ಜೀವನದ ಗತಿಯನ್ನು ಬದಲಿಸುವ ‘ಗುರು’: ತೇಜಾವತಿ ಎಚ್.ಡಿ

ಮಾತೃ ದೇವೋಭವ ಪಿತೃ ದೇವೋಭವ ಆಚಾರ್ಯ ದೇವೋಭವ ಅತಿಥಿ ದೇವೋಭವ

ಬ್ರಹ್ಮನಾಗಿದ್ದಾನೆ, ಅವನೇ ವಿಷ್ಣುವೂ ಕೂಡ. ಅವನೇ ಸಾಕ್ಷಾತ್ ಪರಬ್ರಹ್ಮ ಆದ್ಯಂತಿಕ ಸತ್ಯ. ಅಂತಹ ಗುರುವಿಗೆ ನಮಸ್ಕಾರ. ಗುರುವಿನಲ್ಲೇ ಪರಬ್ರಹ್ಮನನ್ನು ಕಾಣುವ ಮೂಲಕ ಅವನನ್ನು ಪೂಜ್ಯ ಭಾವನೆಯಿಂದ ನೋಡುತ್ತೇವೆ. ಇಂದಿಗೂ ಕೂಡ ಯಾವುದೇ ಕಾರ್ಯವನ್ನು ಮಾಡುವ ಸಂದರ್ಭದಲ್ಲಿ ನಾವು ಈ ಶ್ಲೋಕವನ್ನು ಪಠಿಸುತ್ತೇವೆ. ಸಮಾಜ ಇಷ್ಟೊಂದು ಗೌರವವನ್ನು ಶಿಕ್ಷಕರಿಗೆ ನೀಡುವಾಗ ಅವರೂ ಕೂಡ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಶಿಕ್ಷಕ ಸಕಾರಾತ್ಮಕತೆಯ ಕಿರಣವಾಗಿದ್ದು ಎಂತಹ ದಡ್ಡ ವಿದ್ಯಾರ್ಥಿಯಲ್ಲೂ ಕೂಡ, “ನೀನು ನಿನ್ನ ಬದುಕನ್ನು ಸಮರ್ಥವಾಗಿ ನಡೆಸಬಲ್ಲೆ” ಎಂಬ ವಿಸ್ವಾಸವನ್ನು ತುಂಬಿ ಬದುಕಿನ ಭರವಸೆ ಮೂಡಿಸುತ್ತಾನೆ.

ಶಿಕ್ಷಕ ವರ್ಗ, ಪಂಥಗಳ ಎಲ್ಲೆಯನ್ನು ಮೀರಿ ಸಾರ್ವತ್ರಿಕವಾದಂತಹ ತತ್ವಗಳನ್ನು ನಂಬಿ ಪಾಲಿಸುವಂತಿರಬೇಕು. ಶಿಕ್ಷಕ ತಾನು ವಿದ್ಯಾರ್ಥಿಗಳಿಗೆ ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ತನ್ನ ಶ್ರೇಷ್ಠತೆಯನ್ನು ಸಾಧಿಸುವಲ್ಲಿ ಮಾದರಿಯಾಗಿ ಕಾಣುತ್ತಾನೆ. “ಯಾರು ತನ್ನ ವಿದ್ಯಾರ್ಥಿಗಳು ಮಾನವೀಯ ಧರ್ಮದ ಪಥವನ್ನು ಹಿಡಿಯುವಂತೆ ಮಾರ್ಗದರ್ಶನ ಮಾಡುತ್ತಾನೋ ಅವನು ನಿಜವಾದ ಶಿಕ್ಷಕ” ಎಂಬ ಮಾತನ್ನು ಅಥರ್ವಣವೇದ ಹೇಳುತ್ತದೆ.

