ಮೊದಲನೇ ಕಿರು ಪರೀಕ್ಷೆಗಳು ಮುಗಿದಿದ್ದವು. ಅವತ್ತು ಶನಿವಾರ. ಕೊನೆಯಲ್ಲಿ ಆಟದ ಅವಧಿ ಇತ್ತು. ಏಕೋ ಆಟದಲ್ಲಿ ತೊಡಗಿಕೊಳ್ಳಲು ಮನಸ್ಸು ಬರಲಿಲ್ಲ. ನನ್ನ ವಾಸದ ಕೋಣೆಗೆ ಹೋಗಿ ಅಕ್ಕಿ ತೊಳೆದು, ಒಲೆ ಹೊತ್ತಿಸಿಟ್ಟೆ. ಅನ್ನ ಬೇಯುವಷ್ಟರಲ್ಲಿ ರವೀಂದ್ರ ಕಲ್ಲಯ್ಯಜ್ಜನವರ ಖಾನಾವಳಿಯಿಂದ ಕೆಟ್ಟ ಖಾರದ ರುಚಿಯಾದ ಸಾರು ತಂದಿರಿಸಿದ್ದ. ಊಟದ ನಂತರ, ಸಾಕಷ್ಟು ಸಮಯವಿದ್ದುದರಿಂದ ಒಂದೆರಡು ತಾಸು ಚೆಂದಗೆ ನಿದ್ದೆ ಮಾಡಿಬಿಟ್ಟೆ. ಎಚ್ಚರವಾದಾಗ ಕೋಣೆಯಲ್ಲಿ ರವೀ ಇರಲಿಲ್ಲ. ಅವನು ಸಮಯ ಸಿಕ್ಕಾಗೆಲ್ಲ ಗೆಳೆಯರನ್ನು ಹುಡುಕಿಕೊಂಡು ಹೋಗುವವನು. ಎಲ್ಲಿದ್ದಾನೆಂದು ತಟ್ಟನೆ ತಿಳಿದುಕೊಳ್ಳಲು ಎಂಬತ್ತರ ದಶಕದಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್ ಮಾತಿರಲಿ, ಲ್ಯಾಂಡ್ ಫೋನ್‌ಗಳೇ ಅಪರೂಪವಾಗಿದ್ದವು. ಈಗಿನಂತೆ ಒಂದು ಕರೆಯಲ್ಲಿ ಬೇಕಾದ ವಿದ್ಯಮಾನಗಳನ್ನೆಲ್ಲ ಇದ್ದ ಜಾಗದಲ್ಲಿಯೇ ತಿಳಿದುಕೊಳ್ಳುವ ವ್ಯವಸ್ಥೆ ಇರಲಿಲ್ಲವಲ್ಲ. ಯಾರು ಬೇಕಾದರೂ, ಏನು ಬೇಕಾದರೂ ಹುಡುಕಿಕೊಂಡೇ ಹೋಗಬೇಕಾಗಿದ್ದ ಕಾಲವದು. ಒಬ್ಬ ಗೆಳೆಯನ ಮನೆಯಲ್ಲಿ ಈ ಬಡ್ಡೀಮಗ ಇರಲಿಲ್ಲವೆಂದರೆ ಮತ್ತೊಬ್ಬ ಗೆಳೆಯನ ಮನೆಯ ಬಾಗಿಲು ತಟ್ಟುತ್ತಿದ್ದ ಆ ದಿನಗಳನ್ನು ನೆನಪಿಸಿಕೊಂಡರೆ ಈಗ ಅವು ಎಂಥ ಮಧುರ ಕ್ಷಣಗಳು ಅನ್ನಿಸಿಬಿಡುತ್ತವೆ. ಹಾಗೇ ಹುಡುಕಿಕೊಂಡು ಹೋದಾಗ ಝಡ್‌ಪಿ ಮನೆಯಲ್ಲಿ ರವೀಂದ್ರ ಸಿಕ್ಕ. ಝಡ್ ಪಿ ಎಂದರೆ ಝಾಕೀರ್ ಹುಸೇನ್ ಪೀರ್ ಸಾಬ್ ನಧಾಪ್.
