡ್ತಿದ್ದೋರು. ನೋಡಿದ್ರೆ ಮಾರು ಹಿಂದಿದ್ದ ಉಸ್ಸಪ್ಪಾ ಅಂತಿದ್ದ ಉಮಾಪತಿ. ಅವ್ನಿಗಿಂತ ಸ್ವಲ್ಪ ಮುಂದಿದ್ಲಷ್ಟೇ ಪುಟು ಪುಟು ಹೆಜ್ಜೆ ಹಾಕ್ತಾ ತಂಗಿಂತಾ ದೊಡ್ಡ ಬ್ಯಾಗು ತಂದಿದ್ದ ನಂದು. ಒಳ್ಳೇ ಹಿಂದಿಯ "ಜಬ್ ವಿ ಮೆಟ್" ಸಿನಿಮಾದ ಕತೆಯಾಯ್ತಲ್ಲ ನಂದು ಅಂದುಕೊಳ್ಳುತ್ತಾ , ಟ್ರೈನು ತಪ್ಪೋಗೋದನ್ನ ತಪ್ಪಿಸಿಕೊಳ್ಳೋಕೆಂತ ಯದ್ವಾ ತದ್ವಾ ಓಡಿದ್ದು. ಅವತ್ತು ಓಡಿದ ಹಾಗೇ 10k ಲೇನಾದ್ರೂ ಓಡಿದ್ರೆ ಇನ್ನೊಂದು ಸ್ವಲ್ಪ ನಿಮಿಷ ಬೇಗ ಮುಗಿಸ್ತಿದ್ನೋನೋ ಅನಿಸಿ ಆ ಗಾಬರಿಯ ಸಂದರ್ಭದಲ್ಲೂ ನಗು ಬಂತು. ರೈಲ್ವೇ ಸ್ಟೇಷನ್ನು ತಲುಪಿ ಪ್ಲಾಟ್ ಫಾರಂಗೆ ಹೋಗೋ ಬ್ರಿಡ್ಜ್ ಹತ್ತಿದ್ವಿ. ಹೇ. ನಮ್ಮ ರೈಲು ಆರೂಹತ್ತಕ್ಕೆ ಕಣೋ. ಹತ್ತನೇ ಪ್ಲಾಟ್ ಫಾರಂ ಅಂದ ಉಮಾ. ಸರಿಯಪ್ಪ ಅಂತ ಮತ್ತೆ ಓಟ. ಆರನೇ ಪ್ಲಾಟ ಫಾರಂ ತಲುಪೋ ಹೊತ್ತಿಗೆ ತಡಿರಿ ತಡಿರಿ, ಎಲ್ಲಿಗೆ ಓಡ್ತಿದೀರ ಅಂತ ಅಡ್ಡಬಂದ್ರು ನಾಲ್ಕೈದು ಜನ. ಅಡ್ಡಬಂದೋರು ಇನ್ಯಾರು ಅಲ್ಲ. ಅಕ್ಷಯ್, ದಿಲೀಪ್, ಮುನೇಗೌಡ್ರು, ಆದರ್ಶ, ಪಲ್ಲವಿ ಅಕ್ಕ, ದೇವು, ದಾನಿ. ಏನೋ ಈ ರೇಂಜಿಗೆ ಓಡ್ತಾ ಇದೀರ ಅಂದ್ರೆ ಟ್ರೈನು ಹತ್ತನೇ ಪ್ಲಾಟ್ ಫಾರಂ ಅಂತಲ, ಇನ್ನು ಐದು ನಿಮಿಷಕ್ಕೆ ಅಂದೆ. ಅವರೆಲ್ಲರ ಮುಖದಲ್ಲೂ ಮುಸಿ ಮುಸಿ ನಗು. ಇನ್ನು ಪ್ಲಾಟ್ ಫಾರಮ್ಮೇ ಹಾಕಿಲ್ಲ.ಟ್ರೈನನ್ನ ಏಳುಘಂಟೆಗೆ ಮುಂದಾಕಿದಾರೆ ಅಂದ್ರು ಅಕ್ಷಯ್. ಥತ್ ಥರೇಕಿ. ಎದ್ನೋಬಿದ್ನೋ ಅಂತ ಓಡಿದ್ದು ಪುಕ್ಸಾಟೆ ಓಟವಾಗೋಯ್ತಲ್ಲ ಅನಿಸ್ತು. ಟ್ರಾಫಿಕ್ಕಲ್ಲಿ ಸಿಕ್ಕಾಕಿಕೊಂಡಿದ್ದು, ಓಡಿದ್ದನ್ನ ಕೇಳಿ ಎಲ್ಲರಿಗೂ ನಗು.
ಆ ಟ್ರೈನಿಂದ್ಲೇ ಶುರುವಾಗಿದ್ದು ನೋಡಿ ನಮಗೆ ಲೇಟ್ ಯೋಗ. ಟ್ರೈನು ಹೋಗ್ತನೇ ಇದೆ ಹೋಗ್ತನೇ ಇದೆ. ಆದ್ರೆ ಬರಬೇಕಾದ ಸ್ಟೇಷನ್ನುಗಳು ಮಾತ್ರ ಬರ್ತಿಲ್ಲ ಬೇಗ. ಮಾತಲ್ಲಿ ಮುಳುಗೋಗಿದ್ದ ನಮಗೆ ಟ್ರೈನು ನಿಧಾನವಾಗಿ ಹೋಗ್ತಿರೋದೂ ಗಮನಕ್ಕೆ ಬಂದಿರಲಿಲ್ಲ! ಏಳೂವರೆ ಏಳೂಮುಕ್ಕಾಲರವರೆಗೆ ಬಂದಿದ್ದ ಊಟ ಆಮೇಲೆ ಬರ್ಲೇ ಇಲ್ಲ. ತುಮಕೂರಲ್ಲಿ ತಗೋಳೋಣ, ಇನ್ನೊಂದ್ಕಡೆ ತಗೋಳೋಣ ಅಂದ್ಕೋತಿದ್ದ ನಮಗೆ ಆ ಸ್ಟೇಷನ್ನುಗಳು ಬಂದ್ರೆ ತಾನೆ ? ! ಹಸಿಯುತ್ತಿದ್ದ ಹೊಟ್ಟೆಗಳ ಮೊರೆ ಆ ದೇವ್ರಿಗೆ ಕೊನೆಗೂ ಕೇಳಿಸ್ತೋ ಏನೋ, ಎಂಟೂವರೆ ಹೊತ್ತಿಗೊಬ್ಬ ಬಂದ ಬಿರ್ಯಾನಿ ಬಿರ್ಯಾನಿ ಅಂತ. ಏನಪ್ಪಾ ? ಊಟ ಇದ್ಯಾ ? ಇದ್ರೆ ಹತ್ತು ಊಟ ತಾ ಅಂದ್ವಿ. ಕೆಲ ನಿಮಿಷಗಳಲ್ಲೇ ಹತ್ತು ಊಟ ತಂದ. ಊಟ ಮಾಡುವಾಗ್ಲೇ ನೆನಪಾಗಿದ್ದು. ಎಲ್ಲರೂ ನೀರು ತಂದಿಲ್ಲ. ಇದ್ದ ನೀರು ಜಬ್ ವಿ ಮೆಟ್ ಓಟದಿಂದ ಖಾಲಿಯಾಗಿತ್ತು ಅಂತ, ನೀರನ್ನೂ ಅವ್ನಿಗೆ ಹೇಳಿದ್ವಿ. ಹೂಂ ತರ್ತೀನಿ ಅಂದವ ಐದಾರು ನಿಮಿಷವಾದ್ರೂ ಪತ್ತೆಯಿಲ್ಲ. ಹಸಿಯುತ್ತಿದ್ದ ಹೊಟ್ಟೆಗೆ ಇನ್ನೂ ಹೆಚ್ಚು ಕಾಯಿಸಲಾರದೇ ಊಟಕ್ಕೆ ಕೈಹಾಕಿದ್ವಿ. ಸಖತ್ತಾಗಿ ಹಸಿದ ಹೊಟ್ಟೆಗೆ ಊಟ ಚೆನ್ನಾಗೇ ರುಚಿಸ್ತು.