ಶಿಕ್ಷಕ ಸದಾ ಕಾಲವೂ ತನ್ನ ವಿದ್ಯಾರ್ಥಿಗಳಲ್ಲಿ ಇರುವ ಮೂರು ರೀತಿಯ ಭಯಗಳ ವಿರುದ್ಧ ಹೋರಾಡಲು ಪ್ರೇರೇಪಿಸುತ್ತಾನೆ. ಅವುಗಳೆಂದರೆ 1) ಪ್ರಕೃತಿಯ ಭಯ 2) ಅನ್ಯರ ಭಯ 3) ಅಂತರಾತ್ಮದ ಭಯ. ಇದನ್ನು ಪ್ರಖ್ಯಾತ ಫ್ರೆಂಚ್ ಚಿಂತಕನಾದ ಬರ್ಟ್ರೆಂಡ್ ರಸೆಲ್ Dealing with Nature, Dealing with other men, Dealing with himself ಎಂದು ಗುರುತಿಸಿದ್ದಾನೆ. ಅಲ್ಲದೆ ಶಿಕ್ಷಕನು ತನ್ನ ವಿದ್ಯಾರ್ಥಿಗಳು ಸಹಜವಾಗಿ ಮತ್ತು ಸ್ವತಂತ್ರವಾಗಿ ಜಗತ್ತಿನ ಯೋಗ್ಯ ನಾಗರಿಕರಾಗಿ ಬೆಳೆಯಲು ಮಾರ್ಗದರ್ಶನ ನೀಡುತ್ತಾನೆ. ಒಬ್ಬ ಪ್ರೀತಿಪಾತ್ರ ತಂದೆಯೋ ತಾಯಿಯೋ ಆಗಿ ತನ್ನ ವಿದ್ಯಾರ್ಥಿಗಳೆದುರು ತನ್ನ ವ್ಯಕ್ತಿತ್ವವನ್ನು ಪ್ರಕಟಿಸುತ್ತಾನೆ. ಸಹನೆ ತಾಳ್ಮೆಯಲ್ಲಿ ಆತ ಸಮುದ್ರದಂತಿದ್ದು ಪ್ರಾಮಾಣಿಕತೆ, ಸಮಯಬದ್ಧನೂ ಆಗಿ ವಿದ್ಯಾರ್ಥಿಗಳಿಗೆ ಮಾದರಿಯಾಗಿರುತ್ತಾನೆ. ಒಬ್ಬ ಪ್ರಜ್ಞಾವಂತ ಶಿಕ್ಷಕನಾದವನು ಜಾತಿ, ಮತ, ಪಂಗಡ, ರಾಷ್ಟ್ರೀಯತೆಗಳನ್ನೂ ಮೀರಿ ತನ್ನ ಶಿಷ್ಯಂದಿರ ಕಲ್ಯಾಣಕ್ಕಾಗಿ ತುಡಿಯುತ್ತಾನೆ.

ಉತ್ತಮ ಶಿಕ್ಷಕರು ಮಿಸುನಿಯಂತೆ. ಅವರು ಸಾಕ್ಷಾತ್ ದೇವರಿಂದಲೂ ಗೌರವಿಸಲ್ಪಡುತ್ತಾರೆ. ಉದಾತ್ತತೆ, ಸಮಚಿತ್ತತೆ ಮತ್ತು ದೃಢತೆಗಳು ಶಿಕ್ಷಕನಲ್ಲಿರಬೇಕಾದ ಮುಖ್ಯ ಗುಣಗಳಾಗಿದ್ದು ಮನುಕುಲದ ಭವಿಷ್ಯವೇ ಇವರ ಕೈಯಲ್ಲಿರುತ್ತದೆ.
ಶಿಕ್ಷಕನು ಹಲವಾರು ಪಾತ್ರಗಳನ್ನು ಸ್ವತಃ ತಾನೇ ನಿಭಾಯಿಸುತ್ತಾ ಮಮತೆ ತುಂಬಿದ ತಾಯಿಯಾಗಿ, ಧೈರ್ಯ ತುಂಬುವ ತಂದೆಯಾಗಿ, ಆತ್ಮವಿಸ್ವಾಸ ಮೂಡಿಸುವ ಗುರುವಾಗಿ, ಭಾವನೆಗಳಿಗೆ ಭಾವನೆ ಬೆರೆಸುವ ಗೆಳೆಯನಾಗಿ ಹೀಗೆ ತನ್ನ ಶಿಷ್ಯಂದಿರನ್ನು ಹೆತ್ತ ಮಕ್ಕಳಂತೆಯೇ ನೋಡುವ ಭಾಗ್ಯ ಅವನಿಗಿರುತ್ತದೆ. ಶಿಕ್ಷಕನಾದವನು ಮೊದಲಿಗೆ ತಾನೊಬ್ಬ ಜಗತ್ತಿನ ನಾಗರಿಕನಾಗಿ ತನ್ನ ವಿದ್ಯಾರ್ಥಿಗಳನ್ನು ಜಗತ್ತಿನ ಪ್ರಜೆಗಳನ್ನಾಗಿ ರೂಪಿಸುತ್ತಾನೆ. ಅಷ್ಟೇ ಅಲ್ಲದೆ “ಮನುಜಕುಲಂ ತಾನೊಂದೇ ವಲಂ” ಎಂದು ಹೇಳಿದ ಪಂಪ ಕವಿಯ ಮಾತಿನಂತೆ ನಾವೆಲ್ಲರೂ ಒಂದೆಂಬ ವಿಶಾಲ ಭಾವನೆಯನ್ನು ಮೂಡಿಸುವ ಜವಾಬ್ದಾರಿ ಕೂಡ ಶಿಕ್ಷಕನದ್ದೇ ಆಗಿರುತ್ತದೆ. ಅಜ್ಞಾನವೇ ಮರಣ, ಜ್ಞಾನವೇ ಬದುಕು. ಶಿಕ್ಷಕನಾದವನು ಮೂರು ರೀತಿಯ ಸಹಾಯವನ್ನು ತನ್ನ ವಿದ್ಯಾರ್ಥಿಗಳಿಗೆ ಮಾಡಬಹುದು. ಅವು ಆಧ್ಯಾತ್ಮಿಕ ಸಹಾಯ, ಬೌದ್ಧಿಕ ಸಹಾಯ ಹಾಗೂ ಭೌತಿಕ ಸಹಾಯ. ಯಾರು ಆಧ್ಯಾತ್ಮಿಕವಾಗಿ ಸಹಾಯ ಮಾಡುತ್ತಾರೆಯೋ ಅವರು ಅತ್ಯಂತ ಪ್ರಭಾವಿ ಮನುಷ್ಯನಾಗುತ್ತಾನೆ.

