ಮಧ್ಯಾಹ್ನ ಹನ್ನೆರಡು ಗಂಟೆದ ಹೊತ್ತು, ವೈಶಾಖ ಮಾಸದ ಖಡಕ ಬಿಸಿಲಿನ್ಯಾಗ ನಮ್ಮ ಊರಿನ ಬಸ್ಸಿನ್ಯಾಗ ಕೂತು ಯಾವಾಗ ಊರ ಮುಟ್ಟತೇನೊ ಅಂತ ಚಡಪಡಿಸ್ಕೊತ ಕೂತಿದ್ದೆ. ಮುಂಝಾನೆ ಹತ್ತು ಘಂಟೆ ಆಗಿದ್ರು ಬಿಸಲು ಭಾಳ ಚುರುಕ್ಕ ಇತ್ತು. ಹೌದು ಎಷ್ಟ ವರ್ಷ ಆಗಿಹೊದ್ವು ಹಳ್ಳಿಕಡೆ ಹೋಗಲಾರದ, ಒಂದ ಏಳೆಂಟ ವರ್ಷರ ಆಗಿರಬೇಕು. ಖಿಡಕ್ಯಾಗಿಂದ ಬಿಸಿ ಗಾಳಿ ಒಳಗ ಬಂದು ಮಾರಿಗೆ ಬಡಿಲಿಕತ್ತಿತು, ಮನಸ್ಸು ಹಿಂದಿನ ನೆನಪುಗಳ ಹತ್ರ ಓಡಿ ಓಡಿ ಹೊಂಟಿತ್ತು. ಎಂಥಾ ಆರಾಮದ ದಿನಗೊಳವು. ನನ್ನ ಮದುವಿಯಾದ ಹೊಸದಾಗೆ, ಶಹರದಾಗ ಹುಟ್ಟಿ ಬೆಳದ ನಂಗ ಈ ಹಳ್ಳಿಊರಾಗಿನ ಜೀವನಾ ಎನೊ ಒಂಥರಾ ಮಜಾ ಅನಿಸಿತ್ತು. ನಮ್ಮದು ಅವಿಭಕ್ತ ಕುಟುಂಬ, ಮನಿಯೊಳಗ ಅತ್ತಿ-ಮಾವಾ, ಮೈದುನ,ನಾದಿನಿ, ಎಲ್ಲಾರಿಂದ ತುಂಬಿದ ಮನಿ. ನಾನ ಹಿರೆ ಸೊಸಿ ಆ ಮನಿಗೆ. ತವರು ಮನಿಯೊಳಗ ನಾನು ನನ್ನ ತಮ್ಮಾ, ಅಮ್ಮ,ಅಪ್ಪ , ಅಂತ ಪುಟ್ಟ ಪ್ರಪಂಚದೊಳಗ ಬೆಳದಬಂದ ನನಗ ಇಲ್ಲೆ ಭಾಳಷ್ಟ ಮಂದಿ ಒಂದ ಕಡೆ ಕೂಡಿ ಇರೊದ ನೋಡಿ ಭಾಳ ವಿಚಿತ್ರ ಅನಿಸ್ತಿತ್ತು. ಮನಿ ತುಂಬ ನಗು, ಮಾತು ಹರಟಿ, ಮನಿಯೊಳಗ ದಿನಾಲು ಹಬ್ಬದ ವಾತಾವರಣನ ಇರ್ತಿತ್ತು. ದಿನಾ ಮುಂಝಾನೆ ಚಹಾ ಕೂಡಿಲಿಕ್ಕೆ ಕೂತ್ರಂತು ಮುಗಿತು ಒಂದ ದಿಡತಾಸು ಹರಟಿ ಕಾರ್ಯಕ್ರಮ ನಡಿತಿತ್ತು. ಎಲ್ಲಾರು ಒಬ್ಬೊಬ್ಬರ ಎದ್ದ ಬಂದು ಪಡಸಾಲ್ಯಾಗ ಸೇರತಿದ್ರು. ಇಲ್ಲೆ ಮನಿ ಸೊಸಿಗೂ ಬೆರಿಲಿಕ್ಕೆ ಮುಕ್ತ ಅವಕಾಶ ಇತ್ತು. ಮನಿ ಹೆಣ್ಣಮಕ್ಕಳು ಮತ್ತ ಸೊಸೆಯಂದ್ರೊಳಗ ಯಾವ ಭೇದ ಭಾವ ಇರಲಿಲ್ಲ. ಈ ನಗು ಚಾಷ್ಟಿಯ ನಡುವ ಒಂದ ಮೂರ ಸರತೆ ಎಲ್ಲಾರದು ಚಹಾ ಸಮಾರಾಧನಿ ಆಗಿರತಿತ್ತು. ಇದರ ನಡುವ ಮನಿಗೆ ಮಸರು, ಹಾಲು ಮಾರಲಿಕ್ಕೆ ಅಜ್ಜಿಗೆ, ಆ ಹೊತ್ತಿಗೆ ಯಾರೆ ಮನಿಗೆ ಬರಲಿ ಅವರಿಗೂ ಚಹಾದ ಸಪ್ಲೈ ಆಗತಿತ್ತು. ನಮ್ಮ ತವರು ಮನ್ಯಾಗಿನ ನಾಲ್ಕ ಕಪ್ಪ ಚಹಾ ಎಲ್ಲೆ.! ಇಲ್ಲಿದು ತಪ್ಪೇಲಿಗಟ್ಟಲೆ ಚಹಾ ಎಲ್ಲೆ, ನೆನಿಸಿಕೊಂಡ್ರ ನಗುನ ಬರತಿತ್ತು. ಹರಟಿ ನಗು ಮುಗಿಸಿ ಎಲ್ಲಾರು ತಮ್ಮ ತಮ್ಮ ಕೆಲಸಕ್ಕ ಎದ್ದು ಹೋಗತಿದ್ರು, ಮತ್ತ ವಾಪಸ್ ನಾಷ್ಟಾದ ಹೊತ್ತಿಗೆ ಅಡಗಿ ಮನ್ಯಾಗ ಎಲ್ಲಾರು ಜಮಾಯಿಸ್ತಿದ್ರು. ಅಡಗಿ ಮನ್ಯಾಗ ನಟ್ಟನಡುವ ನಮ್ಮ ಅತ್ತಿಯವರು ಕೂತು ಎಲ್ಲಾರಿಗೂ ಊಟಕ್ಕ/ನಾಷ್ಟಾ ಬಡಸತಿದ್ರು. ಸೂತ್ತಲೂ ನಾವೆಲ್ಲಾ ಕೂಡತಿದ್ವಿ.