ನನ್ನವಳಿಗೆ ನಾನೇನೂ ಕಡಿಮೆ ಮಾಡಿಲ್ಲ. ಅವಳು ನಮ್ಮ ತುಂಬು ಮನೆತನಕ್ಕೆ ಏಕೈಕ ಸೊಸೆ. ಸದ್ಯಕ್ಕೆ ನನಗೆ ಅವಳೇ ಮಗಳೂ, ಮಗನೂ ಇದ್ದ ಹಾಗೆ ಕೂಡ. ತಂದೆ ಉಮಾಶಂಕರ ತಾಯಿ ಗೌರಮ್ಮನವರಿಗೆ ಏಕೈಕ ಸುಪುತ್ರನಾಗಿರುವ ನಾನು ಈ ಗೊಂಬೆಯನ್ನು ಕೈ ಮಾಡಿ ತೋರಿಸಿ, ನನಗೆ ಬೇಕು ಎಂದಾಗ ಅಪ್ಪ ಮೌನವಾಗಿ ನನ್ನನ್ನೇ ನೋಡಿದ್ದರು ವಿಸ್ಮಯದಿಂದ. ಅವ್ವ ಹನಿಗಣ್ಣಳಾಗಿದ್ದರೂ ನಂತರ ನನ್ನ ಆಸೆಗೆ ಬೇಡ ಎನ್ನಲಿಲ್ಲ. ನಾನು ಚಿಕ್ಕವನಿದ್ದಾಗ ಏನೆಲ್ಲ ಕೇಳಿದರೂ ಇಲ್ಲವೆನ್ನದೇ ಕೊಡಿಸುತ್ತಿದ್ದರು ತಂದೆ-ತಾಯಿ. ನನ್ನ ಜೀವನದ ಎರಡನೇ ಘಟ್ಟಕ್ಕೆ ಕಾಲಿರಿಸುವಾಗ ನಾನು ಈ ಹೃದಯವಂತೆ ಗೊಂಬೆ ಬೇಕು ಅಂತ ಒಂದೇ ದೃಢವಾದ ಧ್ವನಿಯಲ್ಲಿ ಕೇಳಿಕೊಂಡೆ. ಆಗಲೂ ಅಷ್ಟೆ, ಅವರು ಬೇಡ ಎನ್ನಲಿಲ್ಲ. ಬದಲಾಗಿ ಆನಂದದಿಂದ ಕಂಬನಿ ಒರೆಸಿಕೊಂಡು ಅಪ್ಪ ಹೇಳಿದ್ದರು, ನೀನು ಜೀವನಾನ ಇಷ್ಟೆಲ್ಲ ಅರ್ಥಮಾಡ್ಕೊಂಡೀಯಲ್ಲ, ಸಾಕಪಾ ಮಾರಾಯ. ನಂಗ ನಂಬಿಕೈತಿ, ನೀನು ಸಣ್ಣ ಮನಸ್ಸಿನಾಂವಲ್ಲಂತ… ಎಂದು ಬೆನ್ನು ಚಪ್ಪರಿಸಿದ್ದರು. ಮಾರನೇ ವರ್ಷವೇ ವಂದನಾ, ಈ ಬಾಳಿಗೆ ವಂದಿಸಲು ನನ್ನ ಕೈ ಹಿಡಿದು ಬಂದಳು.
ಅವು ನನ್ನ ಓದಿನ ದಿನಗಳು. ನನಗೆ ಆಗ ಆ ಮೂವರೂ ಹುಡುಗಿಯರೆಂದರೆ ಬಹಳ ಪ್ರೀತಿ. ಪ್ರೀತಿ ಎಂದರೆ ಪ್ರೇಮ ಅಲ್ಲ. ಹಾಗೇ ಸುಮ್ಮನೆ ಒಂದು ಆನಂದಾನುಭೂತಿಯದು. ನಾನು ಅವರಲ್ಲಿ ಯಾರನ್ನೂ ಹೆಚ್ಚು ಕಡಿಮೆ ಎಂದು ಪ್ರತ್ಯೇಕಿಸಲಿಲ್ಲ. ಅವರು ಮೂವರೂ ಒಳ್ಳೆಯ ಮನೆತನಗಳ ಹೆಣ್ಣುಮಕ್ಕಳು. ತರಗತಿಯಲ್ಲಿ ಎಲ್ಲರಿಗಿಂತ ಜಾಣರು. ಪರಸ್ಪರರಲ್ಲಿ ಗೌರವ, ನಂಬಿಕೆಯನ್ನು ಇರಿಸಿಕೊಂಡಿದ್ದ ಸ್ನೇಹಿತೆಯುರು. ಅವರಿಗೆ ಸಹಪಾಠಿ ಹುಡುಗರು ನಾನಾ ರೀತಿಯಿಂದ ತಮಾಷೆ ಮಾಡುತ್ತಿದ್ದರು. ಒಂದು ಗುಂಪಿನವರು ’ಪ್ಯಾಚ್ ಪ್ಯಾಚ್’ ಎನ್ನುತ್ತಿದ್ದರು. ಅಂದರೆ ಅವರಲ್ಲಿ ಒಬ್ಬಳು ಗೌರವರ್ಣದ, ಉದ್ದ, ನೇರ ಹೆರಳಿನ ಸುಂದರಿ. ಅವಳು ವಂದನಾ. ಇನ್ನಿಬ್ಬರು ಗುಂಗುರುಗೂದಲಿನ ಮೋಟು ಬಾಲದ, ಶಾಮ ಸುಂದರಿಯರು. ಅವರಲ್ಲಿ ಒಬ್ಬಳು ಕೋಮಲ, ಇನ್ನೊಬ್ಬಳು ನಿರ್ಮಲ ಅವಳಿ ಸೋದರಿಯರು. ಕೋಮಲ ಮತ್ತು ನಿರ್ಮಲೆಯ ಮದ್ಯದಲ್ಲಿ ಯಾವಾಗಲೂ ವಂದನಾ ಇರುತ್ತಿದ್ದಳು. ಹಾಗಾಗಿ ಒಂದು ಗುಂಪಿನ ಹುಡುಗರು ಅವರಿಗೆ ’ಪ್ಯಾಚ್ ಪ್ಯಾಚ್ (ಪಟ್ಟೆ ಪಟ್ಟೆ)’ ಎನ್ನುತ್ತಿದ್ದರು. ಇನ್ನೊಂದು ಗುಂಪಿನವರು ’ಬ್ಲ್ಯಾಕ್ ಅಂಡ್ ವೈಟ್’ ಎನ್ನುತ್ತಿದ್ದರು. ಮತ್ತೊಂದು ಗುಂಪಿನವರು ’ಹೆಣ್ಹುಲಿಗಳು’ ಎನ್ನುತ್ತಿದ್ದರು. ಅದಕ್ಕೆ ಕಾರಣ ಅವರ ಗಾಂಭೀರ್ಯತೆ, ವರ್ತನೆಯ ಶೈಲಿ. ನನ್ನ ಗುಂಪಿನ ಹುಡುಗರಲ್ಲಿ ಒಬ್ಬನಾದ ರವೀಂದ್ರ ಅವರಿಗೆ ’ಥ್ರೀರೋಜಸ್(ಮೂರು ಗುಲಾಬಿಗಳು)’ ಎನ್ನುತ್ತಿದ್ದನು. ನಮಗೆಲ್ಲರಿಗೂ ಹಾಗೇ ಕರೆಯುವುದೇ ಚೆಂದವೆನ್ನಿಸಿತ್ತು. ರವೀಂದ್ರ ಮತ್ತು ನಾನು ವಿಶ್ರಾಂತಿಯ ವೇಳೆಯಲ್ಲಿ ಕಾಲೇಜ ಪಕ್ಕದಲ್ಲಿಯೇ ಇರುವ ಸಿದ್ಧರ ಬಾವಿಯ ಕಟ್ಟೆಯ ಮೇಲೆ ಕುಳಿತೆವೆಂದರೆ, ನಮ್ಮ ಗುಂಪಿನ ಹುಡುಗರೆಲ್ಲರೂ ನಮ್ಮನ್ನು ಸುತ್ತುಗಟ್ಟುತ್ತಿದ್ದರು. ನಮ್ಮೆಲ್ಲರ ಕಣ್ಣುಗಳು ಮಾತ್ರ ಹುಡುಗಿಯರ ಕಡೆಗೇ ಇರುತ್ತಿದ್ದವು. ಅದರಲ್ಲೂ ಈ ಚೂಟೀ ಚೆಲುವೆಯರ ನಡಿಗೆಯ ಶೈಲಿ, ನೋಟ, ನಗು, ಕೀಟಲೆಗಳನ್ನು ನೋಡುವುದೇ ಎಲ್ಲಕ್ಕಿಂತ ಚೆಂದವೆನ್ನಿಸುತ್ತಿತ್ತು. ಅವರು ತರಗತಿಯಿಂದ ಹೊರಗೆ ಬಂದ ತಕ್ಷಣ, ನಾವು ಆಚೀಚೆ ನೋಡಿ ಪಾಟೀಲ ಮತ್ತು ಬ್ಯಾಟಪ್ಪನವರು ಗುರುಗಳು ಇಲ್ಲದ್ದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದೆವು. ಅವರಿಲ್ಲದಿದ್ದರೆ ಥ್ರೀ ರೋಜಸ್ ಎಂದು ಖುಷಿಯಲ್ಲಿ ಚೀರುತ್ತಿದ್ದೆವು. ಒಮ್ಮೊಮ್ಮೆ ಗುರುಗಳ ಕೈಗೆ ಸಿಕ್ಕಬಿದ್ದು, ಥ್ರೀರೋಜಸ್ ಎನ್ನುವುದರ ಕುರಿತು ಪ್ರಶ್ನೆಗಳನ್ನು ಎದುರಿಸಿದರೂ, ನಾವು ಅವರಿಗೆ ಸರಿಯಾದ ಉತ್ತರವನ್ನು ಕೊಡುತ್ತಿರಲಿಲ್ಲ. ನಾವು ನಿರುಪದ್ರವಿಗಳು ಎಂದು ತಿಳಿದಿದ್ದ ಗುರುಗಳು ಪ್ರೀತಿಯಿಂದ ಬೆನ್ನು ಮೇಲೆ ಗುದ್ದಿ, ಮುಗುಳುನಗೆಯೊಂದಿಗೆ ಹೊರಟುಹೋಗುತ್ತಿದ್ದರು.
ಕ್ರಮೇಣ ಹುಡುಗರ ವಿವಿಧ ಗುಂಪುಗಳು, ’ಪ್ಯಾಚ್ ಪ್ಯಾಚ್’ ’ಬ್ಲ್ಯಾಕ್ ಅಂಡ್ ವೈಟ್’ ಇತ್ಯಾದಿಯಾಗಿ ಕರೆಯುತ್ತಿದ್ದವರು ಥ್ರೀರೋಜಸ್ ಜೊತೆ ಆತ್ಮೀಯರಾದರು. ಆದರೆ ನಮ್ಮ ಗುಂಪು ಮಾತ್ರ ಐದು ವರ್ಷದ ಶಿಕ್ಷಣವನ್ನು ಜೊತೆಯಲ್ಲೇ ಮುಗಿಸಿದರೂ, ಅವರೊಂದಿಗೆ ನೇರ ಗೆಳೆತನವನ್ನು ಸ್ಥಾಪಿಸಿಕೊಳ್ಳಲಿಲ್ಲ. ರವೀಂದ್ರ ಮತ್ತು ನನ್ನಲ್ಲಿ ಹಲುಬತೊಡಗಿದ್ದ ಪ್ರೇಮವೇ ಇದಕ್ಕೆ ಕಾರಣ. ನಾವಿಬ್ಬರೂ ಆ ಥ್ರೀರೋಜಸ್‌ನಲ್ಲಿ ಒಂದೊಂದು ಗುಲಾಬಿಗೆ ಹತ್ತಿರವಾಗುತ್ತ ನಡೆದಂತೆ ನಮ್ಮ ಬಾಹ್ಯ ವರ್ತನೆಯಲ್ಲಿ ವ್ಯತ್ಯಾಸವಾಗುತ್ತ ಸಾಗಿತ್ತು.
