ಇದಾದ ನಂತರ ಮತ್ತೊಮ್ಮೆ ಅವರ ಕಾಲೇಜಿನ ಹತ್ತಿರ ಹೋಗಲು ನಾವು ಸಮಯ ಹೊಂಚುತ್ತಿದ್ದೆವು. ಬನ್ನಿಹಬ್ಬದ ದಿನ ಭೆಟ್ಟಿ ಮಾಡಬೇಕೆಂದುಕೊಂಡರೂ ಸರಿ ಅನ್ನಿಸಲಿಲ್ಲ. ಏಕೆಂದರೆ ಅಂದು ಬಾನುವಾರ. ಝಡ್ ಪಿಯ ಸಲಹೆಯ ಮೇರೆಗೆ ಶನಿವಾರ, ಅವರ ವಿರಾಮದ ಅವಧಿಯಲ್ಲಿ ಅವರನ್ನು ಭೆಟ್ಟಿ ಮಾಡಿದ್ದೆವು. ಪರಸ್ಪರರು ಬನ್ನಿ ಹಂಚಿಕೊಂಡು ಖುಷಿಯಾಗಿ ಹರಟಿದೆವು. ಪಿ.ಯು ದಿನಗಳನ್ನು ಸ್ಮರಿಸಿಕೊಂಡು ನಕ್ಕೆವು. ಮಾತಿನ ಮಧ್ಯೆ ಮದುವೆ ವಿಷಯಕ್ಕೆ ಬಂದಾಗ ವಂದನಾ ಓದು, ನೌಕರಿ ಆದ ನಂತರವೇ ಮದುವೆ ಆಗುವುದಾಗಿಯೂ, ತನ್ನ ತಂದೆ ತಾಯಿಗೂ ಅದೇ ಇಷ್ಟವೆಂದೂ ತಿಳಿಸಿದಾಗ ನನಗೆ ನಿರಾಳವಾಯಿತು. ನಮ್ಮ ಮಾತುಗಳಲ್ಲೇ ಅವರ ವಿರಾಮದ ಅವಧಿ ಮುಗಿದಿತ್ತು. ಕೋಮಲಳಿಗೆ ಮಾತ್ರ ರವೀಂದ್ರನ ವಿಷಯವನ್ನು ಹೇಳಲೇಬೇಕಾಗಿತ್ತು. ಆದರೆ ಏನೂ ಹೇಳಲಾಗದೆ ಮತ್ತೆ ಮಂಗಗಳಂತೆ ವಾಪಸ್ಸಾಗಿದ್ದೆವು.
ನಂತರ ನಾನು ರವೀಂದ್ರನನ್ನು ಕುರಿತು ಬಹಳ ಚಿಂತಿಸತೊಡಗಿದ್ದೆ. ಅವನೆಂದರೆ ನನ್ನ ಪ್ರೀತಿಯ ತಮ್ಮನಂತಾಗಿಬಿಟ್ಟಿದ್ದ. ಬಹುಶಃ ನನಗೊಬ್ಬ ತಮ್ಮ ಇದ್ದಿದ್ದರೂ ರವೀಂದ್ರನಷ್ಟೇ ನನ್ನನ್ನು ಗೌರವಿಸುತ್ತಿದ್ದನೇನೊ. ಆದರೆ ಇಲ್ಲದಿರುವ ತಮ್ಮನ ಸ್ಥಾನವನ್ನು ಈ ಹುಡುಗ ಸುಮ್ಮನೇ ತುಂಬಿಬಿಟ್ಟಿದ್ದನು. ಅವನ ವಿಶಿಷ್ಟ ವ್ಯಕ್ತಿತ್ವವನ್ನು ನಾನು ಗೌರವಿಸುತ್ತಿದ್ದೆ. ಅವನು ಪತ್ರಗಳಲ್ಲಿ ಕೋಮಲ ಹೇಗಿದ್ದಾಳೆ ಎಂದು ಕೇಳಲು ವಾಟ್ ಎಬೌಟ್ ಮಾಯ್ ರೋಸ್ ಅಂತಷ್ಟೆ ಕೇಳುತ್ತಿದ್ದ. ಆ ಒಂದೇ ವಾಕ್ಯದಲ್ಲಿ ಅವನ ಮನಸ್ಸಿನ ತಳಮಳವನ್ನು ನಾನು ಕಂಡುಕೊಳ್ಳುತ್ತಿದ್ದೆ. ನಾನು ಒಂದೆರಡು ಸಲ ಥ್ರೀರೋಸಸ್‌ನ್ನು ಮುಖತಃ ಭೆಟ್ಟಿಯಾಗಿ ಮಾತಾಡಿಸಿದ್ದನ್ನು ತಿಳಿಸಿದಾಗ ರವೀಂದ್ರ ಬಹಳ ಖುಷಿ ಪಟ್ಟಿದ್ದ.