ಒಳ್ಳೆಯ ಶಿಕ್ಷಕನಾಗ ಹೊರಟವನು ಒಳ್ಳೆಯ ವಿದ್ಯಾರ್ಥಿಯೂ ಕೂಡ ಆಗಿ ಸದಾ ಕಲಿವಿನ ಹಸಿವು ಹಾಗೂ ವೈಜ್ಞಾನಿಕ ಮನೋಭಾವನೆಯನ್ನು ಕೂಡ ಹೊಂದಿರುತ್ತಾನೆ. ಭಾರತದಲ್ಲಿ ಹಿಂದೆ ಮಹಾಋಷಿ ಗುರು ಪ್ರಾಜ್ಞನಾಗಿರುತ್ತಿದ್ದ ಕಾಲವಿತ್ತು. ಆಗಿನ ಆಚಾರ್ಯರು ಅಸಾಧಾರಣ ಬೌದ್ಧಿಕತೆ ಮತ್ತು ಆಧ್ಯಾತ್ಮಿಕ ಸಾಧನೆಗಳಿಂದ ನಿಜವಾದ ಬೆಳಕು ತೋರುವವರಾಗಿದ್ದರು. ಅವರ ಬೋಧನೆ ಗುರುಕುಲಗಳಲ್ಲಿ ನಡೆಯುತ್ತಿತ್ತು. ಸಮಾಜದಲ್ಲಿಯೂ ಅವರಿಗೆ ಉನ್ನತ ಸ್ಥಾನವಿತ್ತು. ಶಿಕ್ಷಕರು ಜ್ಞಾನ ಸಂಪಾದನೆಗೆ ಬದ್ಧರಾಗಿದ್ದರು ಮತ್ತು ಶಿಷ್ಯರು ಜ್ಞಾನಜ್ಯೋತಿಯ ಉಪಾಸಕರಾಗಿದ್ದರು.

ಹಿಂದಿನ ಗುರುಗಳು ತಲುಪಿದ ಆಧ್ಯಾತ್ಮಿಕ ಮತ್ತು ಬೌದ್ಧಿಕ ಉನ್ನತಿಯಿಂದಾಗಿ ಇಂದಿಗೂ ಕೂಡ ಸಮಾಜದಿಂದ ಅಷ್ಟೇ ಗೌರವಿಸಲ್ಪಡುತ್ತಿದ್ದಾರೆ. ಶಿಕ್ಷಕ ಎಂಬ ಪದವೇ ಗೌರವವನ್ನು ಹುಟ್ಟಿಸುವಂತದ್ದು. ಮತ್ತು ಅ ಪದವನ್ನು ಕೇಳಿದೊಡನೆ ಜನರು ತಲೆಬಾಗುತ್ತಾರೆ. ಶಿಕ್ಷಕನಾದವನು ತನ್ನ ನೈತಿಕ ಶ್ರೇಷ್ಠತೆಯಿಂದ ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು. ಅಭಿರುಚಿಯಿಂದ ಕೂಡಿದ ಒಳ್ಳೆಯ ಅಭ್ಯಾಸ ಮತ್ತು ಹವ್ಯಾಸಗಳನ್ನು ಶಿಕ್ಷಕ ಹೊಂದಿರಬೇಕಿರುತ್ತದೆ. ಏಕೆಂದರೆ ವಿದ್ಯಾರ್ಥಿಗಳು ಸಾಮಾನ್ಯವಾಗಿ ಅನುಕರಿಸುವುದು ತಮ್ಮ ಶಿಕ್ಷಕರನ್ನೇ. ಆದ ಕಾರಣ ವಿದ್ಯಾರ್ಥಿಗಳಿಗೆ ಆದರ್ಶವಾಗುವಂತಹ ಗುಣಗಳನ್ನು ರೂಢಿಸಿಕೊಳ್ಳುವ ಜವಾಬ್ದಾರಿ ಶಿಕ್ಷಕರದ್ದು.

