ತೆರೆದ ಮನೆ ಬಾಗಿಲಿಗೊಂದು ಬೆಳಕಿನ ತೋರಣ:ಹೃದಯಶಿವ ಅಂಕಣ


ರಸಋಷಿಯ ರಮ್ಯಲೋಕದೆಡೆಗೆ

ಬಾಲ್ಯದಲ್ಲಿ ಆಂಗ್ಲ ಸಾಹಿತ್ಯದ ವ್ಯಾಮೋಹಕ್ಕೊಳಗಾಗಿ ಹಲವು ಆಂಗ್ಲಕವಿತೆಗಳನ್ನು ಬರೆದರೂ ಕ್ರಮೇಣ ಕನ್ನಡ ಸಾಹಿತ್ಯ ಕೃಷಿಗೆ ಕೈ ಹಾಕಿ ಇಂದು ಕನ್ನಡ, ಕರ್ನಾಟಕದಷ್ಟೇ ಪ್ರಾಮುಖ್ಯತೆ ಪಡೆದಿರುವ ಕೆ.ವಿ.ಪುಟ್ಟಪ್ಪನವರು 1904ರಲ್ಲಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ಎಂಬ ಗ್ರಾಮದಲ್ಲಿ ಹುಟ್ಟಿದವರು. ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಮಲೆನಾಡಿನೊಂದಿಗೆ ಆಟವಾಡುತ್ತ, ಮೋಹಕ ಮಂಜಿನೊಂದಿಗೆ ಮಾತಿಗಿಳಿಯುತ ಬೆಳೆದ ಇವರು ಮೂಲತಃ ನಿಸರ್ಗದ ಆರಾಧಕರಾಗಿದ್ದರು. 

ಪ್ರೌಢರಾಗುತ್ತಾ ಹೃದಯ ವಾಸ್ತವಕ್ಕೆ ತೆರೆದುಕೊಳ್ಳುತ್ತಿದ್ದಂತೆಯೇ ತಮ್ಮ ಅಂತಃಸತ್ವಕ್ಕೆ ಅಕ್ಷರ ರೂಪ ಕೊಡುತ್ತಾ ಹೋದಂಥವರು. ಹೊಸ ತಲೆಮಾರಿನ, ಹೊಸ ಚಿಂತನೆಗಳುಳ್ಳ ಸಾಹಿತ್ಯವನ್ನು ಕೊಟ್ಟಂಥವರು. ತಮ್ಮ 'ವಿಶ್ವಮಾನವ ಸಂದೇಶ'ದ ಮೂಲಕ ಜಗತ್ತಿನ ಸಕಲರನ್ನೂ ತನ್ನವರೆಂದು ಭಾವಿಸಿದಂಥವರು. 'ಮನುಜ ಮತ, ವಿಶ್ವ ಪಥ' ಅನ್ನುವ ಮೂಲಕ ಪರಸ್ಪರ ಮಾನವರ ನಡುವಿನ ಪುರಾತನ ಗೋಡೆಗಳನ್ನು ಕೆಡವಿ, ಮಾನವೀಯತೆಯ ನಿಜವಾದ ದೀಪ ಹಚ್ಚಲು ಪ್ರಯತ್ನಿಸಿದಂಥವರು. ದಮನಿತರ ದನಿಯಾಗಿ ನಿಂತಂಥವರು. ಎಲ್ಲ ತತ್ವದೆಲ್ಲೆ ಮೀರಿ, ನಿರ್ದಿಗಂತವಾಗಿ ಏರಿ ಅನಂತವಾಗಿರುವಂತೆ ತಮ್ಮ ಚೇತನವನ್ನು ಪ್ರಚೋದಿಸಿದಂಥವರು. ಅಂಧತ್ವದಿಂದ ಹೊರ ಬಂದು ವಿಜ್ಞಾನದ ದೇವಿಗೆ ಹಿಡಿಯುವಂತೆ ಪ್ರೇರೇಪಿಸಿದಂಥವರು. ಇಷ್ಟಕ್ಕೂ, 'ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ' ಅನ್ನುವ ಮಹತ್ವದ ತತ್ವವನ್ನು ಸಾರಿದಂಥವರು. 'ಯಾವ ಶಾಸ್ತ್ರ ಯಾವುದನ್ನು ಹೇಳಿದರೇನು? ಎದೆಯ ದನಿಗೆ ಮಿಗಿಲು ಶಾಸ್ತ್ರವಿಹುದೇನು? ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು? ನಿನಗೆ ನೀನೆ ಮನು!' ಅನ್ನುವ ಮೂಲಕ ನಿಂತ ನೀರಿಗೆ ಚಲನೆಯ ಚೈತನ್ಯ ತರಲು ಪ್ರಯತ್ನಿಸಿದಂಥವರು. ಭೂತಕ್ಕೆ ಜೋತು ಬಿದ್ದ ಜಡಮನಸ್ಸುಗಳನ್ನು ವರ್ತಮಾನದ ಪಡಸಾಲೆಗೆ ಎಳೆದು ತರಲು ಯತ್ನಿಸಿದಂಥವರು. ಈ ವಿಚಾರವಾಗಿ ಹಲವರ ವಿರೋಧವನ್ನೂ ಕಟ್ಟಿಕೊಂಡರೂ ಧೃತಿಗೆಡದೆ ತಮ್ಮ ಪಾರದರ್ಶಕ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿದ್ದಂಥವರು. ತಮ್ಮ ಸಮಕಾಲೀನ ಸಾಹಿತಿಗಳಾದ ಮಾಸ್ತಿ ವೆಂಕಟೇಶ ಅಯಂಗಾರ್, ದ.ರಾ.ಬೇಂದ್ರೆ ಅಂತಹವರೊಂದಿಗೆ ಒಳ್ಳೆಯ ಗೆಳೆತನವನ್ನು ಇಟ್ಟುಕೊಂಡೇ 'ನಿಮ್ಮೊಡನಿದ್ದು ನಿಮ್ಮಂತಾಗದೆ' ಅಂತ ತಮ್ಮದೇ ವಿಚಾರಗಳನ್ನು ತಮ್ಮ ಬರಹಗಳ ಮೂಲಕ ವ್ಯಕ್ತಪಡಿಸಿದಂಥವರು. ಬರೆದಂತೆ ಬದುಕಿದರೂ ಕೂಡ. 

ಕೊಳಲು, ಪಾಂಚಜನ್ಯ, ಅಗ್ನಿಹಂಸ, ಕುಟೀಚಕ, ಮಂತ್ರಾಕ್ಷತೆ, ವಿಭೂತಿ ಪೂಜೆ, ಕದರಡಕೆ, ಮರಿ ವಿಜ್ಞಾನಿ, ದ್ರೌಪತಿಯ ಶ್ರೀಮುಡಿ, ರಕ್ತಾಕ್ಷಿ, ಶ್ಮಶಾನ ಕುರುಕ್ಷೇಂತ್ರಂ, ಮಹಾರಾತ್ರಿ ಸೇರಿದಂತೆ ಇನ್ನು ಅನೇಕ ಕೃತಿಗಳನ್ನು ರಚಿಸಿದ ಕುವೆಂಪು ಅವರಿಗೆ ಒಲಿಯದ ಪ್ರಶಸ್ತಿ, ಪುರಸ್ಕಾರಗಳಿಲ್ಲ. 'ಶ್ರೀ ರಾಮಾಯಣ ದರ್ಶನಂ' ಮಹಾಕಾವ್ಯಕ್ಕಾಗಿ ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು ಜೊತೆಗೆ ಪಂಪ ಪ್ರಶಸ್ತಿ, ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನಗಳೊಂದಿಗೆ ಹಲವು ವಿಶ್ವ ವಿದ್ಯಾನಿಲಯಗಳ ಗೌರವ ಡಾಕ್ಟರೇಟ್‌ಗಳು ಬಂದಿವೆ. ಅಧ್ಯಾಪಕರಾಗಿದ್ದುಕೊಂಡೇ ಎಲ್ಲಾ ಪ್ರಕಾರದ ಸಾಹಿತ್ಯ ರಚನೆಯಲ್ಲಿ ಸೈ ಎನಿಸಿಕೊಂಡ ಇವರು ಬರೆದ ಮಲೆಗಳಲ್ಲಿ ಮದುಮಗಳು ಹಾಗೂ ಕಾನೂರು ಹೆಗ್ಗಡತಿ ಎಂಬೆರಡು ಕಾದಂಬರಿಗಳು ಮಲೆನಾಡಿನ ಚಿತ್ರಣ, ವಾಸ್ತವಿಕ ಜೀವನವನ್ನು ವಿಸ್ತಾರವಾಗಿ ಬಿಚ್ಚಿಟ್ಟ ಮಹಾಗ್ರಂಥಗಳೇ ಸರಿ. ಈ ಮೇರುಕವಿಯ ಲೇಖನಿಯಿಂದ ಮೂಡಿ ಬಂದ 'ತೆರೆದಿದೆ ಓ ಬಾ ಅತಿಥಿ' ಕವಿತೆಯು ನಿರ್ದೇಶಕದ್ವಯರಾದ ದೊರೈ-ಭಗವಾನ್ ನಿರ್ದೇಶನದ ’ಹೊಸಬೆಳಕು’ ಚಿತ್ರದಲ್ಲಿ ದೃಶ್ಯರೂಪ ಪಡೆದುದ್ದು ನಮ್ಮೆಲ್ಲರ ಸೌಭಾಗ್ಯ. 

ಸಂಗೀತ ನಿರ್ದೇಶಕ ಎಂ.ರಂಗರಾವ್‌ರವರ ಸ್ವರ ಸಂಯೋಜನೆಯೊಂದಿಗೆ ಎಸ್.ಜಾನಕಿ ಹಾಗೂ ವಾಣಿ ಜಯರಾಂರವರ ದನಿ ಕೇಳುಗರನ್ನು ಮೋಡಿ ಮಾಡಿದ್ದು ಗೊತ್ತಿರುವ ಸಂಗತಿ ಸಾಹಿತ್ಯದ ಸಾಲುಗಳ ಭಾವಕ್ಕೊಂದು ಜೀವ ಕೊಡುವಲ್ಲಿ ರಂಗರಾವ್ ಅವರ ಸಂಗೀತ ಜ್ಞಾನ ಶ್ಲಾಘನೀಯವಾದದ್ದು. ಮಧುರವಾದ ಹಾಡೊಂಡನ್ನು ಸುಮಧುರಗೊಳಿಸುವಲ್ಲಿ ಗಾನಕೋಗಿಲೆಗಳಾದ ಎಸ್.ಜಾನಕಿ ಮತ್ತು ವಾಣಿ ಜಯರಾಂ ರವರ ಕೊಡುಗೆಯೂ ಅಪಾರವಾದದ್ದೆ. ಗಾಯನದಲ್ಲಿನ ತಲ್ಲೀನತೆ ಎಂಥವರನ್ನೂ ಸಹ ಮಂತ್ರಮುಗ್ಧರನ್ನಾಗಿಸುತ್ತದೆ.