ಝಡ್‌ಪಿ ಹೇಳಿದ ಪ್ರಕಾರ ಎಷ್ಟು ಸಲ ಹೋದರೂ ನಮಗೆ ನೇರವಾಗಿ ಆ ವಿಷಯವನ್ನು ಮಾತಾಡಲು ಆಗುವುದಿಲ್ಲ ಅಂತ ಖರೆ ಎನ್ನಿಸಿತು. ಹಾಗಾಗಿ ನಾನು ರವೀ ಕುರಿತು ವಿವರವಾಗಿ ಒಂದು ಪತ್ರವನ್ನು ಬರೆದೆ. ಮೂರನೇ ಸಲ ಅವರನ್ನು ಭೆಟ್ಟಿ ಮಾಡಿದಾಗ, ಆ ಪತ್ರವನ್ನು ಕೋಮಲೆಗೆ ಕೋಟ್ಟೇ ಬರುವುದೆಂದು ನಿರ್ಧರಿಸಿಕೊಂಡೆವು. ಪತ್ರದ ಒಕ್ಕಣಿ ಸರಿ ಇದೆಯೊ ಇಲ್ಲವೊ ಅಂತ ಇಬ್ಬರೂ ಹತ್ತೆಂಟು ಸಲ ಓದುವಷ್ಟರಲ್ಲಿ ಆ ಪತ್ರ ಮೆತ್ತಗೆ ಆಗಿತ್ತು. ಝಡ್‌ಪಿಗೆ ಅದು ಗರಿ ಗರಿಯಾಗಿಯೇ ಇರಬೇಕೆಂಬ ಹಟ. ಮತ್ತೊಮ್ಮೆ ಒಳ್ಳೆಯ ಕಾಗದವನ್ನು ತೆಗೆದುಕೊಂಡು ನಕಲು ಮಾಡಿದೆ. ಎರಡೂವರೆ ತಿಂಗಳ ನಂತರ ಮತ್ತೆ ಅವರನ್ನು ಭೆಟ್ಟಿ ಮಾಡಲು ಹೊರಟಿದ್ದೆವು. ಯಥಾಪ್ರಕಾರ ಶನಿವಾರವನ್ನೇ ಆಯ್ದುಕೊಂಡು ಅವರ ಪಾಲಿಟೆಕ್ನಿಕ್‌ಗೆ ಹೋಗುವುದೆಂದು ನಿರ್ಧರಿಸಿದೆವು.
ಅಂದು ಬೆಳಿಗ್ಗೇನೇ ರೂಮ್ ಕದದ ಮೇಲೆ ಯಾರೊ ಬಡಿದ ಸದ್ದಾಯಿತು. ಬಾಗಿಲು ತೆರೆದೆ, ಹೊರಗೆ ಝಡ್‌ಪಿ ನಿಂತಿದ್ದ. ಆ ಬೆಳಗಿನ ತಂಪಿನಲ್ಲೂ ಅವನ ಹಣೆಯ ಮೇಲೆ ಬೆವರು ಕಾಣಿಸಿತ್ತು. ಮುಖ ಬಹಳ ಕಳಾಹೀನವಾಗಿ, ಕಣ್ಣುಗಳಲ್ಲಿ ಗಾಬರಿ ಇತ್ತು. ಬಾ ಎಂದು ಅವನು ಕೈ ಹಿಡಿದು ಒಳಗೆ ಕರೆದೆ. ಯಾಕೊ, ಎಷ್ಟು ಸಪ್ಪಗದೀಯಲ್ಲ, ನೋಡೀದ್ರ ಅವಸರ ಮಾಡಿ ಬಂದಂಗೈತಿ ಎಂದೆ. ಅವನು ಚೇರ್‌ನಲ್ಲಿ ಕುಸಿದು ಕುಳಿತು ಕಣ್ಣೊರೆಸಿಕೊಂಡ, ಯಾಕೊ… ನಾನು ಅವನ ತಲೆ ನೋವರಿಸಿ ಕೇಳಿದೆ. ಆಕ್ಸಿಡೆಂಟ್ ಆಗ್ಬಿಟ್ತಂತೊ… ಎನ್ನುತ್ತಿದ್ದಂತೆಯೇ ಯಾರ್‍ಗೋ ಮಾರಾಯ ಎಂದೆ. ನನ್ನ ಕೈಕಾಲು ನಡುಗತೊಡಗಿದ್ದವು. ಕೋಮಲ, ವಂದನಾ ಎಲ್ಲ ಸೇರಿ ದಕ್ಷಿಣ ಕರ್ನಾಟಕಕ್ಕ ನಾಲ್ಕು ದಿವಸದ ಟ್ರಿಪ್‌ಗೆ ಹೋಗಿದ್ರಂತ, ಎರಡ್ನೇ ದಿನಾನ ಇವರಿದ್ದ ಟೆಂಪೊಗೆ ಲಾರಿ ಡಿಕ್ಕಿ ಹೊಡೆದು ಹತ್ತನ್ನೆರಡು ಸ್ಪೂಡೆಂಟ್ಸ್‌ಗೆ ಭಾಳ ಗಾಯ ಆಗ್ಯಾವಂತ. ಮುಂದಿನ ಸೀಟಿನ್ಯಾಗ ವಂದನಾ, ಕೋಮಲ ಕುಂತಿದ್ರಂತ, ವಂದನಾ ಬಲಗಾಲು ಕಟ್ ಆಗೇತಂತ, ಕೋಮಲಾಗ್ ಎರಡೂ ಕಣ್ಗೆ ಪೆಟ್ಟು ಬಿದ್ದೈತಂತ. ನಿರ್ಮಲಾಗೂ ಸ್ವಲ್ಪ ಗಾಯ ಆಗ್ಯಾವಂತ… ಅವನು ಹಾಗೇ ಹೇಳುತ್ತಿದ್ದಂತೆಯೇ ನನ್ನ ಕಣ್ಣುಗಳಿಂದ ನೀರು ಸುರಿಯೊಡಗಿತು. ನಾನು ನಖಶಿಖಾಂತ ನಡುಗತೊಡಗಿದ್ದೆ. ’ಬೊಂಬೆ’ ಎಂದು ಕರೆದು ಕೀಟಲೆ ಮಾಡುತ್ತಿದ್ದೆ ವಂದನಾಳಿಗೆ. ಇನ್ನು ಬೊಂಬೆಗೆ ಒಂದೇ ಕಾಲು ಎಂಬ ಸತ್ಯ ಸಂಗತಿಯು ಎದೆಗೆ ಚೂರಿಯಿಂದ ಇರಿದಂತಾಯಿತು. ಕೋಮಲಳ ಕಣ್ಣಿಗೆ ಏನೂ ತೊಂದರೆಯಾಗದೆ ವಾಸಿಯಾಗಲಿ ಪರಮಾತ್ಮ ಅಂತ ನಾನು ಮೊಟ್ಟ ಮೊದಲ ಸಲ ದೇವರನ್ನು ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೆ.
