ನನ್ನ ಅಚ್ಚುಮೆಚ್ಚಿನ “ಡಾರ್ಕ್ ಕಾಮಿಡಿ” ಚಿತ್ರಗಳಲ್ಲಿ ಒಂದು “ಥ್ಯಾಂಕ್ಯೂ ಫಾರ್ ಸ್ಮೋಕಿಂಗ್”. 2005ರಲ್ಲಿ ಬಂದ ಜೇಸನ್ ರೀಟ್ಮನ್ ನಿರ್ದೇಶನ ಈ ಚಿತ್ರದ ಕಥಾವಸ್ತು ಹೆಸರೇ ಸೂಚಿಸುವಂತೆ ಧೂಮಪಾನದ ಬಗ್ಗೆ. ಧೂಮಪಾನದ ವ್ಯಸನ, ಅದರಿಂದ ಆಗೋ ದುಷ್ಪರಿಣಾಮಗಳ ಬಗ್ಗೆ ಎಲ್ಲರಿಗೂ ಗೊತ್ತಿರುವಂಥದ್ದೇ. ಆದ್ದರಿಂದ ಈ ವಿಷಯದ ಬಗ್ಗೆ ಚಿತ್ರ ಮಾಡುವುದು ಸ್ವಲ್ಪ ರಿಸ್ಕಿ. ಆದರೆ ಎಲ್ಲೂ ಸಿಲ್ಲಿ ಅನಿಸದೆ, ನಮ್ಮನ್ನು ಚಿಂತನೆಗೆ ಹಚ್ಚುವ ಚಿತ್ರ ಇದು!
ಚಿತ್ರದ ನಾಯಕ ನಿಕ್ ನೇಲರ್ ತಂಬಾಕು ಕಂಪೆನಿಗಳ ಪರವಾದ ವಕ್ತಾರ. ತಂಬಾಕು ಕಂಪೆನಿಗಳು ತಮ್ಮ ಇಮೇಜ್ ಅನ್ನು ಕಾಪಾಡಿಕೊಳ್ಳಲು ಹುಟ್ಟುಹಾಕಿದ “ರಿಸರ್ಚ್ ಸಂಸ್ಥೆ” ಪರವಾಗಿ ಇವನು ಮಾಧ್ಯಮಗಳಲ್ಲಿ ಮಾತಾಡುವವನು. ತಂಬಾಕು ಕಂಪೆನಿಗಳನ್ನು ಸಮರ್ಥಿಸಿಕೊಂಡು ಮಾತಾಡುವ ಈತನ ಕೆಲಸ ಎಲ್ಲರೂ ದ್ವೇಷಿಸುವಂಥದ್ದು. ಅವನ ಬಳಿ ದೊಡ್ಡ ದೊಡ್ಡ ಡಿಗ್ರೀಗಳಿಲ್ಲ, ಅವನ ಬಂಡವಾಳ ಏನಿದ್ದರೂ ಅವನ ಮಾತು. ಏನೇ ವಿಷಯವಿದ್ದರೂ “ಚರ್ಚೆ” ಹೇಗೆ ಮಾಡುವುದು ಮತ್ತು ಜನರನ್ನು ಹೇಗೆ ಕನ್ವಿನ್ಸ್ ಮಾಡುವುದು ಅಂತ ತಿಳಿದುಕೊಂಡಿರುವುದರಲ್ಲಿ ಅವನು ಎತ್ತಿದ ಕೈ! ಅವನ ಹನ್ನೆರಡು ವರ್ಷದ ಮಗ ಅವನ ವಿಚ್ಛೇದಿತ ಹೆಂಡತಿಯೊಂದಿಗೆ ವಾಸಿಸುತ್ತಿದ್ದಾನೆ. ವಾರಕ್ಕೊಮ್ಮೆ ಮಗನ ಜೊತೆ ಸಮಯ ಕಳೆಯಲು ಸಾಧ್ಯವಿರುವ ನಿಕ್ ಗೆ ತನ್ನ ಮಗನ ಕಣ್ಣುಗಳಲ್ಲಿ ತಾನೊಬ್ಬ ರೋಲ್ ಮಾಡೆಲ್ ಆಗಬೇಕೆನ್ನುವ ತುಡಿತ ಇದೆ. ತನ್ನ ಕೆಲಸ ಮತ್ತು ಮಗನೊಂದಿಗಿನ ಸಂಬಂಧವನ್ನು ತೂಗಿಸಿಕೊಂಡು ಹೋಗುವುದಕ್ಕೆ ಅವನು ಪಡುವ ಸಾಹಸಗಳೇ ಚಿತ್ರದ ತಿರುಳು.
