ಬರೆಯದ ಪ್ರೇಮದ
ಕವಿತೆ ಹಾಡಾಯಿತು…
ಎದೆಯಲಿ ನೆನಪಿನ
ನೋವು ಸುಖ ತಂದಿತು…..
ಪಂಕಜ್ ಉಧಾಸ್ ಮತ್ತು ಕವಿತಾ ಕೃಷ್ಣಮೂರ್ತಿ ಹಾಡುತ್ತಿದ್ದರು. ನಾನು ಖಾಲಿ ಕೂತ ಸಮಯದಲ್ಲಿ ಹಾಡು ಕೇಳುವುದು ಬಿಟ್ಟರೆ ಯಾವುದಾದರೂ ಪುಸ್ತಕ ನೆನಪಾಗಿ ಹುಡುಕುತ್ತೇನೆ. ಇವತ್ತು ಪುಸ್ತಕ ತಡಕಾಡಲು ಮನಸಾಗಲಿಲ್ಲ… ಹಾಡಿನ ಗುನುಗು ನಾಲಗೆಗೆ ನೆನಪಾಗಿದ್ದೇ ತಡ ಕೇಳುತ್ತಾ ಕುಳಿತೆ. ನಾನು ಡಿಪ್ಲೋಮಾ ಓದುವ ಕಾಲದಲ್ಲೂ ಏನೋ ಗೊತ್ತಿಲ್ಲ. ನನ್ನ ರೂಮೇಟ್ ನಾಗರಾಜ್ (ಡಿಂಗ್ರಿ) ಒಂದು ವಾಕ್ಮನ್ ತಂದಿದ್ದ. ಒಂದಿಷ್ಟು ಕೆಸೆಟ್ ಗಳಿದ್ದವು. ಅದೆಂಥ ಅಡಿಕ್ಷನ್ ಬಿದ್ದಿತ್ತೆಂದರೆ, ಕೈಲಿ ಪುಸ್ತಕ ಹಿಡಿದು ಓದಲು ಕುಳಿತರೆ ಕಿವಿಯಲ್ಲಿ ಹೆಡ್ ಫೋನ್ ಇರಲೇಬೇಕು, ಮತ್ತು ಇಷ್ಟದ ಹಾಡು ಕೇಳುತ್ತಲೇ ಓದುತ್ತಿದ್ದೆ. ಅದೇನು ತಲೆಗೆ ಹತ್ತುತ್ತದೆ ಓದು ಹೀಗೆ ಓದಿದರೆ?! ಅನ್ನಬಹುದು. ಆದರೆ ನಿಜ, ಕನಿಷ್ಟ ಪಕ್ಷ ನಾಲ್ಕೈದು ತಿಂಗಳು ಇದೇ ಆಗಿತ್ತು. ಆ ವಾಕ್ಮನ್ ಕೆಟ್ಟಿತೋ ಅಥವಾ ಯಾರೋ ವಾಪಾಸ್ ತೆಗೆದುಕೊಂಡು ಹೋದರೋ ನೆನಪಾಗುತ್ತಿಲ್ಲ.
ಅದೆಲ್ಲವೂ ಶುರುವಾಗಿದ್ದು ನಾನು ಹಗರಿಬೊಮ್ಮನಹಳ್ಳಿಯಲ್ಲಿದ್ದಾಗಲೇ. ನಮ್ಮ ಮನೆ ಎದುರಿಗೆ ಬಸವೇಶ್ವರ ದೇವಸ್ಥಾನ, ಅದರ ಪಕ್ಕದಲ್ಲೇ ಆಡಿಟರ್ ಆಫೀಸ್ ನಲ್ಲಿ ಕೆಲಸ ಮಾಡುತಿದ್ದ ಸೂರಿ ಮನೆ. ಮಾರ್ಕೆಟ್ಟಲ್ಲಿ ಬಿಡುಗಡೆಯಾದ ಹೊಸ ಹಿಂದಿ ಕನ್ನಡ ಹಾಡುಗಳ ಕೆಸೆಟ್ಗಳೆಲ್ಲವೂ ಮನೆಯಲ್ಲಿರಲೇಬೇಕು. ದೊಡ್ಡ ಸ್ಪೀಕರ್ ಗಳು, ಟೇಪ್ ರೆಕಾರ್ಡರ್ ಹುಚ್ಚು ಅವನಿಗೆ. ಸಂಜೆ, ಬೆಳಿಗ್ಗೆ ಕನಿಷ್ಟ ಒಂದೆರಡು ಕೆಸೆಟ್ ಹಾಡು ಕೇಳದೇ ನಾನೂ ಇರುತ್ತಿದ್ದಿಲ್ಲ..
