ತಿರಸ್ಕಾರ (ಭಾಗ 3): ಜೆ.ವಿ.ಕಾರ್ಲೊ, ಹಾಸನ

(ಇಲ್ಲಿಯವರೆಗೆ)

ಉದ್ದೇಶ? ಅದು ಅವನಿಗೂ ಗೊತ್ತಿರಲಿಲ್ಲ. ಪ್ರೀತಿಯ ಹಸಿವು, ಕಾಡುತ್ತಿರುವ ತಬ್ಬಲಿತನ ಎಂದು ಹೇಳಲು ಅವನಿಗೆ ನಾಲಿಗೆ ಹೊರಳಲಿಲ್ಲ. ಊರ ಜನರ ತಿರಸ್ಕಾರ ಅವನನ್ನು ಉಸಿರುಗಟ್ಟಿಸಿತ್ತು. ಅವರ ಇರುವನ್ನೇ ಕಡೆಗಣಿಸಿ ಪಕ್ಕಕ್ಕೆ ಮುಖ ತಿರುಗಿಸಿ ನಡೆಯುವ ಫ್ರಾನ್ಸಿಗರ ಕತ್ತನ್ನು ಹಿಡಿದು ಮುರಿಯಬೇಕೆನ್ನಿಸುವಷ್ಟು ಕ್ರೋಧ ಅವನಲ್ಲಿ ಉಂಟಾಗುತ್ತಿತ್ತು. ಕೆಲವೊಮ್ಮೆ ಅಸಹಾಯಕತೆಯಿಂದ ಗಳಗಳನೆ ಅಳಬೇಕೆಂದು ಅವನಿಗೆ ಅನಿಸುತ್ತಿತ್ತು. ತನ್ನನ್ನು ಪ್ರೀತಿಯಿಂದ ಬರಮಾಡಿಕೊಂಡು ಸ್ವಾಗತಿಸುವ ಒಂದು ಮನೆಯಿದ್ದಿದ್ದರೆ! ಇದು ಅವನ ಗುಪ್ತ ಆಸೆಯಾಗಿತ್ತು. ಆನ್ನೆಟಳಂತ ಹುಡುಗಿ ತನ್ನ ಜಾಯಮಾನಕ್ಕೆ ತಕ್ಕ ಹುಡುಗಿ ಅಲ್ಲವೆಂದು ಅವನಿಗೆ ಗೊತ್ತಿತ್ತು. ಅವನಿಗೆ ದೊಡ್ಡ ಮೈಕಟ್ಟಿನ, ತುಂಬು ಎದೆಯ, ಅವನಂತೆಯೇ ಹೊಂಗೂದಲಿನ ನೀಲಿ ಕಣ್ಣುಗಳ ಹುಡುಗಿಯರು ಇಷ್ಟವಾಗುತ್ತಿದ್ದರು. ಆ ದಿನ ಖಾಲಿ ಹೊಟ್ಟೆಯಲ್ಲಿ ವೈನ್ ಕುಡಿಯದಿದ್ದಲ್ಲಿ ಆನ್ನೆಟಳಂತ ತೆಳ್ಳನೆಯ ನಾಜೂಕು ಹುಡುಗಿಯ ತಂಟೆಗೆ ಅವನು ಹೋಗುತ್ತಲೇ ಇರಲಿಲ್ಲ.

ಮತ್ತೊಂದು ಹದಿನೈದು ದಿನಗಳವರೆಗೆ ಹ್ಯಾನ್ಸನಿಗೆ ಕ್ಯಾಂಪನ್ನು ಬಿಟ್ಟು ಹೊರಕ್ಕೆ ಹೋಗಲಾಗಲಿಲ್ಲ. ಅವನು ಅಂದು ಬಿಟ್ಟು ಬಂದ ಆಹಾರ ಪದಾರ್ಥಗಳನ್ನು ರೈತ ಮತ್ತು ಅವನ ಹೆಂಡತಿ ಮುಗಿಸಿರಬೇಕು. ಆನ್ನೆಟಳ ಬಗ್ಗೆ ಏನೂ ಹೇಳುವಂತಿರಲಿಲ್ಲ. ತಿಂದರೂ ತಿಂದಿರಬಹುದು! ಈ ಫ್ರೆಂಚರು ಪುಕ್ಕಟೆ ಸಿಕ್ಕರೆ ಏನೂ ಬಿಡುವವರಲ್ಲ! ಫ್ರೆಂಚರು ಅತ್ಯಂತ ಹೀನಸ್ಥಿತಿಗೆ ಮುಟ್ಟಿದ್ದರು. ಆನ್ನೆಟಳಿಗೆ ಅವನ ಮೇಲೆ ತಿರಸ್ಕಾರವಿರುವುದು ಎದ್ದು ಕಾಣುತ್ತಿತ್ತು. ಆದರೆ, ಚೀಜು ಚೀಜೇ! ಹಂದಿಮಾಂಸ ಹಂದಿಮಾಂಸವೇ! ಆನ್ನೆಟಳ ಬಗ್ಗೆ ಅವನು ಇತ್ತೀಚೆಗೆ ಬಹಳಷ್ಟು ಯೋಚಿಸುತ್ತಿದ್ದ. ಸಾಮಾನ್ಯವಾಗಿ ಹೆಂಗಸರೇ ಅವನ ಮೃಗೀಯ ಆಕರ್ಷಣೆಗೆ ಒಳಪಟ್ಟು ಅವನ ಬೆನ್ನು ಹತ್ತುತ್ತಿದ್ದರು. ಹಾಗಾಗಿ ಆನ್ನೆಟಳ ತಿರಸ್ಕಾರ ಅವನೇ ಅವಳ ಬೆನ್ನು ಹತ್ತುವಂತೆ ಮಾಡಿತ್ತು. ಕ್ರಮೇಣ ಅವಳು ಅವನ ಪ್ರೇಮಪಾಶದಲ್ಲಿ ಬಿದ್ದರೂ ಬಿದ್ದಳೆ! ಹೆಂಗಸರು ಅವರ ಪ್ರಥಮ ಪ್ರೇಮಿಯನ್ನೇ ನಿಜವಾಗಿಯೂ ಪ್ರೀತಿಸುವುದೆಂದು ಅವನ ಸ್ನೇಹಿತರು ಮ್ಯೂನಿಕಿನಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಒಂದು ಹುಡುಗಿಯನ್ನು ಒಲಿಸಿಕೊಳ್ಳುವ ಮನಸ್ಸು ಮಾಡಿದರೆ ಅವನೆಂದೂ ಸೋತಿರಲಿಲ್ಲ. ಅವನ ತುಟಿಗಳ ಮೇಲೊಂದು ಮುಗುಳ್ನಗು ಮೂಡಿ ಮಾಯವಾಯಿತು.