ಭಾಳ ಛಂದ ಹರಟಿಹೊಡಕೊತ ನಾಷ್ಟಾ ಮಾಡತಿದ್ವಿ. ಖರೆ ಎಲ್ಲಾರು ಕೂಡಿ ಇರೊದ್ರಾಗ ಭಾಳ ಸಮಾಧಾನ ನೆಮ್ಮದಿ ಇರತದ. ಮನಿ ತುಂಬ ಮಂದಿ ಇರತಿದ್ವಿ ಮನಶ್ಯಾಗ ಒಂದೊಂದ ಕೆಲಸಾ ಹಂಚಕೊಂಡ ಮಾಡಿಮುಗಿಸತಿದ್ವಿ. ಯಾರ ನಡುವ ಯಾವ ಜಗಳನು ಬರತಿದ್ದಿಲ್ಲಾ. ನಮ್ಮ ಮನಿ ಕಿಲ್ಲಾದಾಗ ಇತ್ತು. ಎಲ್ಲಾ ಒಂಟ ಗ್ವಾಡಿ ಮನಿಗೋಳು ಹಿಂಗಾಗಿ ಮನಿಮುಂದ ದೊಡ್ಡ ಅಂಗಳಾಗಲಿ. ಹಿಂದ ಹಿತ್ತಲಾಗಲಿ ಭಾಳ ದೊಡ್ಡುವು ಎನ ಇರತಿದ್ದಿಲ್ಲಾ. ಹಿಂಗಾಗಿ ಕೆರಿಗೆ ಬಟ್ಟಿ ಒಗಿಲಿಕ್ಕೆ ಹೋಗಬೇಕಾಗತಿತ್ತು. ನಮ್ಮೂರಿನ ಮುಖ್ಯ ಆಕರ್ಷಣೆನ ಆ ದೊಡ್ಡ ಕೆರಿಯಾಗಿತ್ತು. ಊರ ಅತ್ಲಾಗ ಎಲ್ಲಮ್ಮನ ಗುಡಿ ದಾಟಿ ಹೊಲಕ್ಕ ಹೋಗೊ ಹಾದಿಯೊಳಗ ದೊಡ್ಡ ಕೆರಿ ಅದ. ಊರಮಂದಿಯೆಲ್ಲಾ ಬಟ್ಟಿ ಒಗಿಲಿಕ್ಕೆ ಇದ ಕೆರಿಗೆನ ಬರತಿದ್ರು. ನನಗೂ ಹೊಸದಾಗೆ ಹೋದಾಗ ಈ ಕೆರಿಗೆ ಒಗಿಲಿಕ್ಕೆ ಹೋಗೊದು ಒಂಥರಾ ಮಜಾ ಅನಿಸ್ತಿತ್ತು. ಇಡಿ ಕೆರಿ ಥಂಡಾ ಥಂಡದ ಮಂದಿಯಿಂದ ತುಂಬಿ ತುಳಕತಿತ್ತು. ಹೆಣ್ಣಮಕ್ಕಳ ಜಾಸ್ತಿ ಇರತಿದ್ರು. ಕೆರಿಯೊಳಗ ಈಜೊ ನೆವಾ ಮಾಡಕೊಂಡ, ಅರವಿ ಒಗಿಲಿಕ್ಕೆ ಬಂಧಂಥಾ ಹರೆದ ಹುಡಗ್ಯಾರನ ಕಾಡಲಿಕ್ಕೆ ಬಂದ ಗಂಡಹುಡುಗುರು ಇರತಿದ್ರು. ಈಡಿ ಕೆರಿ ವಾತಾವರಣ ಕಲಕಲ ಮಾತು,ನಗಿ ಸಪ್ಪಳದಿಂದ ಮುಳಗಿರತಿತ್ತು. ಊರ ಹೊರಗ ಇದ್ದ ವಿಷಾಲ ತುಂಬಿದ ಕೆರಿಯ ಸೂತ್ತಲ ಹಚ್ಚ ಹಸರ ಹೊಲಾ, ತ್ವಾಟಾ ಎಲ್ಲಾ ನೋಡಲಿಕ್ಕೆ ಭಾಳ ಛಂದ ಅನಿಸ್ತಿತ್ತು. ಕೆಳಗ ಇಳದು ಕಚ್ಚಿಹಾಕಿ ನೀರಾಗ ನಿಂತ ಒಗ್ಯಾಣ ಮಾಡಲಿಕತ್ತ ಹೆಣ್ಣಮಕ್ಕಳನ್ನ ನೋಡಿದ್ರ ನಂಗ ಭಾಳ ಆಶ್ಚರ್ಯ ಅನಿಸ್ತಿತ್ತು. ನಾನು ಒಂದ ಸಲಾ ಇಳದನೋಡಿ ಇನ್ನೆನ ಅರವಿ ಒಗಿಲಿಕ್ಕೆ ಶೂರು ಮಾಡಬೇಕನ್ನೊದ್ರಾಗ ಕಾಲಾಗ ಎನೊ ಮೆತ್ತಗಂದು ಗುಳು ಗುಳು ಮಾಡಲಿಕತ್ತು ಹಾವೆನೊ ಅನಕೊಂಡು ಹೆದರಿ ಚಿರಿ ಪಟಕ್ಕನ ಮ್ಯಾಲೆ ದಂಡಿಮ್ಯಾಲೆ ಜಿಗದೆ, ಅದನ್ನ ನೋಡಿ ದನಾಕಾಯೊ ಪಾರವ್ವಾ” ಅಯ್ಯ ದೇಸಾಯರ ಅವು ಮಿನ ಎಳ್ರಿ ಎನಮಾಡಂಗಿಲ್ಲಾ ಸ್ವಲ್ಪ ಗುಳು ಗುಳು ಕಟ್ಟ್ಯಾಡಿಸಿ ಹೋಗ್ತಾವರಿ ಅಂಜಬ್ಯಾಡ್ರಿ ಅಂದ್ಲು. ಆದ್ರ ನಾ ಮಾತ್ರ ಎಷ್ಟೊದಿವಸ ಕೇಳಗ ಇಳಿಲೇಯಿಲ್ಲಾ. ಮ್ಯಾಲೆ ದಂಡಿ ಮ್ಯಾಲೆ ಕೂತು ಅರವಿ ಒಗಿತಿದ್ದೆ. ಇಲ್ಲೆ ಒಗಿಲಿಕ್ಕೆ ಬಂದವರ ನಡುವ ಭಾಳ ಮಜಾ ಮಜಾ ಹರಟಿ ನಡಿತಿರತಾವ. ಒಬ್ಬಾಕಿ ಅತ್ತಿನ್ನ ಬಯ್ದರ ಇನ್ನೊಬ್ಬಾಕಿ ಗಂಡನ್ನ ಬಯ್ತಿತಿರತಾಳ. ಈ ಕೆರಿಗೆ ಬರೊದಂದ್ರ ಅತ್ತಿಮನಿ ಸೊಸೆಯಂದ್ರಿಗೆ ಒಂಥರಾ ಟೈಮ್ ಪಾಸ್ ಪಿಕನಿಕ್ ಸ್ಪಾಟ ಇಧ್ಧಂಗ. ದುಷ್ಟ ಅತ್ತಿ ಕೈಯಾಗ ತಿವಿಸಿಕೊಂಡ ಸಾಕಾಗಿದ್ದ ಸೊಸೆಯಂದ್ರು ಸ್ವಲ್ಪ ಹೊತ್ತರ ಆರಾಮಾಗಿ ಇರಬೇಕಂತ ಇದ್ದಬಿದ್ದ ಅರಬಿ ಎಲ್ಲಾ ಬುಟ್ಟಿಗೆ ತುರುಕಿಕೊಂಡ್, ಒಗೆಯಾಣದ ನೆವಾ ಮಾಡಕೊಂಡ ಕೆರಿ ಕಡೆ ಹೊಂಟಬರತಾರ. ಒಂಥರಾ ತವರುಮನಿಗೆನ ಬಂಧಂಗ ಸಮಾಧಾನ ಪಡತಾರ. ಕದ್ದು ಮುಚ್ಚಿ ನಾಲ್ಕೈದ ರೂಪಾಯಿ ಮುಚ್ಚಿಟಗೊಂಡ, ಕೆರಿಗೆ ಬರೊ ಹಾದ್ಯಾಗ ಶೆಟ್ಟರ ಅಂಗಡ್ಯಾಗ ಪಾಪಡಿ ಚಕ್ಕಲಿ ತಗೊಂಡ ಬಂದ, ಕೆರಿ ದಂಡ್ಯಾಗ ವಾರಿಗಿ ಗೆಳತ್ಯಾರ ಜೋಡಿ ಕೂತು ತಿಂದು ನೀರ ಕುಡದು,ಒಬ್ಬರಿಗೊಬ್ಬರು ಚಾಷ್ಟಿ ಮಾಡಕೊತ, ಹರಟಿಹೊಡಕೊತ ಅರವಿ ಒಕ್ಕೊಂಡ ಹೋಗತಾರ.
ಈ ಕೆರಿ ಸುತ್ತ ಒಂದ ಕಥಿನ ಅದ ನಮ್ಮ ಅತ್ತಿಯವರು ಹೇಳತಿರ್ತಾರ. ಹಿಂದಕ ಅಂದ್ರ ನಮ್ಮ ಮಾವನವರ ಅಜ್ಜನ ಕಾಲದ ಸುದ್ದಿ ಇದು, ಊರ ಕೆರಿಗೆ ಎಷ್ಟ ಸಲಾ ಒಡ್ಡ ಕಟ್ಟಿದ್ರು ನಿಲ್ಲತಿದ್ದಿಲ್ಲಂತ. ಪ್ರತಿಸಲಾ ಒಡ್ಡ ಒಡದ ನೀರ ಹರದಹೋಗಿ ಕೆರಿ ಬರೆದ ಆಗತಿತ್ತಂತ. ಒಂದಿನಾ ಊರ ಹಿರಿಯಾರ ಎಲ್ಲಾ ದ್ಯಾಮವ್ವನಗುಡಿಗೆ ಬಂದ ಹಿಂಗ್ಯಾಕ ಆಗತದಂತ ಪ್ರಶ್ನೆ ಕೇಳಿದಾಗ, ಪೂಜಾರಿ ಮೈ ಮ್ಯಾಲೆ ದೇವಿ ಬಂದು, ” ಈ ಊರಾನ ಮಂದಿ ನೀರ ಕಾಣಬೇಕಂದ್ರ , ಗಂಗವ್ವ ಹಾರಾ(ಆಹಾರಾ,ಬಲಿ,) ಕೇಳಾಕತ್ತಾಳು, ತುಂಬಿದ ಕೊಡದ ಅಂದ್ರ ಜೋಡಿ ಜೀವದ ಮನಶ್ಯಾನ ಎಡಿ ಕೇಳಾಕತ್ತಾಳು. ಆಕಿ ಇಚ್ಛೆಧಾಂಗ ಒಬ್ಬ ಹೊಟ್ಟಿಲ್ಯಾಗಿದ್ದ ಹೆಣ್ಣ ಮಗಳನ ಒಯ್ದ ಅವ್ವನ ಉಡೆದಾಗ ಹಾಕ್ರಿ. ಅವ್ವ ಊರ ತಂಪ ಮಾಡತಾಳ “ಅಂತ ಹೆಳಿಕ್ಯಾತಂತ. ನಮ್ಮತ್ತಿಯವರು ಹೇಳಿಧಂಗ ಹಿಂದಕಿನ ಮಂದಿ ಧರ್ಮಕ್ಕ,ದೇವರಿಗೆ ಭಾಳ ಅಂಜತಿದ್ರಂತ. ಒಂದ ಸಲಾ ಊರಾಗಿನ ದೈವದ ಮಂದಿ ಎನರೆ ಮಾಡಬೇಕಂತ ನಿರ್ಧಾರ ಮಾಡಿದ್ರ ಮುಗಿತು ಎಲ್ಲಾರು ಅದಕ್ಕ ಬಧ್ಧರಾಗಿ ನಡಕೊತಿದ್ರಂತ. ದೈವದ ಮಾತ ನಡಿಸಿಕೊಡಲಿಕ್ಕೆ ಜೀವಾ ಬೇಕಾದ್ರು ಒತ್ತಿ ಇಡತಿದ್ರಂತ. ಈ ಕೆರಿ ಒಡ್ಡಿನ ವಿಷಯದಾಗನು ಹಿಂಗಾ ಆಗಿತ್ತಂತ. ಆವಾಗನ ಕಮತರ ಹೆಣ್ಣಮಗಳೊಬ್ಬಾಕಿ ತುಂಬಿದ ಬಸರಹೆಣ್ಣಮಗಳು ಬಾಣಂತನಕ್ಕಂತ ತವರಮನಿಗೆ ಬಂದಿದ್ಲಂತ. ಅಕಿನ್ನ ಗಂಗವ್ವಗ ಹಾರಾ ಕೊಡಬೇಕಂತ ಮುಕಾಟಲೆ ಎಲ್ಲಾ ತಯಾರಿ ಮಾಡಕೊಂಡ, ಕೆರಿಯೊಳಗ ಕಲ್ಲಿಲೆ ಒಂದ ಸಣ್ಣ ಖೋಲಿಹಂಗ ಕಟ್ಟಿಸಿ,ಅಲ್ಲೆ ನೀರು,ಕಾಳು ಕಡಿ ಅಕ್ಕಿ, ದಿನಾವಶ್ಯಕ ಎನ ಸಾಮಾನ ಬೇಕೊ ಅದನ್ನೆಲ್ಲಾ ಇಟ್ಟು ಒಂದ ದಿನಾ ಮುಹುರ್ತಾ ತಗಸಿ, ತುಂಬಿದ ಬಸರಹೆಣ್ಣಮಗಳನ ಗಂಗವ್ವಗ ಪೂಜೆ ಮಾಡಬೇಂಕತ ಯವ್ವಾ, ಅಂದ್ರ ಊರತಂಪಾಗತೆತಿ, ಗಂಗವ್ವ ಊರಿಗೆ ನೀರ ಊಣಸತಾಳು, ಪೂಣ್ಯೆದ ಕೆಲಸ ತಂಗಿ ನೀ ಹೋಗಿ ಪೂಜೆ ಮಾಡ ಎಲ್ಲಾರಗೂ ಛೋಲೊ ಆಗ್ತೇತಿ ಅಂತ ಆ ಬಸರಹೆಣ್ಣಮಗಳನ ಆ ತೆಗ್ಗಿನ ಖೋಲ್ಯಾಗ ಇಳಿಸಿ ಮ್ಯಾಲೆ ಕಲ್ಲ ಮುಚ್ಚಿಬಿಟ್ರಂತ. ಮುಂದ ಎಷ್ಟೊ ದಿನಾ ಹೆಣ್ಣ ಮಗಳ ಅಳೊದು, ಕೂಸ ಅಳೊಧ್ವನಿ ಕೇಳ್ಸತಿತ್ತಂತ. ಕಾಳು ಕಡಿ ಕೇರೊದು,ಕುಟ್ಟೊದು,ಬಿಸೊ ಸಪ್ಪಳಾ ಕೇಳಸತಿತ್ತಂತ. ಕೂಸಿನ ಆಡಸೊ ಹಾಡು ಹಸಿ ಕೇಳಸತಿದ್ವಂತ ಕೆರಿ ಒಂಡಿ ಮ್ಯಾಲೆ ಹಾಸಿ ಹೊಲಕ್ಕ ಹೋಗೊ ಮಂದಿ ಹೇಳತಿದ್ರಂತ.
