… ಹುಡುಗಿ ಅವನಿಗೆ ಒಂದು ಮುತ್ತು ಕೊಟ್ಟಿದ್ದರೆ ಅವನು ಸುಮ್ಮನೇ ಹೊರಟುಹೋಗಿ ಈ ಅನಾಹುತ ಜರುಗುತ್ತಿರಲಿಲ್ಲವೇನೋ? ನೆಲಕ್ಕುರುಳಿದ್ದ ರೈತನ ಮೇಲೆ ಅವನ ದೃಷ್ಟಿ ಹರಿದು ಅವನಿಗೆ ನಗು ಬಂದಿತು. ಹಾಗೆಯೇ ಹೆಂಗಸಿನೆಡೆಗೆ ನೋಡಿದಾಗ ಅವಳಿನ್ನೂ ಕಂಪಿಸುತ್ತಿದ್ದಳು. ಹುಡುಗಿಯ ನಂತರ ತನ್ನ ಸರದಿ ಎಂದು ಅವಳು ಭಾವಿಸಿರಬೇಕು! ಯಾಕೆ ಹೆಂಗ್ಸೇ ಅಳ್ತಾ ಇದ್ದೀಯಾ? ಇದು ಇವತ್ತಲ್ಲ ನಾಳೆ ಜರುಗಲೇ ಬೇಕಿತ್ತು. ಅವನು ಹಿಂಬದಿಯ ಜೇಬಿನಿಂದ ಪರ್ಸನ್ನು ಹೊರತೆಗೆದು, ತೆಗೋ ಇದರಲ್ಲಿ ನೂರು ಫ್ರಾಂಕುಗಳಿವೆ. ನಿನ್ನ ಮಗಳಿಗೊಂದು ಡ್ರೆಸ್ ಹೊಲೆಸು. ಅವಳುಟ್ಟ ಡ್ರೆಸ್ ತುಂಬಾನೆ ಹರಿದು ಹೋಗಿದೆ. ದುಡ್ಡನ್ನು ಮೇಜಿನ ಮೇಲಿಟ್ಟು, ಹೆಲ್ಮೆಟನ್ನು ಕೈಗೆತ್ತಿಕೊಳ್ಳುತ್ತಾ ಅವನು ವಿಲ್ಲಿಗೆ ಹೇಳಿದ: ನಡಿ ವಿಲ್ಲಿ ಹೊರಡೋಣ. ಬಹಳ ಹೊತ್ತಾಯ್ತು.
ಹೊರಗೆ ಬೈಕು ಸ್ಟಾರ್ಟ್ ಆದ ಶಬ್ಧ ಕೇಳಿಸಿತು. ಹೆಂಗಸು ಅವಸರವಾಗಿ ಎದ್ದು ಕೋಣೆಯೊಳಗೆ ಹೋದಳು. ಹುಡುಗಿ, ಹ್ಯಾನ್ಸ್ ಅವಳನ್ನು ಬಿಟ್ಟು ಹೋದ ಸ್ಥಿತಿಯಲ್ಲೇ ಸೋಫಾದ ಮೇಲೆ ಬಿದ್ದು ಕೊಂಡಿದ್ದಳು. ಅವಳು ಅಳುತ್ತಿದ್ದಳು.
****
ಈ ಮಧ್ಯೆ ಹ್ಯಾನ್ಸ್ ಮೂರು ತಿಂಗಳು ತನ್ನ ತುಕಡಿಯ ಜತೆಯಲ್ಲಿ ಪ್ಯಾರಿಸಿಗೆ ಹೋದ. ಅವರು ಪ್ಯಾರಿಸಿನ ಆರ್ಕ್ ದೆ ಟ್ರಯಂಫಿನಲ್ಲಿ ಬೈಕಿನ ಮೇಲೆ ವಿಜಯ ಯಾತ್ರೆಯನ್ನು ಮಾಡಿದರು. ಅವರಿಗೆ ಎಲ್ಲೂ ಪ್ರತಿರೋಧ ಕಾಣಿಸಲಿಲ್ಲ. ಫ್ರೆಂಚ್ ಯುದ್ಧ ಕೈದಿಗಳನ್ನು ಬಿಟ್ಟರೆ ಬೇರ್‍ಯಾವ ಫ್ರೆಂಚ್ ಯೋಧನೂ ಅವರಿಗೆ ಕಾಣಸಿಗಲಿಲ್ಲ. ಯುದ್ಧವಿರಾಮದ ನಂತರ ಅವರು ಒಂದು ತಿಂಗಳು ಪ್ಯಾರಿಸಿನಲ್ಲಿ ಕಳೆದರು. ಅಲ್ಲಿಂದ ಅವನು ಬವೇರಿಯದಲ್ಲಿದ್ದ ತನ್ನ ಕುಟುಂಬದವರಿಗೆ ಪಿಕ್ಚರ್ ಪೋಸ್ಟ್‌ಕಾರ್ಡುಗಳನ್ನು ಕಳುಹಿಸಿದ, ಉಡುಗೊರೆಗಳನ್ನು ಖರೀದಿಸಿದ. ವಿಲ್ಲಿಗೆ ಪ್ಯಾರಿಸ್ ತನ್ನ ಅಂಗೈಯಷ್ಟೇ ಪರಿಚಿತವಾಗಿದ್ದರಿಂದ ಅವನನ್ನು ಅಲ್ಲೇ ಉಳಿಸಿ ಹ್ಯಾನ್ಸನಿಗೆ ವಾಪಸ್ಸು ಕ್ಯಾಂಪಿಗೆ ಕಳುಹಿಸಲಾಯಿತು. ಅವರ ಕ್ಯಾಂಪಿದ್ದ ಊರು ಸಣ್ಣದಾಗಿದ್ದರೂ ಹ್ಯಾನ್ಸನಿಗೆ ಇಷ್ಟವಾಗಿತ್ತು. ಅಲ್ಲಿ ಹೊಟ್ಟೆ ತುಂಬಾ ಊಟ, ಒಂದು ಜರ್ಮನ್ ಮಾರ್ಕಿಗಿಂತಲೂ ಕಡಿಮೆ ಬೆಲೆಗೆ ಶಾಂಪೇನ್ ದೊರೆಯುತ್ತಿತ್ತು. ಅವನಿಗೆ ಕ್ಯಾಂಪಿಗೆ ಹೋಗುವ ಆರ್ಡರ್ ಕೈಗೆ ಸಿಗುತ್ತಿದ್ದಂತೆ ತಾನು ಅಲ್ಲಿ ಅನುಭವಿಸಿದ್ದ ಹುಡುಗಿಯನ್ನು ಭೇಟಿಯಾಗಿ ಮತ್ತೊಮ್ಮೆ ಅನುಭವಿಸಬೇಕೆಂಬ ತುಡಿತ ಉಂಟಾಯಿತು. ಅವಳ ಮೇಲೆ ತನಗೆ ಏನೂ ದ್ವೇಷವಿಲ್ಲವೆಂದು ತೋರಿಸಿಕೊಳ್ಳಲು ಅವಳಿಗೊಂದು ಜೊತೆ ರೇಶ್ಮೆ ಸ್ಟಾಂಕಿಂಗ್ಸ್‌ಗಳನ್ನು ಖರೀದಿಸಿದ. ಒಂದು ಮಧ್ಯಾಹ್ನದ ಹೊತ್ತಿನಲ್ಲಿ ಏನೂ ಕೆಲಸವಿಲ್ಲದಿದ್ದಾಗ, ಸ್ಟಾಕಿಂಗ್ಸ್‌ಗಳನ್ನು ಜೇಬಿನಲ್ಲಿ ತುರುಕಿ ಅವನು ಬೈಕನ್ನೇರಿದ.
*****
ಅದೊಂದು ಸುಂದರವಾದ ದಿನ. ಅಗಸದಲ್ಲಿ ಒಂದೇ ಒಂದು ಮೋಡವಿರಲಿಲ್ಲ. ಎಲ್ಲೆಡೆ ಹಸಿರು ಕಣ್ಣಿಗೆ ರಾಚುತ್ತಿತ್ತು. ಮೊದ ಮೊದಲು ದಾರಿ ಕಂಡುಕೊಳ್ಳಲು ಸ್ವಲ್ಪ ಗೊಂದಲವಾದರೂ ಅವನು ಅರ್ಧ ಮುಕ್ಕಾಲು ಗಂಟೆಯೊಳಗೆ ಹುಡುಗಿಯ ಮನೆಯನ್ನು ತಲುಪಿದ. ಒಂದು ಕಂತ್ರಿ ನಾಯಿ ಬೊಗಳುತ್ತಾ ಅವನನ್ನು ಸ್ವಾಗತಿಸಿತು. ಬಾಗಿಲು ಬಡಿಯುವ ಉಸಾಬರಿಗೆ ಹೋಗದೆ ತಳ್ಳಿಕೊಂಡು ಅವನು ಒಳಗೆ ನುಗ್ಗಿದ. ಹುಡುಗಿ ಮೇಜಿನ ಬಳಿ ಕುಳಿತುಕೊಂಡು ಆಲೂಗೆಡ್ಡೆಯ ಸಿಪ್ಪೆಯನ್ನು ಹೆರೆಯುತ್ತಿದ್ದಳು. ಸಮವಸ್ತ್ರದಲ್ಲಿದ್ದ ಅವನನ್ನು ಕಂಡು ಅವಳು ಗಾಬರಿಯಾದಳು.
ಅವನ ಗುರುತು ಹಿಡಿಯುತ್ತಿದ್ದಂತೆ ಕೈಯಲ್ಲಿದ್ದ ಚೂರಿಯನ್ನು ಮುಂದುಮಾಡಿ ಹಿಂದಕ್ಕೆ ಸರಿದಳು. ’ನೀನು?! ನಾಚಿಕೆಗೆಟ್ಟವನು!’ ಎಂದು ಬುಸುಗುಟ್ಟಿದಳು.
’ಸಿಟ್ಟಾಗಬೇಡ ಕಣೇ ಹುಡುಗಿ. ನೋಡು, ನಿನಗಾಗಿ ಚೆಂದದ ಒಂದು ಜೊತೆ ರೇಶ್ಮೆ ಸ್ಟಾಕಿಂಗ್‌ಗಳನ್ನು ತಂದಿದ್ದೇನೆ!’ ಅವನು ಉತ್ಸಾಹದಿಂದ ಹೇಳಿದ.
’ಅವುಗಳನ್ನು ನೀನೇ ಹಾಕ್ಕೊ. ಮೊದಲು ಇಲ್ಲಿಂದ ಜಾಗ ಖಾಲಿಮಾಡು.’
’ತಲೆ ಕೆಟ್ಟವಳಂತೆ ಮಾತನಾಡಬೇಡ. ಮೊದಲು ಆ ಚೂರಿಯನ್ನು ಕೆಳಗೆ ಇಡು. ಅಪಾಯಕಾರಿ ವಸ್ತುಗಳಿಂದ ಯಾವತ್ತೂ ತಮಾಷೆಗೂ ಆಡುವುದಲ್ಲ. ನೀನು ನನ್ನ ಬಗ್ಗೆ ಹೆದರುವ ಅಗತ್ಯವಿಲ್ಲ.’
’ನಿನ್ನ ಬಗ್ಗೆ ನನಗೆ ಕಿಂಚಿತ್ತೂ ಹೆದರಿಕೆಯಿಲ್ಲ!’ ಹುಡುಗಿ ಚೂರಿಯನ್ನು ನೆಲದ ಮೇಲೆ ಚೆಲ್ಲಿ ಹೇಳಿದಳು.
ಹೆಲ್ಮೆಟನ್ನು ಮೇಜಿನ ಮೇಲಿಡುತ್ತಾ ಅವನು ಕುಳಿತುಕೊಂಡ. ಕಾಲುಗಳಿಂದ ಚೂರಿಯನ್ನು ಹತ್ತಿರಕ್ಕೆ ಎಳೆದು ಅವನು ಎತ್ತಿಕೊಂಡ.
’ನಾನೂ ಕೆಲವು ಆಲೂಗೆಡ್ಡೆಗಳನ್ನು ಹೆರೆದುಕೊಡಲೇ?’ ಅವಳು ಉತ್ತರಿಸಲಿಲ್ಲ. ಒಂದು ಆಲೂಗೆಡ್ಡೆಯನ್ನು ಎತ್ತಿ ಅವನು ಹೆರೆಯತೊಡಗಿದ. ಅವಳು ಗೋಡೆಗೊರಗಿ ನಿಂತಿದ್ದಳು. ಅವಳ ಮುಖದ ಮೇಲೆ ತಿರಸ್ಕಾರ ಎದ್ದು ಕಾಣುತ್ತಿತ್ತು. ಕಣ್ಣುಗಳಲ್ಲಿ ಕ್ರೋಧ ತುಂಬಿತ್ತು. ಅವಳನ್ನು ನೋಡಿ ಹ್ಯಾನ್ಸ್ ಮುಗುಳ್ನಕ್ಕ. ’ಇಷ್ಟೊಂದು ಸಿಟ್ಟು ಯಾಕೆ ಹೆಣ್ಣೇ? ಅದೊಂದು ಕೆಟ್ಟ ದಿನ. ಏನೋ ಘಟಿಸಿತು. ಅವತ್ತ್ಯಾಕೋ ಮನಸ್ಸು ಕೆಟ್ಟಿತ್ತು. ನನ್ನದೊಬ್ಬನದೇ ಅಲ್ಲ. ಫ್ರೆಂಚ್ ಸೈನ್ಯದ ಬಹಾದೂರಿ ಬಗ್ಗೆ ನಾವು ಏನೇನೋ ಕೇಳಿ ಉದ್ವಿಗ್ನಗೊಂಡಿದ್ದೋ… ಅಲ್ಲದೆ ಆ ವೈನ್ ನೇರವಾಗಿ ನನ್ನ ನೆತ್ತಿಗೇರಿತ್ತು. ನಿಮ್ಮೆಲ್ಲರ ಅದೃಷ್ಟ ಚೆನ್ನಾಗಿತ್ತೆಂದ್ದೇ ಹೇಳಬೇಕು. ನನ್ನಿಂದ ಮತ್ತಿನ್ನೇನು ಅನಾಹುತವಾಗುತ್ತಿತ್ತೋ?’
ಹುಡುಗಿ ಹೇಸಿಗೆಯಿಂದ ಅವನನ್ನು ಮೇಲಿಂದ ಕೆಳಗೊಮ್ಮೆ ನೋಡಿದಳು.
’ದರಿದ್ರ ಮುಖದವನೇ ಮೊದಲು ಇಲ್ಲಿಂದ ಜಾಗ ಖಾಲಿಮಾಡು.’ ಅವಡುಗಚ್ಚುತ್ತಾ ಹೇಳಿದಳು.
’ಹುಡುಗಿ, ನಾನು ನನ್ನ ಮರ್ಜಿಯಿಂದಲೇ ಇಲ್ಲಿಂದ ಹೊರಡುವವನು..’
’ನೀನು ಹೊರಡದಿದ್ದರೆ ನನ್ನ ತಂದೆಯನ್ನು ನಿನ್ನ ಕ್ಯಾಂಪಿಗೆ ಕಳುಹಿಸಿ ನಿನ್ನ ವಿರುದ್ಧ ದೂರು ಕೊಡಿಸುತ್ತೇನೆ.’
’ಹಾಗೇ ಮಾಡು ಹುಡುಗಿ! ನಿನ್ನ ದೂರುಗಳನ್ನು ಕೇಳಿಸಿಕೊಳ್ಳಲೆಂದೇ ಅಲ್ಲೊಬ್ಬ ಅಧಿಕಾರಿಯನ್ನು ಕುಳ್ಳಿರಿಸಿದ್ದಾರೆ. ಸ್ಥಳೀಯ ಜನರೊಂದಿಗೆ ಬೆರೆತು ಅನ್ಯೋನ್ಯವಾಗಿರಲು ನಮಗೆ ಆದೇಶವಿದೆ. ನಿನ್ನ ಹೆಸರೇನು ಹುಡುಗಿ?’
’ನಿನಗದರ ಅಗತ್ಯವಿಲ್ಲ.’ ಅವಳ ಕೆನ್ನೆಗಳು ನಸುಗೆಂಪಾದರೂ ಕಣ್ಣುಗಳು ಬೆಂಕಿ ಕಾರುತ್ತಿದ್ದವು. ಹ್ಯಾನ್ಸನಿಗೆ ಅವಳು ಅಂದು ನೋಡಿದ್ದಕ್ಕಿಂತ ಇವತ್ತು ಹೆಚ್ಚು ಸುಂದರಳಾಗಿ ಕಂಡಳು. ಅವಳು ಹಳ್ಳಿಗಿಂತ ಹೆಚ್ಚಾಗಿ ಪೇಟೆಯ ಹುಡುಗಿಯಂತೆ ಕಾಣಿಸುತ್ತಿದ್ದಳು. ಅವಳು ಶಿಕ್ಷಕಿ ಬೇರೆ ಎಂದು ಅವಳ ತಾಯಿ ಹೇಳಿದ್ದು ಅವನಿಗೆ ಜ್ಞಾಪಕಕ್ಕೆ ಬಂತು. ಅವನಿಗೆ ಅಂತ ಸುಶಿಕ್ಷಿತ ಹೆಣ್ಣುಮಗಳಿಗೆ ಕಿಚಾಯಿಸುವ ಮನಸ್ಸಾಗಲಿಲ್ಲ. ಅವನ ನೀಲಿ ಕಣ್ಣುಗಳು, ಹೊಂಗೂದಲು, ಸಧೃಡ ಮೈಕಟ್ಟು ಮತ್ತು ಅದಕ್ಕೆ ಮೀರಿದ ಯಾವುದೋ ಮೃಗೀಯ ಆಕರ್ಷಣೆಯಿಂದಾಗಿ ಹೆಣ್ಣುಮಕ್ಕಳು ಅವನ ಮೇಲೆ ತಾವಾಗಿಯೇ ಮುಗಿಬೀಳುತ್ತಿದ್ದರು.
