ಈಗೊಂದೆರಡು ದಿನಗಳಿಂದ ಯಾರನ್ನು ಕಂಡರೂ ಕೆಂಡದಂತಹ ಕೋಪ. ಅದರಲ್ಲೂ ಸುಮ್ಮನೆ ಹಲ್ಲು ಕಿಸಿದುಕೊಂಡು ನಗ್ತಾ ಇರ್ತಾರಲ್ಲ ಅಂತವರನ್ನು ಕಂಡರೆ ಅವರ ಅಷ್ಟೂ ಹಲ್ಲುಗಳನ್ನು ಕೆಳಗುದುರಿಸಿ ಅವರ ಬೊಚ್ಚು ಬಾಯಿ ಪೆಚ್ಚಾಗುವಂತೆ ಮಾಡಬೇಕೆಂಬಾಸೆ.. ಇದ್ಯಾಕೋ ’ಏ ಹಾತ್ ಮುಜೆ ದೇದೋ ಠಾಕುರ್’ ಎಂದು ಅಬ್ಬರಿಸುವ ಗಬ್ಬರ್ ಸಿಂಗನನ್ನು ನಿಮಗೆ ನೆನಪಿಸಿದರೆ ಅದಕ್ಕೆ ನಾನಲ್ಲ ಹೊಣೆ. ನನ್ನ ಹಲ್ಲೇ ಹೊಣೆ.
ಹೌದು .. ಇಷ್ಟಕ್ಕೂ ಮೂಲ ಕಾರಣ ನನ್ನ ಹಲ್ಲುಗಳೇ. ಮಕ್ಕಳಿಗೆ ಮೊದಲು ಮೂಡುವ ಹಲ್ಲುಗಳನ್ನು ಹಾಲು ಹಲ್ಲುಗಳೆಂದು ಅದ್ಯಾರೋ ಹೆಸರಿಟ್ಟು ಕರೆದರೋ.. ನನ್ನ ಹಲ್ಲುಗಳೆಲ್ಲಾ ಹಾಲು ಹಲ್ಲುಗಳಾಗುವ ಬದಲು ಹಾಳು ಹಲ್ಲುಗಳಾಗಿತ್ತು. ಚಿಕ್ಕದಿರುವಾಗ ಅದನ್ನೆಲ್ಲಾ ನೈವೇದ್ಯದ ಕಲ್ಲು ಸಕ್ಕರೆಗೋ, ಬೆಲ್ಲದ ತುಂಡಿಗೋ, ಯಾವತ್ತೋ ಅಪುರೂಪಕ್ಕೆ ಸಿಗುತ್ತಿದ್ದ ಚಾಕೋಲೇಟಿಗೋ ದೂರು ಹಾಕುತ್ತಿದ್ದರು.ದಿನಕ್ಕೆರಡು ಬಾರಿ ಹಲ್ಲುಜ್ಜುವುದು ಎಂಬ ಸುಂದರ ಶಿಕ್ಷೆಗೆ ಒಳಗಾಗಿ ಸಿಹಿಯಾದ ಟೂತ್ ಪೇಸ್ಟನ್ನು ನುಂಗುತ್ತಿದ್ದೆನು. ಅಂತೂ ಆ ಎಲ್ಲಾ ಹಾಳು ಹಲ್ಲುಗಳು ಹುಳುಕು ಬಿದ್ದು, ತಾವೂ ಬಿದ್ದು ಹೋದ ಮೇಲೆ ನನ್ನ ಬಾಯೊಳಗೆ ಮುತ್ತಿನಂತಹ ಬಿಳುಪಾದ ಹಲ್ಲುಗಳು ಹುಟ್ಟಿದವು.