ನಾವು ಪ್ರೀತಿಯಿಂದ ಅವನಿಗೆ ಝಡ್‌ಪಿ ಎನ್ನುತ್ತಿದ್ದೆವು. ನನ್ನ ಕ್ಲಾಸಿನ ಸ್ನೇಹಿತರಿಗೆ ನಮ್ಮಿಬ್ಬರಂತೆ ಊರಿನ ಹೊರ ಒಳಗೆ ಅಲೆದಾಡುವ ಹವ್ಯಾಸ ಅಷ್ಟೊಂದಿರಲಿಲ್ಲ. ಗುಂಪುಗೂಡಿ ಹರಟೆ ಹೊಡೆಯುವುದು, ಟಿ.ವ್ಹಿ ನೋಡುವುದು, ಸಾಯಂಕಾಲ ಒಂದೆರಡು ತಾಸು ಪುಟ್ ಬಾಲ್, ಕ್ರಿಕೆಟ್ ಆಡುವುದು ಅವರ ಮೆಚ್ಚಿನ ಹವ್ಯಾಸಗಳಾಗಿದ್ದವು. ಆದರೆ ನಾನು ಮತ್ತು ರವೀಂದ್ರ ಆಟದ ಹುಚ್ಚಿನವರಾಗಿದ್ದರೂ ಸಾಯಂಕಾಲಗಳನ್ನು ಆಟಕ್ಕೆ ಕಳೆಯುತ್ತಿರಲಿಲ್ಲ. ನಿಸರ್ಗದ ಒಟನಾಟದಲ್ಲಿ ನಮ್ಮ ಸಂಜೆಗಳು ಸುಂದರವಾಗಿರುತ್ತಿದ್ದೆವು. ನಾವಿಬ್ಬರೂ ಸಾಯಂಕಾಲದ ಸಂಚಾರದಲ್ಲಿ ಜಾಸ್ತಿ ಮಾತುಗಳನ್ನೇನೂ ಆಡುತ್ತಿರಲಿಲ್ಲ. ಅಲ್ಲಿ ನಾವಿಬ್ಬರೂ ಸರ್ವ ಸ್ವತಂತ್ರರಾಗಿರುತ್ತಿದ್ದೆವು. ಕಿವಿ, ಕಣ್ಣಗಳು ಸ್ವಚ್ಛಂದವಾಗಿ ಪರಿಸರಕ್ಕೆ ಸ್ಪಂದಿಸುತ್ತಿದ್ದವು. ಮನಸ್ಸಿನಲ್ಲಿ ಬೇರೆ ಯಾವುದೇ ಯೋಚನೆಗಳಿಗೆ ಜಾಗವೇ ಇರುತ್ತಿರಲಿಲ್ಲ. ಕಾರಣವಿದ್ದಾಗ ಮಾತ್ರ ಮಾತಾಡುತ್ತಿದ್ದೆವು. ಬಹುಶಃ ನಮ್ಮ ಸ್ವಭಾವದಲ್ಲಿ ಈ ತರಹದ ಸಾಮ್ಯತೆ ಇರುವುದರಿಂದಲೊ ಏನೊ ನಮ್ಮಿಬ್ಬರ ಓದಿನಲ್ಲಿ ಅಜಗಜಾಂತರವಿದ್ದರೂ ನಾವು ಆತ್ಮೀಯ ಗೆಳೆಯರಾಗಿದ್ದೆವು.
ನಾವು ಆ ದಿನ ಝಡ್ ಪಿ ರೂಮ್‌ನಿಂದ ಗೆಳೆಯರೆಲ್ಲರಿಗೂ ವಿದಾಯ ಹೇಳಿ, ಸರಕಾರಿ ದವಾಖಾನೆಯ ಸಮೀಪ ಬರುತ್ತಿದ್ದಂತೆಯೇ ನನಗೆ ಕೋಮಲಳ ನೆನಪಾಯಿತು. ರವೀಂದ್ರ ಮಹಾ ಸಂಕೋಚದವನು. ಅವನು ಮತ್ತೆ ಆ ವಿಷಯವನ್ನು ತಾನಾಗಿ ಮಾತಿಗೆ ತರಲಾರನು. ನಾನೇ ಮಾತು ಶುರು ಮಾಡಿದೆ. ಕೋಮಲಾ ಬಗ್ಗೆ ಏನ್ ಯೋಚ್ನೆ ಮಾಡ್ತೀ… ಎಂದು ಅವನಿಗೆ ಕೇಳಿದೆ. ಅವನು ಸುಮ್ಮನೇ ಇದ್ದನು. ಮಾತಾಡೊ. ಸುಮ್ಕ ಇದ್ರ ಹ್ಯಾಂಗ್ ಬಗೀಹರೀಬೇಕು ಸಮಸ್ಯೆ ಅಂದೆ. ಏನೂ ತೋಚ್ವಲ್ದು ಬಿಡೊ. ಆದ್ರ ಕೋಮಲಾ ಈ ಲೈಫ್‌ಗೆ ಬೇಕs ಬೇಕಂತ ಅನ್ನಿಸ್ಬಿಟೈತಿ ಅಂತ ಹೇಳಿದವನ ಮುಖ ಮ್ಲಾನವಾಗಿತ್ತು. ಅನ್ನಿಸಿಬಿಟ್ಟಿದ್ದು ಮಹತ್ವದ್ದಲ್ಲಪಾ, ಅದನ್ನ ಸಾಧ್ಸೂದು ಹೆಂಗs ಅಂತ ಯೋಚ್ನೆ ಮಾಡ್ಬೇಕಲ್ಲಾ? ಎಂದೆ. ಅವನು ನನ್ನ ಮುಖವನ್ನು ನೋಡಿ ಮತ್ತೆ ಅದೋವದನನಾಗಿ ನಡೆಯತೊಡಗಿದ. ಅವತ್ಯಾಕೊ ಮುಂದೆ ಹೋಗಬೇಕು ಅನ್ನಿಸಲಿಲ್ಲ. ಶಿಬಾರ್‍ಗಟ್ಟಿ ಮುಂದಿನ ಕಟ್ಟೆಯ ಮೇಲೆಯೇ ಕುಳಿತೆವು. ಶಿಬಾರ್‍ಗಟ್ಟಿ ಅಂದರೆ ಶಿಬಿ ಚಕ್ರವರ್ತಿಯು ಗರುಡ ರೂಪದ ಭಗವಂತನಿಗೆ ತನ್ನ ದೇಹದ ಮಾಂಸವನ್ನು ಕತ್ತರಿಸಿ, ತೂಗಿ ಕೊಡಲು ಆಯ್ದುಕೊಂಡಿದ್ದ ಊರ ಹೊರಗಿನ ಜಾಗವಂತೆ. ಈ ಕಥೆಯು ಲಕ್ಕುಂಡಿಯ ಸ್ಥಳೀಯ ಇತಿಹಾಸದಲ್ಲಿ ವರ್ಣಿಸಲ್ಪಟ್ಟಿದೆ. ಏನಾದರಾಗಲಿ, ಈ ನನ್ನ ಗೆಳೆಯನ ಬಾಳು ಹಾಳಾಗವಾರದೆಂಬುದು ನನ್ನ ಆಸೆಯಾಗಿತ್ತು. ಅದೇ ವಿಷಯದ ಕುರಿತು ನಾನು ಎಂಟು ದಿನಗಳವರೆಗೆ ಯೋಚಿಸಿ, ಯೋಚಿಸಿ ಒಂದು ನಿರ್ಧಾರಕ್ಕೆ ಬರುವ ಸಲುವಾಗಿಯೇ ಅವನಿಗೆ ಕಿರು ಪರೀಕ್ಷೆಯ ನೆವ ಹೇಳಿ ಅವನನ್ನು ಓದಿನಲ್ಲಿ ತೊಡಗಿಸಿದ್ದೆ.