ಅವನಿಗೆ ಮತ್ತೊಮ್ಮೆ ಕ್ಯಾಂಪಿನಿಂದ ಹೊರಗೆ ಹೋಗುವ ಸಂದರ್ಭ ಒದಗಿ ಬಂತು. ಚೀಜ್, ಬೆಣ್ಣೆ, ಸಕ್ಕರೆ ಕಾಫಿಪುಡಿ ಮತ್ತು ಒಂದು ಸಾಸೆಜ್ ಟಿನ್ನನ್ನು ಗಂಟು ಕಟ್ಟಿ ಅವನು ಬೈಕನ್ನೇರಿದ. ಅವನು ಫಾರಮ್ಮನ್ನು ತಲುಪಿದಾಗ ಅವನಿಗಿಂದು ಆನ್ನೆಟ್ ಕಾಣಸಿಗಲಿಲ್ಲ. ಹೆಂಗಸೊಬ್ಬಳೇ ಅಂಗಳದಲ್ಲಿ ಏನೋ ಕೆದಕುತ್ತಿದ್ದಳು. ಹ್ಯಾನ್ಸನ ಕೈಯಲ್ಲಿನ ಗಂಟನ್ನು ನೋಡಿ ಹೆಂಗಸಿನ ಮುಖ ಅರಳಿತು. ಅವಳು ಅವನನ್ನು ಅಡುಗೆ ಕೋಣೆಗೆ ಕರೆದೊಯ್ದಳು. ಹ್ಯಾನ್ಸ್ ಮೇಜಿನ ಮೇಲೆ ಗಂಟನ್ನು ಬಿಚ್ಚಿದ. ಹೆಂಗಸಿನ ಕಣ್ಣುಗಳು ಒದ್ದೆಯಾದವು.
‘ನೀನೆಷ್ಟು ಒಳ್ಳೆಯವನು!’ ಅವಳೆಂದಳು.
‘ಅಮ್ಮಾ, ನಾನು ಕುಳಿತುಕೊಳ್ಳಲೇ?’ ಹ್ಯಾನ್ಸ್ ವಿನಯಪೂರ್ವಕವಾಗಿ ಕೇಳಿದ.
‘ಕೂತ್ಕೊಪ್ಪಾ ಕೂತ್ಕೊ.’ ಅವಳ ದೃಷ್ಟಿ ಕಿಟಕಿಯಿಂದ ಹೊರಗೆ ಹರಿಯಿತು. ಅವಳಿಗೆ ಈ ಸಮಯದಲ್ಲಿ ಆನ್ನೆಟ್ ಬರುವುದು ಇಷ್ಟವಿಲ್ಲವೆಂದು ಹ್ಯಾನ್ಸನಿಗೆ ಆರ್ಥವಾಯಿತು. ‘ನಿನಗೊಂದು ಗ್ಲಾಸ್ ವೈನ್ ಕೊಡಲೇನಪ್ಪಾ?’
‘ವಾಹ್! ತುಂಬಾ ಥ್ಯಾಂಕ್ಸ್ ಕಣಮ್ಮ.’
ತಾನು ತರುತ್ತಿರುವ ಉಡುಗೊರೆಗಳಿಗಾಗಿ ಈ ಪರಿಯ ಆತಿಥ್ಯವೆಂದು ಅವನಿಗೆ ಅರ್ಥವಾಯಿತು.
‘ಹಂದಿಮಾಂಸ ಚೆನ್ನಾಗಿತ್ತೇನಮ್ಮ?’ ಅವನು ಕೇಳಿದ.
‘ತುಂಬಾ ಚೆನ್ನಾಗಿತ್ತು ಕಣಪ್ಪ.’
‘ಈ ಭಾರಿ ತರಲಿಕ್ಕಾಗಲಿಲ್ಲ. ಮುಂದಿನ ಭಾರಿ ಖಂಡಿತಾ ತರುತ್ತೇನೆ. ಆನ್ನೆಟ್ ತಿಂದಳೆ?’
‘ಅವಳು ಕಿಂಚಿತ್ತೂ ಮುಟ್ಟಲಿಲ್ಲ. ಉಪವಾಸ ಸತ್ತರೂ ನಿನ್ನ ಎಂಜಲನ್ನು ಮುಟ್ಟುವುದಿಲ್ಲ ಎನ್ನುತ್ತಾಳೆ.’