ಊಟವಾಯ್ತು. ಮತ್ತೈದು ನಿಮಿಷ ಕಾದರೂ ನೀರಿಲ್ಲ. ನೀರ ಹುಡುಕಿ ಎಂಟನೇ ಭೋಗಿಯಿಂದ ಮೊದಲನೇ ಭೋಗಿವರೆಗೆ ಹೋದ್ರೂ ನೀರಿಲ್ಲ. ಅಲ್ಲೇ ಸಿಕ್ಕ ಟೀಟಿಗೆ ನೀರು ಕಂಡ್ರೆ ಈ ಕಡೆ ಕಳ್ಸಿ ಸಾರ್ ಅಂತ ವಿನಂತಿಸಿ ಮರಳಿದ್ವಿ. ಒಂಭತ್ತೂವರೆಯಾದ್ರೂ ನೀರಿಲ್ಲ. ಬಾಯಾರಿದ ಗಂಟಲುಗಳಿರಬೇಕಾದ್ರೆ ನಿದ್ರೆ ಬರೋದಾದ್ರೂ ಹೇಗೆ ? ಆದ್ರೂ ಬೇರೆ ವಿಧಿಯಿಲ್ಲದ ಕಾರಣ ಹಾಗೇ ಮಲಗೋಕೆ ಶುರು ಮಾಡಿದ್ವಿ. ಬೆಳಗ್ಗೆ ನಾಲ್ಕಕ್ಕೇ ಹುಬ್ಬಳ್ಳಿಯಲ್ಲಿ ಏಳಬೇಕಿತ್ತಲ್ಲ. ಅಷ್ಟೊತ್ತಿಗೆ ನಮ್ಮ ಎದುರಿಗೆ ದಯಾಮಯಿ ದೇವರಂತೇ ಕಂಡ ಪ್ರಯಾಣಿಕನೊಬ್ಬ ನನ್ನ ಬಾಟ್ಲಿಯಲ್ಲಿ ಸ್ವಲ್ಪ ನೀರಿದೆ. ಕುಡಿಬೋದು ನೀವು ಬೇಕಾರೆ ಅಂದ ನಮ್ಮ ನೀರಪುರಾಣ ಕೇಳಿಸಿಕೊಂಡು. ನೋಡಿದ್ರೆ ಇದ್ದಿದ್ದು ಕಾಲು ಬಾಟ್ಲು ನೀರು. ಈ ಕಡೆ ಮಲಗೋಕೆ ಬಂದ ನಾವಿದ್ದುದ್ದು ನಾಲ್ಕು ಜನ. ಆ ಕಾಲು ಬಾಟ್ಲಿಯಲ್ಲೇ ಕೆಲವು ಹನಿ ಗುಟುಕರಿಸಿ ಇನ್ನೂ ಸ್ವಲ್ಪ ನೀರು ಉಳಿಸಿದ್ವಿ! ಇನ್ನೆಲ್ಲೂ ನೀರು ಸಿಗದೇ ಹೋದ್ರೆ ರಾತ್ರೆಗೆಲ್ಲಾರೂ ಬೇಕಾದೀತು ಅಂತ !! ಹಂಗೇ ಮಲಗಿದ ನಮಗೆ ಬೀಸುತ್ತಿದ್ದ ತಣ್ಣಗಿನ ಗಾಳಿಯ ಮಧ್ಯೆ ಜೋಂಪು ಹತ್ತಿತ್ತು. ಹನ್ನೊಂದಾಗಿರಬಹುದೇನೋ ಸಮಯ. ಹೇ. ಎಲ್ಲೋ ನಿಲ್ಸಿದಾರೆ ನೋಡೋ ಅಂತ ಎಬ್ಸಿದ್ರು ಗೌಡ್ರು. ಹೌದು. ಕತ್ತಲಲ್ಲಿ ಯಾವ ಸ್ಟಾಪು ಗೊತ್ತಾಗುತ್ತಿಲ್ಲ. ಅಲ್ಲಿ ಎಷ್ಟೊತ್ತು ನಿಲ್ಲಿಸ್ತಾರೋ ಅದೂ ಗೊತ್ತಿಲ್ಲ. ಒಂದು ಬದಿಯ ಕಿಟಕಿಯಿಂದ ಹಣಿಕಿದೆ. ಒಂದಿಷ್ಟು ಜನ ನೀರು ತುಂಬಿಕೊಳ್ಳಲು ಟ್ರೈನಿಂದ, ತುಂಬಿಕೊಂಡೋರು ಟ್ರೈನಿನತ್ತ ಓಡ್ತಿದ್ರು. ನಾನೂ ಒಂದು ಬಾಟ್ಲು ತಗೊಂಡು ಹೋಗಿಬಿಡ್ಲಾ ಅಂದ್ಕೊಂಡೆ. ಆದ್ರೆ ಮತ್ತೆ ಟ್ರೈನು ಹೊರಟು ಬಿಟ್ರೆ ಅನ್ನೋ ಭಯ. ಸಾಲದೆಂಬಂತೆ ನಾವಿದ್ದ ಕಡೆಯ ಬಾಗಿಲನ್ನು ಟಿ.ಟಿ ಬೈದು ಹಾಕಿಸಿದ್ದ. ಇಳಿಯೋದಾದ್ರೆ ಭೋಗಿಯ ಮತ್ತೊಂದು ಕಡೆಯ ಬಾಗಿಲಿಂದ ಮಾತ್ರ ಇಳಿಬೇಕು ಅಂದಿದ್ದ. ಇಳಿಯೋಕೆ ಪ್ರಯತ್ನಿಸಿದೋರಿಗೆಲ್ಲಾ ಬಯ್ತಿದ್ದ. ಒಂದು ಸಲ ಕಳ್ಳತನ ಆದ್ರೆ ನಿಮಗೆಲ್ಲಾ ಗೊತ್ತಾಗೋದು. ಇಳಿಬೇಡ್ರಿ ಅಂದ್ರೆ ಗೊತ್ತಾಗಲ್ವಾ ಅಂತ. ಇಳಿಲೋ ಬೇಡ್ವೋ ಅನ್ನೋ ಸಂದಿಗ್ದದಲ್ಲೇ ಎರಡು ನಿಮಿಷ ಕಳೆಯಿತು. ಓಡುತ್ತಿದ್ದೋರಿಗೆ ಯಾರಿಗಾದ್ರೂ ಬಾಟ್ಲಿ ಕೊಟ್ಟು ತುಂಬಿಸಿಕೊಡೋಕೆ ಹೇಳೋಣ ಅಂತ ನಮ್ಮ ಎದುರಿಗಿದ್ದ ರಾತ್ರೆ ನೀರು ಕೊಟ್ಟ ಪುಣ್ಯಾತ್ಮರು ಪ್ರಯತ್ನಿಸಿದ್ರೂ ಅದು ಫಲ ಕೊಡಲಿಲ್ಲ. ಅಯ್ಯೋ ಶಿವನೇ ಅಂದುಕೊಳ್ಳುತ್ತಿದ್ದಾಗ ಎಲ್ಲಿಂದಲೋ ಒಬ್ಬ ನೀರು ಮಾರುವವ ತನ್ನ ನೀರಿನ ಗಾಡಿ ತಳ್ಳಿಕೊಂಡು ಬರುತ್ತಿದ್ದುದು ಕಾಣಿಸ್ತು. ರೈಲು ಹೊರಡೋ ಮೊದ್ಲು ನಮ್ಮ ಭೋಗಿಗೆ ಬಾರಪ್ಪ ಅಂತ ಕೂಗಬೇಕನಿಸಿತು. ರಾಮಾಯಣದ ಕಬಂಧನಂತಹ ಉದ್ದುದ್ದದ ಬಾಹುಗಳೇನಾದ್ರೂ ಇದ್ದಿದ್ರೆ ಇಲ್ಲಿಂದ್ಲೇ ಕೈಚಾಚಿ ಒಂದೆರಡು ಬಾಟ್ಲಿ ತಗೋಬೋದಿತ್ತಲ್ಲ. ಎಷ್ಟು ಒಳ್ಳೇದಿತ್ತು ಅಂತೂ ಅನಿಸಿಬಿಟ್ತು. ಆದ್ರೆ ಏನ್ಮಾಡೋದು. ಆಗೋಲ್ವೆ. ನಮ್ಮ ಮೊರೆ ಕೇಳಿತೋ, ಕಿಟಕಿಯಿಂದ ಚಾಚ್ತಿದ್ದ ಕೈಗಳು ಕಾಣಿಸ್ತೋ ಗೊತ್ತಿಲ್ಲ. ಅವ ನಾವಿದ್ದತ್ತ ಬಂದ. ಲೀಟರಿನ ಎರಡು ಬಾಟ್ಲು ತಗೊಂಡೆ ನಾನು. ನಾನು ಕುಡಿಯೋ ಮೊದ್ಲು ನಮಗೆ ನೀರು ಕೊಟ್ಟೋರ ಮುಖ ನೋಡಿದೆ. ಅವರ ನೀರಿನ ಋಣಕ್ಕೆ ಎಷ್ಟು ಧನ್ಯವಾದ ಹೇಳಿದ್ರೂ ಕಮ್ಮೀನೆ ಅನಿಸಿ, ನೀರು ಬೇಕಾ ಸಾರ್ ಅಂದೆ. ಹೇ, ಬೇಡಪ್ಪಾ ಅಂದ್ರು ಅವ್ರು ನಸುನಗುತ್ತಾ. ಪ್ರಾಯಶಃ ಅವರ ಬಳಿ ಮತ್ತೊಂದು ಬಾಟ್ಲಿ ಇತ್ತೇನೋ ಒಳಗೆಲ್ಲೋ. ನೀರು ಒಳಸೇರಿದ ಮೇಲೆ ಸುಖನಿದ್ರೆ.