ಇವುಗಳ ದರ್ಬಾರಿನ ಕಾಲ ಸುಮಾರು ಹತ್ತು ಹನ್ನೆರಡು ವರ್ಷ ನಿರಾತಂಕವಾಗಿ ಸಾಗಿತ್ತು. ಶಾಲಾ ಕಾಲೇಜುಗಳ ಈ ಸಮಯ ನನ್ನ ಹಲ್ಲಿನ ಸ್ವರ್ಣಯುಗ ಎನ್ನಬಹುದು. ಶಾಲಾ ದಿನಗಳಲ್ಲಿ ಕದ್ದು ತಿನ್ನುತ್ತಿದ್ದ ಪಕ್ಕದ ತೋಟದ ಗಟ್ಟಿಯಾದ ಸೀಬೆಕಾಯನ್ನು ಬೀಜ ಸಮೇತ ಗಜ ಗಜನೆ ಜಗಿಯಲು ಇವು ಸಹಕಾರಿಯಾಗಿತ್ತು. ಅಜ್ಜಿ ಮನೆಗೆ ಹೋದರೆ ಅಜ್ಜಿ ಮಾಡುತ್ತಿದ್ದ ಉಂಡ್ಲಕಾಳು, ಚಕ್ಕುಲಿ, ತಂಬಿಟ್ಟುಂಡೆಯ ಅಗ್ರ ಭಾಗ ನನ್ನ ಬಾಯೊಳಗೇ ಕರಗುತ್ತಿತ್ತು. ಒಮ್ಮೆ ನನ್ನ ಚಿಕ್ಕಮ್ಮ ಆಗಷ್ಟೇ ಕಲಿತು ಮಾಡಿದ್ದ ಬಾಳೆ ಹಣ್ಣಿನ ಹಲ್ವಾ ಎಂಬ ಹೊಸ ರುಚಿಯು ಕಲ್ಲಿನಲ್ಲಿ ಗುದ್ದಿದರೂ ತುಂಡಾಗದೆಂಬ ಹೆಸರು ಪಡೆದಾಗ ಅದನ್ನು ಗರ ಗರನೆ ಪುಡಿ ಮಾಡಿ ಗುಳುಂ ಮಾಡಿದ ಕೀರ್ತಿ ನನ್ನ ಹಲ್ಲುಗಳದ್ದು. ಹೀಗೆ ದೈದೀಪ್ಯಮಾನವಾಗಿ ಬೆಳಗುತ್ತಿದ್ದ ನನ್ನ ಹಲ್ಲುಗಳ ಖ್ಯಾತಿಗೆ ಅದ್ಯಾವ ಪಾಪಿ ಕಣ್ಣು ಮುಟ್ಟಿತೇನೋ..
ಆಗಲೇ ನನ್ನ ಹಿಂದಿನ ಹಲ್ಲಿನಲ್ಲಿ ಕಪ್ಪು ಚುಕ್ಕೆಯೊಂದು ಮೂಡಿದ್ದು. ಕೆಲ ಸಮಯ ನನ್ನ ಗಮನಕ್ಕೆ ಬಾರದ ಇದು ಒಮ್ಮಿಂದೊಮ್ಮೆಲೇ ಹಲ್ಲು ಸಿಡಿತ ಎಂಬ ವ್ಯಾಧಿಗೆ ಗುರಿಯಾದಾಗಲೇ ನನ್ನರಿವಿಗೆ ಬಂದದ್ದು. ಅಷ್ಟಕ್ಕೆಲ್ಲಾ ಹೆದರಿ ಹಿಂಜರಿಯುವವಳೇ ನಾನು.. ..ಹಾಗಾಗಿಯೇ ಇಷ್ಟಕ್ಕೆಲ್ಲಾ ಡಾಕ್ಟರನ್ನು ಹುಡುಕಿ ಹೋಗುವುದುಂಟೇ ಎಂದು ಸುಮ್ಮನಾಗಿದ್ದೆ. ಸ್ವಲ್ಪ ಕಾಲ ಅದೂ ಕೂಡಾ ಸುಮ್ಮನೇ ಉಳಿದಿತ್ತು. ಒಂದು ದಿನ ಮತ್ತೆ ಶುರು ಆಯ್ತು ಹಲ್ಲು ನೋವು. ಮದ್ದಿಗಾಗಿ ಅಲ್ಲಿಲ್ಲಿ ಅಲೆಯುವ ಬದಲು ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆ ಮಾತನ್ನು ಸುಳ್ಳು ಮಾಡಲು ಹೊರಟೆ.