‘ಹುಚ್ಚು ಹುಡುಗಿ!’
‘ನಾನೂ ಅದನ್ನೇ ಹೇಳಿದೆ ಕಣಪ್ಪ. ಊಟ ಮುಂದಿಟ್ಟುಕೊಂಡು ಉಪವಾಸ ಮಾಡುತ್ತೇನೆಂದು ಹೇಳುವವರಿಗೆ ಏನನ್ನಬೇಕು!’
ಅವನು ವೈನ್ ಕುಡಿಯುತ್ತಿದ್ದಂತೆಯೇ ಅವರಿಬ್ಬರೂ ಬಹಳಷ್ಟು ಮಾತನಾಡಿದರು. ಹೆಂಗಸಿನ ಹೆಸರು ಶ್ರೀಮತಿ ಪೆರಿಯೆರ್. ಅವರ ಕುಟುಂಬದಲ್ಲಿ ಅವರು ಮೂವರು ಮಾತ್ರವೋ ಅಥವಾ ಮತ್ತೂ ಮಕ್ಕಳಿದ್ದಾರೋ ಎಂದು ಅವನು ಕೇಳಿದ. ಒಬ್ಬ ಹುಡುಗನಿದ್ದ. ಅವನು ಮೊದಲೇ ಸೈನ್ಯಕ್ಕೆ ಸೇರಿದ್ದ. ಅವನೀಗ ಇಲ್ಲ. ಅವನು ಯುದ್ಧದಲ್ಲಿ ಮಡಿದಿರಲಿಲ್ಲ. ನ್ಯುಮೋನಿಯದಿಂದ!
ಹ್ಯಾನ್ಸ್ ಸಂತಾಪದ ಮಾತುಗಳನ್ನಾಡಿದ.

‘ಅವನು ಸತ್ತಿದ್ದೇ ಒಳ್ಳೆದಾಯ್ತೇನೋ ಎಂದು ನನಗೆ ಕೆಲವೊಮ್ಮೆ ಅನ್ನಿಸುತ್ತದೆ. ಅವನೂ ನಮ್ಮ ಆನ್ನೆಟಳಂತೆನೇ! ಸೋಲಿನ ಕಹಿ ಜೀರ್ಣಿಸಿಕೊಳ್ಳಲು ಅವನಿಗೆ ಸಾಧ್ಯವಾಗುತ್ತಿರಲಿಲ್ಲವೇನೋ! ನಮಗೆ ಮೋಸ ಮಾಡಿದರು ಕಣಪ್ಪ!’ ಶ್ರೀಮತಿ ಪೆರಿಯೆರ್ ಹೇಳಿದಳು.
‘ನೀವು ಆ ಪೋಲೇಂಡ್ ದೇಶದವರ ಪರ ವಹಿಸಿಕೊಂಡು ಯುದ್ಧಕ್ಕೆ ಇಳಿಯಲೇಬಾರದಿತ್ತು. ಅವರು ನಿಮಗೇನಾಗಬೇಕಿತ್ತು?’
‘ನೀನು ಹೇಳುವುದೂ ಸರಿಯೇ! ಆ ನಿಮ್ಮ ಹಿಟ್ಲರನಿಗೆ ಪೋಲೆಂಡಿಗೆ ಹೋಗಲು ನಾವು ಅಡ್ಡಿಪಡಿಸದಿದ್ದಿದ್ದರೆ ಅವನು ನಮ್ಮ ತಂಟೆಗೆ ಬರುತ್ತಿರಲೇ ಇಲ್ಲವೇನೋ?’
ತಾನು ಮತ್ತೊಮ್ಮೆ ಬರುವಾಗ ಹಂದಿಮಾಂಸವನ್ನು ತರುತ್ತೇನೆಂದು ಹ್ಯಾನ್ಸ್ ಮೇಲೆದ್ದ.