ಮೂರು ತಿಂಗಳವರೆಗೆ ಏನೂ ಹೇಳಲು ಬರುವುದಿಲ್ಲವೆಂದು ವೈದ್ಯರು ತಿಳಿಸಿದಾಗ ಕೋಮಲಳ ಮನೆಯಲ್ಲಿ ಎಲ್ಲರೂ ರೋಧಿಸಿದ್ದರು. ಕೋಮಲ ಒಡೆದು ಹೋಗಿದ್ದ ಗಾಯದ ಕಣ್ಣುಗಳನ್ನು ಹೊತ್ತು, ಹೃದಯದ ತುಂಬ ವೇದನೆ ತುಂಬಿದ್ದರೂ ಅವತ್ತು ನನಗೇ ಸಮಾಧಾನ ಹೇಳಿದಾಗ ನಾನು ಬಿಕ್ಕಳಿಸಿ ಅತ್ತುಬಿಟ್ಟಿದ್ದೆ. ನಮ್ಮ ಕೈಯ್ಯಾಗ ಏನೈತಿ ಸೂರೀ, ಎಲ್ಲ ದೇವರಾಟ. ಚಿಂತೀ ಯಾಕ ಮಾಡ್ಬೇಕಲ್? ಪರಿಹಾರಕ್ಕ ಬ್ಯಾರೆ ಮಾರ್ಗ ಇದ್ರ ಹುಡುಕಬೇಕು ಅಷ್ಟೆ… ಎಂದು ಅವಳು ನೋವಿನಿಂದ ಸಣ್ಣಗೆ ನರಳಿದಾಗ, ನನ್ನ ಕೂಸ… ಎಂದು ಕೋಮಲಳ ತಾಯಿ ರತ್ನಮ್ಮ ಕಂಬನಿಗರೆಯುತ್ತ ಮಗಳನ್ನು ತಬ್ಬಿ ಹಿಡಿದಿದ್ದನ್ನು ಕಂಡು ಕರುಳು ಚುರುಕ್ ಎಂದಿತ್ತು. ವಂದನಾಳನ್ನು ಕಾಣಲು ಹೋದಾಗ, ಅವಳು ಶೂನ್ಯ ದೃಷ್ಟಿಯಿಂದ ದವಾಖಾನೆಯ ಸೂರು ನೋಡುತ್ತ ಮಲಗಿದ್ದಳು. ಅವಳ ತಂದೆ-ತಾಯಿ, ಅಣ್ಣ ದುಃಖತಪ್ತರಾಗಿ ಕುಳಿತಿದ್ದರು. ಅವಳು ಎದ್ದು ಕೂಡ್ರುವ ಸ್ಥಿತಿಯಲ್ಲಿರಲಿಲ್ಲ. ಜಿಂಕೆ ಮರಿಯಂತೆ ಓಡಾಡುತ್ತಿದ್ದ ವಂದನಾ ಕುಂಟಿಯಾದಳೆ ಎಂದು ಹೃದಯ ಚೀರಿಕೊಂಡಿತ್ತು. ಕಂಬನಿ ತಂತಾನೇ ಇಳಿಯತೊಡಗಿತ್ತು. ವಂದನಾ ಕೇಳಿದಳು, ಸೂರಿ ನಾನು ಪ್ರಾಣಸಹಿತ ಉಳಿದೀನಲ್ಲ. ಆಯುಷ್ಯ ಗಟ್ಟಿ ಐತೆಲ್ಲ. ಕಾಲು ಹೋದ್ರೇನಾತು ಬಿಡು… ಎಂದು ಸ್ವಲ್ಪ ತಡೆದು ಹೋಗೂದಾ ಅಲ್ಲಾ ಈ ಇಡೀ ದೇಹ ಒಂದಿನಾ… ಎಂದು ಅವಳು ಸಣ್ಣಗೆ ನೋವಿನಿಂದಾಗಿ ಮುಲುಗಿ, ಕಾಲು ಮಿಸುಕಾಡಿಸಲು ಪ್ರಯತ್ನಿಸಿ ಸೋತು ಹಾಗೇ ಕಣ್ಣುಮುಚ್ಚಕೊಂಡಳು ವೇದನೆಯಿಂದ. ನನಗೆ ಜೀವನದ ಕುರಿತು ಕಟು ವಾಸ್ತವದ ಅರ್ಥವಾಗತೊಡಗಿತ್ತು. ಝಡ್‌ಪಿ ಬಿಕ್ಕಳಿಸಿ ಚಿಕ್ಕ ಮಗುವಿನಂತೆ ವಂದನಾಳ ಕೈ ಹಿಡಿದು ಅತ್ತುಬಿಟ್ಟ. ಎಲ್ಲರ ಕಣ್ಣುಗಳಲ್ಲಿಯೂ ನೀರೇ! ವಂದನಾಳ ಗುಳಿಬಿದ್ದ ಕಣ್ಣುಗಳಿಂದ ಹರಿದ ಕಣ್ಣೀರು ಕಪಾಳದಿಂದ ಹರಿದು ಕುತ್ತಿಗೆಗೆ ಇಳಿಯತೊಡಗಿತ್ತು.
ಕೋಮಲಳಿಗೆ ಮತ್ತೆಂದೂ ದೃಷ್ಟಿ ಬಾರದು ಎಂದು ತಿಳಿದಾಗ ಆ ದೊಡ್ಡ ಬಂಕದ ಮನೆಯಲ್ಲಿ ಕತ್ತಲೆ ಕವಿದಿತ್ತು. ಮನೆಯಲ್ಲಿ ನಂದಾ ದೀಪಗಳಂತೆ ನಗುತ್ತ ತಮ್ಮ ಕಣ್ಬೆಳಕನ್ನು ಹರವಿ ನಲಿದಾಡುತ್ತಿದ್ದ ಹುಡುಗಿಯರ ಭವಿಷ್ಯ ಹೀಗೆ ತಿರುವುಮರುವಾಗಿತ್ತು. ಅಕ್ಕ ಕೋಮಲೆಗೆ ಮತ್ತೆಂದೂ ದೃಷ್ಟಿ ಬರದು ಎಂದೂ, ಬೇಕಾದರೆ ಕಸಿ ಮಾಡಿದ ಕಣ್ಣುಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊಂದಿಸಬಹುದು ಎಂಬ ಸತ್ಯ ಸಂಗತಿ ತಿಳಿದಾಗ ನಿರ್ಮಲೆ ಹುಚ್ಚಿಯಂತೆ ಅತ್ತುಬಿಟ್ಟಿದ್ದಳು. ಅವಳು ಅನ್ನ ನೀರು ಬಿಟ್ಟು ಹಾಸಿಗೆ ಹಿಡಿದಿದ್ದಳು. ಯಾರು ಎಷ್ಟೇ ಸಮಾಧಾನ ಹೇಳಿದರೂ ಅವಳ ದುಃಖ ಕಡಿಮೆಯಾಗಿರಲಿಲ್ಲ. ಬ್ಯಾರೆ ಕಣ್ಣು ಹಾಕ್ಸಾಕ ಟ್ರೈ ಮಾಡೂದು ಬಿಡು ನಿಮ್ಮಿ, ಅತ್ರ ಬರುತ್ತೇನು ಹೋಗಿದ್ದು? ಎಂದು ಕೋಮಲಳೇ ತಂಗಿಯ ಕೈಹಿಡಿದು ಸಮಾಧಾನ ಹೇಳುತ್ತಿದ್ದಳು. ಅವಳ ಅಣ್ಣಂದಿರ ರಟ್ಟೆಗಳು ಸೋತಂತಾಗಿದ್ದವು. ಕಣ್ಣಲ್ಲಿ ಕಣ್ಣಿಟ್ಟು, ಹೂವಿನಲ್ಲಿಯ ಹರಳಿನಂತೆ ಬೆಳೆಸಿದ್ದ ತಂಗಿಯ ಬಾಳು ಹೀಗಾಯಿತಲ್ಲ ಅಂತ ಅವರು ನೊಂದುಕೊಳ್ಳುತ್ತಿದ್ದರು. ಅವರ ತಂದೆ ಭೀಮಣ್ಣನವರಂತೂ, ನಮ್ಮ ನಸೀಬು ಕೊಟ್ಟಿ ಐತಿ… ಎಂದು ತಲೆ ಹಿಡಿದುಕೊಂಡು ಕುಳಿತು ಬಿಡುತ್ತಿದ್ದರು. ತಾಯಿ ರತ್ನಮ್ಮ, ಮದ್ವೀ ಮಾಡ್ಕೊಂಡು ಸುಖ್ವಾಗಿರಬೇಕಾದ ವಯಸ್ನ್ಯಾಗ ದೇವರು ನನ್ನ ಮಗಳಿಗೆ ಅನ್ಯಾಯ ಮಾಡಿದ ಅಂತ ಹಲುಬುತ್ತಿದ್ದರು.