ಮೂರುಮುಕ್ಕಾಲಿಗೆ ಹುಬ್ಳಿ ಬಂತು ಹುಬ್ಳಿ ಬಂತು ಅಂತ ಆದರ್ಶ ಬಂದು ಎರ್ಲನ್ನೂ ಎಬ್ಸಿದ್ರು. ಗಡಿಬಡಿಸಿ ಎದ್ದು ನೋಡಿದ್ರೆ ಹುಬ್ಳಿಯೂ ಇಲ್ಲ. ಎಂತದೂ ಇಲ್ಲ. ಮೊದಲೇ ಲೇಟಾಗಿದ್ದ ರೈಲು ಹುಬ್ಳಿ ತಲುಪೋದು ನಾಲ್ಕೂವರೆಯಾದ್ರೂ ಆಗತ್ತೆ ಅಂತ ಹುಬ್ಳಿಗೆ ಇನ್ನೂ ಮೂವತ್ತೈದು ಕಿ.ಮೀ ದೂರ ತೋರಿಸ್ತಿದ್ದ ಅಕ್ಷಯ್ ಜಿ.ಪಿ,ಎಸ್ ಹೇಳ್ತಾ ಇತ್ತು. ಬೆಳೆಬೆಳಗ್ಗೆ ಈ ಪರಿ ತಮಾಷೆ ಆದರ್ಶಂದು ! ಅಂತೂ ನಾಲ್ಕೂವರೆಗೆ ಹುಬ್ಳಿ ತಲುಪಿದ ನಮಗೆ ಅಲ್ಲಿನ ರೈಲ್ವೇ ನಿಲ್ದಾಣ ನೋಡಿ ಬೆಂಗಳೂರಿನ ನಿಲ್ದಾಣವೂ ನಾಚಿಕೊಳ್ಳಬೇಕು ಅನಿಸಿದ್ದು ಸುಳ್ಳಲ್ಲ. ಅಲ್ಲಿಂದ ಮುಂದೆ ನಮಗೆ ದಾನಿಯೇ ದಾರಿ ದೀಪ. ಬಸ್ಟಾಂಡು ತಲುಪೋ ಹೊತ್ತಿಗೆ ಇಲ್ಲಿಂದ ದಾಂಡೇಲಿಗೆ ಬಸ್ಸು ಕಡಿಮೆ. ಧಾರವಾಡಕ್ಕೆ ಹೋಗೋಣ ಅಂದ್ರು ಅಲ್ಲೇ ಓದಿದ್ದ ಪಲ್ಲವಿ ಅಕ್ಕ. ಸರಿಯೆಂದು ಧಾರವಾಡದ ಬಸ್ಸು ಹತ್ತಿದ್ವಿ. ನಮ್ಕಡೆಯೆಲ್ಲಾ ಸ್ಟಾಪುಗಳೆಂದ್ರೆ ಒಂದೂವರೆ , ಎರಡು ಕಿ.ಮೀ ದೂರವಾದ್ರೂ ಇರೋ ಕಲ್ಪನೆಯಿದ್ದ ನಾವು ಹುಬ್ಳಿ, ಧಾರವಾಡಗಳ ನಡುವೆ ಇದ್ದ ಸ್ಟಾಪುಗಳ ಸಂಖ್ಯೆ ನೋಡಿ ದಂಗಾಗಿಬಿಟ್ವಿ. ನಿಮಿಷಕ್ಕೆರಡು ಸಲದಂತೆ ಮುಂದಿನ ನಿಲ್ದಾಣ ಅಂತಿದ್ದ ಬಸ್ಸಿನ ಧ್ವನಿವಾಹಿನಿಯನ್ನು ನೋಡಿ ಗೌಡ್ರು ಇದೊಳ್ಳೆ ಮೊಬೈಲ್ ರಿಂಗ್ ಟೋನಿನಂಗೆ ಆಗ್ಬಿಟ್ಟಿದೆಯಲ್ಲಾ ಅಂತಿದ್ರು ! ಅಂತೂ ಐದೂವರೆ, ಐದೂಮುಕ್ಕಾಲರ ಹೊತ್ತಿಗೆ ಧಾರವಾಡ. ಅಲ್ಲಿಂದ ಮತ್ತೆ ದಾಂಡೇಲಿಯ ಬಸ್ಸಿನ ಹುಡುಕಾಟ. ದಾಂಡೇಲಿ ಅಂತೊಂದು ಬಸ್ಸು ಬಂದ್ರೂ ಅದು ಹಳಿಯಾಲದವೆರೆಗೆ ಮಾತ್ರ ಹೋಗೋದು ಅಂದು ಬಿಟ್ಟ ಅವ. ಹೇಗಿದ್ರೂ ಹಳಿಯಾಲದ ಮೇಲೇ ಹೋಗಬೇಕು. ಹೋಗಿಬಿಡೋಣ್ವಾ ಅನಿಸಿದ್ರೂ ಹೋಗೋದೋ, ಮತ್ತೊಂದು ಬಸ್ಸಿಗೆ ಕಾಯೋದೋ ಅನ್ನೋ ಅನುಮಾನ. ಅಷ್ಟರಲ್ಲೇ ಆ ಬಸ್ಸು ಹೋಯ್ತು. ನಮ್ಮ ಅನುಮಾನಗಳಿಗೆಲ್ಲಾ ತಾಳ್ಮೆಯಿಂದ ಪರಿಹಾರ ಕೊಡೋಕೆ ಡ್ರೈವರು , ಕಂಡಕ್ಟರುಗಳೇನು ನಮ್ಮ ನೆಂಟರಾ ? !