ಹ್ಯಾನ್ಸನ ಅದೃಷ್ಟ ಚೆನ್ನಾಗಿತ್ತು. ಅವನಿಗೆ ವಾರಕ್ಕೆರಡು ಭಾರಿ ಹತ್ತಿರದ ಪೇಟೆಗೆ ಹೋಗಿ ಬರುವ ಕೆಲಸ ಸಿಕ್ಕಿತು. ಹಾಗೇ ಫಾರಮ್ಮಿಗೆ ಹೋಗಿ ಬರುವ ಅವಕಾಶವೂ ಒದಗಿ ಬಂತು. ಅಲ್ಲಿಗೆ ಬರಿಗೈಯಲ್ಲಿ ಹೋಗುವ ತಪ್ಪನ್ನು ಮಾಡದಂತೆ ಅವನು ಎಚ್ಚರವಹಿಸುತ್ತಿದ್ದ. ಅವನು ಏನೇ ಮಾಡಿದರೂ ಆನ್ನೆಟ್ ಅವನನ್ನು ನಿಕೃಷ್ಟವಾಗಿ ಕಾಣುತ್ತಿದ್ದಳೇ ಹೊರತು ಬೇರ್ಯಾವ ಪ್ರಯೋಜನವೂ ಆಗಲಿಲ್ಲ. ಅವನೊಂದು ಕ್ರಿಮಿಯೆಂಬಂತೆ ಅವಳು ನಡೆದುಕೊಳ್ಳುತ್ತಿದ್ದಳು. ಕೆಲವೊಮ್ಮೆ ಅವಳ ಮಾತಿನ ಮೊನಚು ಎಷ್ಟೊಂದು ಕಠಿಣವಾಗಿರುತ್ತಿತ್ತೆಂದರೆ ಅವನು ಅವಳ ಕುತ್ತಿಗೆಯನ್ನು ಬಲವಾಗಿ ಹಿಸುಕಿ ಸಾಯಿಸಬೇಕೆನ್ನುವಷ್ಟು ಉರಿದು ಹೋಗುತ್ತಿದ್ದ. ಅವನೊಮ್ಮೆ ಫಾರಮ್ಮಿಗೆ ಬಂದಾಗ ಆನ್ನೆಟ್ ಒಬ್ಬಳೇ ಇದ್ದಳು. ಅವನನ್ನು ಕಾಣುತ್ತಿದ್ದಂತೆ ಅವಳು ಎದ್ದು ಹೊರಹೋಗಲು ಅಣಿಯಾದಳು. ಹ್ಯಾನ್ಸ್ ಅವಳಿಗೆ ಅಡ್ಡ ನಿಂತ.
‘ಆನ್ನೆಟ್, ಸ್ವಲ್ಪ ಇರು. ನಿನ್ನೊಡನೆ ಮಾತನಾಡಬೇಕು.’ ಎಂದ.
‘ಮಾತಾಡು.. ಮಾತಾಡು.. ನಾನೊಬ್ಬಳು ಅಸಹಾಯಕ ಹೆಣ್ಣು.’ ಎಂದಳು ವ್ಯಂಗ್ಯದಿಂದ.

‘ಹಟಮಾರಿ ಹೆಣ್ಣೇ.. ನಾವಿಲ್ಲಿ ಬಹಳ ಸಮಯವಿರುತ್ತೇವೆ. ಮುಂದಿನ ದಿನಗಳು ನಿಮಗೆ ಫ್ರೆಂಚರಿಗೆ ಬಹಳಷ್ಟು ಕಷ್ಟಕರವಾಗಲಿವೆ. ನಾನು ನಿಮಗೆ ಬಹಳಷ್ಟು ಸಹಾಯ ಮಾಡಬಲ್ಲೆ. ನಿನ್ನ ತಂದೆ ತಾಯಿಯರಂತೆ ನೀನೂ ಪರಿಸ್ಥಿತಿಯೊಂದಿಗೆ ರಾಜಿಯಾಗುವುದು ಬುದ್ಧಿವಂತಿಕೆಯ ಲಕ್ಷಣ’ ಎಂದ.
ಅವಳ ತಂದೆ ಪೂರ್ತಿಯಲ್ಲದಿದ್ದರೂ ಎದುರಿಗೇ ತಿರಸ್ಕಾರ ತೋರಿಸದಷ್ಟು ಅವನೊಡನೆ ರಾಜಿಯಾಗಿದ್ದ. ಅವನಿಗೆ ಸಿಗರೇಟು ತಂದು ಕೊಡುವಂತೆ ಸ್ವತಃ ಅವನೇ ಕೇಳಿಕೊಂಡಿದ್ದ. ಹ್ಯಾನ್ಸ್ ಅವನ ಬಳಿ ದುಡ್ಡು ತೆಗೆದುಕೊಳ್ಳಲು ನಿರಾಕರಿಸಿದಾಗ, ‘ಥ್ಯಾಂಕ್ಸ್’ ಎಂದು ಹೇಳಿ ಸುಮ್ಮನಾಗಿದ್ದ. ಹ್ಯಾನ್ಸ್ ಕೂಡ ಒಬ್ಬ ರೈತನ ಮಗನಾದ್ದರಿಂದ ಅವರಿಬ್ಬರೂ ವ್ಯವಸಾಯದ ಬಗ್ಗೆ ಬಹಳಷ್ಟು ಮಾತನಾಡುತ್ತಿದ್ದರು. ಕೂಲಿಕಾರರು, ಬೀಜ, ಗೊಬ್ಬರ ಮತ್ತು ಈಗ ದನಗಳೂ ಇಲ್ಲದೆ ತಾನು ಭಿಕಾರಿಯಾಗಿದ್ದೇನೆಂದು ಆನ್ನೆಟಳ ಅಪ್ಪ ಅವಲತ್ತುಕೊಳ್ಳುತ್ತಿದ್ದ.
‘ನನ್ನ ತಂದೆ ತಾಯಿಯರಂತೆ ನಾನೂ ಇರೋಕೆ ಯಾಕಾಗೊಲ್ಲ ಎಂದು ಕೇಳ್ತಿದ್ದೀಯಲ್ವಾ? ಇಲ್ಲಿ ನೋಡು..’ ಎನ್ನುತ್ತಾ ಆನ್ನೆಟ್ ತನ್ನ ಸ್ಕರ್ಟನ್ನು ಹೊಟ್ಟೆಗೆ ಬಿಗಿಯಾಗಿ ಸುತ್ತುತ್ತಾ ತೋರಿಸಿದಳು. ಅವನು ಹೌಹಾರಿದ. ಕೆನ್ನೆಗಳು ರಂಗೇರಿದವು.
‘ನೀನು ಪ್ರೆಗ್ನೆಂಟ್!?’ ಅವನು ತೊದಲುತ್ತಾ ಕೇಳಿದ.
‘ಎಂಥಾ ನಾಚಿಕೆಗೇಡು!’ ಅವಳು ಕುರ್ಚಿಯ ಮೇಲೆ ಕುಸಿದು ಕುಳಿತು ರೋಧಿಸತೊಡಗಿದಳು. 

