ಹೊರಗಿನಿಂದ ಬರುತ್ತಿದ್ದ ಗಾಳಿಗೋ, ರೂಮಿನಲ್ಲಿ ತಿರುಗುತ್ತಿದ್ದ ಫ್ಯಾನ್ ಗಾಳಿಗೋ ಗೊತ್ತಿಲ್ಲ; ಗೋಡೆಗೆ ನೇತುಹಾಕಿದ್ದ ಕ್ಯಾಲೆಂಡರ್ ಆಚೀಚೆ ಅಲ್ಲಾಡುತ್ತಾ ಶಬ್ದ ಮಾಡುತ್ತಿತ್ತು. ಸಾಮಾನ್ಯವಾಗಿ ನನಗೆ ಮಲಗಿದ ಹತ್ತು-ಹದಿನೈದು ನಿಮಿಷಕ್ಕೆಲ್ಲಾ ನಿದ್ದೆ ಬರ್ತಿತ್ತು. ಇವತ್ತು ಹನ್ನೆರಡು ಘಂಟೆ ಆದ್ರೂ ನಿದ್ದೆ ಬರದೆ ಆಚೀಚೆ ಹೊರಳಾಡ್ತಾ ಇದ್ದ ನನ್ನನ್ನ ನೋಡಿ ಪಕ್ಕದಲ್ಲಿದ್ದ ರೂಮ್ ಮೇಟ್ ಕೇಳ್ದ.
“ಯಾಕೋ? ಇನ್ನೂ ನಿದ್ದೆ ಬಂದಿಲ್ವಾ?”
“ಇಲ್ಲಾ ಕಡೋ, ಬೂಗು ಕಟ್ಟಿದೆ” ಅಂದೆ.
“ಏನು?! ಏನು ಕಟ್ಟಿದೆ?” ಜೋರಾಗಿ ನಗುತ್ತಾ ಮತ್ತೆ ಕೇಳಿದ.
“ಬೂಗು! ಕಡೋ ಬೂಗು!” ಅಂದೆ.
ಇನ್ನೂ ಜೋರಾಗಿ ನಗುತ್ತಾ “ಮೂಗು ಅಂತ ಹೇಳೋಕೂ ಆಗ್ತಿಲ್ವಲೋ ನಿಂಗೆ! ಅಲ್ಲಿ ಶೋಕೇಸಲ್ಲಿ ವಿಕ್ಸ್ ಇದೆ, ಹಚ್ಕೊಂಡು ಮಲ್ಗು” ಅಂದ.
ನಾನು ಎದ್ದು ಹೋಗಿ ವಿಕ್ಸ್ ತಗೊಂಡು ಹಚ್ಕೋತಾ ಮಲಗಿದೆ. ಅವ್ನಿನ್ನೂ ನಗ್ತಾನೆ ಇದ್ದ.
ನಾನು “ಉಸಿರಾಡೋಕೆ ಆಗಲ್ಲ ಅತ್ತ ದಾದಿದ್ರೆ ದಿಗ್ಗೆ ದಗು ಅಲ್ವಾ” ಅಂದೆ.
ನನ್ನ ಮಾತು ಕೇಳಿ ಅವ್ನ ನಗು ಇನ್ನೂ ಜೋರಾಯ್ತು! “ಆಯ್ತು ಮಾರಾಯ! ವಿಕ್ಸ್ ಸ್ವಲ್ಪ ಜಾಸ್ತೀನೇ ಹಚ್ಕೊಂಡು ಮಲ್ಗು, ಬೆಳಿಗ್ಗೆ ಸರಿ ಆಗತ್ತೆ. ಗುಡ್ ನೈಟ್” ಅನ್ನುತ್ತಾ ಆಚೆ ತಿರುಗಿ ಮಲಗಿದ.
ವಿಕ್ಸ್ ಹಚ್ಚಿಕೊಂಡ ಕೆಲಹೊತ್ತು ಸರಿಯಾಗೇ ಉಸಿರಾಡಿದೆ, ಆಮೇಲೆ ಮತ್ತದೇ ಗೋಳು. ಬೆಳಗಿನ ತನಕಾನೂ ‘ಸೊರ್’ ‘ಸೊರ್’ ಅಂತಾನೇ ಇದ್ದೆ.
