ತ್ಯಾಗ ಎಂಬುದು ಉತ್ತಮ ಮೌಲ್ಯಗಳಲ್ಲಿ ಉತ್ತಮವಾದುದು. ಮಾನವನ ಗುಣಗಳಲ್ಲಿ ಅತಿ ಮುಖ್ಯವಾದುದು. ಮಾನವರೆಲ್ಲರಲ್ಲೂ ಇರಬೇಕಾದಂತಹದ್ದು. ಆದರ್ಶ ವ್ಯಕ್ತಿಗಳಲ್ಲಿ ಹೆಚ್ಚೇ ಇರಬೇಕಾದುದು. ಮಾನವನ ಬದುಕಿಗೆ ಮಾನವತೆಗೆ ಉತ್ತಮ ಸಮಾಜದ ನಿರ್ಮಾಣಕ್ಕೆ ಅವಶ್ಯವಾದುದು. ಬಹಳ ಶ್ರೀಮಂತರು ತ್ಯಾಗಿಗಳಲ್ಲ! ಕೆಲವು ಸಿರಿವಂತರು ತನಗೆ ಅವಶ್ಯವಲ್ಲದ್ದನ್ನು ಯಥೇಚ್ಛವಾಗಿ ಇರುವಂತಹುದನ್ನು ತ್ಯಾಗ ಮಾಡುವರು. ಅದು ತ್ಯಾಗ! ಆದರೆ ತನಗೆ ಅವಶ್ಯವಾಗಿ ಬೇಕಾದುದನ್ನು ಬೇರೊಬ್ಬರ ಕಷ್ಟ ಅಥವಾ ನೋವು ನಿವಾರಣೆಗಾಗಿ ತ್ಯಾಗ ಮಾಡುವುದು ಶ್ರೇಷ್ಠ ತ್ಯಾಗ! ತ್ಯಾಗ ಮಾಡಿದುದನ್ನು ಸ್ವೀಕರಿಸಿದವ ಬಳಸಿಕೊಂಡು ಕಷ್ಟ ನಿವಾರಿಸಿಕೊಂಡು ನಗುಬೀರಿದವನ ಕಂಡಾಗ ತ್ಯಾಗಿಗೆ ಆಗುವುದು ಪರಮಾನಂದ!
ಇಂದು ಪೋಷಕರು ಬಿಡುವಿಲ್ಲದೆ ದುಡಿಯುತ್ತಿರುವುದರಿಂದ, ವಿಭಕ್ತ ಕುಟಂಭಗಳು ಉಂಟಾಗಿರುವುದರಿಂದ ಸಂಸಾರ ನಿಭಾಯಿಸಲು ಸತಿಪತಿ ಇಬ್ಬರೂ ದುಡಿಯಬೇಕಾಗಿರುವ ಪರಿಸ್ಥಿತಿ ತಲೆದೋರಿರುವುದರಿಂದ ಹಣದ ಬೆಲೆ ಕಡಿಮೆಯಾಗಿ ವಸ್ತಗಳ ಬೆಲೆ ಗಗನಮುಖಿಯಾಗಿರುವುದರಿಂದ ಸಮಯಾಭಾವ ಕಾಡುತ್ತಿರುವುದರಿಂದ ಬದುಕಿನಲ್ಲಿ ನೆಮ್ಮದಿ ಆನಂದ ಕನಸಾಗಿದೆ. ಸಮಯಾಭಾವದಿಂದ ಮೂರು ವರುಷದ ಮಗುವನ್ನೇ ಪ್ಲೇಹೋಂ, ಎಲ್ ಕೆ ಜಿ, ಯು ಕೆ ಜಿ ಅಂತ ಕಳುಹಿಸುತ್ತಿರುವುದರಿಂದ ಮಗು ನೀಡುವ ಅಪರಿಮಿತ ಅನನ್ಯ ಆನಂದವನ್ನು ಸವಿದು ಸಂತಸಹೊಂದಲು ಪೋಷಕರಿಗೆ ಆಗುತ್ತಿಲ್ಲ! ಪೋಷಕರಿಗೆ ತಮ್ಮ ಮಕ್ಕಳು ಬಾಲ್ಯದಲ್ಲಿದ್ದಾಗ ಕೊಡುವ ಆನಂದ ಎಷ್ಟು ಎಂಬುದ ಕೃಷ್ಣನ ಬಾಲಲೀಲೆಗಳ ಓದಿದವರಿಗೆ ಅರ್ಥವಾದೀತು. ಇಂದಿನ ಯಾಂತ್ರಿಕ ಅವಸರದ ಬದುಕು ಮಗು ಸಹ ಪೋಷಕರ ಮಮತೆಯಿಂದ ವಂಚನೆಯಾಗಿ ಪೋಷಕರು ಮತ್ತು ಮಗುವಿನ ನಡುವೆ ಅನ್ಯೋನ್ಯತೆ ಕಡಿಮೆಯಾಗಲು ಕಾರಣವಾಗುತ್ತಿದೆ. ತಂದೆಯ ಜತೆ ತಾಯಿಯಾದವರೂ ಸಹ ಹೊರಹೋಗಿ ದುಡಿದರೂ ಸಂಸಾರ ಸಾಗಿಸುವುದು ಕಷ್ಟವಾಗಿರುವುದರಿಂದ ತಾಯಿಯಾದವಳು ಹೊರಹೋಗಿ ದುಡಿಯುವುದು ಅನಿವಾರ್ಯವಾಗಿದೆ. ಉದ್ಯೋಗವನ್ನೂ, ಮನೆಯನ್ನೂ ನಿಭಾಯಿಸಲು ಶ್ರಮಿಸುತ್ತಿರುವ ತಾಯಿ ಹಿಂದಿನಂತೆ ಮಗುವಿಗೆ ಗುರು ಆಗಲು ಸಾಧ್ಯವಾಗುತ್ತಿಲ್ಲ! ತ್ಯಾಗ, ದಾನ, ಪರೋಪಕಾರ, ಪ್ರಾಮಾಣಿಕತೆ ಮುಂತಾದ ಗುಣಗಳ ಅನೇಕ ಕಾರಣಗಳಿಂದ ತಾಯಿಯೇ ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಲು ಆಗದಿರುವುದರಿಂದ ಮಗುವಿಗೆ ಅವುಗಳನ್ನು ಹೇಳಿಕೊಡಲು ಹೇಗೆ ಸಾಧ್ಯ? ತ್ಯಾಗದ, ಸಹನೆಯ, ಉದಾರತೆಯ ಹೊಂದಾಣಿಕೆಯ ಪ್ರೀತಿಯ ಮಮತೆಯ ಪರೋಪಕಾರದ ಮಾನವತೆಯ ಅನ್ಯೋನ್ಯತೆಯ ಕೇಂದ್ರದಂತಿದ್ದ ಅವಿಭಕ್ತಕುಟುಂಭಗಳು ಇಲ್ಲವಾಗಿ ಆ ಗುಣಗಳ, ಮೌಲ್ಯಗಳ ಕಲಿಕೆ ವಿಭಕ್ತ ಕುಟುಂಭಗಳಲ್ಲಿ ಆಗುತ್ತಿಲ್ಲ. ಅಂಕಗಳಿಸುವ ಜಪತಪ ಹಗಲು ಇರುಳು ನಡಿಯುತ್ತಿರುವುದರಿಂದ ಅಲ್ಲೇ ಸುಖವಿದೆ ಎಂದು ಭಾವಿಸಿರುವುದರಿಂದ ಶಾಲೆಯಲ್ಲೂ ಆಗುತ್ತಿಲ್ಲ. ಅಂಕಗಳಿಂದನೇ ಐಶ್ವರ್ಯ ಪ್ರಾಪ್ತಿ ಎಂದು ಭಾವಿಸಿರುವುದರಿಂದ ಅಂಕ ಗಳಿಸಲು ಪ್ರಾಮುಖ್ಯತೆ ಬಂದು ಮಾನವೀಯ ಮೌಲ್ಯಗಳು ಚಲಾವಣೆಯಾಗದ ನಾಣ್ಯಗಳಾಗಿವೆ. ಉತ್ತಮ ಮೌಲ್ಯಗಳು ಯಾವುದಕ್ಕೂ ಅರ್ಹತೆಗಳಾಗದೆ ಎಲ್ಲದಕ್ಕೂ ಹಣವೇ ಉತ್ತಮ ಮೌಲ್ಯವಾಗಿದೆ. ಸುಖ ಹಣದ ಗಳಿಕೆಯಲ್ಲಿ ಅಡಗಿದೆ ಎಂದು ಜಗತ್ತು ಭಾವಿಸಿರುವುದರಿಂದ ಜಗ ಹಣ ಗಳಿಸಲು ಯಾವ ಮಟ್ಟಕ್ಕಾದರೂ ಇಳಿಯುತ್ತಿರುವುದರಿಂದ ಸಮಾಜದಲ್ಲೂ ಆಗುತ್ತಿಲ್ಲ! ಮಕ್ಕಳನ್ನು ದೂರದ ಸ್ಥಳಗಳಿಗೆ ವಿದ್ಯಾಭ್ಯಾಸ ಉದ್ಯೋಗ ಎಂದು ಕಳುಹಿಸುವುದರಿಂದ ಸಂಬಂಧಗಳು ಜಾಳಾಗಿ ಪೋಷಕರು ಮತ್ತು ಮಕ್ಕಳ ನಡುವೆ ಅನ್ಯೋನ್ಯತೆ ಇಲ್ಲವಾಗಿ ಸಂಬಂಧಗಳಿಗೆ ಬೆಲೆ ಇಲ್ಲವಾಗುತ್ತಿದೆ. ಇದರಿಂದ ಪೋಷಕರು ಮಕ್ಕಳ ತಿದ್ದಲು ಸಾಧ್ಯವಾಗುತ್ತಿಲ್ಲ! ರಾಜಕಾರಣದಲ್ಲಿ ಅಧಿಕಾರಕ್ಕಾಗಿ ಅಮಾನವೀಯತೆ, ತತ್ವರಹಿತ ರಾಜಕಾರಣ, ಅನೈತಿಕತೆ ರಿಂಗಣ ಕುಣಿಯುತ್ತಿರುವುದರಿಂದ ರಾಜಕಾರಣ ಕೀಳು ಮಟ್ಟಕ್ಕೆ ಇಳಿದು ಯಾವ ಆದರ್ಶಕೂ ಮಾದರಿಯಾಗುತ್ತಿಲ್ಲ. ಹಣ, ಅಧಿಕಾರ, ಅಂಕ, ಆಸ್ತಿ ಗಳಿಸಲು ತ್ಯಾಗದ ಅವಶ್ಯಕತೆ ಬೀಳದಿರುವುದರಿಂದ ಅದು ಚಲಾವಣೆ ಕಳೆದುಕೊಂಡ ನಾಣ್ಯವಾಗಿದೆ! ಇದರಿಂದ ಸಮಾಜ ಅದೋಗತಿ ಹೊಂದುತ್ತಿದೆ! ಸಮಾಜದಲ್ಲೂ ಪೂರಕ ವಾತಾವರಣ ಇರದಿರುವುದರಿಂದ ವ್ಯತಿರಿಕ್ತ ಸಮಾಜ ಸುತ್ತುವರಿದಿರುವುದರಿಂದ ಸಮಾಜದ ಪ್ರಕ್ಷುಬ್ಧತೆಗೆ ಕಾರಣವಾಗಿ ಅಧೋಗತಿ ಹೊಂದುವಂತಾಗಿದೆ.
ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿ, ಸಾಹಿತ್ಯ, ಕಲೆ ಅನನ್ಯವಾದದ್ದು. ಮಾನವೀಯ ಮೌಲ್ಯಗಳು, ಸತ್ಯ, ಪ್ರಾಮಾಣಿಕತೆ, ತಾಳ್ಮೆ, ಸಹನೆ, ಅಹಿಂಸೆ, ದಾನ, ತ್ಯಾಗ ಹಾಸುಹೊಕ್ಕಾಗಿವೆ. ನಾಡಿನಾಧ್ಯಂತ ಸಿಗುವ ವೀರಗಲ್ಲುಗಳು ತ್ಯಾಗದ ಸಂಕೇತಗಳಾಗಿವೆಯಲ್ಲವೇ? ಮಹಾಭಾರತ, ರಾಮಾಯಣ ಮೌಲ್ಯಗಳ ಗಣಿಗಳಲ್ಲವೆ? ಇಂದು ಅವುಗಳಿಂದ ದೂರ ಉಳಿದು ವಿದೇಶೀ ಸಂಸ್ಕೃತಿಗೆ ಮಾರುಹೋಗಿರುವುದರಿಂದ ಎಲ್ಲೆಲ್ಲೂ ಅನೀತಿ, ಅಸಹನೆ, ಸ್ವಾರ್ಥ, ವಂಚನೆ, ಭ್ರಷ್ಟಾಚಾರ ಮನೆಮಾಡಿದೆ. ನೆಮ್ಮದಿಗಾಗಿ ಸಮಾಜ ತಹತಹಿಸುತ್ತಿದೆ. ಕಾಡಿನಲ್ಲಿದ್ದು ಗೆಡ್ಡೆ ಗೆಣಸು ತಿನ್ನುತ್ತ ತಪಸ್ಸು ಮಾಡುತ್ತ , ಯಾಗ ಯಜ್ಞಾದಿಗಳನ್ನು ಲೋಕ ಕಲ್ಯಾಣಕ್ಕಾಗಿ ಮಾಡುತ್ತಾ ಅದರಲೇ ಆನಂದ ಹೊಂದುತ್ತಿದ್ದ ಋಷಿ ಮುನಿಗಳು, ಮಾನವನನ್ನು ಕಾಡುವ ನೋವುಗಳಿಗೆ ಉತ್ತರ ಹುಡುಕಲು ಅರಮನೆ ಸುಂದರ ಯುವರಾಣಿ , ಮುದ್ದು ಕಂದನನ್ನು ತ್ಯಜಿಸಿ ಕಾಡಿಗೆ ಹೋಗಿ , ಕಷ್ಟಗಳಲಿ ಕೃಷನಾಗಿ , ಕಷ್ಟಗಳ, ನೋವುಗಳ ಹೋಗಲಾಡಿಸುವ ಉತ್ತರ ತಂದು , ಸಾಮಾನ್ಯರ ನೋವುಗಳನ್ನು ಹೋಗಲಾಡಿಸುವುದರಲಿ ನಿರತನಾಗಿ ಅದರಲೇ ಪರಮಾನಂದ ಕಂಡುಕೊಂಡಿದ್ದ ಬುದ್ದ, ದೇಶದ ಬಹುಪಾಲು ಜನರು ಬಡತನದಿಂದ ಕಷ್ಟ ಅನುಭವಿಸುತ್ತಿರುವಾಗ ಅರೆ ಬೆತ್ತಲೆಯಾಗಿ ಅರೆ ಊಟ ಮಾಡುತ್ತಿರುವಾಗ ನಾನು ಸುಖವಾಗಿರುವುದು ಸರಿಯಲ್ಲವೆಂದು ತನ್ನ ಸುಖ ತ್ಯಜಿಸಿ ಅರೆ ಬೆತ್ತಲೆಯಾಗಿ, ಅರೆ ಉಣುತ ಬಡವರ ಸುಖಕ್ಕಾಗಿ ದೇಶದ ಸ್ವಾತಂತ್ರಕ್ಕಾಗಿ ಹೋರಾಡುತ್ತಾ ಜನರಿಗಾಗಿಯೇ ದೇಶಕ್ಕಾಗಿಯೇ ಜೀವ ಸವೆಯಿಸುತ್ತಾ ಅದರಲೇ ತನ್ನ ಆನಂದ ಕಂಡುಕೊಂಡಿದ್ದ ಗಾಂಧಿ, ಅನೇಕ ಸ್ವಾತಂತ್ರ್ಯ ಹೋರಾಟಗಾರರು ತಂದೆ, ತಾಯಿ, ಅಣ್ಣ, ತಮ್ಮ, ಸತಿ, ಸುತರು ಬಂಧು ಬಾಂಧವ ಮಿತ್ರರ ತೊರೆದು ಸ್ವಾತಂತ್ರ್ಯದ ಹೋರಾಟದಲ್ಲಿ ಧುಮಿಕಿ ಭಾರತ ಮಾತಾಕಿ ಜೈ ಎಂದು ಆನಂದದಿ ಸ್ವಾತಂತ್ರ್ಯ ಪಡೆಯಲು ದೇಹ ತ್ಯಾಗ ಮಾಡಿದ ಅನೇಕ ದೇಶಾಭಿಮಾನಿಗಳು, ತನ್ನ ಪ್ರಾಣಕ್ಕಿಂತ ತನ್ನ ಅಕ್ಕಂದಿರ ಪ್ರಾಣ, ಮನೆಯ ಕ್ಷೇಮ, ಗೌರವ, ಊರಿನ ಜನ, ಪ್ರಾಣಿ, ಪಕ್ಷಿ , ಕ್ರಿಮಿ, ಕೀಟ …. ಗಳಿಗೆ ಜೀವಜಲ ದೊರಕಿಸುವುದೇ ಮುಖ್ಯ ಎಂದು ಕೆರೆಗೆ ಆಹಾರವಾದ ಭಾಗೀರತಿಯ ತ್ಯಾಗ ಅತ್ಯಂತ ಶ್ರೇಷ್ಠವಾದುದು. ರೋಗಿಗಳ, ಅನಾಥರ ಸೇವೆಗೆ ತನ್ನ ಜೀವನವ ಮುಡುಪಾಗಿಟ್ಟು, ಅದರಲೇ ದೇಹ ಸವೆಸಿ ಅದರಲಿ ತನ್ನ ಆನಂದ ಹುಡುಕಿಕೊಂಡಿದ್ದ ಮದರ್ ತೆರೆಸ, ನಾಡಿನ ಹಿತಕ್ಕಾಗಿ ಗಿಡಗಳ ಮಕ್ಕಳಂತೆ ಬೆಳೆಯಿಸಿ, ಅಂತರ್ ಜಲ ಹೆಚ್ಚಲು, ಮಳೆಯನು ಸೆಳೆಯಲು ಕಾರಣವಾಗಿ ಜೀವಿಗಳಿಗೆ ಆಗತ್ಯವಾದ ನೀರಿನ ಕೊರತೆ ನೀಗಿಸಲು ಬದುಕ ಸವೆಸುತ್ತಿರುವ ಸಾಲುಮರದ ತಿಮ್ಮಕ್ಕ! ಅಂತರ್ ಜಲ ಹೆಚ್ಚಿಸುವ ಅಭಿಯಾನ ಆರಂಭಿಸಿ ಅದಕ್ಕೇ ತನ್ನ ಜೀವನವ ಮುಡುಪಾಗಿಟ್ಟಿರುವ ಜಗ್ಗಿವಾಸುದೇವನ್, ಹಗಲು ಇರುಳೆನ್ನದೆ, ಮಳೆ, ಶೀತಗಾಳಿ, ಮಂಜೆನ್ನದೆ, ಪರಿಸರದ ಉಳಿವಿಗೆ ಹೋರಾಡಿ ಜೀವ ಸವೆಸುತ್ತಿರುವ ಸುಂದರ ಲಾಲ್ ಬಹುಗುಣ, ಹಿಮಾಲಯದಂಥಾ ಸ್ಥಳಗಳಲ್ಲಿ ಹೆಂಡತಿ ಮಕ್ಕಳ ಮರೆತು ದೇಶದ ಜನರ ಹಿತಕ್ಕಾಗಿ ಗಡಿ ಕಾಯುತ್ತಾ ಜೀವ ಸವೆಸುವ ಯೋಧರು! ಇಂತಹ ಅನೇಕರು ನಮ್ಮ ಇತಿಹಾಸದ ಭಾಗವಾಗಿ, ತ್ಯಾಗದ ಸಂಕೇತವಾಗಿ ಅದರಿಂದ ಪರಮಾನಂದ ಹೊಂದುತ್ತಾ ದೇಶಕ್ಕೆ ಕಳಶಪ್ರಾಯರಾಗಿದ್ದಾರೆ. ತ್ಯಾಗದಿಂದಾಗುವ ಆನಂದ ಎಲ್ಲಾ ಆನಂದಕ್ಕಿಂತ ಮಿಗಿಲಾದದ್ದು. ಅಕ್ರಮ ಗಳಿಕೆಯಲ್ಲಿ, ಭ್ರಷ್ಟಾಚಾರದಲ್ಲಿ ನಿಕೃಷ್ಟ ಆನಂದ ಹುಡುಕಿಕೊಂಡವರಿಗೆ ಇದರ ಮಹತ್ವ ಹೇಗೆ ತಿಳಿದೀತು. ತ್ಯಾಗದ ಮಹತ್ವ ಅರಿತು ಬಾಳಲು ಮನಸ್ಸು ಮಾಡಿದಾಗ ಪರಮಾನಂದ ಉಂಟಾಗುವುದು!. ಇದರಿಂದ ಜಗತ್ತಿನಲ್ಲಿ ಕಲಹಗಳು ಕಡಿಮೆಯಾಗಿ ನೆಮ್ಮದಿ ಮೂಡೀತು.