ರವೀಂದ್ರನ ತಂದೆ ತಾಯಿಗಳು ಅನಕ್ಷರಸ್ಥರು. ನಾಲ್ಕು ಜನ ತಂಗಿಯರಿದ್ದರು. ಆ ಕುಟುಂಬದಲ್ಲಿ ಓದಿದವನೆಂದರೆ ಇವನೊಬ್ಬನೆ. ಪ್ರತಿಯೊಬ್ಬ ತಂದೆ ತಾಯಿಯ ಹೃದಯದಲ್ಲಿ ತಮ್ಮ ಮಕ್ಕಳ ಬಗ್ಗೆ ಅದಮ್ಯ ನಿರೀಕ್ಷೆ ಇರುತ್ತದೆ. ಅದಕ್ಕೆ ಫಲ ಸಿಗಬೇಕೆಂದರೆ ಮಕ್ಕಳು ಸಾಧನೆಯ ಕಡೆ ಮುಖ ಮಾಡಿ ಚಲಿಸಿದರೆ ಮಾತ್ರ ಸಾಧ್ಯ. ಈ ಪ್ರೇಮ ನೋಡಿದರೆ ಯಾವುದೇ ಸಾಧನೆಯ ಮಾತಿರಲಿ, ಇನ್ನೂ ನೆಟ್ಟಗೆ ಪಿ.ಯು.ಸಿ ಕೂಡ ಮುಗಿಸಿರದ ಕನಸುಗಂಗಳ ಹುಡುಗರನ್ನು ತನ್ನ ಕೈ ಚಾಚಿ ತಬ್ಬಿಕೊಂಡು ತಲೆ ಕೆಡಿಸಿಬಿಡುತ್ತದೆ. ನನ್ನಂತಹ ಬಿಗಿ ನಿಯಂತ್ರಣದ ಮನಸ್ಸಿನವರು ಹೇಗೋ ಪಾರಾದರೆ, ರವೀಂದ್ರನಂತಹ ಹುಡುಗರು ಅದಕ್ಕೆ ತಲೆಬಾಗಿ ನಲುಗಿ ಬಿಡುತ್ತಾರಲ್ಲ ಎಂದು ಪಾಪ ಎನ್ನಿಸಿತು. ನಾನೂ ಕೂಡ ಅದೇ ಪ್ರಕರಣದವನಾಗಿದ್ದರೂ ನಾನು ಭಾವನೆಗಳನ್ನು ನಿಯಂತ್ರಿಸಬಲ್ಲವನಾಗಿದ್ದೆ. ಅದೊಂದೆ ಸಮಾಧಾನ. ಆದರೆ ರವೀಂದ್ರನ ಆತ್ಮೀಯ ಗೆಳೆಯನಾಗಿ ನನ್ನ ಆತ್ಮಸಾಕ್ಷಿಗೆ ಸರಿ ಎನ್ನಿಸಿದ್ದನ್ನು ಅವನಿಗೆ ಹೇಳಲೇ ಬೇಕಾಗಿತ್ತು. ಅಷ್ಟರ ಮೇಲೆ ನಿರ್ಧಾರ ಅವನಿಗೇ ಸೇರಿದ್ದು. ಅದಕ್ಕೆ ಸಂಬಂಧಿಸಿದ ಬಾಳು ಅವನದಾಗಲಿತ್ತು. ನಾನು ಹೇಳಿದೆ,ರವೀ ನಾನೊಂದು ನಿರ್ಧಾಕ್ಬಂದೀನಿ. ನಾನು ಹೇಳ್ಬೇಕಾದದ್ನ ಹೇಳ್ತೀನಪಾ, ನಿಂಗ ಸರಿ ಅನ್ನಿಸ್ಲಿಲ್ಲಂದ್ರ ನಿಂಗ ತಿಳ್ದಂಗ್ಮಾಡು. ಅವನೆಂದ,ಹೇಳೋಪ್ಪಾ,ನಿನ್ನ ಮಾತು ಮೀರ್ತಿನೇನೊ ನಾನೂ?.
ರವೀ ನೋಡು, ಹಿಂಗ್ಹೇಳ್ತೀನಂತ ಬ್ಯಾಸ್ರ ಮಾಡ್ಕೊಬ್ಯಾಡ, ಸದ್ಯಕ್ಕೆ ನಿನ್ಹತ್ರ ಆಸೆ ಒಂದs ಐತಿ. ನಿನಗ ಮದುವೀ ವಯಸ್ಸಿಲ್ಲ ಇನ್ನೂ. ಪ್ರೀತ್ಸೂ ವಯಸ್ಸು ದಾಪ್ಗಾಲಿಡಾಕ್ಹತ್ತೇತಿ. ಅದರ ಬೆನ್ನು ಹತ್ತಿ ಹೋದ್ರ ಸುಮ್ಕ ಕೆಟ್ಟ ಹೆಸರು ಬರ್ತೈತಿ. ಹೆಸರು ಕೆಡಿಸ್ಕೊಬ್ಯಾಡ. ಮೊದ್ಲ ಈ ಪಿ.ಯು.ಸಿ ಮುಗೀಲಿ. ಆಮ್ಯಾಲ ಏನ್ ಕೆಲ್ಸ ಮಾಡ್ಬೇಕನ್ಸತ್ತ ಅದನ್ನ ಈಗ್ಲೇ ಗುರುತು ಮಾಡ್ಕೊ. ಅದಕ್ಕ ತಕ್ಕಂತ ಟ್ರೈನಿಂಗ್ ಕೋರ್ಸಿಗೆ ಸೇರ್‍ಕೊ. ಚೆಂದಗ ಶ್ರಮಪಟ್ಟು ಓದು. ಆದಷ್ಟು ಲಗೂನ ಒಂದು ಕೆಲ್ಸಕ್ಕ ಸೇರ್‍ಕೊ. ಕೆಲಸಕ್ಕ ಸೇರಿಕೊಳ್ಳೋ ಹೊತ್ತಿಗೆ ನಾಲ್ಕೈದು ವರ್ಷಾನs ಕಳೀಬಹ್ದು. ಆದ್ರ ಚಿಂತಿ ಮಾಡಬ್ಯಾಡ. ಮೊದ್ಲು ಲಗೂನ ಕೆಲ್ಸಕ್ಕ ಸೇರ್‍ಬೇಕಂದ್ರ ಸೇನೆ, ಪೊಲೀಸ್, ಪ್ರೈಮರಿ ಸ್ಕೂಲ್ ಟೀಚರ್, ಡ್ರೈವರ್, ಕಂಡಕ್ಟರ್ ಇವಷ್ಟs ಸಿಗೂದು. ಅದರಾಗೂ ಸೇನೆಗೆ ಸೇರೊ ತರುಣರ್‍ಗೆ ಸಮಾಜದಾಗ ಗೌರವ ಜಾಸ್ತಿ ಐತಿ. ಸಭ್ಯತನದಿಂದ ಇದ್ರ ಹ್ಯಾಗೊ ದಾರಿ ಸಿಗುತ್ತ. ನಿನ್ನ ತಂದೆ ತಾಯಿ ಆಸೇನೂ ಈಡೇರುತ್ತ, ಕೋಮಲನ್ನ ಗೆಲ್ಲಾಕೂ ಇದೊಂದs ದಾರಿ ಎಂದು ನಾನು ಮಾತು ಮುಗಿಸಿದೆ. ಅಷ್ಟರಾಗs ಆಕೀನ್ನ ಬ್ಯಾರೆ ಕಡೆ ಕೊಟ್ಟು ಮದುವಿ ಮಾಡಿ ಬಿಟ್ರಂದ್ರs ಹೆಂಗೊ… ಅವನ ಧ್ವನಿಯಲ್ಲಿ ಚಿಂತೆ ತುಂಬಿತ್ತು. ಮುಖ ಸಣ್ಣದಾಗಿತ್ತು. ಒಂದು ನಿಮಿಷ ತಡೆದು ಹೇಳಿದೆ, ನಾನು ಅವಳ ಮದುವೀ ವಿಷಯದ ಬಗ್ಗೆ ಗಮನ ಕೊಡ್ತೀನಿ. ಅವಳ ಪಿ.ಯು.ಸಿ ಮುಗಿದ್ಮ್ಯಾಲೆ ಈ ವಿಷ್ಯಾನs ಅವಳ್ಗೆ ತಿಳಿಸಿ ಬಿಡ್ತೀನಿ. ಪಿ.ಯು.ಸಿ ಮುಗಿಯೂತಂಕ ಅಂತೂ ಅವಳಿಗೆ ಮದುವಿ ಮಾಡೂದಿಲ್ಲ ಅವರ ತಂದೆ ತಾಯಿ ಅಂತ ನಂಗ ಖಾತ್ರಿ ಐತಿ. ಇನ್ನು ಅವ್ಳು ತಾನಾಗಿಯೇ ಪ್ರೀತಿ-ಪ್ರೇಮ ಅನ್ನೂ ಹುಡುಗೀನs ಅಲ್ಲ. ನೀನೊಬ್ಬ ಚೆಂದಗೆ ಓದಿನ್ಯಾಗ ತೊಡಗಿಕೊ ಅಷ್ಟ. ಪಿ.ಯು.ಸಿ ಮುಗುದ್ ತಕ್ಷಣ ಮುಂದಿನ ಓದಿಗೆ, ಟ್ರೈನಿಂಗ್‌ಗೆ ಏನ್ ಬೇಕಾದ್ರೂ ಸಹಾಯ ಮಾಡಾಕ ನಾನದೀನಿ-ಆತಿಲ್ಲ ಎಂದೆ. ಅವನು ಜಾಸ್ತಿ ವಾದಿಸಲಿಲ್ಲ. ಅದಕ್ಕೆ ಕಾರಣ ನನ್ನಲ್ಲಿ ಅವನು ಇರಿಸಿದ್ದ ಸ್ನೇಹ, ನಂಬಿಕೆ. ಅವನು, ಹಂಗs ಆಗ್ಲಿ ಬಿಡು, ನೀನ್ ಹೇಳ್ದಂಗs ಆಗ್ಲಿ ಎಂದನು ನಿರುಮ್ಮಳವಾಗಿ.