ದೊರೈ-ಭಗವಾನರ ಭಾವಸ್ಪಂದನ

ಎಪ್ಪತ್ತು ಎಂಭತ್ತರ ದಶಕದಲ್ಲಿ ಶ್ರೇಷ್ಠ ಚಿತ್ರಗಳನ್ನು ಕನ್ನಡಿಗರಿಗೆ ನೀಡಿದ ಈ ನಿರ್ದೇಶಕದ್ವಯರ ಹೊಂದಾಣಿಕೆ ಮೆಚ್ಚುವಂಥದ್ದು. ಕ್ರಿಯಾಶೀಲತೆಯ ವಿಚಾರದಲ್ಲಿ ಎರಡೂ ಮನಸುಗಳು ಒಂದೇ ಕಕ್ಷೆಯಲ್ಲಿ ಪರಿಭ್ರಮಿಸುವುದು ಕಷ್ಟಕರ ಕತೆಯನ್ನು ಬರೆಯುವುದರಲ್ಲಿ ಇರಬಹುದು. ಚಿತ್ರಕತೆಯನ್ನು ವಿಸ್ತರಿಸುವುದರಲ್ಲಿ ಇರಬಹುದು ಅಥವಾ ದೃಶ್ಯಗಳನ್ನು ಪೋಣಿಸುವ ವಿಚಾರದಲ್ಲಿ ಇರಬಹುದು ಎರಡು ಮನಸುಗಳು ಸಮಚಿತ್ತದಿಂದ ಏಕಮುಖವಾಗಿ ಚಲಿಸಬೇಕಾಗಿ ಬಂದಾಗ ಏಕಾಗ್ರತೆ ಹಾಗೂ ಏಕ ಅಭಿರುಚಿ ಬಹು ಮುಖ್ಯವಾಗುತ್ತದೆ. ಕೇವಲ ಒಂದೇ ಒಂದು ಮನಸಿನಲ್ಲೆ ಹಲವಾರು ಚಿಂತನೆಗಳ ಜಿಜ್ಞಾಸೆ ಮೈದೋರುವಾಗ ಎರಡು ಮನಸುಗಳು ಒಟ್ಟಾಗಿ ಚಿಂತಿಸುವುದು ನಾವಂದುಕೊಂಡಷ್ಟು ಸುಲಭದ ಮಾತಲ್ಲ. ಈ ನಿಟ್ಟಿನಲ್ಲಿ ದೊರೈ-ಭಗವಾನರು ವಿಶೇಷವಾಗಿ ನಿಲ್ಲುತ್ತಾರೆ. ತಮ್ಮೊಳಗಿನ ಸೂಕ್ಷ್ಮ ಸಂವೇದನೆಗಳು,  ತೀಕ್ಷ್ಣ ಪ್ರಚೋದನೆಗಳನ್ನು ಚಿತ್ರವೊಂದರ ರೂಪದಲ್ಲಿ ಪರದೆಯ ಮೇಲೆ ತರುವಲ್ಲಿ ಯಶಸ್ವಿಯಾಗಿ ಇತರರಿಗೆ ಮಾದರಿಯಾಗಿದ್ದಾರೆ. ಕಾದಂಬರಿಗಳನ್ನಾಧರಿಸಿ ಸಿನಿಮಾ ಮಾಡುವಾಗ ಕಾದಂಬರಿಯ ಪಾತ್ರಗಳಿಗೆ ಮನಸುಗಳನ್ನು ಒಗ್ಗಿಸಿಕೊಂಡು ತಾವೇ ಪಾತ್ರವಾಗಿ ಅನುಭವಿಸಿ ತದನಂತರ ಕಲಾವಿದರಿಂದ ಕೆಲಸ ಹೊರತೆಗೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ಜೋಡಿ ನಿರ್ದೇಶಿಸಿದ ಹಲವಾರು ಚಿತ್ರ ರತ್ನಗಳಲ್ಲಿ ಡಾ|| ರಾಜ್ ಕುಮಾರ್, ಸರಿತ ಮಮತಾ ರಾವ್ ಅಭಿನಯದ ಹೊಸ ಬೆಳಕು ಕೂಡಾ ಒಂದು.

