ತೆರೆದಿದೆ ಮನೆಯೋ…: ಅಶ್ಫಾಕ್ ಪೀರಜಾದೆ

ಬದುಕಿನ ಮುಸ್ಸಂಜೆಯಲ್ಲಿ ಕುಳಿತು ನನ್ನ ಜೀವನದ ಮರಳು ಗಾಡಿನಲ್ಲಿ ನನಗಾಗಿ ನನ್ನತ್ತ ನಡೆದು ಬಂದವರ ಹೆಜ್ಜೆಗಳ ಗುರುತು ಹುಡುಕಲು ಪ್ರಯತ್ನಿಸುತ್ತೇನೆ. ಹೃದಯದಲ್ಲಿ ಎದ್ದ ಬಿರುಗಾಳಿಗೆ ಸರಿದು ಹೋದ ಮರಳಿನಲ್ಲಿ ಗುರುತು ಸಿಗದಂತೆ ಅವಶೇಷವಾಗಿ ಅಳಿದುಳಿದ ಗುರತುಗಳೇ!. ಒಂದೇ ಒಂದು ಸ್ಥಿರವಾದ ಹೆಜ್ಜೆ ಅಲ್ಲಿ ಮೂಡಿದ್ದು ಗೋಚರಿಸುವುದೇ ಇಲ್ಲ. ನಾನು ನನ್ನ ಮನೆಯಲ್ಲಿ ಒಂಟಿಯಾಗಿ ಕುಳಿತು ಇವುಗಳನ್ನೆಲ್ಲ ಅವಲೋಕಿಸುತ್ತ ಮತ್ತೇ ನನ್ನತ್ತ ಯಾರಾದರೂ ಬರಬಹುದೇ ಎಂದು ಬರುವವರ ಹೆಜ್ಜೆ ಸಪ್ಪಳ ಆಲಿಸಲು ಮೈಯಲ್ಲ ಕಿವಿಯಾಗಿಸುತ್ತೇನೆ. ಗಾಳಿಗೆ ಹಾರಿ ಹೋದ ರಂಗೋಲಿಯಂತೆ ಅಂದಗೆಟ್ಟ ಅಂತರಂಗದಲ್ಲಿ ಒಂದು ಸುಂದರವಾದ ಸ್ಥಿರವಾದ ಮೂರ್ತಿ ಪ್ರತಿಷ್ಠಾಪನೆಗೊಂಡು ಹೃದಯ ನೆಮ್ಮದಿಯ ನೆಲೆವೀಡಾಗಬೇಕೆಂದು ಬಯಸುತ್ತೇನೆ ನಿಜ, ಆದರೆ ನನಗೆ ನನ್ನ ಕುರಿತು ಯಾವುದೇ ಸಹಾನುಭೂತಿಯಿಲ್ಲ. ಸಮಾಜದ ಯಾವುದೇ ಕನಿಕರ, ಅನುಕಂಪಗಳ ಅಗತ್ಯವೂ ಇಲ್ಲ. ನಾನು ಹೀಗಿದ್ದೇನೆ ಹೀಗೆಯೇ ಬದುಕುತ್ತೇನೆ. ಬೇರೆ ಯಾರಿಗಾಗಿಯೋ ಬದಲಾಗುವ ಪ್ರಶ್ನೆಯೇ ಇಲ್ಲ. ನಾನು ನನಗಾಗಿಯೇ ಬದುಕುತ್ತ ಹೋಗಬೇಕು. ನನಗಾಗಿಯೇ ತನ್ನ ಪ್ರಾಣವನ್ನು ಸಮರ್ಪಿಸುವ ವ್ಯಕ್ತಿಗಳ ಹುಡುಕಾಟದ ಪ್ರಕ್ರಿಯೆಗೆ ಅಂತ್ಯವಿದೆಯೋ ಇಲ್ಲವೋ ಗೊತ್ತಿಲ್ಲ ನನ್ನ ಅನ್ವೇಷನೆ ಮಾತ್ರ ಅವಿರತವಾಗಿ ನಡದೇ ಇರುತ್ತೆ ನನ್ನ ಗುರಿ ತಲಪುವವರೆಗೆ ಆಥವಾ ನನ್ನ ಪ್ರಾಣ ಪಕ್ಷಿ ಹಾರಿ ಹೋಗುವವರೆಗೆ.

ನನಗೀಗ ಫಾರ್ಟಿ ಪ್ಲಸ್, ಇಷ್ಟೊಂದು ಧೀರ್ಘ ಕಾಲ ಒಂಟಿಯಾಗಿ ಜೀವನ ಸಂಗಾತಿಯಿಲ್ಲದೆ ಕಳೆಯುವುದು ಅಸಾಧ್ಯವೇ ಆದರೂ ಅನಿವಾರ್ಯವೂ ಆಗಿತ್ತು. ಅದೆಷ್ಟೋ ಬಾರಿ ಒಬ್ಬ ಒಳ್ಳೆ ವ್ಯಕ್ತಿಯ ಹುಡುಕಾಟದಲ್ಲಿ ತನ್ನತನವನ್ನೆ ಕಳೆದುಕೊಂಡರೂ ನನಗೆ ಪ್ರಾಯಶ್ಚಿತವಿಲ್ಲ. ಅವರು ಒಳ್ಳೆಯವರು ಎಂದು ಒಪ್ಪಿಕೊಂಡ ನಂತರ ಅವರ ನಿಜ ಬಣ್ಣ ಬಯಲಾಗಿ ಅವರನ್ನು ದೂರ ಮಾಡಿದ್ದಕ್ಕೆ ಒಂತರಹ ಹೆಮ್ಮೆ ಅನಿಸುತ್ತದೆÀ. ನನ್ನನ್ನು ಅರ್ಥಮಾಡಿಕೊಳ್ಳದ ಅಯೋಗ್ಯರ ಜೊತೆ ಜೀವನಪೂರ್ತಿ ಒದ್ದಾಡುವುದಕ್ಕಿಂತ್ ಅವರು ಈಗಲೇ ದೂರ ಸರದಿದ್ದು ಒಳ್ಳೆಯದಾಯಿತು ಅನಿಸುತ್ತದೆ. ಹೀಗಾಗಿ ನಾನಿನ್ನೂ ಏಕಾಂಗಿ! ಸಾಕಷ್ಟು ಜನರ ಸಂಪರ್ಕದ ಬಳಿಕವೂ ವಿರಹ ವೇದನೆಯಲ್ಲಿ ನರಳತಾ ಇರುವ ಹೆಣ್ಣು. ನನ್ನ ಜೀವನ ಬಲ್ಲವರು ನನ್ನ ಕುರಿತು ಏನೇನೋ ಹೇಳುತ್ತಾರೆ ನನ್ನ ಅಹಂಕಾರದ ಕಾರಣವೇ ನನಗೀ ದುರ್ಗತಿ ಬಂದಿದೆ, ಗಂಡ ಇಲ್ಲದೇ ಕುಳಿತಿದ್ದೇನೆ ಎಂದು. ಅವರ ಮಾತಿಗೆ ನನಗೆ ಬೇಸರವಿಲ್ಲ. ನನ್ನ ರಾಜಿಯಾಗದ ವ್ಯಕ್ತಿತ್ವದಿಂದಲೇ ಬಹಳಷ್ಟು ಜನ ಸ್ನೇಹಿತರನ್ನು, ಸಂಬಂದಿಕರನ್ನು ದೂರ ಮಾಡಿಕೊಂಡಿರುವುದು. ಸತ್ಯವೇ ಆಗಿರಬಹುದು. ಅದಕ್ಕೆ ನಾನೇನು ಮಾಡಲಿ, ನನ್ನ ಹುಟ್ಟು ಸ್ವಭಾವವೇ ಅಂಥದ್ದು ಸ್ವಚ್ಛಂದವಾಗಿ ಆಗಸದಲ್ಲಿ ಹಾರಾಡುವುದು ನನಗೆ ಇಷ್ಟ. ಹಿಂದೊಮ್ಮೆ ನಾನು ರಚಿಸಿದ ಒಂದು ಕವನ ಈಗಲೂ ನನ್ನ ಹೃದಯದಲ್ಲಿ ಪಲ್ಲವಿಸುತ್ತದೆ-

“ನಿತ್ಯ ನಾ ಬಿಡುಸುವ ರಂಗೋಲಿ ಕೆಳಗೆ
ನನ್ನ ಸಾವಿರಾರು ಸ್ವಪ್ನಗಳು ಉಸಿರುಗಟ್ಟಿ ಸಾಯುದಿರಲಿ
ಸ್ವಚ್ಛಂದವಾಗ ಹಾರಾಡುವ ಹಕ್ಕಿಗೆ ಸಂಕೋಲೆ ತೊಡಿಸಿದರೆ
ಮನವಾಗುವುದು ಮೂಕ ಹಕ್ಕಿ,: ಮನೆಯಾಗುವುದು ಬಂದೀಖಾನೆ;
ಯಾರಿಗೆ ಬೇಕು ಬಂಧನ? ಮಿಥ್ಯ ಸಂಬಂದಗಳ ಸಂತೆ ಸಂಭ್ರಮ
ಗಡಿಮುಕ್ತ ವಿಶಾಲಾಗಸದಲಿ ರೆಕ್ಕೆಬಿಚ್ಚಿ ಹಾರಾಡುವುದೇ ನನಗಿಷ್ಟ.. !!!!”

