ತಿರಸ್ಕಾರ (ಭಾಗ 5): ಜೆ.ವಿ.ಕಾರ್ಲೊ, ಹಾಸನ

(ಇಲ್ಲಿಯವರೆಗೆ…)

ಅವಳು ತನ್ನೊಟ್ಟಿಗಿದ್ದಾಳೆ ಎಂದು ಹ್ಯಾನ್ಸನಿಗೆ ಖಾತ್ರಿಯಾಯ್ತು. ಈ ಸಂಗತಿ ಅವನನ್ನು ನಿರಾಶೆಯ ಮಡಿಲಿಂದ ಮೇಲೆತ್ತಲು ನೆರವಾಯಿತು. ಆನ್ನೆಟ್ ಮತ್ತೊಬ್ಬನ ಪ್ರೇಮದಲ್ಲಿರುವ ಸಂಗತಿ ಅವನಿಗೆ ಜೀರ್ಣಿಸಿಕೊಳ್ಳುವುದು ಕಷ್ಟವಾಯಿತು. ಅದೃಷ್ಟವಶಾತ್ ಅವನ ಪ್ರತಿಸ್ಪರ್ಧಿ ಜರ್ಮನಿಯಲ್ಲಿ ಯುದ್ಧಕೈದಿಯಾಗಿದ್ದ. ಮಗು ಜನಿಸುವ ಮೊದಲೇ ಅವನಿಗೆ ಬಿಡುಗಡೆಯಾಗದಿದ್ದರೆ ಸಾಕೆಂದು ಅವನು ಭಗವಂತನಿಗೆ ಮೊರೆಯಿಟ್ಟ. ಮಗು ಜನಿಸಿದ ನಂತರ ಆನ್ನೆಟ್ ಬದಲಾದರೂ ಆದಳೇ. ಈ ಹುಡುಗಿಯರನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಊರಿನಲ್ಲಿ ಅವನಿಗೆ ಗೊತ್ತಿದ್ದ ಜೋಡಿಯೊಂದು ಎಷ್ಟೊಂದು ಅನ್ಯೋನ್ಯವಾಗಿತ್ತೆಂದರೆ, ಅವರಿಗೆ ಒಬ್ಬರನ್ನೊಬ್ಬರು ಬಿಟ್ಟು ನೋಡಲು ಸಾಧ್ಯವೇಯಿರಲಿಲ್ಲ. ಒಂದು ಮಗುವಾದ ತಕ್ಷಣ ಹೆಂಡತಿಗೆ ಗಂಡನ ಮುಖ ಕಂಡರಾಗುತ್ತಿರಲಿಲ್ಲ! ಇದಕ್ಕೆ ವಿರುಧ್ದವಾಗಿಯೂ ನಡೆಯುವ ಸಾಧ್ಯತೆಗಳೂ ಇರಬಹುದಲ್ಲವೇ? ನಾನು ಅವಳನ್ನು ಮದುವೆಯಾಗಲು ಹೊರಟಾಗಲೇ ನಾನೆಂತ ವ್ಯಕ್ತಿ ಎಂದು ಅವಳಿಗೆ ಗೊತ್ತಾಗಿರಬೇಕು. ಆದರೂ ಅವಳು ಮಾತಾಡಿದ ಧಾಟಿ! ಓ, ದೇವರೇ!! ಅವನೂ ಸುಶಿಕ್ಷಿತನೇ. ಆದರೂ ಅವಳ ಮುಂದೆ ತಾನು ಏನೂ ಅಲ್ಲವೆಂದು ಅವನಿಗೆ ಭಾಸವಾಯಿತು. ಇದಕ್ಕೇ ಎನ್ನುವುದು, ಸಂಸ್ಕೃತಿ!

’ನಾನೊಬ್ಬ ಕತ್ತೆ!’ ಅವನೇ ಹಳಿದುಕೊಂಡ. ತಾನು ಸ್ಪುರದ್ರೂಪಿ, ಕಟ್ಟುಮಸ್ತಾದ ಆಳು ಎಂದು ಅವಳೇ ಹೇಳಿದ್ದಳು. ತಾನು, ಅವಳಿಗೆ ಏನೂ ಅಲ್ಲದಿದ್ದಲ್ಲಿ ಹೀಗೆ ಹೇಳುತ್ತಿದ್ದಳೆ? ನನ್ನ ಮಗುವಿಗೆ ಹೊಂಗೂದಲು, ನೀಲಿಕಣ್ಣುಗಳೆಂದು ಅವಳೇ ನಂಬಿದ್ದಾಳೆ! ತಾನು ಸ್ವಲ್ಪ ಸಹನೆಯಿಂದರಬೇಕಷ್ಟೆ. ಉಳಿದ ಕೆಲಸ ಪ್ರಕೃತಿಯೇ ಮಾಡುತ್ತದೆ!