ಅದು ಹೋಗಿದ್ದೇ ಹೋಗಿದ್ದು. ಆಮೇಲೆ ಬಸ್ಸೇ ಇಲ್ಲ. ಮುಂದಿನ ಬಸ್ಸು ಏಳು ಘಂಟೆಗೆ ಅಂದ್ರು ಯಾರೋ ಅಲ್ಲಿ. ಬಸ್ಟಾಂಡೆಲ್ಲಾ ಸುತ್ತಿದ್ರೂ ಒಂದು ಘಂಟೆ ಕಳೆಯೋದು ಕಷ್ಟವೇ . ಆದರ್ಶ ದಾಂಡೇಲಿ ಅನ್ನೋ ಬೋರ್ಡು ನೋಡಿ ಮಲಗಿದ್ದ ಯಾರೋ ಒಬ್ಬ ಡ್ರೈವರನನ್ನು ಎಬ್ಸಿದ. ಅವ ಆರೂಮುಕ್ಕಾಲಕ್ಕೆ ಹೊರಡ್ತೀನಿ ಅಂದಾಗ ನಮ್ಮಲ್ಲೆಲ್ಲಾ ಮತ್ತೆ ಖುಷಿ. ನಾವಿದ್ದೀವಿ ಅಂತ ಒಂದೈದು ನಿಮಿಷ ಬೇಗ ಹೊರಡಬಹುದಾದ್ರೂ ಹೊತ್ತು ಗೊತ್ತು ಎಲ್ಲಾ ಮೀರಿ ತಕ್ಷಣ ಹೊರಡೋದು ಅವರಲ್ಲ, ಅವರ ಜಾಗದಲ್ಲಿ ಯಾರಿದ್ರೂ ಸಾಧ್ಯವಾಗುತ್ತಿರಲಿಲ್ಲವೇನೋ. ಆ ಖುಷಿಯ ಮಧ್ಯೆಯೂ ಇನ್ನುಳಿದ ನಲವತ್ತು ನಿಮಿಷ ಏನು ಮಾಡೋದೆನ್ನೋ ಪ್ರಶ್ನೆ. ಧಾರವಾಡದ ಮಿಶ್ರಾ ಪೇಡ, ಎ.ಟಿ.ಎಂ ನೋಡಿ, ಚಾ ಹೀರಿ ಬಂದ್ವಿ. ಅಲ್ಲೊಂದು ಕಡೆ ದ್ವಿಚಕ್ರ ವಾಹನಗಳ ರಿಪೇರಿ ತಾಣ ಅನ್ನೋ ಫಲಕ ನೋಡಿ ನನ್ನಲ್ಲಿನ ಕನ್ನಡ ಪ್ರೇಮಿಗೆ ಆನಂದ ಭಾಷ್ಪ. ಎಲ್ಲೆಡೆ ಗ್ಯಾರೇಜು, ಟಿನ್ನು, ಪೇಪರ್ರು, ಟಯರ್ರು.. ಹೀಗೆ ಇರಬರೋ ಪದಗಳನ್ನೆಲ್ಲಾ ಕನ್ನಡ ಲಿಪಿಯಲ್ಲಿ ಬರೆದ ಮಾತ್ರಕ್ಕೆ ಕನ್ನಡವೆಂದುಕೊಳ್ಳೋ ಪರಿಸ್ಥಿತಿ ಬಂದಿರುವಾಗ ಈ ಅಚ್ಚಗನ್ನಡ ಭಾಷಾಪ್ರಯೋಗ ಖುಷಿಕೊಟ್ಟಿತು. ಕರ್ನಾಟಕದಲ್ಲಿ ಹೆಚ್ಚು ಕನ್ನಡ ಬಳಸಲ್ಪಡೋದೆ ಹುಬ್ಬಳಿ-ಧಾರವಾಡದಲ್ಲಿ ಅನ್ನೋ ಹಳೆಯ ರಸಪ್ರಶ್ನೆಯ ಉತ್ತರ ಆಮೇಲೆ ನೆನಪಾಯ್ತು. ಗಾಡಿ ಹೊರಡುತ್ತಿದ್ದಂತೆಗೇ ಬೆಳಗು ಮೂಡುತ್ತಿತ್ತು. ಸ್ವಾಗತ ಕೋರುತ್ತಿದ್ದ ರವಿಯ ಬೆಳಕಲ್ಲಿ ಎತ್ತ ಕಣ್ಣು ಹಾಯಿಸಿದ್ರೂ ಹಸಿರೇ ಹಸಿರು. ದಾರಿ ತಪ್ಪಿ ಮಲೆನಾಡಿನ ನಮ್ಮೂರತ್ರ ಎಲ್ಲಾದ್ರೂ ಬಂದೆನಾ ಅಂತೊಮ್ಮೆ ದಿಗ್ಭ್ಹ್ರಮೆ. ಆಮೇಲೆ ನೆನಪಾಯ್ತು. ನಾವು ಹೋಗುತ್ತಿರೋ ದಾಂಡೇಲಿ ಇರೋದು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂತ. ಬೆಂದಕಾಳೂರೆಂಬ ತಮಿಳುನಾಡು ಗಡಿ, ಪಣಜಿಗೆ ಮೂವತ್ತೇ ಕಿ.ಮೀ ಎಂಬ ಬೋರ್ಡಿರೋ ಗೋವಾ ಗಡಿ ಬಳಸಿ ಬೆಳಗಾವೆಂಬ ಮಹಾರಾಷ್ಟ್ರ ಗಡಿಯತ್ತ ತಿರುಗೋದಿತ್ತು ನಮ್ಮ ಪಯಣದ ಬಂಡಿ. ಆದ್ರೆ ಸದ್ಯಕ್ಕೆಂತೂ ಮುಖ ಮಾಡಿದ್ದು ದಾಂಡೇಲಿಯ ಕಾಳಿ ನದಿ ಕಣಿವೆಯೆಡೆಗೆ.
ದಾಂಡೇಲಿ:
ದಾಂಡೇಲಿಗೆ ಗೋವಾದಿಂದ ಬರೀ ೧೨೫ ಕಿ.ಮೀ.ಆದ್ರೆ ಬೆಂಗಳೂರಿನಿಂದ 460 ಕಿ.ಮೀ ! ಇಲ್ಲೇ ಎಲ್ಲೋ ಹತ್ರ ಅಂದುಕೊಂಡಿದ್ದವರಿಗೆ ಹೊರಟಮೇಲೇ ಗೊತ್ತಾದ್ದು ಬೆಂಗಳೂರಿಂದ ಅದೆಷ್ಟು ದೂರವೆಂದು. ಈ ಪಟ್ಟಣಕ್ಕೆ ಹೆಸರು ಬಂದ ಬಗ್ಗೆ ವಿಚಾರಿಸಿದ್ರೆ ಹಲತರದ ಆಸಕ್ತಿದಾಯಕ ಕತೆಗಳು ಸಿಕ್ಕುತ್ವೆ. ದಾಂಡೇಲಪ್ಪ ಅನ್ನೋ ಸ್ಥಳೀಯನು ಮಿರಾಶಿಗಳೆಂಬ ಭೂಮಾಲಿಕರಿಗೆ ವಿದೇಯನಾಗಿ ತನ್ನ ಪ್ರಾಣವನ್ನೇ ತೆತ್ತನೆಂದೂ, ಅವನ ನೆನಪಲ್ಲಿ ಪಟ್ಟಣಕ್ಕೆ ಈ ಹೆಸರೆನ್ನುತ್ತಾರೆ ಕೆಲವರು. ದಂಡಕನಾಯಕನೆಂಬ ರಾಜ ಈ ಕಾಡಿನ ಮೂಲಕ ಪಯಣಿಸುತ್ತಿದ್ದಾಗ ಈ ಇಡೀ ಪ್ರದೇಶಕ್ಕೆ ದಾಂಡೇಲಿಯೆಂಬ ಹೆಸರಿಟ್ಟನೆನ್ನುತ್ತಾರೆ ಇನ್ನು ಕೆಲೋರು. ಇನ್ನು ರಾಮಾಯಣದ ದಂಡಕಾರಣ್ಯವೆಂಬ ಪ್ರದೇಶವೇ ಈ ಕಾಡು ಎಂದೂ ಹೇಳುತ್ತಾರೆ ಕೆಲವರು ! ಅಲ್ಲಿ ಬಂದಿದ್ದು ನೀರಲ್ಲಾಡೋಕಂತಾದ್ರೂ ನಿತ್ಯ ಕರ್ಮಗಳನ್ನು ಪೂರೈಸ್ಲೇಬೇಕಲ್ವೇ ? ಅದಕ್ಕೆಂದೇ ಬುಕ್ಕಾಗಿದ್ದ ಲಾಡ್ಜೊಂದಕ್ಕೆ ತೆರಳಿದ್ವಿ. ಇಲ್ಲಿನ ಲಾಡ್ಜುಗಳಾಗ್ಲಿ, ರಿವರ್ ರಾಫ್ಟಿಂಗ್ ಆಗ್ಲಿ ಮುಂಚೇನೆ ಬುಕ್ ಮಾಡ್ಬೇಕು. ಬುಕ್ ಮಾಡದೇನೋ, ಸಡನ್ನಾಗಿ ಬಂದು ನುಗ್ತೀನಿ ಅಂದ್ರು.. ಊಹೂಂ.. ಯಾರಿದಂಲೂ ಆಗಲ್ಲ. ಅಂದಂಗೆ ಇಲ್ಲಿ ಯಾರಾದ್ರೂ ಮುಂಚೆ ತೆರಳಿದ್ರೆ ಅವರ ಪರಿಚಯದ ಏಜೆಂಟರ ಮೂಲಕ ಬುಕ್ ಮಾಡಬಹುದು. ಇಲ್ಲಾ ಅಂತರ್ಜಾಲದ ಕೆಲವು ತಾಣಗಳ ಮೂಲಕ(ಕೊನೆಯಲ್ಲಿ ಕೊಟ್ಟಿದೆ) ಬುಕ್ ಮಾಡಬಹುದು. ಅರ್ಧ ಘಂಟೆಯಲ್ಲಿ ರೆಡಿಯಾದ ಹತ್ತು ಜನ ನೀರತ್ತ ತೆರಳಿದ್ವಿ. ಎಂಟೂವರೆಗೇ ಶುರುವಾಗತ್ತೆ ರಾಫ್ಟಿಂಗ್ ಅಂದಿದ್ದ ಏಜಂಟ್. ಅವನ ಮಾತು ನಂಬಿ ತಿಂಡಿಯನ್ನೂ ತಿನ್ನದೇ ಓಡಿದ್ದ ನಮಗೆ ಆಮೇಲೆ ಎಂತಾ ಬರ್ಕಾ ಆದ್ವಿ ಅನಿಸ್ತು. ಘಂಟೆ ಹತ್ತಾದ್ರೂ ಇನ್ನೂ ಬರೋ ಜನರಿಗೆ ಕಾಯ್ತಾನೆ ಇದ್ರು ಅಲ್ಲಿ.
