ಆಫೀಸ್ ಗೆ ತಡವಾಗುತ್ತಿತ್ತು. ಇಸ್ತ್ರಿ ಮಾಡಿದ ಬಟ್ಟೆ ಬೇರೆ ಇರಲಿಲ್ಲ. ಮಗನಿಗೆ ಹೇಳೋಣವೆಂದುಕೊಳ್ಳುವ ಹೊತ್ತಿಗೆ ಗಾದೆ ನೆನಪಿಗೆ ಬಂತು. "ಅಪ್ಪ ಮಾಡಿದ್ದು ಉತ್ತಮ, ಮಗ ಮಾಡಿದ್ದು ಮಧ್ಯಮ, ಆಳು ಮಾಡಿದ್ದು ಆಳು" ಅಂತ. ಮನೆಯಲ್ಲಿ ಆಳು ಇಡಲಂತೂ ಸಾಧ್ಯವಾಗಿಲ್ಲ ಹೋಗಲಿ ನಾನೆ ಮಾಡೋಣ ಎಂದುಕೊಂಡರೆ ನನಗೊಂದು ಜಿಜ್ಞಾಸೆ. ಅದೇನೆಂದರೆ ನನ್ನ ಅಪ್ಪನನ್ನು ಪರಿಗಣಿಸಿದರೆ ನಾನು ಮಾಡಿದ್ದು ಮಧ್ಯಮವಾಗುತ್ತದೆ. ಮಗನಿಗೆ ಹೇಳೋಣವೆಂದರೆ ಮತ್ತೆ ಮಧ್ಯಮದ ವಿಚಾರ ಬಂತು. ಈಗ ನನ್ನ ಕೋಪ ತಿರುಗಿದ್ದು ನನ್ನ ಅಂಗಿಯ ಇಸ್ತ್ರಿಯ ಮಾಡದ ಅರ್ಧ ಅಂಗಿಯ ಕಡೆಗೆ. ನನ್ನ ಕೋಪವನ್ನು ವ್ಯಕ್ತಪಡಿಸುವ ಹೊತ್ತಿಗೆ ಕೆ. ಎಸ್. ನ. ನೆನಪಾದರು.ಅಂದರೆ "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ" ಎಂಬ ವೇ(ಖೇ)ದ ವಾಕ್ಯ. ನನಗೆ ಮಾತ್ರವೇ ( ಮಕ್ಕಳಿಗಲ್ಲ) ಇರುವ ಕೋಟಿ ರೂಪಾಯಿ ಕೈ ಜಾರಬಾರದೆಂದು ತಣ್ಣಗಾದೆ. ಹೀಗೆ ಹಲವಾರು ಬಾರಿ ತಣ್ಣಗಾಗಿ ತಣ್ಣಗಾಗಿ ಮಂಜುಗಡ್ಡೆ ಯಾಗುವುದೊಂದೆ ಬಾಕಿ ಆದರೆ ನನ್ನಾಕೆಯ ಉರಿಗೆ ಕರಗಿ ನೀರಾಗುತ್ತಿದ್ದೆ. ಆದರೂ "ರೂಪಾ ಬಾರೆ ನೀನಾದ್ರು ಇಸ್ತ್ರಿ ಮಾಡಿಕೊಡು" ಎಂದು ಅಂಗಲಾಚಿದೆ. ಆದರೆ ಆ ಕೋ(ಘಾ)ಟಿ ರೂಪಾಯಿ ನಾನು ಎಷ್ಟು ವಿನಯದಿಂದ ಕೇಳಿದೆನೊ ಅವಳು ಅಷ್ಟೇ ಅಭಿನಯದಿಂದ ಗುಡುಗಿದಳು "ರೀ ನನಗೆ ಬೇರೆ ಯಾವ ಕೆಲಸ ಇಲ್ಲ ಅಂದ್ಕೊಂಡ್ರಾ, ಚಿಂಟು ಸ್ಕೂಲ್ ಗೆ ಟೈಮಾಗುತ್ತೆ" ಎಂಬ ಬಾಣ ಎಸೆದಳು.
ಹೀಗಾಗಿ ನನ್ನ ಕೆಲಸವನ್ನು ನಾನೇ ಮಾಡಿಕೊಳ್ಳುತ್ತಿದ್ದೆ. ಆದರೆ ಇವಳು ತನ್ನ ಹಕ್ಕುಗಳನ್ನು ಯಾವುದೇ ಮುಲಾಜಿಲ್ಲದೆ ಕೇಳುತ್ತಿದ್ದುದು ನನಗೆ ಸಹಿಸಲಾರದ ನೋವಾಗಿತ್ತು. ದುಡ್ಡಿನ ವಿಷಯ ಬಂದಾಗಲಂತೂ ಇವಳು ತನ್ನ ಹ(ಸೊ)ಕ್ಕನ್ನು ಮಿತಿಮೀರಿ ಬಳಸುತ್ತಿದ್ದಳು. ಪ್ರತಿ ತಿಂಗಳು ಆ ಫೀಜು ಈ ಫೀಜು ಕಟ್ಟಿ ಕಟ್ಟಿ ನನ್ನ ಫ್ಯೂಜ್ ಹಾರಿಹೋಗುವಂತಾಗುತ್ತಿತ್ತು. ಹೇಗಾದರೂ ಮಾಡಿ ಈಕೆಗೆ ದುಡ್ಡಿನ ಬವಣೆಯನ್ನು ಅರ್ಥ ಮಾಡಿಸಬೇಕೆಂದು ಒಂದು ಉಪಾಯ ಹೂಡಿದೆ. ಈ ತಿಂಗಳು ಬರುವ ಸಂಬಳದಿಂದ ಸ್ವಲ್ಪ ಹಣ ಉಳಿಸಿಕೊಂಡು ತಿಂಗಳ ಖರ್ಚಿನ ಹಣವನ್ನು ಸಂಸಾರ ನಿಭಾಯಿಸಲು ಆಕೆಯ ಕೈಗಿತ್ತು ನಿರುಮ್ಮಳನಾದೆ. ಹಾಗೂ ಹೀಗೂ ದಿನಗಳು ಉರುಳುತ್ತಿದ್ದವು.