ಬೆಳಿಗ್ಗೆ ಎದ್ದು ಬಿಸಿಬಿಸಿ ನೀರಿನ ಸ್ನಾನವಾದ ಮೇಲೆ ಸ್ವಲ್ಪ ಸಮಾಧಾನವೇನೋ ಆಯ್ತು. ಆದ್ರೆ ಆಮೇಲೆ ಬಸ್ಸಲ್ಲಿ ನನ್ನ ಫ್ರೆಂಡಿನ ಮದುವೆಗೆ ಅಂತ ಹೋಗುವಾಗ ಬೀಸಿದ ಗಾಳಿಗೆ ಮತ್ತೆ ನನ್ನ ಮೂಗಿನಲ್ಲಿ ‘ಲಾವಾರಸ’ ಉಕ್ಕಿ ಹರಿಯಲಾಗದ ಸ್ಥಿತಿಯಲ್ಲಿ ತುಂಬಿಕೊಂಡಿತ್ತು!
ನನ್ನ ಕ್ಲಾಸ್ ಮೇಟ್ ಮದುವೆಗೆ ನಮ್ಮ ಒಂದಷ್ಟು ಜನ ಫ್ರೆಂಡ್ಸ್ ಬಂದಿದ್ರು. ಎಲ್ಲರೂ ಮಾತಾಡ್ತಾ ಹಾಗೇ ಅಂತ್ಯಾಕ್ಷರಿ ಆಡೋಣ ಅಂತ ತೀರ್ಮಾನವಾಯ್ತು. ಹಾಗೇ ಆಡ್ತಾ ನಾನಿದ್ದ ತಂಡಕ್ಕೆ ‘ಮ’ ಅಕ್ಷರ ಬಂತು. ನಂಗೆ ಹಾಡು ನೆನಪಾಗಿ ಹಾಡೋಕೆ ಶುರು ಮಾಡ್ದೆ.
“ಬಿಚ್ಚಾಗಿ ದೀದು ಬರಲು, ದಿತ್ತಲ್ಲಿಯೇ ಬಳೆಗಾಲ!”
ಅಷ್ಟೆ! ಎಲ್ರೂ ಜೋರಾಗಿ ನಕ್ಕಿದ್ದಲ್ದೆ ಆಮೇಲೆ ಎಲ್ಲಾ ಹಾಡುಗಳನ್ನ ಅವರವರ ಮೂಗು ಹಿಡಿದುಕೊಂಡು ಹಾಡಿದ್ರು.
ಮಾತು ನೆಗಡಿಯ ಕಡೆ ತಿರುಗಿದ್ರಿಂದ ಒಬ್ಬ ಅವನ ಸ್ಕೂಲಿನಲ್ಲಿ ಆದ ಘಟನೆ ಹೇಳಿದ.
“ನಾನು ಎರಡನೇ ಕ್ಲಾಸಿಗೆ ಹೋಗ್ತಿರ್ಬೇಕಾದ್ರೆ ಒಬ್ಬ ನನ್ನ ಪಕ್ಕ ಕೂರ್ತಿದ್ದ, ಅವನ ಹೆಸ್ರು ಈಗ ನಂಗೆ ನೆನಪಿಲ್ಲ. ಅವನ ಮೂಗು ಯಾವಾಗ್ಲೂ ಸೋರ್ತಾ ಇರ್ತಿತ್ತು. ಅವನು ಎಷ್ಟು ಕೊಳಕ ಅಂದ್ರೆ ಅವನ ಮೂಗಿಂದ ಸೋರುತ್ತಿದ್ದ ಸಿಂಬಳಾನ ವರೆಸಿಕೊಳ್ತಾನೇ ಇರ್ಲಿಲ್ಲ! ಕೆಲವು ಸಲಾನಂತೂ ಅದು ಸೀದ ಅವನ ಬಾಯಿಯ ಒಳಗೂ ಹೋಗ್ತಿತ್ತು !” ಅಂದ.
ನಾನು ಅನ್ಕೊಂಡ ಹಾಗೇ ನನ್ನನ್ನ ಆ ಸಿಂಬಳದ ಹುಡುಗನ ಜೊತೆ ಹೋಲಿಕೆ ಮಾಡಿ ಒಂದಷ್ಟು ಜೋಕುಗಳು ನಮ್ಮ ಮಧ್ಯೆ ಓಡಾಡಿದ್ವು.