***

ವಾರಗಳು ಉರುಳಿದವು. ಕ್ಯಾಂಪಿನಲ್ಲಿ ಹ್ಯಾನ್ಸನ ಮೇಲಾಧಿಕಾರಿ ಸ್ವಲ್ಪ ವಯಸ್ಸಾದವನೂ, ಹಾಸ್ಯ ಪ್ರವೃತ್ತಿಯವನೂ ಆಗಿದ್ದ. ಯುದ್ಧದ ಫಲಿತಾಂಶ ಅವರೆಲ್ಲರಿಗೂ ಖಾತ್ರಿಯಾಗಿತ್ತು. ಅವರೆಲ್ಲಾ ಸುಮ್ಮನೇ ದಿನಗಳನ್ನು ನೂಕುತ್ತಿದ್ದರಿಂದ ಮೇಲಾಧಿಕಾರಿ ಅವರೊಂದಿಗೆ ಕಠಿಣವಾಗಿ ನಡೆದುಕೊಳ್ಳುತ್ತಿರಲಿಲ್ಲ. ಜರ್ಮನಿಯ ವಾಯುಸೇನೆ ಇಂಗ್ಲೆಂಡಿನ ಮೇಲೆ ಎಷ್ಟರ ಮಟ್ಟಿಗೆ ಧಾಳಿ ನಡೆಸಿದೆ ಎಂದರೆ ಅಲ್ಲಿನ ನಾಗರಿಕರೆಲ್ಲಾ ಕಂಗಾಲಾಗಿದ್ದಾರೆಂದು ಜರ್ಮನಿಯ ವಾರ್ತಾಪತ್ರಿಕೆಗಳು ದೊಡ್ಡ ದೊಡ್ಡ ಅಕ್ಷರಗಳಲ್ಲಿ ಮುದ್ರಿಸುತ್ತಿದ್ದವು. ಜರ್ಮನಿಯ ಸಬ್‌ಮರೀನ್‌ಗಳು ಇಂಗ್ಲೆಂಡಿನ ಬಹಳಷ್ಟು ಹಡಗುಗಳನ್ನು ಧ್ವಂಸಗೊಳಿಸಿದ್ದವು. ಹಳ್ಳಿಗಳಲ್ಲಿ ಆಹಾರ ವಸ್ತುಗಳ ಅಭಾವದಿಂದಾಗಿ ಜನರು ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೇಸಿಗೆ ಕಳೆಯುವ ಮೊದಲೇ ಯುದ್ಧ ಮುಗಿದು ಜರ್ಮನಿ ಜಗತ್ತಿನ ದೊಡ್ಡಣ್ಣನಾಗುವ ಕನಸು ಕಾಣುತ್ತಿದ್ದ ಜರ್ಮನರು ಅಗಸದಲ್ಲೇ ತೇಲಾಡುತ್ತಿದ್ದರು. ತಾನೊಬ್ಬಳು ಪ್ರೆಂಚ್ ಹುಡುಗಿಯನ್ನು ಮದುವೆಯಾಗಿ ಫ್ರಾನ್ಸಿನಲ್ಲೇ ಸಂಸಾರ ಹೂಡುವುದಾಗಿಯೂ, ಮತ್ತು ತಮ್ಮ ತನ್ನ ಪಾಲಿನ ಆಸ್ತಿಯನ್ನು ಕೊಂಡು ತನಗೆ ದುಡ್ಡು ಕಳಿಸಲೆಂದು ಹ್ಯಾನ್ಸ್ ಮನೆಗೆ ಪತ್ರ ಬರೆದು ಹಾಕಿದ. ಯುದ್ಧದ ದಸೆಯಿಂದ, ವಿದೇಶಿ ವಿನಿಮಯ ದರದ ಏರುಪೇರುಗಳಿಂದ ಹಾಗೂ ಕೃಷಿಕಾರ್ಯಗಳಲ್ಲಿ ತೊಡಗುವವರಿಲ್ಲದೆ ಫ್ರಾನ್ಸಿನಲ್ಲಿ ಭೂಮಿಯ ಬೆಲೆ ಬಹಳ ಅಗ್ಗವಾಗಿತ್ತು ಎನ್ನಬಹುದು. ಅವನು ತನ್ನ ಆಲೋಚನೆಗಳನ್ನು ಆನ್ನೆಟಳ ತಂದೆಗೆ ತಿಳಿಸಿದ. ಪೆರಿಯೆರನ ಹಳೆ ಟ್ರ್ಯಾಕ್ಟರನ್ನು ಮಾರಿ, ಸುಧಾರಿತ ನೇಗಿಲುಳ್ಳ ಜರ್ಮನ್ ಟ್ರ್ಯಾಕ್ಟರನ್ನು ತರಿಸುವ ಕನಸನ್ನು ಅವನ ಮುಂದಿಟ್ಟ. ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸದಿದ್ದಲ್ಲಿ ಕೃಷಿಯಲ್ಲಿ ಲಾಭವನ್ನು ಕಾಣಲು ಸಾಧ್ಯವಿಲ್ಲ ಎಂದು ಅವನು ಪೆರಿಯೆರನ್ನು ನಂಬಿಸಿದ. ಈ ಜರ್ಮನ್ ಹುಡುಗ ಬುದ್ಧಿವಂತನಾಗಿರುವಂತೆ ಕಾಣಿಸುತ್ತದೆ ಎಂದು ಆನ್ನೆಟಳ ಅಪ್ಪ ಮೇಡಮ್ ಪೆರಿಯೆರ್ ಬಳಿ ಹೆಮ್ಮೆಯಿಂದಲೇ ಹೇಳಿದ. ಇತ್ತೀಚೆಗೆ ಅವಳೂ ಹ್ಯಾನ್ಸನಿಗೆ ಬಹಳ ಹತ್ತಿರವಾಗಿದ್ದಳು. ಭಾನುವಾರದ ಮಧ್ಯಾಹ್ನಗಳಲ್ಲಿ ತಮ್ಮಲ್ಲೇ ಊಟಮಾಡಲು ಒತ್ತಾಯಿಸುತ್ತಿದ್ದಳು. ಅವನ ಹೆಸರನ್ನು ಫ್ರೆಂಚಿಗೆ ತರ್ಜುಮೆಗೊಳಿಸಿ ’ಜೀನ್’ ಎಂದು ಪ್ರೀತಿಯಿಂದ ಕರೆಯುತ್ತಿದ್ದಳು. ಬಹಳಷ್ಟು ಸಾರಿ ಅವನೂ ಅವರ ಕೆಲಸ ಕಾರ್ಯಗಳಲ್ಲಿ ಕೈಹಚ್ಚುತ್ತಿದ್ದ. ದಿನಗಳುರುಳಿದಂತೆ, ಆನ್ನೆಟಳಿಗೆ ತನ್ನ ಪಾಲಿನ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವನು ಅನಿವಾರ್ಯವಾಗಿ, ಉತ್ಸಾಹದಿಂದಲೇ ಅವರಿಗೆ ನೆರವಾಗುತ್ತಿದ್ದ.

ಏನೇ ಆದರೂ, ಆನ್ನೆಟಳ ಮನೋಭಾವ ಮಾತ್ರ ಬದಲಾದಂತೆ ಕಾಣುತ್ತಿರಲಿಲ್ಲ. ಅವನ ನೇರವಾದ ಪ್ರಶ್ನೆಗಳಿಗೆ ಉತ್ತರಿಸುವುದು ಬಿಟ್ಟರೆ ಅವಳಾಗಿಯೇ ಒಂದೂ ಮಾತನಾಡುತ್ತಿರಲಿಲ್ಲ. ಅವನಿಗೆ ಮುಖಾಮುಖಿಯಾಗುವ ಸಂದರ್ಭಗಳು ಎದುರಾದಾಗ ಎದ್ದು ತನ್ನ ಕೋಣೆಗೆ ಹೋಗುತ್ತಿದ್ದಳು. ಅವನ ಆಸ್ತಿತ್ವವನ್ನೇ ಕಡೆಗಣಿಸಿದಂತಿದ್ದಳು. ಅವಳು ಈಗ ಮೈಕೈ ತುಂಬಿ ಆರೋಗ್ಯದಿಂದ ಮುದ್ದಾಗಿ ಕಾಣುತ್ತಿದ್ದಳು. ಹ್ಯಾನ್ಸನ ಕಣ್ಣುಗಳಿಗೆ ಒಬ್ಬ ಅಪ್ಸರೆಯಂತೆ ಕಂಗೊಳಿಸುತ್ತಿದ್ದಳು. ತಾಯ್ತನದ ನಿರೀಕ್ಷೆಯಲ್ಲಿ ಅವಳಲ್ಲಿ ಒಂದು ತೆರನಾದ ಗಾಂಭೀರ್‍ಯತೆ ಎದ್ದು ಕಾಣುತ್ತಿತ್ತು. ಒಂದು ದಿನ ಅವನು ಫಾರಮ್ಮಿಗೆ ಬರುತ್ತಿರುವಾಗ ದಾರಿ ಮಧ್ಯದಲ್ಲೇ ಮೇಡಮ್ ಪೆರಿಯರ್ ಅವನನ್ನು ನಿಲ್ಲಿಸಿಕೊಂಡಳು.

’ನಾನು ಒಂದು ಗಂಟೆಯಿಂದ ನಿನ್ನ ದಾರಿ ಕಾಯುತ್ತಿದ್ದೇನೆ ಜೀನ್. ನೀನು ಇವತ್ತು ವಾಪಸ್ಸಾಗು. ಪಿಯೆರಿ ಮಡಿದನಂತೆ!’ ಎಂದಳು.
’ಪಿಯೆರಿ ಯಾರಮ್ಮಾ?’
’ಪಿಯೆರಿ ಗೇವಿನ್. ಆನ್ನೆಟಳನ್ನು ಮದುವೆಯಾಗಲಿದ್ದ ಶಿಕ್ಷಕ.’
ಅವನ ಹೃದಯ ಒಮ್ಮೆಲೇ ಸಂತೋಷದಿಂದ ಕುಣಿದಾಡಿತು. ಒಂದು ಕಂಟಕ ತಾನಾಗಿಯೇ ಕಳಚಿ ಹೋಯಿತು. ಎಂಥಾ ಅದೃಷ್ಟ!’
’ಆನ್ನೆಟ್ ಬಹಳ ದುಃಖಿಸುತ್ತಿರಬೇಕು!’ ಅವನೆಂದ.
