ತುಮುಲಗಳು ತೀರಿ ಹೋದ ಹೊತ್ತು… ಭಾವುಕ ಕನ್ನಡಿ ಚೂರಾಯ್ತು. ಮನಸ್ಸು ಮೋಡ ಕವಿದ ಸಂಜೆಯಷ್ಟೇ ನೀರವ. ದೂರದಲ್ಲೆಲ್ಲೋ ಮಳೆ ಹನಿಗಳ ಕಲರವ. ಬರ ಬರಬಾರದಿತ್ತು ಭಾವುಕತೆಗೆ. ಸುಖಾಸುಮ್ಮನೆ ಅಳುವುದರಲ್ಲೂ ಒಂದು ಸುಖ. ಅಕಾರಣವಾಗಿ ನಗೆ ಚೆಲ್ಲಿದಾಗಲೂ ಇಣುಕುವ ದುಃಖ… ಬದುಕು ಕಳೆಗುಂದದಿರಲು ಕಣ್ಣಂಚಲ್ಲಿ ಒಂದಷ್ಟು ನೀರು ಶೇಖರಿಸಿಟ್ಟುಕೊಳ್ಳುವ ಜಾಣ್ಮೆ ಮೊದಲೇ ಮೈಗೂಡಬೇಕಿತ್ತು.
ಎರಡು ಬದಿಯ ಮೌನ ಮಾತಾಡುವಷ್ಟು, ಒಂದು ಬದಿಯ ಕದನ ಪದ ಕಕ್ಕಲಾರದು. ಮೌನವಿರಬೇಕಿತ್ತು ಇಬ್ಬರ ನಡುವೆ… ನಮ್ಮಿಬ್ಬರಿಗೂ ಇಷ್ಟವಾದ ಮಾತನಾಡುವ ಸಲುವಾಗಿಯಾದರೂ!
ಕುದುರುವ ಮುನ್ನ ಕ್ಷಣಕ್ಷಣಕ್ಕೂ ಕದಲಿ ಕಂಗೆಡುವ ನೋವು-ನಲಿವಿನ ಬಿಡಿ ಚಿತ್ರಗಳು, ಅಂದುಕೊಂಡದ್ದೆಲ್ಲವೂ ದಕ್ಕಿದ ಮೇಲೆ ಸ್ಥಿರವಾಗಿ ಬಿಡುವುದು ಜೀವಂತಿಕೆಯ ಸಾವಲ್ಲವೇ? ಎದುರು ಕೂತ ನನಗಿಷ್ಟವಾದವರು, ನನ್ನನ್ನು ದೂಷಿಸಿದಾಗ ಸಂತೈಸಲು ಮುಂದಾಗುವ ಆ ಕ್ಷಣ ಹೆಕ್ಕಿ ಕೊಡುವ ಜೀವಭಾವ ಎಲ್ಲವೂ ಸರಿ ಇರುವಾಗ ನಮ್ಮದಾಗುವುದೇ ಇಲ್ಲ.
ಮೂಲೆಯಲ್ಲೆಲ್ಲೋ ಬಿದ್ದುಕೊಳ್ಳುವ ಕಾಲದ ಕ್ರೌರ್ಯ, ಎಂದಾದರೂ ಎದ್ದು ಬಂದು ಎದೆಗೆ ಜಾಡಿಸಿ ಒದೆಯಬಹುದು. ಈಗಾಗಲೇ ನಾವು ಆ ಒದೆಯ ರುಚಿ ಉಂಡಿರಲೂಬಹುದು. ಸಾವು ಒಮ್ಮೊಮ್ಮೆ ಪರಮಾಪ್ತ.