’ನಿನ್ನ ತಂದೆ ತಾಯಿಗಳು ಎಲ್ಲಿ? ಕಾಣಿಸುತ್ತಿಲ್ಲವಲ್ಲ?’
’ಅವರು ಹೊಲಕ್ಕೆ ಹೋಗಿದ್ದಾರೆ.’
’ನನಗೆ ಹಸಿವಾಗಿದೆ. ನನಗೆ ಒಂದು ಸ್ವಲ್ಪ ಬ್ರೆಡ್ ಮತ್ತು ಒಂದಿಷ್ಟು ಚೀಜ್ ಕೊಡು.’ ಎಂದು, ’ನಾನು ದುಡ್ಡು ಕೊಡುತ್ತೇನೆ.’ ಎಂದು ಮತ್ತೆ ಸೇರಿಸಿದ.
ಅವಳು ಕೆಟ್ಟದಾಗಿ ನಕ್ಕಳು.
’ಚೀಜ್ ನೋಡದೆ ಮೂರು ತಿಂಗಳಾಯ್ತು. ಬ್ರೆಡ್ಡು ನಮಗೇ ಸಾಕಾಗುವುದಿಲ್ಲ. ನಮ್ಮ ಕುದುರೆಗಳನ್ನು ಫ್ರೆಂಚ್ ಸೇನೆ ಹಿಡಿದುಕೊಂಡು ಹೋಯಿತು. ದನ, ಕೋಳಿ, ಹಂದಿಗಳನ್ನು ಜರ್ಮನರು ಹೊತ್ತುಕೊಂಡು ಹೋದರು.’
’ನಾವು ಹೊತ್ತುಕೊಂಡು ಹೋಗಲಿಲ್ಲ. ನಿಮಗೆ ದುಡ್ಡು ಕೊಟ್ಟೇ ಖರೀದಿಸಿದ್ದೇವೆ!’
’ದುಡ್ಡು ತಿಂದೇ ಹೊಟ್ಟೆ ತುಂಬಿಸಿಕೊಳ್ಳುವ ಹಾಗಿದ್ದರೆ!’ ಹುಡುಗಿ ಮುಖವನ್ನು ಮುಚ್ಚಿಕೊಂಡು ಅಳತೊಡಗಿದಳು.
’ನಿನಗೆ ಹಸಿವಾಗಿದೆಯಾ?’ ಅವನು ಅನುಕಂಪದಿಂದ ಕೇಳಿದ.
’ಇಲ್ಲ. ನಾವು ಆಲೂಗೆಡ್ಡೆ, ಟರ್ನಿಪ್ ಮತ್ತು ಲೆಟ್ಯೂಸ್ ತಿಂದು ಹಾಯಾಗಿದ್ದೇವೆ. ಕುದುರೆ ಮಾಂಸವೇನಾದ್ರೂ ಸಿಗುತ್ತದೆಯೋ ನೋಡೋಣವೆಂದು ಅಪ್ಪ ನಾಳೆ ಪೇಟೆಗೆ ಹೊರಟಿದ್ದಾರೆ.’
’ನೋಡು ಹುಡುಗಿ, ನೀನು ತಿಳಿದುಕೊಂಡಿರುವಷ್ಟೇನು ನಾನು ಕೆಟ್ಟವನಲ್ಲ. ನಿಮಗೆ ಸ್ವಲ್ಪ ಚೀಜ್, ಹಂದಿಮಾಂಸ ತಂದುಕೊಡಲು ನಾನು ಪ್ರಯತ್ನಿಸುತ್ತೇನೆ.’
’ನನಗಾಗಿ ನೀನು ಉಡುಗೊರೆಗಳನ್ನು ಹೊತ್ತುಕೊಂಡು ಬರುವುದು ಏನೂ ಬೇಕಿಲ್ಲ! ನಮ್ಮಿಂದ ಕದ್ದಿದ್ದನ್ನು ನಾವೇ ತಿನ್ನುವುದಕ್ಕಿಂತ ಉಪವಾಸ ಸಾಯುವುದೇ ಮೇಲು!’
’ಹಾಗೇ ಆಗಲಿ ಕಣಮ್ಮ.’ ಅವನು ಸಿಟ್ಟಾಗಲಿಲ್ಲ. ಹೆಲ್ಮೆಟನ್ನು ತಲೆಗೇರಿಸಿ ಅವಳಿಗೆ ಶುಭದಿನವನ್ನು ಹಾರೈಸುತ್ತಾ ಅವನು ಹೊರನಡೆದ.
