ಮೂಲ: ‘ಸಕಿ’ (ಹೆಚ್.ಹೆಚ್.ಮನ್ರೊ)
ಅನುವಾದ: ಜೆ.ವಿ.ಕಾರ್ಲೊ
‘ಇನ್ನೇನು ಚಿಕ್ಕಮ್ಮ ಬರೋ ಹೊತ್ತಾಯ್ತು ಮಿಸ್ಟರ್ ನಟ್ಟೆಲ್. ಅಲ್ಲೀವರೆಗೂ ನೀವು ನನ್ನ ಕೊರೆತ ಕೇಳಲೇ ಬೇಕು. ಬೇರೆ ದಾರಿಯೇ ಇಲ್ಲ!’ ಎಂದಳು ಹುಡುಗಿ. ಅವಳಿಗೆ ಹದಿನಾಲ್ಕೋ, ಹದಿನೈದು ಆಗಿದ್ದಿರಬಹುದು. ವಯಸ್ಸೇ ಅಂತಾದ್ದು. ಚುರುಕಾಗಿದ್ದಳು. ಕಣ್ಣುಗಳಲ್ಲಿ ತುಂಟತನ, ಆತ್ಮವಿಶ್ವಾಸ ಭರಪೂರು ಎದ್ದು ಕಾಣುತ್ತಿತ್ತು.
ಹುಡುಗಿಯ ದೃಷ್ಟಿಯಲ್ಲಿ ತೀರಾ ಮಂಕಾಗದಂತೆ ಏನಾದರೂ ಆಸಕ್ತಿ ಕೆರಳುವಂತಾದ್ದು ಹೇಳಲು ಅವನು ಮಾತುಗಳಿಗಾಗಿ ತಡಕಾಡಿದ. ಮನೋವ್ಯಾಕುಲತೆಯಿಂದ ಬಳಲುತ್ತಿದ್ದ ಅವನು ಈಗಷ್ಟೇ ಚೇತರಿಸಿಕೊಂಡಿದ್ದು, ವೈಧ್ಯರ ಸಲಹೆ ಮೇರೆಗೆ ವಿಶ್ರಮಿಸಿಕೊಳ್ಳಲು ಪೇಟೆಯಿಂದ ಹಳ್ಳಿಯ ಕಡೆಗೆ ಬಂದಿದ್ದ. ಸ್ವಲ್ಪವೂ ಪರಿಚಯವಿಲ್ಲದ ಜನರೊಡನೆ ಬೆರೆತು ಒಡನಾಡಿದರೆ ತನ್ನ ವ್ಯಾಧಿ ಗುಣವಾಗುತ್ತದೆಂಬುದು ಭ್ರಮೆ ಎಂದು ಅವನಿಗನಿಸಿತ್ತು.
‘ಹಳ್ಳಿಗೆ ಹೋಗಿ ನೀನು ಮಾಡುವುದು ಅಷ್ಟೇ.. ಸನ್ಯಾಸಿಯಂತೆ ಒಬ್ಬನೇ ತನ್ನಷ್ಟಕ್ಕೇ ಇರುವುದು!’ ಅವನ ಅಕ್ಕ ಹೇಳಿದ್ದಳು. ‘ನಿನ್ನ ಕಾಹಿಲೆ ಗುಣವಾಗುವುದು ಬಿಡು, ಮತ್ತೂ ಹೆಚ್ಚಾಗುವುದು. ನಾನು ಅಲ್ಲಿದ್ದಾಗ ನನಗೆ ಆಪ್ತರಾಗಿದ್ದ ಕೆಲವರಿಗೆ ನಿನ್ನ ಪರಿಚಯ ಪತ್ರ ಬರೆದುಕೊಡುತ್ತೇನೆ. ಇವರೆಲ್ಲಾ ನಿಜಕ್ಕೂ ಬಹಳ ಒಳ್ಳೆಯ ಜನ.’
ಈಗವನು ಭೇಟಿಯಾಗಲು ಬಂದಿದ್ದ ಮನೆಯ ಯಜಮಾನತಿ ಮಿಸೆಸ್ ನಟ್ಟೆಲ್ ಹೇಗೋ ಏನೋ ಎಂದು ಅವನು ಚಿಂತೆಗೀಡಾದ.