ಆದ್ರ ಗಂಗವ್ವ ಲೋಕಕ್ಕೆಲ್ಲಾ ತಾಯಿ ಅಂತ ಪೂಜಾ ಮಾಡತಾರ, ಮತ್ತ ಅಧೆಂಗ ಒಬ್ಬ ತಾಯಿ ತನ್ನ ಮಕ್ಕಳನ ಅದು ಒಂದ ಜೀವಾ ತನ್ನಲ್ಲೆ ತುಂಬಕೊಂಡಿರೊ ಜೀವದ ಬಲಿ ಕೇಳತಾಳ. ಯಾವ ತಾಯಿ ತನ್ನ ಮಕ್ಕಳ ಸಾವು ಬಯಸತಾಳ. ದೇವರು ಅನಿಸಿಕೊಂಡವರು ಹೆಂಗ ಹಿಂಸಾಚಾರಕ್ಕ ಪ್ರೇರೆಪಿಸತಾರ. ಅಥವಾ ದೇವರ ಹೆಸರಲೇ ತಮ್ಮ ಪ್ರತಿಷ್ಠೆ ಹೆಚ್ಚ ಮಾಡಕೊಳ್ಳಿಕ್ಕೆ ಮಂದಿ ಹೂಡಿದ ನಾಟಕನೊ ಒಂದು ತಿಳಿಯುದಿಲ್ಲಾ. ಅಲ್ಲಾ ಒಬ್ಬ ಹೆಣ್ಣಮಗಳಿಗೆ ತಾನು ತಾಯಿ ಆಗೊದ ಅಂದ್ರ ಎಷ್ಟ ಸಂಭ್ರಮದ ಸಂಗತಿ ಇರತದ. ಅದರಾಗು ಚೊಚ್ಚಲ ಬಸರ ಅಂದ್ರ ಆಕಿ ಎಷ್ಟ ಛಂದ ಛಂದ ಕನಸ ಕಂಡಿರಬಾರದು.ಆ ಕತ್ತಲಿ ಕ್ವಾಣ್ಯಾಗ ತನ್ನ ಕೂಸಿಗೆ ಜನ್ಮ ಕೊಟ್ಟ ಆ ತಾಯಿ ತನ್ನ ಜೀವನ ಸಂಗಾತಿನ್ನ ನೆನಿಸ್ಕೊಂಡ ಅದೆಷ್ಟ ನೋವ ಅನುಭಸಿರಬೇಕು ಯಾಕಂದ್ರ ಹೆಣ್ಣಿಗೆ ಇಂಥಾ ತಾಯ್ತನದ ಖುಷಿನ ತನ್ನ ಗಂಡನ ಜೋಡಿನ ಹಂಚ್ಕೊಬೇಕಂತ ಭಾಳ ಆಶಾ ಇರತದ. ತನ್ನ ಕರುಳ ಬಳ್ಳಿನ್ನ ನೋಡಿ ಆದ ಖುಷಿನ ತನ್ನವರ ಜೋಡಿ ಹಂಚ್ಕೊಬೇಕಂತ ಅನಿಸಿರಬಹುದೇನೊ ಆಕಿಗೆ ಅಂಥಾ ಹೊತ್ತಿನ್ಯಾಗ ಒಬ್ಬಂಟಿಗ್ಯಾಗಿ ಆಕಿ ಅನುಭೊಗಿಸಿದ ಸಂಕಟಾ ಆ ತಾಯಿ ಗಂಗವ್ವಗ ಅರ್ಥ ಆಗಿರಲಿಕ್ಕಿಲ್ಲೇನು.ಕಗ್ಗತ್ಲ್ಯಾಗ ತಾನು ಸಾಯಬೇಕಾದ್ರ, ತನ್ನ ಜೋಡಿನ ತನ್ನ ಕೂಸು ವಿಲಿ ವಿಲಿ ಒದ್ಯಾಡಿ ಸಾಯೋದನ್ನ ನೋಡಿ ಆ ತಾಯಿ ಕರಳು ಅತ್ತು ಅತ್ತು ತನ್ನವರನ್ನ ಶ್ರಾಪಿಸಿರಬೇಕು.ಆ ಹೆಣ್ಣಿನ ನಿರಾಸೆಯ ಕಣ್ಣಿರು ಆ ದೇವರಿಗೆ ಕಾಣಿಸಿರಂಗಿಲ್ಲೇನು? ತನ್ನ ಹೊಟ್ಟಿಯೊಂದ ತುಂಬತು ಅಂತ ಹೇಳಿ ಆತಾಯಿ ಸುಮ್ನ ಕೂತಬಿಟ್ಳೇನೊ ಆ ತಾಯಿ. ಇಷ್ಟ ಸ್ವಾರ್ಥಿ ಆದ್ರ ದೇವರಿಗೆ ಮತ್ತ ಮನಶ್ಯಾರಿಗೆ ಫರಖರ ಎನುಳಿತು. ಒಂದ ವಿಚಿತ್ರ ಅಂದ್ರ ಆವತ್ತ ಕೆರಿಗೆ ಹಾಕಿದ್ದ ಒಡ್ಡು ಇವತ್ತಿನ ತನಕ ಒಡದಿಲ್ಲಂತ,ಮತ್ತ ಕೇರಿ ನೀರು ಬತ್ತಿಲ್ಲಂತ ನಮ್ಮ ಅತ್ತಿಯವರು ಹೇಳತಿದ್ರು. ಇದನ್ನೆಲ್ಲಾ ಕೇಳಿದ್ರ ಒಂದ ಸಲಾ ನಂಬಬೇಕ ಅನಿಸ್ತದ. ಆದ್ರ ಒಂದ ಜೀವದ ಕಣ್ಣಿರಿನ ಪಾಯಾದ ಮ್ಯಾಲೆ ಜನರ ಹಿತಾ ಅದ ಅಂದ್ರ ನಂಬಲಿಕ್ಕೆ ಮನಃಸಾಕ್ಷಿ ಒಪ್ಪುದಿಲ್ಲಾ.
ಹಿಂಗ ಹಿಂದಿನ ನೆನಪಿನ ಸಂತ್ಯಾಗಕೂತಿದ್ದೆ, ಹೆಂಗ ಲಗೂ ಊರು ಬಂತು ಗೊತ್ತಾಗಲೇ ಇಲ್ಲಾ. ಆಟೊದಾಗ ಮನಿಗೆ ಹೊಂಟಾಗ ಹೊರಗ ಹಣಿಕಿ ಹಾಕಿ ನೋಡಿದಾಗ ಅನಿಸಿತ್ತು ಸ್ವಲ್ಪ ಊರು ಬದಲಾಗೆದಂತ. ಎನೊ ಒಂಥರಾ ಖುಷಿ ಆತು. ನಾನು ಮದವಿ ಮಾಡಿಕೊಂಡ ಹೊಸಾ ಜೀವನಾ ನಡಸಲಿಕ್ಕೆ ಕಾಲಿಟ್ಟ ಊರು ಅಂತ ಒಂದ ಅಭಿಮಾನದ ಎಳಿಯೊಂದ ಮನಸಿನ್ಯಾಗ ರಂಗೋಲಿ ಹಾಕಿತ್ತು. ಭಾಳ ದಿನದ ಮ್ಯಾಲೆ ಊರಿಗೆ ಬಂದಿದ್ದೆ ಓಣ್ಯಾಗ ಎಲ್ಲಾರು ಮಾತಡ್ಸೊವರ್ ಮತ್ತ. ಎಲ್ಲಾರಕಿಂತಾ ಹೆಚ್ಚು ಮನಿ ಎದುರಿಗಿನ್ ಗುಡವ್ವ ಮುದಕಿಗೆ ನಾ ಬಂದದ್ದ ಭಾಳ ಖುಷಿ ಆಗಿತ್ತು. ನನ್ನ ನೋಡಿದಕೂಡಲೆ ” ಯವ್ವಾ ನನ್ನ ಮಗಳ ಏಸ ದಿನಾ ಆತ ಬೆ ನಿನ್ನ ಭೇಟ್ಟಿ ಆಗಿ, ಬೇಷಿ ಅದಿಯೇನ ಬೆ” ಅಂತ ಅಂತಃಕರಣದಿಂದ ಮಾತಾಡ್ಸಿದ್ಲು. ಗುಡವ್ವ ನಮ್ಮ ಓಣಿಯ ಹಿರೆ ತಲಿ.ಮುಂಝಾನೆ ಎದ್ದ ಕೂಡಲೆ ಕಟ್ಟಿ ಮ್ಯಾಲೆ ಪಟ್ಟಾ ಕೂತಬಿಡತಾಳ. ಮುಂಝಾನೆ ಚಹಾದಿಂದ ಹಿಡಕೊಂಡ ರಾತ್ರಿ ಊಟಾನು ಕಟ್ಟಿ ಮ್ಯಾಲೆ ಆಗಬೇಕು. ಹೋಗೊವರನ್ನ ಬರೊವರನ್ನ ಮಾತಾಡಿಸ್ಕೊತ ಈಡಿ ದಿನಾ ಕಟ್ಟಿ ಮ್ಯಾಲೆನಾ ಝಾಂಡಾ ಊರಿ ಕೂತಬಿಡಾಕಿ. ಮಂದಿ ಆಕಿನ್ನ ಮಾತಾಡ್ಸೊಕಿಂತಾ ಜಾಸ್ತಿ ಕಾಡ್ಸೊದ ಭಾಳ ಆಗತಿತ್ತು. ತನ್ನ ಕಾಡಸೊ ಹುಡುಗುರನ್ನ ” ಜಿಟ್ಟ್ಯಾಗೋಳ , ಜೋಕಮಾರಗೋಳ ಹೋಗ್ರಿ” ಅಂತ ಬೈಕೊತ , ಸಿಟ್ಟ ಬಂಧವರಂಘ ನಕಲಿ ಮಾಡ್ಕೋತ ಇಡಿ ದಿನಾ ಹೊತ್ತ ಕಳಿತಾಳ. ಗುಡವ್ವನ ಮೂರ ಮಂದಿ ಮಕ್ಕಳನ್ಯಾಗ ಇಬ್ಬರು ಹೆಣ್ಣಮಕ್ಕಳ ಮದವಿ ಮಾಡಿಕೊಟ್ಟಿದ್ಲು, ಒಬ್ಬ ಮಗನ್ನ ಮದವಿ ಮಾಡಿ ಸೊಸಿ ಕಡೆ ಖಡಕ್ಕ ಸೇವಾ ಮಾಡಿಸ್ಕೊತ ಮಮ್ಮಕ್ಕಳ ಜೋಡಿ ಆರಾಮ ನಿಶ್ಚಿಂತಿಯಿಂದ ಜೀವನಾ ಕಳಿತಿದ್ಲು.
ಭಾಳ ದಿವಸದ ಮ್ಯಾಲೆ ಅತ್ತಿಯವರ ಕೈ ಅಡಗಿ ಊಟಾ ಮಾಡಿದ್ದೆ. ಒಂದ ನಾಲ್ಕ ತುತ್ತು ಜಾಸ್ತಿನ ಊಟಾ ಮಾಡಿದ್ದೆ. ಅವರ ಕೈ ಅಡಗಿ ರುಚಿನ ಹಂಗಿರತದ. ಹೊಟ್ಟಿ ಭಾರ ಆಗಿ ಕಣ್ಣ ಭಾರ ಆಗಿ ಒಂದ ಹತ್ತ ನಿಮಿಷ ಮಲ್ಕೊಂಡ್ರಾತು ಅಂತ ಮಲ್ಕೊಂಡೆ ಹತ್ತ ನಿಮಿಷ ಹೋಗಿ ಎರಡ ತಾಸ ಬಕ್ಕಳ ನಿದ್ದಿ ಹೊಡದಿದ್ದೆ.
ಟೈಮ್ ಸಂಜಿ ೪ ಆಗಲಿಕ್ಕೆ ಬಂದಿತ್ತು ಹೊರಗ ಬಂದೆ ಯಥಾ ಸ್ಥಿತಿ ಗುಡವ್ವ ಕಟ್ಟಿಮ್ಯಾಲೆ ಕೂತಿದ್ಲು. ನನ್ನ ನೋಡಿ ” ಬಾರ ಬೇ ಮಗಳ, ನಿದ್ದಿ ಆತಾ ಅಂತ ಕರದ್ಲು.” ಅದಕ್ಕ ನಾ ” ಬೇ ನೀ ಇನ್ನು ಈ ಕಟ್ಟಿ ಬಿಟ್ಟಿಲ್ಲೆನ್” ಅಂತ ಕೇಳಿದ್ದಕ್ಕ ಆಕಿ ” ಯವ್ವಾ ಮಗಳ ದುಡಿಯೊ ಕಾಲಕ್ಕ ಒಲಿ ಮುಂದ, ಹೊಲದಾಗ ರಗಡ ದುಡದೇನಿ, ಈಗ ಸೊಸಿ ಬಂದಾಳು, ಆಕಿ ಬಾಳೆವು ಆಕಿ ಮಾಡಕೊಂಡ ಹೋಗತಾಳು. ನಂಗಾ ಕುಂತಲ್ಲೆ ಊಣ್ಣಾಕ ನೀಡತಾಳು ಸಾಕ. ನಂದೇನ ಐತಿಬೇ, ಅಲ್ಲಾ ಯಾವಾಗ ಕರಿತಾನು ಆವಾಗ ಸೀರಿ ಝಾಡಿಸಿ ಎದ್ದ ಆಂವನ ಹಿಂದ ಹೋಗೊದೈತಿ. ನನ್ನ ಜೀವ ಇರೂ ಮಟಾ,ನಂಗ ಈ ಕಟ್ಟಿಗೆ ಬಿಡಲಾರದ ಗಂಟ ನೋಡ ತಂಗಿ ” ಅಂದ್ಲು. ಇನ್ನೆನ ಆಕಿ ದೇವರ ಹಾದ್ಯಾಗ ಇದ್ದಾನ, ಹೋಗೊದ ಒಂದ ಬಾಕಿ ಅದ, ಅಂತ ಎಲ್ಲಾ ತಯಾರಿಯೊಳ್ಗ ಕೂತಂಗಿತ್ತು ಅಕಿ ಮಾತು. ಆಕಿ ಮಾತ ಕೇಳಿ ಒಂಥರಾ ಖುಷಿನು ಆತು, ಬಡತನದಾಗ ಜೀವನಾ ಕಳದ್ರು ಎಷ್ಟ ತೄಪ್ತಿ ಅದ ಆಕಿ ಮುಖದಾಗ ಅನಿಸ್ತು. ಹಂಗ ಅದು ಇದು ಊರಿನ ಸುದ್ದಿ ಮಾತಾಡಕೊತ ಕೂತೆ ಆಕಿ ಜೋಡಿ ಕೂತಾಗ ಆಕಿ ಸೊಸಿ ತನ್ನ ಸಣ್ಣ ಮಗಗ ಜಬರಸ್ಲಿಕತ್ತಿದ್ಲು,” ಕೆರಿ ತಾವಲ್ಲೆ ಹರಗ್ಯಾಡಾಕ ಹೋಗಬ್ಯಾಡಾ ಜೋಕಮಾರಾ, ನೋಡ ಆ ಬಾಬ್ಯಾನ್ನ ಹಿಡಕೊಂಡ ಹೋದ್ರಲ್ಲ ಹಂಗ ನಿನ್ನು ಹಿಡಕೊಂಡ ಹೋಗತಾರ.” ಅಂತ ಅಂದ್ಲು. ಆವಾಗನ ನಂಗ ಆ ಬಾಬ್ಯಾ ನೆನಪಾಗಿದ್ದು. ಆಂವಂದು ಊರು ಯಾವದು ಎಲ್ಲಿಂದ ಬಂದಾ ಯಾರ ಮಗಾ ಅಂತ ಯಾರಿಗೂ ಗೊತ್ತಿರಲಿಲ್ಲಾ. ಒಂದಿನಾ ಅಚಾನಕ ಒಂದ ಹತ್ತ, ಹನ್ನೊಂದ ವರ್ಷ ಇರಬೇಕ ಆ ಹುಡಗ್ಗ ಓಣ್ಯಾಗ ಬಂದ ಸೇರಕೊಂಡ. ಒಂಥರಾ ಹುಚ್ಚರಂಘ ಇತ್ತು ಆ ಹುಡಗಾ. ಕನ್ನಡ ಮಾತಾಡಲಿಕ್ಕೆ ಬರತಿದ್ದಿಲ್ಲಾ, ಹಿಂದಿ ಮಾತಾಡತಿದ್ದಾ. ಯಾರೊ ಹೇಳಿದ್ರು ಈ ಹುಡಗಾ ಮುಂಬೈ ನ್ಯಾಂವಾ. ಹೆಸರು ಬಾಬು ಅಂತ, ಹುಚ್ಚ ಇದ್ದಾನಂಥೇಳಿ ಇವನ ಅಪ್ಪಾ ಅಮ್ಮಾನ ಕರಕೊಂಡ ಬಂದ ಬಿಟ್ಟಹೋಗ್ಯಾರಂತ.” ಹಿಂಗ ಎನೆನೊ ಪುಕಾರ ಹುಟ್ಟಗೊಂಡ್ವು ಆ ಹುಡಗನ ಸುತ್ತ. ಪರದೇಶಿ ಹುಡಗಾ ಅಂತ ಒಬ್ಬೊಬ್ಬರ ಊಟಾ, ನಾಷ್ಟಾ, ಕೋಡಲಿಕ್ಕೆ ಶೂರು ಮಾಡಿದ್ರು. ಯಾರ್ಯಾರ ಅನ್ನಾ,ನೀರಿನ ೠಣಾ ಎಲ್ಲೆಲ್ಲ ಇರತದೊ ಯಾರಿಗೆ ಗೊತ್ತ. ಹಿಂಗ ಬಾಬು ನೋಡ ನೋಡೊದ್ರಾಗ ನಮ್ಮವರೊಳಗೊಬ್ಬ ಆಗಿ ಹೋದಾ. ದರ್ಗಾದ ಓಣ್ಯಾಗನ ಇರತಿದ್ದಾ. ಅಲ್ಲೆ ಯಾರದರ ಮನ್ಯಾಗ ತಿಂದುಂಡ, ದರ್ಗಾದ ಕಟ್ಟಿಗೆ ಮಲ್ಕೊತಿದ್ದಾ. ಯಾರೊ ಪಾಪ ಅಂಥೇಳಿ ಹೊಚಗೊಳಿಕ್ಕೆ ಹಳೆದ ಒಂದ ಕಂಬಳಿ ಕೊಟ್ಟಿದ್ರು.ನಮ್ಮನ್ಯಾಗ ನಮ್ಮತ್ತಿಯವರು ಹಾಸಿಗೊಳ್ಳಿಕ್ಕೆ ಚಾಪಿ, ಹಳೆದ ಒಂದ ಜಮಖಾನಿ ಕೊಟ್ಟಿದ್ರು. ಮತ್ತ್ಯಾರೊ ತಮ್ಮ ಮಕ್ಕಳ ಹಾಕ್ಕೊಂಡ ಬಿಟ್ಟಿದ್ದ ಅಂಗಿ ಅರವಿ ಕೊಟ್ಟಿದ್ರು. ಹಿಂಗ ನಮ್ಮ ಓಣ್ಯಾಗ ಬಾಬ್ಯಾನ ಜೀವನಾ ಶೂರು ಆತು. ಒಂದ ವಿಚಿತ್ರ ಅಂದ್ರ ಈ ಬಾಬು ಯಾರೆ ಗಂಡಸರು ಎದುರಿಗೆ ಭೆಟ್ಟಿ ಆದ್ರ ಒಂದ ರೂಪಾಯಿ ಇಸ್ಕೊತಿದ್ದಾ. ಪಾಪ ಪರ್ದೇಶಿ ಹುಡಗಾ ಅಂತ ಯಾರರ ಹತ್ತು ರೂಪಾಯಿ ನೋಟ ಕೊಟ್ರ ತಗೊತಿದ್ದಿಲ್ಲಾ. ಒಂದ ರೂಪಾಯಿನ ಕಾಯಿನ್ ಮಾತ್ರ ಇಸ್ಕೊತಿದ್ದಾ. ಹಿಂಗ್ಯಾಕ ಮಾಡತಾನಂತ ಪರಿಕ್ಷಾ ಮಾಡಿ ನೋಡಿದ್ರ ಗೊತ್ತಾತು ಆಂವಾ ಕಾಯಿನ್ ಬಾಕ್ಸಿಗೆ ಹೋಗಿ ಒಂದ್ ರೂಪಾಯಿ ಹಾಕಿ ಯಾರಿಗೊ ಫೋನ್ ಮಾಡತಿದ್ದಾ ಅಂತ. ಇದರ ಸಲವಾಗಿ ಮತ್ತೊಂದ ಪುಕಾರ ಹುಟಗೊಂಡತು, ಅದೇನಂದ್ರ ಬಾಬು ಹುಚ್ಚ ಅಲ್ಲಾ, ಆಂವಾ ಯಾವದೊ ಭಯೊತ್ಪಾದಕ ಗ್ಯಾಂಗಿನಾಂವಾ, ಅದಕ್ಕ ಯಾರ್ಯಾರಿಗೊ ಫೋನ್ ಮಾಡತಾನ,ಸುಮ್ನ ಹುಚ್ಚರಂಘ ನಾಟಕ ಮಾಡಲಿಕತ್ತಾನ.