ನನಗೆ ಗೊತ್ತು ಸ್ವಾತಂತ್ರ್ಯವಾಗಿ ಹಾರಾಡುವ ಹಕ್ಕಿಗೂ ಒಂದು ಗೂಡವೆನ್ನುವುದು ಇರುತ್ತದೆ. ಅದೂ ಕೂಡ ಮರಿ ಮಾಡುತ್ತದೆ. ತನ್ನವರಿಗಾಗಿ ಕಾಳು ಕಡಿಯಲ್ಲ ಸಂಗ್ರಹಿಸುತ್ತದೆ. ಅದರಂತೆ ನನಗೂ ಮನೆ, ಮಕ್ಕಳು ಮಾಡಿಕೊಳ್ಳುವ ಸಾಕಷ್ಟು ಅವಕಾಶಗಳು ಒದಗಿ ಬಂದರೂ ನಾನಾಗಿಯೇ ಅದನ್ನೆಲ್ಲ ತಿರಸ್ಕರಿಸಿ ಮುನ್ನಡೆದಿದ್ದೆ. ಏಕಂದರೆ ನನಗೆ ಇಷ್ಟವಾಗು, ನನ್ನನು ಗೆಲ್ಲುವ, ನನ್ನ ಮನದಲ್ಲಿ ಸ್ಥಿರವಾಗಿ ನಿಲ್ಲುವ ಗಂಡು ಸಿಗಲೇ ಇಲ್ಲ. ಕೇವಲ ಲೈಂಗಿಕವಾಗಿ ತನ್ನ ಹಸಿವು ತೀರಿಸಿಕೊಳ್ಳುವ, ವಿವಾಹದ ಹುಸಿ ಬಂಧನದಲ್ಲಿ ಕಟ್ಟಿಹಾಕಿ ನನ್ನ ಸ್ವಾತಂತ್ರ್ಯವನ್ನು ಹರಣ ಮಾಡ ಬಯಸುವ ಪುರುಷರೇ ಸಾಲಾಗಿ ಬಂದರೂ ನನಗೆ ಸರಿಯನಿಸುವ ಗಂಡಿನ ಹುಡುಕಾಟದಲ್ಲಿ ನಾನು ಸಾಕಷ್ಟು ಅಲೆದಿದ್ದೇನೆ, ಏನೆಲ್ಲವನ್ನು ಕಳೆದುಕೊಂಡಿದ್ದೇನೆ. ನನ್ನ ಹೃದಯದಲ್ಲಿ ಸಾಗರದಷ್ಟು ಪ್ರೀತಿಯಿದ್ದರು ಈಗಲೂ ವಿರಹವೇದನೆಯಲ್ಲಿ ನರಳುತ್ತಿದ್ದೇನೆ. ನನ್ನ ಈ ಪ್ರೀತಿಯೆಲ್ಲ ನನ್ನ ಆ ಕಲ್ಪನೆಯ ಪುರುಷನಿಗೆ ಮಾತ್ರ ಮೀಸಲು, ಪ್ರೇಮ ಅಮರ, ದೇಹ ನಶ್ವರ. ಸಾಗರವೇ ಸ್ವತಃ ಬಾಯಾರಿಕೆಯಿಂದ ಚಡಪಡಿಸುವಂತೆ ನಾನು ಚಡಪಡಿಸುತ್ತಿದ್ದೇನೆ. ವಿರಹ ವೇದನೆಯ ನಡುವೆ ದಿನಗಳು ನೂಕುತ್ತಿದ್ದೇನೆ. ನೋವು ನರಳಾಟದ ಉರಿ ಬೇಗೆಯಲ್ಲಿ ಬೇಯುತ್ತಿದ್ದೇನೆ. ಆದರೆ ಸಮಾಜದೆದುರು ನನ್ನ ಮನಸ್ಸಿನ ಬೇಗುದಿ ಕಾಣದಿರಲು ಮಿಥ್ಯ ನಗುವಿನ ಮೂಲಕ ನೂರ ಪ್ರಯತ್ನ ಮಾಡುತ್ತೇನೆ. ನಾನು ನೋಡುವವರ ಕಣ್ಣಿಗೆ ಈಗಲೂ ಬಣ್ಣದ ಗೊಂಬೆ, ಏಕೆಂದರೆ ನಾನೀಗ ನಲವತ್ತು ದಾಟಿದರೂ ಹದಿನಾರರ ಹರೆಯದ ದೇಹಸಿರಿಯನ್ನು ಕಾಪಾಡಿಕೊಂಡು ಬಂದಿದ್ದೇನೆ. ನನ್ನಲ್ಲಿ ಎಷ್ಟೊಂದು ಜೀವನಪ್ರೀತಿ ತುಂಬಿ ತುಳಕ್ತಾಯಿದೆ ಎಂದರೆ ನಾನು ಸ್ವತಃ ಪ್ರಪಾತಕ್ಕೆ ಜಾರುತ್ತಿದ್ದರು ಮುಗಿಲೆತ್ತರಕ್ಕೆ ಕೈಚಾಚಿ ನಕ್ಷತ್ರಗಳನ್ನೆಲ್ಲ ಬಾಚಿಕೊಳ್ಳಬೇಕು ಅನ್ನುವಂಥ ಆಶಾವಾದಿ ಹೆಣ್ಣು ಅನ್ನುವುದು ನನಗೆ ಗೊತ್ತು. ನಾನು ನನ್ನ ಬದುಕಿನ ಮುಸ್ಸಂಜೆಯಲ್ಲೂ ಕೂಡ ಮುಂಜಾವಿನ ಆಹ್ಲಾದತೆಯನ್ನು ಅನುಭವಿಸಬಲ್ಲೆ. ಆದರೆ ಇತ್ತೀಚಿಗೆ ನನ್ನೊಳಗೆ ಯಾವುದೋ ಕ್ರಿಮಿಯ ಕೊರೆತ ಆರಂಭವಾಗಿದೆ. ಒಳಗೊಳಗೆ ಖಾಲಿಯಾಗ್ತಾ ಇದ್ದೇನೆ ಅನಿಸಲು ಪ್ರಾಂರಭಿಸಿದೆ. ನನಗೆ ಸೌಂದರ್ಯ, ರೂಪ, ಲಾವಣ್ಯ, ಐಶ್ವರ್ಯ, ಅಂತಸ್ತು ಎನಿದ್ದರೇನು ಕೊನೆಗಾಲದ ಒಂದು ಆಸರೆ, ಪ್ರೀತಿಸುವ ಜೀವದ ಅವಶ್ಯಕತೆ ಇದೆ ಎನ್ನುವ ಚಿಂತೆ ನಾ ಬೇಡವೆಂದರೂ ಬಂದು ಕಾಡ್ತಾಯಿದೆ. ಆಸೆಬುರಕರಿಗೆ ನಾನು ಈಗಲೂ ಕಾಮದ ವಸ್ತು, ಬಯಕೆಯ ಕಂಗಳಿಗೆ ಈಗಲೂ ನಾನು ಬಣ್ಣದಗೊಂಬೆ, ಹಬ್ಬದ ಸಡಗರ, ಚೈತನ್ಯದ ಚಿಲುಮೆ. ಅಂಗಾಂಗಗಳಲ್ಲಿ ಅದೇ ಯೌವ್ವನ, ಅದೇ ಉತ್ಸಾಹ, ಬೊಗಸೆ ಕಂಗಳಲ್ಲಿ ಅದೇ ಹಸಿವು, ಅದೇ ಬಯಕೆ, ಅದೇ ಮಾದಕತೆ. ಇಂಥ ಸ್ವಸಂಭ್ರಮದ ನಡುವೆಯೇ ಧಿಗ್ಗನೇ ಏಳುವ ಭವಿಷ್ಯದ ಚಿಂತೆ, ಜೀವನದ ಪ್ರಶ್ನೆ, ಒಂಟಿಯಾಗಿ ಕಳೆಯಬೇಕಾದ ಕೊನೆದಿನಗಳ ಹೆದರಿಕೆ. ಒಮ್ಮಿಂದೊಮ್ಮೆಲೇ ಹೃದಯ ತುಂಬ ವಿಷಾದ ಭಾವನೆ ಮೂಡಿ ಬಂದು ಮುಖದ ಮೇಲಿನ ಚಿಂತೆ ಗೆರೆಗಳು ಮೂಡಿ, ಅಂತರಾಳದ ಬೇಗುದಿ ಎಲ್ಲಿ ಜನರಿಗೆ ಅರ್ಥವಾಗುವದೋ ಅಂತಾ ಒಂದು ಕೃತಕನಗೆ ತಂದುಕೊಂಡು ಸದಾ ನಗುವ ಪ್ಲಾಸ್ಟಿಕದ ಗುಲಾಬಿಹೂವಿನಂತಾಗುತ್ತೇನೆ.

