ಪ್ರತಿಯೊಂದಕ್ಕೂ ಅಂತ್ಯವಿರಲೆ ಬೇಕು ಮತ್ತು ಆ ಅಂತ್ಯದ ಆರಂಭದ ಮೊದಲೆ ಅಂತ್ಯವಾದರೆ ಆ ಅಂತ್ಯಕ್ಕೊಂದು ಅಂತ್ಯವಿಲ್ಲದ ಇತಿಹಾಸವಿರುತ್ತದೆ. ಹೌದು ಸ್ವಲ್ಪ ಕಷ್ಟವಾದರೂ ಜೀರ್ಣಿಸಿಕೊಳ್ಳಲು ಸಾಧ್ಯವಾಗುವ ಸಾಲಿದು ಮತ್ತು ಕ್ರೀಡಾಪಟುಗಳಿಗೆ ಅನಂತ ಸಂತೃಪ್ತಿ ನೀಡುವ ಸಾಲಿದು. ಪ್ರತಿಯೊಬ್ಬ ಕ್ರೀಡಾಪಟುವಿಗೂ ತನ್ನ ವೃತ್ತಿ ಜೀವನದ ಅಂತ್ಯದ ಆರಂಭ ಜಗತ್ತಿಗೆ ತಿಳಿಯುವ ಮೊದಲೆ ಗೋಚರಿಸುತ್ತೆ . ಆದರೆ ಅದನ್ನು ಅವನು ಯಾವ ರೀತಿ ನಿರ್ವಹಿಸುತ್ತಾನೆ ಅನ್ನೊದರ ಮೇಲೆ ಅವನ ವೃತ್ತಿಯೋತ್ತರ ಜೀವನ ರೂಪಿತವಾಗುತ್ತೆ. ಎಷ್ಟೋ ಕ್ರೀಡಾಳುಗಳು ಜಗತ್ತು ನಿಬ್ಬೆರಗಾಗುವಂತೆ ತಮ್ಮ ವೃತ್ತಿ ಜೀವನಕ್ಕೆ ಪೂರ್ಣವಿರಾಮ ಹಾಕುವುದು ಇದೆ ಕಾರಣಕ್ಕೆ. ಇನ್ನು ಅವರಲ್ಲಿ ಆಟ ಇದೆಯಂತ ಇಡೀ ಜಗತ್ತು ಬೊಬ್ಬೆಹಾಕುತ್ತಿದ್ದರೂ ಯಾವುದನ್ನು ಕೇಳಿಸಿಕೊಳ್ಳದೆ ತಣ್ಣಗೆ ನಿವೃತ್ತಿಗೆ ಘೋಷಿಸಿ ತೆರೆಯ ಮರೆಗೆ ಸರಿದ ಅಸಂಖ್ಯ ಕ್ರೀಡಾಪಟುಗಳನ್ನು ಈ ಜಗತ್ತು ನೋಡಿದೆ. ಆದರೆ ಅಂತಹ ಅವಕಾಶವಿದ್ದರೂ ಧೋನಿ ಹಾಗೆ ಮಾಡಲಿಲ್ಲ . ಅದನ್ನೆ ಧೋನಿಯ ಲೆಕ್ಕಾಚಾರ ಅನ್ನೋದು. ಊಹೆಗೆ ನಿಲುಕದ ಚಿಂತನೆ ಧೋನಿಯದ್ದು.