‘ಇಲ್ಲಿಯ ಎಷ್ಟು ಜನರನ್ನು ನೀವು ಬಲ್ಲಿರಿ?’ ಮೌನ ಸಹಿಸಲಾರದೆ ಹುಡುಗಿ ಕೇಳಿದಳು.
‘ಒಂದು ನರಪಿಳ್ಳೆಯ ಪರಿಚಯವೂ ನನಗೆ ಇಲ್ಲ.’ ಅವನು ಹೇಳಿದ, ವಿಷಾದದ ನಗೆ ಬೀರುತ್ತಾ. ‘ನಾಲ್ಕು ವರ್ಷಗಳ ಹಿಂದೆ ನನ್ನ ಅಕ್ಕ ಇಲ್ಲಿಯ ಕಾನ್ವೆಂಟಿನಲ್ಲಿದ್ದಳು. ಇಲ್ಲಿಯ ಕೆಲವರಿಗೆ ನನ್ನ ಪರಿಚಯ ಪತ್ರವನ್ನು ಕೊಟ್ಟಿದ್ದಾಳೆ.’ ಅವನ ಕೊನೆಯ ವಾಕ್ಯದಲ್ಲಿ ಹುಡುಗಿಗೆ ನಿರಾಶೆಯೋ ನಿರಾಶೆ ಎದ್ದು ಕಂಡಿತು.
‘ಹಾಗಾದ್ರೆ ನಿಮಗೆ ನನ್ನ ಚಿಕ್ಕಮ್ಮನ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲ?’ ಹುಡುಗಿ ಕೇಳಿದಳು, ಏನೋ ರಹಸ್ಯ ಮುಚ್ಚಿಡುವಂತೆ.
‘ಅವರ ಹೆಸರು ಮತ್ತು ವಿಳಾಸ, ಅಷ್ಟೇ.’ ಅವನು ಹೇಳಿದ.
ಹುಡುಗಿಯ ಚಿಕ್ಕಮ್ಮನ ಬಗ್ಗೆ ನಟ್ಟೆಲ್ ಯೋಚಿಸತೊಡಗಿದ. ಆಕೆ ವಿವಾಹಿತೆಯೋ,ಅವಿವಾಹಿತೆಯೋ ವಿಧವೆಯೋ! ಅವನು ಗೊಂದಲಕ್ಕೀಡಾದ. ನಟ್ಟೆಲ್, ಅವನು ಕೂತಿದ್ದ ರೂಮಿನೊಳಗೊಮ್ಮೆ ದೃಷ್ಟಿ ಹಾಯಿಸಿದ. ಆ ಮನೆಯಲ್ಲಿ ಒಂದು ಗಂಡು ಪ್ರಾಣಿ ಜೀವಿಸುತ್ತಿರುವ ಎಲ್ಲಾ ಲಕ್ಷಣಗಳೂ ಕಾಣುತ್ತಿದ್ದವು.
‘ಮೂರು ವರ್ಷಗಳ ಹಿಂದೆ ನನ್ನ ಚಿಕ್ಕಮ್ಮನ ಜೀವನದಲ್ಲಿ ಒಂದು ಭಯಂಕರ ದುರ್ಘಟನೆಯೊಂದು ನಡೆಯಿತು. ಬಹುಶಃ, ನಿಮ್ಮಕ್ಕ ಇಲ್ಲಿಂದ ಹೊರಟು ಹೋದ ಮೇಲೆ…’ ಹುಡುಗಿ ಗುಟ್ಟು ಹೇಳುವಂತೆ ಮೆಲ್ಲಗೆ ಹೇಳಿದಳು.
‘ದುರ್ಘಟನೆ!?’ ನಟ್ಟೆಲ್ ಬೆಚ್ಚಿ ಬಿದ್ದ. ಇಷ್ಟೊಂದು ಶಾಂತವಾದ ಊರಿನಲ್ಲಿ ದುರ್ಘಟನೆಯೊಂದು ಜರುಗುವುದು ಅವನಿಗೆ ಅಸ್ವಾಭಾವಿಕವೆಂದು ತೋರಿತು.