ಅದರೆ ಇಂಥ ಸ್ಥಿತಿಯಲ್ಲಿ ನನಗೆ ನನ್ನ ಹದಿಹರೆಯದ ದಿನಗಳ ನೆನಪು ಮರುಕಳಿಸುತ್ತದೆ. ಆ ದಿನಗಳಲ್ಲಿಯೂ ನಾನು ಚೈತನ್ಯದ ಬುಗ್ಗೆಯಾಗಿದ್ದೆ. ಪ್ರಾಯ ಸಹಜ ಲವಲವಿಕೆ ಹುರುಪು ದೇಹದಲ್ಲಿ, ನವಿಲಿನಂತೆ ನಲಿದಾಡುತ್ತಿದ್ದೆ…ಜಿಂಕೆಯಂತೆ ಕುಣಿದಾಡುತ್ತಿದ್ದೆ. ಒಂದೇ ನೋಟದಲ್ಲಿ ಇಡೀ ಜಗತ್ತನ್ನೇ ಗೆದ್ದು ಬಿಡುವ ಅಪರಿಮಿತ ಆತ್ಮವಿಶ್ವಾಸ. ಇದೇ ಕಾರಣಕ್ಕೆ ನನ್ನ ಸಹಪಾಠಿಗಳು ನನ್ನತ್ತ ಬಹುಬೇಗ ಆಕರ್ಷಿತರಾಗುತ್ತಿದ್ದರು, ಸ್ನೇಹ ಬಯಸಿ ಬರುತ್ತಿದ್ದರು. ಕೊನೆಗೆ ನನ್ನ ಅತಿಯಾದ ಆತ್ಮ ವಿಶ್ವಾಸವನ್ನೇ ಅಹಂಕಾರವೆಂದು ಅಪಾರ್ಥ ಮಾಡಿಕೊಂಡು ಆದಷ್ಟು ಬೇಗ ದೂರ ಸರಿಯುತ್ತಿದ್ದರು. ಆದರೆ ಇಂಥದರಲ್ಲಿ ನನಗಾಗಿ ತನ್ನ ಪ್ರಾಣವನ್ನೇ ತನ್ನ ಅಂಗೈಯಲ್ಲಿ ಹಿಡಿದುಕೊಂಡು ನಿಂತಿದ್ದ ಒಬ್ಬ ಹುಡುಗನ ನೆನಪು ಕಾಡುತ್ತದೆ.

ನನ್ನ ಮನೆಗೆ ತುಂಬಾ ಪಕ್ಕದಲ್ಲಿತ್ತು ಅವನ ಮನೆ. ಅವರ ತಂದೆ ಪೋಸ್ಟ್ ಮಾಸ್ಟರಾಗಿ ನಮ್ಮೂರಿಗೆ ಬಂದವರು, ನಮ್ಮ ಇನ್ನೊಂದು ಮನೆಯಲ್ಲಿ ಬಹಳ ದಿನಗಳಿಂದ ಬಾಡಿಗೆಗೆ ಇದ್ದರು. ಹೀಗಾಗಿ ನನ್ನ ಮತ್ತು ಅವನ ಕುಟುಂಬ ನಡುವೆ ಅನ್ಯೋನ್ಯತೆಯಿತ್ತು. ನಾನು ಅವನಿಗಿಂತ ವಯಸ್ಸಿನಲ್ಲಿ ಸ್ವಲ್ಪ ದೊಡ್ಡವಳಾದರೂ ಇಬ್ಬರು ಒಟ್ಟೊಟ್ಟಿಗೆ ಆಡಿಬೆಳೆದಿದ್ದೆವು. ಹಿಂದೆ ಮುಂದೆ ಒಂದೇ ಶಾಲೆಯಲ್ಲಿ ಕಲಿಯುತ್ತಿದ್ದೇವು. ನಮ್ಮ ನಡುವಿನ ಅನ್ಯೋನ್ಯತೆ, ಪ್ರೀತಿಯನ್ನು ಕಂಡು ಜನ ನಾವಿಬ್ಬರೂ ಅಪರೂಪದ ಅಕ್ಕ ತಮ್ಮನ ಜೋಡಿ ಎಂದೇ ಹೊಗಳುತ್ತಿದ್ದರು. ಅವನ ತಂದೆತಾಯಿ ಅವನನ್ನು ಅಕ್ಕನ ಹತ್ತರ ಹೋಗಿ ಆಟ ಆಡು…ಅಕ್ಕನ ಹತ್ತರ ಹೋಗಿ ಪಾಠ ಮಾಡಿಕೋ ಎಂದೆಲ್ಲ ಹೇಳಿ ಕಳಿಸುತ್ತಿದ್ದರು, ನಮ್ಮ ಮನೆಯಲ್ಲೂ ನಮ್ಮ ತಂದೆತಾಯಿ ಅಷ್ಟೇ ಪ್ರೀತಿಯಿಂದ ತಮ್ಮನಿಗೆ ತಿಂಡಿ ಕೊಡು, ಕಾಫಿ ಕೊಡು ಎಂಬಿತ್ಯಾದಿಯಾಗಿ ಹೇಳುತ್ತಿದ್ದರು. ಆದರೆ ನಮಗೇ ಗೊತ್ತಿಲ್ಲದಂತೆಯೇ ನಾವು ಸಂಬಂಧವನ್ನು ಮೀರಿ ಬೆಳೆಯುತ್ತ ನಡೆದೆವು, ನಮ್ಮ ನಡುವಿನ ಆಕರ್ಷಣೆಯೂ ಬೆಳೆಯುತ್ತ ಸಾಗಿತ್ತು. ಸ್ನೇಹ ಸಂಬಂಧ ಬೇರೆಯದೇ ಸ್ವರೂಪ ಪಡೆದುಕೊಳ್ಳಲಾರಂಭಿಸಿತ್ತು. ದೇಹದಲ್ಲಿನ ಬದಲಾವಣೆಗಳೊಂದಿಗೆ ಅಕ್ಕ ತಮ್ಮನ ನಮ್ಮ ಪವಿತ್ರ ಸಂಬಂಧ ಅದ್ಯಾವುದೋ ಅವ್ಯಕ್ತ ಆಸೆಗೆ ಬಲಿಯಾಗಲಾರಂಭಿಸಿತು. ಆಗ ನಾನು ಹತ್ತನೇಯ ತರಗತಿಯಲ್ಲಿದ್ದೆ, ಅವನು ಒಂಭತ್ತನೇಯ ತರಗತಿಯಲ್ಲಿ. ನಾವಿಬ್ಬರೂ ನಮ್ಮ ಮನೆಯಲ್ಲೇ ಅಭ್ಯಾಸ ಮಾಡುತ್ತಿದ್ದೆವು, ನಾನು ಮುಂದಿನ ತರಗತಿಯಲ್ಲಿದ್ದುದರಿಂದ ಅವನಿಗೆ ಪಾಠ ಹೇಳಿ ಕೋಡುತ್ತಿದ್ದೆ. ಬರಬರುತ್ತ ನನಗೆ ಅವನ ಸ್ನೇಹ ಸಲುಗೆ ಮುದ ನೀಡಲಾರಂಭಿಸಿ ಪಾಠದ ನೆಪದಲ್ಲಿ ಅವನನ್ನು ರಾತ್ರಿ ಕೂಡ ನಮ್ಮ ಮನೆಯಲ್ಲೆ ಉಳಿಸಿಕೊಂಡು ಬಿಡುತ್ತಿದ್ದೆ. ಅವನು ನನ್ನೊಂದಿಗೇ ಊಟ ಮಾಡಿ ನನ್ನ ಪಕ್ಕದಲ್ಲೇ ಮಲಗಿ ಬಿಟ್ಟರೆ ನಮ್ಮಲ್ಲಿ ಆಗತಾನೆ ಕಣ್ಣು ಬಿಡುತ್ತಿದ್ದ ಹಸಿ ಹಸಿ ಭಾವನೆಗಳು, ಚಿಗುರೊಡೆಯುತ್ತಿದ್ದ ಬಯಕೆಗಳ ತಾಂಡವ ನೃತ್ಯ. ಉಸಿರಿಗೆ ಉಸಿರು ತಾಗಿ ಸಣ್ಣದಾಗಿ ದೇಹದಲ್ಲಿ ಬೆಂಕಿ ಹೊತ್ತಿಕೊಳ್ಳಲಾರಂಭಿಸಿ ಇಬ್ಬರ ಮನದಲ್ಲೂ ಅದೇನೋ ಒಂಥರಾ ವಿಚಿತ್ರ ಮಂಥನ, ಬಿಸಿಯುಸಿರಿನ ಸಂಘರ್ಷ. ಬಯಕೆಗಳನ್ನು ತಡೆದುಕೊಳ್ಳಲಾಗದೆ ಹಾಗೆ ತಬ್ಬಿಕೊಂಡು ಮಲಗಿ ಬಿಡುತ್ತಿದ್ದೆವು, ಆದರೆ ಇಡೀ ರಾತ್ರಿ ನಿದ್ರೆಗೆ ಹೋಗುತ್ತಿರಲಿಲ್ಲ. ನನ್ನ ಬಿರುಸಾದ ಎದೆ ಅವನೆದೆಗೆ ತಾಕಿ ಅವನಲ್ಲಿ ಬಯಕೆಯ ಬೀಜ ಬಿತ್ತುತ್ತಿದ್ದರೆ, ಅವನು ನಿದ್ರೆ ಹೊದಂತೆ ನಟಿಸಿ ನನ್ನ ಎದೆಯ ಮೇಲೆ ಕೈಯಿಡುತ್ತಿದ್ದ. ನನಗೂ ಆ ಸ್ಪರ್ಷ ಹಿತವೆನಿಸುತ್ತಿತ್ತಾದರು ಪರಸ್ಪರ ಹೆದರಿಕೆ ಕಾರಣ, ಚೇಷ್ಟೆಗಳು ಹಿತಮಿತವಾಗಿಯೇ ನಡೆಯುತ್ತಿದ್ದವು. ನಮ್ಮಲ್ಲಿನ ಪ್ರೇಮ ಎಲ್ಲೆ ಮೀರಿ ವರ್ತಿಸುತ್ತಿರಲಿಲ್ಲ. ಹೀಗೇ ನಮ್ಮ ಮಿತಿಯಲ್ಲೇ ನಾವು ಅಪೂರ್ಣ ಸುಖ ಅನುಭವಿಸುತ್ತಿದ್ದೇವು, ಸುಖದ ಅರ್ಥವೇ ಗೊತ್ತಿರದ ಆ ವಯಸ್ಸಿನಲ್ಲಿ ಅದೇನೋ ಒಂಥರಾ, ಮಜಾ ಅಷ್ಟೆ, ವಾರದಲ್ಲಿ ಒಂದೆರಡು ರಾತ್ರಿಯಾದರೂ ಸರಿ.

