ಧಾರವಾಡ ಅಗಸ್ಟ:19: ಧಾರವಾಡದ ನಿವೃತ್ತ ಶಿಕ್ಷಕಿ ಲೂಸಿ.ಸಾಲ್ಡಾನ ಅವರು ತಮ್ಮ 55ನೇ ದತ್ತಿನಿಧಿಯನ್ನು ಜೀರಿಗವಾಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀಡಿದರು. ದತ್ತಿ ನಿಧಿಯನ್ನು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯವರು ಮತ್ತು ಶಾಲಾ ಮುಖ್ಯ ಶಿಕ್ಷಕರುಗಳಿಗೆ ಹಸ್ತಾಂತರಿಸಿ ಮಾತನಾಡಿದ ಅವರು ಶ್ರೀಮಂತ ಕುಟುಂಬದಲ್ಲಿ ಜನಿಸಿದ ನಾನು ಅನಿರಿಕ್ಷಿತವಾಗಿ ತಂದೆ ತಾಯಿಯನ್ನು ಕಳೆದುಕೊಂಡು ಬಡತನವನ್ನು ಕಣ್ಣಾರೆ ಕಂಡು, ಎಲ್ಲೋ ಎದ್ದು ಬಿದ್ದು ಅಕ್ಷರ ಕಲಿತು ಶಿಕ್ಷಕಿಯಾಗಿ ಇಂದ ನಾನು ನಿವೃತ್ತನಾಗಿದ್ದೇನೆ. ಹಳ್ಳಿಗಾಡಿನಲ್ಲಿ ಮಕ್ಕಳನ್ನು ಪಾಲಕರು ಬಡತನದ ಕಾರಣಕ್ಕಾಗಿ ಶಾಲೆ ಬಿಡಿಸುತ್ತಾರೆ. ಅಲ್ಲದೆ ಬಡತನದ ಕಾರಣಕ್ಕಾಗಿ ಕಲಿಕಾ ಸಾಮಗ್ರಿಗಳನ್ನು ಕೊಡಿಸುವುದಿಲ್ಲ. ಇದನ್ನೆಲ್ಲ ನಾನು ವೃತ್ತಿ ಜೀವನದಲ್ಲಿ ಕಣ್ಣಾರೆ ಕಂಡಿದ್ದೇವೆ. ಅದಕ್ಕಾಗಿ ನಾನು ಸೇವಾವಧಿಯಲ್ಲಿ ಶಪಥ ಮಾಡಿ ನಾನು ದುಡಿದ ಎಲ್ಲ ಹಣವನ್ನು ಸರಕಾರಿ ಶಾಲೆಗಳಲ್ಲಿ ಕಲಿಯುವ ಬಡಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ನಾನಿಟ್ಟ ದತ್ತಿನಿಧಿಯಿಂದ ಅದು ಸದುಪಯೋಗವಾಗಲಿ ಎಂದು ಸದುದ್ದೇಶದಿಂದ ನಾನು ನಿವೃತ್ತಿಯಾಗುವವರೆಗೆ ಪ್ರತಿತಿಂಗಳು ನನ್ನ ಪಿಂಚಣಿಯಲ್ಲಿ ಹಣ ಉಳಿಸಿ ದತ್ತಿ ಇಡುತ್ತಿದ್ದೇನೆ. ಇದರಿಂದ ನನಗೆ ಖುಷಿಯಿದೆ ಎಂದರು.
ಮುಖ್ಯ ಅತಿಥಿಯಾಗಿ ಅಗಮಿಸಿದ್ದ ಶಿಕ್ಷಣ ಸಂಯೋಜಕರಾದ ಎಸ್.ಎಸ್.ದಂಡಿನ ಮಾತನಾಡಿ ಶಾಲೆಗಳ ಸರ್ವಾಂಗೀಣ ಪ್ರಗತಿಗೆ ಕೇವಲ ಶಿಕ್ಷಕರಷ್ಟೇ ಪ್ರಯತ್ನ ಮಾಡಿದರೆ ಸಾಲದು. ಸಮುದಾಯದ ಸಹಕಾರ ಅತೀ ಅಗತ್ಯವಾಗಿದೆ. ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣವನ್ನು ಶಿಕ್ಷಕರು ನೀಡಿದರೆ ಎಸ.ಡಿ.ಎಂ.ಸಿ. ಇದಕ್ಕೆ ಬೆನ್ನೆಲುಬಾಗಿ ಸಹಕಾರ ನೀಡಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ಶಿಕ್ಷಕರು ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಸಾವಯವ ಕೃಷಿ ತಜ್ಞ ಗುರುಪುತ್ರಪ್ಪಾ ಶಿರೋಳ ಈ ದೇಶದ ಭವ್ಯ ಭವಿಷ್ಯ ವಾರಸುದಾರರಾದ ಮಕ್ಕಳಿಗೆ, ದೇಶದ ಬಗ್ಗೆ ಹೆಮ್ಮೆ ಅಭಿಮಾನ ಮೂಡಿಸುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಮೂಡಿಸಬೇಕಿದೆ. ಅಲ್ಲದೆ ಇಂದು ನಾವು ಮಣ್ಣನ್ನು ವಿಷಪೂರಿತನನ್ನಾಗಿ ಮಾಡಿದ್ದೇವೆ. ಕ್ರಿಮಿನಾಶಕಗಳ ಬಳಕೆಯಿಂದಾಗಿ ಮಣ್ಣು, ಗಾಳಿ, ನೀರು ಎಲ್ಲವೂ ಕಲುಷಿತವಾಗಿದೆ. ಇದರಿಂದ ನಾವು ದೂರವಿರಬೇಕಾಗಿದೆ. ಆದ್ದರಿಂದ ಸಾವಯವ ಕೃಷಿಯನ್ನು ಹೆಚ್ಚು ಹೆಚ್ಚು ಅಳವಡಿಸುವುದು ಅವಶ್ಯಕತೆಯಿದೆ. ಇಂದು ಮನುಷ್ಯ ಹೇಳ ಹೆಸರಿಲ್ಲದ ರೋಗಗಳಿಂದ ಮನುಷ್ಯ ಅರೋಗ್ಯಕ್ಕಾಗಿ ಸಾಲ ಮಾಡುವಂತಹ ಪರಿಸ್ಥಿತಿ ಬಂದೊದಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮತ್ತೊಬ್ಬ ಅತಿಥಿ ಭೀಮಪ್ಪ ಕಾಸಾಯಿ ಮಾತನಾಡಿ ಅಪ್ನಾದೇಶ ಬಳಗ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಮಣ್ಣಿನ ರಕ್ಷಣೆಯ ಜೊತೆ-ಜೊತೆಗೆ ಮೌಡ್ಯ ಹೋಗಲಾಡಿಸುವುದು. ವೈಜ್ಞಾನಿಕ ಮನೋಭಾವ ಮೂಡಿಸುವುದು. ಅಲ್ಲದೆ ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಹಳ್ಳಿಗಾಡಿನಲ್ಲಿ ಸಾಕಷ್ಟು ಕಾರ್ಯಕ್ರಮವನ್ನು ರೂಪಿಸಿ ಜನಜಾಗೃತಿ ಮೂಡಿಸುತ್ತಿದೆ ಎಂದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಮಲ್ಲಪ್ಪ ತೋಟಗಿ ಅಧ್ಯಕ್ಷತೆಯಲ್ಲಿ ಜರುಗಿದ ಈ ಸಮಾರಂಭದ ವೇದಿಕೆಯ ಮೇಲೆ ಅಪ್ನಾದೇಶ ಜಿಲ್ಲಾ ಸಂಚಾಲಕ ಎಂ.ಡಿ.ಹೊಸಮನಿ, ಬಿ.ಆರ್.ಹೊರಕೇರಿ, ಅರ್ಜುನ ನೆಲಗುರ್ದ , ಶಿವಪ್ಪ ಕ ರಬ್ಬಣ್ಣಿ, ಭೀಮಪ್ಪ ಹೊಂಗಲ, ಮೀನಾಕ್ಷಿ ಹುಣಸಿಮರದ, ರತ್ನಾ ಮಾಳೋನವರ, ಬಸಪ್ಪ ತೋಟಗಿ, ಅಡಿವೆಪ್ಪ ಹೊಂಗಲ, ಬಸಪ್ಪಾ.ಚ.ತೋಟಗಿ, ಸುಧಾ ಬೆಳವಡಿ, ಡಿ.ಆರ್.ಸನ್ನೂಭಾಯಿ, ಎ.ಎಸ್.ಗಿರೆಪ್ಪಗೌಡರ, ಎಸ್.ಎಂ.ನದಾಫ, ಎಂ.ಎಚ್.ಮಣಿಗಾರ ಮುಂತಾದವರು ಹಾಜರಿದ್ದರು. ಎ.ಎಚ್.ನದಾಫ ಸ್ವಾಗತಿಸಿದರು. ಸಿ.ಬಿ.ಗಾಮದ ನಿರೂಪಿಸಿದರು. ಎಂ.ಡಿ.ಹೊಸಮನಿ ವಂದಿಸಿದರು. ಇದೇ ಸಂದರ್ಭದಲ್ಲಿ ಲೂಸಿ ಸಾಲ್ಡಾನ ರೂ. 15000/- ದತ್ತಿ ನೀಡಿದರು. ಜಿ.ಟಿ.ಶಿರೋಳ ರೂ.10000/-, ಬಿ.ಆರ್.ಹೊರಕೇರಿ ರೂ5000/- ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಮಲ್ಲಪ್ಪಾ ತೋಟಗಿ ರೂ. 2000/-, ಭೀಮಪ್ಪ ಕಾಸಾಯಿ ರೂ. 500/- ದತ್ತಿ ನೀಡಿದರು.