ಮರುದಿನ ಹ್ಯಾನ್ಸ್ ಬಂದ. ಆನ್ನೆಟ್ ಅವನನ್ನು ಗಮನಿಸಿದಳಾದರೂ ಅವಳ ಕಣ್ಣುಗಳು ಸುಣ್ಣ ಬಳಿದ ಗೋಡೆಗಳಂತೆ ನಿರ್ಬಾವುಕವಾಗಿದ್ದವು. ಇಬ್ಬರೂ ಏನೂ ಮಾತನಾಡಲಿಲ್ಲ. ಹ್ಯಾನ್ಸ್ ಮುಗುಳ್ನಕ್ಕ.
’ಎದ್ದು ಹೋಗದಿದ್ದಕ್ಕಾಗಿ ಧನ್ಯವಾದಗಳು!’ ಅವನು ಹೇಳಿದ.
’ನನ್ನ ತಂದೆ-ತಾಯಿಯರಿಬ್ಬರೂ ನಿನ್ನನ್ನು ಆಹ್ವಾನಿಸಿದ್ದಾರೆ. ಅವರಿಬ್ಬರೂ ಈಗ ಮನೆಯಲ್ಲಿಲ್ಲ. ಒಳ್ಳೇದೆ ಆಯ್ತು. ನಿನ್ನೊಡನೆ ಮುಕ್ತವಾಗಿ ಮಾತನಾಡಲು ಇದೇ ಒಳ್ಳೆಯ ಸಮಯ. ಬಾ. ಕೂತುಕೊ.’
ಅವನು ಕೋಟ್ ಮತ್ತು ಹೆಲ್ಮೆಟನ್ನು ತೆಗೆದಿಟ್ಟು ಅವಳಿಗೆ ಎದುರಾಗಿ ಕುರ್ಚಿಯನ್ನು ಎಳೆದು ಕುಳಿತುಕೊಂಡ.
’ನನ್ನ ಮನೆಯವರು ನಾನು ನಿನ್ನನ್ನೇ ಮದುವೆಯಾಗಬೇಕೆಂದು ದುಂಬಾಲು ಬಿದ್ದಿದ್ದಾರೆ. ನೀನು ಬುದ್ದಿವಂತ. ನಮ್ಮ ಅನಿವಾರ್ಯತೆಯನ್ನು ಉಪಯೋಗಿಸಿ ಅವರನ್ನು ನಿನ್ನ ಜಾಲಕ್ಕೆ ಬೀಳಿಸಿದ್ದೀಯ. ನೀನು ತಂದು ಕೊಡುತ್ತಿರುವ ವಾರ್ತಾ ಪತ್ರಿಕೆಗಳಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ನನ್ನ ತಂದೆ ಬೈಬಲ್ ಸತ್ಯಗಳೆಂಬಂತೆ ನಂಬಿದ್ದಾರೆ. ನಾನು ಯಾವತ್ತಿಗೂ ನಿನ್ನನ್ನು ಮದುವೆಯಾಗುವುದಿಲ್ಲವೆಂದು ನೀನು ಈಗಲೇ ಮನದಟ್ಟುಮಾಡಿಕೊಳ್ಳುವುದು ಒಳ್ಳೆಯದು. ನಿನ್ನನ್ನು ದ್ವೇಷಿಸುವಂತೆ ಒಬ್ಬ ಮನುಷ್ಯನನ್ನು ದ್ವೇಷಿಸಬಹುದೆಂದು ನಾನು ಇದುವರೆಗೂ ಯೋಚಿಸಿರಲಿಲ್ಲ.’
’ನಾನು ನಿನಗೆ ಜರ್ಮನ್ ಬಾಷೆಯಲ್ಲಿ ಉತ್ತರಿಸಲು ಅಪೇಕ್ಷಿಸುತ್ತೇನೆ. ನಿನಗೆ ಅರ್ಥವಾಗುತ್ತದೆಂದು ನನ್ನ ಭಾವನೆ.’
’ಖಂಡಿತವಾಗಿಯೂ. ನಾನು ಶಾಲೆಯಲ್ಲಿ ಜರ್ಮನ್ ಕಲಿಸಿದ್ದೇನೆ. ಸ್ಟುಟ್‌ಗಾರ್ಡಿನಲ್ಲಿ ನಾನು ಇಬ್ಬರು ಮಕ್ಕಳ ಗವರ್ನೆಸ್ ಕೂಡ ಆಗಿದ್ದೆ.’
ಅವನು ಜರ್ಮನಿಯಲ್ಲಿ ಮಾತನಾಡುತ್ತಿದ್ದರೆ ಅವಳು ಫ್ರೆಂಚಿನಲ್ಲಿ ಮಾತನಾಡುತ್ತಿದ್ದಳು.