 ಚಿತ್ರದ ನಾಯಕ ತನ್ನ ಅಕ್ಕನ ಮನೆಗೆ ಬಂದಾಗ ಗಯ್ಯಾಳಿ ಅಕ್ಕನ ದೌರ್ಜನ್ಯಕ್ಕೊಳಗಾಗುತ್ತ ತನ್ನ ನೋವನ್ನು ತಾನೇ ನುಂಗಿಕೊಳ್ಳುವ ನಾಯಕಿಯ ಅಸಹಾಯಕತೆಯು ಸೂಕ್ಷ್ಮವಾಗಿ ಗಮನಕ್ಕೆ ಬರುತ್ತದೆ. ತಾಯಿಯನ್ನು ಕಳೆದುಕೊಂಡ ಹೆಣ್ಣೊಬ್ಬಳ  ಅಳಲು ಅರ್ಥವಾಗುತ್ತಾ ಹೋಗುತ್ತದೆ. ಮನೆಯನ್ನು ಸ್ವಚ್ಚಗೊಳಿಸಿ, ಕೊಟ್ಟಿಗೆಯನ್ನು ಒಪ್ಪ ಓರಣಗೊಳಿಸಿ, ಬಟ್ಟೆಗಳನ್ನೊಗೆದು ಶುಭ್ರಗೊಳಿಸಿ, ಮುಸುರೆ ಗಟ್ಟಿದ ಪಾತ್ರೆಗಳನ್ನು ಚಂದಗೊಳಿಸುವವರೆಗು ಬಿಡುವಿಲ್ಲದೆ ದುಡಿಯುವ ನಾಯಕಿಯನ್ನು ಕಂಡು ಇವಳು ಮನೆಮಗಳೋ ಅಥವಾ ಜೀತದಾಳೋ ಎಂಬ ಗೊಂದಲ ನಾಯಕನ ಎದೆಯಲ್ಲಿ ಮೂಡುತ್ತದೆ. ಅಂತೆಯೇ ಆ ಹೆಣ್ಣು ಜೀವದ ಬಗ್ಗೆ ಕನಿಕರ, ಕಾಳಜಿ, ಮುತುವರ್ಜಿ, ಅನುಕಂಪ ಎಲ್ಲವೂ ಒಟ್ಟೊಟ್ಟಿಗೆ ಹುಟ್ಟಿಕೊಳ್ಳುತ್ತದೆ. ಅಷ್ಟು ಕಷ್ಟಗಳನ್ನು ಕರ್ತವ್ಯವೆಂದು ಭಾವಿಸಿ ಸದಾ ಮುಗುಳ್ನಗುತ್ತ ಬದುಕು ದೂಡುವ ಸ್ಥಿತಿ ಸಹಜವಾಗಿಯೇ ಜೀವ ತಾಕುತ್ತದೆ. ನಾಯಕನ ಅಂತಃಕರಣ ದಿನೇ ದಿನೇ ಆರ್ದ್ರವಾಗುತ್ತಾ ಅವಳಿಗೊಂದು ಉಪಕಾರ ಮಾಡಿದರೆ ಹೇಗೆ? ಅವಳ ಮೇಲಿನ ಕಷ್ಟದ ಹೊರೆಯನ್ನು ಕೆಳಗಿಳಿಸಿದರೆ ಹೇಗೆ? ಎಂಬ ಆಲೋಚನೆ ಮಾಡುತ್ತಿದ್ದಂತೆಯೇ ನಾಯಕ ಕಾರ್ಯಪ್ರವೃತ್ತನಾಗುತ್ತಾನೆ. ಅವಳು ಸಿದ್ಧಪಡಿಸಿದ ಊಟ ರುಚಿಯಿಲ್ಲವೆಂದೂ, ಅವಳು ಹುಸುವಿನ ಹಾಲು ಕದಿಯುತ್ತಾಳೆಂದೂ ಇನ್ನೂ ಕೆಲವು ಜಾಣ ಆರೋಪಳನ್ನು ನಾಯಕಿಯ ಮೇಲೆ ಹೇರಿ ಅವಳು ಹೇರಿಕೊಂಡಿದ್ದ ಕೆಲಸದ ಭಾರವನ್ನು ರಾಕ್ಷಸಿ ಅಕ್ಕನ ಹೆಗಲಿಗೇರಿಸುತ್ತಾನೆ. ನಾಯಕನ ಸದುದ್ಧೇಶವನ್ನು ಅರಿಯದ ನಾಯಕಿ ನೊಂದುಕೊಳ್ಳುತ್ತಾಳೆ. ನಾನೇನಯ್ಯ ಅನ್ಯಾಯ ಮಾಡಿದ್ದೆ ನಿಂಗೆ? ಅಂತ ಕೇಳಿಯೂ ಬಿಡುತ್ತಾಳೆ. ಕಾಲಕ್ರಮೇಣ ಸತ್ಯ ತಿಳಿದಾಗ ಮುಜುಗರಕ್ಕೊಳಗಾಗುತ್ತಾಳೆ. ಹಾಗೆಯೇ, ಆಕೆಗೆ ನಾಯನಕನ ಬಗ್ಗೆ ಅಭಿಮಾನವೂ ಬರುತ್ತದೆ.

