ನಾವೆಲ್ಲರೂ ಜಾಣರೇ ತಿಳುವಳಿಕೆಗಳಿಗೆ ಬರವಿಲ್ಲ . ಆದರೆ ಬದುಕುಗಳೇ ಬರದೆಡೆಗೆ ದಾಪುಗಾಲಿಡುತ್ತಿವೆ. ಅಂತರ್ಗ್ರಹ ಪರ್ಯಟನೆ ಮಾಡುತ್ತಿರುವ ನಾವುಗಳು ಜೀವಿಸುತ್ತಿರುವ ಗ್ರಹವನ್ನು ಪೀಡಿಸಿ ಪಿಪ್ಪೆ ಮಾಡುತ್ತಿದ್ದೇವೆ. ಪ್ರಪಂಚದ ನೋವು ನಲಿವುಗಳನ್ನು ದೊಡ್ಡ ಮಟ್ಟದಲ್ಲಿ ಚರ್ಚೆಗಳು ಮಾಡುತ್ತಾ ನಮ್ಮ ಅಕ್ಕಪಕ್ಕದ ಸಮಸ್ಯೆಗಳನ್ನೆ ಗಾಳಿಗೆ ತೂರುತ್ತೇವೆ. ಯಾವುದೇ ಕೆಲಸ ಮಾಡಲೀ ವೈಯಕ್ತಿಕ ಲಾಭವನ್ನೆ ನಿರೀಕ್ಷಿಸಿ ಮುನ್ಹ್ನೆಜ್ಜೆ ಹಾಕುತ್ತವೆ. ಇತ್ತೀಚೇಗೆ ತನುಮನಗಳನ್ನು ಮುಡಿಪಾಗಿಟ್ಟು ಸೇವೆಯ ಹೆಸರನ್ನು ವ್ಯಾಪಕವಾಗಿ ಬಳಸುತ್ತಾ ನ್ಯಾಯ, ಸತ್ಯಗಳ ಪರವಾದ ಕೆಲಸಕಾರ್ಯಗಳನ್ನು ಕೈಗೊಳ್ಳುತ್ತೇವೆ. ಅದರ ಹಿಂದೆ ಮಾತ್ರ ಸ್ವಹಿತವೂ ಕಡ್ಡಾಯವಾಗಿರುತ್ತದೆ. “ಇರುವ ಭಾಗ್ಯವ ನೆನೆದು ಬಾರನೇಂಬುದನ್ನು ಬಿಡು ಹರುಷಕ್ಕದೆ ದಾರಿ” ಎಂಬ ನಮ್ಮ ಡಿ.ವಿ.ಜಿಯವರ ಮಾತುಗಳು ಫಲಕಗಳಿಗೆ ಸೀಮಿತಗೊಂಡು ಪಾಲನೆಯಲ್ಲಿ ತದ್ವಿರುದ್ಧ ದಿಸೆಯಲ್ಲಿ ನಡೆಯುತ್ತಿದ್ದೇವೆ.
ನಮಗೆಲ್ಲರಿಗೂ ಗೊತ್ತಿದೆ ಪರಿಸರ ಮಾಲಿನ್ಯತೆಯೇ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಜಾಗತಿಕವಾಗಿ ವಾಯುಮಂಡಲದ ಒತ್ತಡದಲ್ಲಿ ಭಾರಿ ಏರುಪೇರುಗಳಾಗುತ್ತಿದ್ದು, ವಾಯುವಿನ ಸುಳಿಗಳುಂಟಾಗುತ್ತಿವೆ. ಜೊತೆಗೆ ವಾಯುಭಾರ ಕುಸಿತಗಳಿಂದ ಕರಾವಳಿ ಪ್ರದೇಶಗಳಲ್ಲಿ ಆತಂಕಗಳನ್ನುಂಟು ಮಾಡುವುದರ ಜೊತೆಗೆ ಅಂಟಾರ್ಟಿಕ ಖಂಡದಲ್ಲಿ ಒಂದು ಲಕ್ಷ ಸಾವಿರ ಕೋಟಿ ಸಾವಿರ ಟನ್ ಭಾರದ ಮಂಜುಗಡ್ಡೆಯು ಈ ಗಾಳಿಯ ರಭಸಕ್ಕೆ ಹೋಳಾಗಿದೆ ಎಂದರೆ ಊಹಕ್ಕೂ ನಿಲುಕದಷ್ಟು ಭಯಾನಕತೆಯನ್ನು ಸೃಷ್ಟಿಸಿದೆ.