ಮದುವೆ ಮುಗಿಸಿ ಮನೆಗೆ ಬಂದವ್ನೇ ಅದ್ಯಾರೋ ಹೇಳಿದ್ದ ನೆಗಡಿ ಸರಿಮಾಡುವ ‘ಟ್ಯಾಬ್ಲೆಟ್’ ತಂದು ತಿಂದೆ.
ಇನ್ನೆಲ್ಲೋ ಓದಿದ್ರಿಂದ ಒಂದು ಪಾತ್ರೆ ಬಿಸಿನೀರಿಗೆ ವಿಕ್ಸ್ ಹಾಕಿ, ತಲೆ ಮೇಲೆ ಟವೆಲ್ ಹಾಕಿಕೊಂಡು ಪಾತ್ರೆ ಜೊತೆಗೆ ‘ಗುಮ್ಮ’ ಹಾಕಿಕೊಂಡೆ.
ಮನೆಗೆ ಫೋನ್ ಮಾಡಿದಾಗ ಅಮ್ಮ ಹೇಳಿದ ಹಾಗೆ ‘ಕಷಾಯ’ ಮಾಡಿ ಕುಡಿದೆ.
ಅಪ್ಪ ಹೇಳಿದ ‘ಕಾಫ್ ಸಿರಪ್’,
ಇನ್ಯಾರೋ ಹೇಳಿದ ‘ಈರುಳ್ಳಿ-ಬೆಲ್ಲ’,
ಇನ್ನೆಂಥದೋ ಜೇನುತುಪ್ಪದೊಂದಿಗೆ ನೆಕ್ಕುವ ಪುಡಿ.
ಈ ಎಲ್ಲಾ ಔಷಧಿ ಮಾಡಿದ್ರೂ ಮತ್ತೆರಡು ದಿನ ನನ್ನ ‘ಬೂಗು’ ಸರಿಯಾಗಲೇ ಇಲ್ಲ.
ಮೂರನೇ ದಿನ ಬೆಳಿಗ್ಗೆ ಎದ್ದಾಗ ಆಶ್ಚರ್ಯವೆಂಬಂತೆ ನನ್ನ ‘ಬೂಗಿಗೆ’ ಜೀವ ಬಂದಿತ್ತು. ಈಗ ಅದು ಮತ್ತೆ ‘ಮೂಗು’ ಆಗಿತ್ತು! ಆದರೆ ಈ ‘ಬೂಗು’ ‘ಮೂಗು’ ಆಗಲು ಸಹಾಯ ಮಾಡಿದ್ದು ಟ್ಯಾಬ್ಲೆಟ್ಟೋ, ಬಿಸಿನೀರಿನ ಪಾತ್ರೆಯೊಂದಿಗೆ ಹಾಕಿಕೊಂಡ ‘ಗುಮ್ಮ’ನೋ, ಈರುಳ್ಳಿ-ಬೆಲ್ಲವೋ, ಕಾಫ್-ಸಿರಪ್ಪೋ, ಕಷಾಯವೋ, ಜೇನುತುಪ್ಪದೊಂದಿಗೆ ನೆಕ್ಕಿದ ಪುಡಿಯೋ ಅಥವಾ ಇದ್ಯಾವುದೂ ಅಲ್ಲದ ಇನ್ನೆಂಥದೋ ಅಂತ ನನಗೂ, ‘ನನ್ನ ಮೂಗಿಗೂ’, ‘ದದ್ದ ಬೂಗಿಗೂ’ ಗೊತ್ತಾಗಲೇ ಇಲ್ಲ !
ವಾರೆ…ವಾ…ಸುಪರ್…
ದಿಬ್ಬ ಕಥೆ ಚೆಂದ ಉಂಟು ಬಾರಾಯರೆ
nice article.
ನಿಮ್ಮ ಮೂಗು ಕುಯ್ಯಾ…!! ಸೂಪರ್ ಇದೆ..
Supppppper Prajju……..
ಹಾ ಹಾ ಸೂಪರ್.. 😀
[…] ವಾರ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ ! https://www.panjumagazine.com/?p=2960 ದದ್ದ ಬೂಗು ಕಟ್ಟಿದಾಗ ! ಹೊರಗಿನಿಂದ […]
[…] ವಾರ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ !https://www.panjumagazine.com/?p=2960ದದ್ದ ಬೂಗು ಕಟ್ಟಿದಾಗ ! ಹೊರಗಿನಿಂದ […]