‘..ಅಕ್ಟೋಬರ್ ತಿಂಗಳ ಈ ನಡು ಮಧ್ಯಾಹ್ನದಲ್ಲೂ ನಾವು ಈ ಫ್ರೆಂಚ್ ಕಿಟಕಿಯನ್ನು ಏಕೆ ತೆರೆದಿಟ್ಟಿದ್ದೇವೆ ಎಂದು ನೀವು ಈಗಾಗಲೇ ಕುತೂಹಲಗೊಂಡಿರಬಹುದು?’ ನಿಗೂಢತೆಭರಿತ ಸ್ವರದಲ್ಲಿ ಹುಡುಗಿ, ನಟ್ಟೆಲನು ಬೆನ್ನು ತಿರುಗಿಸಿ ಕುಳಿತ್ತಿದ್ದ ದೊಡ್ಡ ಕಿಟಕಿಯ ಕಡೆಗೆ ಬೊಟ್ಟು ತೋರಿಸುತ್ತಾ ಕೇಳಿದಳು. ನಟ್ಟೆಲ್ ಹಿಂದಿರುಗುತ್ತಾ, ಮೊದಲಭಾರಿ ಎನ್ನುವಂತೆ ಆ ಕಿಟಕಿಯನ್ನು ನೋಡಿದ. ವಿಶಾಲವಾದ ಕಿಟಕಿ, ಹೊರಗೆ ಹೂತೋಟಕ್ಕೆ ತೆರೆದುಕೊಂಡಿತ್ತು.
‘ನೀನು ಹೇಳಿದ್ದ ದುರ್ಘಟನೆಯಲ್ಲಿ ಈ ಕಿಟಕಿಯ ಪಾತ್ರವೂ ಇದೆಯೇನೂ?’ ನಟ್ಟೆಲ್ ಅಂದಾಜಿಸಿದ.
‘ಇಂದಿಗೆ ಬರೋಬರಿ ಮೂರು ವರ್ಷಗಳ ಹಿಂದೆ ಚಿಕ್ಕಮ್ಮನ ಗಂಡ ಮತ್ತು ಅವಳ ಇಬ್ಬರು ತಮ್ಮಂದಿರು ಇದೇ ಕಿಟಕಿಯ ಮೂಲಕ ಶಿಕಾರಿಗೆಂದು ಹೊರಗೆ ಹೋಗಿದ್ದರು. ಅವರು ಇದುವರೆಗೂ ಹಿಂದಿರುಗಿಲ್ಲ! ಅವರು ಶಿಕಾರಿಗೆಂದು ಹೋಗಿದ್ದ ಜಾಗ ಒಂದು ಜೌಗು ಪ್ರದೇಶವಾಗಿತ್ತು. ದುರಾದೃಷ್ಟವಶಾತ್ ಅವರು ಮೂವರೂ ಜವುಳು ನೆಲದಲ್ಲಿ ಸಿಕ್ಕಿಕೊಂಡು ಅಲ್ಲೇ ಸಮಾಧಿಯಾಗಿಬಿಟ್ಟರು! ಆ ಬೇಸಿಗೆ ಎಂದಿನ ಬೇಸಿಗೆಯಾಗಿರಲಿಲ್ಲ. ನೆಲ ಒಣಗಲೇ ಇಲ್ಲ, ಹಾಗೂ ಅವರ ದೇಹಗಳೂ ಸಿಗಲಿಲ್ಲ!..’ ಹುಡುಗಿಯ ಅತೀ ಆತ್ಮವಿಶ್ವಾಸ ಕರಗಿ ಸಹಜ ಸ್ಥಿತಿಗೆ ಇಳಿದಿತ್ತು.