ಈ ದಿನಗಳಲ್ಲಿಯೇ ರವೀಂದ್ರ ಟಿ.ಸಿ.ಎಚ್ ಎರಡನೇ ವರ್ಷದ ಪರೀಕ್ಷೆಗಳನ್ನು ಮುಗಿಸಿ, ತನ್ನ ಹಳ್ಳಿಗೆ ಹಿಂತಿರುಗಿದ್ದ. ಪರೀಕ್ಷೆಯ ಫಲಿತಾಂಶವನ್ನು ಕಾಯುತ್ತ, ಮುಂದಿನ ತಯಾರಿ ನಡೆಸಿದ್ದ. ಕೋಮಲಳ ಕಣ್ಣುಗಳ ಗಾಯ ವಾಸಿಯಾಗಿದ್ದೂ, ಡಾಕ್ಟರು ಸೂಚಿಸಿದ್ದಂತೆಯೇ ಕಣ್ಣು ಶಾಶ್ವತವಾಗಿ ಹೋಗಿ ಬಿಟ್ಟಿದ್ದವು. ಬೇರೆ ಕಣ್ಣಿನ ವ್ಯವಸ್ಥೆ ಮಾಡಲು ಅವರ ಮನೆಯಲ್ಲಿ ಯೋಚನೆ ನಡೆದಿತ್ತು. ರವೀಂದ್ರ ಎಂಟು ದಿವಸಕ್ಕೊಂದು ಪತ್ರ ಬರೆಯುತ್ತಲೇ ಇದ್ದ. ಅವನು ಬರೆದ ಎಂಟ್ಹತ್ತು ಪತ್ರಗಳಿಗೆ ನಾನು ಉತ್ತರಿಸಿಯೇ ಇರಲಿಲ್ಲ. ಏನೆಂದು ಉತ್ತರಿಸಬೇಕು ಅಂತ ತಲೆ ಕೆಟ್ಟು ಹೋಗಿತ್ತು. ಕೋಮಲ ಕುರುಡಿಯಾದಳು, ವಂದನಾ ಕುಂಟಿಯಾದಳು, ನಿಮ್ಮಿ ಭ್ರಮಾಧೀನಳಾಗಿ ಹಾಸಿಗೆ ಹಿಡಿದಿದ್ದಾಳೆ ಅಂತ ಬರೆಯಲೆ, ಥ್ರೀರೋಸಸ್ ಪಕಳೆಗಳೆಲ್ಲ ಉದುರಿ, ಬಾಡಿಹೋಗಿವೆ ಅಂತ ಬರೆಯಲೇ? ಯಾವ ಕೈಯಿಂದ ಬರೆಯಲಿ, ನನಗ್ಯಾಕೆ ಈ ಶಿಕ್ಷೆ ಅಂತ ನಾನು ಎಷ್ಟೊ ಸಲ ರೂಮ್ ಬಾಗಿಲ ಹಾಕಿಕೊಂಡು ಅತ್ತುಬಿಟ್ಟಿದ್ದೆ. ಅತ್ತಷ್ಟೂ ದುಃಖ ಹೆಚ್ಚಾಗುತ್ತಿತ್ತೇ ಹೊರತು ಕಡಿಮೆಯಾಗಿರಲಿಲ್ಲ.
ಕಳೆದು ಹೋದ ಮಧುರ ಕ್ಷಣಗಳು ಎಲ್ಲಾ ನೀರಮೇಲಿನ ಗುಳ್ಳೆಗಳಂತೆ ಮಾಯವಾಗಿದ್ದವು
ಅದೊಂದು ಬಾನುವಾರ ರವೀಂದ್ರ ಬಂದೇ ಬಿಟ್ಟ. ಬಂದವನೇ ನ್ನ ತೆಕ್ಕೆಗೆ ಬಿದ್ದು ಯಾಕೊ ಏನಾಗೇತಿ ನಿಂಗ, ಎಷ್ಟು ಸೊರಗೀಬಿಟ್ಟೀಯಲ್ಲೊ ಎಂದು ಗಾಬರಿಯಾದ. ಏನೂ ಇಲ್ಲ ಬಿಡೊ, ಆರಾಮದೀನಿ, ನಂಗೇನೂ ಆಗಿಲ್ಲಪಾ, ಭಾಳ ದಿವಸಕ್ಕೊಮ್ಮೆ ನೋಡೀದ್ರ ಹಾಗನ್ಸುತ್ತ ಬಿಡೊ ಎಂದೆ. ಅವನನ್ನು ಕರೆದುಕೊಂಡು ಶಾಂತಿ ಸಾಗರ ಹೊಟೆಲ್‌ನಲ್ಲಿ ಊಟ ಮಾಡಿಸಿದೆ. ನಡೆದ ಸಂಗತಿಯನ್ನು ಹೇಳುವುದು ಹೇಗೆಂದು ದಃಖವಾಗಿಬಿಟ್ಟಿತ್ತು.