ಮಾಧ್ಯಮಿಕ ಶಿಕ್ಷಣವನ್ನು ಪೂರೈಸುವವರೆಗೂ ಆ ಮೂವರಿಗೂ ನಾವು ತಮಾಷೆ ಮಾಡುತ್ತಿದ್ದುದು ಅವರ ಬೆನ್ನು ಹಿಂದೆ ಮಾತ್ರ. ಅವರು ಎದುರಿಗೆ ಬಂದಾಗ ತಲೆ ತಗ್ಗಿಸಿಕೊಂಡೊ, ಎತ್ತಲೊ ನೋಡುತ್ತಲೊ, ಅವರನ್ನು ನೋಡಿಯೇ ಇಲ್ಲವೆನ್ನುವಂತೆ ಸರ ಸರ ನಡೆದು ಬಿಡುತ್ತಿದ್ದೆವು.
ನಮ್ಮಂತೆಯೇ ಅವರೂ ಕೂಡ ಕೆಲವರಿಗೆ ತಮಾಷೆಯ ನಾಮಕರಣಗಳನ್ನು ಮಾಡಿದ್ದರು. ರವಿಯ ಧ್ವನಿ ನಮ್ಮೆಲ್ಲರಿಗಿಂತ ತೀರ ಒಡೆದು ಗೊಗ್ಗರಾಗಿದ್ದರಿಂದ ಅವನಿಗೆ ’ಲೌಡ್ ಸ್ಪೀಕರ್’ ಎಂದೂ, ನಾನು ಮಿತಭಾಷಿಯಾಗಿದ್ದುದರಿಂದ ನನಗೆ ’ಮುದ್ದೆ ಬಸವ’ ಎಂದೂ ಕರೆಯುತ್ತಿದ್ದರೆಂದು ನಮಗೆ ಕ್ರಮೇಣ ತಿಳಿಯಿತು. ಆ ನಾಮಕರಣ ಮಾಡಿದವರು ಕೋಮಲ ಮತ್ತು ವಂದನಾ. ನನ್ನ ಗೆಳೆಯ ರವೀಂದ್ರ ಆ ಥ್ರೀರೋಜಸ್ ಎಂದರೆ ಮಾರು ದೂರ ಸರಿಯಲು ಶುರು ಮಾಡಿದ್ದು ಪಿ.ಯು.ಸಿ ಪ್ರವೇಶಿಸಿದಾಗಲೇ. ಏಕೆಂದು ಕೇಳಿದರೆ ಏನೂ ಹೇಳುತ್ತಿರಲಿಲ್ಲ. ನನ್ನ ಗುಂಪು ಮೊದಲಿನಂತೆಯೇ ತಮಾಷೆಯಲ್ಲಿ ತೊಡಗಿರುತ್ತಿತ್ತು. ನಾನು ಇತರೆ ತಮಾಷೆಯಲ್ಲಿ ಭಾಗಿಯಾಗುತ್ತಿದ್ದೆನಾದರೂ ಥ್ರೀರೋಜಸ್ ಎಂದು ನಗೆಯಾಡಲು ಮನಸು ಬರುತ್ತಿರಲಿಲ್ಲ. ನನ್ನ ಮನಸ್ಸಿನಲ್ಲಿಅದೇ ದನೇ ಒಂದೇ ಒಂದು ರೋಜ್ ಅರಳಲು ಶುರು ಮಾಡಿತ್ತು. ರವೀ ಮಾತ್ರ ಸುಮ್ಮನೇ ಇರುತ್ತಿದ್ದನು. ನಮ್ಮೆಲ್ಲರ ಮಧ್ಯದಲ್ಲಿದ್ದರೂ ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ನಾನು ನನ್ನ ಸಹಪಾಠಿಗಳಿಗಿಂತ ಎರಡು ವರ್ಷ ದೊಡ್ಡವನು. ನನಗೆ ಗುಂಪು ಮತ್ತು ತರಗತಿಯಲ್ಲಿ ಒಂದು ರೀತಿಯ ಗೌರವ ಸಿಗುತ್ತಿತ್ತು. ನನ್ನ ನೇರ ನಡವಳಿಕೆ, ಶಿಸ್ತು, ಕ್ರಿಯಾಶೀಲತೆಯೂ ಆ ಗೌರವ ಸಿಗಲು ಕಾರಣವಾಗಿದ್ದಿರಬಹುದು. ನಾನು ಹರೆಯದ ಬದಲಾವಣಿಗಳಿಗೆ, ಅವರೆಲ್ಲರಿಗಿಂತ ಮೊದಲೇ ಪಕ್ಕಾಗುತ್ತ ಸಾಗುತ್ತಿದ್ದವನು. ಜೊತೆಗೆ ನಾನು ಓದಿಕೊಂಡಿದ್ದ ವಿಕಾಸ ಮತ್ತು ಬೆಳವಣಿಗೆ, ಕಲಿಕೆ, ವರ್ತನೆ ಮೊದಲಾದವುಗಳಿಗೆ ಸಂಬಂಧಿಸಿದಂತೆ ಮನಃಶಾಸ್ತ್ರೀಯ ಅಂಶಗಳು ನನ್ನ ನೆರವಿಗೆ ಬರುತ್ತಿದ್ದವು. ನಾನು ಹರೆಯದ ಬದಲಾವಣೆಗಳಿಗೆ ಅವರೆಲ್ಲರಿಗಿಂತ ಮೊದಲೇ ಪಕ್ಕಾಗುತ್ತ ಸಾಗುತ್ತಿದ್ದವನು. ನನಗೆ ರವೀಂದ್ರನ ಮನಸ್ಸಿನಲ್ಲಿ ಏನು ಕೋಲಾಹಲ ನಡೆಯುತ್ತಿದೆ ಅಂತ ಗೊತ್ತಾಗಿತ್ತು. ಆ ಕೋಲಾಹಲದ ಕೇಂದ್ರ ಥ್ರೀ ರೋಜಸ್‌ನಲ್ಲಿ ಯಾರಾದರೂ ಇರಬಹುದೇ ಎನ್ನಿಸಿತು. ಥ್ರೀರೋಜಸ್ ಬಿಟ್ಟು ಬೇರೆ ಯಾವುದಾದರೂ ಹುಡುಗಿಯಾಗಿರಲಿ ಅಂತ ಆಶಿಸುತ್ತಿದ್ದೆ.