‘… ಪಾಪ ಚಿಕ್ಕಮ್ಮನಿಗೆ ಇದನ್ನು ಇದುವರೆಗೂ ಅರಗಿಸಿಕೊಳ್ಳಲು ಆಗಿಲ್ಲ. ಒಂದಲ್ಲ ಒಂದು ದಿನ ಅವರು ಮೂವರೂ (ಮತ್ತು ಅವರ ಜತೆಯಲ್ಲಿ ಹೋಗಿದ್ದ ಸ್ಪ್ಯಾನಿಯಲ್ ನಾಯಿ ಕೂಡ) ಇದೇ ಕಿಟಕಿಯಿಂದ ಹಿಂದಿರುಗಿ ಬರುತ್ತಾರೆಂದು ಅವಳು ನಂಬಿಕೊಂಡಿದ್ದಾಳೆ. ಅದಕ್ಕೋಸ್ಕರ ಈ ಕಿಟಕಿ ಬೆಳಿಗ್ಗೆಯಿಂದ ಸಂಜೇವರೆಗೆ ಯಾವಾತ್ತೂ ತೆರೆದೇ ಇರುತ್ತದೆ. ಪಾಪ ಚಿಕ್ಕಮ್ಮ, ಅವರು ಬೇಟೆಗೆ ಹೋದ ಪರಿಯನ್ನೂ ಈಗಲೂ ಕಣ್ಣಿಗೆ ಕಟ್ಟಿದಂತೆ ಬಣ್ಣಿಸುತ್ತಿರುತ್ತಾಳೆ. ಚಿಕ್ಕಪ್ಪ ಹೆಗಲ ಮೇಲೆ ಬಿಳಿ ಬಣ್ನದ ರೇಯ್ನ್ ಕೋಟು ತಗುಲಿಸಿಕೊಂಡಿದ್ದರಂತೆ. ಅವರ ತಮ್ಮ ರೊನಿ, ತುಂಟ, ಶಿಕಾರಿಗೆಂದು ಹೊರಟಾಗಲೂ ತಮ್ಮನ್ನು ಕಿಚಾಯಿಸುತ್ತಿದ್ದನೆಂದು ಈಗಲೂ ಬಿಕ್ಕುತ್ತಾ ಹೇಳುತ್ತಿರುತ್ತಾರೆ… ನನಗೂ ಕೂಡ ಅವರು ಖಂಡಿತವಾಗಿಯೂ ಸಂಜೆ ಹೊತ್ತಿಗೆ ಬರಬಹುದು ಎಂದೆನಿಸುತ್ತಿರುತ್ತದೆ.’ ಎನ್ನುತ್ತಾ ಹುಡುಗಿ ಒಮ್ಮೆಲೇ ಕಂಪಿಸಿದಳು.
ಅಷ್ಟರಲ್ಲಿ ಹುಡುಗಿಯ ಚಿಕ್ಕಮ್ಮ ಬಂದಳು. ನಟ್ಟೆಲನಿಗೆ ಕೊಂಚ ಸಮಧಾನವಾಯಿತು. ತಡವಾಗಿದ್ದದ್ದಕ್ಕೆ ಅವಳು ಕ್ಷಮೆಯಾಚಿಸಿದಳು.
‘ವೀರಾ ನಿಮ್ಮನ್ನು ಚೆನ್ನಾಗಿ ನೋಡಿಕೊಂಡಳೆಂದು ಭಾವಿಸುತ್ತೇನೆ.’ ಚಿಕ್ಕಮ್ಮ ಹುಡುಗಿಯನ್ನು ನೋಡುತ್ತಾ ನಟ್ಟೆಲನಿಗೆ ಹೇಳಿದಳು. ಮಿಸೆಸ್ ಸ್ಯಾಪಲ್‍ಟನಾಳ ದನಿಯಲ್ಲಿ ಕಾಳಜಿ ತುಂಬಿತ್ತು.
‘ನಿಮ್ಮ ಮಗಳು ತುಂಬಾ ಚುರುಕಾಗಿದ್ದಾಳೆ!’ ನಟ್ಟೆಲ್ ಹೇಳಿದ.
ಹುಡುಗಿಯ ಚಿಕ್ಕಮ್ಮ ನಕ್ಕಳು.