’ನಾನು ನಿನ್ನನ್ನು ಪ್ರೇಮಿಸುವುದಷ್ಟೇ ಅಲ್ಲ, ನಿನ್ನ ವಿಶಿಷ್ಟ ವ್ಯಕ್ತಿತ್ವವನ್ನು ಕೂಡ ಇಷ್ಟ ಪಡುತ್ತಿದ್ದೇನೆ ಆನ್ನೆಟ್. ನೀನು ಶೋಕವನ್ನು ಆಚರಿಸುತ್ತಿರುವುದರಿಂದ ಈಗಾಗಲೇ ಮದುವೆಯಾಗುವ ಸ್ಥಿತಿಯಲ್ಲಿಲ್ಲವೆಂದು ನನಗೆ ಗೊತ್ತಿದೆ. ಪಾಪ, ಪಿಯೆರಿಯ ಬಗ್ಗೆ ನನಗೆ ಅನುಕಂಪವಿದೆ.’
’ನೀನು ಪಿಯೆರಿಯ ಹೆಸರು ತೆಗೆಯುವ ಅಗತ್ಯವಿಲ್ಲ. ನನಗದು ಇಷ್ಟವಿಲ್ಲ.’
’ನನಗೆ ಬೇರಾವ ಇರಾದೆಗಳಿಲ್ಲ. ಅನುಕಂಪವಷ್ಟೇ.’
’ಒಬ್ಬ ಅಸಹಾಯಕ ವ್ಯಕ್ತಿಯನ್ನು ಜರ್ಮನರು ಗುಂಡಿಟ್ಟು ಸಾಯಿಸಿದರು!’
’ನಾವು ಇಷ್ಟಪಡುವವರು ಸಾಯುವಾಗ ಆ ನೋವು ನಮಗೆ ತಡೆದುಕೊಳ್ಳಲು ಸಾಧ್ಯವಿಲ್ಲವೆಂದು ತಿಳಿದುಕೊಂಡಿರುತ್ತೇವೆ. ಆದರೆ ಕಾಲ ಎಲ್ಲಾ ಗಾಯಗಳನ್ನೂ ಮಾಯಿಸುತ್ತದೆ. ಪ್ರಸ್ತುತದಲ್ಲಿ ನಿನ್ನ ಮಗುವಿಗೆ ಒಬ್ಬ ತಂದೆಯ ಅಗತ್ಯವಿದೆ ಎಂಬುದನ್ನು ಮನಸ್ಸಿಗೆ ತಂದುಕೋ.’
’ನೀನು ಜರ್ಮನ್ ಮತ್ತು ನಾನು ಫ್ರೆಂಚ್ ಎಂಬುದನ್ನು ನನಗೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಈ ಮಗು ಇದನ್ನು ಜೀವನ ಪೂರ್ತಿ ಅಳಿಸಲಾಗದಂತ ಕಹಿ ಸತ್ಯವನ್ನು ನೆನಪಿಸುತ್ತದೆ ಎಂಬುದನ್ನು ಅರಿಯಲಾರದಂತ ಮೂರ್ಖ ನೀನು. ನನಗೆ ನನ್ನವರೇ ಆದಂತ ಸ್ನೇಹಿತರಿಲ್ಲವೆಂದು ಕೊಂಡಿದ್ದೀಯಾ? ಒಬ್ಬ ವೈರಿ ಜರ್ಮನ್ ಸೈನಿಕನ ಮಗುವನ್ನು ಹೊಟ್ಟೆಯಲ್ಲಿ ಹೊತ್ತುಕೊಂಡು ನಾನು ಅವರನ್ನು ಹೇಗೆ ಎದುರಿಸಲಿ? ನಾನು ನಿನಗೆ ಕೇಳುವುದು ಇಷ್ಟೇ. ನನ್ನನ್ನು ಈ ಮಾನಗೇಡಿ ಸಾಕ್ಷ್ಯದೊಂದಿಗೆ ನನ್ನಷ್ಟಕ್ಕೇ ಬಿಟ್ಟುಬಿಡು. ದಯವಿಟ್ಟು ಇಲ್ಲಿಂದ ಹೊರಟುಹೋಗು. ಅನಾವಶ್ಯಕವಾಗಿ ನನ್ನ ಜೀವನದಲ್ಲಿ ಮೂಗು ತೂರಿಸಿ ಬರಬೇಡ.’
’ಆದರೆ ನಿನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ನನ್ನ ಮಗುವಿಗೆ ತಂದೆಯ ಅಗತ್ಯವೂ ಇದೆ ಎನ್ನುವುದನ್ನು ಮರೆಯಬೇಡ.’