ನಮ್ಮ ಜೀವಕ್ಕೆ ನಾವೇ ಜವಾಬ್ದಾರರು ಅನ್ನೋ ಪತ್ರಕ್ಕೆ ಸೈನ್ ಮಾಡ್ಬೇಕು ಅಂದಾಗೊಮ್ಮೆ ಎಲ್ಲೋ ಅಡಗಿದ್ದ ಭಯ ತನ್ನ ಅಸ್ತಿತ್ವ ತೋರಿಸಿಬಿಟ್ಟಿತು. ಕೊನೆಗೆ ಇಲ್ಲಿ ಪ್ರತೀ ದಿನ ಎಷ್ಟೆಲ್ಲಾ ಜನ ಬರ್ತಾರೆ. ಬಂದೋರಲ್ಲಿ ಯಾರಾದ್ರೂ ಸತ್ತದಿದ್ಯಾ ? ಇಷ್ಟೆಲ್ಲಾ ಗೈಡುಗಳಿರಲ್ವಾ ? ಲೈಫ್ ಜಾಕೆಟ್ ಕೊಡಲ್ವಾ ಅನ್ನೋ ಧೈರ್ಯ ಬಂತು. ಅದಾಗಿ ಸ್ವಲ್ಪ ಹೊತ್ತಿನಲ್ಲೇ ಲೈಫ್ ಜಾಕೇಟ್ನ ಹೇಗೆ ಹಾಕ್ಕೊಳ್ಳಬೇಕು. ಅದನ್ನ ಎರಡು ಸಲ ರಕ್ಷಣೆಯಿರೋ ತರದಲ್ಲಿ, ಹಾಕಿ ಎತ್ತಿದ್ರೆ ಉದುರಿಹೋಗದಷ್ಟು ಗಟ್ಟಿಯಾಗಿ ಕಟ್ಕೊಳ್ಳೋದು ಹೇಗೆ ಅನ್ನೋ ಪ್ರಾತ್ಯಕ್ಷಿಕೆ ತೋರಿಸಿದ್ರು . ಆಮೇಲೆ ಹೆಲ್ಮೆಟ್ಟು ಹಾಕ್ಕೊಳ್ಳೋದು, ಹುಟ್ಟು ಬಳಸೋದ್ರ ಬಗ್ಗೆಯೂ ಪ್ರಾತ್ಯಕ್ಷಿಕೆ. ಅದಾದ ಮೇಲೆ ಜನರನ್ನ ಆರೇಳು ಜನರ ಒಂದೊಂದು ತಂಡಗಳಾಗಿ ವಿಭಜಿಸಿ ಒಂದೊಂದು ದೋಣಿಗೆ ಹಾಕಿದ್ರು. ನಾವಿದ್ದಿದ್ದು ಹತ್ತು ಜನ. ಐದೈದು ಜನ, ಅಥವಾ ಆರು-ನಾಲ್ಕು ಜನ ಒಂದೊಂದು ದೋಣಿಯಲ್ಲಿ ಬನ್ನಿ ಅಂದ್ರು ಅಲ್ಲಿ. ಏನು ಮಾಡೋದು. ಸರಿ, ಐದೈದಾಗಿ ಭಾಗವಾಗಿ ಒಂದೊಂದು ದೋಣಿ ಹತ್ತಿದ್ವಿ. ನಮ್ಮ ದೋಣಿಗೆ ಅಲ್ಲೇ ಪರಿಚಯವಾದ ಕನ್ನಡದವನಾದ ಸುನೀಲ್ ಅನ್ನೋನು ಬಂದಿದ್ರೆ ಪಕ್ಕದ ದೋಣಿಗೆ ನೇಪಾಳದ ಮೀನ್ ಅನ್ನೋನು ಬಂದಿದ್ದ ಗೈಡಾಗಿ. ಈ ಗೈಡ್ಗಳ ಬಗ್ಗೆ ಹೇಳ್ಲೇಬೇಕು. ಒಂಭತ್ತು ಕಿ.ಮೀ ದೂರದ ರಾಫ್ಟಿಂಗಿನಲ್ಲಿ ಹುಟ್ಟು ಹಾಕಿ ಹಾಕೇ ನಮಗೆ ಸುಸ್ತೆದ್ದು ಹೋಗುತ್ತೆ. ಇನ್ನು ನಮ್ಮಿಡೀ ದೋಣಿ ನಿಯಂತ್ರಿಸುವ, ಮಧ್ಯೆ ಮಧ್ಯೆ ರಾಫ್ಟಿಂಗುಗಳಲ್ಲಿ ಸರ್ಫಿಂಗೆಂದು ನೀರೋಳಗೆ ನಮ್ಮ ನುಗ್ಗಿಸಿ, ಹೊರ ತರುವ ಆ ಗೈಡುಗಳಿಗೆ ಅದೆಷ್ಟು ಶಕ್ತಿ ಅದೆಲ್ಲಿಂದ ಬರುತ್ತಪ್ಪ ಅಂದುಕೊಳ್ಳುತ್ತೇನೆ. ಅವರಲ್ಲಿ ಕೆಲವರ ಕೈಗಳನ್ನು ನೊಡಿದ್ರೆ ನಮ್ಮ ಮಧ್ಯದ ಜಿಂ ಬಾಲಗಳು ಏನೂ ಅಲ್ಲ!. ನೀರಲ್ಲಿ ಸ್ವಲ್ಪ ಮುಂದೆ ಬರುತ್ತಿದ್ದಂತೆಯೇ ಹುಟ್ಟುಹಾಕೋದೇಗೆ, ಯಾವ ತರ ಕರೆ ಕೊಟ್ರೆ ಏನು ಮಾಡ್ಬೇಕು ಅಂತೆಲ್ಲಾ ಮತ್ತೆ ಹೇಳಿಕೊಡ್ತಾರೆ ಈ ಗೈಡುಗಳು. ಹೂಂ ಅನ್ನುತ್ತಿದ್ದಂತೆಯೇ ದೋಣಿಯಲ್ಲಿದ್ದ ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ನೀರಿಗೆ ತಳ್ಳುತ್ತಾರೆ ಈ ಗೈಡುಗಳು.
ಆಗ ಶುರುವಾಗುತ್ತೆ ನೋಡಿ ನಿಜವಾದ ಮಜ. ನೀರಲ್ಲಿ ಬಿದ್ದರೆ ತೇಲೋದು ಹೇಗೆ ಅನ್ನೋದ್ರ ಪ್ರಾತ್ಯಕ್ಷಿಕೆ. ಬೋರಲು ಬಿದ್ರೆ ಎಷ್ಟು ಸಲೀಸಾಗಿ ಮೇಲೆ ಬರ್ತೀವಿ. ಕೆಳಗೆ ಬಿದ್ದೋರನ್ನ ದೋಣಿಗೆ ಎತ್ತಿಕೊಳ್ಳೋದು ಹೇಗೆ ಅನ್ನೋ ಎಲ್ಲ ಕ್ರಮಗಳನ್ನೂ ನಾವೇ ಪಾತ್ರಧಾರಿಗಳಾಗಿ ಅನುಭವಿಸಿ ಕಲಿಯೋದಿದ್ಯಲ್ಲಾ ? ವಾವ್.. ಈಜು ಬರದಿದ್ರೂ ಒಂದು ಸಲ ಈ ಲೈಫ್ ಜಾಕೇಟಿನ ಸಹಾಯದಿಂದ ತೇಲೋಕೆ ಶುರುವಾದಾಗ ಏನೇ ಆಗ್ಲಿ , ಇಲ್ಲಿ ಮುಳುಗಿ ಸಾಯೋದಿಲ್ಲ ಅನ್ನೋ ನಂಬಿಕೆ ಬಂದುಬಿಡುತ್ತೆ. ತಿಂಡಿ ಗಿಂಡಿ ಏನೂ ಇಲ್ಲದಿದ್ದರೂ ಹುಟ್ಟು ಹಾಕಿ ಮುಂದೆ ಸಾಗೋ ಉತ್ಸಾಹವೇರಿ ಬಿಡುತ್ತೆ. ಸೌಮ್ಯವಾಗಿ ಸಾಗುತ್ತಿರೋ ಕಾಳಿಯಲ್ಲಿ ಮೊದಮೊದಲು ಮುಂದಂದರೆ ಮುಂದೆ, ಹಿಂದೆಂದರೆ ಹಿಂದೆ, ಹುಟ್ಟುಹಾಕಿದತ್ತಲೇ ಸಾಗ್ತಿರತ್ತೆ ನಮ್ಮ ದೋಣಿ. ಫೈಬರ್ರಿನ , ಒಳಗಡೆ ನೈಟ್ರೋಜನ್ ತುಂಬಿದ ಭದ್ರ ದೋಣಿಯಲ್ಲಿನ ಪಯಣ ಇಷ್ಟು ಸುಲಭವೇ ಅನ್ನುವ ಹೊತ್ತಿಗೆ ಕಾಳಿಯ ಉಗ್ರರೂಪ ರಾಫ್ಟುಗಳ ಮೂಲಕ ಗೊತ್ತಾಗತ್ತೆ..