ಇದರ ಜೊತೆಗೆ ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು ಭಾರಿ ಪ್ರಮಾಣದಲ್ಲಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ನಾವೆಲ್ಲರು ರೋಗ ಬಂದ ಮೇಲೆ ವಾಸಿ ಮಾಡಿಕೊಳ್ಳಲು ಹವಣಿಸುತ್ತೇವೆ ಹೊರೆತು, ಅದನ್ನು ತಡೆಯುವ ಪ್ರಯತ್ನವಾದರೂ ಮಾಡುವುದಿಲ್ಲ. ವಾಸಿ ಮಾಡುವುದಕ್ಕಿಂತ ಅದನ್ನು ತಡೆಯುದೇ ಲೇಸು ಎಂಬ ಸತ್ಯವನ್ನು ಮರೆತು ಬಿಡುತ್ತೇವೆ. ರೋಗ ಬಂದಾಗ ಆಫಶನ್ಸ್ ಗೆ ಅವಕಾಶಗಳಿರುತ್ತವೆ. ಅದೇ ರೋಗ ಬರದಂತೆ ನೋಡಿಕೊಂಡರೆ ಯಾವ ತಂಟೆಯೂ ಇರದೆಂಬುದು ನನ್ನ ಅಭಿಪ್ರಾಯ.
ನೇರವಾಗಿ ಹೇಳುವುದಾದರೆ ಪರಿಸರವನ್ನು ಹಾಳು ಮಾಡದೇ ಯಾವ ಅಭಿವೃದ್ಧಿ ಕೆಲಸವೂ ನಡೆಯುವುದಿಲ್ಲ ಎಂಬ ಕಹಿ ಸತ್ಯವನ್ನು ನಾವೆಲ್ಲರೂ ಒಪ್ಪಲೇಬೇಕು. ಯಾವುದೇ ದೇಶ ಅಭಿವೃದ್ಧಿಯಾಗಿದೆ ಅಥವಾ ಆಗುತ್ತಿದೆ ಎಂದರೆ ಪ್ರತ್ಯಕ್ಷ ಹಾಗೂ ಪರೋಕ್ಷ ರೂಪದಲ್ಲಿ ಅಲ್ಲಿ ನೆಲ, ಜಲ, ವಾಯು ಮತ್ತಿತರ ಭೌತಿಕ ಪರಿಸರ ಮಲಿನವಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗದಿದ್ದರೂ ಅದರ ಪರಿಣಾಮಗಳು ಎದುರಿಸಿದಾಗಳಾದರೂ ಅರಿವಾಗುತ್ತದೆ.
ಇತ್ತೀಚೆಗೆ ನಮ್ಮ ಬಯಲು ಸೀಮೆ ಜಿಲ್ಲೆಗಳಲ್ಲಿ ಸಾಕಷ್ಟು ಮಳೆಯಾಗಿದೆ. ಇದರಿಂದಾಗಿ ಕೆರೆ ಕುಂಟೆಗಳು ಭರ್ತಿಯಾಗಿ ರೈತಾಪಿ ಕುಟುಂಬಗಳಲ್ಲಿ ಮಂದಹಾಸ ಮೂಡಿದರೆ , ಪ್ರಜ್ಞಾವಂತರಲ್ಲಿ ಆತಂಕ ಮೂಡಿದೆ, ಕಾರಣಗಳೆಂದರೆ ಮಳೆಯಾದರೂ ಕೆಲ ಕೆರೆಗಳು ತುಂಬಲೇ ಇಲ್ಲ. ಕೆರೆಗೆ ನೀರ್ಹೊತ್ತು ತರುವ ಕಾಲುವೆಗಳು ಕಣ್ಮರೆಯಾಗಿ, ಕೆರೆಗಳು ಹೂಳಿಂದ ತುಂಬಿವೆ. ಮತ್ತೆ ಕೆಲವು ಮರಳು ಮತ್ತು ಒತ್ತುವರಿ ಮಾಫಿಯಾಗೆ ಬಲಿಯಾಗಿ ಹೋಗಿವೆ. ಇಷ್ಟಲ್ಲದೆ ಸರ್ಕಾರದ ಕೆಲ ಕಚೇರಿಗಳು ಕೆರೆಯಂಗಳಗಳಲ್ಲೇ ನಿರ್ಮಾಣಗೊಂಡು ಜಲ ಮೂಲವನ್ನು ಮಾರೆಮಾಚಿ ಬಿಟ್ಟಿದ್ದಾರೆ.
ನಮ್ಮ ಅವಿಭಜಿತ ಕೋಲಾರ ಜಿಲ್ಲೆಯು ದೇಶದಲ್ಲಿ ಹೆಚ್ಚು ಕೆರೆಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಒಂದು. ಇಂತಹ ಕೆರೆಗಳ ನಾಡು ಬರಗಾಲದಿಂದ ನೀರಿಗಾಗಿ ದಶಕಗಳಿಂದ ಹೋರಾಟ ಮಾಡುವ ಅನಿವಾರ್ಯತೆ ಉಂಟಾಗಿದೆ. ಕೆರೆಗಳನ್ನು ನಾಶ ಮಾಡಬೇಡಿ ಎಂದು ಕೇಳಿಕೊಂಡಾಗ , ಅದು ಅಭಿವೃದ್ಧಿಗೆ ತಡೆಯಂಬಂತೆ ಮಾತಾಡುತ್ತಾರೆ ಕೆಲ ಸ್ವಾರ್ಥ ಮತ್ತು ಆಕ್ರಮ ಸಂಪಾದನೆಯ ಪ್ರವೃತ್ತಿ ಇರುವವರು.