ನಾಲ್ಕೇ ನಾಲ್ಕು ತಿಂಗಳುಗಳ ಹಿಂದೆ ಗುಲಾಬಿ ಹೂವುಗಳಂತೆಯೇ ಕಂಗೊಳಿಸುತ್ತಿದ್ದ ಹುಡುಗಿಯರ ಬದುಕಿನಲ್ಲಿ ತೀರಲಾರದ ದುಃಖ ಹರವಿಕೊಂಡಿತ್ತು. ವಂದನಾ ವ್ಹೀಲ್ಡ್ ಚೇರ್‌ನಲ್ಲಿಯೇ ಕುಳಿತಿರುತ್ತಿದ್ದಳು. ಗಾಯ ಸಂಪೂರ್ಣ ಒಣಗಿರಲಿಲ್ಲ. ಬಲಗಾಲು ಮೊಣಕಾಲಿನಿಂದ ಕೆಳಗೆ ಕಟ್ ಆಗಿ ಹೋಗಿತ್ತು. ಎಲ್ಲದಕ್ಕೂ ತಾಯಿಯ ನೆರವು ಬೇಕಾಗಿತ್ತು. ಕೋಮಲ ಕತ್ತಲೆಯ ಬದುಕಿಗೆ ತತ್ತರಿಸಿ ಹೋಗಿದ್ದಳು. ನಾಲ್ಕು ತಿಂಗಳ ಹೊತ್ತಿಗೆ ಅವಳ ಕಣ್ಣುಗಳ ಗಾಯ ಮಾಯ್ದಿದ್ದರೂ, ಕಣ್ಣು ಗುಡ್ಡೆಗಳಾಗಿ ವಿಕಾರವಾಗಿದ್ದವು. ನಿರ್ಮಲ ನಮ್ಮೆಲ್ಲ ಸಲಹೆಯಿಂದ ಚೇತರಿಸಿಕೊಂಡು ತಂದೆ-ತಾಯಿಗೆ ಧೈರ್ಯ ಹೇಳತೊಡಗಿದ್ದಳು. ಕೋಮಲ ಕತ್ತಲೆಯ ಬದುಕಿಗೆ ನೊಂದು, ಒಳಗೊಳಗೇ ತಲ್ಲಣಿಸಿಬಿಡುತ್ತಿದ್ದಳು. ದುಃಖ ತಾಳಲಾಗದೇ ಅದೊಂದು ದಿನ ನನ್ನ ಕೈ ಹಿಡಿದು ಹೇಳಿದ್ದಳು, ಸೂರಿ ನಾನು ಎಷ್ಟು ದಿನಾಂತ ಈ ಕತ್ತಲದಾಗಿರ್‍ಲೀ? ಅಪ್ಪಾಜಿಗೆ ಹೇಳೀದ್ರ ಏನಂತಾರೇನಂತ ಹೆದರಿ ಹೇಳಿಲ್ಲ. ನೀನಾ ಹೇಳು, ನನ್ನ ಪುಟ್ಟಯ್ಯಜ್ಜಾರ ಹತ್ರ ಸಂಗೀತಕ್ಕಾರ ಸೇರಿಸ್ರೀ ಅಂತ. ಇದು ಇಷ್ಟು ದುರ್ಬರ ಅಂತ ನಂಗ ಈಗೀಗ ತಿಳಿಯಾಕ್ಹತ್ತೇತೊ, ನನ್ನ ಮನಸ್ಸಿನ ನೋವಾರ ಕಡಿಮ್ಯಾಗುತ್ತ, ನನ್ನ ಸಂಗೀತ ಕ್ಲಾಸಿಗೆ ಸೇರಿಸಿಬಿಡ್ರಿ… ಎಂದು ಬಿಕ್ಕಳಿಸಿದಾಗ ಎಲ್ಲರ ಕಂಗಳಲ್ಲೂನೀರು ತುಂಬಿತ್ತು. ಅವಳು ಅಲ್ಲಿ ತನ್ನೊಂದಿಗೆ ನಾನು, ಝಡ್‌ಪಿ ಮತ್ತು ನಿಮ್ಮಿ ಮಾತ್ರ ಇರುವುದೆಂದು ತಿಳಿದಿದ್ದಳು. ಆದರೆ ಅಲ್ಲಿ ಅವಳ ಸಣ್ಣ ಅಣ್ಣ ರಾಮು ಮತ್ತು ತಂದೆಯವರೂ ಇದ್ದರು. ರಾಮು ದಡಕ್ಕನೇ ಮೇಲೆದ್ದು, ತಂಗಿಯ ಕೈಗಳೆರಡನ್ನೂ ಹಿಡಿದು ಕಣ್ಣಿಗೊತ್ತಿಕೊಂಡು ಹೇಳಿದ್ದ, ಅವ್ವೀ ಸಂಗೀತಕ್ಕ ಇವತ್ತ ವ್ಯವಸ್ಥೆ ಮಾಡ್ತೀನಿ. ಅಳಬ್ಯಾಡ. ಕಣ್ಣೂ ಬರ್ತಾವು ಚಿಂತೀ ಮಾಡಬ್ಯಾಡ ಎಂದು ತಂಗಿಯ ತಲೆ ನೇವರಿಸಿದ್ದ. ಮಾರನೇ ದಿನದಿಂದಲೇ ಕೋಮಲೆಗೆ ಮಠದ ಒಬ್ಬ ಶಿಷ್ಯರಾದ ಬಸವರಾಜಯ್ಯನವರಿಂದ ಸಂಗೀತ ಪಾಠಗಳನ್ನು ಮನೆಯಲ್ಲಿಯೇ ಹೇಳಿಸುವುದಕ್ಕೆ ಸಿದ್ಧೇಶ ಏರ್ಪಾಡು ಮಾಡಿದ್ದ. ಏನೇ ಮಾಡಿದರೂ ಅವರೆಲ್ಲ ಬಹಳ ಚಿಂತೆಯಲ್ಲಿ ಮುಳುಗಿದ್ದಂತೂ ಸತ್ಯವಾಗಿತ್ತು.