ನಂತರದ ದಿನಗಳಲ್ಲಿ ರವೀಂದ್ರ ಬಹಳ ಶ್ರಮ ಪಟ್ಟು ಓದತೊಡಗಿದ. ನನಗೆ ಬಹಳ ಸಂತಸವಾಗತೊಡಗಿತ್ತು. ಸ್ವತಃ ನನ್ನೊಳಗೆ ನಾನೇ ಒಬ್ಬ ಪ್ರೇಮದ ಹುಚ್ಚನಾಗಿದ್ದರೂ, ನನ್ನ ಹಂಬಲವನ್ನೆಲ್ಲ ಮೆಟ್ಟಿ ನಿಲ್ಲುವ ಜೊತೆಗೆ, ನನ್ನ ಗೆಳೆಯನನ್ನೂ ಒಳ್ಳೆಯ ದಾರಿಯಲ್ಲಿ ನಡೆಯುವಂತೆ ನೋಡಿಕೊಳ್ಳುತ್ತಿದ್ದುದರಿಂದ ನನಗೆ ದುಪ್ಪಟ್ಟು ಸಂತೋಷವಾಗಿತ್ತು. ಅವನು ಪಿ.ಯು.ಸಿ ಪ್ರಥಮ ವರ್ಷದ ಎಲ್ಲ ಕಿರು ಪರೀಕ್ಷೆಗಳಲ್ಲೂ ಅತ್ಯುತ್ತಮ ಅಂಕಗಳನ್ನು ಪಡೆಯುತ್ತ ಸಾಗಿದ್ದ. ನಿತ್ಯವೂ ಇಂಗ್ಲಿಷ್ ಪಾಠಗಳನ್ನು ಜೊತೆಗೆ ವ್ಯಾಕರಣವನ್ನು ಅವನಿಗೆ ತಿಳಿಸಿ ಕೊಡುತ್ತಲೆ ನನ್ನ ಅಂದಿನ ಅಭ್ಯಾಸವೂ ಮುಗಿದು ಹೋಗಿರುತ್ತಿತ್ತು. ಅವನು ಎಷ್ಟು ಸುಧಾರಿಸಿದನೆಂದರೆ ಶಿಕ್ಷಕವರ್ಗದವರು ನಮ್ಮಿಬ್ಬರನ್ನು ಒಟ್ಟಿಗೇ ಹೊಗಳುತ್ತಿದ್ದರು. ಪಾಟೀಲ ಗುರುಗಳು ಹೂವಿನ ಸಹವಾಸದಿಂದ ಹುಳುವೂ ದೇವರ ಶಿರಸ್ಸನ್ನು ಅಲಂಕರಿಸಿತಂತೆ ಎಂದರೆ, ಜೋಷಿ ಗುರುಗಳು ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ಎಂದು ಹೊಗಳುತ್ತಿದ್ದರೆ, ಮೆಣಸಗಿ ಗುರುಗಳು ಎಂಥಪ್ಪ ಸಹವಾಸ ಅಂಥಪ್ಪ ಫಲಿತಾಂಶ ಎಂದು ರವೀಂದ್ರನ ವಿಷಯಕ್ಕೆ ಬಂದಾಗ ಹೊಗಳುತ್ತಿದ್ದರು. ರವೀಂದ್ರ ಓದಿನಲ್ಲಿ ಹಿಂದಿದ್ದ ವಿದ್ಯಾರ್ಥಿಗಳಿಗೆ ಒಬ್ಬ ಮಾದರಿ ವ್ಯಕ್ತಿಯಾಗಿ ಬಿಟ್ಟನು. ಇದ್ದಕ್ಕಿದ್ದಂತೆ ಹುಡುಗರ ಚೆಲ್ಲಾಟ, ಹುಡುಗಿಯರಿಗೆ ಚುಡಾಯಿಸುತ್ತಿದ್ದ ದೃಶ್ಯಗಳು, ನಮ್ಮ ಕ್ಲಾಸಿನಲ್ಲಿ ಬಹಳಷ್ಟು ಕಡಿಮೆಯಾದವು.