‘ಮೈ ಡಿಯರ್..’ ಅವನು ಎದ್ದು ಅವಳನ್ನು ಆಲಂಗಿಸಲು ಮುಂದೆ ಹೋದ.
‘ದರಿದ್ರ ಮುಖದವನೇ ನನ್ನನ್ನು ಮುಟ್ಟಬೇಡ!’ ಎನ್ನುತ್ತಾ ಅವಳು ಎದ್ದು ಅವನನ್ನು ದೂರ ತಳ್ಳಿದಳು. ‘ನೀನು ಈವರೆಗೆ ಕೊಟ್ಟ ಶಿಕ್ಷೆ ಸಾಲದೇನು?’ ಎನ್ನುತ್ತಾ ಅವಳು ಅಲ್ಲಿಂದ ಬಿರುಗಾಳಿಯಂತೆ ಎದ್ದು  ಮಾಯವಾದಳು. ಹ್ಯಾನ್ಸನಿಗೆ ಏನು ಮಾಡುವುದೆಂದೇ ತೋಚಲಿಲ್ಲ. ಅವನ ಮಿದುಳು ನಿಷ್ಕ್ರಿಯವಾಗಿತ್ತು.

ಆ ಸ್ಥಿತಿಯಲ್ಲೇ ಅವನು ಕ್ಯಾಂಪಿಗೆ ವಾಪಸ್ಸಾದ. ಅಂದು ಬಹಳ ಹೊತ್ತು ಅವನಿಗೆ ನಿದ್ದೆಯೇ ಹತ್ತಿರ ಸುಳಿಯಲಿಲ್ಲ. ಕಣ್ಣು ಮುಚ್ಚಿದರೂ ಆನ್ನೆಟಳ ಬೆಳೆಯುತ್ತಿದ್ದ ಹೊಟ್ಟೆಯೇ ಅವನಿಗೆ ಕಾಣಿಸುತ್ತಿತ್ತು. ತನ್ನ ಮಗು ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಸಂಗತಿ ಜೀರ್ಣಿಸಿಕೊಳ್ಳಲು ಅವನಿಗೆ ಸಾಧ್ಯವಾಗುತ್ತಿರಲಿಲ್ಲ. ಅಡುಗೆಮನೆಯ ಕುರ್ಚಿಯ ಮೇಲೆ ಕುಳಿತು ಅಸಹಾಯಕತೆಯಿಂದ ಅವಳು ರೋಧಿಸುತ್ತಿರುವ ದೃಶ್ಯ ಅವನ ಕಣ್ಣಮುಂದೆ ಹಾದುಹೋಗುತ್ತಿತ್ತು. ಹೀಗೆಯೇ ಹೊರಳಾಡುತ್ತಿದ್ದ ಅವನಿಗೆ ಕೊನೆಗೂ ನಿದ್ರೆ ಬೀಳುವಂತಾದಾಗ ಒಮ್ಮೆಲೇ ತಾನು ಆನ್ನೆಟಳನ್ನು ಪ್ರೀತಿಸುತ್ತಿರುವ ಸತ್ಯ ಗೋಚರಿಸಿತು! ಅವನಿಗೆ ಈ ಸತ್ಯ ಎಷ್ಟೊಂದು ಹಟಾತ್ತಾಗಿ ಗೋಚರಿಸಿಸಿತೆಂದರೆ, ಅವನಿಗೇ ನಂಬಲಿಕ್ಕಾಗಲಿಲ್ಲ. ಅವನು ಅವಳ ಬಗ್ಗೆ ಹಲವಾರು ಭಾರಿ ಯೋಚಿಸಿದ್ದನಾದರೂ ಅವನು ಕಲ್ಪಿಸಿಕೊಂಡ ದೃಶ್ಯವೇ ಬೇರೆಯಾಗಿತ್ತು. ಅವಳೇ ಇವನ ಪ್ರೀತಿಗಾಗಿ ಅಂಗಲಾಚುವ ಸಂದರ್ಭವನ್ನು ಅವನು ಎದುರು ನೋಡುತ್ತಿದ್ದ. ಅವನು ಬಲವಂತದಿಂದ ಅವಳಿಂದ ದೋಚಿದ್ದನ್ನು ಅವಳೇ ಪ್ರೀತಿಯಿಂದ, ಖುಷಿಯಿಂದ ಅರ್ಪಿಸುವ ಗಳಿಗೆಗೆ ಕಾಯುತ್ತಿದ್ದ! ಅವನಿಗೆ ಈ ಬಗ್ಗೆ ಯಾವುದೇ ಅನುಮಾನಗಳಿರಲಿಲ್ಲ. ಆನ್ನೆಟಳನ್ನು ಕುರಿತಂತೆ ಅವನಿಗೆ ಲೈಂಗಿಕವಾಗಿ ಯಾವುದೇ ವಾಂಛೆಗಳಿರಲಿಲ್ಲ. ಅವಳು ತನಗೆ ಯಾವುದೇ ರೀತಿಯಲ್ಲೂ ಸರಿಸಾಟಿಯಲ್ಲವೆಂದುಕೊಂಡಿದ್ದ ಅವನಿಗೆ ಈಗಿನ ಪರಿಸ್ಥಿತಿ ತಿರುವುಮುರುವಾಗಿತ್ತು. ಅವನ ಹೃದಯ ಅವಳಿಗಾಗಿ ಮಿಡಿಯುತ್ತಿತ್ತು! ಇದೆಂಥಾ ವಿಚಿತ್ರ! ಕ್ರಮೇಣ ಅವನಲ್ಲಿ ಹೊಸ ಹುರುಪು ಮೂಡತೊಡಗಿತು. ಇಂತಹ ಖುಷಿ ಅವನಿಗೆ ಜೀವಮಾನದಲ್ಲೆಂದೂ ಆಗಿರಲಿಲ್ಲ. ಅವಳನ್ನು ತನ್ನ ಬಾಹುಗಳಲ್ಲಿ ಬಂಧಿಸಿ ಮುದ್ದಾಡಬೇಕೆಂಬ ಉತ್ಕಟ ಆಸೆ ಅವನಲ್ಲಿ ಮೂಡಿತು. ಆ ಶೋಕಭರಿತ ಕಣ್ಣುಗಳನ್ನು ಚುಂಬಿಸಿ ಅವಳಲ್ಲಿ ಧೈರ್ಯ ತುಂಬುವ ಆಸೆಯಾಯಿತು. ಅದು ಒಬ್ಬ ಪುರುಷನಿಗೆ ಒಬ್ಬ ಹೆಣ್ಣಿನ ಬಗ್ಗೆ ಉಂಟಾಗುವ ಸಹಜ ಆಕರ್ಷಣೆಯಂತಿರಲಿಲ್ಲ. ತನ್ನ ಬಿಗಿ ಅಪ್ಪುಗೆಯಲ್ಲಿ ಅವಳು ತನ್ನ ಕಣ್ಣುಗಳನ್ನು ಅವನ ಕಣ್ಣುಗಳಲ್ಲಿ ನೆಟ್ಟು ಮುಗುಳ್ನಗುವ ದೃಶ್ಯವನ್ನು ಅವನು ಕಲ್ಪಿಸಿಕೊಂಡಿದ್ದ. ಅವಳು ನಗೆಯಾಡಿದ್ದನ್ನೇ ಅವನು ಕಂಡಿರಲಿಲ್ಲ.