ಚಿತ್ರದಲ್ಲಿ ಮಜಾ ಕೊಡುವ ತುಂಬಾ ದೃಶ್ಯಗಳಿವೆ. ಒಂದು ಟಿವಿ ಟಾಕ್ ಶೋನಲ್ಲಿ ಸಿಗರೆಟ್ ವಿರುದ್ಧ ಕೆಲಸ ಮಾಡುವ ಸಂಸ್ಥೆಯ ಜನರು, ಒಬ್ಬ ಕ್ಯಾನ್ಸರ್ ಪೇಷಂಟ್ ಇವರುಗಳ ಜೊತೆ ನಿಕ್ ಅನ್ನು ಆಹ್ವಾನಿಸಿರುತ್ತಾರೆ. ಸಿಗರೆಟ್ ಇಂದ ಈ ಹುಡುಗನಿಗೆ ಚಿಕ್ಕ ವಯಸ್ಸಿಗೆ ಕ್ಯಾನ್ಸರ್ ಬಂದಿದೆ ಅಂದಾಗ, ನಿಕ್ ಜಾಣ್ಮೆಯಿಂದ “ಈ ಹುಡುಗನಿಗೆ ಕ್ಯಾನ್ಸರ್ ಬಂದರೆ ನಾವು ಒಬ್ಬ ಕಸ್ಟಮರ್ ಕಳೆದುಕೊಂಡಂತೆ ಆಗುವುದಿಲ್ಲವೇ? ನಮ್ಮ ರಿಸರ್ಚ್ ಸಂಸ್ಥೆಯ ಪ್ರಕಾರ ಸಿಗರೆಟ್ ಕ್ಯಾನ್ಸರ್ ಉಂಟುಮಾಡುತ್ತದೆ ಅಂತ ಯಾವ ಪುರಾವೆಯೂ ಸಿಕ್ಕಿಲ್ಲ. ಇಂತಹ ಹುಡುಗರು ಸತ್ತರೆ ಉಪಯೋಗವಾಗುವುದು ನಮ್ಮನ್ನು ವಿರೋಧಿಸುತ್ತಿರುವ ಜನರಿಗೆ ಮಾತ್ರ” ಅಂತ ಹೇಳಿ ಎಲ್ಲರನ್ನೂ ತಬ್ಬಿಬ್ಬು ಮಾಡಿಬಿಡುತ್ತಾನೆ.
ನಿಕ್ ತನ್ನ ಮಗನ ಶಾಲೆಗೆ ಪೇರೆಂಟ್ಸ್-ಟೀಚರ್ಸ್ ಮೀಟ್ ಗೆ ಹೋದಾಗ, ಅಲ್ಲಿನ ಮಕ್ಕಳನ್ನು ಉದ್ದೇಶಿಸಿ ಮಾತಾಡುವ ಅವಕಾಶ ಸಿಗುತ್ತದೆ. ತಾನೊಬ್ಬ ಲಾಬಿಯಿಸ್ಟ್ ಅಂದಾಗ, ಹಾಗಂದ್ರೆ ಏನು ಅಂತ ಮಕ್ಕಳು ಕುತೂಹಲದಿಂದ ಕೇಳುತ್ತಾರೆ. ನಿಕ್ ತನ್ನ ಕೆಲಸ “ಮಾತನಾಡುವುದು”, ಸಿಗರೆಟ್ ಕಂಪೆನಿಗಳ ಪರವಾಗಿ ಅಂದಾಗ, ಒಂದು ಮಗು “ಸಿಗರೆಟ್ ಇಂದ ಸಾವು ಸಂಭವಿಸುತ್ತದೆ ಅಂತ ನನ್ನಮ್ಮ ಹೇಳಿದ್ದಾಳೆ” ಅನ್ನುತ್ತಾಳೆ. ಆಗ ನಿಕ್ “ನಿಮ್ಮ ಅಮ್ಮ ಡಾಕ್ಟರಾ? ರಿಸರ್ಚ್ ಸೈಯಿಂಟಿಸ್ಟಾ? ಅವಳು ಈ ವಿಷಯದ ಮೇಲೆ ಮಾತನಾಡಲು ಹೇಗೆ ಎಕ್ಸ್ಪರ್ಟ್ ಆದಳು?” ಅಂದಾಗ ಆ ಕ್ಲಾಸಿನ ಟೀಚರ್ ದಂಗು! ನಿಕ್ ಮುಂದುವರಿದು “ನಾನು ಸಿಗರೆಟ್ ಕೆಟ್ಟದ್ದಲ್ಲ ಅಂತ ಹೇಳುತ್ತಿಲ್ಲ, ಆದರೆ ನಿಮಗೆ ಯಾರೇ ಏನೇ ಹೇಳಿದರೂ ಅದನ್ನು ಪ್ರಶ್ನಿಸಿ ಪರಾಮರ್ಶಿಸುವ ಗುಣ ಬೆಳೆಸಿಕೊಳ್ಳಬೇಕು. ನಿಮ್ಮಮ್ಮ ಚಾಕಲೇಟ್ ಇಂದ ಸಾವು ಸಂಭವಿಸುತ್ತದೆ ಅಂದರೆ ನಂಬುತ್ತೀರಾ?” ಅಂದಾಗ ಮಕ್ಕಳೆಲ್ಲಾ ಜೋರಾಗಿ ನಗುತ್ತಾರೆ. ಹೀಗೆ ಚರ್ಚೆಯನ್ನು ನಿಕ್ ಚಾಕಚಕ್ಯತೆಯಿಂದ ಇನ್ನೆಲ್ಲಿಗೋ ತೆಗೆದುಕೊಂಡು ಹೋಗುತ್ತಾನೆ!