ಮೊದಲು ಉಪ್ಪು ನೀರಿನ ಉಪಚಾರಕ್ಕೆ ಸರಿ ಹೋಗುತ್ತಿತ್ತು. ನಂತರದ ದಿನಗಳಲ್ಲಿ, ಲವಂಗ, ಪುದೀನಾ ದಂತಹ ಸುವಸ್ತುಗಳ ಉಪಚಾರಕ್ಕೆ ಮಣಿಯುತ್ತಿತ್ತು. ಮತ್ತೂ ಕೆಲ ಸಮಯ ಕಳೆದ ಮೇಲೆ ಅದು ಬಾಹ್ಯಾಕಾಶದ ಕೃಷ್ಣ ರಂಧ್ರದಂತೆ ತನ್ನ ಬಳಿ ಬಂದದ್ದನ್ನೆಲ್ಲಾ ತನ್ನೊಳಗೆ ಬಂಧಿಸಿಡುವಷ್ಟು ದೊಡ್ಡದಾಯಿತು. ಯಾವತ್ತೋ ಒಮ್ಮೊಮ್ಮೆ ಬರುತ್ತಿದ್ದ ಹಲ್ಲು ನೋವು ಈಗ ನಿತ್ಯ ಹಿಂಸೆಯೆಂದಾದ ಮೇಲೆ ಅದರಿಂದ ಪಾರು ಮಾಡಲು ಅಂಬಿಗಾ ನಾ ನಿನ್ನ ನಂಬಿದೇ ಎಂದು ನನ್ನ ಹಾಸ್ಟೆಲ್ಲಿನ ಎದುರೇ ಇದ್ದ ಅಂಬಿಕಾ ಮೆಡಿಕಲ್ಲಿನ ಆಂಟಿಯ ಮೊರೆ ಹೊಕ್ಕೆ. ಅವರು ತಮ್ಮಲ್ಲಿದ್ದ ಎಲ್ಲಾ ನೋವು ನಿವಾರಕ ಗುಳಿಗೆಗಳನ್ನು ಬದಲಿಸಿ ಬದಲಿಸಿ ನನಗೆ ನೀಡಿ ನನ್ನ ನೋವು ಆ ಕ್ಷಣಕ್ಕೆ ಕಡಿಮೆಯಾದರೂ ಹಲ್ಲು ಇನ್ನಷ್ಟು ರೂಪಗೆಡಲು ಕಾರಣರಾದರು.
ಪರೀಕ್ಷಾ ಸಮಯ ಹತ್ತಿರ ಬರುತ್ತಿದ್ದಂತೇ ಹಲ್ಲಿನ ಸಮಸ್ಯೆಯೂ ಬಿಗಡಾಯಿಸಿತು. ಮೊದಲಿಗೆ ಹಲ್ಲು ನೋವು ನನ್ನ ಅರಿವಿಗೆ ಮಾತ್ರ ಬರುವಂತೆ ಇದ್ದುದು ಒಂದು ದಿನ ಬೆಳಗ್ಗೆ ಹನುಮಂತನ ಮುಖದಂತೆ ದಪ್ಪಗಾಗಿ ಊದಿ ಹೊರ ಲೋಕಕ್ಕೂ ತಿಳಿಯುವಂತಾಯ್ತು.