ಅದೊಂದು ದಿನ ನಾನು ವಿಪರೀತ ಜ್ವರದಿಂದ ನರಳುತ್ತಿದ್ದರೆ ಅವನು ನನಗಿಂತ ಜಾಸ್ತಿ ನೋವು ಅನುಭವಿಸುತ್ತಿದ್ದ. ವೈದ್ಯರು ಟಾಯಿಫೈಡ್ ಅಂತಾ ಹೇಳಿದ್ದಕ್ಕೆ ಅವನು ಇನ್ನಷ್ಟು ಕಳವಳಗೊಂಡಿದ್ದ. ನನ್ನನ್ನು ಸ್ವತಃ ತಾನೇ ನಿಂತು ತನ್ನ ಜೀವಕ್ಕಿಂತ್ ಹೆಚ್ಚಾಗಿ ಆರೈಕೆ ಮಾಡಿದ್ದ. ತನ್ನ ಕಣ್ಣೀರು ನೈವದ್ಯ ದೇವರಗರ್ಪಿಸಿ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದ. ಸತತ ಒಂದು ತಿಂಗಳ ಕಾಲದ ಚಿಕಿತ್ಸೆ, ಆರೈಕೆ, ಪ್ರಾರ್ಥನೆಗಳ ನಂತರ ನಾನು ಚೇತರಿಸಿಕೊಳ್ಳಲು ಪ್ರಾರಂಭಿಸಿದೆ. ಈ ನಡುವೆ ಅತ ನನ್ನನ್ನು ಬಿಟ್ಟು ಕದಲದಾದ. ನಾನು ಅದೆಷ್ಟು ಹೇಳಿದರೂ ಕೇಳುತ್ತಿರಲಿಲ್ಲ. ಅವನು ತಂದೆ ತಾಯಿ ಮಾತು ಕೇಳುತ್ತಿರಲಿಲ್ಲ. ಬೇಡವೆಂದರೂ ನನ್ನ ಜೊತೆಯಲ್ಲೆ ಇರುತ್ತಿದ್ದ. ಅವನ ಈ ಹುಚ್ಚು ಎಲ್ಲರ ಕಣ್ಣಿಗೆ ಅಪಾಯಕಾರಿಯಾಗಿ ತೋರಲಾರಂಭಿಸಿತ್ತು. ಅವನ ತಾಯಿ ಒಮ್ಮೆ –
“ನೀನು ಅವಳ ಹತ್ರ ಪದೆಪದೇ ಹೋದರೆ ಆ ಕಾಯಿಲೆ ನಿನಗೂ ಹತ್ತಿ ಸತ್ತು ಹೋಗತೀಯಾ ಹುಷಾರು” ಎಂದು ಹೆದರಿಸಿದರು ಎಂದು ಹೇಳಿದ. ಅದಕ್ಕೆ ನಾನು “ಅದು ನಿಜ ನೀನು ನನ್ನಿಂದ ದೂರ ಇರಬೇಕು” ಎಂದು ಹೇಳಿದರೆ.

“ ಆ ಕಾಯಿಲೆ ನನಗೂ ಬರುವದಾದರೆ ಬರಲಿ ಆದರೆ ನಿನ್ನಿಂದ ದೂರ ಇರಲು ಮಾತ್ರ ನನಗೆ ಸಾಧ್ಯವಿಲ್ಲ’ ಎಂದು ಉತ್ತರಿಸಿದ್ದ, ಅಷ್ಟೇಯಲ್ಲ ನನಗೆ ಬಂದ ಕಾಯಿಲೆ ತನಗೂ ಬರಬೇಕು ಎಂದು ಬೇಡಿಕೊಳ್ಳುತ್ತಿದ್ದ. ಇದೇ ಭಾವನೆಯಿಂದ ಒಂದು ದಿನ ಆತ ನನ್ನ ಹತ್ತಿರ ಬಂದವನೇ ನನ್ನ ಬಾಯಿಗೆ ಬಾಯಿ ಹಾಕಿ ಚುಂಬಿಸಿದ್ದ. ಆ ಚುಂಬನದಿಂದ ನನ್ನಲ್ಲಿ ಅದೇನೋ ಒಂದು ತರಹ ವಿದ್ಯುತ್ತ ಪ್ರವಹಿಸಿದಂತಾಗಿ ಮೈಮನದಲೆಲ್ಲ ಚೈತನ್ಯ ಹರಿದು ಬಂದಂತಾಗಿ ಹಾಸಿಗೆಯಿಂದ ಎದ್ದು ಕುಳಿತು ಫಟಾರಂತಾ ಅವನ ಕೆನ್ನೆಗೊಂದು ಬಾರಿಸಿದ್ದೆ. ನನ್ನ ಈ ಅನಿರೀಕ್ಷಿತ ವರ್ತನೆಯಿಂದ ಅವನು ಸಿಡಿಲು ಬಡಿದವನಂತೆ ಮಂಕಾಗಿ ನಿಂತದ್ದು ಕಂಡು ನನಗೆ ಒಳಗೊಳಗೆ ಸಂಕಟವಾಗಿತ್ತು. ನನ್ನ ಕಾಯಿಲೆ ಅವನಿಗೂ ಬರುವುದು ಎನ್ನುವ ಭೀತಿಯಿಂದ ಸಿಟ್ಟು ಬಂದು ನಾನು ಹೊಡೆದಿದ್ದೆ ವಿನಃ ಬೇರೆ ಉದ್ದೇಶವಿರಲಿಲ್ಲ. ಆದರೆ ನನ್ನ ಏಟಿನ ಅರ್ಥ ಅವನು ಬೇರೆ ತರಹದಲ್ಲಿ ಗ್ರಹಿಸಿದ್ದ ಅನಿಸುತ್ತೆ. ಅವನ ಮುಖ ನೋಡಿ ಬೇಸರವಾಗಿ ಮತ್ತೇ ಅವನನ್ನು ನನ್ನ ಎದೆಗವಚಿಕೊಂಡು ಸಮಾಧಾನ ಪಡಿಸಿದ್ದೆ. ಈ ಘಟನೆಯ ನಂತರ ನಾನು ಸಂಪೂರ್ಣವಾಗಿ ಸುಧಾರಿಸಿದ್ದೆ ನನ್ನ ಮುಖದಲ್ಲಿ ಚಿನ್ನದ ನಗು, ಅವನ ಕಣ್ಣಲ್ಲಿ ಅದರ ಹೊಳಪು!