ತೊರೆಯೊಂದು ಜಲಪಾತವಾಗಿ ಧುಮುಕೋದನ್ನ ಚಿತ್ರಗಳಲ್ಲಿ ನೋಡಿರುತ್ತೀರ. ಆದ್ರೆ ರಭಸವಾಗಿ ಹರಿಯುತ್ತಿದ್ದ ನದಿಯೇ ನಾಲ್ಕೈದು ಅಡಿಗಳ ತನಕ ಧುಮುಕಿದರೆ ? ಆಗ ಸೃಷ್ಟಿಯಾಗೋದೇ ರಾಫ್ಟುಗಳು. ಮೊದಲೇ ಅಪಾರವಾಗಿರೋ ಜಲರಾಶಿಗೆ ಹೀಗೆ ಧುಮ್ಮಿಕ್ಕುವಾಗ ಅಸಾಧ್ಯ ಬಲ ಸಿಕ್ಕಿಬಿಡುತ್ತೆ. ಈ ಧುಮ್ಮಿಕ್ಕೋ ರಾಫ್ಟುಗಳ ಹಾದಿಯಲ್ಲಿ ಸಾಗೋ ಕ್ರೀಡೆಯಿದೆಯಲ್ಲ, ಅದೇರೀ ರಾಫ್ಟಿಂಗ್ ಕಾಳಿನದಿಯಲ್ಲಿ ಸಿಗೋ ಪ್ರತೀ ರಾಫ್ಟುಗಳಿಗೂ ಅದರದ್ದೇ ಆದ ಹೆಸರಿದೆ. ಮೊದಲೆರಡು ರಾಫ್ಟುಗಳು ಸಖತ್ತಾಗಿದ್ದು ಎತ್ತೆತ್ತಿ ಹಾಕುತ್ತೆ. ದೋಣಿಯಲ್ಲಿ ಭದ್ರವಾಗಿ ಕೂರೋ ಬಗೆ, ನೀರಿನ ರೌದ್ರ ರೂಪದ ದರ್ಶನ, ಮತ್ತೊಂದು ಬದಿಯಲ್ಲಿ ನಮ್ಮ ಅರಿವಿಲ್ಲದೇ ನಿಂತಿರೋ ಫೋಟೋಗ್ರಾಫರ್ಗಳಿಗೊಂದು ಪೋಸು ಎಲ್ಲಾ ಆಗೋದು ಮೊದಲೆರಡು ರಾಫ್ಟುಗಳಲ್ಲಿ. ಇಲ್ಲಿ ಸಿಗೋ ರಾಫ್ಟುಗಳ ಹೆಸರುಗಳ ಅದೇ ಅನುಕ್ರಮಣಿಕೆಯಲ್ಲಿ ಹೀಗಿದೆ.
1. Adi's/Rapid Beard
2. Stich bridge
3. Head cutter
4. Snake bite
5. leopard's hole
6. hidden garden
7. Smugglers' Trove
8. Stanley's Squeeze
ಫೋಟೋಗಳು : ಬಾಪೂಜಿ, ಸಂಭಾಜಿ ಪೇಟೆ
ಇವಕ್ಕೆಲ್ಲಾ ಇಂಗ್ಲಿಷು ಹೆಸರೇ ಏಕೆ, ಕನ್ನಡದ ಮೊಲದ ಗಡ್ಡ, ಗುಪ್ತ ತೋಟ, ಜೋಡಿಸಿದ ಸೇತುವೆ ಅನ್ನೋ ತರದ ಹೆಸರೇಕೆ ಇರಬಾರದು ಅಂತಿದ್ರು ಗೌಡ್ರು. ಆದ್ರೆ. ಇಲ್ಲಿಗೆ ಬರೋ ಹೆಚ್ಚಿನ ಪ್ರವಾಸಿಗ್ರೆಲ್ಲಾ ಮಹಾರಾಷ್ಟ್ರ, ಗೋವಾದವ್ರು. ಪ್ರತಿಯೊಬ್ಬನಿಗೂ ಇರೋ ೧೪೦೦ ರೂಗಳ ಶುಲ್ಕ ಕೂಡ ಸ್ಥಳೀಯರಿಗೆ ಇದು ಹುಳಿದ್ರಾಕ್ಷಿಯ ಭಾವ ಕೊಟ್ಟಿರಲಿಕ್ಕೆ ಸಾಕು. ನಮ್ಮಂತಹ ಕನ್ನಡಿಗರೇ ಇಲ್ಲಿಗೆ ಬಂದು ಪ್ರತೀ ಸ್ಥಳಕ್ಕೂ ಒಂದೊಂದು ಕನ್ನಡ ಹೆಸರಿನ ಬಾವುಟ ಹುಗಿದು ಹೋಗಬೇಕು ಗೌಡ್ರೆ. ಆಗ ಇಲ್ಲೆಲ್ಲಾ ಕನ್ನಡದ ಹೆಸ್ರು ಬರ್ಬೋದು ಅಂದೆ. ಉತ್ತರ ಕನ್ನಡದಲ್ಲಿರೋ ಈ ರಾಫ್ಟಿಂಗಿನಲ್ಲಿ ಒಂದು ರಾಫ್ಟಿಗೂ(ರಾಫ್ಟು ಅನ್ನೋದು ಒಂದು ಆಂಗ್ಲ ನಾಮವೇ !) ಕನ್ನಡ ಹೆಸರಿಲ್ಲದ ಬಗ್ಗೆ, ಅಥವಾ ಇದ್ದರೂ ನಮಗೆ ತಿಳಿಯದ ಬಗ್ಗೆ ನಮ್ಮ ಬೇಸರ ವ್ಯಕ್ತವಾಗಿದ್ದು. ಇನ್ನು, ಇದರ ಪಕ್ಕದಲ್ಲೇ ಸರ್ಕೋಜಿ ಅಂತೊಂದು ಜಲಪಾತವಿದ್ಯಂತೆ. ದೋಣಿಯಲ್ಲಿದ್ದ ನಾವು ಅದ್ರ ಬಗ್ಗೆ ಮಾತನಾಡಿದ್ದು ಕೇಳಿದ ಸುನೀಲ್, ನೀವು ಅಲ್ಲೇನು ಹೋಗ್ತೀರಾ , ಇಲ್ಲೇ ನಿಮಗೆ ಸರ್ಫಿಂಗ್ ಮಾಡಿಸ್ತೀನಿ.ಆಮೇಲೆ ಅದಕ್ಕೆಷ್ಟಾದ್ರೂ ಕೊಡಬಹುದು. ಓಕೇನಾ ಅಂದ ? ಹೂಂ ಸರಿ ಅಂದ್ವಿ.