ಅಂತ ಮಂದಿ ಮಾತಾಡಲಿಕತ್ರು. ಆಂವನ್ನ ನಿಂದರಿಸಿ ಸುದ್ದಿ ತಿಳಕೊಬೇಕಂತ ಕೆದರಿ ಕೆದರಿ ಮಾತಾಡಸಿ ಕಾರಬಾರ ಮಾಡಲಿಕತ್ರು. ಪಾಪ ಆ ಹುಡಗಾ ಎನರ ಗೊತ್ತಿದ್ರ ಹೇಳ್ಬೆಕ. ಮಾತಾಡ್ಸಿದವರ ಮಾರಿ ಮಿಕಿ ಮಿಕಿ ನೋಡ್ಕೋತ ಸುಮ್ನ ಹೋಗತಿದ್ದಾ. ಇದಾದಿಂದ ದರ್ಗಾದ ಓಣ್ಯಾಗ ಬಾಬು ಗ ಭಾಳ ಕಿರಿ ಕಿರಿ ಶೂರು ಆತು. ಸಣ್ಣವರಿಂದ ಹಿಡಕೊಂಡ, ಹರೇದ ಹುಡುಗುರ ಸುಧ್ಧಾ ಆಂವಗ ಕಾಡೋದು, ಹೊಡಿಯೋದು, ಕಲ್ಲ ತಗೊಂಡ ಬಡಿಯೋದ ಮಾಡಲಿಕತ್ತಿದ್ರು. ಇಂಥಾದ್ರಾಗ ಓಣ್ಯಾಗಿನ ನಾಯಿ ಒಂದ ಆಂವನ ಕಾಲಿಗೆ ಬಾಯಿಹಾಕಿ ಕಡದಿತ್ತು. ದಿನಾ ದಿನಾ ಗಾಯಾ ಹಸಿ ಹಸಿಯಾಗಿ ಸೋರಲಿಕತ್ತಿತ್ತು. ಅಗಸಿ ಬಾಗಲ ಕಡೆ ಮಲ್ಕೊಂಡಾವನ್ನ ನೋಡಿ ಅಲ್ಲೆ ಮುಲ್ಲಾರ ಓಣ್ಯಾಗಿನ ಹುಡುಗುರು ಸರ್ಕಾರಿ ದವಾಖಾನಿಗೆ ಕರಕೊಂಡ ಹೋಗಿ ಇಂಜೆಕ್ಷನ್ ಮಾಡಿಸಿ, ಗಾಯಕ್ಕ ಡ್ರೆಸ್ಸಿಂಗ್ ಮಾಡಿಸಿಕೊಂಡು, ಗುಳಗಿ ಕೊಡಿಸಿಕೊಂಡ ಬಂದ್ರು. ಅಮ್ಯಾಲಿಂದ ಬಾಬ್ಯಾ ದರ್ಗಾದ ಕಡೆ ಬರಲೇ ಇಲ್ಲಾ. ಅಲ್ಲೆ ಮುಲ್ಲಾರ ಓಣ್ಯಾಗ ಆಂವನ್ನ ಭಾಳ ಛಂದ ನೋಡಕೊತಿದ್ರಂತ, ದಿನಾ ಒಬ್ಬೊಬ್ಬರ ಮನ್ಯಾಗ ಊಟಾ ನಾಷ್ಟಾ ಆಗತಿತ್ತಂತ, ಓಣ್ಯಾಗಿನ ಹೆಣ್ಣಮಕ್ಕಳು ದಿನಾ ಆಂವನ್ನ ಅರವಿ ಒಗದ ಕೋಡತಿದ್ರಂತ ಹಿಂಗೆಲ್ಲಾ ಸುದ್ದಿ ಕೇಳಿಬರತಿದ್ವು. ಪರದೇಶಿ ಹುಡಗಾ ಎಲ್ಲೆರ ಆರಾಮ ಇದ್ರ ಸಾಕು ಅಂತ ಅನ್ಕೊತಿದ್ವಿ.
ಬಾಬುನ ಗುಂಗಿನಿಂದ ಹೊರಗ ಬಂದು ಗುಡವ್ವಗ ಕೇಳಿದೆ” ಎಲ್ಲಿ ಬೇ ಬಾಬು ಕಾಣವಲ್ಲಾ.” ಅಂದೆ ಅದಕ್ಕ ಆಕಿ ” ಇನ್ನೆಲ್ಲಿ ಬಾಬು ಬೇ ಮಗಳ, ಹಾರಗೆಡವಲಿ, ಯಾ ಪಾಪಿಗೊಳ ಎನ ಯವ್ವಾ ಪರದೇಶಿ ಹುಡಗನ್ನ ಎಳಕೊಂಡ ಹೋಗಿ ಕೆರಿಗೆ ಹಾರಾ ಕೊಟ್ಟಾರಂತ, ಅವರ ಹೆಣಕ್ಕ ಹೆಟ್ಟಗಾಲ ಎರಸಲಿ, ಅವರ ಹೆಂಡತಿ ರಂಡ್ಯಾಗಲಿ, ಅವರ ವಂಸ ನಿರ್ವಂಸ ಆಗಲಿ” ಅಂತ ಶಾಪಾ ಹಾಕಲಿಕ್ಕೆ ಶೂರು ಮಾಡಿದ್ಲು. ಅದಕ್ಕ ನಾ ” ಯಾಕ ಬೇ ಎನಾತು, ಅಂತ ಘಾಬರ್ಯಾಗಿ ಕೇಳಿದೆ. ಅದಕ್ಕ ಆಕಿ ” ಎನ ಹೇಳಲ್ಯ ಮಗಳ ಕೆರ್ಯಾಗ ಎನೊ ಟ್ಯಾಂಕೆವ ಕಟ್ಟಸಾಕತ್ತಾರಂತ, ಎಷ್ಟ ಕಟ್ಟಿದ್ರು ಪಾಯೆವ ನಿಂದ್ರಲ್ಲಾಗಿತ್ತಂತ, ಯಾರೊ ದೊಡ್ಡ ಮನಶ್ಯಾ ಕೆರಿ ಮನಷ್ಯಾನ ಹಾರಾ ಬೇಡಾಕತ್ತೇತಿ, ಅಂದ್ರಂತ. ಅದಕ್ಕ ರೊಕ್ಕಕ್ಕ ಆಶೆ ಮಾಡಿ ಯಾವೊ ಹೊಲಸ ನನ್ನ ಹಾಟ್ಯಾಗೊಳ ನಡರಾತ್ರ್ಯಾಗ ಆ ಬಾಬ್ಯಾನ್ನ ಎಳಕೊಂಡ ಹೋಗಿ ಕೆರಿಗೆ ಹಾರಾ ಕೊಟ್ಟ ಬಂದಾರು” ಅಂದಳು.
ಆಕಿ ಮಾತಿನ್ಯಾಗ ಈ ಘಟನೆಯ ವಿರುಧ್ಧ ಇದ್ದಾಳಂತ ಸ್ಪಷ್ಟ ಗೊತ್ತಾಗತಿತ್ತು. ಮತ್ತ ಆಕಿನ ಅಂದ್ಲು ” ಅಲ್ಲ ಬೇ ತಮ್ಮ ಮಕ್ಕಳಾಗಿದ್ರ ಹಿಂಗ ಮಾಡತಿದ್ರೆನ, ಪರದೇಶಿ ಕೂಸ ಯಾರ ಹೇಳೊವರ ಕೇಳೊವರ ಇಲ್ಲಂತ ಹಿಂಗ ಅನ್ನೆ (ಅನ್ಯಾಯ) ಮಾಡೊದ ಎನ. ಮ್ಯಾಲ ಕುಂತ ಅಲ್ಲಾ ನೋಡತಿರತಾನ ಪಾಪಾ ಪುಣ್ಯೆವ ಎಲ್ಲಾ. ಇಟ ದಿನಾ ಕೆರ್ಯಾಗ ಟ್ಯಾಂಕೆವ ನ ಇತ್ತ ಎನ ತಂಗಿ. ಈ ಊರಾಗೆನ ಯಾರು ಬಾಳೆವ ಮಾಡಿಲ್ಲೆನ. ಹಿಂದ ಹ್ಯಾಂಗ ಇತ್ತ ಈಗೂ ಹಂಗ ನಡಿತಿತ್ತ. ಪರದೇಶಿ ಕೂಸಿನ್ನ ಜೀವಾ ನಿಗರಿಟ್ಟರಲ್ಲ” ಅಂತ ಗೋಳ್ಯಾಡಿದ್ಲು.