’ಅವಳೇನು ರೋಧಿಸುತ್ತಿಲ್ಲ. ನಾನು ಮಾತನಾಡಿಸಲು ಹೋದಾಗ ಮಾತ್ರ ಮೈಮೇಲೆ ಏರಿ ಬಂದಳು. ಇವತ್ತು ನೀನೇದರೂ ಅವಳ ಎದುರಿಗೆ ಕಾಣಿಸಿದರೆ ಖಂಡಿತಾ ನಿನಗೆ ಚೂರಿಯನ್ನು ಹಾಕುತ್ತಾಳೆ.’
’ಅವನು ಸಾಯುವುದಕ್ಕೂ ನನಗೂ ಏನು ಸಂಬಂಧ? ಈ ವಿಚಾರ ನಿಮಗೆ ಹೇಗೆ ಗೊತ್ತಾಯ್ತು?’
’ಪಿಯೆರಿಯ ಕೈದಿ ಮಿತ್ರನೊಬ್ಬ ತಪ್ಪಿಸಿಕೊಂಡು ಬಂದಿದ್ದಾನೆ. ಅವನಿಂದ ಪತ್ರ ಬಂತು. ನಮಗೆ ಅದು ಇವತ್ತು ಬೆಳಿಗ್ಗೆ ಸಿಕ್ಕಿತು. ಆಹಾರಕ್ಕಾಗಿ ಕ್ಯಾಂಪಿನಲ್ಲಿ ದಂಗೆಯಾಯ್ತಂತೆ. ದಂಗೆಯ ಮುಂದಾಳತ್ವವನ್ನು ವಹಿಸಿದ್ದ ಕೆಲವರಿಗೆ ಗುಂಡು ಹಾರಿಸಿ ಕೊಲ್ಲಲಾಯಿತಂತೆ. ಅವರಲ್ಲಿ ಆನ್ನೆಟಳ ಪಿಯೆರಿಯೂ ಒಬ್ಬನಂತೆ!’

ಹ್ಯಾನ್ಸ್ ಸುಮ್ಮನಾದ. ಅವನಿಗೆ ಇದರಲ್ಲಿ ಯಾವ ಅನ್ಯಾಯವೂ ಕಾಣಿಸಲಿಲ್ಲ. ಕೈದಿ ಶಿಬಿರವೆಂದರೆ ಏನೆಂದು ತಿಳಿದುಕೊಂಡಿದ್ದಾರೆ ಈ ಫ್ರೆಂಚರು? ಹೋಟೆಲ್?!
’ಆನ್ನೆಟಳಿಗೆ ಈ ಅಘಾತದಿಂದ ಹೊರಬರಲು ಒಂದು ವಾರವಾದರೂ ಬೇಕು. ಅವಳು ಶಾಂತಳಾದ ಮೇಲೆ ನಿನಗೊಂದು ಪತ್ರ ಬರೆದು ಹಾಕುತ್ತೇನೆ. ಆಮೇಲೆ ಬರುವಿಯಂತೆ.’ ಅವಳೆಂದಳು.
’ಆಯ್ತಮ್ಮ. ನೀನು ನನಗೆ ಸಹಾಯ ಮಾಡುತ್ತೀಯಾ ತಾನೆ?’
’ನೀನೇನು ಯೋಚನೆ ಮಾಡಬೇಡ ಕಣಪ್ಪ. ನಾನೂ, ನಮ್ಮನೆಯವರೂ ನಿನ್ನ ಪಕ್ಷಕ್ಕಿದ್ದೇವೆ. ಫ್ರಾನ್ಸ್, ಜರ್ಮನಿಗೆ ಸಹಕಾರ ನೀಡಬೇಕೆಂದು ನನ್ನ ಮನೆಯವರೂ ಹೇಳುತ್ತಿದ್ದಾರೆ. ನನ್ನ ದೃಷ್ಟಿಯಲ್ಲಿ, ಮಗುವಿನ ಭವಿಷ್ಯವನ್ನೂ ನೆನೆದು, ಆನ್ನೆಟಳಿಗೆ ನೀನೇ ತಕ್ಕನಾದ ವರ. ಖಂಡಿತವಾಗಿಯೂ ನನಗೆ ನಿನ್ನ ಮೇಲೆ ಏನೂ ದ್ವೇಷವಿಲ್ಲ ಕಣಪ್ಪ!’
’ಆನ್ನೆಟಳಿಗೆ ಗಂಡು ಮಗನೇ ಹುಟ್ಟಬೇಕೆಂದು ನನ್ನ ಆಸೆ ಕಣಮ್ಮ.’
’ಖಂಡಿತವಾಗಿಯೂ ಗಂಡು ಮಗನೇ ಹುಟ್ಟುತ್ತಾನೆ ಕಣಪ್ಪ. ಪ್ರತಿಭಾರಿ ಕಾರ್ಡುಗಳನ್ನು ತೆರೆದು ನೋಡಿದಾಗಲೂ ಫಲಿತಾಂಶ ಒಂದೇ: ಗಂಡು ಮಗು!’