ವಚನಕಾರರೆಲ್ಲಾ ತ್ಯಾಗಿಗಳು. ತಾವು ಬೇಕಾದಷ್ಟು ಗಳಿಸಿ ಬಾಯಿಗೆ ಸವಿಯಾದುದ, ದೇಹದ ಶೋಭೆಯ ಹೆಚ್ಚಿಸಿವಂತಹುದ ಉಟ್ಟು, ತೊಟ್ಟು, ಆಭರಣಗಳ ಧರಿಸಿ ಸುಖಿಸಬಹುದಿತ್ತು. ಅದರೆ ತಮ್ಮ ಬದುಕಿಗೆ ತಾವೇ ಹಿತ ಮಿತದ ಜ್ಞಾನದ ಕಾಯಕದ ಸಮಾನತೆಯ ಸರಳತೆಯ ಉತ್ತಮ ನಡೆನುಡಿಯ, ನುಡಿದಂತೆ ನಡೆಯುವ, ನೈತಿಕವಾಗಿ ಬದುಕುವ, ಪರತತ್ವ ಸಾಧಿಸುವ, ಕಾಯಕ ಮಾಡಿ ಬಂದುದರಲ್ಲೇ ದಾಸೋಹ ಮಾಡುವ ಸುವರ್ಣದ ಕಟ್ಟುಗಳ ಒಂದರಮೇಲೊಂದು ಕಟ್ಟಿಕೊಂಡು ಅವುಗಳ ಬಂಧನದೊಳಗೇ ಸರಳವಾಗಿ ಸಂತೃಪ್ತಿಯಿಂದ ಬದುಕುತ್ತಾ ನೈತಿಕ ಸಮಾಜವ ಸೃಷ್ಟಿಸಿ, ಸಮಾನತೆ ಸಾಧಿಸಿ, ಹೆಚ್ಚು ಗಳಿಸದೆ, ಹೆಚ್ಚು ಸಂಗ್ರಹಿಸದೆ ಗಳಿಸಿದುದ ಅವಶ್ಯವಿರುವವರಿಗೆ ದಾಸೋಹ ಮಾಡುತ ಸರಳ ಜೀವಿಗಳಾಗಿ, ಸಮತಾವಾದಿಗಳಾಗಿ ತ್ಯಾಗದ ಜೀವನದಲ್ಲಿ ಆನಂದದಿ ಐಕ್ಯರಾದವರು! ಸಿದ್ದರಾಮ ಜೀವಿಗಳಿಗೆ ಅನುಕೂಲವಾಗಲೆಂದು ಜೀವನ ಪೂರ್ತಿ ಕೆರೆಕಟ್ಟೆ ಕಟ್ಟಿಸುವುದರಲ್ಲೇ ತನ್ನ ಜೀವನ ತ್ಯಾಗ ಮಾಡಿದ. ಹೀಗೆ ವಚನಕಾರರು ಮೂಢನಂಬಿಕೆ, ಕಂದಾಚಾರ, ಮೇಲು ಕೀಳುಗಳ ಅಳಿಸುತ ಸಮಾಜವನ್ನು ಉದ್ದರಿಸಲು, ಮಾನವನಿಗೆ ಮಾನವ ಪಥ ತೋರಿಸಲು, ಸದ್ಗತಿಯ ಸನ್ಮಾರ್ಗ ಹಿಡಿಸಲು ತಮ್ಮ ಜೀವನ ಮುಡಿಪಾಗಿಟ್ಟದ್ದು ತ್ಯಾಗವಲ್ಲವೇ? ಹಾಗೇ ದಾಸರು ಸಹ ಗಳಿಸಿದ ಸಂಪತ್ತನ್ನು ಅವಶ್ಯಕತೆ ಇರುವವರಿಗೆ ತ್ಯಾಗ ಮಾಡಿ ಸರಳ ಜೀವನ ಸಾಗಿಸುತ್ತಾ ತಾಳ ತಂಬೂರಿ ಹಿಡಿದು ಕೀರ್ತನೆಗಳನ್ನು ಹಾಡುತ್ತಾ ಸಂಗೀತ ಮಾಧ್ಯಮದಿ ಜನರಾಕರ್ಷಿಸುತ್ತಾ ಮೂಡನಂಬಿಕೆಗಳ ಅಳಿಸಲು