‘ಈ ತೆರೆದ ಕಿಟಕಿಯಿಂದ ನಿಮಗೆ ತೊಂದರೆಯಾಗುತ್ತಿಲ್ಲವೆಂದು ಭಾವಿಸುತ್ತೇನೆ.’ ಮಿಸೆಸ್ ಸ್ಯಾಪಲ್‍ಟನ್ ಕೇಳಿದಿಳು. ‘ನನ್ನ ಯಜಮಾನರು ಮತ್ತು ಇಬ್ಬರು ತಮ್ಮಂದಿರು ಶಿಕಾರಿಗೆಂದು ಹೋಗಿದ್ದಾರೆ. ಇನ್ನೇನು ಅವರು ಬರುವ ಹೊತ್ತಾಯ್ತು. ಅವರು ಈ ಕಿಟಕಿಯಿಂದಲೇ ಹೋಗುವುದು, ಬರುವುದು! ಇವತ್ತು ಅವರು ನಮ್ಮ ಹಳ್ಳಿಯ ಜೌಗು ಪ್ರದೇಶಕ್ಕೆ ಹೋಗಿದ್ದಾರೆ. ಖಂಡಿತಾ ಕೆಸರಿನಲ್ಲಿ ಮುಳುಗಿರುತ್ತಾರೆ! ನನ್ನ ಕಾರ್ಪೆಟಿಗೆ ಇಂದು ಗತಿ ಕಾಣಿಸುತ್ತಾರೆ! ನಿಮ್ಮದು ಗಂಡಸರದ್ದೆಲ್ಲಾ ಒಂದೇ ಜಾತಿ, ಅಲ್ವೇ ಮಿಸ್ಟರ್ ನಟ್ಟೆಲ್?’ ಹುಸಿ ಮುನಿಸು ತೋರಿಸುತ್ತಾ ಅವನ ಕಡೆಗೆ ದೃಷ್ಟಿ ಬೀರಿದಳು ಮಿಸೆಸ್ ಸ್ಯಾಪಲ್‍ಟನ್.
ಅವಳು ಶಿಕಾರಿಯ ಬಗ್ಗೆ ಮಾತನಾಡುತ್ತಲೇ ಹೋದಳು. ಹಕ್ಕಿಗಳು ಕಡಿಮೆಯಾಗಿವೆ. ನೀರಕ್ಕಿಗಳಂತೂ ಕಾಣಿಸುತ್ತಲೇ ಇಲ್ಲ… ಇತ್ಯಾದಿ. ಶಿಕಾರಿಯ ಮಾತು ನಟ್ಟೆಲನಲ್ಲಿ ರೇಜಿಗೆ ಹುಟ್ಟಿಸಿತು. ಅವನು ಶಿಕಾರಿಯಂತ ಅಮಾನುಷ ಚರ್ಚೆಯಿಂದ ಮಾನವೀಯ ವಿಷಯಗಳ ಕಡೆಗೆ ಸಂವಾದವನ್ನು ಹೊರಳಿಸಲು ಪ್ರಯತ್ನಪಟ್ಟು ಸಫಲನೂ ಆದ. ಆದರೂ ಮಿಸೆಸ್ ಸ್ಪಾಪಲ್‍ಟನ್ ಅವನ ಮಾತುಗಳನ್ನು ಕೇಳುತ್ತಿರುವಂತೆ ನಟಿಸುತ್ತಿದ್ದಳೆಂದು ಅವನಿಗನಿಸಿತು. ಅವಳ ಗಮನ ಮತ್ತು ದೃಷ್ಟಿ ಕಿಟಕಿಯ ಕಡೆಗೇ ಇತ್ತು. ತಾನು ಈ ದುರ್ಘಟನೆಯ ವಾರ್ಷಿಕ ದಿನದಂದೇ ಬರಬೇಕೆ ಎಂದು ಅವನು ತನ್ನನ್ನೇ ಹಳಿದುಕೊಂಡ. ಆದರೂ ಅವನು ಮುಂದುವರೆಸಿದ:
‘..ಈ ಘಟನೆಯ ನಂತರ ವೈಧ್ಯರು ನನಗೆ ಸಂಪೂರ್ಣ ವಿಶ್ರಾಂತಿಯನ್ನು ತೆಗೆದು ಕೊಳ್ಳಲು ಹೇಳಿದ್ದಾರೆ. ಮಾನಸಿಕ ಒತ್ತಡ, ಕಠಿಣ ದೈಹಿಕ ಶ್ರಮ ಖಂಡಿತಾ ಸಲ್ಲದು ಎಂದು ಹೇಳಿದ್ದಾರೆ…’ ಅವನು ಹೇಳುತ್ತಲೇ ಹೋದ. ಜೀವನದಲ್ಲಿ ಮೊಟ್ಟ ಮೊದಲ ಭಾರಿ ಭೆಟ್ಟಿಯಾದ ಆಗಂತುಕನೊಬ್ಬನ ಕಾಯಿಲೆ ಮತ್ತು ಅವನಿಗೆ ವೈಧ್ಯರು ಮಾಡಿರುವ ಶಿಫಾರಸುಗಳನ್ನು ಕೇಳಲು ಜನ ತುದಿಗಾಲಿನಲ್ಲಿ ನಿಂತಿರುವುದಾಗಿ ನಟ್ಟೆಲ್ ಭಾವಿಸಿದ್ದನೇನೋ! ‘…ಆದರೂ, ಪಥ್ಯದ ಬಗ್ಗೆ ವೈಧ್ಯರಲ್ಲೇ ಸಹಮತವಿಲ್ಲ..’ ಅವನು ವ್ಯಂಗ್ಯದಿಂದ ಮುಂದುವರೆಸಿದ.
‘ಒಹ್, ಹೌದೇನು?’ ಉದ್ಗರಿಸಿದಳು ಮಿಸೆಸ್ ಸ್ಯಾಪಲ್‍ಟನ್. ಆದರೆ ಆ ಉದ್ಗಾರ ಕೊನೆಗೆ ಆಕಳಿಕೆಯಿಂದ ಮುಕ್ತಾಯವಾಯ್ತು. ಆದರೆ ಮುಂದಿನ ಕೆಲವು ಕ್ಷಣಗಳಲ್ಲಿ ಅವಳ ವದನ ಮಂದಹಾಸದಿಂದ ಅರಳಿತು. ಆದರೆ ಅದು ನಟ್ಟೆಲನ ಪುರಾಣ ಕೇಳಿಯಂತೂ ಅಲ್ಲವೇ ಅಲ್ಲ!
‘ಒಹ್, ಥ್ಯಾಂಕ್ ಗಾಡ್! ಕೊನೆಗೂ ಅವರು ಬಂದರು! ಸರಿಯಾಗಿ ಚಹಾದ ವೇಳೆಗೇ ಬಂದರು ನೋಡಿ! ಒಮ್ಮೆ ಅವರ ಕಡೆಗೆ ನೋಡಿ ಮಿಸ್ಟರ್ ನಟ್ಟೆಲ್! ಮೂಗಿನವರೆಗೂ ಕೆಸರಿನಲ್ಲಿ ಮುಳುಗಿ ಹೋದವರಂತೆ ಕಾಣಿಸುತ್ತಿಲ್ಲವೇ?’ ಚಿಕ್ಕ ಹುಡುಗಿಯಂತೆ ಚಪ್ಪಾಳೆ ತಟ್ಟುತ್ತಾ ಕೇಕೆ ಹಾಕಿದಳು ಮಿಸೆಸ್ ಸ್ಯಾಪಲ್‍ಟನ್.