’ಓ, ಮರೆತಿದ್ದೆ. ಪಪ್ಪನ ಪತ್ರಿಕೆಗಳನ್ನು ತಂದಿದ್ದೇನೆ.’ ಅವನೆಂದ. ಆನ್ನೆಟಳ ಅಪ್ಪನಿಗೆ Paris-Soir ಪತ್ರಿಕೆ ಓದುವ ಅಭ್ಯಾಸವಾಗಿತ್ತು. ಫ್ರಾನ್ಸ್ ವಾಸ್ತವತೆಯನ್ನು ಒಪ್ಪಿಕೊಂಡು ಯುರೋಪಿನಲ್ಲಿ ಜರ್ಮನಿ ತರಲು ಉದ್ದೇಶಿಸಿರುವ ಸುಧಾರಣೆಗಳನ್ನು ಬೆಂಬಲಿಸಬೇಕು. ಕಡಲ ಮೇಲಿನ ಜರ್ಮನ್ ಪ್ರಭುತ್ವ ಪ್ರಶ್ನಾತೀತ. ಇಂಗ್ಲೆಂಡು ಹತಾಶ ಸ್ಥಿತಿಗೆ ತಲುಪಿದೆ. ಅಮೇರಿಕಾ ಅದಕ್ಕೆ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲ. ಈ ಸಂದರ್ಭದಲ್ಲಿ ಫ್ರಾನ್ಸ್ ಜರ್ಮನಿಯ ಬೆಂಬಲಕ್ಕೆ ನಿಂತು ತನ್ನ ಗತ ವೈಭವವನ್ನು ಮರಳಿಪಡೆಯಬೇಕು ಎಂಬ ಒಕ್ಕಣೆಯ ಲೇಖನಗಳು ಅದರಲ್ಲಿರುತ್ತಿದ್ದವು. ಅದನ್ನು ಬರೆಯುತ್ತಿದ್ದವರು ಜರ್ಮನರಲ್ಲ, ಫ್ರೆಂಚರು! ಆ ಪತ್ರಿಕೆಯ ಅಭಿಪ್ರಾಯಗಳಿಗೆ ಕ್ರಮೇಣ ಪೆರಿಯೆರ್ ಕೂಡ ತಲೆದೂಗತೊಡಗಿದ. ಯೆಹೂದ್ಯರನ್ನು ಮತ್ತು ಶ್ರೀಮಂತರನ್ನು ನಿರ್ನಾಮಮಾಡಿದರೆ ಎಲ್ಲವೂ ಸರಿಯಾಗುತ್ತದೆ ಎಂಬ ತೀರ್ಮಾನಕ್ಕೆ ಪೆರಿಯೆರ್ ಕೂಡ ಬಂದರು.

ಪಿಯೆರಿಯ ಸಾವಿನ ಸುದ್ಧಿ ಗೊತ್ತಾದ ಹತ್ತು ದಿನಗಳ ನಂತರ ಗಂಡ ಹೆಂಡಿರು ಮೊದಲೇ ನಿಶ್ಚಯಿಸಿದಂತೆ ಮೇಡಮ್ ಪೆರಿಯೆರ್ ರಾತ್ರಿ ಊಟದ ವೇಳೆಯಲ್ಲಿ ಆನ್ನೆಟಳನ್ನು ಉದ್ದೇಶಿಸಿ ಹೀಗೆಂದಳು:
’ನಾಳೆ ಊಟಕ್ಕೆ ಆಹ್ವಾನಿಸಿ ನಾನು ಹ್ಯಾನ್ಸನಿಗೆ ಪತ್ರ ಬರೆದಿದ್ದೇನೆ.’
’ನೀನು ಮೊದಲೇ ತಿಳಿಸಿದ್ದಿದ್ದಕ್ಕಾಗಿ ಧನ್ಯವಾದಗಳು ಕಣಮ್ಮ.  ನಾನು ನನ್ನ ರೂಮಿನಲ್ಲಿರುತ್ತೇನೆ. ಹೊರಗೆ ಬರುವುದಿಲ್ಲ.’ ಆನ್ನೆಟ್ ಎಂದಳು.