ನಿಕ್ ಗೆ ಇಬ್ಬರು ಸ್ನೇಹಿತರು. ಒಬ್ಬಳು ಮದ್ಯದ ಕಂಪೆನಿಗಳ ಪರವಾಗಿ ಮಾತನಾಡುವವಳು, ಇನ್ನೊಬ್ಬ ಗನ್ ಕಂಪೆನಿಗಳ ವಕ್ತಾರ. ಮೂವರೂ ವಾರಕ್ಕೊಮ್ಮೆ ಡಿನ್ನರಿಗೆ ಸಿಕ್ಕು, ತಮ್ಮ ತಮ್ಮ ಕೆಲಸದ ಬಗ್ಗೆ, ಅದರ ಕಷ್ಟಗಳು, ತಮ್ಮ ವಿರೋಧಿಗಳ ತಂತ್ರಗಳು, ಅದನ್ನು ಎದುರಿಸುವ ಬಗೆಗಳು ಇವೆಲ್ಲವನ್ನೂ ಚರ್ಚಿಸುತ್ತಾರೆ. ತಮ್ಮ ಕೆಲಸ ಹೇಗೆ ಇನ್ನೊಬ್ಬರ ಕೆಲಸಕ್ಕಿಂತ ಹೆಚ್ಚು ಮುಖ್ಯ ಮತ್ತು ಚಾಲೆಂಜಿಂಗ್ ಅಂತ ಕೊಚ್ಚಿಕೊಳ್ಳುವ ಸಂಭಾಷಣೆಗಳು ನಿಜಕ್ಕೂ ನಗು ಬರಿಸುತ್ತವೆ.
ಹೊರನೋಟಕ್ಕೆ ಕಾಣುವ “ಸಿಗರೇಟಿನ ಪರವಾದ ವಾದ” ಅನ್ನುವುದನ್ನು ಪಕ್ಕಕ್ಕಿಟ್ಟು ನೋಡಿದರೆ ಕಾಣುವುದು ನಿಮ್ಮ ಸ್ವಂತ ಬುದ್ಧಿ ಉಪಯೋಗಿಸಿ ಮತ್ತು ಜನರಿಗೆ ತಮ್ಮ ಆಯ್ಕೆ ಮಾಡುವ ಸ್ವಾತಂತ್ರ್ಯ ಕೊಡಿ ಅನ್ನುವ ವಾದ. ಆದರೆ ನೀವು ಪ್ರತಿಯೊಂದನ್ನೂ ಅಕ್ಷರಶಃ ಅರ್ಥ ಮಾಡಿಕೊಳ್ಳುತ್ತೀರ, ಕೆಳಗಿರುವ ಸಬ್ ಟೆಕ್ಸ್ಟ್ ಗೋಚರಿಸುವುದಿಲ್ಲ ಅನ್ನುವುದಾದರೆ, ದಯವಿಟ್ಟು ಈ ಚಿತ್ರವನ್ನು ನೋಡಬೇಡಿ!
******
Very interesting sir 🙂
ವೆಂಕಟೇಶ ಮಡಿವಾಳ ಬೆಂಗಳೂರು
ಈ ಸಿನೆಮ ಬಗ್ಗೆ ಬಹು ಸಾರಿ ಐ ಎಮ್ ಡಿ ಬಿ ನಲ್ಲಿ ಓದಿರುವೆ ಅಲ್ಲಿ ಒಳ್ಳೇ ಮಾರ್ಕ್ಸ್ ಇವೆ ,ಆದ್ರೂ ಇನ್ನೂ ವೀಕ್ಶಣೆ ಮಾಡಿಲ್ಲ .. ಈಗ ನೋಡವ ಅನಿಸುತ್ತಿದೆ..
ಶುಭವಾಗಲಿ
\|/
ಚೆನ್ನಾಗಿದೆ ವಾಸುಕಿ, ಸಿನಿಮಾ ನೋಡ್ಬೇಕು ಅನ್ನಿಸ್ತಿದೆ.