ಮುಂದಿನ ಮೂರು ದಿನ ಅವನಿಗೆ ಕ್ಯಾಂಪಿನಿಂದ ಹೊರಗೆ ಹೋಗಲು ಸಾಧ್ಯವಾಗಲಿಲ್ಲ. ಅವನಿಗೆ ಆ ಮೂರು ದಿನಗಳು ಮೂರು ಯುಗಗಳಂತೆ ಭಾಸವಾದವು. ಮೂರು ದಿನಗಳ ನಂತರ ಅವನಿಗೆ ಫಾರಮ್ಮಿಗೆ ಹೋಗುವ ಅವಕಾಶ ದೊರಕಿತು. ಅವನಿಗೆ ಆನ್ನೆಟಳ ತಾಯಿಯೊಡನೆ ಯಾರೂ ಇಲ್ಲದ ಸಮಯದಲ್ಲಿ ಮಾತನಾಡಬೇಕಿತ್ತು. ಅವನ ಅದೃಷ್ಟಕ್ಕೆ ಅವಳು ದಾರಿಯಲ್ಲೇ ಎದುರಾದಳು. ಬೆನ್ನ ಮೇಲೆ ಸೌದೆಯ ಹೊರೆಯನ್ನೊತ್ತು ಅವಳು ಮನೆಯ ಕಡೆಗೆ ಹೆಜ್ಜೆ ಹಾಕುತ್ತಿದ್ದಳು. ಅವನು ಬೈಕನ್ನು ನಿಲ್ಲಿಸಿದ. ಅವನು ತರುತ್ತಿದ್ದ ಆಹಾರ ವಸ್ತುಗಳಿಗಾಗಿ ಮಾತ್ರ ಅವಳು ತನ್ನನ್ನು ಗೌರವಿಸುತ್ತಿದ್ದಾಳೆಂದು ಅವನಿಗೆ ಗೊತ್ತಿದ್ದರೂ ಅದರ ಬಗ್ಗೆ ಅವನು ತಲೆ ಕೆಡಿಸಿಕೊಂಡಿರಲಿಲ್ಲ. ಅವಳು ಸೌಜನ್ಯದಿಂದ ಮಾತನಾಡುತ್ತಿದ್ದಳು. ಅವನಿಗೆ ಅಷ್ಟೇ ಸಾಕಿತ್ತು. ‘ಅಮ್ಮಾ, ನಿಮ್ಮಲ್ಲಿ ಸ್ವಲ್ಪ ಮಾತನಾಡುವುದಿತ್ತು. ಸೌದೆ ಹೊರೆಯನ್ನು ಸ್ವಲ್ಪ ಕೆಳಗಿಳಿಸಿ.’ ಎಂದು ಅವನು ಕೇಳಿಕೊಂಡ. ಅವಳು ಮಾರು ಮಾತನಾಡದೆ ಸೌದೆಯನ್ನು ಕೆಳಗಿಳಿಸಿ ಮುಗುಳ್ನಕ್ಕಳು. ಆಕಾಶದಲ್ಲಿ ಮೋಡಗಳು ಕವಿದಿದ್ದರೂ ಚಳಿ ಇರಲಿಲ್ಲ.
‘ಆನ್ನೆಟಳ ಬಗ್ಗೆ ನನಗೆ ಗೊತ್ತಾಯ್ತು.’ ಅವನೆಂದ.