 ದಿನಗಳು ಸಾಗುತ್ತಿದ್ದಂತೆಯೇ ಸಂಗೀತ ಪ್ರಿಯ ನಾಯಕನ ಕಣ್ಣಿಗೆ ಸದಾ ಮೂಕಿಯಂತೆ ಕಂಡಿದ್ದ ನಾಯಕಿ ಹಾಡುವುದೇಂದರೆ ವಿಶೇಷವಲ್ಲವೆ? ಹೌದು, ಅವತ್ತೊಂದಿನ ’ತೆರೆದಿದೆ ಮನೆ ಓ ಬಾ ಅತಿಥಿ’ ಎಂಬ ಗಾನಗಾಳಿ ಕಿಟಕಿಯಿಂದ ತೇಲಿ ಬಂದಾಗ ನಾಯಕನಿಗೆ ಎಲ್ಲಿಲ್ಲದ ಆಶ್ಚರ್ಯ! ಈ ಹಳ್ಳಿಯಲ್ಲಿ ಇಷ್ಟು ಮಧುರವಾದ ಕಂಠ ಸಿಗಲು ಹೇಗೆ ತಾನೆ ಸಾಧ್ಯ ಎಂದುಕೊಂಡು ಆ ದನಿಯನ್ನೇ ಹಿಂಬಾಲಿಸಿದಾಗ ಕಿಟಕಿಯ ಸರಳುಗಳ ಮಧ್ಯೆ ಅದ್ಭುತವೊಂದು ಕಾದಿತ್ತು. ತೆರೆದ ಮನಸ್ಸಿನಿಂದ ಲೀಲಾಜಾಲವಾಗಿ 'ತೆರೆದಿದೆ… ಮನೆ' ಹಾಡನ್ನು ಹಾಡುತ್ತಿದ್ದ ನಾಯಕಿಯನ್ನು ಕಂಡು ಕುತೂಹಲ ಮಿಶ್ರಿತ ಗೊಂದಲದಿಂದ ಮರೆಯಲ್ಲಿ ನಿಂತು ಕಣ್ತುಂಬ ನೋಡತೊಡಗಿದ. ಹಾಡನ್ನು ಆಸ್ವಾದಿಸತೊಡಗಿದ. ಅವಳು ಒಂದು ವೇಳೆ ತನ್ನನ್ನು ನೋಡಿಬಿಟ್ಟರೆ ಎಲ್ಲಿ ಹಾಡು ಅರ್ಧಕ್ಕೆ ನಿಂತುಹೋಗೊತ್ತೋ ಎಂಬ ಕಳಕಳಿಯೂ ಇರಬಹುದು, ಒಂದಂತೂ ನಿಜ, ಶುದ್ಧ ಮನಸ್ಸು ತಿಳಿಗೊಳದ ಜಲವಿದ್ದಂತೆ ತನ್ನ ಸುತ್ತಮುತ್ತಲಿನ ಅಶುದ್ಧತೆಯನ್ನು ಶುಧ್ದಗೊಳಿಸಬಲ್ಲ ಸಾಮರ್ಥ್ಯ ಹೊಂದಿರುತ್ತದೆ. ಅವಳು ಎಷ್ಟೇ ನೋವುಂಡರೂ ಅಂತರಾಳದಲ್ಲಿ ನಲಿವಿನ ಚಿಗುರು ಚಿಗುರುತ್ತಲೇ ಇತ್ತು. ಬದುಕುವಾಸೆಯ ಪಸೆ ಹಸಿಯಾಗಿಯೇ ಇತ್ತು.

 'ತೆರೆದಿದೆ ಮನೆ….’ ಕವಿತೆಯನ್ನು ಸಮರ್ಪಕವಾಗಿ ದೊರೆಭಗವಾನ್ ರವರು ಚಿತ್ರಕತೆಯೊಂದಿಗೆ ಅಳವಡಿಸಿಕೊಂಡಿದ್ದಾರೆ. ಬೇಸತ್ತು ಹೋದ ಬಾಳಿಗೊಂದು ಹೊಸಬೆಳಕಿನ ಅನಿವಾರ್ಯತೆ ಇದ್ಧೆ ಇರುತ್ತದೆ. ಇದನ್ನು ಮನಗಂಡ ನಿರ್ದೇಶಕರು ತೆರೆದಿದೆ ಮನೆ ಆಯ್ಕೆ ಮಾಡಿಕೊಂಡಿದ್ದು ಅವರ ಅಭಿರುಚಿಯನ್ನು ಬಿಂಬಿಸುತ್ತದೆ. ಹಾಗೆಯೇ ನೊಂದ ಮನಸಿಗೊಂದು ಆಶಾಕಿರಣ ಬಯಸುವಾಗಿನ ಯೋಚನೆಯ ತೀವ್ರತೆಯನ್ನರಿತುಕೊಂಡು ಎಂ.ರಂಗರಾವ್ ಅವರು ರಾಗಸಂಯೋಜನೆ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಎಸ್. ಜಾನಕಿ ಹಾಗೂ ವಾಣಿ ಜಯರಾಂ ಭಾವೋತ್ಕಟತೆಯಿಂದ ಹಾಡಿದ್ದಾರೆ.