ಅದಲ್ಲ ವಿಷಯ ಈಗ ನಾನು ಹೇಳುತ್ತಿದ್ದುದ್ದು. ಅಂಥ ಹಾಡುಗಳನ್ನು ಕೇಳಿ ಕೇಳಿಯೇ ಸಂಗೀತದ ಹುಚ್ಚು ಹತ್ತಿತೋ ಅಥವಾ ಲವ್ ಮಾಡುವವರನ್ನು ನೋಡಿಯೇ ಅಂಥ ಹಾಡುಗಳನ್ನು ಹುಟ್ಟು ಹಾಕಿದ್ದರೋ ಎನ್ನುವಷ್ಟು ಅಟ್ಯಾಚ್ಮೆಂಟ್…. ಅದೂ ಡಿಪ್ಲೋಮಾ ಓದಿನ ಕೊನೆಯ ವರ್ಷದಲ್ಲಿ ಹೆಚ್ಚಾಯಿತು.
ಹೇಳಿ ಕೇಳಿ ಹಾಸ್ಟೆಲ್ ನಲ್ಲಿರುವ ಹುಡುಗರು ನಾವು. ಬಿಂದಾಸ್ ಆಗಿ ಕೇಕೆ ಹಾಕುವುದೋ,ಹಾಡುವುದೋ ಮಾಡಲು ಯಾರದೂ ಹೆದರಿಕೆ ಇಲ್ಲ.. ತಿಂಗಳ ಕೊನೆಗೆ ಬರುವ ಮೆಸ್ ಬಿಲ್ ಕಟ್ಟಲು ದುಡ್ಡನ್ನು ಮನಿ ಆರ್ಡರ್ ಮೂಲಕ ತರುವ ಪೋಸ್ಟ್ ಮನ್ ನನ್ನು ಕಾಯುವುದೇ ಆಗುತ್ತಿತ್ತು…. ಮೆಸ್ ಬಿಲ್ ಕಟ್ಟಿ ಇನ್ನಷ್ಟು ಉಳಿಯುತ್ತದೆನ್ನುವ ಲೆಕ್ಕಚಾರ. ಬರುತ್ತಿದ್ದ ಮೆಸ್‌ಬಿಲ್ಲಾದರೂ ಎಷ್ಟು? ಮೂನ್ನೂರೆಂದರೆ ಹೆಚ್ಚು.
ಒಮ್ಮೊಮ್ಮೆ ಕಾಲೇಜ್ ಕಾರಿಡಾರಲ್ಲೇ ಸಿಗುವ ಪೋಸ್ಟ್ ಮನ್ ನಿಂದ ಎಮ್.ಓ.ಪಡೆಯುತ್ತಿದ್ದೆವು. ಅದೊಮ್ಮೆ ಕ್ಲಾಸ್ ನಲ್ಲಿ ಪಾಠ ನಡೆಯುತ್ತಿದೆ. ಪೋಸ್ಟ್ ಮನ್ ರೂಮಿನ ಬಾಗಿಲೆಗೆ ಬಂದು ನಿಂತ. ಎಮ್.ಓ. ಬರುವುದನ್ನೇ ಕಾಯುತ್ತಿದ್ದ ಇಡೀ ಕ್ಲಾಸಿನಲ್ಲಿದ್ದ ಎಂಕ ನೋಣ, ಸೀನ ಮತ್ತೊಬ್ಬ ರಾದ ನಾನು, ಸುಬ್ಬ, ಮಾಜಿ ಕಣ್ಣು ಬಿಟ್ಟೆವು; ದುಡ್ಡು ಬಂತಾ!!!!
ಆದರೆ ಅವನು ಕರೆದದ್ದು ಒಬ್ಬ ಹುಡುಗಿಯ ಹೆಸರನ್ನು. ಅವಳಿಗೆ ರಿಜಿಸ್ಟರ್ಡ್ ಪೋಸ್ಟ್ ಬಂದಿತ್ತು. ಅವಳು ಸಹಿ ಮಾಡಿ ಪಡೆದು ಡೆಸ್ಕಲ್ಲಿ ಕೂತಳು. ಅವಳು ಲೋಕಲ್ ಹುಡುಗಿ. ಆ ಹೊತ್ತಿಗೆ ಎಲ್ಲವೂ ಸಾಮಾನ್ಯ. ಆ ಕ್ಲಾಸ್ ಮುಗಿದ ನಂತರದಲ್ಲಿ ಆ ಹುಡುಗಿಯ ಗೆಳತಿಯರು ಅಕ್ಕಪಕ್ಕದವರು ಎಲ್ಲರೂ ನನ್ನನ್ನೇ ದುರುಗುಟ್ಟಿ ನೋಡುವುದು, ಗುಸುಗುಸು ಮಾತಾಡುವುದು ಶುರುವಿಟ್ಟುಕೊಂಡರು… ನನಗೆ ಇದ್ಯಾವುದರ ಅರಿವೇ ಇಲ್ಲ.
ಕಡೆಗೊಮ್ಮೆ ಒಬ್ಬಳು ನಾನೊಬ್ಬನಿದ್ದಾಗ ಬಂದು ಹೇಳಿದ ಮೇಲೇಯೇ ಗೊತ್ತಾಗಿದ್ದು. ಆ ಹುಡುಗಿಗೆ ಆ ದಿನ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಬಂದಿದ್ದು ಲವ್ ಲೆಟರ್. ಮತ್ತದರಲ್ಲಿ ಬರೆದವರ ಸಹಿ ಇದ್ದದ್ದು ನನ್ನ ಹೆಸರಲ್ಲಿ…..!
ಈಗನ್ನಿಸುತ್ತದೆ, ನನ್ನ ಮೇಲೆ ಈಗೆಷ್ಟು ಮೂಗರ್ಜಿಗಳನ್ನು ಬರೆದು ತಮ್ಮ ತೆವಲುಗಳನ್ನು ಹೊರಹಾಕಿದ್ದರೋ ನನ್ನ ಓದಿನ ದಿನಗಳಲ್ಲೇ ಅದರ ಸಂತತಿ ಇತ್ತಲ್ವ ಎಂದು.. ನನ್ನ ಹೆಸರಲ್ಲಿ ನಮ್ಮದೇ ಜೊತೆಗಿರುವ ಒಂದು ಗುಂಪಿನ ಹುಡುಗರು ಮಾಡಿದ ಹರಕತ್ತಾಗಿತ್ತು ಅದು…. ಬಿಡಿ, ಆ ಪತ್ರವನ್ನೊಮ್ಮೆ ನಾನು ನೋಡಿದ್ದರೆ ಚೆನ್ನಾಗಿತ್ತು. ಎಷ್ಟು ಕೇಳಿದರೂ ತೋರಿಸಲಿಲ್ಲ ಅವಳು. ಯಾಕೆಂದ್ರೆ, ನಾನು ಬರೆಯುವ ಕನ್ನಡದಲ್ಲಿ ವ್ಯಾಕರಣ ದೋಷವಿಲ್ಲದಿರಬಹದು… ಆದರೆ, ಮುತ್ತು ಪೊಣಿಸುವಂತೆ ದುಂಡಕ್ಷರಗಳು ನನ್ನಿಂದ ಸಾಧ್ಯವೇ ಇದ್ದಿಲ್ಲ…ಅದನ್ನು ಮನವರಿಕೆ ಮಾಡಿದ ಮೇಲೇಯೆ ಆ ಹುಡುಗಿ ಕನ್ವಿನ್ಸ್ ಆಗಿದ್ದಳು…ಅದನ್ನು ನಾನು ಬರೆದಿಲ್ಲವೆಂದು.