‘ನಿನಗೇಗೆ ಗೊತ್ತಾಯ್ತು?!’ ಅವಳು ಆಶ್ಚರ್ಯಚಕಿತಳಾದಳು. ‘ಈ ಬಗ್ಗೆ ನಿನಗೆ ಗೊತ್ತಾಗಲೇಬಾರದೆಂದು ಅವಳೇ ಹೇಳಿದ್ದಳು.’
‘ನನಗೆ ಅವಳೇ ಹೇಳಿದಳು.’ ಅವನೆಂದ.
‘ನೀನೂ ಪರವಾಯಿಲ್ಲ ಕಣಪ್ಪ! ಒಂದೇ ರಾತ್ರಿಯಲ್ಲಿ ಎಷ್ಟೊಂದು ರಂಪ ಮಾಡಿಬಿಟ್ಟೆ!’

‘ನೀವಾದರೂ ನನಗೆ ತಿಳಿಸಬಹುದಿತ್ತು.’ ಅವನು ದೂಷಿಸುವ ಸ್ವರದಲ್ಲಿ ಹೇಳಿದ. ಅವಳು ಮಾತನಾಡುತ್ತಲೇ ಹೋದಳು. ಅವನನ್ನು ಕಿಂಚಿತ್ತೂ ದೂಷಿಸಲಿಲ್ಲ. ಅವಳ ಮಾತಿನ ಧಾಟಿ ಅದೊಂದು ಸ್ವಭಾವಿಕ ನೈಸರ್ಗಿಕ ವಿಕೋಪವೆಂಬಂತ್ತಿತ್ತು. ಗಟ್ಟಿಮುಟ್ಟಾದ ಹಸು ಕರು ಈಯುವ ಸಂದರ್ಭದಲ್ಲಿ ಆಕಸ್ಮತ್ತಾಗಿ ಸಾಯುವಂತೆಯೋ, ಆಕಸ್ಮಿಕವಾಗಿ ಹಿಮಮಳೆ ಸುರಿದು ಬೆಳೆ ನಷ್ಟವಾದಂತೆಯೊ.. ಎಂಬಂತೆ. ಪೃಕೃತಿ ಮುನಿದಾಗ ಯಕಃಶ್ಚಿತ್ ಮನುಷ್ಯ ಏನು ತಾನೇ ಮಾಡಬಲ್ಲನು? ತನ್ನ ದುರಾದೃಷ್ಟವನ್ನು ದೂರಬೇಕಷ್ಟೇ. ಅಂದು ರಾತ್ರಿ ಆನ್ನೆಟಳಿಗೆ ಶುರುವಾದ ಜ್ವರ ಬಹಳ ದಿನಗಳವರೆಗೆ ಇಳಿಯಲೇ ಇಲ್ಲ. ಅವಳು ಅರಚಾಡುವುದನ್ನು ಕೇಳಿ ಆನ್ನೆಟ್ ಖಂಡಿತವಾಗಿಯೂ ಮತಿಭ್ರಷ್ಟಳಾಗಿದ್ದಾಳೆಂದು ಅವರು ತಿಳಿದಿದ್ದರು. ಹಳ್ಳಿಯಲ್ಲಿದ್ದ ಒಬ್ಬನೇ ವೈಧ್ಯನನ್ನು ಸೇನೆಗೆ ಸೇರಿಸಿಕೊಂಡಿದ್ದರು. ಪೇಟೆಯಲ್ಲಿ ಇಬ್ಬರು ವೈಧ್ಯರಿದ್ದರೂ ಆ ಮುದುಕರಿಗೆ ಪೇಟೆ ಬಿಟ್ಟು ಹೊರಗೆ ಹೋಗುವ ಅಪ್ಪಣೆಯಿರಲಿಲ್ಲ. ಆನ್ನೆಟಳಿಗೆ ಅವರ ಬಳಿ ಕರೆದುಕೊಂಡು ಹೋಗುವ ಹಾಗಿರಲಿಲ್ಲ.

ಕೊನೆಗೂ ಅವಳ ಜ್ವರ ನಿಂತಿತಾದರೂ ತುಂಬಾ ನಿತ್ರಾಣಗೊಂಡಿದ್ದಳು. ಅವಳಿಗಾಗಿದ್ದ ಅಘಾತ ಹೇಳತೀರದು. ಮೊದಲಿಂದಲೂ ಅವಳ ಮಾಸಿಕ ಸ್ರಾವ ನಿಯಮಿತವಾಗಿರಲಿಲ್ಲ. ಆದ್ದರಿಂದ ಮೂರು ತಿಂಗಳು ಹೀಗೆಯೇ ಕಳೆದರೂ ಅವಳಿಗೆ ಏನೂ ಅನಿಸಿರಲಿಲ್ಲ. ಚಿಂತೆ ಎದುರಾದದ್ದು ತಾಯಿಗೆ. ಅವಳು ಮಗಳನ್ನು ಕೂಲಂಕುಷವಾಗಿ ವಿಚಾರಿಸಿದಳು. ಆನ್ನೆಟ್ ಗರ್ಭವತಿಯಾಗಿದ್ದಾಳೆಂದು ಅವಳಿಗೆ ಯಾವುದೇ ಅನುಮಾನಗಳಿರಲಿಲ್ಲ.