ಆಶಾವಾದಿ ಕುವೆಂಪು 

ಬದುಕಿನ ಹೊಸತಿನೆಡೆಗಿನ ತುಡಿತ ಎಷ್ಟು ಹಂಬಲದಿಂದ ಕೂಡಿರುತ್ತದೆ ಎಂಬುದು ಸದಾ ಹೊಸತನ್ನು ಆಲೋಚಿಸುವ ಕವಿಹೃದಯಕ್ಕೆ ಸುಲಭವಾಗಿ ದಕ್ಕುವಂಥದ್ದು, ಕಳೆಗುಂದಿ ಹೋಗಿ ಜಡಗೊಂಡ ಮನಸಿಗೊಂಡು ಚಲನೆ ದೊರೆಯಬೇಕಾದುದರ ಅನಿವಾರ್ಯತೆ ಹಾಗೂ ಸೆಟೆದು ನಿಂತು ಮುನ್ನುಗ್ಗುಬೇಕೆಂದು ತಹತಹದ ತುತ್ತ ತುದಿ ಕವಿಮನದಲ್ಲಿ ಸಣ್ಣ ಸಂಚಲನ ಉಂಟುಮಾಡಬಲ್ಲದು. ಇದಕ್ಕೊಂದು ದ್ಯೋತಕ ಉದಾಹರಣೆ ಎಂದರೆ ಕುವೆಂಪುರವರ ’ತೆರೆದಿದೆ ಮನೆ…’ ಕವಿತೆ. ತೆರೆದಿದೆ ಮನೆ ಓ ಬಾ ಅತಿಥಿ ಎಂಬ ಸಾಲಿನಲ್ಲೇ ಹೊಸತನ್ನು ಆಹ್ವಾನಿಸಿ ಬಿಗಿದಪ್ಪುವ ಬಯಕೆ ಕಾಣುತ್ತದೆ. ಹಾಗೆಯೇ 'ಹೊಸ ಬೆಳಕಿನ ಹೊಸಗಾಳಿಯ ಹೊಸ ಬಾಳನು ತಾ ಅತಿಥಿ' ಎಂಬ ಸಾಲುಗಳಲ್ಲಿ ತನ್ನೊಳಗಿನ ಕೊರತೆಗಳನ್ನು ತುಂಬಿ ಹೊಸ ದಿಕ್ಕಿನೆಡೆಗೆ ನಡೆಸು ಎನ್ನುವ ವಿನಂತಿ ಧ್ವನಿಸುತ್ತದ. ಈ ಸಾಲುಗಳು ನಾಯಕಿಯ ಪಾತ್ರದ ತುಡಿತವನ್ನು ಪ್ರತಿನಿಧಿಸುತ್ತವೆ. ಸತ್ತ ಬಾಳಿಗೊಂದು ನವಚೈತನ್ಯಬೇಕಾಗಿರುವುದರ ಹಪಾಹಪಿ ಎದ್ದು ಕಂಡು ಹಾಡು ಚಿತ್ರಕತೆಯೊಂದಿಗೆ ಬೆಸೆದುಕೊಂಡಿರುವ ಅಂಶ ಗಮನಾರ್ಹವಾಗಿ ನಿಲ್ಲುತ್ತದೆ. 'ಆವ ರೂಪದೊಳು ಬಂದರು ಸರಿಯೆ, ಆವ ವೇಷದೊಳು ಬಂದರು ಸರಿಯೆ' ಎಂಬ ಸಾಲುಗಳಲ್ಲಿ ನಾಯಕಿಯ ಪಾತ್ರ ತನ್ನೊಳಗೆ ಬೇಯುತ್ತಿರುವ ನೋವಿಗೊಂದು ತೆರೆಬೀಳಲಿ ಎಂಬ ಅಸಹಾಯಕತೆಯನ್ನು ವ್ಯಕ್ತಗೊಳಿಸುತ್ತದೆ. ತೆರೆದ ಮನಸ್ಸು ಸಾಂತ್ವನ ಹೇಳಲು ಅತಿಥಿಯೊಬ್ಬನನ್ನು ಆಹ್ವಾನಿಸುವ ಬಗ್ಗೆ ಬಿತ್ತರಗೊಳ್ಳುತ್ತದೆ. ಕವಿಯೊಬ್ಬನ ಕಲ್ಪನೆ ಕೇವಲ ಕಲ್ಪನೆಯಾಗಿರದೆ ವಾಸ್ತವಕ್ಕೆ ಹತ್ತಿರವಾದದ್ದು, ಹಲವು ಜೀವಗಳೊಂದಿಗಿನ ಆಪ್ತ ಸಂವಾದ ಎಂಬುದನ್ನು ಗಮನಿಸಬೇಕಾಗುತ್ತದೆ.

 'ಇಂತಾದರೂ ಬಾ ಅಂತಾದರೂ ಬಾ ಎಂತಾದರು ಬಾ' ಎಂಬ ಸಾಲಿನಲ್ಲಿ ನೋವಿನುತ್ತುಂಗತೆಯನ್ನು ತಲುಪಿದ ಜೀವದ ಮೌನದಳಲು ಕೇಳಿಬರುವುದರ ಜೊತೆಗೆ 'ಬೇಸರವಿದು ಸರಿಸುವ  ಹೊಸಬಾಳ ಉಸಿರಾಗಿ ಬಾ' ಎಂದು ಮುಂದುವರಿಯುತ್ತ ತನ್ನ ಆಕ್ರಂದನದ ಕೂಗು ಇಂದೇ ಕೊನೆಯಾಗಿ ಹೊಸಬಾಳಿನ ಉಸಿರಿನೊಂದಿಗೆ ಬದುಕುವೆನೆಂಬ ಗಹನವಾದ ವಿಶ್ವಾಸ ಹಾಗೂ ಅನಿವಾರ್ಯತೆ ಬಿಂಬಿಸುತ್ತದೆ. ನೊಂದ ಮನಸಿನ ಬೇಕುಗಳೇನು? ಎಂಬುದರ ಅರಿವು ಕವಿಗೆ ತಟ್ಟಿದಂತಿದೆ. ನಾನೊಂದು ಕಡೆ ಬರೆದಿದ್ದ ಸಾಲು ಇಲ್ಲಿ ನೆನಪಾಗುತ್ತದೆ: 'ಕವಿಯೊಬ್ಬ ಕಲೆಗಾರ, ಕರಗಿದ ಎದೆಗೂಡು. ಸಿಹಿಕಹಿಗಳ ಕಸರತ್ತನು ಅವನೆಣೆದರೆ ಅದು ಹಾಡು' ಎಂಬ ಮಾತು.