ರವೀಂದ್ರನಿಗೆ ಆಗಷ್ಟೇ ಲಕ್ಕುಂಡಿಯ ಮಣ್ಣಿನ ಕಣ ಕಣವೂ ಪ್ರಿಯವಾಗತೊಡಗಿತ್ತು. ಮುಸ್ಕಿನಬಾವಿಯ ತೋಟ, ಛಬ್ಬೇರಬಾವಿಯ ರಮ್ಯತೆ, ಬ್ರಹ್ಮಜಿನಾಲಯ(ಪದ್ಮಾವತಿ ಬಸದಿ), ಕಾಶೀವಿಶ್ವನಾಥ ದೇವಸ್ಥಾನ, ವಿರೂಪಾಕ್ಷೇಶ್ವರ ದೇವಸ್ಥಾನ, ಕುಂಬಾರೇಶ್ವರ ದೇವಸ್ಥಾನ, ಕಲ್ಲುಮಠ, ಕುನ್ನೀಬಾವಿ, ಸಿದ್ಧರಬಾವಿ, ಮಜ್ಜನ ಬಾವಿ, ಕನ್ನೇರಬಾವಿ, ಪತ್ರೆನಬಾವಿ ಹೀಗೆ ಗುಡಿ-ಗುಂಡಾರ ಬಾವಿಗಳ ದೆಸೆಯಿಂದ, ಇತಿಹಾಸ ಪ್ರಿಯನಾಗಿದ್ದ ರವೀಂದ್ರ, ಕನ್ನೇರಬಾವಿಯ ಸಮೀಪದ ನಿವಾಸಿ ಕನ್ನೆ ಕೋಮಲೆಯನ್ನು ಪ್ರೀತಿಸತೊಡಗಿದ್ದು ನನಗೆ ಆಗ ತಿಳಿದಿರಲಿಲ್ಲ. ಆಗ ನಾವು ಎರಡನೇ ವರ್ಷದ ಪದವಿ ಪೂರ್ವ ತರಗತಿಯಲ್ಲಿದ್ದೆವು. ನನಗೂ ಹತ್ತನೇ ತರಗತಿಯಲ್ಲಿದ್ದಾಗಲೇ ಶುರುವಾಗಿದ್ದ, ಯಾರನ್ನಾದರೂ ಪ್ರೀತಿಸಬೇಕೆಂಬ ಹಪಾಹಪಿ ಪಿ.ಯು.ಸಿಗೆ ಬರುವ ಹೊತ್ತಿಗೆ ಥ್ರೀರೋಜಸ್‌ನಲ್ಲಿ ವೈಟ್ ರೋಸ್ ಮೇಲೆ ಸಂಚಯವಾಗಿಬಿಟ್ಟಿತು. ವಂದನಾ ನನ್ನ ಏಕೈಕ ಗುಲಾಬಿಯಾಗಿ ಹೃದಯದಲ್ಲಿ ಬೇರಿಳಿದು, ಮನಸ್ಸಿನ ತುಂಬ ಅರಳಿಬಿಟ್ಟಿದ್ದಳು. ಆದರೆ ’ಜನಕಂಜದಿದ್ದರೂ ಮನಕಂಜು’ ಎಂಬಂತೆ ನಾನು ನನ್ನ ಮನಃಸಾಕ್ಷಿಗೆ ಹೆದರಿದ್ದೆ. ಚೆಂದಗೆ ಓದು… ಎಂದು ಒಂದೇ ಮಾತು ಹೇಳಿ ತಬ್ಬಿ ತಲೆ ನೇವರಿಸಿ ಟಾಟಾ ಮಾಡಿದ ನನ್ನ ತಾಯಿಯ ನೆನಪಾಗಿ ಪ್ರೇಮದ ನಶೆ ಇಳಿದು ಬಿಡುತ್ತಿತ್ತು.
ನನ್ನ ಪ್ರೇಮದ ಹಂಬಲವನ್ನು ಕಥೆ, ಕಾದಂಬರಿ, ಕವನಗಳ ಓದಿನಲ್ಲಿ ತೊಡಗಿಸುತ್ತಿದ್ದೆ. ಅಂತಹ ಹುಚ್ಚಿನಲ್ಲಿಯೇ ಕಳೆದು ಹೋದರೆ ಕಾಲೇಜು ವ್ಯಾಸಂಗದ ಗತಿ ಏನು ಅಂತ ನನ್ನಿಂದ ನಾನೇ ಎಚ್ಚರಗೊಳ್ಳುತ್ತಿದ್ದೆ. ಕಥೆ, ಕಾದಂಬರಿಗಳನ್ನು ಓದುವುದರಿಂದುಂಟಾಗುವ ಲಾಭ ಹಾನಿಗಳ ಕುರಿತು ಲೆಕ್ಕಾಚಾರಕ್ಕಿಳಿದೆ. ಕನಿಷ್ಠ ಪಿ.ಯು.ಸಿ ಮುಗಿಯುವತನಕವಾದರೂ ಅವುಗಳನ್ನು ಓದಬಾರದೆಂದುಕೊಂಡುಬಿಟ್ಟೆ. ಮೊದಲೇ ಎರಡು ವರ್ಷ ಹಿಂದಾಗಿದ್ದ ಓದು, ಕಥೆಗಳ ಸಹವಾಸ ಮಾಡಿದರೆ ಗೋವಿಂದ ಎನ್ನಿಸಿಬಿಡುತ್ತದೆ ಎಂದು ಅನ್ನಿಸತೊಡಗಿತ್ತು ನನಗೆ. ಅದಕ್ಕಾಗಿ ಪಿ.ಯು.ಸಿಯ ವ್ಯಾಸಂಗಕ್ಕೆ ಪೂರಕವಾದ ಓದಿನಲ್ಲಿ ಮಾತ್ರ ತೊಡಗಲು ಪ್ರಯತ್ನಿಸತೊಡಗಿದ್ದೆ. ಅಷ್ಟರಮಟ್ಟಿಗೆ ನನ್ನ ಪ್ರೇಮವನ್ನು ನಿಯಂತ್ರಿಸತೊಡಗಿದ್ದೆ.