ನಕಲಿ ಮಾಲ ಕಲಸಿ ಕಟ್ಟಿದ್ರ ಮನಿಮುಂದಿನ ಸಣ್ಣ ಕಟ್ಟಿನು ನಿಂದ್ರುದಿಲ್ಲಾ ಅಂಥಾದ್ರಾಗ ದೆವ್ವನಂಥಾ ಟ್ಯಾಂಕೆವ ಎನ ಮಣ್ಣ ನಿಂದರತೇತಿ. ಆಂವದ ಇಲ್ಲೆ ಉಸರ ಬಿಡೊದ ಇತ್ತೆನ ಅನ್ಸ್ತೈತಿ ಅದಕ್ಕ ಮಾಯೆವು ಇಲ್ಲಿಮಟಾ ಎಳಕೊಂಡ ತಂದಿತ್ತ ಆಂವನ್ನ ಅಂದು, ಕಟ್ಟಿಗೆ ಆನಕೊಂಡ ಉಸ್ಸಂತ ಕೂತಳು. ಆಕಿ ಹೇಳಿದ್ದ ಕೇಳಿ ನಂಗ ಗೊತ್ತಿಲ್ಲದ ನಾನು ನಿಟ್ಟುಸಿರ ಹಾಕಲಿಕತ್ತಿದ್ದೆ. ಬಾಬು ನ ಭೂಮಿ ೠಣಾ ಇಲ್ಲೆ ಇತ್ತು ಅನಿಸ್ತು. ಆದ್ರ ಹಿಂದಿನ ಕಾಲದಾಕಿ ಆದ ಗುಡವ್ವನ ಸುಶಿಕ್ಷಿತ ವಿಚಾರ ನೋಡಿ ಆಶ್ಚರ್ಯ ಅನಿಸ್ತು.
ಯಾಕೊ ಬಾಬುನ್ನ ಸುದ್ದಿ ಕೇಳಿ ಭಾಳ ಬ್ಯಾಸರಾಗಿತ್ತು. ಸಂಜಿಮುಂದ ಹಂಗ ಕೆರಿ ಕಡೆ ವಾಕಿಂಗ ಹೋಗಿ ಬಂದ್ರಾತ ಅಂತ ಹೊಂಟೆ. ವಿಷಾಲ ಕೆರಿ ನಡುವ ದೊಡ್ಡದೊಂದ ಟ್ಯಾಂಕ ಕಟ್ಟಿಸಿದ್ರು.. ಕೆನಾಲ ನಿಂದ ನೀರ ಬಿಟ್ಟಿದ್ರಂತ ಅನಿಸ್ತದ ಕೆರಿ ತುಂಬಿತ್ತು. ಮುಳಗೊ ಸೂರ್ಯಾನ ಕಿರಣ ನೀರಿನ ಮ್ಯಾಲೆ ರಂಗೊಲಿ ಹಾಕಲಿಕತ್ತಿದ್ವು. ಕೆರಿ ದಂಡಿಯಿಂದ ಟ್ಯಾಂಕಿಗೆ ಹೋಗಲಿಕ್ಕೆ ಸಣ್ಣದೊಂದ ಸೇತುವೆ ಹಂಗ ಕಟ್ಟಿದ್ರು.. ಹಂಗ ಅದರ ಮ್ಯಾಲೆ ನಡಕೊತ ಹೋದೆ, ದೂರ ದಿಂದ ಕಮತರ ಹೆಣ್ಣಮಗಳನ ಹಾಕಿ ಮುಚ್ಚಿದ್ದ ಕಟ್ಟಿ ಕಾಣಿಸ್ತು. ಹಂಗ ಗುಡವ್ವ ಮುದಕಿ ಹೇಳಿದ್ದ ಬಾಬುನ್ನ ಕಥಿನು ನೆನಪಾತು. ಹಂಗ ಟ್ಯಾಂಕಿನ ಕಡೆ ದಿಟ್ಟಿಸಿ ನೋಡಿದೆ, ಮೂರು ಜೀವಗಳ ಕಣ್ಣಿರಿನ, ನಿಟ್ಟುಸಿರಿನ ಪಾಯಾದ ಮ್ಯಾಲೆ ನಿಂತಿದ್ದ ಆ ಟ್ಯಾಂಕು ಯಾಕೊ ಖೋಕಲಾ ಅನಿಸ್ತು. ಒಳಗಿಂದ ಗೆದ್ದಲ ಹತ್ತಿ ರೋಗಿಷ್ಟ ಆದಂಥಾ ಮರಾ ಯಾವಾಗ ಉರಳಿ ಬೀಳ್ತದೊ ಹೇಳಲಿಕ್ಕಾಗುದಿಲ್ಲಾ ಅನ್ನೊಹಂಗ ನಿಂತಿತ್ತು. ಹಾಂಗ ಸೂರ್ಯಾ ಮುಳಗಿ ಮಬ್ಬ ಕತ್ತಲು ಕವಿಲಿಕತ್ತಿತ್ತು, ಸೂಂಯ್ ಸೂಂಯ್ ಮಂದ ಘಾಳಿ ಒಳಗ ಬಾಬು ಅತ್ತಂಥಾ ಧ್ವನಿ ಕೆಳಿಧಂಗ ಅನಿಸ್ತಿತ್ತು, ಕಮತರ ಹೆಣ್ಣಮಗಳು ಕೂಸಿಗೆ ಜೋಗಳಾ ಹಾಡಿಧಾಂಗ ಅನಿಸ್ಲಿಕತ್ತಿತ್ತು. ಇಳಿಸಂಜಿಯ ಮಬ್ಬಿನ್ಯಾಗ ಕೆರಿ ನೀರಿನ ಮ್ಯಾಲೆ ಜೋಡಿ ಹೆಣಾ ತೆಲ್ಕೋತ ಹೋಂಟಾವಂತ ಅನಿಸ್ಲಿಕತ್ತಿತ್ತು….
******
ಲೇಖನ ಚೆನ್ನಾಗಿದೆ ಅಕ್ಕೋರ….
ಚೆನ್ನಾಗಿದೆ
ದಟ್ಟ ಜೀವ ಜೀವನದ ಚಿತ್ರ…ಚೆಂದದ ಸುಮನ್ ಜೀ…ಬರೀರಿ…
ತುಂಬಾ ಸೊಗಸಾಗಿದೆ ಹಳ್ಳಿ ಜೀವನ ಶೈಲಿ ಹಾಗೂ ನಮ್ಮ ಸಾಮಾಜಿಕ ವ್ಯವಸ್ಥೆ ಚಿತ್ರಣ ಮನ ಮುಟ್ಟುವಂತೆ ಇದೇ
ಕಥಿ ಛಂದ ಬರದೀರಿ. ಮನಸಿಗೆ ತಟ್ತದ.
ಲೇಖನಗಳಲ್ಲಿ ಜೀವ ತುಂಬೋದು ಸಾಮಾನ್ಯದ ಕೆಲಸವಲ್ಲ.
ಅಕ್ಕಾ ಸೂಪರ್ಭ