ನಾನು ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಈ ಮಹಾ ನಗರಕ್ಕೆ ಬಂದೆ. ಅವನು ಅದೇ ಊರಲ್ಲಿ ಶಿಕ್ಷಣ ಮುಂದವರೆಸಿದ. ನನ್ನನ್ನು ಕಾಣಲು ಆಗಾಗ ನನ್ನ ಕಾಲೇಜಿಗೆ ಬರುತ್ತಿದ್ದ. ಅಥವಾ ಪೋನ ಮಾಡುತ್ತಿದ್ದ. ನಮ್ಮ ನಡುವೆ ಎಸೆಮೆಸ್ಸ, ವಿಚಾರ ವಿನಮಯ ನಡೆಯುತ್ತಿತ್ತು. ಬರಬರುತ್ತ ನನ್ನ ಅಭ್ಯಾಸದಲ್ಲಿ ನಾನು ಮಗ್ನಳಾದೆ. ನನ್ನ ಅಭ್ಯಾಸದ ಒತ್ತಡದಲ್ಲಿ ಅವನಿಗೆ ಪ್ರತಿಕ್ರಿಯಿಸುವುದು ಕಡಿಮೆ ಮಾಡಿದೆ. ಏಕೆಂದರೆ ನನಗೆ ನನ್ನ ಭವಿಷ್ಯ ಮುಖ್ಯವಾಗಿತ್ತು. ನನ್ನ ಮಟ್ಟಿಗೆ ಅವನೊಡನೆ ಒಡನಾಡಿದ ಕ್ಷಣಗಳು ಅಂದರೆ ಕೇವಲ ಎರಡು ಮಕ್ಕಳು ಸೇರಿ ಆಡಿದ ಗಂಡಾ ಹೆಂಡತಿ ಆಟವಾಗಿತ್ತು. ಆದರೆ ಅವನು ಮಾತ್ರ ಅದನ್ನೇ ಗಂಭೀರವಾಗಿ ತಗೆದುಕೊಂಡಂತೆ ಇತ್ತು. ನಾನು ಅವನಿಂದ ದೂರಾದ ನಂತರ ಮುಂದೆ ಜೀವನದಲ್ಲಿ ಎನೋ ಕಳೆದುಕೊಂಡವನಂತೆ ಮಂಕಾದ, ಕಲಿಯುವದರಲ್ಲಿ ಆಸಕ್ತಿಯನ್ನೇ ಕಳೆದುಕೊಂಡು ಪೋಲಿಯಾಗಿ ಅಲೆಯಲು ಪ್ರಾರಂಭಿಸಿದ. ಅವರ ತಂದೆ ತಾಯಿ, ನಮ್ಮ ತಂದೆ ತಾಯಿ ಅವನಿಗೆ ಎಷ್ಟು ತಿಳಿ ಹೇಳಿದರೂ ಅವನು ತಲೆಗೆ ತಗೆದುಕೊಳ್ಳಲಿಲ್ಲ. ಅವರ ತಂದೆ ನನಗೆ ಫೋನ ಮಾಡಿ ತಿಳಿಸಿದರು. ನಾನು ಒಂದೆರಡು ಬಾರಿ ಅವನನ್ನು ಕಂಡು ಹೇಳಿ ಬಂದೆ. ಇದರಿಂದ ಅವನಲ್ಲಿ ಎನೂ ಬದಲಾವಣೆಯಾಗಲಿಲ್ಲ, ಪ್ರಯೋಜನವೂ ಆಗಲಿಲ್ಲ. ಅಷ್ಟರಲ್ಲಿ ಅವರ ತಂದೆಗೆ ವರ್ಗವಾಗಿ ದೂರ ಯಾವುದೋ ಊರ ಸೇರದರು ಅಂತಾ ನಮ್ಮ ಮನೆಯವರಿಂದ ತಿಳಿಯಿತು. ನಾನು ಎಮ್. ಏ ಪಧವಿ ಮುಗಿಸಿ ಕಲಿತ ಕಾಲೇಜನಲ್ಲೆ ಪ್ರದ್ಯಾಪಕಿಯಾಗಿ ಸೇವೆ ಆರಂಭಿಸಿದೆ. ಮುಂದೆ ನನಗೆ ಪಿ ಹೆಚ್ ಡಿ ಮಾಡುವ ಆಸೆ ಇತ್ತು. ಜೀವನದಲ್ಲಿ ಮಹತ್ತರವಾದ ಸಾಧನೆ ಮಾಡುವುದೇ ನನ್ನ ಪರಮಗುರಿಯಾಗಿತ್ತು. ಬೇರೆ ಬೇರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತ ನಾನು ಮುಂದವರೆಯುತ್ತಿದ್ದೆ. ಈ ನಡುವೆ ಎಲ್ಲಿಂದಲೋ ಉದಯವಾಗಿ ಬಂದ ಆತ ಹೆಚ್ಚಿನ ವ್ಯಾಸಾಂಗಕ್ಕೆಂದು ನಮ್ಮ ಕಾಲೇಜಿಗೆ ಬಂದು ಸೇರಿಕೊಂಡ. ಹೆತ್ತವರ ಕಾಟಕ್ಕೂ, ಗೆಳೆಯರ ಮುಂದಿನ ಅವಮಾನಕ್ಕೂ, ಹಾಗೋ ಹಿಗೋ ಪಿಯೂ ಮುಗಿಸಿ ಡಿಗ್ರಿಗೆ ಪ್ರವೇಶ ಪಡದಿದ್ದ ಅಲ್ಲಿ ನಾನು ಗುರು, ಅವನು ಶಿಷ್ಯ. ಇದೇ ನೆಪದಿಂದ ಆತ ಪ್ರತಿ ಕ್ಷಣವೂ ನನ್ನೊಂದಿಗೆ ಕಳೆಯಲು ನೋಡುತ್ತಿದ್ದ. ಪದೆಪದೇ ನನ್ನ ಸನಿಹಕ್ಕೆ ಬರುವ ಅವಕಾಶಗಳಿಗಾಗಿ ಕಾಯುತ್ತಿದ್ದ. ಆದರೆ ಅದೇಕೋ ನನಗೆ ಅವನ ವರ್ತನೆ ಹಿಡಿಸುತ್ತಿರಲಿಲ್ಲ. ಅವನ ಈ ವರ್ತನೆಯಿಂದ ಸಹದ್ಯೋಗಿಗಳ ಮುಂದೆ, ವಿದ್ಯಾರ್ಥಿಗಳ ಮುಂದೆ ನಾನು ಮುಜಗುರ ಪಡುವಂತಾಗುತ್ತಿತ್ತು. ಬರಬರುತ್ತ ಹೆಚ್ಚಾದ ಅವನ ಹುಚ್ಚು ನನ್ನಿಂದ ಸಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ಬೇಕಂತಲೇ ನಾನು ಅವನತ್ತ ನಿರ್ಲಕ್ಷ್ಯ ತೋರಲಾರಂಭಿಸಿದೆ. ನನ್ನ ಈ ವರ್ತನೆಯಿಂದ ಕೋಪಗೊಂಡು ಒಂದು ದಿನ ನಾನೊಬ್ಬಳೆ ಇದ್ದಾಗ ಬಂದು-