ಒಳ್ಳೆಯ ಹವ್ಯಾಸಗಳು ಅಮೂಲ್ಯ ರತ್ನಗಳಿದ್ದಂತೆ. ಅವು ಬದುಕಿನ ಖಾಲಿ ಜಾಗಗಳನ್ನು ತುಂಬುತ್ತವೆ ಮತ್ತು ಬಿಡುವಿನ ಸಮಯವನ್ನು ಅರ್ಥಪೂರ್ಣಗೊಳಿಸುತ್ತವೆ. ಸೃಜನಶೀಲ ಸಾಹಿತ್ಯದ ಬರವಣಿಗೆ, ಸಂಗೀತ, ಚಿತ್ರಕಲೆ, ಅಂಚೆ ಚೀಟಿ ಸಂಗ್ರಹ, ನಾಣ್ಯಗಳ ಸಂಗ್ರಹ, ಛಾಯಾಚಿತ್ರ ಸೆರೆಹಿಡಿಯುವುದು, ಕ್ರೀಡಾ ಮನೋಭಾವ ಮುಂತಾದವುಗಳನ್ನು ರೂಢಿಸಿಕೊಂಡಾಗ ಮಕ್ಕಳೂ ಕೂಡ ಇದರಿಂದ ಪ್ರೇರೇಪಿತರಾಗುತ್ತಾರೆ. ಇಂತಹ ಉತ್ತಮ ಹವ್ಯಾಸಗಳು ಬದುಕಿನ ಬೇಸರವನ್ನು ಕಳೆದು ನವಕಾಂತಿಯನ್ನು ನೀಡುತ್ತವೆ.

ಒಂದುಕಡೆ ಆಂಗ್ಲ ಕವಿ ವರ್ಡ್ಸ್ ವರ್ಥ್ “ನಿರಂತರ ಅನುಕರಣೆ ಮಾಡುವುದೇ ಮಗುವಿನ ಗುಣ” ಎಂದಿದ್ದಾನೆ. ಇದರರ್ಥ ಮಗು ತನ್ನ ಕಣ್ಮುಂದೆ ಕಾಣುವುದೆಲ್ಲವನ್ನೂ ಅನುಕರಣೆ ಮಾಡುತ್ತಾ ಹೋಗುತ್ತದೆ. ಶಿಕ್ಷಕರು ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯುವುದರಿಂದ ವಿದ್ಯಾರ್ಥಿಗಳ ನೆಚ್ಚಿನ ಮಾದರಿ ವ್ಯಕ್ತಿಗಳಾಗಿರುತ್ತಾರೆ.
“ಜ್ಞಾನವನ್ನು ಅರಸಿ ಬಂದವನು ನಿರಾಶನಾಗಿ ಹೋಗಬಾರದು” ಎಂಬ ಬುದ್ಧನ ವಾಣಿಯಂತೆ ಶಿಕ್ಷಕರು ಜ್ಞಾನವನ್ನು ನೀಡಲು ಸದಾ ಸಿದ್ಧರಾಗಿರಬೇಕಾಗುತ್ತದೆ.