ಸರ್ಫಿಂಗ್ ಅಂದ್ರೆ ಈ ಧುಮುಕುತ್ತಿರೋ ರಾಫ್ಟುಗಳ ಕೆಳಗಿಳಿದ ಮೇಲೆ ಅವುಗಳ ವಿರುದ್ದ ದಿಕ್ಕಿನಿಂದ ಅವುಗಳತ್ತ ಧಾವಿಸೋದು ! ನಮ್ಮ ದೋಣಿಯೇ ನೀರೋಳಗೆ ಮುಳುಗಿ ಮೇಲೆದ್ದು ಬಂದ ಭಾವ. ಒಂದೆರಡು ಕ್ಷಣ ಕಣ್ಣು, ಮುಖ, ತಲೆ ಮುಚ್ಚಿರೋ ನೀರ ಮಧ್ಯದಲ್ಲಿ ಮೂಗೊಳಗೆಲ್ಲಾ ನೀರು ನುಗ್ಗಿ ವಾಪಾಸ್ ಬಂದ್ರೆ ಸಾಕಪ್ಪಾ ಅನಿಸೋ ಭಾವ. ಒಳ್ಳೆ ಎಣ್ಣೆಯಲ್ಲಿ ಹಪ್ಪಳ ಕರೆದಂತೆ , ಒಂದೆಡೆ ನೀರಲ್ಲಿ ಮುಳುಗಿದರೂ ಬ್ಯಾಲೆನ್ಸ್ ಮಾಡಿ ಮತ್ತೆ ಮೇಲೆ ಕರ್ಕೊಂಡು ಬರೋ ಗೈಡಿನ ಕೈಚಳಕ, ಶಕ್ತಿಯನ್ನು ಮೆಚ್ಚಲೇ ಬೇಕು. ಇಂತಹ ಒಂದು ಸರ್ಫಿಂಗಿನಲ್ಲಿ ಮುಂದೆ ಕೂರೋದಕ್ಕೆ ಎಲ್ಲರಿಗೂ ಉತ್ಸಾಹ. ಮುಂದಿದ್ದ ಮೂರು ಮಂದಿಗೆ ನೀರ ಅಭಿಷೇಕ. ಸ್ವಲ್ಪ ಹಗ್ಗ ಬಿಟ್ಟರೂ ಒಲೆಯುತ್ತಿರೋ ದೋಣಿಯಿಂದ ಹೊರಗೆ ನೀರಲ್ಲಿ ಮುಗ್ಗರಿಸೋ ಅಪಾಯ. ಹುಟ್ಟನ್ನು ಒಳಗಿಟ್ಟು, ಹಗ್ಗ ಬಿಗಿಯಾಗಿ ಹಿಡಿದು ಭೋರ್ಗರೆಯೋ ನೀರ ವೇಗಕ್ಕೆ ತಲೆಯೊಡ್ಡೋದಿದ್ಯಲ್ಲಾ ? ವಾವ್.. ಇದೇ ತರದ ರಾಫ್ಟಿಂಗೊಂದರಲ್ಲಿ ಅಕ್ಷಯ್ ಕೆಳಜಾರಿದ್ದು ನಮಗೆಲ್ಲಾ ಗೊತ್ತಾಗೋಕೆ ಎರಡು ಸೆಕೆಂಡೇ ಬೇಕಾಯ್ತು !. ನೀರು ಮೂಗಿಗೆ ಹೊಡೀತಿದೆ ಅಂತ ಒಂದು ಕೈಬಿಟ್ಟಿದ್ದ ಅಕ್ಷಯನ್ನ ನೀರಿನ ರಭಸ ಎತ್ತಿ ಹೊರಗೆಸೆದಿದೆ. ಎಲ್ಲಿ, ಎಲ್ಲಿ ಅಂತ ನೊಡ್ತಾ ಇದ್ರೂ ನೀರಿನ ನೊರೆಗಳ ಬಿಳಿ, ಅಕ್ಷಯ್ ತೊಟ್ಟ ಶರ್ಟಿನ ಬಿಳಿ ಎಲ್ಲಾ ಒಂದೇ ಆಗಿ ಎಲ್ಲೋದರು ಅಂತ ಗೊತ್ತಾಗ್ತಿಲ್ಲ. ಲೈಫ್ ಜಾಕೆಟ್ ಇದ್ಯಲ್ಲಾ. ಹಾಗಾಗಿ ನೀರು ಹೇಗಾದ್ರೂ ಎತ್ತಿ ಹೊರಗೆಸಿಯುತ್ತೆ ಅನ್ನೋ ಧೈರ್ಯ. ಮೊದಲು ಅವರ ಹೆಲ್ಮೆಟ್ ತೇಲಿ ಬಂತು, ಆಮೇಲೆ ಅವರ ಹುಟ್ಟು. ಎಲ್ಲಪ್ಪ ಅಕ್ಷಯ್ ಅಂತ ಹುಡುಕೋ ಹೊತ್ತಿಗೆ ಮಾರು ದೂರದಲ್ಲಿ ಕಂಡ್ರು ಅಕ್ಷಯ್. ಅವರು ಬೋಟಿನ ಕೆಳಗೆ ಹೋಗಿ ಬಿಟ್ಟಿದ್ರಂತೆ. ಮೇಲೆ ಬರೋಕೆ ಅಂತ ನೊಡಿದ್ರೆ ಮೇಲೇನೋ ಕೆಂಪಗೆ ಕಾಣ್ತಾ ಇದೆ. ಮೇಲೆ ಬರೋಕಾಗ್ತಾ ಇಲ್ಲ !. ಕೊನೆಗೆ ಹೆಂಗಿದ್ರೂ ಲೈಫ್ ಜಾಕೇಟಿದ್ಯಲ್ಲಾ ಅಂತ ಮೇಲೆ ಬರೋ ಪ್ರಯತ್ನ ಬಿಟ್ಟು ಬೆನ್ನು ಮೇಲೆ ಮಾಡಿ ಮಲಗಿಬಿಟ್ರಂತೆ. ಅವರು ಮಲಗಿದ್ದೇ ತಡ, ಈಚೆ ಬಂದಿದ್ದಾರೆ. ಇತ್ತ ಹೆಲ್ಮೆಟ್ಟು, ಹುಟ್ಟು ನೋಡಿ ಗಾಬರಿಯಾದ ನಮ್ಮ ಗೈಡು ಅಕ್ಷಯನ್ನ ಹುಡುಕೋಕಂತ ಬೋಟಿಂದ ಕೆಳಹಾರಲು ತಯಾರಾಗಿದ್ದ. ಅಕ್ಷಯನ್ನ ಕಂಡಿದ್ದೇ ತಡ. ಬಂದ್ವಿ ಬಂದ್ವಿ ಅಂತ ಕೂಗಿದ ನಾನೂ , ಗೌಡ್ರು ಇನ್ನಿಲ್ಲದಷ್ಟು ಶಕ್ತಿಯಿಂದ ಹುಟ್ಟು ಹಾಕಿದ್ವಿ. ಅಲ್ಲಿಯವರೆಗೆ ಮುಂದೆ ಕುಳಿತು ಹುಟ್ಟು ಹಾಕಿ ಸುಸ್ತಾಗಿ ಹೋಗಿದ್ದ ನನಗೆ ಆ ಕ್ಷಣದಲ್ಲಿ ಎಲ್ಲಾ ಸುಸ್ತು ಮರೆತುಹೋಗಿತ್ತು.