ಇನ್ನು ದಂತವೈದ್ಯರ ಮೊರೆ ಹೋಗದೇ ಸಾಧ್ಯವಿಲ್ಲವೆಂದು ಜ್ಞಾನೋದಯವಾಗಿ ಅವರ ಕ್ಲಿನಿಕ್ ಬಾಗಿಲು ತಟ್ಟಲು ಹೊರಟೆ. ಆಗಿನ್ನೂ ಹಲ್ಲುಗಳ ಬಗ್ಗೆ ಈಗಿನಂತೆ ಎಚ್ಚರ ಮೂಡದೇ ಇದ್ದ ಕಾಲ. ಚಿಕ್ಕ ಊರುಗಳಲ್ಲೆಲ್ಲಾ ದಂತವೈದ್ಯರೆಂಬುವವರು ಇರುತ್ತಲೇ ಇರಲಿಲ್ಲ. ನಾನಿದ್ದ ಊರು ಕೂಡಾ ಸಣ್ಣದಾದ ಕಾರಣ ಅಲ್ಲಿಂದ ಏಳೆಂಟು ಕಿ ಮೀ ದೂರದಲ್ಲಿದ್ದ ಪೇಟೆಗೆ ಹೋಗಿ ಹಲ್ಲಿನ ಡಾಕ್ಟ್ರ ಬೋರ್ಡ್ ಹುಡುಕಿ ಅಲ್ಲಿಗೆ ನಡೆದೆ. ಒಂದೆರಡು ದಂತವೈದ್ಯರ ಹೆಸರಿರುವ ಬೋರ್ಡ್ ಕಂಡರೂ ಅವರ ಕ್ಲಿನಿಕ್ ಖಾಲಿ ಖಾಲಿಯಾಗಿ ನಳನಳಿಸುತ್ತಿದ್ದುದನ್ನು ಕಂಡ ನನ್ನ ಕಾಲುಗಳು ಅಲ್ಲಿನ ಮೆಟ್ಟಲೇರಲು ನಿರಾಕರಿಸಿದವು.
ಮತ್ತೂ ಕೆಲವು ಬೀದಿಗಳ ಉದ್ದಗಲ ಅಳೆದ ಬಳಿಕ ಡಾ| ಹಲ್ಲೇಶ್ ದಂತವೈದ್ಯರು ಎಂಬ ಶುಭ ನಾಮಾಂಕಿತ ಬೋರ್ಡ್ ಕಾಣಿಸಿತು. ಉದ್ದನೆಯ ವೆರಾಂಡದ ಬದಿಯಲ್ಲಿ ಹಾಕಿದ್ದ ನಾಲ್ಕೈದು ಬೆಂಚುಗಳು ಭರ್ತಿಯಾಗಿ ಕೆಲವು ಜನ ಅತ್ತಿತ್ತ ಠಳಾಯಿಸುತ್ತಾ ಹೊತ್ತು ಕಳೆಯುತ್ತಿದ್ದರು. ಇದು ನೋಡು ವೈದ್ಯರ ಕೈಚಳಕ ಬುದ್ಧಿಮತ್ತೆಯ ಮಹಿಮೆ. ಇಲ್ಲದಿದ್ದರೆ ಇಲ್ಲಿ ಇಷ್ಟೊಂದು ಜನರಿರುವುದು ಸಾಧ್ಯವೇ ಎಂದು ಒಳ್ಳೆಯ ಡಾಕ್ಟ್ರನ್ನು ಗುರುತಿಸಿಕೊಂಡದ್ದಕ್ಕಾಗಿ ನನ್ನ ಬೆನ್ನು ನಾನೇ ತಟ್ಟಿಕೊಂಡೆ. ಅದರ ಜೊತೆಗೆ ಇಷ್ಟು ಜನರ ಹಲ್ಲು ತೆಗೆಯಬೇಕಾದರೆ ಇಡೀ ದಿನ ಬೇಕು. ಇನ್ನು ನನ್ನ ಹಲ್ಲಿನ ನೋವಿಗೆ ಇಂದು ಮೋಕ್ಷ ಸಿಗುವುದುಂಟೇ ಎಂಬ ನಿರಾಸೆ ನನ್ನನ್ನು ಆವರಿಸಿತು. ಆದರೂ ನನ್ನ ಹಲ್ಲುಗಳ ಮೇಲೆ ಹಲ್ಲೆ ಆಗುವುದಿದ್ದರೆ ಡಾ| ಹಲ್ಲೇಶರಿಂದಲೇ ಆಗಲಿ ಇನ್ಯಾರನ್ನೂ ಹುಡುಕಿ ಅಲೆಯಲಾರೆ ಎಂದು ಮನದಲ್ಲೇ ನಿರ್ಧರಿಸಿಬಿಟ್ಟೆ.