ನಟ್ಟೆಲ್ ಸಣ್ಣದಾಗಿ ಕಂಪಿಸಿದ. ಅವನು ಹುಡುಗಿಯ ಕಡೆಗೆ ಒಮ್ಮೆ ನೋಡಿದ. ಹುಡುಗಿಯ ಕಣ್ಣುಗಳು ಹಿರಿದಾಗಿದ್ದವು. ಬಾಯಿ ತೆರೆದಿತ್ತು, ಅವಳ ದೃಷ್ಟಿಯೂ ಕಿಟಕಿಯ ಹೊರಕ್ಕೆ ನೆಟ್ಟಿತ್ತು. ನಟ್ಟೆಲನ ಬೆನ್ನ ಹುರಿಯಲ್ಲಿ ತಣ್ಣನೆಯ ಮಿಂಚೊಂದು ಹರಿದಂತೆ ಭಾಸವಾಯಿತು. ಯಾವುದೋ ಅಸ್ಪಷ್ಟ ಭೀತಿ ಅವನ ಶರೀರವನ್ನಾಕ್ರಮಿಸಿತು. ಅವನು ಮೆಲ್ಲಗೆ ಕತ್ತನ್ನು ಹಿಂದಿರುಗಿಸಿ ಕಿಟಕಿಯ ಕಡೆಗೆ ದೃಷ್ಟಿ ಹರಿಸಿದ.
ಹೊರಗೆ ಸಂಜೆಗತ್ತಲು ನಿಧಾನವಾಗಿ ಆವರಿಸಿಕೊಳ್ಳುತ್ತಿತ್ತು. ಕಿಟಕಿಯ ಹೊರಗಿದ್ದ ಹೂತೋಟದ ಅಂಚಿನಿಂದ ಮೂರು ಮಾನವಾಕೃತಿಗಳು ಕಿಟಕಿಯ ಕಡೆಗೆ ನಡೆದು ಬರುತ್ತಿದ್ದವು. ಮೂವರ ಹೆಗಲ ಮೇಲೂ ಕೋವಿಗಳಿದ್ದವು. ಒಂದರ ಮೇಲೆ ಬಿಳಿ ರೇಯ್ನ್ ಕೋಟು. ಒಂದು ಆಯಾಸಗೊಂಡ ಸ್ಪ್ಯಾನಿಯಲ್ ನಾಯಿ ಅವರನ್ನು ಹಿಂಭಾಲಿಸುತ್ತಿತ್ತು. ಯಾವುದೇ ಸದ್ದು ಗದ್ದಲವಿಲ್ಲದೆ ಆ ಮನುಷ್ಯಾಕೃತಿಗಳು ಕಿಟಕಿಯ ಬಳಿ ಬಂದವು.
‘ಹ್ಹ, ಹ್ಹ, ಹ್ಹಾ..’ ಅವರಲ್ಲೊಬ್ಬ, ಬಹುಶಃ ಮಿಸೆಸ್ ಸ್ಯಾಪಲ್‍ಟನ್ನಾಳ ತಮ್ಮ ರೋನಿ ಇರಬೇಕೆಂದು ನಟ್ಟೆಲ್ ತರ್ಕಿಸಿದ, ವಿಕಟವಾಗಿ ನಗತೊಡಗಿದ.
ನಟ್ಟೆಲ, ತನ್ನ ವಾಕಿಂಗ್‍ಸ್ಟಿಕ್ ಮತ್ತು ಹ್ಯಾಟನ್ನು ಹೇಗೆ ಆಯ್ದುಕೊಂಡನೆಂದು ಅವನಿಗೇ ಗೊತ್ತಾಗಲಿಲ್ಲ. ಮುಂದಿನ ಕ್ಷಣದಲ್ಲಿ ಅವನು ಮುಂಬಾಗಿಲಿಂದ ಹೊರ ಬಿದ್ದಿದ್ದ. ಅವನು ಎಷ್ಟು ಬೇಗ ಅಂಗಳವನ್ನು ದಾಟಿ ರಸ್ತೆ ತಲುಪಿದನೆಂದರೆ, ಎದುರಿನಿಂದ ಬರುತ್ತಿದ್ದ ಸೈಕಲ್ ಸವಾರನೊಬ್ಬ ಅವನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿಕೊಳ್ಳಲು ಹೋಗಿ ರಸ್ತೆ ಬದಿಯ ಚರಂಡಿಯೊಳಗೆ ಬಿದ್ದ!