’ಸುಮ್ಮನೆ ಮೂರ್ಖಳ ಹಾಗೆ ಮಾತನಾಡಬೇಡ. ಸ್ವಲ್ಪ ವಾಸ್ತವವನ್ನು ಅರಿಯುವ ಪ್ರಯತ್ನವನ್ನು ಮಾಡು. ಪಿಯೆರಿ ಸತ್ತು ಹೋಗಿದ್ದಾನೆ. ನಿನ್ನನ್ನು ಮದುವೆಯಾಗಲು ಹ್ಯಾನ್ಸ್ ಮುಂದೆ ಬಂದಿದ್ದಾನೆ. ಅವನಷ್ಟು ಸ್ಪುರದ್ರೂಪಿಯಾದ ತರುಣ ತಾನಾಗಿಯೇ ಒಪ್ಪಿ ಬರುತ್ತಿರುವಾಗ ನಿರಾಕರಿಸುವುದು ಮೂರ್ಖತನದ ಪರಮಾವಧಿ. ಅಷ್ಟೇ ಅಲ್ಲ, ಅವನು ನಮ್ಮೊಟ್ಟಿಗೆಯೇ ಇದ್ದು ಇಲ್ಲೇ ಬೇಸಾಯ ಮಾಡಲು ತಯಾರಾಗಿದ್ದಾನೆ. ನೀನೇ ನೋಡುತ್ತಿರುವಂತೆ ನಿನ್ನ ಅಪ್ಪ ಇನ್ನು ಎಷ್ಟು ದಿನಾಂತ ಕೆಲಸ ಮಾಡಬಲ್ಲರು? ನಮಗೆ ಮುದುಕರಿಗೂ ಒಂದು ಆಸರೆ ಬೇಡವೇ? ಅವನ ಖರ್ಚಿನಲ್ಲೇ ಒಂದು ಹೊಸ ಟ್ರ್ಯಾಕ್ಟರ್ ಮತ್ತು ನೇಗಿಲನ್ನು ತರಿಸಲು ಅವನು ಹೊರಟಿದ್ದಾನೆ. ಆಗಿದ್ದು ಆಗಿ ಹೋಯಿತು. ನಿನ್ನ ಭವಿಷ್ಯವನ್ನೂ ನೋಡು.’

’ಅಮ್ಮಾ, ನೀನು ಸುಮ್ಮನೇ ನಿನ್ನ ಸಮಯವನ್ನು ಹಾಳು ಮಾಡುತ್ತಿದ್ದೀಯಾ. ನಾನು ಮೊದಲಿಂದಲೂ ದುಡಿಯುತ್ತಿದ್ದೆ. ಮುಂದೆಯೂ ದುಡಿಯಲು ಶಕ್ತಳಾಗಿದ್ದೇನೆ. ಆ ಮನುಷ್ಯನನ್ನು ಮಾತ್ರ ನಾನು ಯಾವುದೇ ಕಾರಣಕ್ಕೂ ಒಪ್ಪಲು ತಯಾರಿಲ್ಲ. ಅವನನ್ನು ಹೇಸಿಗೆ ಪಡುತ್ತೇನೆ. ಅವನ ಆಹಂಕಾರ, ದರ್ಪ ಕಂಡಾಗ ನನ್ನ ಮೈಯೆಲ್ಲಾ ಉರಿದು ಹೋಗುತ್ತದೆ. ಅವನನ್ನು ಸಾಯಿಸುವಷ್ಟು ಕ್ರೋಧ ನನ್ನಲ್ಲಿ ಕುದಿಯುತ್ತಿದೆ. ಅಷ್ಟಕ್ಕೂ ನನಗೆ ಸಮಾಧಾನವಾಗಲಾರದು. ಅವನಿಗೆ ಜೀವಮಾನದಲ್ಲೇ ಮರೆಯಲಾರದಂತ ಪಾಠ ಕಲಿಸದೆ ಬಿಡುವವಳಲ್ಲ ನಾನು..’
’ನೀನು ಸೇಡು ತೀರಿಸುವ ಮಾತುಗಳನ್ನು ಆಡುತ್ತಿದ್ದೀಯಾ ಮಗಳೇ.. ಬುದ್ಧಿವಂತಳ ಹಾಗೆ ಅಲ್ಲ.’
’ನಿನ್ನ ತಾಯಿ ಹೇಳುತ್ತಿರುವುದು ನಿಜ ಮಗಳೇ.’ ಪೆರಿಯೆರ್ ಹೇಳತೊಡಗಿದ. ’ಸೋತವರಿಗೆ ಆಯ್ಕೆಗಳಿಲ್ಲ ಮಗಳೇ.. ಅದರ ಪರಿಣಾಮಗಳನ್ನು ನಾವು ಅನುಭವಿಸಲೇ ಬೇಕು. ರಾಜಿಯಾಗಲೇ ಬೇಕು. ನಾವು ಅವರಿಗಿಂತ ಬುದ್ಧಿವಂತರು. ಸ್ವಲ್ಪ ಸಹನೆಯಿಂದ ಕಾದರೆ ನಾವು ಅವರ ಮೇಲೆ ಜಯಗಳಿಸಬಹುದು. ಈವರೆಗೆ ಫ್ರಾನ್ಸಿನಲ್ಲಿ ಎಲ್ಲವೂ ಸರಿಯಾಗಿತ್ತೆಂದೂ ಹೇಳುವುದಕ್ಕಾಗುತ್ತಿಲ್ಲ. ಈ ಯೆಹೂದ್ಯರು ಮತ್ತು ಶ್ರೀಮಂತರು ನಮ್ಮಂತ ಸಾಮಾನ್ಯ ಜನರ ರಕ್ತವನ್ನು ಹೀರಿದರು. ವಾರ್ತಾ ಪತ್ರಿಕೆಗಳನ್ನು ಓದುತ್ತಿದ್ದರೆ ನಿನಗೆಲ್ಲವೂ ಅರ್ಥವಾಗುತ್ತದೆ.’