ಅವರ ನಡುವಿನಿಂದ ಮೆಲ್ಲನೆ ಜಾಗ ಮಾಡಿಕೊಂಡು ಹೋಗಿ ರಿಸೆಪ್ಷನ್ ಕೌಂಟರ್ ಸೇರಿದೆ. ಪರೀಕ್ಷೆ ಹತ್ತಿರವಿರುವ ಕಾರಣ ಓದಲೇ ಬೇಕಾದ ಪಠ್ಯಗಳು, ಮತ್ತು ವಿಪರೀತ ನೋಯುವ ಹಲ್ಲುಗಳ ಸಮಸ್ಯೆ ಎಲ್ಲವನ್ನೂ ಅಲ್ಲಿ ದಪ್ಪ ಕಡತದೊಳಗೆ ತಲೆ ಬಗ್ಗಿಸಿ ಕೂತವರ ಹತ್ತಿರ ನಿವೇದಿಸಿದೆ. ಅವರು ನನ್ನ ಮುಖವನ್ನು ದೀರ್ಘವಾಗಿ ನೋಡಿ ನನ್ನ ಕೈಗೊಂದು ಟೋಕನ್ ಕೊಟ್ಟರು. ಅದರಲ್ಲಿ ೨ ಎಂದು ಬರೆದಿತ್ತು. ಮೊದಲನೆಯ ಪೇಷಂಟ್ ಯಾರು ಎಂದೆ? ಅವರು ಒಳಗೆ ಹೋಗಿದ್ದಾರೆ ಅವರದ್ದು ಆದ ಕೂಡಲೇ ನೀವು ಒಳಗೆ ಹೋಗಬಹುದು ಎಂದರು. ನನ್ನ ಸಮಸ್ಯೆಗೆ ಅವರು ಸ್ಪಂದಿಸಿದ ರೀತಿಗೆ ಖುಷಿಯಾಗಿ ಅಲ್ಲೇ ನಿಂತು ಮುಚ್ಚಿದ ಬಾಗಿಲು ತೆರೆಯುವುದನ್ನು ಕಾಯುತ್ತಾ ಕುಳಿತೆ. ಒಳಗಿನಿಂದ ’ಅಯ್ಯೋ ಅಮ್ಮಾ ಅಪ್ಪಾ..’ ಎಂಬೆಲ್ಲಾ ನರಳುವ ಧ್ವನಿ ಮುಂದೆ ನಾನು ಅನುಭವಿಸಬೇಕಾದ ನೋವಿನ ತೀವ್ರತೆಯನ್ನು ನನಗೆ ನೆನಪಿಸಿ ಮೈಯೆಲ್ಲಾ ನಡುಕ ಹುಟ್ಟಿಸುತ್ತಿತ್ತು. ಆದರೂ ದಿನ ನಿತ್ಯದ ನರಕಯಾತನೆಯಿಂದ ಮುಕ್ತಿ ಸಿಗಬಹುದಲ್ಲಾ ಎಂಬ ಹಠದಿಂದ ನಾನು ಹಿಮ್ಮೆಟ್ಟದೇ ನಿಂತಿದ್ದೆ.
