ಮೂಲ: ಡಬ್ಲ್ಯು. ಸಾಮರ್ಸೆಟ್ ಮ್ಹಾಮ್.
ಕನ್ನಡಕ್ಕೆ: ಜೆ.ವಿ.ಕಾರ್ಲೊ, ಹಾಸನ
(ಬ್ರಿಟಿಶ್ ಲೇಖಕ ಡಬ್ಲ್ಯು. ಸಾಮರ್ಸೆಟ್ ಮ್ಹಾಮ್ (೧೮೭೪-೧೯೬೫) ಹುಟ್ಟಿದ್ದು ಪ್ಯಾರಿಸಿನಲ್ಲಿ. ತನ್ನ ಕುಟುಂಬದ ಸಂಪ್ರದಾಯದಂತೆ ಅವನು ವೃತ್ತಿಯಲ್ಲಿ ವಕೀಲನಾಗಬೇಕಿತ್ತು. ಹುಟ್ಟಿನಿಂದಲೇ ತೊದಲುವಿಕೆಯ ಕಾರಣಗಳಿಂದ ಅವನು ವಕೀಲನಾಗಲಿಲ್ಲ. ಹತ್ತು ವರ್ಷಗಳಲ್ಲೇ ಅನಾಥನಾದ್ದರಿಂದ ಅವನನ್ನು ಅವನ ಚಿಕ್ಕಪ್ಪ ಇಂಗ್ಲೆಂಡಿನಲ್ಲಿ ಸಾಕಿದರು. ಅವನು ಕಲಿತದ್ದು ವೈಧ್ಯ ಶಿಕ್ಷಣವಾದರೂ ಅವನ ಆಸಕ್ತಿ ಸಾಹಿತ್ಯದಲ್ಲಿತ್ತು. ಲೇಖಕನಾಗಿ ಹೆಸರು, ಹಣ ಗಳಿಸಲು ಅವನಿಗೆ ಬಹಳಷ್ಟು ವರ್ಷಗಳೇ ಹಿಡಿದವು. ಕಾದಂಬರಿಕಾರನಾಗಿ, ಸಣ್ಣ ಕತೆಗಾರನಾಗಿ ಹೆಸರುಗಳಿಸುವ ಮೊದಲು ಅವನು ಖ್ಯಾತನಾಗಿದ್ದು ನಾಟಕಕಾರನಾಗಿ.
ಸಾಮರ್ಸೆಟ್ ಮ್ಹಾಮ್ ಒಬ್ಬ ಜಾಗತಿಕ ಪ್ರವಾಸಿಕನೂ ಆಗಿದ್ದ. ಆಧ್ಯಾತ್ಮವನ್ನು ಶೋಧಿಸುತ್ತಾ ಅವನು ತಮಿಳುನಾಡಿನ ರಮಣ ಮಹಶ್ರೀ ಯವರ ಆಶ್ರಮಕ್ಕೂ ಬಂದಿದ್ದ. ಅವನ ಪ್ರಖ್ಯಾತ ಕಾದಂಬರಿ Razor’s Edge ಜೀವನದ ಅರ್ಥವನ್ನು ಹುಡುಕುತ್ತಾ ಭಾರತಕ್ಕೆ ಬಂದು ಸಾರ್ಥಕತೆಯನ್ನು ಪಡೆದ ಕತಾ ನಾಯಕನ ಕತೆಯಾಗಿದೆ. ಸಾಮರ್ಸೆಟ್ ಮ್ಹಾಮನ ಬಹಳಷ್ಟು ಕತೆಗಳು ನಾಟಕ, ಟಿ.ವಿ., ಚಿತ್ರಗಳು ಮತ್ತು ಚಲನಚಿತ್ರವಾಗಿಯೂ ಹೆಸರು ಪಡೆದಿವೆ.
ಸಾಮರ್ಸೆಟನ ಈ ಕತೆ ೧೯೪೩ ರಲ್ಲಿ ಪ್ರಕಟಗೊಂಡಿದ್ದು ೧೯೭೦ ರಲ್ಲಿ ಜೇಮ್ಸ್ ಸಾಂಡರ್ಸ್‌ರವರಿಂದ ಟೆಲಿ ಚಿತ್ರವಾಗಿ ಪ್ರಖ್ಯಾತವಾಯಿತು.)