’ಕುಡಿದ ಅಮಲಿನಲ್ಲಿ ಎಸಗಿದ ಪಾಶವೀ ಕೃತ್ಯದಲ್ಲಿ ನಿನಗೂ ಪಾಲು ಬೇಕು?’
’ನನಗೆ ಎಷ್ಟೊಂದು ಸಂತೋಷವಾಗ್ತಿದೆ ಮತ್ತು ನಾನು ಎಷ್ಟೊಂದು ಹೆಮ್ಮೆ ಪಡುತ್ತಿದ್ದೇನೆ ಎನ್ನುವುದು ನಿನಗೆ ಗೊತ್ತಿಲ್ಲ ಆನ್ನೆಟ್! ನೀನು ನನ್ನ ಮಗುವಿನ ತಾಯಿಯಾಗಲಿದ್ದೀಯ ಎನ್ನುವುದು ಗೊತ್ತಾದಾಗಲೇ ನಿನ್ನನ್ನು ಪ್ರೀತಿಸುತ್ತಿರುವ ಸಂಗತಿ ಹೊಳೆಯಿತು. ಮೊದಮೊದಲು ಇದನ್ನು ನಾನೂ ನಂಬಲಿಲ್ಲ. ಇದಕ್ಕಿಂತ ಮೊದಲು ನನಗೆ ಹಾಗೆನಿಸಿರಲಿಲ್ಲ. ಈ ವಿಚಾರ ನಿಜವಾಗಿಯೂ ನನ್ನ ಅರಿವಿಗೆ ಹೊರತಾದದ್ದು.’
’ನನಗೆ ನಿಮ್ಮ ಜರ್ಮನರ ಮೃಗೀಯತೆಯೋ ಅಥವಾ ಭಾವುಕತೆಯೋ, ಯಾವುದು ತಿರಸ್ಕಾರ ಯೋಗ್ಯವೆನ್ನುವುದು ಅರ್ಥವಾಗುತ್ತಿಲ್ಲ!’
ಅವನು ಅವಳ ಮಾತುಗಳನ್ನು ಕೇಳಿಸಿಕೊಂಡನೋ ಇಲ್ಲವೋ? ’ನನಗೆ ಇಪ್ಪತ್ತ್‌ನಾಲ್ಕು ಗಂಟೆಗಳೂ ನನ್ನ ಮಗನದೇ ಯೋಚನೆ’ ಎಂದ.
’ಗಂಡು ಮಗು ಎಂಬುದು ನಿನಗೆ ಈಗಾಗಲೇ ಖಾತ್ರಿಯಾಗಿಬಿಟ್ಟಿದೆ?’
’ಖಂಡಿತಾ ಗಂಡು ಮಗಾನೇ. ಅವನ ಪುಟ್ಟ ಕೈಯನ್ನು ಹಿಡಿದು ನಡೆಸಲು ಕಲಿಸುವವರೆಗೂ ನನಗೆ ವ್ಯವಧಾನವಿಲ್ಲ! ಅವನು ಬೆಳೆದು ದೊಡ್ಡನಾಗುವಷ್ಟರಲ್ಲಿ ನನಗೆ ಗೊತ್ತಿರುವ ಎಲ್ಲವನ್ನೂ ಅವನಿಗೆ ಕಲಿಸುತ್ತೇನೆ. ಕುದುರೆ ಸವಾರಿ.. ಶಿಕಾರಿ.. ನಿಮ್ಮ ಹೊಲದಲ್ಲಿ ಹಾದು ಹೋಗಿರುವ ಕಾಲುವೆಯಲ್ಲಿ ಮೀನುಗಳಿದ್ದರೆ.. ಮೀನು ಹಿಡಿಯುವುದೂ ಕಲಿಸುತ್ತೇನೆ. ನನ್ನಂತ ಸಂತೃಪ್ತ ತಂದೆ ಈ ಜಗತ್ತಿನಲ್ಲಿ ಬೇರೊಬ್ಬನಿರಲಾರ.’
ಆನ್ನೆಟ್ ಬಹಳಷ್ಟು ಹೊತ್ತು ಅವನನ್ನೇ ನೋಡುತ್ತಾ ಕುಳಿತಳು. ಅವಳ ಹಣೆಯ ಮೇಲೆ ದಟ್ಟವಾಗಿ ನೆರಿಗೆಗಳು ಮೂಡಿದ್ದವು. ಮುಖ ಗಂಟಿಕ್ಕಿಕೊಂಡಿತ್ತು. ಅವಳ ಕಣ್ಣುಗಳಲ್ಲಿ ಯಾವುದೋ ತೀರ್ಮಾನ ಗಟ್ಟಿಗೊಳ್ಳುತ್ತಿತ್ತು. ಅವಳನ್ನು ನೋಡಿ ಹ್ಯಾನ್ಸ್ ಮುಗುಳ್ನಕ್ಕ.