ಇದನ್ನೆಲ್ಲ ಕೇಳಿದಾಗ ರವೀಂದ್ರ ಮರಗಟ್ಟಿ ಹೋಗಿದ್ದ. ನಾನು ರವೀ ಎಂದು ಸ್ವಲ್ಪ ಜೋರಾಗಿಯೇ ಕೂಗಿದಾಗ ಅವನು ವಾಸ್ತವಕ್ಕೆ ಬಂದು, ನನ್ನ ಕೈ ಹಿಡಿದುಕೊಂಡು ಹೇಳಿದ, ವಿಧಿ ಬರಹ ಸೂರಿ. ನಮ್ಮ ಕೈಯ್ಯಾಗ ಏನೂ ಇಲ್ಲಲ್ಲ. ಹ್ಯಾಂಗ ಬರುತ್ತ ಹಂಗ ಸ್ವೀಕರಿಸೋದು ಈ ಜೀವನಾನ್ನ. ನಾನು ಕೋಮಲನ್ನ ನೋಡ್ಬೇಕು ಎಂದು ನಿಟ್ಟುಸಿರಿಟ್ಟು , ನನ್ನ ಉತ್ತರಕ್ಕೂ ಕಾಯದೇ ಮೇಲೆದ್ದ. ನಾನು ಅವನನ್ನು ಕುಳಿತುಕೊಳ್ಳುವಂತೆ ಸೂಚಿಸಿ, ಕೋಮಲ ಈಗಿರುವ ಅವರ ಗದುಗಿನ ಮನೆಯ ವಿಳಾಸದ ಚೀಟಿಯನ್ನು ಅವನಿಗೆ ಕೊಟ್ಟೆ. ರವೀಂದ್ರ ನನ್ನ ಕೈಯನ್ನು ಸ್ನೇಹದಿಂದ ಅದುಮಿ, ಬರ್ತೀನಿ ಎಂದು ಹೊರ ನಡೆದ. ನಾನು ಎಲ್ಲದಕ್ಕೂ ಸಾಕ್ಷಿಯಾಗಿ, ’ಥ್ರೀರೋಸಸ್ ಮತ್ತೆ ಹಾಗೇ ನಳನಳಿಸಲಿ ಭಗವಂತ ಅಂತ ಪ್ರಾರ್ಥಿಸುತ್ತ ವಂದನಾಳ ಮನೆಯ ಕಡೆ ಮುಖ ಮಾಡಿ ನಡೆಯತೊಡಗಿದೆ.
ಇಷ್ಟೆಲ್ಲವನ್ನೂ ನೆನಪು ಮಾಡಿಕೊಳ್ಳುತ್ತಿರುವುದರ ಕಾರಣವೆಂದರೆ, ನಾಳೆ ಶ್ರೀಮತಿ ಕೋಮಲ ರವೀಂದ್ರರ ಅಮೋಘ ಸಂಗೀತ ಕಛೇರಿ ಇದೆ. ನಾನು ನನ್ನ ಬೊಂಬೆ ವಂದನೆ ಜೊತೆಗೆ ಆ ಸಂಗೀತ ಸುಧೆಯನ್ನು ಕಾಣಲು ಹೋಗುತ್ತಿದ್ದೇನೆ.
*****