ಅವರ ಬಳಿ ಹಳೆಯದೊಂದು ‘ಸಿಟ್ರೋನ್’ (ನಮ್ಮ ‘ಅಂಬಾಸೆಡರ್’ ಇದ್ದಂತೆ) ಕಾರಿತ್ತು. ಜರ್ಮನರು ಫ್ರಾನ್ಸನ್ನು ಆಕ್ರಮಿಸುವ ಮೊದಲು ಮೇಡಮ್ ಪೆರಿಯೆರ್ ವಾರಕ್ಕೆ ಎರಡು ಭಾರಿಯಾದರೂ ಅದರಲ್ಲಿ ತರಕಾರಿಯನ್ನು ಹೇರಿ ಪೇಟೆಯಲ್ಲಿ ಮಾರಿ ಬರುತ್ತಿದ್ದಳು. ಈಗ ಅದಕ್ಕೆ ಉಣಿಸಲು ಅವರಲ್ಲಿ ಪೆಟ್ರೋಲು ಇರಲಿಲ್ಲ ಮತ್ತು ಮಾರುವಂತಾದ್ದೂ ಏನೂ ಇರಲಿಲ್ಲ. ಅನಿವಾರ್ಯವಾಗಿ ಅವರು ಸಿಟ್ರೋನನ್ನು ಹೊರತೆಗೆದು ಪೇಟೆಗೆ ಹೊರಡಬೇಕಾಯ್ತು. ಪೇಟೆ ಸಂಪೂರ್ಣ ಬದಲಾಗಿತ್ತು. ಎಲ್ಲಿ ನೋಡಿದರಲ್ಲಿ ಜರ್ಮನ್ ಫಲಕಗಳು ಎದ್ದು ಕಾಣುತ್ತಿದ್ದವು. ಕೆಲವು ದೊಡ್ಡ ದೊಡ್ಡ ಕಟ್ಟಡಗಳ ಮೇಲೆ ಫ್ರೆಂಚ್ ಬಾಷೆಯಲ್ಲಿ ಜರ್ಮನರ ಸೂಚನಾಫಲಕಗಳು! ಅವರ ವಯಸ್ಸಾದ ವೈಧ್ಯ ಕೊನೆಗೂ ಸಿಕ್ಕಿದ. ಮೇಡಮ್ ಪೆರಿಯರಾಳ ಅನುಮಾನವನ್ನು ಅವನು ಧೃಡಪಡಿಸಿದ. ಅವನೊಬ್ಬ ಕಥೋಲಿಕ ಕ್ರೈಸ್ತ ಧರ್ಮಭೀರು ವೈಧ್ಯನಾಗಿದ್ದ. ಗರ್ಭಪಾತಕ್ಕೆ ಒಪ್ಪಲಿಲ್ಲ. ಅವರೆಷ್ಟು ಅತ್ತರೂ ಅವನು ಕರಗಲಿಲ್ಲ.

‘ಧೃತಿಗೆಡಬೇಡಿ. ನಿಮ್ಮೊಬ್ಬರ ಮಗಳಿಗೆ ಮಾತ್ರ ಈ ಸಂಕಷ್ಟ ಎದುರಾಗಿದೆ ಎಂದು ತಿಳಿದುಕೊಳ್ಳಬೇಡಿ.’ ಎಂದು ಅವನು ಸಮಧಾನ ಮಾಡಿದ.
ಅವರು ಮತ್ತೊಬ್ಬ ವೈಧ್ಯರನ್ನು ಹುಡುಕಿಕೊಂಡು ಹೋದರು. ಕಪ್ಪು ವಸ್ತ್ರವನ್ನು ಧರಿಸಿದ್ದ ಸ್ತ್ರೀಯೊಬ್ಬಳು ಅವರನ್ನು ಎದುರುಗೊಂಡಳು. ಅವಳ ಕಣ್ಣುಗಳು ಅತ್ತು ಅತ್ತು ಬಾತಿದ್ದವು. ಜರ್ಮನರು ವೈಧ್ಯರನ್ನು ವಶಕ್ಕೆ ತೆಗೆದುಕೊಂಡಿದ್ದರು. ಅವನು ‘ಫ್ರೀಮೇಸನ್’ ಎಂಬ ಪಂಥಕ್ಕೆ ಸೇರಿದ್ದವನಾಗಿದ್ದಾನಂತೆ. ಅಂದು ಜರ್ಮನರು ಉಳಿದ ಹೋಟೆಲಿನಲ್ಲಿ ಬಾಂಬ್ ಸ್ಪೋಟಗೊಂಡು ಕೆಲವು ಜರ್ಮನ್ ಯೋಧರು ಸತ್ತಿದ್ದರಂತೆ. ಬಾಂಬ್ ಸ್ಪೋಟಿಸಿದವರು ಫ್ರೀಮೇಸನ್ ಪಂಥದವರಂತೆ! ಮೇಡಮ್ ಪೆರಿಯೆರ್ ತನ್ನ ಗೋಳಿನ ಕತೆಯನ್ನು ಆ ಹೆಂಗಸಿಗೆ ಹೇಳಿದಳು.

*****

(ಮುಂದುವರೆಯುವುದು…)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x