****
ಅವನು ಮತ್ತೆ ಅಡುಗೆ ಕೋಣೆಗೆ ಬಂದಾಗ ಗಂಡಸು ಯಥಾಸ್ಥಿತಿಯಲ್ಲೇ ನೆಲದ ಮೇಲೆ ಬಿದ್ದುಕೊಂಡಿದ್ದ. ಅವನ ಬಾಯಿಂದ ಸ್ವಲ್ಪ ರಕ್ತ ಒಸರಿತ್ತು ಮತ್ತು ಅವನು ಸಣ್ಣದಾಗಿ ನರಳುತ್ತಿದ್ದ. ಹೆಂಗಸು ಗೋಡೆಗೆ ಒರಗಿ ಹಾಗೆಯೇ ನಿಂತುಕೊಂಡಿದ್ದಳು. ಗಾಬರಿಯಿಂದ ಅವಳ ಕಣ್ಣುಗಳು ಹಿರಿದಾಗಿದ್ದವು. ಅವನು ಒಳಬರುತ್ತಿದ್ದಂತೆ ಅಪ್ರಯತ್ನಪೂರ್ವಕವಾಗಿ ಅವಳ ಬಾಯಿಂದ ಒಂದು ಸಣ್ಣ ಚೀತ್ಕಾರ ಹೊರಟಿತು. ಅವಳ ದೃಷ್ಟಿ ಅವನ ಗೆಳೆಯ ವಿಲ್ಲಿಯೆಡೆಗೆ ಹೊರಳಿತು ಮತ್ತು ಅವಳು ಬಿಕ್ಕಿ ಬಿಕ್ಕಿ ಅಳತೊಡಗಿದಳು. ವಿಲ್ಲಿ ಮೇಜಿನ ಬಳಿ ಕುಳಿತ್ತಿದ್ದ. ಹ್ಯಾನ್ಸ್ ಅವನೆಡೆಗೆ ಹೋಗಿ ಮೇಜಿನ ಮೇಲಿದ್ದ ವೈನ್ ಬಾಟ ಲಿಯಿಂದ ಖಾಲಿ ಗ್ಲಾಸಿಗೆ ಬಗ್ಗಿಸಿ ಒಂದೇ ಗುಟುಕಿಗೆ ಖಾಲಿ ಮಾಡಿದ.
ಗೆಳೆಯಾ, ನಿನ್ನ ಕೆಲಸ ಸುಸೂತ್ರವಾಗಿ ನಡೆದಿರುವಂತೆ ಕಾಣಿಸುತ್ತಿಲ್ಲ? ವಿಲ್ಲಿ ಕೇಳಿದ.
ಬೇವರ್ಸಿ ಮುಂಡೆ. ಸ್ವಲ್ಪ ಯಾಮಾರಿದ್ದಿದ್ದರೆ ನನ್ನ ಕಣ್ಣುಗಳನ್ನೇ ಕುಕ್ಕಿ ತೆಗೆಯುತ್ತಿದ್ದಳೇನೋ! ಸ್ವಲ್ಪ ಅಯೋಡಿನ್ ಹಚ್ಚಿದರೆ ಎಲ್ಲಾ ಸರಿಯಾಗುತ್ತದೆ… ಈಗ ನೀನು ಹೋಗಬಹುದು. ಈಗ ಮೆತ್ತಗಾಗಿದ್ದಾಳೆ!
ನನಗ್ಯಾಕೋ ಬಹಳ ಹೊತ್ತಾಗಿರುವಂತೆ ಕಾಣಿಸುತ್ತದೆ.. ವಿಲ್ಲಿ ಎಂದ.
ಹುಚ್ಚನ ಹಾಗೆ ಮಾತನಾಡಬೇಡ. ನೀನೇನು ಗಂಡಸಲ್ವೇ? ನಮಗೆ ದಾರಿ ತಪ್ಪಿತ್ತು. ಆದ್ದರಿಂದ ಹೊತ್ತಾಯ್ತು.
ಹೊರಗೆ ಇನ್ನೂ ಬೆಳಕಿತ್ತು. ಸಂಜೆಯ ಇಳಿ ಬಿಸಿಲು ಅಡುಗೆ ಮನೆಯ ಕಿಟಯಿಂದ ತೂರಿ ಬಂದು ನೆಲದ ಮೇಲೆ ಹರಡಿತ್ತು. ವಿಲ್ಲಿ ಕೊಸರಾಡುತ್ತಿರುವಂತೆ ಕಾಣಿಸುತ್ತಿದ್ದ. ಅವನು ಹ್ಯಾನ್ಸನಂತೆ ಕಟ್ಟುಮಸ್ತಾದ ಆಳಾಗಿರಲಿಲ್ಲ. ನಿಜ ಜೀವನದಲ್ಲೊಬ್ಬ ವಸ್ತ್ರ ವಿನ್ಯಾಸಕಾರನಾಗಿದ್ದ. ಹೋಗದಿದ್ದರೆ ಹ್ಯಾನ್ಸ್ ತನಗೆ ಶಿಖಂಡಿಯೆಂದು ಜರೆಯುವುದು ಖಂಡಿತ ಎಂದು ಅವನು ಒಲ್ಲದ ಮನಸ್ಸಿನಿಂದ ಹ್ಯಾನ್ಸ್ ಬಂದ ಕೋಣೆಯ ಕಡೆಗೆ ಹೆಜ್ಜೆಗಳನ್ನಿಟ್ಟ. ಅವನ ಉದ್ದೇಶ ಹೆಂಗಸಿಗೆ ಗೊತ್ತಾಗುತ್ತಿದ್ದಂತೆ ಅವಳು ಚೀರುತ್ತಾ ಅವನ ಮೈಮೇಲೆ ಬಿದ್ದಳು.