ಸ್ವಲ್ಪ ಸಮಯದ ಬಳಿಕ ಬಾಗಿಲು ಕಿರ್ರೆಂದಿತು. ನಾನು ಒಳ ಹೋಗಲೆಂದು ಸಿದ್ದಳಾದರೆ ಅಲ್ಲಿ ಬೆಂಚಿನಲ್ಲಿ ಕುಳಿತ, ಅತ್ತಿತ್ತ ತಿರುಗಾಡುತ್ತಿದ್ದ ನನ್ನಿಂದ ಮೊದಲೇ ಬಂದ ಜನರು ನಾ ಮುಂದು ತಾ ಮುಂದು ಎಂದು ಎದ್ದು ಬಾಗಿಲಿನ ಬಳಿ ಬಂದರು. ಈಗ ನಾನು ಒಳಗೆ ಹೋದರೆ ಅವರೆಲ್ಲಾ ಜಗಳಕ್ಕೆ ಬಂದಾರು ಎಂಬ ಅಧೈರ್ಯದಿಂದ ನಾನು ಹಿಂಜರಿಕೆಗೊಳಗಾಗಿ ಅಲ್ಲೇ ನಿಂತಿದ್ದರೆ ಅವರೆಲ್ಲಾ ಬಾಗಿಲಿನ ಎದುರು ಮುತ್ತಿಗೆ ಹಾಕಿ ಒಳ ನುಗ್ಗಲು ಪ್ರಯತ್ನ ಪಡುತ್ತಿದ್ದರು. ಅಷ್ಟರಲ್ಲಿ ರಿಸೆಪ್ಷನಿಸ್ಟ್ ಜೋರಾಗಿ ಎಲ್ಲಾ ಸ್ವಲ್ಪ ಹಿಂದೆ ಹೋಗಿ.. ಬಾಗಿಲು ತೆರೆಯಲು ಬಿಡದೇ ಇದ್ರೆ ಒಳಗಿರುವವರು ಹೊರಗೆ ಬರೋದು ಹೇಗೆ ಎಂದಳು.
ಜನರೆಲ್ಲಾ ಅಲ್ಲೇ ಅತ್ತಿತ್ತ ಜಾಗ ಮಾಡಿ ನಿಂತರಷ್ಟೇ ಹೊರತು ಹಿಂದೆ ಸರಿಯಲಿಲ್ಲ. ನಾನು ನನ್ನ ಟೋಕನ್ನನ್ನು ಗಟ್ಟಿಯಾಗಿ ಕೈಯಲ್ಲಿ ಹಿಡಿದು ಮುಂದಾಗುವುದನ್ನು ಕಾಯುತ್ತಾ ನಿಂತೆ. ತೆರೆದ ಬಾಗಿಲಿನಿಂದ ಸುಮಾರು ನಲ್ವತ್ತೈದರ ಒಬ್ಬಾಕೆ ಮುಖಕ್ಕೆ ಕೈ ಹಿಡಿದುಕೊಂಡು ಬಹಳ ನೋವು ಅನುಭವಿಸುವ ಮೊಗ ಹೊತ್ತು ಮೆಲ್ಲನೆ ಹೊರ ಬಂದಳು.
ಅವಳು ಮುಂದಕ್ಕೆ ನಡೆದಂತೆಲ್ಲಾ ಅಲ್ಲಿ ನಿಂತಿದ್ದ, ಕುಳಿತಿದ್ದ ಜನರೆಲ್ಲಾ ಅವಳಿಗೆ ಜೊತೆಯಾಗಿ ಅವಳೊಂದಿಗೆ ಹೊರಗೆ ಹೆಜ್ಜೆ ಹಾಕಿದರು. ಗಳಿಗೆಯೊಳಗೆ ಕ್ಲಿನಿಕ್ ಖಾಲಿ ಹೊಡೆಯಿತು. ರಿಸೆಪ್ಷನಿಸ್ಟ್ ನನ್ನ ಪ್ರಶ್ನಾರ್ಥಕ ಮುಖ ನೋಡಿ ’ ಆ ಅಮ್ಮನಿಗೆ ಹಲ್ಲಿನ ಡಾಕ್ಟ್ರು ಅಂದ್ರೆ ಬಾರೀ ಹೆದರಿಕೆಯಂತೆ. ಹಾಗಾಗಿ ಅವ್ರು ಪ್ರತಿಸಲ ಬರುವಾಗ ತನ್ನ ಕುಟುಂಬದವರನ್ನು ನೆರೆ ಹೊರೆಗಳನ್ನು ಜೊತೆಗೆ ಕರ್ಕೊಂಡು ಬರ್ತಾರೆ. ನಮಗೆ ಈ ನಾಟಕ ನೋಡಿ ನೋಡಿ ಅಭ್ಯಾಸವಾಗಿದೆ. ಇದರ ಜೊತೆಗೆ ಇನ್ನೊಂದು ಅನುಕೂಲ ಎಂದರೆ ಅವರ ಜೊತೆಗೆ ಬರುವ ಜನರಿಂದ ಕ್ಲಿನಿಕ್ ತುಂಬಿದಂತೆ ಕಾಣುವುದರಿಂದ ಡಾಕ್ಟ್ರು ತುಂಬಾ ಫೇಮಸ್ಸು ಅಂತ ಅಂದ್ಕೊಂಡು ಕೆಲವು ಪೇಷಂಟುಗಳಾದರೂ ಬರ್ತಾರೆ. ನೀವೂ ಅಷ್ಟೇ ಹಲ್ಲಿನ ಕೆಲಸಕ್ಕೆ ಬರುವಾಗ ಒಬ್ಬರೇ ಬರಬೇಡಿ ಎಂದರು.