 ಕವಿಯೊಬ್ಬ ಕೇವಲ ಸಾಲುಗಳನ್ನು ಹುಟ್ಟಿಸುವ ಅಪ್ಪನಲ್ಲ. ಅವನೊಬ್ಬ ಭಾವನೆಗಳ ಗುಲಾಮ, ನೊಂದೆದೆಗಳ ಆಪ್ತ ಜೀವಿ ಎಂಬುದು ನನ್ನ ಅನಿಸಿಕೆ. ಕುವೆಂಪುರವರ ದೃಷ್ಟಿವೈಶಾಲ್ಯತೆ, ಹೃದಯ ವೈಶಾಲ್ಯತೆ, ಗಮನಿಕೆ, ಗ್ರಹಿಸುವಿಕೆ, ಅಭಿವ್ಯಕ್ತಿಗೊಳಿಸುವಿಕೆ ದೈತ್ಯಸ್ವರೂಪದ್ದು ಎಂಬುದಕ್ಕೆ 'ತೆರೆದಿದೆ ಮನೆ' ಕೂಡ ಒಂದು ಸಮರ್ಥ ಉದಾಹರಣೆ: ಹಾಗೇ ಮುಂದುವರೆಯುತ್ತ 'ಕಡಲಾಗಿ ಬಾ ಬಾನಾಗಿ ಬಾ ಗಿರಿಯಾಗಿ ಬಾ ಕಾನಾಗಿ ಬಾ' ಎಂಬ ಸಾಲು ಬಿಚ್ಚಿಕೊಳ್ಳುತ್ತಾ ಹೋದಂತೆ ನಾಯಕಿಯ ಪಾತ್ರವು ತನ್ನ ಅಗಾಧ ನೋವಿಗೊಂದು ಬಿಡುಗಡೆ ದೊರೆತು, ಆತಂಕಕ್ಕೊಂದು ನಿಲುಗಡೆ ದೊರೆತು ಮುಂದೆ ಸಾಗಲು ತನ್ನ ಅತಿಥಿ 'ಯಾವ ರೂಪದಲ್ಲಿ ಬಂದರೂ ಸರಿಯೆ' ಸ್ವೀಕರಿಸುತ್ತೇನೆಂಬ ಆಕಾಂಕ್ಷೆ ತಲೆದೋರುತ್ತದೆ. ಕಡಲಿನಂತೆ ಬೋರ್ಗರೆದು ಬಂದರೂ ಸರಿಯೆ, ಬಾನಿನಂತೆ ಅನಂತವಾಗಿ ಬಂದರೂ ಸರಿಯೆ, ಗಿರಿ-ಕಾನಿನಂತೆ ನಿಶ್ಚಲ ರೂಪದಲ್ಲಿ ಬಂದರೂ ಸರಿಯೆ! ಆದರೆ ಬರುವಾಗ ಹೊಸರಾಗದ ಹೊಸತಾಣದ ರಸ ಜೀವವ ತರಲೇಬೇಕು ಎನ್ನುವ ಮೂಲಕ ಬರಲಿರುವ ತನ್ನ ಅತಿಥಿಯ ಮೇಲೆ ತಾನೆಷ್ಟು ಅವಲಂಬಿತಳಾಗಿದ್ದಾಳೆ ಎನ್ನುವುದು ಖಾತ್ರಿಯಾಗುತ್ತದೆ.

 ಇವೆಲ್ಲವನ್ನು ಕೂಲಂಕುಶವಾಗಿ ಗಮನಿಸಿದಾಗ ಒಂದು ಪ್ರಶ್ನೆ ಎದುರಾಗುತ್ತದೆ. ಆ ಬರಲಿರುವ ಅತಿಥಿಯಾರಿರಬಹುಬು? ಯಾರನ್ನು ಕುರಿತು ಆ ಹೆಂಗರುಳು ಗೋಗರೆಯುತ್ತಿತ್ತು? ಎಂಬುದೇ ಆ ಸವಾಲಿನ ಮಾತು. ಉತ್ತರ ಹುಡುಕುತ್ತಾ ಸಾಗಿದಂತೆ ಪ್ರಶ್ನೆಗಳ ಮಹಾಪೂರವೇ ಹರಿದು ಬರುತ್ತದೆ. ಆ ಅತಿಥಿ ನಾಯಕನೇ ಆಗಬಾರದೇಕೆ? ನಾಯಕಿಯ ಕತ್ತಲ ಬದುಕಿಗೆ ಹೊಸ ಬೆಳಕಾಗಬಾರದೇಕೆ? ಅದು ಬಿಡಿ, ಇಂತಹ ನಾನಾ ಬಗೆಯ ದೃಷ್ಟಿಕೋನಗಳಿಗೆ ಕನ್ನಡಿ ಹಿಡಿಯುವಂತೆ ನಿರ್ದೇಶಕರಾದ ದೊರೈ -ಭಗವಾನರು ಚಿತ್ರಿಸಿದ್ದಾರೆ. ಕುವೆಂಪುರವರು ಬರೆದಿದ್ದಾರೆ. ನೊಂದ ಮನದ ನಿರೀಕ್ಷೆಗೆ ಪಾತ್ರವೊಂದು ಜೀವ ತುಂಬಿದೆ. ಇಷ್ಟು ಸಾಕಲ್ಲವೆ ಒಂದು ಕವಿತೆ ಸುಂದರ ಚಿತ್ರಗೀತೆಯಾಗಿ ಜೀವಂತವಾಗಿರಲು! ಹಾಡಿಗೆ ಮನಸು ತೆರೆದುಕೊಳ್ಳೋಣ ಬನ್ನಿ…