ಹಾಗಿರುವಾಗ ಅದೊಂದು ದಿನ ಎಂದಿನಂತೆ ನನ್ನ ಆತ್ಮೀಯ ಗೆಳೆಯ ರವೀಂದ್ರನೊಂದಿಗೆ ಸಂಜೆಯ ವಿಹಾರಕ್ಕೆಂದು ಹೊರಬಿದ್ದು ಸೋಮನಕೆರೆಯ ಏರಿಯ ಮೇಲೆ ನಡೆದುಕೊಂಡು ಹೋದೆ. ರವೀಂದ್ರ ಅವತ್ತಂತೂ ಬಹಳ ಮೌನವಾಗಿ ನಡೆಯತೊಡಗಿದ್ದ. ಏನಾದವು ಇವನ ಚೇಷ್ಟೆ, ತಮಾಷೆ, ಹುಡುಗಾಟ ಎನ್ನಿಸಿ ಮನಸ್ಸಿಗೆ ಬಹಳ ಖೇದವೆನ್ನಿಸಿತು. ಅವನ ಹೆಗಲ ಮೇಲೆ ಕೈ ಹಾಕಿದೆ. ಅವನು ನನ್ನೊಮ್ಮೆ ನಡಿ, ಮತ್ತೆ ತನ್ನ ಪಾಡಿಗೆ ತಾನು ಮೆಲುವಾಗಿ ಹೆಜ್ಜೆ ಕಿತ್ತಿಡುತ್ತಿದ್ದನು. ನಾನೇ ಬಾಯಿ ಬಿಟ್ಟೆ. ಯಾಕ್ಲೇ ಏನಾಗೇತಿ ನಿಂಗ s? ಹಿಂಗ ಇಷ್ಟು ಸುಮ್ಕ ಮೂಖರಂಥಾಗಿದ್ರ ಏನ್ ತಿಳ್ಕೂಬೇಕು ಹೇಳು? ಏನಾಗೇತಿ ನಿನಗ s?. ಅವನು ಸುಮ್ಮನೆ ನಡೆಯುತ್ತಿದ್ದನು. ಅವನ ಹೆಗಲನ್ನು ತುಸು ಜೋರಾಗಿಯೇ ಅದುಮಿ ಹಿಡಿದು ಕೇಳಿದೆ, ಮಗನs ಬಾಯಿ ಬಿಡು ಸುಮ್ಕ, ಇಲ್ಲಾಂದ್ರ ಒದಿಕಿ ಬೀಳ್ತಾವು ನೋಡು. ನೀನೊಬ್ನs ಮನುಷ್ಯಾ ಏನ್, ಉಳಿದೋರ್‍ಗೆ ಹೃದಯಾನs ಇಲ್ಲಂತ ತಿಳ್ದಿಯೇನು? ನಿನ್ನ ಸಮಸ್ಯೆ ಎಂಥಾದ್ದು ಅಂತ ನಂಗ ಗೊತ್ತಾಗೇತಿ. ಆದ್ರೆ ಯಾರ ಕೇಂದ್ರಿತ ಅಂತ ತಿಳ್ದಿಲ್ಲಷ್ಟ. ಬಾಯಿ ಬಿಡು ಸುಮ್ಕ, ಇಲ್ಲಾಂದ್ರ ನಂಗೂ ನಿಂಗೂ ಇರೂ ಗೆಳೆತನಾರs ಯಾಕಂತ ನಮ್ ಪಾಡ್ಗೆ ನಾವಿದ್ಬಿಡೂನು ಮಾತು ಮುಗಿಸುವಾಗ ನನ್ನ ಧ್ವನಿ ಆರ್ದ್ರವಾಗಿತ್ತು. ಕಣ್ಣುಗಳು ತಂತಾವೆ ತೇವವಾಗಿದ್ದವು. ಉದ್ವೇಗದಿಂದ ಮೈ ಸಣ್ಣಗೆ ಬೆವರಿತ್ತು. ನಾನು ಅಷ್ಟು ಹೇಳಿ ಸುಮ್ಮನಾದಾಗ ರವೀಂದ್ರ ತಟ್ಟನೆ ನಿಂತು, ನನ್ನ ಕೈ ಹಿಡಿದು ಹೇಳಿದನು. ಸುರೇಶ ನನ್ನ ಅರ್ಥ ಮಾಡ್ಕೊಳ್ಳೊ. ಹೇಳೂದಿಲ್ಲಂತ ನಾನೇನಾದ್ರೂ ಹೇಳಿನೇನೊ? ಹೇಳ್ಕೊಬೇಕು ನಿನ್ನ ಮುಂದ, ಏನಾದ್ರೂ ಪರಿಹಾರ ಸಿಗುತ್ತಂತ ನಾನು ಯಾವತ್ತೊ ನಂಬೀನಿ. ಆದ್ರ ಹ್ಯಾಗ ಹೇಳ್ಬೇಕು ಅಂತ ಯೋಚ್ನೆ ಮಾಡೋದ್ರಾಗ ಇಷ್ಟು ದಿನ ಕಳ್ದುವು ಎಂದು ಅವನು ಮುಖ ಸಪ್ಪಗೆ ಮಾಡಿಕೊಂಡನು. ಹೋಗ್ಲಿ ಬಿಡು, ಈಗ ಹೇಳು, ನಿನ್ನ ಸಮಸ್ಯೆಗೆ ಏನ್ ಕಾರಣ ಅಂತ. ಮನ್ಯಾಗ ಏನಾದ್ರೂ ಸಮಸ್ಯೆ ಬಂದೈತಾ ಅಥ್ವಾ ನಾನ್ ಯೋಚಿಸ್ದಂಗ ತಲೀಗ್ಯಾವ್ದರ ಹುಡ್ಗೀ ಹುಡುಗಿ ಬಂದು ಕುಂತೈತಾ?” ಎಂದು ಅವನು ಭುಜದ ಸುತ್ತ ಕೈ ಹಾಕಿ ಕೇಳಿದ್ದೆ. ನನ್ನ ಧ್ವನಿಯಲ್ಲಿ ಸ್ವಲ್ಪ ತುಂಟತನವೂ ಇಣುಕಿತ್ತು. ಅವನು ಸಂಕೋಚದಿಂದ ಮುದ್ದೆಯಾಗಿದ್ದ.