ಹೆಚ್ಚು ಕಡಿಮೆ ಕಿರಣ್ ಮೊರೆ , ನಯನ್ ಮೊಂಗಿಯ , ಅಜಯ್ ರಾತ್ರ . ಸಾಬಾ ಕರೀಂ , ಚಂದ್ರಕಾಂತ ಪಂಡಿತ್ ರಂತಹ ಕುಳ್ಳಗಿನ ವಿಕೆಟ್ ಕೀಪರುಗಳನ್ನೆ ನೋಡಿದ್ದ ಭಾರತೀಯರಿಗೆ ಅವರೆಲ್ಲರಿಗಿಂತ ಜಾಸ್ತಿ ಉದ್ದಗೆ ಕಾಣುವ ಮತ್ತು ವಿಚಿತ್ರ ರೀತಿಯ ನೀಳಕಾಯದ ತಲೆಕೂದಲು ಹೊಂದಿರುವ ಮಹೇಂದರ್ ಸಿಂಗ್ ಧೋನಿ ಎಂಬ ಚಿತ್ರ 2004 ರಲ್ಲಿ ಟಿವಿ ಪರೆದೆ ಮೇಲೆ ಮೂಡಿದಾಗ ಮುಂದೊಂದು ದಿನ ಆ ಚಿತ್ರ ಬೃಹಾದಾಕಾರವಾಗಿ ಬೆಳೆದು ಪ್ರತಿಯೊಬ್ಬ ದೇಶ ವಾಸಿಯ ಹೃದಯದಲ್ಲಿ ಮನೆಮಾಡುತ್ತೆ ಅಂತ ಯಾರೂ ಯೋಚಿಸಿರಲಿಕ್ಕಿಲ್ಲ. ಆರಂಭದಲ್ಲಿ ಧೋನಿ ಕೀಪಿಂಗಿಂತ ಬ್ಯಾಟಿಂಗಿನಲ್ಲೇ ಸದ್ದು ಮಾಡಿದ್ದರು. ಪಾಕಿಸ್ತಾನದ ಎದುರಿನ 140 ರನ್ ಅವರ ಆರಂಭಿಕ ಕೀಪಿಂಗ್ ವಿಫಲತೆಯನ್ನು ಮಸುಕಾಗಿಸಿತ್ತು. ಆದರೆ ಧೋನಿ ಒಬ್ಬ ಅದ್ಬುತ ವಿದ್ಯಾರ್ಥಿಯಾಗಿದ್ದ ಕಾರಣ 2006 ಸುಮಾರಿಗೆ ಒಬ್ಬ ಗೂಟ ರಕ್ಷಕನಾಗಿ ವಿಶ್ವ ಕ್ರಿಕೆಟ್ ಪಂಡಿತರ ಹುಬ್ಬೇರಿಸಿದ್ದರು. ಅದು ಎಲ್ಲಿಯವರೆಗೆ ಅಂದ್ರೆ ದೇವರು ಕೂಡ ಧೋನಿಯಷ್ಟು ಚೆನ್ನಾಗಿ ಸ್ಟ೦ಪಿಂಗ್ ಮಾಡಲಾರ ಅನ್ನುವಷ್ಟರ ಮಟ್ಟಿಗೆ.
ಧೋನಿಯ ಯುಗ ಆರಂಭವಾಗಿದ್ದು 2007 ಚುಟುಕು ವಿಶ್ವ ಕಪ್ ನಿಂದ . ಬಿಸಿಸಿಐ ರಾಹುಲ್ ದ್ರಾವಿಡ್ ಕೈಯಿಂದ ಬಲವಂತವಾಗಿ ಚುಟುಕು ವಿಶ್ವಕಪ್ ಆಡೊಲ್ಲ ಅಂತ ಹೇಳಿಕೆ ಕೊಡಿಸಿ ಧೋನಿಗೆ ನಾಯಕತ್ವದ ಪಟ್ಟ ನೀಡಿತ್ತು. ಅದಾಗಲೇ ಜಗತ್ತಿನ ಕ್ರಿಕೆಟ್ ಪಂಡಿತರೆಲ್ಲ ಬಿಸಿಸಿಐಗೆ ಧೋನಿಯಲ್ಲಿನ ಅಸಾಮಾನ್ಯ ನಾಯಕತ್ವ ಗುಣದ ಅರಿವು ಮೂಡಿಸಿದ್ದರು. ಯಾವುದೇ ಹಿರಿಯ ಆಟಗಾರರಿಲ್ಲದೆ ಬರಿ ಪಡ್ಡೆ ಹುಡುಗರಿಂತಿದ್ದವರ ತಂಡ ಕಟ್ಟಿಕೊಂಡು ದ. ಆಫ್ರಿಕಾಕ್ಕೆ ಬಂದ ಧೋನಿ ಪಡೆ ಗೆಲ್ಲುವ ಕುದುರೆಯಾಗಿರಲಿಲ್ಲ . ಆದರೆ ಅಲ್ಲಿ ಧೋನಿ ಮಾಡಿದ್ದು ಮಾಯಾಜಾಲ . ಆತನ ಚಾಣಾಕ್ಷತೆ ಅಲ್ಲಿ ಇಡೀ ಕ್ರಿಕೆಟ್ ಜಗತ್ತಿಗೆ ವಿಶ್ವರೂಪ ತೋರಿಸಿತ್ತು. ಪಾಕಿಸ್ತಾನದೆದುರಿನ ಟೈ ಆದ ಪಂದ್ಯದ ಬೌಲ್ ಔಟ್ ನಲ್ಲಿ ರಾಬಿನ್ ಉತ್ತಪ್ಪಗೆ ಬೌಲಿಂಗ್ ಕೊಡುವುದರಿಂದ ಹಿಡಿದು , ಫೈನಲ್ಲಿನ ಹೈ ವೋಲ್ಟೇಜ್ ಕೊನೆಯ ಓವೆರಿನಲ್ಲಿ ಶಾರ್ಟ್ ಎಕ್ಸ್ಟ್ರಾ ಫೈನ್ ಲೆಗ್ ನಲ್ಲಿ ಶ್ರೀಶಾಂತನನ್ನು ಫೀಲ್ಡಿಂಗಿಗೆ ನಿಲ್ಲಸುವ ತನಕ ಧೋನಿ ತೋರಿದ ಚಾಣಾಕ್ಷತೆ ಆತನ ಮುಂದಿನ ಒಂದು ದಶಕ ಏಕಚಕ್ರಾದಿಪತ್ಯಕ್ಕೆ ಮುನ್ನುಡಿ ಬರೆದಿತ್ತು.
ಧೋನಿಯನ್ನು ಇಷ್ಟಪಡಲು ಮತ್ತು ಪಡದೆ ಇರಲು ಪ್ರತಿಯೊಬ್ಬರಲ್ಲೂ ಅವರದ್ದೇ ಕಾರಣಗಳಿರಬಹುದು ಮತ್ತು ಇದ್ದೆ ಇರುತ್ತೆ. ಒಬ್ಬ ಮನುಷ್ಯ ಅಂದ ಮೇಲೆ ಅವನಲ್ಲಿ ಒಳ್ಳೆಯ ಮತ್ತು ಕೆಟ್ಟ ಗುಣಗಳು ಇದ್ದೆ ಇರಬೇಕು . ದೊಡ್ಡ ಹುದ್ದೆಗೇರಿದ ಮೇಲೆ ಅವೆರಡನ್ನೂ ಬಚ್ಚಿಡಲು ಸಾಧ್ಯವಿಲ್ಲ ಹಾಗು ಅವನ್ನು ಆತ ಹೇಗೆ ನಿಭಾಯಿಸುತ್ತಾನೆ ಎನ್ನುವುದೆ ಆತನ ಯಶಸ್ಸನ್ನು ನಿರ್ಧರಿಸುತ್ತದೆ. ಈ ವಿಷಯದಲ್ಲಿ ಧೋನಿ ಮಹಾನ್ ಕಿಲಾಡಿ ಮತ್ತು ಅದನ್ನು ಅದ್ಭುತವಾಗಿ ನಿಭಾಯಿಸಿ ದಶಕಗಳ ಕಾಲ ಕ್ರೀಡೆಯ ಮಹೋನ್ನತ ಹುದ್ದೆಯಲ್ಲಿ ಮೆರೆದಿದ್ದು . ಭಾರತದಂತ ಕ್ರಿಕೆಟನ್ನು ಆರಾಧಿಸುವ ದೇಶ ಬೇರೊಂದಿಲ್ಲ. ಇಲ್ಲಿ ಒಂದು ದಶಕದ ಕಾಲ ನಾಯಕನಾಗಿರಬೇಕೆಂದರೆ ಅದೇನು ಸಾಮಾನ್ಯ ಸಂಗತಿಯಲ್ಲ. ತೆಂಡೂಲ್ಕರ್ ಎಂಬ ಜಗತ್ತಿನ ಅಪ್ರತಿಮ ಆಟಗಾರನಿಗೆ ಒಂದು ವರ್ಷ ತಂಡವನ್ನು ಮುನ್ನೆಡಸಲಾಗಲಿಲ್ಲ . ಆದರೆ ಧೋನಿ ಎಲ್ಲಾ ಅಸಾಧ್ಯತೆಗಳನ್ನು ಸಾಧ್ಯ ಮಾಡಿ ತೋರಿಸಿದರು. ತನ್ನದೇ ಶೈಲಿಯಲ್ಲಿ ಎಲ್ಲಿಯೂ ಪ್ರಮಾದಕ್ಕೆ ಅವಕಾಶ ನೀಡದೆ , ಹಳೆ ತಲೆಗಳಿಗೆ ಮನೆಯ ದಾರಿ ತೋರಿಸಿ ಹೊಸ ತಂಡವೊಂದನ್ನು ಕಟ್ಟಿದರು. ಎರಡು ತಂಡಗಳನ್ನು ಮಾಡುವಷ್ಟು ಬ್ಯಾಕ್ ಅಪ್ ಆಟಗಾರರನ್ನು ಧೋನಿ ತಯಾರು ಮಾಡಿದ್ದರೆಂದರೆ ಅವರ ನಾಯಕತ್ವದ ಆಳವನ್ನು ಅಂದಾಜಿಸಬಹುದು. ಅಚ್ಚರಿಯೆನೆಂಬಂತೆ ಆಟಗಾರರ ಬದಲಾವಣೆ , ಬ್ಯಾಟಿಂಗ್ ಮತ್ತು ಬೌಲಿಂಗ್ ಕ್ರಮಾಂಕದ ಬದಲಾವಣೆ . ಇನ್ನೆಷ್ಟು ವರ್ಷ ಬಿಟ್ಟು ತನಗೆ ಭಾರತ ತಂಡದಲ್ಲಿ ಸ್ಥಾನ ಸಿಗಬಹುದೆಂದು ಲೆಕ್ಕ ಹಾಕುತಿದ್ದವನಿಗೆ ನಾಳೆಯೇ ತಂಡಕ್ಕೆ ಸೇರುವಂತೆ ಬುಲಾವ್ ನೀಡಿದ ಅದೆಷ್ಟೋ ನಿದರ್ಶನಗಳು ಇಲ್ಲಿವೆ . ಎಲ್ಲಕ್ಕಿಂದ ಹೆಚ್ಚಾಗಿ ಧೋನಿ ಎಲ್ಲಿಯೂ ತಮ್ಮ ಸಭ್ಯತೆಯ ಎಲ್ಲೇ ಮೀರಿಲ್ಲ. ಇಂತಹ ಒಂದೇ ಒಂದು ನಿದರ್ಶನ ಅವರ ವೃತ್ತಿ ಜೀವನದಲ್ಲಿ ಕಾಣಸಿಗದು. ಭಾರತ ಇಷ್ಟಪಡುವುದು ಅತ ಬ್ಯಾಟು ಅಥವಾ ಗೂಟದ ಹಿಂದೆ ಮಾಡಿದ ಸಾಧನೆಗಲ್ಲ. ಭಾರತಕ್ಕೆ ಗೆಲ್ಲಿಸಿಕೊಟ್ಟ ಪಂದ್ಯ ಮತ್ತು ಪಂದ್ಯಾವಳಿಗಾಗಿ ಮತ್ತು ಹತ್ತು ವರ್ಷ ತಂಡವನ್ನು ನೆಡೆಸಿದ ರೀತಿಗಾಗಿ . ಇದು ಒಬ್ಬ ನಿಜವಾದ ನಾಯಕನಿಗೆ ಸೇರಬೇಕಾದ ಶ್ರೇಷ್ಠ ಗೌರವ.