’ನೀನು ಓದುತ್ತಿರುವ ಪತ್ರಿಕೆಯನ್ನು ನಂಬುತ್ತೀಯಾ ಅಪ್ಪ? ಅದು ಜರ್ಮನರು ಓದುವ ಪತ್ರ. ಅದನ್ನು ನಿನಗೂ ಓದಲು ತರುತ್ತಿದ್ದಾನೆ ಆ ರಾಕ್ಷಸ. ಅದಕ್ಕೆ ಬರೆಯುತ್ತಿರುವವರೆಲ್ಲಾ ದೇಶದ್ರೋಹಿಗಳು. ಜರ್ಮನರ ಎಂಜಲಿಗೆ ಹಾತೊರೆಯುತ್ತಿರುವ ನಾಯಿಗಳು. ಅವರೊಮ್ಮೆ ನಮ್ಮ ಜನರ ಕೈಗೆ ಸಿಕ್ಕಿ ಹಾಕಿಕೊಳ್ಳುವ ದಿನಗಳನ್ನು ನಾನು ಎದುರುನೋಡುತ್ತಿದ್ದೇನೆ.’
ಮೇಡಮ್ ಪೆರಿಯೆರ್ ಸಹನೆ ಕಳೆದುಕೊಳ್ಳತೊಡಗಿದಳು.

’ಆ ಹುಡುಗನ ಮೇಲೆ ನಿನಗೆ ಇನ್ನೂ ಏಕಿಷ್ಟು ದ್ವೇಷ? ಹೌದು ಅವನು ನಿನ್ನ ಮೇಲೆ ಅತ್ಯಾಚಾರವನ್ನೆಸಗಿದ. ಅವನು ನಶೆಯಲ್ಲಿದ್ದ. ಪ್ರಪಂಚದಲ್ಲಿ ಹೆಂಗಸರ ಮೇಲೆ ಇದೇನು ಮೊದಲ ಭಾರಿ ನಡೆದ ಅತ್ಯಾಚಾರವಲ್ಲ ತಾನೆ? ಗಂಡಸರು ಹೆಂಗಸರ ಮೇಲೆ ಅತ್ಯಾಚಾರ ಮಾಡಿದ್ದಾರೆ, ಮುಂದೂ ಮಾಡುತ್ತಲೇ ಇರುತ್ತಾರೆ. ಅವನು ನಿನ್ನ ತಂದೆಯ ಮೇಲೆ ರಕ್ತ ಬರುವಂತೆ ಕೈ ಮಾಡಿದ್ದ. ಅದಕ್ಕೆ? ಅವನನ್ನು ಕೊಲ್ಲಲು ನಿನ್ನ ತಂದೆ ಏನಾದ್ರು ಜೇಬಿನಲ್ಲಿ ಚೂರಿಯನ್ನು ಬಚ್ಚಿಟ್ಟುಕೊಂಡು ತಿರುಗಾಡುತ್ತಿದ್ದಾರೆಯೇ?’
’ಅದೊಂದು ಕಹಿ ಘಟನೆ. ನಾನು ಮರೆತು ಬಿಟ್ಟಿದ್ದೇನೆ.’ ಪೆರಿಯೆರ್ ಹೇಳಿದ.

ಆನ್ನೆಟ್ ಜೋರಾಗಿ ನಕ್ಕಳು.
’ನೀನು ಆ ಯೇಸುಕ್ರಿಸ್ತನ ನಿಜವಾದ ಅನುಯಾಯಿ ಕಣಪ್ಪ. ಅನ್ಯಾಯವನ್ನು ಬೇಗ ಮರೆಯುತ್ತೀಯಾ! ನೀನೊಬ್ಬ ಪಾದ್ರಿಯಾಗಬೇಕಿತ್ತು!’
’ಪರಿಸ್ಥಿತಿಗನುಗುಣವಾಗಿ ರಾಜಿಯಾಗಿದ್ದು ಅವರ ತಪ್ಪೇನು?’ ಮೇಡಮ್ ಪೆರಿಯೆರ್ ಸಿಟ್ಟಿನಿಂದ ಕೇಳಿದಳು. ನಾವು ಇದುವರೆಗೂ ಹಸಿವಿನಿಂದ ಸತ್ತಿಲ್ಲವೆಂದರೆ ಅದಕ್ಕೆ ಆ ಹುಡುಗನೇ ಕಾರಣ. ಇದನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೋ!’
’ಅಮ್ಮಾ, ನಿನಗೆ ಕಿಂಚಿತ್ತಾದ್ರೂ ಸ್ವಾಭಿಮಾನವಿದ್ದಿದ್ದರೆ ಅವನು ತಂದ ವಸ್ತುಗಳನ್ನು ಅವನ ಮುಖದ ಮೇಲೆ ಎಸೆಯುತ್ತಿದ್ದೆ!’
’ಅಂದರೆ ಅವನು ತಂದ ವಸ್ತುಗಳನ್ನು ನೀನು ಮುಟ್ಟಲೇ ಇಲ್ಲ?’
’ಖಂಡಿತವಾಗಿಯೂ ಇಲ್ಲ.’