ಬೇಡ, ಬೇಡ! ಅವಳು ಅಂಗಲಾಚತೊಡಗಿದಳು.
ಒಂದೇ ಹೆಜ್ಜೆಯಲ್ಲಿ ಅಲ್ಲಿಗೆ ತಲುಪಿದ ಹ್ಯಾನ್ಸ್ ಹೆಂಗಸಿನ ಭುಜಗಳನ್ನು ಬಲವಾಗಿ ಹಿಡಿದು ಹಿಂದೆ ತಳ್ಳಿದ ರಭಸಕ್ಕೆ ಅವಳು ಗೋಡೆಗೆ ಅಪ್ಪಳಿಸಿ ಕೆಳಗೆ ಮುದುಡಿ ಬಿದ್ದಳು. ಮೇಜಿನ ಮೇಲಿದ್ದ ವಿಲ್ಲಿಯ ಪಿಸ್ತೂಲನ್ನು ಕೈಗೆತ್ತಿಕೊಂಡು, ನೀವಿಬ್ಬರೂ ಏನಾದ್ರು ಅಡ್ಡ ಬಂದರೆ ಹುಷಾರ್! ಎಂದ ಕರ್ಕಶ ಫ್ರೆಂಚಿನಲ್ಲಿ. ವಿಲ್ಲಿಯ ಕಡೆ ತಿರುಗುತ್ತಾ, ನೀನ್ಹೋಗು. ಇವರನ್ನ ನಾನು ನೋಡಿಕೊಳ್ಳುತ್ತೇನೆ. ಎಂದ.
ವಿಲ್ಲಿ ಹೋದಂತೆ ಹಿಂದುರಿಗಿದ.
ಅವಳು ಎಚ್ಚರ ತಪ್ಪಿದ್ದಾಳೆ. ಎಂದ.
ಆದರೇನಂತೆ?
ನನ್ನಿಂದ ಸಾಧ್ಯವಿಲ್ಲ
ಖಂಡಿತಾ ನೀನೊಬ್ಬ ಹಿಜಡಾನೇ!
ವಿಲ್ಲಿ ಕೆಂಪಗಾದ. ನಾವು ಹೊರಡುವುದು ಒಳ್ಳೇದು. ಎಂದ ಗಂಭೀರವಾಗಿ.
ಹ್ಯಾನ್ಸ್ ತಿರಸ್ಕಾರದಿಂದ ಭುಜಗಳನ್ನು ಹಾರಿಸಿದ. ಮೊದಲು ಈ ವೈನನ್ನು ಖಾಲಿ ಮಾಡುತ್ತೇನೆ. ನಂತರ ಹೊರಡೋಣ. ಎಂದ.
ಅವನೀಗ ಸ್ವಲ್ಪ ನಿರಾಳನಾಗಿದ್ದ. ಬೆಳಗ್ಗಿನಿಂದ ಬಿಸಿಲಿನಲ್ಲಿ ಮೋಟರ್ ಸೈಕಲಿನಲ್ಲಿ ತಿರುಗಾಡಿ ಅವನಿಗೆ ಸುಸ್ತಾಗಿತ್ತು. ಅವರ ಕ್ಯಾಂಪು ಇಲ್ಲಿಂದ ಒಂದು ಹತ್ತು-ಹದಿನೈದು ಕಿ.ಮೀ.ನಷ್ಟೇ ದೂರದಲ್ಲಿತ್ತು. ಸ್ವಲ್ಪ ವಿರಮಿಸಲು ಒಂದು ಹಾಸಿಗೆ ಸಿಕ್ಕಿದ್ದಿದ್ದರೆ! ಹುಡುಗಿ ಸ್ವಲ್ಪ ಶಾಂತ ಸ್ವಭಾವದವಳಾಗಿದ್ದಿದ್ದರೆ ಇಷ್ಟೊಂದು ದೊಡ್ಡ ಅನಾಹುತ ಆಗುತ್ತಲೇ ಇರಲಿಲ್ಲವೇನೋ? ಅವರು ಕ್ಯಾಂಪಿನ ದಾರಿ ತಪ್ಪಿ ಸುತ್ತಾಡುತ್ತಾ ಸಂಜೆ ಹೊತ್ತಿಗೆ ದಾರಿ ಕೇಳುತ್ತಾ ಇಲ್ಲಿಗೆ ಬಂದಿದ್ದರು. ಅವರು ವಿನಯದಿಂದಲೇ ವಿಚಾರಿಸಿದ್ದರು. ಅನಾವಶ್ಯಕವಾಗಿ ಸ್ಥಳೀಯ ಫ್ರೆಂಚ್ ಜನರೊಡನೆ ಯಾವುದೇ ಕಾರಣಕ್ಕೂ ಜಗಳವಾಡಬಾರದೆಂದು ಅವರಿಗೆ ಮೊದಲೇ ಎಚ್ಚರಿಸಲಾಗಿತ್ತು. ಅವರಿಗೆ ಹುಡುಗಿಯೇ ಬಾಗಿಲು ತೆರೆದಿದ್ದಳು. ಅವರ ಕ್ಯಾಂಪಿನ ದಾರಿ ತನಗೇನು ಗೊತ್ತೆಂದು ಅವಳು ಮುಖಗಂಟಿಕ್ಕಿ ಬಾಗಿಲು ರಪ್ಪನೆ ಹಾಕಿದಾಗ ಅವರು ಬಲಾತ್ಕಾರದಿಂದ ಒದ್ದು ಒಳ ನುಗ್ಗಿದ್ದರು. ಆಗ ಹೆಂಗಸು, ಬಹುಶಃ ಹುಡುಗಿಯ ತಾಯಿಯಿರಬೇಕು, ಅವರಿಗೆ ದಾರಿ ಹೇಳಿದ್ದಳು. ಅವರು ಮೂವರು, ಅಂದರೆ ಗಂಡಸು, ಹೆಂಗಸು ಮತ್ತು ಹುಡುಗಿ ಸಂಜೆಯ ಊಟ ಆಗಷ್ಟೇ ಮುಗಿಸಿದ್ದರೆಂದು ತೋರುತ್ತದೆ. ಮೇಜಿನ ಮೇಲೆ ವೈನ್ ಬಾಟಲು ಹಾಗೆಯೇ ಇತ್ತು. ಅದನ್ನು ನೋಡುತ್ತಿದ್ದಂತೆ ಹ್ಯಾನ್ಸನ ಬಾಯಾರಿಕೆ ಜಾಗೃತವಾಯಿತು. ಆ ದಿನ ತುಂಬಾ ಸೆಕೆಯಿತ್ತು. ಬೆಳಿಗ್ಗೆಯಿಂದ ಒಂದೂ ಡ್ರಿಂಕ್ಕಿಲ್ಲದೆ ಹ್ಯಾನ್ಸನಿಗೆ ಹೇಗೇಗೋ ಆಗಿತ್ತು. ಅವನು ಅವರ ಬಳಿ ಒಂದು ಬಾಟಲ್ ವೈನ್ ಕೇಳಿದ. ನಾವು ದುಡ್ಡು ಕೊಡುತ್ತೇವೆ. ಎಂದು ವಿಲ್ಲಿ ಹೇಳಿದ. ಆದರೆ ಹ್ಯಾನ್ಸನ ತರ್ಕವೇ ಬೇರೆಯಾಗಿತ್ತು. ವಿಜಯಿಗಳು ಸೋತವರ ಬಳಿ ಏಕೆ ಗೋಗರೆಯಬೇಕು ಎಂದು ಅವನ ತರ್ಕ. ಎಲ್ಲಿದೆ ಇವರ ಫ್ರೆಂಚ್ ಸೈನ್ಯ? ಎಲ್ಲಿ ಇವರ ಗೆಣೆಕಾರರಾದ ಇಂಗ್ಲಿಷರು? ಮೊಲಗಳಂತೆ ತಮ್ಮ ದ್ವೀಪಕ್ಕೆ ಕಾಲು ಕಿತ್ತರು! ವಿಜಯಿಗಳು ಬೇಕಾದ್ದು ಪಡೆಯುವ ಸಂಪ್ರದಾಯವೇನು ಹೊಸದಲ್ಲ. ಮೊದಲಿಂದಲೂ ನಡೆದುಬಂದದ್ದೇ. ವಿಲ್ಲಿ, ಒಬ್ಬ ಫ್ರೆಂಚ್ ವಸ್ತ್ರವಿನ್ಯಾಸಕಾರನ ಬಳಿ ಎರಡು ವರ್ಷ ಕೆಲಸ ಮಾಡಿದ್ದ. ಅವನು ಪ್ರೆಂಚನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ. ಆ ಕಾರಣಕ್ಕಾಗಿ ಅವನಿಗೆ ಈ ಕೆಲಸ ದೊರೆತ್ತಿತ್ತು. ಫ್ರೆಂಚರೊಡನೆ ಬೆರೆತು ವಿಲ್ಲಿ ಬಹಳ ಮೆದುವಾಗಿದ್ದಾನೆಂದು ಹ್ಯಾನ್ಸನಿಗನಿಸಿತ್ತು. ಒಬ್ಬ ಜರ್ಮನ್ ಫ್ರೆಂಚರೊಟ್ಟಿಗೆ ಬೆರೆಯುವುದೇ ಅಲ್ಲವೆಂದು ವಿಲ್ಲಿಯೇ ಸಾಕ್ಷಿ ಎಂದು ಅವನು ಭಾವಿಸಿದ್ದ.