ಅಲ್ಲಿಯೇ ಕೆರೆ ಏರಿಯ ಮೇಲಿರುವ ಹುಣಸೇ ಮರಗಳ ಸಾಲಿನಲ್ಲಿ, ಒಂದು ಮರದ ಕೆಳಗೆ ಕುಳಿತೆವು. ಮರದ ನೆರಳು ಉದ್ದಕ್ಕೆ ಚಾಚಿಕೊಂಡು ಬದುವು ಇಳಿದು ಮುಸ್ಕಿನ ಬಾವಿ ಹಾಗೂ ಛಬ್ಬೇರಬಾವಿಯ ತೋಟವನ್ನು ತಲುಪಿತ್ತು. ಪಶ್ಚಿಮಕ್ಕೆ ಜಾರಲು ಸನ್ನದ್ಧನಾಗಿದ್ದ ಸೂರ್ಯನ ಹಿತವಾದ ಕಿರಣಗಳು ಮೈಮನಕ್ಕೆ ಒಂಥರಾ ನೆಮ್ಮದಿ, ವಿಶ್ರಾಂತಿಯನ್ನು ನೀಡತೊಡಗಿದ್ದವು. ಅವನು ತೋರು ಬೆರಳಿನಿಂದ ಆ ಎರೆ ಮಣ್ಣಿನಲ್ಲಿ ಏನೇನೊ ಚಿತ್ತಾರ ಮಾಡುತ್ತ ಒಂದೆರಡು ನಿಮಿಷ ಸುಮ್ಮನೆ ಕುಳಿತಿದ್ದ. ಅವನು ಬರೆದ ಚಿತ್ತಾರವನ್ನು ವೀಕ್ಷಿಸಿದೆ. ಎರಡು ಬೇರೆ ಬೇರೆ ಗಿಡಗಳಲ್ಲಿ ಅರಳಿದ ಎರಡು ಗುಲಾಬಿ ಹೂಗಳು ಒಂದಕ್ಕೊಂದು ಮುತ್ತಿಡುತ್ತಿವೆ. ಅವುಗಳೊಂದಿಗೆ ಸುಂದರವಾದ ಎಲೆಗಳು ಚಿತ್ರಿತವಾಗಿದ್ದವು. ಓಹ್ ಪ್ರೇಮವೆಂಬುದು ಒಮ್ಮೆ ತಲೆಗೆ ಹೊಕ್ಕಿತಂದ್ರೆ, ಎಲ್ಲದರಲ್ಲೂ ವ್ಯಕ್ತವಾಗುತ್ತಲೇ ಇರುತ್ತದೇನೊ ಎಂದುಕೊಂಡೆ. ಅವನು ನಿಧಾನವಾಗಿ ತಲೆ ಮೇಲೆತ್ತಿ ನೋಡಿದ. ಆಗಲೇ ಹಕ್ಕಿ ಯುಗಳಗಳು ಗೂಡುಗಳಿಗೆ ಮರಳತೊಡಗಿದ್ದವು. ಗುಬ್ಬಚ್ಚಿ, ಕಾಗೆ, ಕೌಜುಗ ಮತ್ತಿತರ ಹಕ್ಕಿಗಳ ಉಲಿತ ಉತ್ಸಾಹವನ್ನು ಹರವಿತ್ತು. ಸೋಮನಕೆರೆಯ ಪಶ್ಚಿಮ ದಿಕ್ಕಿಗೆ ಇರುವ ಹಳ್ಳಿ ಮುತ್ತಣ್ಣನವರ ತೋಟದ ತೆಂಗಿನ ಗಿಡಗಳ ಗರಿಗಳ ಮೇಲಿಂದ ಮೆಲ್ಲಗೆ ಜಾರುಬಂಡೆ ಆಡುತ್ತ ಇಳಿಯುತ್ತಿರುವಂತೆ ಸೂರ್ಯನ ನೋಟ ಅದ್ಭುತವಾಗಿತ್ತು. ಬೆಳಿಗ್ಗೆ, ಮದ್ಯಾಹ್ನ ಮತ್ತು ಸಾಯಂಕಾಲ ಮೂರು ಸಲ ಮೊಗ್ಗು ಬಿಡಿಸಿದರೂ, ಮಲ್ಲಿಗೆ ಗಿಡಗಳ ಒಡಲಿನಲ್ಲಿ ಭೂಮಿತಾಯಿಯು ಕಳ್ಳತನ ಮಾಡಿ ಇರಿಸಿದ್ದಾಳೇನೊ ಎಂಬಂತೆ ಇನ್ನೂ ಸಾಕಷ್ಟು ಮಲ್ಲಿಗೆ ಮೊಗ್ಗುಗಳು ಉಳಿದುಕೊಂಡಿರುತ್ತಿದ್ದವು. ಅವು ಅದಾಗಲೆ ಮೆಲ್ಲನೆ ಬಿರಿಯತೊಡಗಿದ್ದಂತೆಯೇ, ಸಂಜೆಯ ತಂಗಾಳಿಯಲ್ಲಿ ಕಂಪು ತುಂಬಿಕೊಂಡಿತ್ತು. ಸೂರ್ಯನ ಹೊಂಗಿರಣಗಳು ಕೆರೆಯ ನೀರಿನ ಮೇಲೆ ಹರವಿ ನೀರೆಲ್ಲ ಹೊಂಬಣ್ಣ ಪಡೆದಿತ್ತು. ಸೂರ್ಯನ ಹೊಂಗಿರಣಗಳು ಬಾಗಿ ಬಟ್ಟೆಯನ್ನು ತೊಳೆಯುತ್ತಿರವ ಹೆಂಗಳೆಯರ ಬೆನ್ನಿಗೆ ರಸಿಕತೆಯಿಂದ ಮುದ್ದು ಕೊಟ್ಟಂತಿತ್ತು. ಅದೇ ಸಮಯದಲ್ಲಿ ರವೀಂದ್ರ ಮೆಲ್ಲಗೆ ಆದರೆ ಅತ್ಯಂತ ಖುಷಿಯಲ್ಲಿ ಹೇಳಿದ, ಸೂರಿ, ನೋಡಲ್ಲಿ ಅವನು ಕಣ್ಸನ್ನೆಯಿಂದಲೇ ಕರೆಯ ದಕ್ಷಿಣ ಭಾಗದ ಕಡೆ ತೋರಿಸಿದ. ನಾನು ನೋಡಿದೆ. ಆದರೆ ಏನು ವಿಶೇಷ ಅಂತ ಗೊತ್ತಾಗಲಿಲ್ಲ. ಅವನೇ ಹೇಳಿದ, ಕೋಮಲ ಅರಬೀ ಒಗೆಯಾಕ್ಹತ್ಯಾಳೊ. ಅಕಾ ಅಲ್ಲಿ ನೋಡು. ಅದs ಅದs ಎದ್ದು ನಿಂತು ಜಡಿ ತುರುಬ್ ಕಟ್ಟಾಕ್ಹತ್ಯಾಳ ನೋಡು ಎಂದಾಗ ನಾನು ನೋಡಿದೆ. ಅವಳು ಕೋಮಲ. ತನ್ನ ತಾಯಿಯೊಂದಿಗೆ ಕೆರೆಗೆ ಬರುತ್ತಿದ್ದರೂ ಅವಳು ನೀರಿಗೆ ಇಳಿದಿದ್ದನ್ನು ನಾನು ನೋಡಿರಲೇ ಇಲ್ಲ. ಅವತ್ತು ಏಕೋ ಬಟ್ಟೆಯನ್ನು ತೊಳೆಯತೊಡಗಿದ್ದಳು.
ನಾನು ಹೇಳಿದೆ, ಅಲ್ಲಲೇಯಪ್ಪಾ, ಅವಳು ಬಟ್ಟೆ ಒಗೆಯಾಕ್ಹತ್ಯಾಳಂದ್ರ ಅದೇನೂ ವಿಶೇಷಲ್ಲ. ಇಡೀ ಜಗತ್ತಿನ್ಯಾಗ ಎಲ್ಲ ಹೆಂಗಸ್ರೂ ಮಾಡ್ತಾರದನ್ನ. ಅದಿರಲೀ, ನಿನ್ನ ಚಿತ್ತ ಚೋರಳ್ಯಾರು ಅಂತ ಹೇಳು ಮೊದ್ಲು ಎಂದೆ ನಗುತ್ತ. ಅವನು ನಾಲಿಗೆಯಿಂದ ತುಟಿಗಳನ್ನು ತೇವಗೊಳಿಸಿಕೊಂಡು ಹೇಳಿದ ಕೋಮಲ. ಅವನ ಮುಖ ರಂಗೇರಿತ್ತು. ನನಗೆ ಅವನ ಉತ್ತರಿಂದ ಸ್ವಲ್ಪ ಹೆದರಿಕೆಯಾಯಿತು. ಥ್ರೀರೋಜಸ್ ಹೊರತುಪಡಿಸಿ ಬೇರೆ ಯಾವುದೇ ಹುಡುಗಿಯ ಹೆಸರು ಹೇಳಿದ್ದರೆ ನಾನು ಹೆದರುತ್ತಿರಲಿಲ್ಲವೇನೊ. ಆದರೆ ಕೋಮಲ ಎಂದುಬಿಟ್ಟಾಗ ಸಣ್ಣಗೆ ಅಂಗೈಗಳು ಬೆವೆತುಬಿಟ್ಟವು. ಕೋಮಲಳ ಅಣ್ಣಂದಿರಾದ ಸಿದ್ಧೇಶ, ರಾಮು ಕಣ್ಮುಂದೆ ಸುಳಿದು ಹೋದರು ಜಗಜಟ್ಟಿಗಳು. ಅವರ ಜೀವನಕ್ಕೆ ಸಂಬಂಧಿಸಿದಂತೆ ಏನಾದರೂ ನಡೆಯಬಾರದ್ದು ನಡೆದರೆ ಅವರೆಷ್ಟು ವ್ಯಗ್ರರಾಗುತ್ತಿದ್ದರೆಂದರೆ, ಬಹುಶಃ ಅವರು ಪ್ರಾಣದ ಹಂಗನ್ನೂ ತೊರೆದು ಕೈ ತೋಳೇರಿಸಿ ನಿಲ್ಲುತ್ತಿದ್ದರು. ಆ ನಾಲ್ಕು ವರ್ಷಗಳಲ್ಲಿ ನಾನು ಅವರನ್ನು ಚೆಂದಗೆ ಅರಿತುಕೊಂಡಿದ್ದೆ. ರವೀಂದ್ರನಾದರೋ ಕಾಡು ಕುರುಬರ ಹುಡುಗ. ಕೋಮಲ ಅಪ್ಪಟ ಲಿಂಗವಂತ ಮನೆತನದ ಮುದ್ದಿನ ಮಗಳು. ಬಹುಶಃ ಪ್ರೇಮವೆಂಬುದು ಅವರ ಮನೆತನದಲ್ಲಿ ದಂಪತಿಗಳ ಮಧ್ಯೆಯೂ ಕದ್ದಿನಿಂದ ಇಣುಕುತ್ತದೆ ಎನೋ ಎಂಬಂತಹ ಸಾಂಪ್ರದಾಯಿಕ ಮನೆತನ ಅವಳದು. ರವಿ ನೋಡಿದರೆ ಕೋಮಲಳ ಮೇಲೆಯೇ ಕಣ್ಣು ಹಾಕಿದ್ದಾನೆ. ಹಾಗೆ ನೋಡಿದರೆ ರವೀಂದ್ರ ಒಳ್ಳೆಯವನು. ಉತ್ತಮ ಹಾಸ್ಯಗಾರನೆಂಬುದು ನಿಜ. ಆದರೆ ಓದಿನಲ್ಲಿ ಯಾವಾಗಲು ಶೇಕಡ ಮುವತ್ತೈದು ಅಂಕ ಪಡೆಯಲು ಹೆಣಗಾಡುತ್ತಿದ್ದ ಭೂಪ ಅವನು. ಮನೆಯ ಆರ್ಥಿಕ ಹಿನ್ನೆಲೆಯಾದರೂ ಹೇಳಿಕೊಳ್ಳುವಂಥದ್ದಲ್ಲ. ತಂದೆ-ತಾಯಿಯ ಕೂಲಿಯ ಮೇಲೆಯೇ ಮನೆತನ ನಡೆಯಬೇಕು. ಏಕೆ ಇವನಿಗೆ ಇಷ್ಟು ಹುಚ್ಚು ಆಸೆ ಅನ್ನಿಸಿಬಿಟ್ಟಿತು ನನಗೆ. ಹಾಗಂತ ನಾನೇನೂ ಜಾತಿ ಬೇಧ ಎಣಿಸಿದೆನೆಂದಲ್ಲ. ಯಾವುದಕ್ಕೇ ಆಗಲಿ ಅರ್ಹತೆಯಾದರೂ ಬೇಡವೇ? ನಮ್ಮ ಸಮಾಜದಲ್ಲಿ ಬೇರೂರಿರುವ ಜಾತಿ ಪದ್ಧತಿಯನ್ನು ಅಷ್ಟು ಸುಲಭವಾಗಿ ಎದುರಿಸಲಾಗುವುದೇ ಎಂಬ ಪ್ರಶ್ನೆ ಆ ದಶಕದಲ್ಲಿ ಕೇಳಿಕೊಳ್ಳುವಂಥದ್ದೇ ಆಗಿತ್ತು. ಮೇಲಾಗಿ ಕೋಮಲ ಯಾವುದೇ ದೃಷ್ಟಿಕೋನದಿಂದ ನೋಡಿದರೂ ಉಚ್ಛಳೆಂದೇ ಎನ್ನಿಸುತ್ತಿತ್ತು. ಪ್ರತಿ ಕ್ಲಾಸಿನಲ್ಲೂ ಮೊದಲಿಗಳಾಗಿ ಉತ್ತೀರ್ಣಳಾಗುವ, ಪಠ್ಯೇತರ ಚಟುವಟಿಕೆಗಳಲ್ಲಿಯೂ ಸದಾ ಯಶಸ್ವೀ ಹುಡುಗಿಯಾಗಿದ್ದ, ದೊಡ್ಡ ಶ್ರೀಮಂತ ಮನೆತನದ, ಹೆಮ್ಮೆಯ ಮಗಳಿಗೆ ಯಾವುದೇ ಪ್ರಾಬಲ್ಯ ಹೊಂದಿರದ, ಓದಿನಲ್ಲೂ ಮುಂದಿರದ ಹುಡುಗನೊಬ್ಬನನ್ನು ವರಿಸಲು ಹುಚ್ಚು ಹಿಡಿಯಬೇಕಷ್ಟೆ ಎನ್ನಿಸಿತು ನನಗೆ. ಅದೆಲ್ಲ ಏನೇ ಆದರೂ ಸದ್ಯಕ್ಕೆ ಅವನು ’ವಂದನಾ’ ಎನ್ನಲಿಲ್ಲವಲ್ಲ ಅಂತ ಒಂದು ರೀತಿಯ ಸಮಾಧಾನವೂ ಆಯಿತು. ಆದರೆ ಇದನ್ನೆಲ್ಲ ರವೀಂದ್ರನಿಗೆ ಹೇಳಲು ನನ್ನಿಂದಾಗಲಿಲ್ಲ. ಅವನ ಪ್ರೇಮಕ್ಕೆ ಅಷ್ಟೊಂದು ಶಕ್ತಿ ಇದ್ದರೆ, ಅದನ್ನು ತಡೆಗಟ್ಟಲು ಯಾರಿಂದಲೂ ಆಗದು ಎಂದುಕೊಂಡೆ. ಹಾಗೆಯೇ ನನ್ನ ವಿಷಯದಲ್ಲೂ ಅದೇ ರೀತಿ ಅಭಿಪ್ರಾಯಪಟ್ಟೆ. ಆದರೆ ತಾತ್ಕಾಲಿಕವಾಗಿ ಅದು ಹೊರಗೆ ವ್ಯಕ್ತವಾಗದಿರಲಿ ಎಂಬುದು ನನ್ನ ಯೋಚನೆಯಾಗಿತ್ತು. ಸ್ವಲ್ಪ ಹೊತ್ತು ನನಗೆ ಮೌನವೇ ಲೇಸನ್ನಿಸಿತು. ನಂತರ ಅವನ ಭುಜವನ್ನು ಹಿಡಿದು ಹೇಳಿದೆ, ನೋಡು ರವೀ, ಯಾವುದಕ್ಕೂ ದುಡುಕೂದು ಬ್ಯಾಡ, ಈಗಾಗ್ಲೆ ಮೊದಲ್ನೇ ಕಿರು ಪರೀಕ್ಷೆ ಸಮೀಪ ಬಂದ್ವು. ಎಂಟು ದಿನದ ಮಟ್ಟಿಗಂತೂ ಮನಸ್ನ ಶಾಂತಿಟ್ಕೊಂಡು ಓದೂನು. ಈ ಕಿರು ಪರೀಕ್ಷೆ ಮುಗುದ್ ಮ್ಯಾಲೆ ಆ ವಿಷ್ಯ ಮಾತಾಡೂನು…. ಅವನು ಪ್ರತ್ಯುತ್ತರಿಸಿದ, ನೀನ್ ಹೆಂಗ ಹೇಳ್ತೀ ಹಂಗಾಪಾ ಎಂದು ಒಂದೇ ಮಾತಿನಲ್ಲಿ ನನ್ನ ಮೇಲಿರುವ ಸ್ನೇಹ, ಪ್ರೀತಿ, ಗೌರವವನ್ನು ತೋರಿಸಿ ಮುಗುಳ್ನಕ್ಕಿದ್ದ.
(ಮುಂದುವರೆಯುವುದು…)
*****