ದ್ವಿತೀಯ ಪಿ.ಯು ತರಗತಿ ಮುಗಿದುದು ಗೊತ್ತೇ ಆಗಲಿಲ್ಲ. ದಿನಗಳು ಉರುಳಿ ಹೋದವು. ಫಲಿತಾಂಶ ಬಹಳ ಚೆಂದಗೆ ಬಂದಿತ್ತು. ಕೋಮಲ ಶೇ.ಎಂಬತ್ತೆರಡು ಅಂಕ ಗಳಿಸಿ ಕ್ಲಾಸಿಗೆ ಪ್ರಥಮಳಾಗಿ ಉತ್ತೀರ್ಣಳಾಗಿದ್ದಳು. ನಂತರ ವಂದನಾ, ನಿರ್ಮಲಳ ದರ್ಜೆ. ನಂತರ ನಾನು. ಥ್ರೀರೋಜಸ್‌ಗಿಂತ ಕ್ರಮವಾಗಿ ಹತ್ತು, ಹನ್ನೆರಡು, ಹದಿಮೂರು ಅಂಕಗಳ ವ್ಯತ್ಯಾಸದಲ್ಲಿ ತೇರ್ಗಡೆಯಾಗಿದ್ದೆ. ನಂತರ ರವೀಂದ್ರ ಶೇ.ಎಪ್ಪತ್ತೇಳು ಅಂಕದೊಂದಿಗೆ ತೇರ್ಗಡೆಯಾಗಿ ಪ್ರತಿಭಾನ್ವಿತನೆನ್ನಿಸಿಕೊಂಡುಬಿಟ್ಟ. ಆ ದಿನ ಅವನು ನನ್ನ ತೆಕ್ಕೆಗೆ ಬಿದ್ದು ಅತ್ತು ಬಿಟ್ಟಿದ್ದ. ಅವನು ಪ್ರಾರಂಭದಿಂದಲೂ ಎಂದೂ ಶೇ.ಮುವತ್ತೈದು ದಾಟಿರದಿದ್ದವನು, ಪಿ.ಯು.ಸಿಯ ಈ ಪರಿ ಫಲಿತಾಂಶಕ್ಕೆ ಸಂತೋಷದಿಂದ ಉಬ್ಬಿಹೋಗಿದ್ದ. ಯಾರು ಕೇಳಿದರೂ ಅದೆಲ್ಲ ಸುರೇಶನ ಸಹಾಯದ ಫಲ ನಂದೇನಲ್ಲ ಎಂದಿದ್ದ.
ನಂತರ ಅವನು ಶಿಕ್ಷಣ ಕ್ಷೇತ್ರವನ್ನು ಆಯ್ದುಕೊಂಡನು. ಯಾವುದೇ ಬಿಡಿಗಾಸು ಖರ್ಚಿಲ್ಲದೇ ಸರಕಾರಿ ಕೋಟಾದಲ್ಲಿ ಟಿ.ಸಿ.ಎಚ್ ಸೀಟು ಸಿಕ್ಕಿತು. ನಾನು ಗದಗ ಕೆ.ಎಸ್ ಎಸ್ ಕಾಲೇಜಿನಲ್ಲಿ ಬಿ.ಎಗೆ ಸೇರಿಕೊಂಡೆ. ಕೋಮಲ, ನಿರ್ಮಲ, ವಂದನಾ ಕಂಪ್ಯೂಟರ್ ಟಿಪ್ಲೊಮಾಕ್ಕೆ ಸೇರಿದರು. ನಾನು, ರವೀಂದ್ರ ಸೇರಿದಂತೆ ಸುಮಾರು ಮೂವತ್ತು ಹುಡುಗರು ಲಕ್ಕುಂಡಿಯಿಂದ ದೂರ ದೂರದಲ್ಲಿರುವ ಹಳ್ಳಿಗಳಿಂದ ಬಂದವರಾಗಿದ್ದೆವು. ಮತ್ತೆ ಈಗ ಪದವಿ ಹಂತದ ಓದಿಗಾಗಿ ಹುಬ್ಬಳ್ಳಿ-ಧಾರವಾಡ, ಹಾವೇರಿ-ಗದಗ ಅಂತ ಹೊರಟು ನಿಂತೆವು. ಗೆಳೆಯ ಝಡ್‌ಪಿ ಮಾತ್ರ ಲಕ್ಕುಂಡಿಯವನೇ ಆಗಿದ್ದನು. ಅವನೂ ಕೆ.ಎಸ್.ಎಸ್ ಕಾಲೇಜಿನಲ್ಲಿ ಬಿ.ಎಗೆ ಸೇರಿದನು. ಅವನು ಕೂಡ ರವೀಂದ್ರನಂತೆ ನಂಬಿಗಸ್ಥ ಹುಡುಗ. ಆ ಹೊತ್ತಿಗಾಗಲೇ ವಂದನಾ ಬಗೆಗಿನ ನನ್ನ ಮನಸ್ಸು ಸಹ ಝಡ್‌ಪಿ ಗೆ ತಿಳಿದಿತ್ತು. ಅವನ ಮೂಲಕವೇ ವಂದನಾ ಹಾಗೂ ಕೋಮಲಳ ಕುರಿತು ಆಗಾಗ್ಗೆ ತಿಳಿದುಕೊಳ್ಳುತ್ತಿದ್ದೆ. ದೊರೆತ ಮಾಹಿತಿಯು ರವೀಂದ್ರನಿಗೆ ರವಾನೆಯಾಗುತ್ತಿತ್ತು. ಕೋಮಲಳ ಮನೆಯಲ್ಲಿ ಅದಾಗಲೇ ಮದುವೆಯ ಮಾತುಗಳು ಶುರುವಾದಾಗ ಝಡ್‌ಪಿ ಸ್ವಲ್ಪ ಉದ್ವೇಗದಿಂದ ಹೇಳಿದ್ದ.ಯೋ ಮಾರಾಯ ಅವಳ್ಗೆ ಹಿಂಗಂತs ಒಂದು ಮಾತು ಹೇಳಿ ಬೀಡೂನೋ. ನೀವಿಬ್ರೂ ಈಗ ಅಪಹಾಸ್ಯಕ್ಕ ಈಡಾಗೂ ಪ್ರಸಂಗನs ಬರೂದಿಲ್ಲ. ನಮ್ಮ ಕಣ್ಣಿದುರಿಗೇನ ಅವ ಹೆಂಗ ವಿದ್ಯಾಭ್ಯಾಸದಾಗ ಮೆರಿಟ್ ಹೆಚ್ಚಿಸಿಕೊಂಡ ಅಂತ ಎಲ್ಲರಿಗೂ ಗೊತೈತಿ. ಅದೂ ಅಲ್ದ ಈಗ ಅವ ಟಿ.ಸಿ.ಎಚ್ ಕೊನೆಯ ಹಂತದಾಗ ಅದಾನ. ಅವನ ಮ್ಯಾಲೆ ನಂಬಿಕಿ ಐತಿ ಚೊಲೊ ರಿಜಲ್ಟ್ ತಗೀತಾನಂತ. ನನಗೂ ಝಡ್ ಪಿಯ ಮಾತು ಸಮ್ಮತವಾಯಿತು.
ಆ ದಿನಗಳಲ್ಲಿ ಆಗಷ್ಟೆ ನನ್ನ ತಾಯಿಯು ನನಗೋಸ್ಕರ, ಅಲ್ಲಲ್ಲಿ ಹುಡುಗಿಯರನ್ನು ಪರೀಕ್ಷಿಸತೊಡಗಿದ್ದು, ಅದರ ನನಗೆ ಸುಳಿವು ಸಿಕ್ಕಿತ್ತು. ಆದ್ದರಿಂದಲೇ ವಂದನಾ ಬಗ್ಗೆ ಅವ್ವನಿಗೆ ಬೇಗನೇ ತಿಳಿಸಿಬಿಡಬೇಕು ಎಂದುಕೊಳ್ಳತೊಡಗಿದ್ದೆ.
ಅವತ್ತು ನಾನು ಮತ್ತು ಝಡ್ ಪಿ ತೋಂಟದಾರ್ಯ ಪಾಲಿಟೆಕ್ನಿಕ್ ಕ್ಯಾಂಪಸ್‌ನಲ್ಲಿ ಕಾಲಿಟ್ಟಾಗ ಎದುರಿಗೆ ಕಾಣಿಸಿತು, ತ್ರೀರೋಜಸ್ ಬರುತ್ತಿರುವುದು. ನನಗಂತೂ ಎರಡು ವರ್ಷದ ನಂತರ ಅವರನ್ನು ನೋಡುತ್ತಿರುವುದಕ್ಕೆ ಬಹಳ ಖುಷಿಯಾಗಿತ್ತು. ಆದರೆ ಹೇಳಬೇಕಾಗಿರುವ ವಿಷಯವನ್ನು ಹೇಳುವುದು ಹೇಗೆ ಎಂದು ಹೆದರಿಕೆಯಾಗತೊಡಗಿತ್ತು. ಝಡ್ ಪಿಯ ಕೈಯನ್ನು ಬಿಗಿಯಾಗಿ ಹಿಡಿದುಕೊಂಡೆ. ನನ್ನ ಅಂಗೈ ಸಣ್ನಗೆ ಬೆವರತೊಡಗಿತ್ತು. ಅವನಿಗೆ ನಗೆ ತಡೆಯಲಾಗದೆ ಕಿಸಕ್ಕನೆ ನಕ್ಕು, ಲೇ ಎಪ್ಪಾ ನೀನೇನು ಒಳ್ಲೇ ಹುಡುಗೀ ಥರಾ ಬೆವರಾಕ್ಹತ್ತೀಯಲ್ಲೇ ಎಂದನು ಅವನು. ನನಗೂ ನಗೆ ತಡೆಯಲಾಗಲಿಲ್ಲ. ಲೇ ಮಗನs ಹುಡುಗ್ಯಾರು ಬೆವರೂದು ನಿನಗ್ಹೆಂಗ ಗೊತ್ತಾತ್ಲೇ ಅಂತ ಅವನ ಬೆನ್ನಿಗೊಂದು ಗುದ್ದಿದೆ. ಅಷ್ಟರಲ್ಲಿ ಥ್ರೀರೋಜಸ್ ಎದುರಿಗೇ ಬಂದಾಯಿತು. ಅವರೆಲ್ಲರ ಮುಖದಲ್ಲಿ ನಮ್ಮನ್ನು ಅನಿರೀಕ್ಷಿತವಾಗಿ ನೋಡಿದ ಸಂಭ್ರಮ, ಕುತೂಹಲ ಇತ್ತು. ಮೂವರೂ ಮೊದಲಿಗಿಂತ ದುಂಡು ದುಂಡಗೆ ಕಾಣಿಸುತ್ತಿದ್ದರು. ಅವರ ಡ್ರೆಸ್ ಕೋಡ್ ಲಂಗ, ರವಿಕೆಯಿಂದ ಚೂಡಿಗೆ ವರ್ಗಾವಣೆಯಾಗಿತ್ತು. ಚೆನ್ನಾಗಿ ಕಾಣುತ್ತಿದ್ದರು. ನಮಗೆ ಮಾತ್ರ ಶಾರ್ಟ್ಸ್ ಕಾಲ ಮುಗಿಯಿತೆಂದರೆ ವೈವಿಧ್ಯತೇನೇ ಇರಲಿಲ್ಲ ಆ ಕಾಲದಲ್ಲಿ. ಲಳಗಾಬಳಗಾ ದೊಗಲೇ ಪ್ಯಾಂಟೇ ಗತಿ. ಜಿನ್ಸ್, ಟೀ ಶರ್ಟ್ಸ್ ನಮಗೆ ಆಗಿನ್ನೂ ಲಭ್ಯವಿರಲಿಲ್ಲ. ಹಾಯಂತ ಮೂರೂ ಜನ ಒಮ್ಮಲೇ ಚೀರಿದ್ದರು ಖುಷಿಯಿಂದ. ನಾವು ಹತ್ತು ನಿಮಿಷ ಅವರೊಂದಿಗೆ ಮಾತಾಡಿದೆವು. ನಿಮ್ಮ ಲೌಡ್ ಸ್ಪೀಕರ ಏನ್ ಮಾಡಾಕ್ಹತ್ತೇತಿ, ಎಲ್ಲೈತಿ ಎಂದು ಕೋಮಲ ಕಣ್ಣು ಮಿಟುಕಿಸಿ ನಕ್ಕಿದ್ದಳು. ಅವನ ವಿಷಯ ತಿಳಿದಾಗ, ಗುಡ್, ಅಂತೂ ನಿಮ್ಮ ಫ್ರೆಂಡ್ ನಿಮ್ಮನ್ನ ನೆನಸ್ಕೊಳ್ಳೂವಂತ ಕೆಲ್ಸ ಮಾಡೀದ್ರಿ ಬಿಡ್ರಿ. ನಾವೆಲ್ಲ ಭಾಳ ಖುಷಿ ಪಡ್ತೀವಿ… ಅಂತ ಕೋಮಲ ನಮ್ಮಿಬ್ಬರನ್ನೂ ಹೊಗಳಿದಳು.