ರೈತನ ಹೆಂಡತಿ ಎರಡು ವೈನ್ ಬಾಟಲುಗಳನ್ನು ತಂದು ಮೇಜಿನ ಮೇಲಿಟ್ಟಳು. ವಿಲ್ಲಿ ಜೇಬಿಂದ ಇಪ್ಪತ್ತು ಫ್ರ್ಯಾಂಕುಗಳನ್ನು ಎಣಿಸಿ ಅವಳಿಗೆ ಕೊಟ್ಟ. ಅವಳು ಕೃತಜ್ಞತೆಯ ಒಂದೂ ಮಾತಾಡದೆ ದುಡ್ಡನ್ನು ಇಸಿದುಕೊಂಡಳು. ಹ್ಯಾನ್ಸನ ಫ್ರೆಂಚು ವಿಲ್ಲಿಯಷ್ಟು ಸುಲಲಿತವಾಗಿರದಿದ್ದರೂ ಅವನ ಅಭಿಪ್ರಾಯಗಳನ್ನು ತಿಳಿಸುವಷ್ಟು ಮಟ್ಟಿಗೆ ಚೆನ್ನಾಗಿತ್ತು. ಅವನು ಮತ್ತು ವಿಲ್ಲಿ ಫ್ರೆಂಚಲ್ಲೇ ಮಾತನಾಡುತ್ತಿದ್ದರು. ವಿಲ್ಲಿ ಅವನನ್ನು ತಿದ್ದುತ್ತಿದ್ದ. ಈ ಕಾರಣಕ್ಕಾಗಿ ವಿಲ್ಲಿಯನ್ನು ಹ್ಯಾನ್ಸ್ ಮೆಚ್ಚುತ್ತಿದ್ದ. ಹಾಗೆಯೇ ವಿಲ್ಲಿ ಹ್ಯಾನ್ಸ್‌ನನ್ನು ಒಬ್ಬ ಹೀರೋನಂತೆ ಆರಾಧಿಸುತ್ತಿದ್ದ. ಹ್ಯಾನ್ಸ್, ನೀಲಿ ಕಣ್ಣಿನ, ಅಗಲವಾದ ಭುಜಗಳ, ಗುಂಗುರು ಹೊಂಗೂದಲಿನ ಗ್ರೀಕ್ ದೇವತೆಯಂತಿದ್ದ. ಫ್ರೆಂಚ್ ಮಾತನಾಡುವ ಸಂದರ್ಭಗಳನ್ನು ಅವನು ಕಳೆದುಕೊಳ್ಳುತ್ತಿರಲಿಲ್ಲ. ಈ ಫ್ರೆಂಚ್ ರೈತರೊಟ್ಟಿಗೆ ಫ್ರೆಂಚ್ ಮಾತನಾಡುವ ಪ್ರಯತ್ನಗಳನ್ನು ಆ ಮೂದೇವಿಗಳು ಹಾಳುಗೆಡವಿದರು. ’ನಾನೂ ಒಬ್ಬ ರೈತನೇ. ಈ ದರಿದ್ರ ಯುದ್ಧ ಮುಗಿದ ನಂತರ ನಾನೂ ಕೂಡ ವ್ಯವಸಾಯದಲ್ಲಿ ತೊಡಗಿಸಿಕೊಳ್ಳಲು ನಿಶ್ಚಯಿಸಿದ್ದೇನೆ. ನನ್ನ ತಾಯಿಗೆ ನಾನು ವ್ಯವಹಾರವನ್ನು ಕಲಿಯಬೇಕೆಂದು ಆಸೆ. ಅದಕ್ಕಂತಲೇ ನನ್ನನ್ನು ಮ್ಯೂನಿಕ್‌ನಲ್ಲಿ ಓದಿಸುತ್ತಿದ್ದಾರೆ. ಆದರೆ ಕೃಶಿ ಎಂದರೆ ನನಗೆ ಪ್ರಾಣ. ನಾನು ವಾಪಸ್ಸು ಊರಿಗೇ ಹೋಗಬೇಕೆಂದುಕೊಂಡಿದ್ದೇನೆ..’ ಅವನು ಆ ಕಲ್ಲು ಮೂರ್ತಿಗಳ ಎದುರು ತನ್ನ ಮನದಾಸೆದಯನ್ನು ತೆರೆದಿರಿಸಿದ.