ಹಾಗಾದರೆ ಅಭಿವೃದ್ಧಿ ಕೆಲಸಗಳು ವಿರೋಧವಾಗಿ ಮಾತಾಡುತ್ತಿಲ್ಲ. ಆ ಕೆಲಸಗಳು ಸಾಧ್ಯವಾದಷ್ಟು ಪರಿಸರವನ್ನು ಸಂರಕ್ಷಣೆಗೆ ಪೂರಕವಾಗಿರಬೇಕೆಂಬುದು ನನ್ನ ಒತ್ತಾಸೆ. ಶಾಲೆ, ವಸತಿನಿಲಯ, ಪೋಲಿಸ್ ಠಾಣೆ ಕಟ್ಟಬೇಕಾದರೆ ಕೆರೆಗಳನ್ನು ಆರಿಸಿಕೊಂಡು, ರಸ್ತೆ ಅಗಲೀಕರಣವಾಗಬೇಕಾದರೆ ರಸ್ತೆ ಬದಿಯಲ್ಲಿ ಹೆಮ್ಮರಗಳನ್ನು ಕಡಿಯುವುದೇ ಒಂದು ಮಾರ್ಗವಾಗಿ ಪರಿಗಣಿಸಬಾರದು. ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು.
ಯಾರೋ ಕೆಲ ಬಂಡವಾಳಿಗರ ಶ್ರೇಯಸ್ಸಿಗಾಗಿ ಕಾನೂನುಗಳನ್ನು ತಿದ್ದು ಪಡಿ ಮಾಡಿ ಗಣಿಗಾರಿಕೆಗೆ ಅನುಮತಿ ನೀಡಿ ಪರಿಸರದ ಸಂಪತ್ತನ್ನು ಲೂಟಿ ಮಾಡುವುದರ ಜೊತೆಗೆ ಅದಕ್ಕೆ ಮಾರಕವಾಗುವುದನ್ನು ತಡೆಯಬೇಕು ಅಥವಾ ನಿರ್ಭಂಧಿಸಬೇಕು.
ದೆಹಲಿಯ ದುಸ್ಥಿತಿ ಮತ್ತಾವ ನಗರಕ್ಕೂ ವ್ಯಾಪಿಸದಂತೆ ತುರ್ತಾಗಿ ಕ್ರಮಗಳನ್ನು ಕೈಗೊಳ್ಳದಿದ್ದರೆ ಖಂಡಿತವಾಗಿಯೂ ನಾವೆಲ್ಲರೂ ಗಾಳಿಯನ್ನು ಕೊಂಡುಕೊಂಡು ಉಸಿರಾಡಬೇಕಾಗುತ್ತದೆ. ಭೂಮಿಯ ಮೇಲಿದ್ದರೂ ಬಾಹ್ಯಕಾಶ ಯಾನಿಗಳಂತೆ ಬದುಕುವ ಸ್ಥಿತಿ ನಿರ್ಮಾಣವಾಗುವ ಸಮಯ ದೂರವಿಲ್ಲ. ಹುಟ್ಟಿದ ಮಗುವಿಗೂ ಆಮ್ಲಜನಕದ ಸಿಲಿಂಡರ್ ಬೆನ್ನಿಗಂಟಿಸುವ ದುಸ್ಥಿತಿಯನ್ನು ಎದುರಿಸಬೇಕಾದಿತೇನೋ.?
ನಾವೆಲ್ಲರೂ ಬದುಕಲು ಈ ಭೂಮಿ ಮೇಲೆ ಬಂದಿದ್ದೀವಿ ಹಾಗೆಯೇ ಮತ್ತೊಬ್ಬರ ಬದುಕಲು ಬಿಡಬೇಕು, ಬದುಕಿ ಹೋಗಿ ಬಿಡೋಣ. ಜೀವಿಸಲು ಬೇಕಾದಷ್ಟು ಮಾತ್ರ ಉಪಯೋಗಿಸಿಕೊಂಡು ಹೊರಡೋಣ. ಹೌದೋ ಅಲ್ವ ,ಏನಂತೀರ ಮಿತ್ರರೇ?.
ವಂದನೆಗಳೊಂದಿಗೆ.
-ನರಸಿಂಹಮೂರ್ತಿ ಎಂ.ಎಲ್, ಮಾಡಪ್ಪಲ್ಲಿ