’ನಾನು ನನ್ನ ಮಗನನ್ನು ಪ್ರೀತಿಸುವುದನ್ನು ನೋಡಿ ಕ್ರಮೇಣ ನೀನೂ ನನ್ನನ್ನು ಪ್ರೀತಿಸುತ್ತೀಯೊ ಇಲ್ಲವೋ ನೋಡು ಆನ್ನೆಟ್! ಖಂಡಿತವಾಗಿಯೂ ನಾನು ನಿನಗೊಬ್ಬ ಆದರ್ಶ ಪತಿಯಾಗಿರುತ್ತೇನೆ. ನಿಜವಾಗಲೂ ಆನ್ನೆಟ್!’
ಆನ್ನೆಟ್ ಏನೂ ಮಾತನಾಡಲಿಲ್ಲ. ಅವನನ್ನೇ ನೋಡುತ್ತಾ ಕುಳಿತುಕೊಂಡಳು.
’ನನ್ನ ಕುರಿತಾಗಿ ನಿನ್ನಲ್ಲಿ ಒಂದೂ ಒಳ್ಳೆಯ ಮಾತಿಲ್ಲವೇ ಆನ್ನೆಟ್?’ ಅವನು ದೀನನಾಗಿ ಕೇಳಿದ.
ಅವಳ ಕೆನ್ನೆಗಳು ಕೆಂಪಗಾದವು. ’ಬೇರೆಯವರು ನನ್ನ ಬಗ್ಗೆ ಹೇಸಿಗೆ ಪಟ್ಟರೂ ನಾನು ತಡೆದುಕೊಳ್ಳಬಲ್ಲೆ. ಆದರೆ ನನ್ನ ಬಗ್ಗೆ ನಾನೇ ಹೇಸಿಗೆ ಪಟ್ಟುಕೊಳ್ಳಲು ಖಂಡಿತಾ ಅವಕಾಶ ಮಾಡಿಕೊಡಲಾರೆ. ನೀನು ನನ್ನ ವೈರಿ. ವೈರಿಯಾಗಿಯೇ ಇರುತ್ತೀಯ. ನಾನು ಫ್ರಾನ್ನಿನ ಬಿಡುಗಡೆಗೆಗಾಗಿಯಷ್ಟೇ ಕಾಯುತ್ತಿದ್ದೇನೆ. ಅದು ಹಾಗಿಯೇ ತೀರುತ್ತದೆ. ಮುಂದಿನ ವರ್ಷವೋ, ಅದರಾಚಿನ ವರ್ಷವೋ ನನಗೆ ಗೊತ್ತಿಲ್ಲ. ಬೇಕಾದರೆ ಮೂರು ವರ್ಷಗಳೇ ಆಗಲಿ. ಬೇರೆಯವರು ಏನು ಬೇಕಾದರೂ ಮಾಡಿಕೊಳ್ಳಲಿ. ನಾನು ಮಾತ್ರ ನನ್ನ ದೇಶದ ವೈರಿಗಳೊಡನೆ ಯಾವತ್ತೂ ರಾಜಿಗೆ ಸಿದ್ಧಳಿಲ್ಲ. ನಾನು ನಿನ್ನನ್ನು ಯಾವ ಮಟ್ಟಿಗೆ ದ್ವೇಷಿಸುತ್ತಿದ್ದೇನೋ, ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಆ ನಿನ್ನ ಮಗುವನ್ನು ಅಷ್ಟೇ ದ್ವೇಷಿಸುತ್ತಿದ್ದೇನೆ. ಹೌದು, ನಾವು ಸಧ್ಯಕ್ಕೆ ಸೋತಿದ್ದೇವೆ. ಆದರೂ ನಿಮ್ಮ ಅಧೀನರಾಗಿಲ್ಲ. ನನ್ನ ನಿರ್ಧಾರ ಅಚಲ. ನೀನಿನ್ನು ಹೊರಡಬಹುದು.’
ಅವನು ಕ್ಷಣಕಾಲ ಮೌನವಾದ. ನಂತರ, ’ನೀವು ವೈಧ್ಯರನ್ನು ಕಂಡಿದ್ದೀರಾ? ದುಡ್ಡಿಗಾಗಿ ನೀವು ಹಿಂದೆ ಮುಂದೆ ಮಾಡುವುದು ಬೇಡ’ ಎಂದ.