ನೀನಿಲ್ಲಿ ದಾರಿ ಕೇಳಿಕೊಂಡು ಬಂದಿದ್ದೆ. ನಿನ್ನ ಕೆಲಸ ಆಯ್ತಲ್ಲಾ? ನಿನ್ನ ಉಳಿದ ವೈನನ್ನು ಕುಡಿದು ಇಲ್ಲಿಂದ ಹೊರಡು. ನಮ್ಮ ತಲೆ ತಿನ್ನ ಬೇಡ! ಹುಡುಗಿ ನಾಗಿಣಿಯಂತೆ ಭುಸುಗುಟ್ಟಿದಳು.
ಈವರೆಗೆ ಅವನು ಅವಳೆಡೆಗೆ ಅಷ್ಟಾಗಿ ಗಮನ ಹರಿಸಿರಲಿಲ್ಲ. ಅವಳು ಹೇಳಿಕೊಳ್ಳುವಂತ ಚೆಲುವೆಯಾಗಿರಲಿಲ್ಲವಾದರೂ, ಆ ನೀಳ ನಾಸಿಕ, ಮಾದಕ ಕಣ್ಣುಗಳು ಗಮನ ಸೆಳೆಯುವಂತಿದ್ದವು. ಅವಳು ಸಾಧಾರಣ ಉಡುಗೆಯಲ್ಲೂ ಆಕರ್ಷಕಳಾಗಿ ಕಾಣುತ್ತಿದ್ದಳು. ಒಂಥರ ಭಿನ್ನವಾಗಿ ಕಾಣಿಸುತ್ತಿದ್ದಳು. ಯುದ್ಧ ಆರಂಭವಾಗಿದ್ದಿಂದಲೂ ಜರ್ಮನ್ ಸೈನಿಕರ ಮಧ್ಯೆ ಫ್ರೆಂಚ್ ಹುಡುಗಿಯರ ಬಗ್ಗೆ ಬಹಳಷ್ಟು ಚರ್ಚೆ ನಡೆದಿತ್ತು. ಜರ್ಮನ್ ಹುಡುಗಿಯರಲ್ಲಿ ಇಲ್ಲದ್ದು ಏನೋ ಫ್ರೆಂಚ್ ಹುಡುಗಿಯರಲ್ಲಿದೆ ಎಂದು ಅವರು ಮಾತನಾಡಿಕೊಳ್ಳುತ್ತಿದ್ದರು. ಅದನ್ನು ವಿಲ್ಲಿ ಏನೋ ಗೂಢವಾಗಿ ’ಸ್ಟೈಲ್’ ಎಂದು ಕರೆಯುತ್ತಿದ್ದ. ಫ್ರೆಂಚ್ ಹುಡುಗಿಯರಿಗೆ ಭಾವನೆಗಳೇ ಇಲ್ಲ. ಅವರಿಗಿಂತ ನಮ್ಮ ಕೋವಿಗಳ ಬ್ಯಾರೆಲ್‌ಗಳೇ ಎಷ್ಟೋ ವಾಸಿ ಎಂದು ಕೆಲವರು ಹೇಳುತ್ತಿದ್ದರು! ಹೇಗೂ ಮುಂದಿನ ವಾರ ಪ್ಯಾರಿಸಿಗೆ ಹೋಗುವುದಿತ್ತು. ಅಲ್ಲಿ ಸೈನಿಕರ ಮನರಂಜನೆಗೆಂದು ಕೆಲವು ವೇಶ್ಯಾವಾಟಿಕೆಗಳನ್ನು ಅಧಿಕಾರಿಗಳು ಈಗಾಗಲೇ ಗೊತ್ತು ಮಾಡಿರುವುದಾಗಿ ಕ್ಯಾಂಪಿನಲ್ಲಿ ಗುಸು ಗುಸು ಹಬ್ಬಿತ್ತು. ಆಗ ನೋಡಿದರಾಯ್ತು ಎಂದು ಹ್ಯಾನ್ಸ್ ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.
ಹ್ಯಾನ್ಸ್, ನಿನ್ನ ವೈನನ್ನು ಬೇಗ ಖಾಲಿ ಮಾಡು. ಹೊತ್ತಾಯ್ತು. ವಿಲ್ಲಿ ಅವಸರಿಸಿದ. ಹ್ಯಾನ್ಸ್ ಅವನ ಮಾತನ್ನು ಕೇಳಿಸಿಕೊಂಡಂತೆ ಕಾಣಿಸಲಿಲ್ಲ.