ಒಬ್ಬ ನಾಯಕ ಕಣದಲ್ಲಿ ಯಾವ ರೀತಿ ಪೂರ್ವಾಗ್ರಹ ಪೀಡಿತನಾಗಿ ವ್ಯವಹರಿಸಬೇಕು ಅನ್ನೋದಕ್ಕೆ ಧೋನಿಯ ಎರಡು ಘಟನೆಗಳು ಇಲ್ಲಿ ನೆನೆಪಿಗೆ ಬರುತ್ತೆ. ಮೊದಲನೆಯದು 2010 ರ ಸಚಿನ್ ದ್ವಿಶತಕ ಹೊಡೆದ ಪಂದ್ಯ. ಸಚಿನ್ 196 ರನ್ ಗಸಿದ್ದಾಗ ಟಿವಿ ನೋಡುತ್ತಿದ್ದ ಇಡೀ ದೇಶ ಧೋನಿಗೆ ಶಪಿಸುತ್ತಿತ್ತು , ಯಾಕೆಂದರೆ ಇನ್ನಿಂಗ್ಸ್ ಮುಗಿಯುವ ಹಂತಕ್ಕೆ ಬಂದರೂ ಧೋನಿ ಸಚಿನ್ ಗೆ ಸ್ಟ್ರೈಕ್ ನೀಡದೆ ತಾನೇ ದೊಡ್ಡ ಹೊಡೆತಗಳಿಗೆ ಯತ್ನಿಸುತ್ತಿದ್ದ. ಅಲ್ಲಿ ಧೋನಿ ಮಾಡಿದ್ದು ನಿಜವಾದ ನಾಯಕನ ಕೆಲಸ . ಆವಾಗ ಅಲ್ಲಿ ರನ್ ಬೇಕಿತ್ತು ಮತ್ತು ಆಗಷ್ಟೇ ಕ್ರಿಸಿಗೆ ಬಂದಿದ್ದ ತನ್ನಿಂದ ಮಾತ್ರ ಅದು ಸುಲಭ ಅನ್ನೋದು ಅವನಿಗೆ ಗೊತ್ತಿತ್ತು. ಇನ್ನಿಂಗ್ಸ್ ನ ಕೊನೆಯ ಎರಡು ಚೆಂಡುಗಳನ್ನು ನೀಡಿದರೆ ಸಚಿನ್ ದ್ವಿಶತಕ ಪೂರೈಸುತ್ತಾರೆ ಅಂತಾನೂ ಧೋನಿಗೆ ಗೊತ್ತಿತ್ತು. ಆಮೇಲೆ ಅದು ಹಾಗೆ ಆಯಿತು ಸಹ . ಇನ್ನೊಂದು ಪಂದ್ಯದಲ್ಲಿ ಅಂಬಟಿ ರಾಯಡುಗೆ ಸ್ಟ್ರೈಕ್ ನೀಡದೆ ತಾನೇ ಆಡಿ ಪಂದ್ಯ ಗೆಲ್ಲಿಸಿದ್ದು . ರಾಯಡು ಒಬ್ಬ ತಜ್ಞ ಆಟಗಾರನಾಗಿದ್ದರೂ ಧೋನಿ ಆತನಿಗೆ ಆಡಲು ಅವಕಾಶ ಕೊಡದೆ ಸ್ವಾರ್ಥ ಮೆರೆದರು ಅಂತ ಒಂದಷ್ಟು ಜನ ಆಡಿಕೊಂಡರು . ಆದರೆ ಆವಾಗಷ್ಟೇ ಬಾರಿ ಶ್ರಮ ಪಟ್ಟು ತಂಡದಲ್ಲಿ ಮತ್ತೆ ಸ್ಥಾನ ಪಡೆದಿದ್ದ ರಾಯಡುವನ್ನು ಅಂತಹ ಒತ್ತಡದಲ್ಲಿ ಆಡಿಸಿ ರಿಸ್ಕ್ ತೆಗೆದುಕೊಳ್ಳದಿರುವ ಒಬ್ಬ ನಾಯಕನ ಚಾಣಾಕ್ಷತೆ ಅದಾಗಿತ್ತು. ಹೀಗೆ ಧೋನಿ ಯಾವ ಆಟಗಾರನನ್ನು ಯಾವಾಗ ಹೇಗೆ ಬಳಸಿಕೊಳ್ಳ ಬೇಕೇ ಅನ್ನೋ ಕಲೆಯನ್ನು ಅದ್ಭುತವಾಗಿ ಕರಗತ ಮಾಡಿಕೊಂಡಿದ್ದರು. ಮತ್ತು ಯಾವ ಆಟಗಾರನ ಫಾರ್ಮ್ ನ್ನು ಹೇಗೆ ಹಾಳು ಮಾಡಬೇಕು ಅನ್ನೋದು ಸಹ .
ಧೋನಿ ತನ್ನ ಚಕ್ರಾಧಿಪತ್ಯಕ್ಕೆ ದಕ್ಕೆ ಬರದ ರೀತಿ ಒಂದಷ್ಟು ಕಣ್ಣಿಗೆ ಕಾಣದ ತಪ್ಪುಗಳಿಗೂ ಸಾಕ್ಷಿಯಾಗಿದ್ದು ಸುಳ್ಳಲ್ಲ . ಸಿ ಯಸ್ ಕೆ ಮತ್ತು ಶ್ರೀನಿವಾಸನ್ ಮೇಲಿನ ಮೋಹದಿಂದ (ಒತ್ತಡ ?) ಸಿ ಯಸ್ ಕೆ ಪಟಾಲಂ ನ್ನು ಭಾರತ ತಂಡದಲ್ಲಿ ಅಗತ್ಯಗಿಂತ ಹೆಚ್ಚಾಗಿ ಬೆಳೆಸಿದ್ದು ಧೋನಿ ಮಾಡಿದ ದೊಡ್ಡ ತಪ್ಪು. ಅದಕ್ಕಾಗಿ ಒಂದಷ್ಟು ಪ್ರತಿಬಾವಂತ ಆಟಗಾರರ ವೃತ್ತಿ ಜೀವನ ಅಂತ್ಯವಾದದ್ದು ಸುಳ್ಳಲ್ಲ. ಇನ್ನೊಂದು ನಾವು ಗಮನಿಸಬೇಕಾದ ಮಹತ್ವದ ವಿಷಯವೆಂದರೆ ತನ್ನ ನಾಯಕತ್ವದಲ್ಲಿ ಎಷ್ಟೋ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರತಿಭೆಗಳನ್ನು ಬೆಳೆಸಿದ ಧೋನಿ ಒಬ್ಬ ವಿಕೆಟ್ ಕೀಪರ್ ಬ್ಯಾಟ್ಸಮನ್ ನನ್ನು ಬೆಳೆಯಲು ಬಿಡಲಿಲ್ಲ . ಇದು ಎಲ್ಲ ಕಡೆ ನೋಡಬಹುದಾದ ಟಿಪಿಕಲ್ ನಾಯಕನೊಬ್ಬನ್ನ ರಹಸ್ಯ ಅಜೆಂಡಾ . ಮುಂದೊಂದು ದಿನ ತನ್ನ ಸ್ಥಾನಕ್ಕೆ ಅಪಾಯ ಒಡ್ಡಬಹುದಾದ ಚಿಗುರನ್ನು ಬೆಳೆಯಲು ಬಿಡದಿರುವುದು