‘ಅಂತೂ, ಹೇಗೋ ಬಂದು ತಲುಪಿದೆವು ಕಣೆ! ಈಗ ತಲೆ ತಿನ್ಬೇಡ. ತೀರಾ ಏನು ಕೆಸರು ಮೆತ್ಕೊಂಡಿಲ್ಲ.’ ಕಿಟಕಿಯನ್ನು ಹತ್ತಿ ಒಳಬರುತ್ತಿದ್ದಂತೆಯೇ ಬಿಳಿ ರೇಯ್ನ್ ಕೋಟಿನವನು ಹೇಳಿದ. ಮುಂದುವರೆಸಿ, ‘ಈಗ ಇಲ್ಲಿಂದ ಆ ಪಾಟಿ ಓಡಿ ಹೋದ ಮಹಾಶಯನಾರು?’ ಎಂದು ಆಶ್ಚರ್ಯದಿಂದ ಕೇಳಿದ.
‘ಅವನೊಬ್ಬ ವಿಚಿತ್ರ ಮನುಷ್ಯ. ಮಿಸ್ಟರ್ ನಟ್ಟೆಲ್ ಅಂತ.’ ಮಿಸೆಸ್ ಸ್ಯಾಪಲ್‍ಟನ್ ಹೇಳಿದಳು. ‘ಬಂದ ಗಳಿಗೆಯಿಂದ ಅವನ ಕಾಯಿಲೆಯ ಬಗ್ಗೆಯೇ ಮಾತನಾಡುತ್ತಿದ್ದ. ನಿಮ್ಮನ್ನು ನೋಡುತ್ತಿದ್ದಂತೆ ಅವನಿಗೆ ಏನಾಯ್ತೋ ಏನೋ? ವಿದಾಯ ಕೋರುವ ಶಿಷ್ಠಾಚಾರಗಳನ್ನೂ ಮರೆತು ದೆವ್ವ ಮೆಟ್ಟಿದವರಂತೆ ಓಟಕಿತ್ತ!’
‘ನಾಯಿಯನ್ನು ನೋಡಿ ಅವನಿಗೆ ಹೆದರಿಕೆಯಾಗಿರಬೇಕು! ಒಮ್ಮೆ ಗಂಗಾ ನದಿಯ ದಡದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅವನಿಗೆ ಪುಂಡ ನಾಯಿಗಳು ಅಟ್ಟಾಡಿಸಿ ಬಂದಿದ್ದವಂತೆ! ಅವನು ಓಡಿ ಓಡಿ ಒಂದು ಸ್ಮಶಾನವನ್ನು ಹೊಕ್ಕು ತೋಡಿಟ್ಟಿದ್ದ ಗುಣಿಯೊಳಗೆ ಬಿದ್ದಿದ್ದನಂತೆ! ಮೇಲೆ ನಾಯಿಗಳು, ಗುಣಿಯೊಳಗೆ ಮಿಸ್ಟರ್ ನಟ್ಟೆಲ್! ಇಡೀ ರಾತ್ರೆ ಅವನು ಗುಣಿಯಲ್ಲೇ ಕಳೆದನಂತೆ! ಇದಾದ ನಂತರ ಅವನ ಆರೋಗ್ಯ ಕೆಟ್ಟಿತಂತೆ, ಪಾಪ!’ ಹುಡುಗಿ ವಿವರಿಸಿದಳು.
ಆಗಾಗ ಇಂತ ಉಢಾಳತನ ಮಾಡುವುದು ಹುಡುಗಿಯ ಹವ್ಯಾಸವಾಗಿತ್ತು!
*******
ಕಾರ್ಲೋ ಸರ್, ಕತೆ ತುಂಬಾ ತುಂಬಾ ಇಷ್ಟವಾಯ್ತು! ಇಂತಹ ವಿಶಿಷ್ಟ ಕತೆಗಳನ್ನು ಆರಿಸಿ ನಮಗೆ ಪರಿಚಯಿಸುತ್ತಿರುವುದಕ್ಕೆ ನಿಮಗೆ ಧನ್ಯವಾದಗಳು. ಮುಂದಿನ ಕತೆಗೆ ಕಾಯುತ್ತಿರುವೆ!