ತೆರೆದಿದೆ ಮನೆ ಓ ಬಾ ಅತಿಥಿ 

ತೆರೆದಿದೆ ಮನೆ ಓ ಬಾ ಅತಿಥಿ

ಹೊಸಬೆಳಕಿನ ಹೊಸಗಾಳಿಯ

ಹೊಸಬಾಳನು ತಾ ಅತಿಥಿ.

 

ಆವ ರೂಪದೊಳು ಬಂದರು ಸರಿಯೆ

ಆವ ವೇಷದೊಳು ನಿಂದರು ಸರಿಯೆ

ನೇಸರುದಯದೊಳು ಬಗೆಯ ಬಾ

ತಿಂಗಳಂದದಲಿ ಬಗೆಯ ಬಾ

 

ತೆರೆದಿದೆ ಮನೆ ಓ ಬಾ ಅತಿಥಿ

ಹೊಸಬೆಳಕಿನ ಹೊಸಗಾಳಿಯ

ಹೊಸಬಾಳನು ತಾ ಅತಿಥಿ.

 

ಇಂತಾದರೂ ಬಾ ಅಂತಾದರು ಬಾ

ಎಂತಾದರು ಬಾ ಬಾ ಬಾ

ಬೇಸರವಿದು ಸರಿಸುವ

ಹೊಸಬಾಳ ಉಸಿರಾಗಿ ಬಾ ಬಾ ಬಾ

ಕಡಲಾಗಿ ಬಾ ಬಾನಾಗಿ ಬಾ

ಗಿರಿಯಾಗಿ ಬಾ ಕಾನಾಗಿ ಬಾ

ಕಡಲಾಗಿ ಬಾನಾಗಿ ಗಿರಿಯಾಗಿ ಕಾನಾಗಿ

 

ತೆರೆದಿದೆ ಮನವು ಬಾ

ಹೊಸರಾಗದ ಹೊಸತಾಣದ

ರಸ ಜೀವವ ತಾ ತಾ ತಾ

 


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
amardeep.p.s.
amardeep.p.s.
10 years ago

"ತೆರೆದಿದೆ ಮನೆ ….." ಇನ್ನಷ್ಟು ಧಾರಾಳವಾಗಿ ಇಷ್ಟಪಟ್ಟು ಓದಿಸಿತು … ಕವಿಗಳೇ, ಲೇಖನ ತುಂಬಾ ಹಿಡಿಸಿತು .. ಕುವೆಂಪು… ದೊರೈ- ಭಗವಾನ್ ಹಾಗೂ  ಡಾ . ರಾಜ್  ಬಗ್ಗೆ, ಕಥೆ ಹೇಗೆ ಒಂದು ಹಾಡನ್ನೇ ಅನುಕರಿಸುವಂಥ ಸನ್ನಿವೇಶವನ್ನು ಒಳಗೊಂಡಿರುತ್ತೆ ಎನ್ನುವುದನ್ನು ಚೆನ್ನಾಗಿ ವಿವರಿಸಿದ್ದೀರಿ ….  ಅಭಿನಂದನೆಗಳು … 

Santhoshkumar LM
10 years ago

Super Shiva…Very nice explanation about the song!!

Hipparagi Siddaram
Hipparagi Siddaram
10 years ago

ಲೇಖನ ಚೆನ್ನಾಗಿದೆ…ಮಹಾಕವಿಗಳ ಉತ್ತುಂಗತೆಗೆ ಇಂತಹ ಹಲವಾರು ಸಂಗತಿಗಳು…ಬಗೆದಷ್ಟು…ಮೊಗೆದಷ್ಟು…ಬತ್ತದ ಜಲಧಾರೆಯಂತೆ…ಸಿನೇಮಾವೊಂದರ ಹಿನ್ನಲೆಯಲ್ಲಿ ಮಹಾಕವಿಗಳ ಕುರಿತು ಹೇಳುತ್ತಾ ದೊರೆ-ಭಗವಾನ ನಿರ್ದೇಶಕ ಜೋಡಿಯ ಕುರಿತು ವಿವೇಚಿಸಿರುವುದು ಮನಕ್ಕೆ ಹಿಡಿಸಿತು…..

sharada.m
sharada.m
10 years ago

'ತೆರೆದಿದೆ ಮನೆ' ಕವಿತೆ  ಛೆನ್ನಾಗಿ  ವಿಮರ್ಶಿಸಲ್ಪಟ್ಟಿದೆ..
ಕುವೆ೦ಪು ಅವರಿಗ ಒ೦ದು  ದೊಡ್ಡ  ನಮನ 

prashasti
10 years ago

ಚೆನ್ನಾಗಿದೆ 🙂

5
0
Would love your thoughts, please comment.x
()
x