“ಇದೇನು ಹೀಗೆ ನನ್ನ ತಾಳ್ಮೆ ಪರೀಕ್ಷೆ ಮಾಡುತ್ತಿದ್ದೀಯಾ, ನಾನೀಗಲೂ ನಿನ್ನನ್ನು ಪ್ರೀತಿಸುತ್ತಿದ್ದೇನೆ. ಆದರೆ ನೀನು ಮಾತ್ರ ನನ್ನತ್ತ ನೋಡುತ್ತಲೂ ಇಲ್ಲ.” ಎಂದು ಹೇಳಿದ. ಈಗಲೂ ನನಗೆ ಅವನ ಮನಸ್ಸು ಮುರಿಯುವ ಮನಸ್ಸು ಬರಲಿಲ್ಲ. ಅವನ ಮಾತು ಗಂಭೀರವಾಗಿ ತೆಗೆದುಕೊಳ್ಳದೇ ಅವನತ್ತ ಒಮ್ಮೆ ನೋಡಿ ಸುಮ್ನೆ ನಸುನಕ್ಕು ಮುನ್ನೆಡದಿದ್ದೆ. ಅವನು ಅಲ್ಲೇ ನಿಂತು ಬಿಟ್ಟ. ನನ್ನ ಅರ್ಥ ಮಾಡಿಕೊಳ್ಳದೆ. ನಾನು ನಡೆಯುತ್ತ ನಡೆಯುತ್ತ ಸಾಧನೆಯ ಶಿಖರವೇರುತ್ತಿದ್ದೆ. ಅವನು ಮಾತ್ರ ನಿಂತಲ್ಲೆ ನಿಂತು ಬಿಟ್ಟಿದ್ದ. ನಾನು ಶಿಖರದ ತುತ್ತು ತುದಿಗೇರಿ ನೋಡುತ್ತೇನೆ, ಆತ ಜನರಸಾಗರದ ನಡುವೆ ಅದೃಶ್ಯನಾಗಿ ಹೋದವನು ಮತ್ತೇ ಕಾಣಲೇ ಇಲ್ಲ. ಪದವಿ ಫೇಲೋ, ಪ್ರೇಮ ಫೇಲೋ ಆಗಿ ಅವನು ಮಾಯವಾಗಿ ಬಿಟ್ಟಿದ್ದ.

ನಾನು ಸಾಧನೆಯ ಹಾದಿಯಲ್ಲಿ ಎದುರಾದವರ ಮುಖದಲ್ಲಿ ನನ್ನ ಕಲ್ಪನೆಯ ಪುರುಷನನ್ನು ಹುಡುಕುತ್ತ ನಡೆದೆ. ಅವರಲ್ಲಿ ಯಾರೂ ನನಗೆ ತಕ್ಕ ಗಂಡು ಅನಿಸಲೇ ಇಲ್ಲ. ಜೀವನ ಸಂಗಾತಿಯ ಅನ್ವೇಷಣೆಯಲ್ಲಿ ನಾನು ನನ್ನನ್ನು, ನನ್ನ ಮುಗ್ಧತೆಯನ್ನು ಸರ್ವಸ್ವವನ್ನೇ ಕಳೆದುಕೊಂಡಿದ್ದೆ. ಒಂದು ಅರ್ಥದಲ್ಲಿ ನನ್ನ ಬದುಕಿನ ಅರ್ಥವನ್ನೇ ಕಳೆದುಕೊಂಡಿದ್ದೆ. ನನ್ನ ಜೀವನದಲ್ಲಿ ಬಂದು ಹೋದವರ ಲೆಕ್ಕವೇ ಇಲ್ಲ. ಬಹಳಷ್ಟು ಜನ ನನ್ನ ನೆನಪಿನಲ್ಲಿ ಸಹ ಉಳಿದಿಲ್ಲ. ಈ ನಡುವೆ ನನ್ನ ತಂದೆ ತಾಯಿ ಸಹ ನನ್ನದೇ ಚಿಂತೆಯಲ್ಲಿ ಒಬ್ಬೊಬ್ಬರಾಗಿ ಇಹಲೋಕ ತ್ಯಜಿಸಿದರು. ಈಗ ನಾನು ಅಕ್ಷರಶಃ ಒಂಟಿ. ನಾನು ಮಾನಸಿಕವಾಗಿ ತತ್ತರಿಸುತ್ತ ಹೊರಟಿದ್ದೆ. ಈಗ ನನ್ನಲ್ಲಿ ದೈಹಿಕ ಬದಲಾವಣೆಗಳಾಗಲೂ ಆರಂಭಿಸಿದ್ದವು. ನನ್ನಲ್ಲಿನ ಶಕ್ತಿಯಲ್ಲ ಉಡುಗಿ ಹೋಗುತ್ತಿರುವಂತೆ ಭಾಸವಾಗುತ್ತಿತ್ತು. ನಾನು ದಿನೆದಿನೇ ನಿಸ್ತೇಜವಾಗುತ್ತ ಹೊರಟಿದ್ದೆ. ನನ್ನ ಮುಖದ ಕಾಂತಿ ಸೌಂದರ್ಯವೆಲ್ಲ ಕಡಿಮೆಯಾಗಲಾರಂಭಿಸಿತ್ತು. ಸಾಧನೆಯ ಶಿಖರವೇರಿ ಆಗಸದ ನಕ್ಷತ್ರಗಳನ್ನೆಲ್ಲ ಮುಡಿಗೇರಿಸಿಕೊಳ್ಳಬೇಕೆನ್ನುವ ಆಸೆ ನಿರಾಸೆಯಾಗಿತ್ತು. ನಾನು ಕಟ್ಟಿದ ಸ್ವಪ್ನಸೌಧ ನನ್ನದೇ ಬಿರುಗಾಳಿಗೆ ಸಿಕ್ಕು ಧ್ವಂಸವಾಗುತ್ತಿರುವಂತೆ ಭಾಸವಾಗುತ್ತಿತ್ತು. ನಾನು ಪ್ರತಿ ಕ್ಷಣ ವಿರಹವೇದನೆ ಅನುಭವಿಸುತ್ತಿದ್ದೆ. ಜೀವನಸಂಗಾತಿ ಇರದೆ ಜೀವನ ವ್ಯರ್ಥ ಅನಿಸುತ್ತಿತ್ತು. ನಾನು ಸಾಧಿಸಿದ ಸಾಧನೆಯಿಂದ ಇವತ್ತು ನನ್ನ ಬಳಿ ಸಂಪತ್ತು, ಗೌರವ, ಪ್ರತಿಷ್ಠೆ ಏನೆಲ್ಲ ಇದ್ದರೂ ಒಬ್ಬ ಜೀವನ ಸಾಥಿ ಇಲ್ಲದೇ ಅದೆಲ್ಲ ಶೂನ್ಯವೆನಿಸುತ್ತಿತ್ತು. ಹಗಲು ಬೆಳಕಿನಲ್ಲಿ ನಾನು ನೋಡುವರ ಕಣ್ಣಿಗೆ ಚಿನ್ನದ ಗೊಂಬೆ, ಆದರೆ ನಿದ್ರೆ ಬಾರದ ರಾತ್ರಿ ಒದ್ದಾಡಿ ಒದ್ದಾಡಿ ಎದ್ದು, ನಂತರ ಮುಂಜಾನೆ ಕನ್ನಡಿಯಲ್ಲಿ ನೋಡಿಕೊಂಡರೆ ಮೇಕಪ್ ಇಲ್ಲದ ನನ್ನ ಮುಖ ಒಂತರಹ ನನಗೇ ಭಯ ಹುಟ್ಟಿಸುವಂತೆ ಕಾಣುತಿತ್ತು. ಇಡೀ ದಿನ ಕೆಲಸದ ಒತ್ತಡದ ನಡುವೆ ಹೇಗೋ ಕಳೆದು ಹೋಗುತ್ತಿತ್ತು. ಒಂಟಿಯಾಗಿ ರಾತ್ರಿ ಕಳೆಯುವುದೇ ಅಸಾಧ್ಯವಾಯಿತು. ಹೀಗಾಗಿ ನಿದ್ರೆ ಮಾತ್ರ್ರೆಯ ದಾಸಿಯಾದೆ. ದಿನ ಕಳೆದಂತೆ ಅವು ಸಹ ನಿರುಪಯುಕ್ತ ಅನಿಸಲಾರಂಭಿಸಿದವು. ಮಾತ್ರೆಗಳ ಜೊತೆಗೆ ಮದ್ಯವ್ಯಸನಿಯಾದೆ. ಮೊದಲು ಪ್ರೇಮ, ಮಣ್ಣಿನ ನಂಟು ಕಳೆದುಕೊಂಡು ಮುಗಿಲ ಮಲ್ಲಿಗೆಯಾಗಲು ಹೊರಟವಳು ಹಂತಹಂತವಾಗಿ ಪ್ರಪಾತಕ್ಕೆ ಜಾರಿ ಹೋಗುತ್ತಿದ್ದೆ. ಇಂಥದರಲ್ಲಿ ಅವನು ಪದೆಪದೇ ನೆನಪಾಗುತ್ತಲೇ ಇದ್ದ. ಕೊನೆ ಆಶಾಕಿರಣವಾಗಿ. ಆದರೀಗ ನನ್ನ ಎಲ್ಲವನ್ನೂ ಕಳೆದಕೊಂಡ ನನಗೆ ಅವನನ್ನು ವಂಚಿಸುವ ಮನಸ್ಸು ಬರುತ್ತಿಲ್ಲ. ನಾನು ಹೋದರೆ ಅವನು ನಿರಾಕರಿಸಲಾರನೆಂಬ ವಿಶ್ವಾಸವಿದೆ, ಆದರೆ ನಾನವನಿಗೆ ಯೋಗ್ಯಳಲ್ಲ ಅನ್ನುವ ಕಾರಣಕ್ಕೆ ನನ್ನ ಆತ್ಮಸಾಕ್ಷಿ ಒಪ್ಪತ್ತಿಲ್ಲ. ಒಂದು ರಾತ್ರಿ ನಿದ್ರೆ ಬಾರದೆ ನಾನು ಒದ್ದಾಡುತ್ತಿದ್ದರೆ ಎಫ್. ಎಮ್ ಗೋಲ್ಡನಲ್ಲಿ ನನ್ನ ನೆಚ್ಚಿನ ಗಾಯಕ ಮುಕೇಶ ಹಾಡಿದ ಆ ಸುಮಧುರ ಹಾಡು ಮೊಳಗುತ್ತಿತ್ತು. ಈ ದಿನ ಎಲ್ಲ ನೋವುಗಳಿಗೆ ಮುಕ್ತಿ ದೊರೆಯಲೇಬೇಕೆಂದು ತೀಮಾರ್ನಿಸಿ ಈ ಒಂಟಿತನದಿಂದ, ವಿರಹದಿಂದ ಮುಕ್ತಳಾಗಲೇಬೇಕು ಅನಿಸಿ ಅಲ್ಲೇ ಇದ್ದ ನಿದ್ರೆ ಮಾತ್ರೆಗಳ ಶೀಶೆಯನ್ನು ಎತ್ತಿಕೊಂಡು ಅದರಲ್ಲಿದ್ದ ಅಷ್ಟೂ ಮಾತ್ರೆಗಳನ್ನು ತಗೆಯುತ್ತ ಒಂದೊಂದಾಗಿ ಮದ್ಯದ ಜೊತೆಗೆ ಸೇವಿಸುತ್ತ ನಡೆದೆ. ಬಹುಶಃ ನಲವತ್ತೈವತ್ತು ಮಾತ್ರೆಗಳಾಗಿರಬೇಕು ಜೊತೆಗೆ ಅದಕ್ಕೂ ಹೆಚ್ಚಿನ ಸಂಖ್ಯೆಯ ಪೆಗ್ಗಗಳು…ಸಾವಕಾಶವಾಗಿ ನನಗೆ ನಿದ್ರಾದೇವಿ ಆವರಿಸಲಾರಂಭಿಸಿದಳು.