ಮತ್ತು ಬೆಳೆದಿರುವ ಚಿಗುರನ್ನು ಜಗತ್ತಿಗೆ ಕಾಣದ ಹಾಗೆ ಹೊಸಕಿ ಹಾಕುವುದು . ಧೋನಿ ಇದನ್ನು ಅದ್ಭುತವಾಗಿ ನಿಭಾಯಿಸಿದರು. ಧೋನಿಯ ಜೊತೆಯಲ್ಲೇ ಬೆಳೆದು ನಿಂತ ಅಂಬಟಿ ರಾಯಡು, ರಾಬಿನ್ ಉತ್ತಪ್ಪ , ದಿನೇಶ್ ಕಾರ್ತಿಕ್ , ಪಾರ್ಥಿವ್ ಪಟೇಲರನ್ನು ಮೂರಕ್ಕಿಂತಲೂ ಮೇಲೇರದಂತೆ ನೋಡಿಕೊಂಡರು. ಅವರು ಕಷ್ಟ ಪಟ್ಟು ಅಪರೂಪಕ್ಕೊಮ್ಮೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರೂ ಅಸಹಜ ಕ್ರಮಾಂಕಗಳಲ್ಲಿ ಆಡಿಸಿ ಮತ್ತೆ ಗೇಟ್ ಪಾಸ್ ಕೊಡಿಸುತ್ತಿದ್ದರು. ಧೋನಿ ಬೆಳೆಸಿದ ಆಟಗಾರಲ್ಲಿ ಒಬ್ಬನೇ ಒಬ್ಬ ವಿಕೆಟ್ ಕೀಪರ್ ಇಲ್ಲದಿರುವುದು ಇದಕ್ಕೆ ಸಾಕ್ಷಿ.
ಲೇಖನದ ಮೊದಲ ವಾಕ್ಯವನ್ನು ಮತ್ತೆ ನೆನೆಪಿಸುತ್ತ ಈ ಲೇಖನವನ್ನು ಅಂತ್ಯಗೊಳಿಸುತ್ತೇನೆ . ಧೋನಿಗೆ ಸುಮಾರು 2014 ರಲ್ಲೇ ತನ್ನ ಅಂತ್ಯದ ಆರಂಭದ ಸುಳಿವು ಸಿಕ್ಕಿತ್ತು ಮತ್ತು ಅಂದು ಅದಕ್ಕೆ ಧೋನಿ ಮತ್ತು ಭಾರತ ಎರಡು ಸಜ್ಜಾಗಿರಲಿಲ್ಲ . ಆದ್ದರಿಂದಲಿ ಧೋನಿ ಏಕಾಏಕಿ ಟೆಸ್ಟ್ ಕ್ರಿಕೆಟಿಗೆ ವಿದಾಯ ಹೇಳಿದ್ದು . ಆದರೆ 2015 ರ ವಿಶ್ವಕಪ್ ನಂತರ ಬಾರತ ತಂಡದಲ್ಲಿ ಧೋನಿಯ ಅನಿವಾರ್ಯತೆ ಕ್ಷೀಣಿಸುತ್ತಾ ಬಂದಿತ್ತು. ಅದು ಸ್ವತಃ ಧೋನಿ ಮತ್ತು ಬಿಸಿಸಿಐ ಗೆ ಅರಿವಾಗಿತ್ತು ಮತ್ತು ಅವರ ಫಲವೇ 2017ರ ಕೊಹ್ಲಿ ಪಟ್ಟಾಭಿಷೇಕ . ಆಗ ಎಲ್ಲ ನಿರೀಕ್ಷಿಸಿದ್ದೇನೆಂದರೆ 2019 ರ ವಿಶ್ವಕಪ್ ನೊಂದಿಗೆ ಧೋನಿ ಯುಗಾಂತ್ಯವಾಗಬಹುದೆಂದು. ಅದು ಹಾಗೆ ಆಯಿತು ಸಹ, ಆದರೆ ಆಗಬೇಕಾದ ರೀತಿಯಲ್ಲಿ ಆಗಿಲ್ಲ ಅಷ್ಟೇ. ಇಲ್ಲಿ ಧೋನಿ ಸ್ವಲ್ಪ ಅತಿ ಬುದ್ದಿವಂತನಾಗಲು ಹೋಗಿ ಎಡವಿದರು. ವಿಶ್ವಕಪ್ ಆರಂಭಕ್ಕೂ ಮುಂಚೆ ವಿಶ್ವಕಪ್ ನಂತರ ಅಂತಾರಾಷ್ಟ್ರೀಯ ಪಂದ್ಯ ಆಡೊಲ್ಲ ಅಂತ ಘೋಷಿಸಿದ್ದರೆ ಅಥವ ವಿಶ್ವಕಪ್ ಮುಗಿದ ಕೂಡಲೇ ನಿವೃತ್ತಿ ಘೋಷಿಸಿದ್ದರೆ ಧೋನಿ ಕೊನೆಯೊರೆಗೂ ಸೋಲಿಲ್ಲದ ಸರದಾರರಾಗುತ್ತಿದ್ದರು . ಆದರೆ ವಿಶ್ವಕಪ್ ನಂತರ ಒಂದೇ ಒಂದು ಪಂದ್ಯ ಆಡದೆ , ಭಾರತ ತಂಡ ಧೋನಿಯ ಅನುಪಸ್ಥಿಯ ಕರಿನೆರಳು ಕಾಡದಂತೆ ಧೋನಿಯನ್ನೇ ಮರೆತಂತೆ ಪಂದ್ಯಗಳಲ್ಲಿ ಜಯಿಸುತ್ತಿರುವಾಗ , ಧೋನಿಗೀಗ ನಿವೃತ್ತಿ ಅನಿವಾರ್ಯ ಅನ್ನಿಸುವ ಸ್ಥಿತಿ ನಿರ್ಮಾಣ ವಾಗುತ್ತಿರುವಾಗ ನಿವೃತ್ತಿಯ ಘೋಷಣೆಯಾಗಿದೆ . ಇಡೀ ಧೋನಿ ಮಾಡಿದ ಎದ್ದು ಕಾಣುವ ತಪ್ಪು ಮತ್ತು ತಪ್ಪು ಮನುಷ್ಯ ಸಹಜ ಲಕ್ಷಣ . ಎಲ್ಲಕ್ಕಿಂತ ಹೊರತಾಗಿ ನಮ್ಮೆದುರು ಧೋನಿ ಅಚ್ಚಳಿಯದೆ ನಿಲ್ಲುವುದು ಒಬ್ಬ ಅಸಾಮಾನ್ಯ ನಾಯಕನಾಗಿ ಮತ್ತು ಎಲ್ಲರನ್ನು ಪ್ರೀತಿಸುವ ಮತ್ತು ಪ್ರೀತಿಸಿಕೊಳ್ಳುವ ಮನುಷ್ಯನಾಗಿ. ಇಷ್ಟೇ ಸಾಕಲ್ಲವೇ ಒಬ್ಬ ಮನುಷ್ಯ ಇತಿಹಾಸದ ಪುಟಗಳಲ್ಲಿ ಶಾಶ್ವತ ಹೆಜ್ಜೆಗುರುತು ಮೂಡಿಸಲು.
–ಸತೀಶ್ ಶೆಟ್ಟಿ ವಕ್ವಾಡಿ