ವಿದ್ಯಾರ್ಥಿಗಳ ಬೆಳವಣಿಗೆಯ ಪ್ರಮುಖ ಕಾಲಘಟ್ಟವಾದ ವಿದ್ಯಾರ್ಥಿದೆಸೆಯಲ್ಲಿ ಉನ್ನತ ಆದರ್ಶಗಳ ಬೀಜ ಬಿತ್ತಿ ಬೆಳೆಸುವ ಜವಾಬ್ದಾರಿ ಶಿಕ್ಷಕನದ್ದು. “ವರ್ಣಮಾತ್ರಂ ಕಲಿಸಿದಾತಂ ಗುರುಂ” ಎಂಬ ಉಕ್ತಿ ಗುರುವಿನ ಮಹತ್ವವನ್ನು ಸಾರುತ್ತದೆ. ಶಿಕ್ಷಕನಿಗೆ ತಾನು ಸಾಧನೆ ಮಾಡಿದಾಗಲೂ ಸಿಗದಷ್ಟು ಖುಷಿ ತನ್ನ ವಿದ್ಯಾರ್ಥಿಯೊಬ್ಬ ಸಾಧನೆ ಮಾಡಿದಾಗ ಸಿಗುತ್ತದೆ. ಅದು ತನ್ನ ಸೇವೆಯ ಆತ್ಮತೃಪ್ತಿಯನ್ನು ತಂದುಕೊಡುತ್ತದೆ. “ಚಿನ್ನಕ್ಕೇ ತುಕ್ಕು ಹಿಡಿದರೆ ಕಬ್ಬಿಣದ ಮಾತೇನು?” ಎಂಬ ಜಫ್ರಿ ಛಾಸರ್ ನ ಮಾತಿನಂತೆ ಶಿಕ್ಷಕನಾದವನು ಚಿನ್ನವಿದ್ದಂತೆ. ಅವನು ಯಾವಾಗಲೂ ಕ್ರಿಯಾಶೀಲವಾಗಿರಬೇಕು. ಆಗ ವಿದ್ಯಾರ್ಥಿಗಳು ಕೂಡ ಅವನಂತೆಯೇ ಅನುಕರಿಸುತ್ತಾರೆ.

ಪ್ರತಿ ಮಗುವು ಹುಟ್ಟುತ್ತಲೇ ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ಅಲ್ಪ ಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆ. ಈ ಲೋಕ ಉಳಿದು ಬಾಳಿ ಬದುಕಬೇಕಾದರೆ ಪ್ರಪಂಚದ ಮಕ್ಕಳೆಲ್ಲ ಅನಿಕೇತನರಾಗಬೇಕು. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಈ ಪಂಚಮಂತ್ರ ನಮಗೆ ಮುಂದಿನ ದೃಷ್ಟಿಯಾಗಬೇಕಾಗಿದೆ.

ಶಿಕ್ಷಕರಿಗೆ ಡಾ. ಜಿ.ಪಿ.ರಾಜರತ್ನಂ ರವರು ಹೇಳಿರುವಂತಹ ಮೂರು ಸೂತ್ರಗಳು ಹಾಗೂ ಎ.ಪಿ.ಜೆ ಅಬ್ದುಲ್ ಕಲಾಂ ರವರ ಹತ್ತು ಅಂಶಗಳನ್ನು ಕೂಡ ನಾವಿಲ್ಲಿ ಸ್ಮರಿಸಬಹುದು. ಕೇವಲ ಅಕ್ಷರ ಕಲಿಸಿದವ ಮಾತ್ರ ಗುರುವಲ್ಲ. ನಮ್ಮ ಜೀವನದ ತಿರುವುಗಳಲ್ಲಿ ನಮ್ಮನ್ನು ಮಾರ್ಗದರ್ಶಿಸಿದ ಎಲ್ಲರೂ ಗುರುಗಳೇ ಆಗಿರುತ್ತಾರೆ. ಗುರುವಿನ ಸ್ಥಾನ ಅತ್ಯುನ್ನತವಾದದ್ದು. ಅದನ್ನು ಪ್ರತಿಯೊಬ್ಬರೂ ಗೌರವಿಸೋಣ. ಯಾವುದೇ ಸ್ವಾರ್ಥವಿಲ್ಲದೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಾ ಮುಗ್ಧ ಮನಸ್ಸುಗಳೊಂದಿಗೆ ನಮ್ಮ ಅಮೂಲ್ಯ ಸಮಯವನ್ನು ಕಳೆಯಲು ಅವಕಾಶ ದೊರೆಯುವ ಪವಿತ್ರವಾದ ವೃತ್ತಿಯೆಂದರೆ ಶಿಕ್ಷಕ ವೃತ್ತಿ. ಗುರು ಶಿಷ್ಯರ ಸಂಬಂಧ ಒಂದು ಅವ್ಯಕ್ತವಾದ ಬಂಧವಾಗಿದ್ದು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವವಾದುದಾಗಿದೆ. ಎಲ್ಲರ ಜೀವನದಲ್ಲೂ ತಮ್ಮ ಜೀವನದ ಗತಿಯನ್ನು ಬದಲಿಸಿದ ಹಲವಾರು ಗುರುಗಳಿದ್ದಾರೆ.. ಅವರನ್ನೆಲ್ಲಾ ಸ್ಮರಿಸುತ್ತಾ ಅವರೆಲ್ಲರಿಗೂ ಈ ಒಂದೆರಡು ನುಡಿಗಳ ಅರ್ಪಣೆಯಾಗಲಿ.

ತೇಜಾವತಿ ಎಚ್.ಡಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x