ಮುಂಚೆಯೇ ಒಮ್ಮೆ ನೀರಿಗೆಸೆದು , ನೀರಿನ ಭಯ ಕಮ್ಮಿ ಮಾಡಿದ್ದು ಯಾಕೆ ಅಂತ ಆಗ ಅರ್ಥವಾಯ್ತು ನಮಗೆಲ್ಲಾ . ಪಾಪ ಅಕ್ಷಯ್.. ಆ ನಾಲ್ಕೈದು ಕ್ಷಣಗಳಲ್ಲಿ ಸೈನು ಮಾಡಿದ ಪತ್ರವನ್ನೆಲ್ಲಾ ನೆನೆಸಿಕೊಂಡಿದ್ರಂತೆ. ಜೀವನದ ಮೌಲ್ಯ ಗೊತ್ತಾಗೋದೇ ಇಂತಾ ಕ್ಷಣಗಳಿಂದ ಅನ್ಸುತ್ತೆ. ಹುಚ್ಚು ಸಾಹಸ ಅಂತಲ್ಲ. ಎಲ್ಲಾ ತರಹದ ರಕ್ಷಣೆಗಳಿದ್ದರೂ ಈ ತರ ಅನಿಸೋ ನಮಗೆ ಯಾವ ರಕ್ಷಣೆಯೂ ಇಲ್ಲದೇ, ನೀರಿನ ಆಳವೂ ಅರಿಯದೇ ಈಜು ಬರುತ್ತೆ ಅಂತ ಧುಮುಕಿ ಸುಳಿಗಳಲ್ಲಿ ಸಿಕ್ಕು ಸಾಯೋರ್ನ ಕಂಡರೆ ಏನನ್ನಬೇಕು ಅಂತ ಗೊತ್ತಾಗೋಲ್ಲ. ಜೀವನದಲ್ಲಿ ನಮ್ಮನ್ನ ನಂಬಿಕೊಂಡೋರು ಎಷ್ಟು ಜನ ಇರ್ತಾರೆ, ಅದನ್ನೆಲ್ಲಾ ಹಿಂಗೆ ಧುಮುಕೋ ಮೊದ್ಲು ಒಂದು ಸಲವಾದ್ರೂ ಯೋಚ್ನೆ ಮಾಡ್ಬಾರ್ದಾ ಅನಿಸ್ತು. ಜೋರ್ ಲಗಾಕೆ ಐಸಾ, ಗಿಲಿಗಿಲಿ ಲಕ್ಕಾ ಐತಲಕ್ಕಾ ಹೂ ಹಾ ಹೂ ಹಾ, ಅವ್ನು ನೋಡು ಐಸಾ, ಸ್ಮೈಮು ನೋಡು ಐಸಾ.. ಹೀಗೆ ಎಲ್ಲಾ ತರದ ಕೂಗಾಟಗಳು ನಡೆದ್ವು ಮಧ್ಯೆ ಮಧ್ಯೆ. ಸುಸ್ತಾದ ನನ್ನ ಹಿಂದೆ ಕಳಿಸಿ ಹಿಂದಿದ್ದವರನ್ನು ಮುಂದೆ ಕರೆಸಿದ ಗೈಡು. ಅದಾದ ಮೇಲೆ ಮತ್ತೊಂದಿಷ್ಟು ರಾಫ್ಟುಗಳು. ತಮಾಷೆ. ಮಧ್ಯೆಯ ಪ್ರಶಾಂತ ನೀರ ಹರಿವಲ್ಲಿ ಕೆಲಹೊತ್ತು ನಿಲ್ಲಿಸಿ ಬೋಟನ್ನು ಗಿರಿಗಿಟ್ಲೆ ತಿರುಗಿಸೋದು , ಆ ಬಿಳಿಯ ಜುಳು ಜುಳು ಧಾರೆಯನ್ನ, ಹಚ್ಚಹಸಿರ ಪ್ರಕೃತಿಯನ್ನ ನೊಡೋಕೆ ಬಿಟ್ತಿದ್ದ ನಮ್ಮ ಗೈಡು ಸುನೀಲ್. ಮಧ್ಯ ಮಧ್ಯ ಹಣ್ಣಹೊತ್ತಿದ್ದ ಮಾವಿನ ಮರಗಳಿಂದ ಅರೆಬರೆ ಹಣ್ಣುಗಳು ನೀರಿಗೆ ಬೀಳುತ್ತಿದ್ದವು. ಅಯ್ಯೋ, ಆ ನೀರ ಮಧ್ಯವೂ ಅವು ಸಿಕ್ಕಾವೇ ? ಆಮೇಲೆ ತಿನ್ನೋಣ ಅಂತ ಸಂಗ್ರಹಿಸೋ ಧಾವಂತ ! ಮತ್ತೊಂದು ದೋಣಿಯವರಿಗೆ ನಾವು, ನಮಗವರು ನೀರೆರಚೋ ಆಟ.ಹಿಂಗೇ ಸಾಗುತ್ತಾ ನಮ್ಮೆಲ್ಲರ ಕೈಸೋಲೋ ಹೊತ್ತಿಗೆ ದಡಬಂದಿತ್ತು. ನಮ್ಮನ್ನು ಒಂದು ಕಡೆ ತಂದು ನಿಲ್ಲಿಸಿದ್ದ ಜೀಪುಗಳು ಮತ್ತೆ ಕರೆದೊಯ್ಯಲು ಬಂದಿದ್ವು. ಪ್ರಾಣರಕ್ಷಕ ಗೈಡುಗಳಿಗೊಮ್ಮೆ ಧನ್ಯವಾದ ಅಂದ್ವಿ. ಅಲ್ಲಿ ಮೊಬೈಲು, ಕಾಗದ ಏನೂ ತಗೊಂಡೋಗೂ ಹಾಗಿರಲಿಲ್ಲ. ಇಲ್ಲಾಂದ್ರೆ ಗ್ರೈಡುಗಳ ಜೊತೆಗೆ ಒಂದಿಷ್ಟು ಫೋಟೋಗಳನ್ನು, ಅವರ ಮೊಬೈಲ್ ನಂಬರ್, ಆಟೋಗ್ರಾಫುಗಳನ್ನ ಸಂಗ್ರಹಿಸಬಹುದಾಗಿತ್ತೇನೋ. ಆದ್ರೆ ಅವಿಲ್ಲದಿದ್ದರೂ ಮಧ್ಯೆ ಮಧ್ಯೆ ನಮಗೇ ಗೊತ್ತಿಲ್ಲದಂತೆ ದಡದಲ್ಲಿದ್ದ ಫೋಟೋಗ್ರಾಫರೊಬ್ರು ತೆಗೆದಿದ್ದ ಫೋಟೋಗಳು ಆಮೇಲೆ ಕೈ ಸಿಕ್ಕವು. ಬಸ್ಟಾಂಡಿನ ಹತ್ರ ತೆರಳಿ, ಅಲ್ಲಿ ಇವತ್ತಿನ ಫೋಟೋಗಳು ಸಿಗುತ್ವೆ ಅಂದ ಗೈಡಿಗ ವಿದಾಯ ಮತ್ತು ಕೃತಜ್ನತೆ ಹೇಳಿ ಹೊರಡುವಾಗ ಹೃದಯ ತುಂಬಿ ಬಂದಿತ್ತು. ಸಾಹಸದಿಂದ ಮನಸ್ಸು ದೇಹಕ್ಕೇನೋ ಖುಷಿಯಾಗಿತ್ತು. ಆದ್ರೆ ಹೊಟ್ಟೆಗೆ ? ನಾವಿದ್ದ ಲಾಡ್ಜಿನತ್ರ ಯಾವುದೋ ಖಾನಾವಳಿಯಿದೆಯೆಂಬ ಸುದ್ದಿ ಕೇಳಿ ಅತ್ತ ಗಾಡಿ ತಿರುಗಿಸಿದ್ವಿ. ದಾಂಡೇಲಿಯ ಗಡದ್ದಾದ ರೊಟ್ಟಿಯೂಟ ಮುಂದೆ ನಮಗೆ ಕಾದಿರುವ ಗಂಟೆಗಟ್ಟಲೇ ಪಯಣಕ್ಕೆ ಶಕ್ತಿ ನೀಡಲನುವಾಗಿ ಕಾಯ್ತಾ ಇತ್ತು.. ಅಂದು ಮೂರೂವರೆಗೆ ದಾಂಡೇಲಿಯಿಂದ ಬಿಟ್ಟು ರಾತ್ರೆ ಒಂಭತ್ತಕ್ಕೆ ಬೆಳಗಾವಿಯ ಚಿಕ್ಕೋಡಿ ತಲುಪಿದ್ದು, ಅಲ್ಲಿಂದ ಮಾರನೇ ದಿನ ಮದುವೆ ಮುಗಿಸಿ ಹೊರಟವರು ರೈಲ ಲೇಟಿಂದ ಮಧ್ಯಾಹ್ನ ಹನ್ನೊಂದಕ್ಕೆ ಬೆಂಗಳೂರು ತಲುಪಿದ್ದೂ ದೊಡ್ಡ ಕತೆಯೆ. ಈ ರೈಲ ಲೇಟಿನ ಬಗ್ಗೆ, ಮತ್ತೆ ಹುಬ್ಬಳ್ಳಿಯ ಬಸವೇಶ್ವರ ಖಾನಾವಳಿ ಹುಡುಕಿದ ಬಗ್ಗೆ ಬರೆಯುತ್ತಾ ಕೂತ್ರೆ ಅದೇ ಒಂದು ದೊಡ್ಡ ಕತೆಯಾದೀತು. ಅದಾಗೋ ಮುಂಚೆಯೇ ವಿರಮಿಸುತ್ತೇನೆ.. ದಾಂಡೇಲಿಯ ಮಧುರ ನೆನಪುಗಳೊಂದಿಗೆ..
ಹೇಗೆ ಬುಕ್ ಮಾಡೋದು ?
೧. http://www.riverraftingindandeli.com/
೨. http://www.dandeli.com/
******
ಸಂಗ್ರಹಯೋಗ್ಯ ಬರಹ. ಗುಡ್.!!