ಅವನು ಮನಸ್ಸಿಗೆ ಬಂದ ಹಾಗೆ ಬೈಕನ್ನೇರಿ ಹಳ್ಳಿಯ ಕಡೆಗೆ ಹೋಗುವಂತಿರಲಿಲ್ಲ. ಮೇಲಾಧಿಕಾರಿಗಳು ಕಳುಹಿಸಿದಾಗ ಮಾತ್ರ ಅವನು ಹೋಗಬಹುದಿತ್ತು. ಹತ್ತು ದಿನಗಳ ನಂತರ ಮತ್ತೊಮ್ಮೆ ಅವನಿಗೆ ಹುಡುಗಿಯ ಮನೆಯ ಕಡೆಗೆ ಹೋಗುವ ಅವಕಾಶ ಸಿಕ್ಕಿತು. ಹಿಂದಿನಂತೆ ಈ ಭಾರಿಯೂ ಅವನು ಅಡುಗೆಮನೆಯ ಬಾಗಿಲಿನಿಂದಲೇ ಒಳಗೆ ಪ್ರವೇಶಿಸಿದ. ರೈತ ಮತ್ತು ಅವನ ಹೆಂಡತಿ ಇಬ್ಬರೂ ಅಡುಗೆ ಮನೆಯಲ್ಲಿದ್ದರು. ಹೆಂಗಸು ಒಲೆಯ ಮೇಲೆ ಪಾತ್ರೆಯೊಳಗೆ ಏನೋ ತಿರುವುತ್ತಿದ್ದಳು. ಗಂಡಸು ಮೇಜಿನ ಬಳಿ ಕುಳಿತುಕೊಂಡು ತೂಕಡಿಸುತ್ತಿದ್ದ. ಅವನು ಒಳನುಗ್ಗುತ್ತಿದ್ದಂತೆ ಅವರು ಕತ್ತೆತ್ತಿ ನೋಡಿದರು. ಅವರ ಪ್ರತಿಕ್ರಿಯೆ ಅವನ ದಾರಿಯನ್ನೇ ಎದುರು ನೋಡುತ್ತಿದ್ದಂತ್ತಿತ್ತು. ಅವನ ಹಿಂದಿನ ಭೇಟಿಯ ಬಗ್ಗೆ ಮಗಳು ಹೇಳಿರಬೇಕು. ಅವರು ಮಾತನಾಡಲಿಲ್ಲ. ಹೆಂಗಸು ಅವಳ ಕಾರ್ಯದಲ್ಲೇ ಮಗ್ನಳಾದಳು. ಗಂಡಸು ಮೇಜಿನ ಮೇಲಿದ್ದ ನೊಣವನ್ನು ಇದೇ ಮೊದಲ ಭಾರಿ ಎನ್ನುವಂತೆ ನೋಡುತ್ತಿದ್ದ. ಅವರ ನಿರ್ಲಕ್ಷಕ್ಕೆ ಹ್ಯಾನ್ಸ್ ವಿಚಲಿತನಾಗಲಿಲ್ಲ.
ಹ್ಯಾನ್ಸ್ ಅವರಿಗೆ ಶುಭದಿನವನ್ನು ಹಾರೈಸುತ್ತಾ, ’ನಿಮಗೊಂದು ಪುಟ್ಟ ಕಾಣಿಕೆಯನ್ನು ತಂದಿದ್ದೇನೆ…’ ಎಂದು ನಗೆಯಾಡುತ್ತಾ ಘೋಷಿಸಿದ.
ತಾನು ತಂದಿದ್ದ ಪೊಟ್ಟಣವನ್ನು ಮೇಜಿನ ಮೇಲಿಟ್ಟು ಬಿಡಿಸಿದ. ಅದರಲ್ಲಿ ಚೀಜಿನ ಒಂದು ದೊಡ್ಡ ತುಣುಕು, ಒಂದು ಹಂದಿಮಾಂಸದ ತುಂಡು ಮತ್ತು ಸಾರ್ಡಿನ್ ಮೀನಿನ ಡಬ್ಬವೊಂದಿತ್ತು. ಹೆಂಗಸಿನ ದೃಷ್ಟಿ ಇತ್ತ ಹರಿಯಿತು. ಅವಳ ಕಣ್ಣುಗಳು ಆಸೆಯಿಂದ ಮಿನುಗುತ್ತಿದ್ದುದ್ದನ್ನು ಕಂಡು ಹ್ಯಾನ್ಸ್ ಮುಗುಳ್ನಕ್ಕ.
’ನಾವು ಹಿಂದೆ ಭೇಟಿಯಾದ ಸಂದರ್ಭದಲ್ಲಿ ನಡೆದ ಅನಾಹುತಕ್ಕಾಗಿ ನಾನು ನಿಮ್ಮ ಕ್ಷಮೆಯನ್ನು ಕೇಳುತ್ತೇನೆ.’ ಅವನೆಂದ.