’ವೈಧ್ಯರ ಬಳಿ ಹೋಗಿ ಇಡೀ ಊರೆಲ್ಲಾ ಗಬ್ಬೆಬ್ಬಿಸಬೇಕೆಂದು ಕೊಂಡಿದ್ದೀಯ?’ ಅವಳು ಕಿಡಿಕಾರಿದಳು. ’ಏನು ಮಾಡಬೇಕೋ ಅದನ್ನು ನನ್ನ ತಾಯಿ ನೋಡಿಕೊಳ್ಳುತ್ತಾಳೆ’ ಎಂದಳು.
’ಏನಾದ್ರೂ ಹೆಚ್ಚುಕಮ್ಮಿ ಆದರೆ?’
’ನಿನಗ್ಯಾಕೆ ಅಧಿಕ ಪ್ರಸಂಗ?’
ಅವನು ಭುಜ ಕುಣಿಸಿ ಎದ್ದು ನಿಂತ. ಬಾಗಿಲನ್ನು ಮುಚ್ಚಿ ಅವನು ಹೊರಟಿದ್ದು ಅವಳು ಒಳಗಿಂದಲೇ ನೋಡಿದಳು. ಅವನ ಕೆಲವು ಮಾತುಗಳು ಎಬ್ಬಿಸಿದ ಭಾವನೆಗಳ ಅನುಭವ ಅವಳಿಗೆ ಈ ಮೊದಲೆಂದೂ ಆಗಿರಲಿಲ್ಲ.
’ಓ ದೇವರೇ ನನಗೆ ಶಕ್ತಿ ಕೊಡು!’ ಅವಳು ಭಗವಂತನಲ್ಲಿ ಮೊರೆಯಿಟ್ಟಳು.
ಅವನು ತನ್ನ ದಾರಿ ಹಿಡಿದು ಹೋಗುತ್ತಿರುವಂತೆ ಎಲ್ಲೋ ಇದ್ದ ಅವರ ನಾಯಿ ಅವನನ್ನು ಕಂಡು ಬೊಗಳಲು ಶುರು ಮಾಡಿತು. ಅದರ ಗೆಳೆತನ ಸಂಪಾದಿಸಲು ಅವನು ಬಹಳ ತಿಂಗಳುಗಳಿಂದ ಪ್ರಯತ್ನ ಪಡುತ್ತಿದ್ದನಾದರೂ ಅದೂ ಕೂಡ ರಾಜಿಯಾಗಿರಲಿಲ್ಲ. ಮೊದಲೇ ಅನ್ಯಮನಸ್ಕನಾಗಿದ್ದ ಹ್ಯಾನ್ಸ್ ಅದನ್ನು ಬಲವಾಗಿ ಒದ್ದ. ಕುಂಯ್‌ಗುಡುತ್ತಾ ನಾಯಿ ಓಡಿ ಹೋಯಿತು.
’ರಾಕ್ಷಸ ಜಾತಿದು! ಒಂದು ಘಳಿಗೆ ನಾನು ಅವನ ಮೇಲೆ ಕನಿಕರ ಪಟ್ಟಿದ್ದೆ!’ ಆನ್ನೆಟ್ ಅಂದುಕೊಂಡಳು.
*****
ಮಾರ್ಚ್ ತಿಂಗಳು ಬಂದೇ ಬಿಟ್ಟಿತು. ಜರ್ಮನರ ಕ್ಯಾಂಪಿನಲ್ಲಿ ಎನೋ ವಿಶೇಷವಾದುದು ಜರುಗಲಿದೆ ಎಂಬ ವಾತಾವರಣ ನಿರ್ಮಾಣಗೊಂಡಿತ್ತು. ಪುರುಸೊತ್ತು ಇಲ್ಲದ ಅಭ್ಯಾಸ, ಕೆಲಸ, ಮೇಲಾಧಿಕಾರಿಗಳಿಂದ ತನಿಖೆ.. ಏನು ನಡೆಯಲಿದೆ ಎಂದು ಯಾರಿಗೂ ಗೊತ್ತಿರದಿದ್ದರೂ ತಲೆಗೊಬ್ಬರು ಒಂದೊಂದು ಥರ ಮಾತನಾಡುತ್ತಿದ್ದರು. ಕೆಲವರು ಇಂಗ್ಲೆಂಡಿನ ಮೇಲೆ ಆಕ್ರಮಣಕ್ಕೆ ತಯಾರಿ ಎನ್ನುತ್ತಿದ್ದರೆ, ಮತ್ತೆ ಕೆಲವರು ಉಕ್ರೇಯ್ನ್, ಬಾಲ್ಕನ್ಸ್ ಎನ್ನುತ್ತಿದ್ದರು. ಒಂದು ಭಾನುವಾರದ ಮಧ್ಯಾಹ್ನ ಅವನಿಗೆ ಫಾರಮ್ಮಿಗೆ ಹೋಗುವ ಅವಕಾಶ ಲಭಿಸಿತು. ಹೊರಗೆ ಆಲಿಕಲ್ಲಿನ ಮಳೆ ಬೀಳುತ್ತಿತ್ತು. ಸೂರ್ಯ ಮೋಡಗಳೊಳಗೆ ಅವಿತುಕೊಂಡಿದ್ದ. ತಣ್ಣನೆ ಗಾಳಿ ಬೀಸುತ್ತಿತ್ತು. ಬೆಂಕಿ ಕಾಯಿಸುತ್ತಾ ಒಳಗೆ ಕುಳಿತುಕೊಂಡಿರುವಂತ ಹವಮಾನ.