ಮುಗಿಯದ ಮಾತುಕತೆಗೆ ಕೊನೆಯ ಮಾತು ಪೋಣಿಸಬಾರದು. ಎಂದೂ ಮುಗಿಯದ ಪಯಣಗಳು ಸದಾ ಜಾರಿಯಲ್ಲಿರಬೇಕು. ಬದುಕುವ ಹಂಬಲ ಹನಿ ಹನಿಯಾಗಿ ಜಿನುಗಲು…
ಬಿಟ್ಟೂಬಿಡದೇ ಕಾಡುತ್ತಿದ್ದ ತುಮುಲಗಳು ಈ ಸಂಜೆ ಅದೇಕೋ ತೀರಿ ಹೋದವು. ಅವಳು ಮಾತಿಗೆ ಸಿಗದೇ ಹೋದಳು. ಭಾವುಕತೆ ಬಿಗಿದಪ್ಪಲು ಬರಲೇ ಇಲ್ಲ. ಮುಖದ ಮೇಲೆ ಒಣ ನಗು ನಿಂತಲ್ಲೇ ಇತ್ತು. ಎಲ್ಲವೂ ತಟಸ್ಥ. ದೇಹವೊಂದೇ ಸ್ವಸ್ಥ. ಮನಸ್ಸು ನಿಜಕ್ಕೂ ಅಸ್ವಸ್ಥ.
ಗೊತ್ತಿಲ್ಲದ ಊರು ಗೊತ್ತಾಗುವಷ್ಟು ಸುತ್ತಿದರೂ ಸವೆಯದ ಮೆಟ್ಟುಗಳು ಕಟ್ಟಿಕೊಡಲಾರವು ನೆನಪಿನ ಹಿಡಿಗಂಟು. ಎಲ್ಲ ಪಳೆಯುಳಿಕೆಗಳು ಕಥೆ ಹೇಳಲಾರವು. ಕಥೆ ಹೇಳುವ ಅಸ್ಥಿಪಂಜರಗಳು ಕಾಡುವಂತಹ ಚಿತ್ರ ಕಣ್ಣಂಚಲ್ಲಿ ಬಿಡದೇ ತೆರಳಲಾರವು.
ಎಲ್ಲ ಮುಗಿದ ಮೇಲೂ, ಕೊನೆ ಅಂಚಲ್ಲಿ ಶುರುವಾಗುವ ತಿಕ್ಕಲು, ಹೊಸ ಪಯಣಕ್ಕೆ ಮುನ್ನುಡಿ ಬರೆಯಬಲ್ಲದು. ಪದಗಳ ಮೆರವಣಿಗೆಯೂ ಒಂದು ಸುಂದರ ಪಯಣ. ದಿಟ್ಟಿಸಿ ನೋಡಿದಷ್ಟೂ ಅರ್ಥ ದಕ್ಕಿಸಿಕೊಳ್ಳಬಹುದು. ಮೇಲ್ಮೈ ನೋಡಿ ಏನೂ ಇಲ್ಲವೆಂದು ತೆಗಳಲೂಬಹುದು. ಒಡಲಾಳದ ಗೊಂದಲಗಳನ್ನು ಉಗುಳುವಾಗ ಎಲ್ಲವೂ ಅಸ್ಪಷ್ಟವೇ. ಎಲ್ಲವೂ ಅರ್ಥವಾದರೆ ಬದುಕು ಅರ್ಥ ಕಳಕೊಳ್ಳುವುದಿಲ್ಲವೇ?
ನನ್ನನ್ನು ನಾನು ಗ್ರಹಿಸಿದಂತೆ ನಿಮ್ಮನ್ನು ನೀವು ಗ್ರಹಿಸಲಾರಿರಿ. ನಿಮ್ಮದು ನನ್ನೆದುರು ನಟನೆ. ನನ್ನದು ನಿಮ್ಮೆದುರು ಮುಖವಾಡ ಹೊದ್ದು ನಡೆಸುತ್ತಿರುವ ಪರ್ಯಟನೆ. ಎಷ್ಟೋ ದಿನವಾಗಿತ್ತು ನನ್ನೊಳಗಿನ ತಿಕ್ಕಲು ಮಾತುಗಳನ್ನು ಕಾರಿಕೊಂಡು. ಕೆರೆದುಕೊಳ್ಳಲು ಖಂಡಿತ ಪುರುಸೊತ್ತಿತ್ತು. ಆದರೆ ಒಳ ಮನಸ್ಸು ಅದೇಕೋ ಕಡಿಯುತ್ತಿರಲಿಲ್ಲ.