“ಕೋಯಿ ಜಬ್ ತುಮ್ಹಾರಾ ಹೃದಯ ತೋಡದೆ
ತಡಪ್ತಾ ಹುವಾ ಜಬ್ ಕೋಯಿ ಛೋಡದೇ
ತಬ್ ತುಮ್ ಮೇರೆ ಪಾಸ ಆನಾ ಪ್ರೀಯೆ
ಮೇರಾ ಘರ ಖುಲಾ ಹೈ ಖುಲಾ ಹೀ ರಹೇಗಾ…

ಈ ಸುಶ್ರಾವ್ಯ ಹಾಡು ಶಾಂತ ಚಿತ್ತದಿಂದ ಕೇಳುತ್ತಲೇ ಚಿರನಿದ್ರೆಗೆ ಜಾರಿದ್ದೆ. ಎಚ್ಚರವಾದಾಗ ಆಸ್ಪತ್ರೆಯ ಐಸಿಯೂನಲ್ಲಿ ಸಾವು ಬದುಕಿನ ನಡುವೆ ಹೋರಾಡ್ತಾ ಇದ್ದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನನಗೆ ಯಾರೋ ಆಸ್ಪತ್ರೆಗೆ ಸಾಗಿಸಿದ್ದರು. ನನ್ನನು ಚಿಕಿತ್ಸೆ ನೀಡಿ ಕಾಪಾಡಿದ ವೈದ್ಯರನ್ನು ನಾನು “ನನ್ನನು ಏಕೆ ಕಾಪಿಡಿದಿರಿ? ನಾನು ಸಾಯಬೇಕಿತ್ತು” ಎಂದು ಪ್ರಶ್ನಿಸಿದೆ. ಅದಕ್ಕೆ ಅವರು “ನಿಮಗೆ ಮನೋಚಿಕಿತ್ಸಕರÀ ಅವಶ್ಯಕತೆ ಇದೆ, ಹೋಗಿ ಭೆಟ್ಟಿಯಾಗಿ” ಎಂದು ನಿಮ್ಮ ಹೆಸರು ಬರೆದುಕೊಟ್ಟರು… ಎನ್ನುವವರೆಗೂ ನನ್ನ ಎಲ್ಲ ಕಥೆಯನ್ನು ಹೇಳಿದೆ. ನನ್ನ ಎಲ್ಲ ಕಥೆ ಶಾಂತ ಚಿತ್ತದಿಂದ ಕೇಳಿದ ಮನೋಚಿಕಿತ್ಸರು ನಂತರ ತಮ್ಮ ಕಥೆ ಹೇಳಲಾರಂಭಿಸಿದರು-