’ಓಹ್, ನೀನು! ನೀನು ಸತ್ತೇ ಹೋಗಿದ್ದೀಯ ಎಂದು ನಾವೆಲ್ಲಾ ಅಂದು ಕೊಂಡಿದ್ದೆವು!’ ಮೇಡಮ್ ಪೆರಿಯೆರ್ ಅವನನ್ನು ನೋಡುತ್ತಿದ್ದಂತೆ ಸಮಧಾನದ ಉಸಿರನ್ನು ಬಿಡುತ್ತಾ ಹೇಳಿದಳು.
’ಹೊರಗೆ ಕಾಲಿಡಲು ಅವಕಾಶವಾಗಲೇ ಇಲ್ಲ. ನಾವು ಯಾವಾಗ ಕ್ಯಾಂಪ್ ಖಾಲಿ ಮಾಡುತ್ತೇವೊ ಹೇಳಲಿಕ್ಕಾಗುವುದಿಲ್ಲ ಅನ್ನುವಂತ ಪರಿಸ್ಥಿತಿ ಇದೆ.’
’ಆನ್ನೆಟ್ ಇಂದು ಬೆಳಿಗ್ಗೆ ಗಂಡು ಮಗುವನ್ನು ಹೆತ್ತಳು!’
ಅವನ ಹೃದಯ ತಾಳ ತಪ್ಪುತ್ತಿರುವಂತೆ ಬಡಿದುಕೊಳ್ಳತೊಡಗಿತು. ಹ್ಯಾನ್ಸ್ ಮುದುಕಿಯನ್ನು ಬಿಗಿದಪ್ಪಿ ಅವಳ ಮೇಲೆ ಮುತ್ತಿನ ಮಳೆಗರೆದ.
’ಭಾನುವಾರ ಜನಿಸಿದ ಹುಡುಗ ಅದೃಷ್ಟವಂತ! ಶಾಂಫೆನ್ ತೆರೆಯಲು ಇನ್ನೆಂತ ಸಂದರ್ಭ ಬೇಕು? ಆನ್ನೆಟ್ ಹೇಗಿದ್ದಾಳೆ?’
’ಅವಳು ಆರೋಗ್ಯವಾಗಿದ್ದಾಳೆ. ಅವಳಿಗೆ ರಾತ್ರಿಯೇ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಬೆಳಗಿನ ಝಾವ ಐದಕ್ಕೆ ಹೆರಿಗೆಯಾಯ್ತು.’
ಪೆರಿಯೆರ್ ಒಲೆಯ ಬಳಿ ಕುಳಿತು ಪೈಪ್ ಎಳೆಯುತ್ತಿದ್ದ. ಹ್ಯಾನ್ಸನ ಉತ್ಸಾಹ ಕಂಡು ಅವನು ಮೀಸೆಯೊಳಗೇ ನಗುತ್ತಿದ್ದ.
’ಮೊದಲ ಭಾರಿ ತಂದೆಯಾದಾಗ ಎಲ್ಲಾ ಗಂಡಸರಲ್ಲೂ ಇದೇ ರೀತಿ ಆಗುತ್ತದೆ!’ ಅವನೆಂದ.
’ನಿನ್ನ ಮಗ ಎಷ್ಟು ಮುದ್ದಾಗಿದ್ದಾನೆ ಗೊತ್ತಾ? ನಿನ್ನವೇ ನೀಲಿ ಕಣ್ಣುಗಳು. ಅದೇ ಹೊಂಗೂದಲು!’ ಮೇಡಮ್ ಪೆರಿಯೆರ್ ಉಲಿದಳು.