ಮಾತು ಮುಗಿದಿಲ್ಲ. ನೀವು ಇನ್ನಷ್ಟು ಹೊತ್ತು ಇಲ್ಲೇ ಇರಬೇಕೆಂಬ ಒತ್ತಾಯವೂ ಇಲ್ಲ. ಇಲ್ಲಿನದಕ್ಕೆ ತಾರ್ಕಿಕ ತಳಹದಿ ಇಲ್ಲವೇ ಇಲ್ಲ. ಮಾತು ನನ್ನವು, ಪದ ಎಂದೋ ಯಾರೋ ಹಡೆದು ಬಿಟ್ಟಂತಹವು. ಮನಸ್ಸು ನೊಂದಿಲ್ಲ, ಬೆಂದಿಲ್ಲ, ಕುಂದಿಲ್ಲ. ಕನಸು ಹುಟ್ಟುತ್ತಿಲ್ಲವಷ್ಟೇ. ಕನಸು ಹುಟ್ಟದ ದಿನ ಮೇಲೆದ್ದು ಮಾಡುವುದಾದರೂ ಏನು? ಅದಕ್ಕೆ ಬಿದ್ದುಕೊಂಡಿದ್ದೆ. ಅವಳ ಒಲವು ತಲೆಗೆ ತಟ್ಟುವವರೆಗೂ. ಪದೇ ಪದೇ ಲಯ ತಪ್ಪುವ ಹಾಡು ನನ್ನದು. ಸೂರ್ಯನ ಬೆಳಕೂ ಇಣುಕದಂತಿರುವ ದಟ್ಟವಾದ ಕಾಡಿನಂಥ ಮನಸು ನಿಮ್ಮದು. ನನಗೆ ಅರ್ಥವಾಗಲ್ಲ, ನಿಮ್ಮ ನಿಲುವು. ನಿಮಗೆ ಗೊತ್ತೇ ಆಗುವುದಿಲ್ಲ, ನನ್ನ ಸೋಲುಗಳ ಸಾಲು. ಗೆಲುವಿನ ತುತ್ತ ತುದಿಯಲ್ಲಿ ಸೋಲಿನ ಅಟ್ಟಹಾಸ. ಈ ಮಾತಿಗೊಂದು ನಿದರ್ಶನ…
ಅವನು ಅವಳನ್ನು ಪ್ರೀತಿಸಿದ. ಬಿಡದೇ ಕಾಡಿದ. ಹಿಡಿ ಹಿಡಿಯಾಗಿ ಕಂಗೆಡಿಸಿದ. ಅವಳು ಕೊನೆಗೂ ಅವನಿಗೆ ಸಿಕ್ಕಳು. ಸಿಕ್ಕಾಪಟ್ಟೆ ನಕ್ಕಳು. ಅವನ ಪ್ರತಿ ಬಯಕೆಗೂ ಶರಣಾದಳು. ಅವನು ಮೊದಲಿಗೆ ಗೆದ್ದ. ಕೊನೆಯಲ್ಲಿ ಸೋತ. ಸತ್ತ.
ಪ್ರೀತಿ ಅಮಲಿಳಿಯುವವರೆಗೂ ಅರಿವಿಗೆ ನಿಲುಕದ ಅತಿರೇಕ. ಬದುಕಿನ ಗ್ರಹಿಕೆಗೆ ಸ್ಪಷ್ಟ ರೂಪಕ.
ತುಮುಲಗಳು ತೀರಿ ಹೋದ ಹೊತ್ತು… ಬದುಕಿನೆಡೆಗಿನ ಪ್ರೀತಿಯೇ ಆಗಿತ್ತು ನನ್ನ ಜಗತ್ತು.
ಚೆನ್ನಾಗಿದೆ.