“ ನನಗೀಗ ಅರವ್ವತ್ತರ ವಯಸ್ಸು, ತುಂಬ ಪ್ರಾಯದಲ್ಲೆ ಎರಡು ಗಂಡ ಮಕ್ಕಳನ್ನು ಹೆತ್ತುಕೊಟ್ಟ ನನ್ನ ಪತ್ನಿ ಎರಡು ಮಕ್ಕಳನ್ನು ನನ್ನ ಕೈಗೆ ಕೊಟ್ಟು ಕ್ಯಾನಸರದಿಂದ ಸತ್ತುಹೋದಳು. ಇಬ್ಬರೂ ಮಕ್ಕಳ ಲಾಲನೆ, ಪೋಷಣೆ ಅವರ ಶಿಕ್ಷಣ, ಮದ್ವೆ ಇತ್ಯಾದಿಗಳ ಜತೆಗೆ ನನ್ನ ಕೆಲಸದ ಒತ್ತಡದ ನಡುವೆ ಇನ್ನೊಂದು ಸಂಗಾತಿಯ ಬಗ್ಗೆ ಯೋಚಿಸುವುದಕ್ಕೆ ಸಮಯವೇ ಸಿಗಲಿಲ್ಲ. ಹಸಿವಿಗೆ ಊಟದ ಕೊರತೆ ಇರಲಿಲ್ಲ. ಹಸಿವಾದಾಗ ಎಲ್ಲಿಯಾದರೂ ಊಟ ಮಾಡಿ ಹಸಿವು ನೀಗಿಸಿಕೊಂಡು ಬಿಡುತ್ತಿದ್ದೆ. ಈಗ ಇಬ್ಬರೂ ಮಕ್ಕಳು ಡಾಕ್ಟರಾಗಿ ಫಾರೇನನಲ್ಲಿ ಸೆಟ್ಟಲ ಆಗಿದ್ದಾರೆ. ಅವರ ಬಗ್ಗೆ ಚಿಂತೆ ಇಲ್ಲ. ದುಡ್ಡೂ ಸಾಕಷ್ಟಿದೆ ಅದರದೂ ಚಿಂತೆಯಿಲ್ಲ. ಆದರೆ ಅದೇಕೋ ಇತ್ತಿತ್ತಲಾಗಿ ಬದುಕಿನ ಈ ಮುಸ್ಸಂಜೆಯಲ್ಲಿ ಒಬ್ಬಳು ಸಂಗಾತಿಯ ಅವಶ್ಯÀಕತೆಯಿದೆ ಅನಿಸುತ್ತಲಿದೆ. ನನ್ನ ಅಸಹಾಯಕ ಕೊನೆಗಾಲದಲ್ಲಿ ಅವಳನ್ನು ಗುಲಾಮನಂತೆ ದುಡಿಸಿಕೊಳ್ಳಲಂತೂ ಖಂಡಿತ ಅಲ್ಲ. ಆದರೆ ಜೀವನದ ಕೊನೆ ಕ್ಷಣಗಳು ಆಸೆ ಇದೆ, ನಿತ್ಯದ ಈ ಯಾಂತ್ರಿಕ ಬದುಕಿನ ಒತ್ತಡಗಳನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಿಕೊಂಡು ಪ್ರೀತಿಯಿಂದ, ನೆಮ್ಮದಿಯಿಂದ ಬದುಕುಬೇಕು ಅನಿಸ್ತಾಯಿದೆ……” ಮನೋವೈದ್ಯರು ತಮ್ಮ ವೈಯಕ್ತಿಕ ಜೀವನದ ಕಥೆ, ಮನಸಿನ ಭಾವನೆಗಳನ್ನ ನನ್ನ ಮುಂದೆ ಬಿಚ್ಚಿಡುತ್ತಲೇ ಇದ್ದರು. ಒಂದು ಕ್ಷಣ ಅವರೆಲ್ಲ ಇದನ್ನು ನನ್ನ ಮುಂದೆ ಯಾಕೆ ಹೇಳುತ್ತಿದ್ದಾರೆ ಅನಿಸಿದರೂ ಆ ಸಂದರ್ಭದಲ್ಲಿ ನಾನೇ ವೈದ್ಯ ಅವರೇ ಮನೋರೋಗಿ ಎಂದು ಅನಿಸದೇ ಇರಲಿಲ್ಲ. ನನ್ನ ಸಂದೇಹಕ್ಕೆ ಪರಿಹಾರವೆಂಬಂತೆ ಅವರು ಮುಂದವರಿಸಿದರು-
“ ಇದ್ದನ್ನೆಲ್ಲ ನಾನು ನಿಮ್ಮ ಮುಂದೆ ಹೇಳಲು ನಾವಿಬ್ಬರೂ ಒಂಟಿತನ ಅಷ್ಟೇ ತೀವೃವಾಗಿ ಅನುಭವಿಸುತ್ತಿದೇವೆ ಎನ್ನುವ ಕಾರಣವಾಗಿರಬಹುದು. ಅಥವಾ ನನ್ನ ಸೂಪ್ತ ಮನಸ್ಸು ನಿಮ್ಮಲ್ಲಿ ಸಂಗಾತಿಯಾಗಿ ಕಂಡಿರಬಹುದು. ನಾನು ವಯಸ್ಸಿನಲ್ಲಿ ನಿಮಗಿಂತ ತುಸು ದೊಡ್ಡವನೇ ಅಷ್ಟೆಯಲ್ಲ ಅನುಭವದಲ್ಲಿಯೂ ದೊಡ್ಡವನು. ನಿಮಗೆ ನಿರಾಸೆ ಮಾಡುವಷ್ಟು ನಾನಿನ್ನು ಸೋತಿಲ್ಲ ಅನ್ನು ನಂಬಿಕೆ ಇದೆ. ಆದರೂ ನಿಮ್ಮ ಸ್ವಾತಂತ್ರಕ್ಕೆ ಎಂದೂ ಅಡ್ಡಿ ಪಡಸುವದಿಲ್ಲ. ನೀವು ನಿಮ್ಮ ಮನಸ್ಸು ತಿಳಿದಂತೆ ಬದುಕುಬಹುದು. ನಾವು ನಮ್ಮ ಅನುಭವಗಳನ್ನು ಪರಸ್ಪರÀ ಮುಕ್ತವಾಗಿ ಹಂಚಿಕೊಂಡು ಮನಸ್ಸು ಹಗುರುಮಾಡಿಕೊಳ್ಳುತ್ತ ಆನಂದದಿಂದ ಉಳಿದ ಜೀವನ ಕಳೆದರೆ ಸಾಕು, ನೀವು ಹುಂ ಅನ್ನುವದಾದರೆ ನಮ್ಮ ಸಂಬಂಧವನ್ನು ಅಧಿಕೃತವಾಗಿಸಲು ರಜಿಸ್ಟಾರ ಆಫೀಸನಲ್ಲಿ ಮದುವೆಯಾಗಬಹುದು ಅವಸರವಿಲ್ಲ ನಿಧಾನಕ್ಕೆ ಹೇಳಿ” ಎಂದು ಪ್ರಸ್ತಾವಣೆಯನ್ನು ಪ್ರಮಾಣಿಕವಾಗಿ ನನ್ನ ಮುಂದೆ ಇಟ್ಟಿದ್ದರು. ಅವರೂ ನನಗೆ ಚಿಕಿತ್ಸೆ ನೀಡಲಿಲ್ಲ. ಅವರ ಈ ವಿವಾಹ ಪ್ರಸ್ತಾಪವೇ ಚಿಕಿತ್ಸೆ ಆದಂತೆಯಾಗಿತ್ತು. ನನಗೆ ಅವರ ಸ್ವಭಾವ, ನಡೆ, ನೇರನುಡಿ ಎಲ್ಲ ಇಷ್ಟವಾಗಿತ್ತು. ಕೆಲವು ದಿನಗಳ ಬಳಿಕ ಅವರೊಂದಿಗೆ ವಿವಾಹ ಸಂಬಂಧಕ್ಕೆ ಸಮ್ಮತಿಸಿದೆ. ಅದರಂತೆ ಹಾರ ಬದಲಿಸಿಕೊಂಡು ರಜಿಸ್ಟಾರ ಕಚೇರಿಯಲ್ಲಿ ಸಂಬಂಧವನ್ನು ಅಧಿಕೃತಗೊಳಿಸಿಕೊಂಡ ನಂತರ ನಮ್ಮ ವಿವಾಹ ಸಂಬಂಧ ಜಗಜ್ಜಾಹೀರ ಮಾಡಲು ಹೊಟೇಲ ಒಂದರಲ್ಲಿ ರಿಷ್ಪಷನ್ ಇಟ್ಟೇವು. ಆ ರಿಷ್ಪಷನ್ ಪಾರ್ಟಿಯಲ್ಲಿ ಅವನನ್ನು ಕಂಡು ಆಶ್ಚರ್ಯವಾಯಿತು. ಅವನು ತನ್ನ ಪತ್ನಿಯೊಂದಿಗೆ ಅಲ್ಲಿಗೆ ಬಂದಿದ್ದ. ನನ್ನನ್ನು ಕಂಡು ಸಂಕೋಚದಿಂದ ಮೌನವಾಗಿ ನಿಂತಿದ್ದು ಕಂಡು ನಾನೇ ಮುಂದಾಗಿ ಮಾತಾಡಿದೆ-

“ಯಾಕೋ ನನ್ನ ಮೇಲೆ ಸಿಟ್ಟೇನೋ..ನನ್ನನೂ ಮಾತಾಡಿಸುದಿಲ್ಲೇನು?” ಎಂದು ಪ್ರಶ್ನಿಸಿದ್ದಕ್ಕೆ-
“ಹಾಗೇನಿಲ್ಲಕ್ಕಾ..” ಅನ್ನುತ್ತ ಸಂಕೋಚದಿಂದ “ಇವಳು ನನ್ನ ಹೆಂಡತಿ” ಎಂದು ಪರಿಚಯಿಸಿದಾ” ಅವನ ಸುಂದರಳಾದ ಪತ್ನಿಯನ್ನು ಕಂಡು ಮನಸ್ಸಿನಲ್ಲಿ ಒಂಥರಾ ಹೊಟ್ಟೆಕಿಚ್ಚು ಮೂಡಿದರೂ. ಆದನ್ನು ತೋರ್ಪಡಿಸದೇ-
“ ನಿನಗೆ ಸರಿಯಾದ ಜೋಡಿ, ನನಗೇ ಮದ್ವೆಗೇನೆ ಕರೆಯಲಿಲ್ಲ? ನನ್ನುನು ಬಿಟ್ಟು ಅದ್ಹೇಗೆ ಮದ್ವೆಯಾದಿಯೋ” ಎಂದಾಗ ಅವನು ತಲೆತಗ್ಗಿಸಿ “ಅದು…ಅದು…” ಎಂದು ಉತ್ತರಿಸಲಾಗದೆ ಒದ್ದಾಡುತ್ತಿರುವದನ್ನು ನೋಡಿ ನನ್ನ ಗಂಡ, ಅವನ ಹೆಂಡ್ತಿ ಸಮೇತ ಅಲ್ಲಿದ್ದವರೆಲ್ಲ ಎಲ್ಲರು ನಕ್ಕರು. ಆರ್ಕೇಸ್ಟ್ರಾದವರಿಂದ ಮೂಡಿ ಬರುತ್ತಿದ್ದ “ತೆರದಿದೆ ಮನೆಯೋ ಬಾ ಅತಿಥಿ…ಹೊಸ ಬಾಳನು ತಾ..ಅತಿಥಿ.” ಎಂಬ ಹಿನ್ನಲೆ ಸಂಗೀತ ವಾತಾವರಣ ಇನ್ನಷ್ಟು ಆಹ್ಲಾದಕರವಾಗಿಸಿತ್ತು.

-ಅಶ್ಫಾಕ್ ಪೀರಜಾದೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x