ಆ ಕಡೆ ಮುಖ ತೋರಿಸಿದ ಕಾರಣವನ್ನು ವಂದನಾ ಕೇಳಿದಾಗ, ನಾನು ಅವಳನ್ನು ನೇರವಾಗಿ ನೋಡಿದ್ದೆ. ಅವಳೂ ಕಣ್ತುಂಬ ನೋಡಿದ್ದಳು. ಬೇಡ ಬೇಡವೆಂದರೂ ನಾನು ಕಣ್ಣುಗಳಲ್ಲಿಯೇ ಅವಳಿಗೆ ಏನೇನೋ ಹೇಳಿಬಿಟ್ಟಿದ್ದೆ. ನಂತರ ಝಡ್ ಪಿ ಮತ್ತು ನಾನು ಮುಖ ಮುಖ ನೋಡಿಕೊಂಡೆವು. ನಾನೇ ಅವಳಿಗೆ ಉತ್ತರಿಸಿದೆ, ಏಯ್ ಹಿಂಗ್ರೀ, ಈ ಕಡೆ ಆಲೂರ ದವಾಖಾನ್ಯಾಗ ನಮ್ಮ ಕಡೇ ಒಬ್ರನ್ನ ಅಡ್ಮಿಟ್ ಮಾಡಿದ್ರುರೀ, ಮಾತಾಡ್ಸಾಕ ಬಂದಿದ್ವೀ, ನಿಮ್ಮ ನೆನಪಾತು, ಮಾತಾಡ್ಸಿ ಹೋಗ್ಬೇಕಂತs ಬಂದ್ವಿ ಎಂದು ಅಂದು ಬಿಟ್ಟೆ. ನಾನು ಹೇಳಿದ್ದು ಸುಳ್ಳು ಅಂತ ಅವರಿಗೆ ಗೊತ್ತಾಯಿತೇನೋ! ಮೂವರ ಮುಖದಲ್ಲೂ ತುಂಟು ನಗೆ ಸುಳಿದು ನಲಿದಾಡಿತು. ಝಡ್‌ಪಿ ಡೋಮಾರಿ ಬಿದ್ದಿದೆಯೇನೋ ಎಂಬಂತೆ ಕಣ್ಣನ್ನು ಹೊಸಕಿಕೊಂಡ ನನ್ನ ಮಾತು ಕೇಳಿ. ಪರಸ್ಪರ ಕುಶಲೋಪಚಾರದ ಮಾತು ಮುಗಿದು, ಅವರು ನಮಗೆ ಬೈ ಹೇಳಿ ಕ್ಲಾಸ್ ರೂಮ್ ಕಡೆ ನಡೆದರು. ನಾನು ಇಂಗು ತಿಂದ ಮಂಗನಂತಾಗಿದ್ದೆ. ಝಡ್ ಪಿ ನನ್ನ ಕುತ್ತಿಗೆ ಮೇಲೆ ಒಂದು ಗುದ್ದಿ ಹೇಳಿದ್ದ, ಮಗನಾ, ಪ್ಯಾಂಟ್ನ್ಯಾಗ ಕೈ ಇಟ್ಕೊಂಡು ಸುಮ್ಕ ಇದ್ದಿದ್ರ ನಾನಾರ ಹೇಳ್ತಿದ್ದೆ. ನಡುವೇನ ಆಲೂರು ದವಾಖಾನೀ ತಂದಿಟ್ಯಾ, ನಡೀ ಭೇಷ್ ಮಾಡೀದಿ… ಎಂದು. ನಾನು ಪೆದ್ದು ಪೆದ್ದಾಗಿ ನಕ್ಕು ಸುಮ್ಮನಾದೆ.
*****
(ಮುಂದುವರೆಯುವುದು…)
One thought on “ಥ್ರೀರೋಜಸ್ ಕಥೆ (ಭಾಗ 2): ಸಾವಿತ್ರಿ ವಿ. ಹಟ್ಟಿ”