’ನೀನು ಸುಳ್ಳು ಹೇಳುತ್ತಿದ್ದೀಯ ಎಂದು ನಿನಗೇ ಗೊತ್ತು ಕಣೆ ಆನ್ನೆಟ್. ಅವನು ತಂದ ಬೆಣ್ಣೆ, ಚೀಜ್, ಸಾರ್ಡಿನ್ ಮೀನುಗಳನ್ನು ನೀನು ತಿಂದಿಲ್ಲ ಎನ್ನುವುದು ಒಪ್ಪುತ್ತೇನೆ. ಆದರೆ ಅವನು ತಂದ ಮಾಂಸದ ಸೂಪನ್ನು ಕುಡಿದಿಲ್ಲವೆಂದು ಆಣೆ ಮಾಡಿ ಹೇಳು? ಇವತ್ತು ತಿಂದ ಸಲಾಡಿನ ಬಗ್ಗೆ ಏನು ಹೇಳುತ್ತೀಯ? ಅವನು ಆಲಿವ್ ಎಣ್ಣೆ ತರದಿದ್ದಿದ್ದರೆ ನೀನಿಂದು ಒಣ ಸಲಾಡ್ ತಿನ್ನ ಬೇಕಿತ್ತು!’
ಆನ್ನೆಟ್ ಮೌನವಾಗಿ ಒಂದು ದೀರ್ಘ ಶ್ವಾಸವನ್ನು ಒಳಗೆ ಎಳೆದುಕೊಂಡಳು.

’ನಂಗೊತ್ತು ಕಣಮ್ಮ. ತಿನ್ನಲೇಬಾರದೆಂದು ನಿಜವಾಗಲೂ ಪ್ರಯತ್ನಪಟ್ಟಿದ್ದೆ. ಆದರೆ ಈ ದರಿದ್ರ ಹಸಿವು ತಡೆಯಲಿಕ್ಕಾಗಲಿಲ್ಲ. ಸಲಾಡಿನ ಆಶೆ ಎಷ್ಟೊಂದು ತೀವ್ರವಾಗಿತ್ತೆಂದರೆ, ಅದನ್ನು ನಾನು ತಿನ್ನಲಿಲ್ಲ. ಹೊಟ್ಟೆಯಲ್ಲಿ ಬೆಳೆಯುತ್ತಿರುವ ಆ ಮರಿ ರಾಕ್ಷಸ ತಿಂದು ಬಿಟ್ಟ!’
’ನೀನು ಏನೇ ನೆವಗಳನ್ನು ಹೇಳಿದರೂ, ಅವನು ತಂದ ಪದಾರ್ಥಗಳನ್ನು ಉಪಯೋಗಿಸಲಿಲ್ಲವೆನ್ನುವುದು ಸುಳ್ಳು.’
’ಹೌದು ಕಣಮ್ಮ. ಬಹಳಷ್ಟು ಲಜ್ಜೆ ಪಟ್ಟುಕೊಂಡು. ಅವರು ಮೊದಲು ನಮ್ಮನ್ನು ಅವರ ವಿಮಾನಗಳು, ಟ್ಯಾಂಕುಗಳಿಂದ ಬಗ್ಗು ಬಡಿದರು. ನಂತರ ನಮ್ಮನ್ನು ಉಪವಾಸ ಕೆಡವಿ! ಇದು ದೊಡ್ಡ ಸೋಲು.’
’ನಿನ್ನ ನಾಟಕೀಯ ಮಾತುಗಳು ಯಾವ ಉಪಕಾರಕ್ಕೆ ಹೆಣ್ಣೆ? ನಿನ್ನಂತ ಸುಶಿಕ್ಷಿತ ಹೆಣ್ಣುಮಗಳಿಗೆ ಸಾಮಾನ್ಯ ಪರಿಜ್ಞಾನವೂ ಇಲ್ಲವೆಂದು ತಿಳಿದು ತುಂಬಾ ಖೇದವಾಗುತ್ತದೆ. ಆಗಿ ಹೋಗಿದ್ದನ್ನೆಲ್ಲಾ ಮರೆತುಬಿಡು. ನಿನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ಒಬ್ಬ ತಂದೆಯ ಅಗತ್ಯವಿದೆ ಎಂಬುದನ್ನು ಮರೆಯಬೇಡ!  ನಮ್ಮ ಜೊತೆಯಲ್ಲೇ ಇದ್ದು ಸಂಸಾರ ಹೂಡಿ ನಮ್ಮಂತೆಯೇ ಹೊಲದಲ್ಲಿ ಕೆಲಸ ಮಾಡುತ್ತೇನೆ ಎನ್ನುವ ಅವನು ಇಲ್ಲಿಯ ಎರಡು ಗಂಡಾಳುಗಳಿಗೆ ಸಮ ಎನ್ನುವುದನ್ನು ಯೋಚಿಸು. ಇದಕ್ಕೆ ಎನ್ನುವುದು ಸಾಮಾನ್ಯ ಪರಿಜ್ಞಾನ!’
ಭುಜಗಳನ್ನು ಹಾರಿಸಿ ಆನ್ನೆಟ್ ಸುಮ್ಮನಾದಳು. 

*****

(ಮುಂದುವರೆಯುವುದು….)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x