ಅಷ್ಟರಲ್ಲಿ ಹೊರಗೆಲ್ಲೋ ಇದ್ದ ಹುಡುಗಿ ಒಳಬಂದಳು.
’ನೀನು ಇಲ್ಲಿ ಏನು ಮಾಡುತ್ತಿದ್ದೀಯ?’ ಅವನನ್ನು ಕಂಡಕೂಡಲೇ ಅವಳು ಕೆರಳಿದಳು. ಅವಳ ದೃಷ್ಟಿ ಮೇಜಿನ ಮೇಲೆ ಹರಡಿದ್ದ ಆಹಾರ ಪದಾರ್ಥಗಳ ಮೇಲೆ ಹರಡಿತು. ಹುಡುಗಿ ಅವುಗಳನ್ನೆಲ್ಲಾ ಬಾಚಿ ಅವನ ಮೇಲೆ ಎಸೆದಳು. ’ನಿನ್ನ ಎಂಜಲನ್ನು ಎತ್ತಿಕೊಂಡು ಇಲ್ಲಿಂದ ಹೊರಡು..’ ಅವಳು ಚೀರಿದಳು.
ಹೆಂಗಸು ಮಧ್ಯೆ ಬಂದಳು.
’ಆನ್ನೆಟ್! ನಿನಗೆ ತಲೆ ಕೆಟ್ಟಿಲ್ಲ ತಾನೆ?’ ಮುನಿಸಿಕೊಂಡು ಅವಳೆಂದಳು.
’ಅವನ ಎಂಜಲು ನಮಗೆ ಬೇಡ ಕಣಮ್ಮ.’
’ಆ ವಸ್ತುಗಳು ನಮ್ಮವೇ ಕಣೆ! ನಮ್ಮಿಂದ ಕದ್ದವು! ಆ ಸಾರ್ಡಿನ್ ಮೀನಿನ ಟಿನ್ನು ನೋಡೇ. ಅದು ’ಬೋರ್ಡೊ’ ದು!’
ಹುಡುಗಿ ಒಂದೊಂದೇ ವಸ್ತುಗಳನ್ನು ಎತ್ತಿಕೊಂಡಳು. ಹ್ಯಾನ್ಸನ ನೀಲಿ ಕಣ್ಣುಗಳಲ್ಲಿ ವ್ಯಂಗ್ಯಪೂರಿತ ನಗು ಮೂಡಿತ್ತು.
’ಒಹೋ, ನಿನ್ನ ಹೆಸರು ಆನ್ನೆಟ್! ಸುಂದರವಾದ ಹೆಸರು. ಆಹಾರ ಪದಾರ್ಥಗಳಿಗಾಗಿ ನಿನ್ನ ಹೆತ್ತವರ ಮೇಲೆ ಸಿಟ್ಟು ಮಾಡಿ ಏನು ಪ್ರಯೋಜನ? ಚೀಜ್ ನೋಡದೆ ಮೂರು ತಿಂಗಳಾಯ್ತು ಎಂದು ನೀನೇ ಹೇಳಿದ್ದೆ. ಚೀಜ್ ಸಿಗುವುದು ನಮಗೂ ಸ್ವಲ್ಪ ಕಷ್ಟವೇ. ಸ್ವಲ್ಪವೇ ಸಿಕ್ತು. ಹ್ಯಾಮ್ (ಹಂದಿಯ ತೊಡೆ ಭಾಗ) ತರಲು ಯೋಚಿಸಿದ್ದೆ. ಈ ಭಾರಿ ಆಗಲಿಲ್ಲ.’
ಮಾಂಸದ ತುಂಡನ್ನು ಹೆಂಗಸು ತನ್ನ ಎದೆಗೊತ್ತಿಕೊಂಡಳು. ಅದನ್ನು ಮುತ್ತಿಕ್ಕಲೂ ಅವಳು ತಯಾರಾಗಿದ್ದಳು. ಆನ್ನೆಟಾಳ ಕೆನ್ನೆಗಳ ಮೇಲೆ ಕಣ್ಣೀರು ಹರಿಯಿತು.
’ಇದೆಂತಾ ಲಜ್ಜೆಗೇಡಿತನ ದೇವರೇ!’ ಅವಳು ನೋವಿನಿಂದ ಉದ್ಗರಿಸಿದಳು.