ನೀನು ಹಳ್ಳಿ ಹುಡುಗಿಯ ಹಾಗೆ ಕಾಣಿಸುತ್ತಿಲ್ಲ. ಹುಡುಗಿಯನ್ನು ಉದ್ದೇಶಿಸಿ ಹ್ಯಾನ್ಸ್ ಹೇಳಿದ.
ಅದನ್ನ ಕಟ್ಕೊಂಡು ನಿನಗೇನಾಗಬೇಕಾಗಿದೆ? ಹುಡುಗಿ ಸಿಡಿಮಿಡಿಗೊಂಡಳು.
ಅವಳು ಶಿಕ್ಷಕಿ! ಹೆಂಗಸು ಹೆಮ್ಮೆಯಿಂದ ಹೇಳಿದಳು.
ಓಹೋ! ಹಾಗಾದರೆ ನೀನು ತುಂಬಾ ಓದಿಕೊಂಡಿದ್ದೀಯಾ? ಅವನು ಸ್ವಾಭಾವಿಕವಾಗಿ ಕೇಳಿದ. ಒಂದು ರೀತಿಯಲ್ಲಿ ಫ್ರಾನ್ಸಿಗೆ ಈ ಯುದ್ಧದಿಂದ ಒಳ್ಳೆಯದೇ ಆಯ್ತೇನೋ? ನಾವಾಗಿಯೇ ನಿಮ್ಮ ಮೇಲೆ ಯುದ್ಧಕ್ಕೆ ಬರಲಿಲ್ಲ. ನೀವೇ ಶುರು ಮಾಡಿದ್ದು. ನೀನು ನೋಡ್ತಾ ಇರು, ನಾವು ಫ್ರಾನ್ಸನ್ನು ಸುಧಾರಿಸುತ್ತೇವೆ. ನಿಮಗೆ ಶ್ರಮ ಎಂದರೇನು, ಶಿಸ್ತು, ವಿಧೇಯತೆ ಎಂದರೇನೆಂದು ಕಲಿಸುತ್ತೇವೆ… ಅವನು ತನ್ನ ಅರೆಬರೆ ಫ್ರೆಂಚಿನಲ್ಲಿ ಮಾತನಾಡುತ್ತಲೇ ಇದ್ದ.
ಹುಡುಗಿಯ ಮುಷ್ಠಿಗಳು ಬಿಗಿಗೊಳ್ಳುತ್ತಿದ್ದವು. ಕಣ್ಣುಗಳು ಕಿಡಿ ಕಾರಲಾರಂಭಿಸಿದವು. ತಿರಸ್ಕಾರದಿಂದ ಅವಳ ಮುಖ ಕಪ್ಪಿಟ್ಟುಕೊಳ್ಳತೊಡಗಿದರೂ ಅವಳು ಮಾತನಾಡಲಿಲ್ಲ.
ಹ್ಯಾನ್ಸ್, ನೀನು ಕುಡಿದದ್ದು ಜಾಸ್ತಿಯಾಯ್ತು.. ವಿಲ್ಲಿ ಎಚ್ಚರಿಸಿದ.
ನಾನು ಸರಿಯಾಗೇ ಇದ್ದೇನೆ ಮತ್ತು ಸತ್ಯವನ್ನೇ ಹೇಳುತ್ತಿದ್ದೇನೆ. ಅವರಿಗೆ ನಾನು ಹೇಳುತ್ತಿರುವುದು ಅಪ್ರಿಯವೆನಿಸಿದರೂ, ಸತ್ಯ ಯಾವತ್ತೂ ಸತ್ಯನೇ..
ನಿನ್ನ ಗೆಳೆಯ ಹೇಳುತ್ತಿರುವುದು ನಿಜ. ನಿನಗೆ ವೈನ್ ತಲೆಗೇರಿದೆ. ಈಗ ಮರ್ಯಾದೆಯಿಂದ ಇಲ್ಲಿಂದ ಹೊರಡು.
ಒಹೋ, ನಿನಗೆ ಜರ್ಮನ್ ಅರ್ಥವಾಗುತ್ತದೆ! ಆಯ್ತು ನಾನು ಹೊರಡುತ್ತೇನೆ. ಹೋಗುವ ಮುನ್ನ ನನಗೊಂದು ಪಪ್ಪಿ ಕೊಡು. ಅವನು ಅವಳೆಡೆಗೆ ಸಾಗಿದ. ಹುಡುಗಿ ಹಿಂದೆ ಸರಿದಳು. ಅವನು ಅವಳ ಕೈಯನ್ನು ಹಿಡಿದ.
ಅಪ್ಪಾ, ಅಪ್ಪಾ.. ಹುಡುಗಿ ಕಿರುಚಿಕೊಂಡಳು.