’ವ್ಹಾಹ್! ಎಂತಾ ಸುಂದರವಾದ ಜಗತ್ತು ನಮ್ಮದು! ಆನ್ನೆಟ್ ಎಲ್ಲಿದ್ದಾಳೆ? ನಾನವಳನ್ನು ನೋಡಬೇಕು.’
’ಅವಳು ನಿನ್ನನ್ನು ಕಾಣುವ ಮನೋಸ್ಥಿತಿಯಲ್ಲಿದ್ದಾಳೆಂದು ನನಗೆ ಅನಿಸುವುದಿಲ್ಲ’
’ಪರವಾಯಿಲ್ಲ, ಪರವಾಯಿಲ್ಲ. ನಾನು ಮಗುವಿನ ಮೇಲಾದರೂ ಒಮ್ಮೆ ದೃಷ್ಟಿ ಹಾಯಿಸುತ್ತೇನೆ, ಅಷ್ಟೇ ಸಾಕು.’ ಅವನು ಅಂಗಲಾಚಿದ.
’ನೋಡುವ. ಸಾಧ್ಯವಾದರೆ ಮಗುವನ್ನು ಇಲ್ಲೇ ಎತ್ತಿಕೊಂಡು ಬರುತ್ತೇನೆ.’ ಎನ್ನುತ್ತಾ ಪೆರಿಯೆರ್ ಹೋದಳು. ಅವಳು ಮಾಳಿಗೆಯ ಮೆಟ್ಟಿಲುಗಳನ್ನು ಹತ್ತುವ ಶಬ್ಧ ಕೇಳಿಸುತ್ತಿತ್ತು. ಹಾಗೆಯೇ ಅವಳು ಧಡಬಡನೆ ಮೆಟ್ಟಿಲುಗಳನ್ನು ಇಳಿದು ಬರುವ ಸದ್ದೂ ಕೇಳಿಸಿತು.
’ತಾಯಿ-ಮಗು ಇಬ್ಬರೂ ಮೇಲೆ ಕಾಣಿಸುತ್ತಿಲ್ಲ!’ ಅವಳು ಆತಂಕದಿಂದ ಹೇಳಿದಳು.
ಮೂವರೂ ಒಮ್ಮೆಲೇ ಎದ್ದು ಮಾಳಿಗೆಯ ಮೆಟ್ಟಿಲುಗಳನ್ನು ಹತ್ತಿದರು. ಬಾಣಂತಿಯ ಕೋಣೆ ಅಸ್ತವ್ಯಸ್ತವಾಗಿತ್ತು. ಇಳಿ ಹೊತ್ತಿನ ಬಿಸಿಲು ಕೋಣೆಯೊಳಗೆ ಮಂದವಾಗಿ ಹರಡಿತ್ತು. ಆದರೆ ಕಬ್ಭಿಣದ ಮಂಚ ಖಾಲಿಯಿತ್ತು.
’ಹುಡುಗಿ ಏನಾದಳು?’ ಮೇಡಮ್ ಪೆರಿಯೆರ್ ಅರಚಿದಳು. ಎಲ್ಲಾ ಬಾಗಿಲುಗಳನ್ನು ತೆರೆದು ’ಆನ್ನೆಟ್, ಆನ್ನೆಟ್!’ ಎಂದು ಕರೆಯತೊಡಗಿದಳು.
ಕೆಳಗೆ ಓಡಿ ಬಂದರು. ಆನ್ನೆಟ್ ಸುತ್ತಲೂ ಎಲ್ಲೂ ಕಾಣಿಸಲಿಲ್ಲ.
’ಅವಳು ಖಂಡಿತವಾಗಿಯೂ ಹೊರಗೆ ಹೋಗಿದ್ದಾಳೆ.’
’ಅದು ಹೇಗೆ ಸಾಧ್ಯ?’ ಹ್ಯಾನ್ಸನ ಸ್ವರ ಕಂಪಿಸುತ್ತಿತ್ತು.
’ಹೇಗೆಂದರೆ ಮುಂಬಾಗಿಲಿನಿಂದ!’ ಎನ್ನುತ್ತಾ ಪೆರಿಯೆರ್ ಮುಂಬಾಗಿಲ ಬಳಿ ಹೋದ. ಬಾಗಿಲಿಗೆ ಮುಂಭಾಗದ ಅಗುಳಿ ಹಾಕಿತ್ತು!
’ಹಸಿ ಬಾಣಂತಿ. ಈ ಕುಳಿರ್ಗಾಳಿಗೆ ಅವಳು ಸತ್ತೇ ಹೋಗುತ್ತಾಳೆ!’ ಮೇಡಮ್ ಪೆರಿಯೆರ್ ಅಳುವ ಸ್ವರದಲ್ಲಿ ಹೇಳಿದಳು.