ವೈಚಾರಿಕತೆಯ ಮಾನವತೆಯ ಬೆಳೆಸಲು ಉತ್ತಮ ನೈತಿಕ, ಮೌಲ್ಯಯುತ ಸಮಾಜ ನಿರ್ಮಿಸಲು ಸಮಾಜವನ್ನು ತಿದ್ದಲು ಜೀವನವ ಮುಡುಪಾಗಿಟ್ಟು, ಸರಳವಾಗಿ ಪರತತ್ವ ಪಡೆಯುವುದ ತಿಳಿಸಲು ಶ್ರಮಿಸುತ್ತ ಸಮಾಜದ ಉದ್ದರಕ್ಕಾಗಿ ಜೀವನ ಸವೆಸಿ ತ್ಯಾಗಿಗಳಾದರು!
ತಂದೆಯ ಸುಖಕ್ಕಾಗಿ ಯುವರಾಜತ್ವ, ವೈವಾಹಿಕ ಜೀವನ ತ್ಯಜಿಸಿ ಬ್ರಹ್ಮಚಾರಿಯಾಗಿಯೇ ಉಳಿದ ಭೀಷ್ಮ, ಪತಿಗಿಲ್ಲದ ಸುಖ ತನಗೇಕೆಂದು ಕಣ್ಣನ್ನು ಕಟ್ಟಿಕೊಂಡು ಕೃತಕ ಕುರುಡತ್ವ ಅನುಭವಿಸಿದ ಗಾಂಧಾರಿ, ತಂದೆಯ ಮಾತುಳಿಸಿ ತಂದೆಗೆ ನೆಮ್ಮದಿ ನೀಡಲು ಅರಮನೆ ತ್ಯಜಿಸಿ ಅರಣ್ಯವಾಸ ಅನುಭವಿಸಿದ ರಾಮ, ಹಿರಿಯಣ್ಣ ತಂದೆಯ ಸಮಾನೆಂದ ಹಿರಿಯಣ್ಣನಾದ ರಾಮನ ಕಷ್ಟಗಳಿಗೆ ಹೆಗಲಾಗಲು ಮನದನ್ನೆ, ಅರಮನೆ, ವೈಯಕ್ತಿಕ ಸುಖ ತ್ಯಜಿಸಿ ಅಣ್ಣನ ಬೆಂಗಾವಲಾಗಿ ಅರಣ್ಯಕ್ಕೆ ಹೊರಟ ಲಕ್ಷ್ಮಣ, ಅಕ್ಕ ಭಾವನ ಕ್ಷೇಮಕ್ಕಾಗಿ ಗಂಡನನ್ನೇ ಬಿಟ್ಟುಕೊಟ್ಟು ಅವನು ಬರುವವರೆಗೇ ಅವನ ಧ್ಯಾನಸ್ಥಳಾಗೇ ಇದ್ದು, ಅವರ ಶ್ರೇಯಸ್ಸನ್ನು ಬಯಸುತ್ತಾ ವೈಯಕ್ತಿಕ ಸುಖ ತ್ಯಜಿಸಿದ ಊರ್ಮಿಳೆ, ತಂದೆ ಯಯಾತಿಯ ಆಸೆ ಪೂರೈಸಲು ತಾತ್ಕಾಲಿಕ ಯೌವನ ತ್ಯಜಿಸಿ ಮುಪ್ಪನುಭವಿಸಿದ ಪುರು, ತನ್ನ ಸುಖ ತೆಜಿಸಿ ಅಬಲ, ಅಂಧ ಜನ್ಮಧಾತರನ್ನು ಅಡ್ಡೆಯಲ್ಲಿ ಹೊತ್ತುಕೊಂಡು ತೀರ್ಥಯಾತ್ರೆಗೆ ಕರೆದೊಯ್ದು ಅವರಿಗೆ ಆನಂದವನ್ನು ಉಂಟು ಮಾಡಿ ಅದರಲೇ ತನ್ನ ಆನಂದ ಕಂಡುಕೊಂಡ ಶ್ರವಣಕುಮಾರ, ನಾಗನನೊಬ್ಬನ ಪ್ರಾಣ ಉಳಿಸಿ, ಅವರ ಅವ್ವನ ದುಃಖ ದೂರ ಮಾಡಲು ತನ್ನ ಪ್ರಾಣಕೊಡಲು ಮುಂದಾಗಿ ತನ್ನ ದೇಹವನ್ನು ಗರುಡ ಕುಕ್ಕಿ ಕುಕ್ಕಿ ತಿನ್ನುವಾಗ , ನಾಗನೊಬ್ಬನ ಪ್ರಾಣ ಉಳಿಸಿದ ಪರಮಾನಂದದಿಂದ ಗರುಡನಿಗೆ ಆಹಾರವಾಗುತ್ತಾ ನೋವಿನಲ್ಲೂ ಪರಮಾನಂದದಿ ತೇಲುತ್ತಿದ್ದ ಜೀಮೂತವಾಹನನ ತ್ಯಾಗ ಅನನ್ಯವಾದದ್ದು. ಅದು ಅಪರಿಮಿತ ಆನಂದವನ್ನು ಕೊಡುತ್ತದೆ. ಅದರಿಂದ ಸಮಾಜ ಉನ್ನತಿಗೇರುತ್ತದೆ.
ಇಂದು ಕೆಲವರು ಬಡವ, ವಿಕಲಾಂಗಚೇತನ, ರೋಗಿ , ಹೆಂಗಸು, ಮಕ್ಕಳು ಎನ್ನದೆ ಎಲ್ಲರ ಶೋಷಣೆ ಮಾಡಿ ಮೃಗತ್ವವನ್ನು ಮೆರೆಯುತ್ತಿದ್ದಾರೆ. ಇದರಿಂದ ಸಮಾಜ ನೈತಿಕ ಅದಃಪತನ ಹೊಂದುತ್ತಿದೆ. ಪ್ರಯುಕ್ತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಮಾಯವಾಗುತ್ತಿವೆ. ಮಾನವ ಇದರಿಂದ ನೆಮ್ಮದಿ ಇಲ್ಲದೆ ಅಲೆಯುತ್ತಿದ್ದಾನೆ. ಅವನಿಗೆ ನೆಮ್ಮದಿ ಅವಶ್ಯವಾಗಿ ಬೇಕಿದೆ. ನೆಮ್ಮದಿಗಾಗಿ ಉತ್ತಮ ಮೌಲ್ಯಗಳ ಬೆಳಸಿಕೊಳ್ಳಬೇಕಿದೆ. ಬಂಧು ಬಳಗ ಗೆಳೆಯ ಗೆಳತಿ, ಅಪರಿಚಿತರ ದುಃಖ ಹೋಗಲಾಡಿಸಲು ವೈಯಕ್ತಿಕ ಸುಖ, ಪ್ರಾಣವನೂ ತ್ಯಜಿಸಿದ ತ್ಯಾಗಿಗಳ ಇತಿಹಾಸ ನಮ್ಮ ಪರಂಪರೆಗಿದೆ. ಇದನ್ನು ನಾವು ಸ್ವಾರ್ಥಿಗಳಾಗಿ ಮರೆತಿದ್ದೇವೆ. ಇದನ್ನು ಅರಿತು ನಡೆದಾಗ ನೆಮ್ಮದಿ ಕಾಣಬಹುದು. ಸ್ವಲ್ಪ ತ್ಯಾಗ ಮನೋಭಾವ ಬೆಳೆಸಿಕೊಳ್ಳೋಣ ಅದರಲ್ಲಿರುವ ಆನಂದ ನಮ್ಮನ್ನು ಮಹಾತ್ಯಾಗಿಗಳನ್ನಾಗಿಸುತ್ತದೆ. ತ್ಯಾಗದ ಸದುಪಯೋಗ ಇನ್ನೊಬ್ಬರಿಗೆ ಆಗಿ ಅವರ ಮುಖದಲ್ಲಿ ನಗೆಗಳ ಗೆರೆಗಳ ಮೂಡಿದುದ ಕಂಡಾಗ ದಾನಿಗೆ ಅಪಾರ ಆನಂದವಾಗುತ್ತದೆ. ಅದು ಆರೋಗ್ಯ ನೆಮ್ಮದಿ ಮಹದಾನಂದವ ನೀಡುತ್ತದೆ. ಅದು ಯಾವ ಸಿರಿ ಸಂಪತ್ತಿನಿಂದಲೂ ಸಿಗದ ಅಪರಿಮಿತ ಆನಂದ!
–ಕೆ ಟಿ ಸೋಮಶೇಖರ ಹೊಳಲ್ಕೆರೆ.