ಅವರ ವಿವರಣೆ ಕೇಳಿ ನನ್ನ ಜೀವ ಬಾಯಿಗೆ ಬಂದಂತಾಯಿತು. ನಾನು ನೋವಿರುವ ಹಲ್ಲಿನ ಭಾಗವನ್ನು ಗಟ್ಟಿಯಾಗಿ ಒತ್ತಿ ಹಿಡಿದುಕೊಂಡು ಉಕ್ಕಿ ಬರುವ ಹೆದರಿಕೆಯನ್ನು ಒಳಗೆ ತಳ್ಳಿ ತೆರೆದ ಬಾಗಿಲಿನೊಳಗೆ ನುಸುಳಿದೆ.
ಆಮೇಲೆ..
ಆಮೇಲೇ..
ಇರಲಿ ಬಿಡಿ ಇನ್ನೊಮ್ಮೆ ಹೇಳ್ತೀನಿ ಆ ದಂತಕತೆ .. !
– ಅನಿತಾ ನರೇಶ್ ಮಂಚಿ
*****
ದಂತ ಕತೆ…. ಚೆನ್ನಾಗಿದೆ ಮೇಡಂ.
ನಿಮ್ಮ ಹೊಳೆಯುವ ಹಲ್ಲುಗಳನ್ನು, ದಂತಕಾಂತಿಯನ್ನು
ನೋಡಿದರೆ, ಈ ಲೇಖನ ನಿಮಗೆ
ಸಂಬಂಧಪಟ್ಟಿದ್ದು ಅಲ್ಲ ಎಂಬ
ಅನುಮಾನ ಮೂಡುತ್ತದೆ.
ಚೆನ್ನಾಗಿದೆ ಮಂಚಿ ಮೇಡಂ.
ಧನ್ಯವಾದಗಳು.
Bye the Bye not given the address of Dr. Hallesh
ನನ್ನ ದಂತವನ್ನು ಅಲ್ಲಲ್ಲಾ.. ದಂತಕತೆಯನ್ನು ಮೆಚ್ಚಿದವರಿಗೆಲ್ಲಾ ನಿಮ್ಮ ಪೇಸ್ಟಿನಲ್ಲಿ ಉಪ್ಪು ಇದೆಯಾ ಎಂಬ ಸ್ಪರ್ಧೆಗೆ ಸ್ವಾಗತ 🙂
ವಂದನೆಗಳು ಅಮರ್ ದೀಪ್, ಅಖಿಲೇಶ್, ಮಿಹ್ರಾನ್.. 🙂
ನಿಮ್ಮ ಹಲ್ಲಿಗೆ ಹಲ್ಲೇಶರು ಹಲ್ಲೆ ಮಾಡಿದರ? ಮುಂದೆ ದಂತದಾವನ ಚೂರ್ಣ ಉಪಯೋಗಿಸಿದಿರ ಹೇಗೆ?