’ನಾವು ಅವಳನ್ನು ಹುಡುಕೋಣ.’ ಹ್ಯಾನ್ಸ್ ಹೇಳಿದ. ಅವರು ಅಡುಗೆ ಕೋಣೆಗೆ ಬಂದು ಬಾಗಿಲು ತೆರೆದು ಹೊರಗೆ ಕಾಲಿಡುವುದಕ್ಕೂ, ಆನ್ನೆಟ್ ಒಳಗೆ ಬರುವುದಕ್ಕೂ ಸರಿಯಾಯಿತು. ಅವಳ ನೈಟ್ ಡ್ರೆಸ್ಸಿನ ಮೇಲೆ ತೆಳುವಾದ ಗೌನೊಂದನ್ನು ಬಿಟ್ಟರೆ ಬೇರ್‍ಯಾವ ಉಡುಗೆಯೂ ಇರಲಿಲ್ಲ. ಗುಲಾಬಿ ಬಣ್ಣದ ಗೌನಿನ ಮೇಲೆ ನೀಲಿ ಬಣ್ಣದ ಹೂಗಳು. ಅವಳು ಮಳೆಯಲ್ಲಿ ತೊಯ್ದು ತೊಪ್ಪೆಯಾಗಿದ್ದಳು. ಕೂದಲುಗಳು ಹಣೆಯ ಮೇಲೆ, ಬೆನ್ನ ಮೇಲೆ ಅಂಟಿಕೊಂಡಿದ್ದವು. ಮುಖ ಬಿಳುಚಿಕೊಂಡಿತ್ತು.
’ಎಲ್ಲಿಗೋಗಿದ್ದೆ ಮಗಳೇ? ನೀನು ಪೂರ್ತಿಯಾಗಿ ಒದ್ದೆಯಾಗಿದ್ದೀಯಾ!’ ಮೇಡಮ್ ಪೆರಿಯೆರ್ ಅವಳನ್ನು ಆಲಂಗಿಸಿಕೊಂಡಳು.
ತಾಯಿಯನ್ನು ಪಕ್ಕಕ್ಕೆ ಸರಿಸಿ, ಏದುಸಿರು ಬಿಡುತ್ತಾ, ಹ್ಯಾನ್ಸನನ್ನು ಉದ್ದೇಶಿಸಿ ಅವಳು ಹೇಳಿದಳು: ’ನೀನು ಸರಿಯಾದ ಹೊತ್ತಿನಲ್ಲೇ ಬಂದೆ.’
’ಆನ್ನೆಟ್, ಮಗು ಎಲ್ಲಿದೆ?’ ಮೇಡಮ್ ಪೆರಿಯೆರ್ ಕಿರುಚಿದಳು.
’ನಾನು ಮಾಡಲೇ ಬೇಕಿತ್ತು. ಇನ್ನಷ್ಟು ವಿಳಂಬವಾಗಿದ್ದಿದ್ದರೆ ನನ್ನಿಂದ ಸಾಧ್ಯವಾಗುತ್ತಿರಲಿಲ್ಲವೇನೋ!’
’ಏನು ಮಾಡಿದೆ ಆನ್ನೆಟ್?’
’ಏನು ಮಾಡಬೇಕಿತ್ತೋ ಅದನ್ನೇ ಮಾಡಿದೆ ಕಣಮ್ಮ. ಮಗು ಉಸಿರುಗಟ್ಟಿ ಸಾಯುವವರೆಗೂ ಕಾಲುವೆಯೊಳಗೆ ಮುಳುಗಿಸಿ ಬಿಟ್ಟೆ!’
ಹ್ಯಾನ್ಸನ ಬಾಯಿಂದ ಒಂದು ಭೀಕರ ಚೀತ್ಕಾರ ಹೊರಟಿತು. ಎರಡೂ ಕೈಗಳಿಂದ ಬಾಯನ್ನು ಮುಚ್ಚಿಕೊಂಡು ನಶೆ ಏರಿದವನಂತೆ ತೂರಾಡುತ್ತಾ ಅವನು ಹೊರನಡೆದ. ಆನ್ನೆಟ್ ಎದುರಿಗಿದ್ದ ಕುರ್ಚಿಯಲ್ಲಿ ಕುಸಿದು ಕುಳಿತಳು. ಎರಡೂ ಕೈಗಳಲ್ಲಿ ಮುಖವನ್ನು ಮುಚ್ಚಿಕೊಂಡು ಕರುಳು ಕಿತ್ತು ಬರುವಂತೆ ಜೋರಾಗಿ ಅಳತೊಡಗಿದಳು.
*******