ಇದ್ದಕ್ಕಿದ್ದಂತೆ ಒಂದು ದಿನ ಒಬ್ಬ ಪರಿಚಯವಿಲ್ಲದ ಆಸಾಮಿಯೊಬ್ಬ ಮನೆಯ ಬಾಗಿಲಲ್ಲಿ ಪ್ರತ್ಯಕ್ಷವಾಗಿದ್ದ. "ಯಾರು? ಏನು ಬೇಕಿತ್ತು"? ಎಂದೆ. ಅದಕ್ಕೆ ಅವನು "ನೀವೇ ಬೇಕು ಸ್ವಾಮಿ. ಅಮ್ಮಾವ್ರನ್ನು ಕರೀರಿ" ಎಂದವನು ಆಜ್ಞೆ ನೀಡುವ ಹೊತ್ತಿಗೆ ಆಕೆಯ ಆಗಮನವಾಗಿತ್ತು. ಆಕೆ "ಓಹ್, ನೀವಾ ಬನ್ನಿ ಒಳಗೆ, ಏನ್ರೀ ಹೊರಗಡೆ ನಿಲ್ಲಿಸಿಯೇ ಮಾತನಾಡತ್ತಿದ್ದೀರಲ್ಲಾ, ಇವ್ರು ನಮ್ಮ ಮಿಕ್ಸಿನ ಎಕ್ಸ್ ಚೇಂಜ್ ಮಾಡಿ ಕೊಟ್ಟಿದ್ರು ಹಳೆಯ ಮಿಕ್ಸಿ ಕೊಟ್ಟು ಮೇಲೆ ೧೦೦೦ ರೂ ಕೊಡಬೇಕಂತೆ. ನಿಮ್ಗೆ ಹೇಳೋದೇ ಮರೆತಿದ್ದೆ ಇರ್ಲಿ ಅವರಿಗೆ ಸಾವಿರ ರೂಪಾಯಿ ಕೊಟ್ಟು ಕಳ್ಸಿ" ಒಂದೇ ಉಸುರಿಗೆ ಒದರಿದಳು. ಇದನ್ನು ಕೇಳಿದ ನನ್ನ ಜಂಘಾಬಲವೇ ಉಡುಗಿಹೋಗಿತ್ತು. ಕೋಪ ನೆತ್ತಿಗೇರಿದ್ದರೂ ಅಂಗಡಿಯವನ ಮುಂದೇಕೆ ನಮ್ಮಿ ಬ್ಬರ ಯುದ್ದ ಎಂದುಕೊಂಡು ಅವಸರಕ್ಕಾಗಿ ಇಟ್ಟುಕೊಂಡಿದ್ದ ಹಣವನ್ನು ಅವನ ಬಾಯಿಗೆ ನೀಟಾಗಿ ಹಾಕಿ ಕಳಿಸಿದೆ. ಅವನು ಹೋದೊಡನೆ ಸ್ವಲ್ಪ ಜೋರಾಗಿಯೇ "ಏನೇ ನಾನು ನಿನ್ನ. ಕೈಗಿತ್ತ ಹಣದಲ್ಲೇ ಕೊಡಬಹುದಿತ್ತಲ್ಲ?"ಎಂದು ವಾಗ್ದಾಳಿ ನಡೆಸಿದೆ. ಇಷ್ಟು ವರ್ಷದ ವೈವಾಹಿಕ ಜೀವನದಲ್ಲಿ ಅತ್ಯಂತ ಮೆಲುದನಿಯಲ್ಲಿ ಮಾತನಾಡಿದ್ದಳು. "ರೀ ನೀವು ಕೊಟ್ಟ ಹಣವೆಲ್ಲ ಖಾಲಿಯಾಯ್ತು, ಹೊಸವರ್ಷ ಅಂತಾ ತುಂಬಾ ಆಫರ್ ಇಟ್ಟಿದ್ರು.ಅದಕ್ಕೇ ಸ್ವಲ್ಪ ಜಾಸ್ತಿ ಶಾಪಿಂಗ್ ಮಾಡಿದ್ದೆ ರೀ" ಎಂದಳು. ಮತ್ತೆ ವಾಕ್ಸಮರ ಮುಂದುವರಿಸೋಣವೆಂದರೆ ಕೋಟಿ ರೂಪಾಯಿಯ ಹಾಡನ್ನು ನನ್ನ ಮನಸ್ಸು ಗುನುಗುತ್ತಿತ್ತು. ಹೋಗಲಿ ಅಂತಾ ನಾನೇ ಕದನ ವಿರಾಮ ಘೋಷಿಸಿದೆ.
*****
ಇದನ್ನ ಕೋ(ಘಾ)ಟಿ ರೂಪಾಯಿಗೆ ತೋರಿಸ್ಬೇಡಿ. ಮತ್ತೆ ರಂಪ ಆದೀತು. ಆಮೇಲೆ ನಾನು ಬರೆದಿದ್ದು ಅಲ್ಲವೇ ಅಲ್ಲ ಅಂತ ಸುಳ್ಳೇ ವಾದ ಮಾಡಬೇಕಾದ ಪರಿಸ್ಥಿತಿ ಬಂದೀತು ಬಸವರಾಜ್ ಜೀ!!