’ಒಂದು ತುಣುಕು ಚೀಜ್ ಮತ್ತು ಒಂದು ತುಂಡು ಮಾಂಸದಿಂದ ನಿನ್ನ ಮಾನವೇನೂ ಹರಾಜಾಗುವುದಿಲ್ಲ.’ ಹ್ಯಾನ್ಸ್ ಸಿಗರೇಟನ್ನು ಉರಿಸುತ್ತಾ ಹೇಳಿದ. ಹಾಗೆಯೇ ಅವನು ಸಿಗರೇಟು ಪ್ಯಾಕನ್ನು ಗಂಡಸಿನ ಕಡೆಗೆ ತಳ್ಳಿದ. ತೆಗೆದುಕೊಳ್ಳುವುದೋ ಬೇಡವೋ ಎಂದು ತುಯ್ದಾಡುತ್ತಿದ್ದ ಅವನು ಕೊನೆಗೂ ಒಂದನ್ನು ತೆಗೆದು ಪ್ಯಾಕನ್ನು ಹಾಗೆಯೇ ಹ್ಯಾನ್ಸನಿಗೇ ಮರಳಿಸಿದ.
’ನೀವೇ ಇಟ್ಕೊಳ್ಳಿ.’ ಹೊಗೆ ಮೋಡವನ್ನು ಎಬ್ಬಿಸುತ್ತಾ ಹ್ಯಾನ್ಸ್ ಹೇಳಿದ. ’ನಮಗೆ ಸಿಗರೇಟುಗಳಿಗೊಂದು ಬರಗಾಲವಿಲ್ಲ. ಅಂದ ಹಾಗೇ ನಾವೇಕೆ ಸ್ನೇಹಿತರಾಗಬಾರದು? ಆಗಿದ್ದು ಆಗ್ಹೋಯ್ತು. ನಮ್ಮ ಕ್ಯಾಂಪು ಇಲ್ಲಿ ಬಹಳಷ್ಟು ಸಮಯವಿರುವಂತೆ ಕಾಣಿಸುತ್ತದೆ. ಹಿಂದಿನ ಭಾರಿ ನಾನು ವಿಲ್ಲಿಯೊಂದಿಗೆ ಇಲ್ಲಿಗೆ ಬಂದಾಗ ನಡೆಯಬಾರದ್ದು ಘಟಿಸಿತು. ಆನ್ನೆಟ್ ಓದಿದ ಹುಡುಗಿ. ನಾನು ಅವಳನ್ನು ಗೌರವಿಸುತ್ತೇನೆ. ನಾನು ಅವಳ ವೈರಿ ಎಂದು ಅವಳು ತಿಳಿದುಕೊಳ್ಳುವುದು ಬೇಡ. ನಾವು ಊರ ಜನರ ಗೆಳೆತನ ಸಂಪಾದಿಸಲು ಪ್ರಯತ್ನಪಟ್ಟಷ್ಟೂ ಇಲ್ಲಿಯ ಜನ ಮುಖ ತಿರುಗಿಸುತ್ತಾರೆ. ಮಾತಾಡಿದರೂ ಮಾತಾಡಿಸುವುದಿಲ್ಲ. ನೀವು ನನ್ನ ಬಗ್ಗೆ ಎಳ್ಳಷ್ಟೂ ಹೆದರುವುದು ಬೇಡ. ಇನ್ನು ಮುಂದೆ ಆನ್ನೆಟಳಿಗೆ ನನ್ನ ತಂಗಿಯಂತೆ ಕಾಣುತ್ತೇನೆ. ಆಗಾಗ್ಗೆ ಭೇಟಿ ಕೊಟ್ಟು ನನ್ನ ಕೈಲಾದ ಸಹಾಯವನ್ನು ಮಾಡುತ್ತೇನೆ.’
’ನಿನ್ನ ಉದ್ದೇಶವಾದರೂ ಏನು? ನಮಗೆ ನಮ್ಮಷ್ಟಕ್ಕೇ ಬದುಕಲು ಬಿಡು. ನಮ್ಮ ಗೋಳು ಹುಯ್ದುಕೊಳ್ಳಬೇಡ.’ ಆನ್ನೆಟ್ ಅವಡುಗಚ್ಚಿ ಹೇಳಿದಳು.
*****
(ಮುಂದುವರೆಯುವುದು….)
ಕಾರ್ಲೊ ಸರ್, ಹ್ಯಾನ್ಸ್ ನ ಬರುವಿಕೆಗೆ ಮತ್ತೆ ಕಾಯುವಂತೆ ಮಾಡಿದಿರಿ! :). ಕತೆ ಇನ್ನೂ ಕುತೂಹಲವನ್ನು ಉಳಿಸಿಕೊಂಡಿದೆ.
[…] (ಇಲ್ಲಿಯವರೆಗೆ) […]