ಗಂಡಸು ಅವನ ಮೇಲೆ ಎರಗಿದ. ಹ್ಯಾನ್ಸ್ ಅವಳ ಕೈಯನ್ನು ಬಿಟ್ಟು ಗಂಡಸಿನ ಕೆನ್ನೆಗೊಂದು ಬಲವಾಗಿ ಬಾರಿಸಿದ. ಅವನು ನೆಲಕ್ಕುರುಳಿದ. ಹುಡುಗಿ ತಪ್ಪಿಸಿಕೊಳ್ಳುವ ಮುನ್ನ ಅವನು ಅವಳನ್ನು ಹಿಡಿದು ತಬ್ಬಿಕೊಂಡ. ಹುಡುಗಿ ಅವನ ಕೆನ್ನೆಗೊಂದು ಬಾರಿಸಿದಳಾದರೂ ಅವನ ಮೈಮೇಲೆ ದೆವ್ವ ಸವಾರಿ ಮಾಡುತ್ತಿತ್ತು.
ಹುಡುಗೀ, ಒಬ್ಬ ಜರ್ಮನ್ ಒಂದು ಮುತ್ತಿಗಾಸೆಪಡುತ್ತಿರುವಾಗ ಇದುವೇ ನಿನ್ನ ಉಡುಗೊರೆ? ಇದಕ್ಕಾಗಿ ನೀನು ಖಂಡಿತಾ ಪಶ್ಚಾತ್ತಾಪಪಡುತ್ತೀಯಾ.
ಅವನು ಗಟ್ಟಿಮುಟ್ಟಾಗಿದ್ದ. ಅವನ ತೆಕ್ಕೆಯಿಂದ ಹುಡುಗಿಗೆ ಬಿಡಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಎದುರಿಗೆ ಒಂದು ಕೋಣೆಯ ಬಾಗಿಲು ತೆರೆದಿತ್ತು. ಹ್ಯಾನ್ಸ್ ಅವಳನ್ನು ಅಲ್ಲಿಗೆ ಎಳೆದುಕೊಂಡೇ ಹೋದ. ಹುಡುಗಿಯ ತಾಯಿ ಅರಚುತ್ತಾ ಅವನಿಗೆ ಅಡ್ಡ ಬಂದಳು. ಅವನ ಶರ್ಟಿಗೆ ಹಿಡಿದು ಎಳೆಯತೊಡಗಿದಳು. ಹುಡುಗಿಯನ್ನು ತಬ್ಬಿಕೊಂಡಿದ್ದ ಒಂದು ಕೈಯನ್ನು ಬಿಡಿಸಿಕೊಂಡು ಹ್ಯಾನ್ಸ್ ಅವಳನ್ನು ಬಲವಾಗಿ ನೂಕಿದ. ಹೆಂಗಸು ಪಕ್ಕದ ಗೋಡೆಗೆ ಅಪ್ಪಳಿಸಿ ಕೆಳಗೆ ಬಿದ್ದಳು.
ಹ್ಯಾನ್ಸ್, ಹ್ಯಾನ್ಸ್! ವಿಲ್ಲಿ ಆತಂಕದಿಂದ ಕೂಗಿದ.
ನೀನು ಮಧ್ಯೆ ಬರಬೇಡ ದೂರವಿರು. ಹ್ಯಾನ್ಸ್ ಅವನೆಡೆಗೆ ದುರುಗುಟ್ಟುತ್ತಾ ಎಚ್ಚರಿಸಿದ.
ಹ್ಯಾನ್ಸ್ ಅರಚುತ್ತಿರುವ ಹುಡುಗಿಯ ಬಾಯನ್ನು ಒಂದು ಕೈಯಿಂದ ಒತ್ತಿ ಹಿಡಿದು ಅವಳನ್ನು ಎತ್ತಿಕೊಂಡೇ ತೆರೆದ ಬಾಗಿಲಿನ ಕೋಣೆಯನ್ನು ಪ್ರವೇಶಿಸಿದ.
(ಮುಂದುವರೆಯುವುದು….)
*****
ಕಾರ್ಲೊ ಸರ್, ಮುಂದಿನ ಭಾಗಕ್ಕೆ ಕಾಯುವಂತೆ ಮಾಡಿದಿರಿ! ಕುತೂಹಲಕಾರಿಯಾಗಿದೆ!
ಹೌದು ಕುರ್ತಕೋಟಿಯವರೆ,
ಈ ಕತೆ ನನಗೆ ಬಹಳಷ್ಟು ಇಷ್ಟವಾಗಿದೆ. ಈ ಮೊದಲು ಇದು ಕೊಂಕಣಿಯ 'ರಾಕ್ಣೊ' ಎಂಬ ವಾರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅಂತ್ಯ ಮತ್ತೂ ಕುತೂಹಲಕರವಾಗಿದೆ.