ಅಲ್ಲಿವರೆಗೂ ಈ ಲವ್ವು ಅನ್ನೋ ಮ್ಯಾಟರ್ರೇ ತಲೇಲಿದ್ದಿಲ್ಲ. ನೋಡ ನೋಡುತ್ತಾ, ದಿನ ಕಳೆಯುತ್ತಾ, ಆ ಹುಡುಗಿ ಒಳ್ಳೆಯ ಗೆಳತಿಯಾದಳು. ಅಷ್ಟೇ ಅಲ್ಲ, ಕಾಲೇಜ್ ದಿನಗಳ ಕೊನೆ ಹೊತ್ತಿಗೆ ಪ್ರಪೋಸ್ ಮಾಡಿದ್ದೆ. ಐದು ವರ್ಷ ಕಾದಿದ್ದೇ ಆದರೆ ದುಡಿಮೆಯಲ್ಲಿ ಮದುವೆಯನ್ನೂ ಆಗುತ್ತೇನೆಂದು ಸಹ ಕೇಳಿದೆ… ಎಲ್ಲಾ ಸರಿ ಎಲ್ಲಾ ಸರಿ… ಮುಂದೆ ಮದುವೆ ಹಳೀಗೆ ಲವ್ವು ಹತ್ತಲಿಲ್ಲ. ಮುಂದೆ ಅವಳೆಲ್ಲೋ ನಾನಿನ್ನೆಲ್ಲೋ… ಒಟ್ಟಿನಲ್ಲಿ ಇಬ್ಬರದೂ ಬದುಕು ಈಗ ಹಸನು…..
ಅದಾಗಿ ಬೇರೆಯವರಿಗೆ ಸುಮಾರು ಲವ್ ಲೆಟರ್ ಗಳನ್ನು ನಾನು ಬರೆದುಕೊಟ್ಟಿದ್ದೇನೆ… ಒಂದು ಜೋಡಿಯದಂತೂ ಜನುಮದ ಜೋಡಿ ಸಿನಿಮಾದ ಗುಂಗಲ್ಲಿ ಇನ್ನೇನು ಮದುವೆ ಆಗೇ ಬಿಟ್ಟಿತ್ತು ಎನ್ನುವ ಹಂತಕ್ಕೆ ಬಂದು ಕಳಚಿಕೊಂಡದ್ದನ್ನೂ ನೋಡಿದ್ದೇನೆ.
ತಿಂಗಳುಗಟ್ಟಲೇ ಹುಡುಗರು ಹುಡುಗಿ ಹಿಂದೆ ತಿರುಗಿ, ಕಾಡಿ ಬೇಡಿ ಇಂಪ್ರೆಸ್ ಮಾಡಲು ಏನೇನೋ ಕಸರತ್ತು ಮಾಡುವುದು ನಂತರ ಪ್ರಪೋಸ್ ಮಾಡಿ ಒಪ್ಪಿದಳೋ ಒಂದು ದಾರಿ, ಇಲ್ಲದಿದ್ದರೆ ಇನ್ನೊಂದು ಅಡ್ಡದಾರಿ ಹಿಡಿಯುವ ದಿನಗಳು ಆಗೂ ಇದ್ದವು…. ಈಗಲೂ ಇವೆ.. ಆದರೆ, ಯಾರೋ ನನ್ನ ಮೇಲಿನ ಸಿಟ್ಟಿಗೆ, ನನ್ನ ಹೆಸರಲ್ಲಿ ಬರೆದ ಪ್ರೇಮ ಪತ್ರವೊಂದು ನಾನು ಅನಾಯಾಸವಾಗಿ ನಗುತ್ತಲೇ ಪ್ರಪೋಸ್ ಮಾಡಲು ಕಾರಣವಾಗಿದ್ದು ಮಾತ್ರ ಕುತೂಹಲ…. ನಾನು ಪ್ರಪೋಸ್ ಮಾಡಿದ ದಿನ ಮಾತ್ರ ಪ್ರೇಮಿಗಳ ದಿನವಾಗಿರಲಿಲ್ಲ.
ಮತ್ತೆ ಮತ್ತೆ ಅಡಿಗರ ಪದ್ಯದ ಸಾಲು “ಯಾರ ಲೀಲೆಗೋ ಯಾರೋ ಏನೋ ಗುರಿಯಿರದೇ ಬಿಟ್ಟ ಬಾಣ” ಬಿ..ಆರ್. ಛಾಯಾ ಅವರ ದನಿಯಲ್ಲಿ ಕೇಳುತ್ತಿದ್ದರೆ ಈ ಬದುಕೂ ಬಾಣವೇ, ಬಿಟ್ಟ ದೇವರು ಮಾತ್ರ ಯಾರೋ ಅಲ್ಲ ಅನ್ನಿಸಿಬಿಡುತ್ತದೆ….
–ಅಮರದೀಪ್. ಪಿ.ಎಸ್.