ಅಮರ್ ದೀಪ್ ಅಂಕಣ

ತಿಪ್ಪಣ್ಣ ಸರ್ಕಲ್: ಅಮರ್ ದೀಪ್ ಪಿ.ಎಸ್.

ಹಿಂಗೇ ಓಣಿಯಲ್ಲಿನ ಈಶಪ್ಪನ ಗುಡಿ ಕಟ್ಟೆಗೆ ಪಕ್ಕದ ಮನೆ ರತ್ನಕ್ಕನ  ಮನೆಯಿಂದ ತಂದ ಪೇಪರ್ ಓದ್ತಾ ಕುಂತಿದ್ದೆ .   ಗುಡಿ ಎದುರಿಗಿನ ದಾರಿ ಏಕಾ ಇದ್ದದ್ದರಿಂದ ಅಷ್ಟೂ ದೂರದಿಂದ ಬರೋರು ಹೋಗೋರು ಎಲ್ಲಾ ಕಾಣಿಸೋರು. ದಿನ ಭವಿಷ್ಯ ನೋಡೋ ಚಟ ನನ್ನ ಪಕ್ಕದ ನನ್ನಂಥ ನಿರುದ್ಯೋಗಿಗೆ.  ಅವನೂ ನಂಜೊತೆ ಓದಿದೋನೇ. ಅವನಿಗೆ ಜಾತಕದ ಪ್ರಕಾರ ಗೌರ್ಮೆಂಟ್ ನೌಕ್ರಿ ಸಿಕ್ಕೇ ಸಿಗುತ್ತೆ ಅನ್ನೋ ಲೆಕ್ಕಾಚಾರದಲ್ಲಿ ದಿನಾ ಸರ್ಕಾರಿ ಜಾಹಿರಾತು ನೋಡೋದು ಅವನ ಅಭ್ಯಾಸವಾಗಿತ್ತು.  ಜೊತೆಗೆ  ಪಂಚಾಗದ ಹುಚ್ಚು ಬೇರೆ.  ಆ ಗೆಳೆಯ ಪಂಚಾಗ ನೋಡೋ ಹೊತ್ತಿಗೆ  ದೂರದಲ್ಲಿ ನಮ್ಮ ತಿಪ್ಪಣ್ಣ  ಬರೋದು ಕಾಣಿಸ್ತಾ ಇತ್ತು. ಅವನೋ ಅವನ ಭಾಷೇನೋ ಅವನ ಅಪ್ರೋಚೋ.. ಒಂದಕ್ಕೊಂದು ಹೋಲುವುದೇ ಇಲ್ಲ. ಬಟ್ ಅವನಿಂದ ಕಳ್ಳಿಗೆ ಹಚ್ಚಿಕೊಳ್ಳುವಂಥ ದೋಖಾ ಅಂತೂ ಆಕಿದ್ದಿಲ್ಲ. ದಿನ ಕಳೆದಂತೆ ಓಣಿಯ ಹಿರಿ ಕಿರಿ ಹುಡುಗರೆಲ್ಲಾ ತಿಪ್ಪಣ್ಣನಿಗೆ ಅತ್ಯಂತ ಪ್ರೀತಿಯಿಂದ ಉಪ್ಪಿ ಅನ್ನೋರು.  ಕಾರಣ,  ಆ ದಿನಗಳಲ್ಲಿ ಉಪೇಂದ್ರನ  "ಎ " ಮತ್ತು "ಉಪೇಂದ್ರ" ಸಿನೆಮಾಗಳ ಡೈಲಾಗ್ ಗಳು ಚಾಲ್ತಿಯಲ್ಲಿದ್ದವು.  ನಮ್ಮ ತಿಪ್ಪಣ್ಣನಿಗೆ  ಒಳಗೊಂದು ಹೊರಗೊಂದು ಮನಸ್ಸಿನಲ್ಲಿಟ್ಟುಕೊಳ್ಳದೇ ಎದ್ರಾ ಬದರಾ ಮಾತಾಡೋದು ರೂಢಿಯಾಗಿತ್ತು.  

ಒಂದ್ ಪ್ರೈಮರಿ ಶಾಲೆಯಿಂದ ನೋಡ್ತಿದ್ದೆ.  ಅವನದು ಒಂದೇ ಬುದ್ಧಿ.  ವಿದ್ಯೆ ನೈವೈದ್ಯೆ. ನಂದೇನು ಮಹಾ? ಅಬ್ಬಬ್ಬಾ ಅಂದ್ರೆ ಎಸ್ಸೆಲ್ಸಿ ಪಾಸಾಗಿ ಟೀಚರೀಕೆ ಮಾಡುವಷ್ಟು ಓದಷ್ಟೇ ಆಲ್ವಾ ಕಲ್ತಿದ್ದು.  ಇವತ್ತು ನಾಳೆ ನಂಗೂ  ಒಂದ್ ಮೇಷ್ಟ್ರು ಕೆಲ್ಸ ಸಿಕ್ರೆ  ಬೇಷಾಗುತ್ತೆ.  ಅಲ್ಲಿವರ್ಗೂ ಈ ಗುಡಿ ಕಟ್ಟಿ ನಮ್ ಪಾಲಿನ ಸಂಜೆ ಹೊತ್ತಿನ ಆಸರೆ. ರಾತ್ರಿ ಆದ್ರೆ ನಿದ್ದೆ ಪಾಲು ಖಾತ್ರಿ. ಇರಲಿ, ಈಗ ನಮ್ಮ ತಿಪ್ಪಣ್ಣನ ವಿಷಯಕ್ಕೆ ಬರ್ತೀನಿ.  ಆ ಸಿಹಿ ನೀರಿನ ಬೋರ್ ವೆಲ್ ನ ಹತ್ತಿರ ಇದ್ರಲ್ಲ? ಅದೇ ವಾರದ ಬಡ್ಡಿಯವ್ರು, ಅದೆಂತದೋ ಹೆಸರು, ತಮಿಳರು. ಮೊದ ಮೊದ್ಲು  ಅವ್ರಿಗೆ ಸರಿಯಾಗಿ ಕನ್ನಡ ಕೂಡ ಬರ್ತಾ ಇರ್ಲಿಲ್ಲ.  ಅವರ ಹತ್ರ ಏನೋ ಗುಸು ಗುಸು ಮಾತಾಡ್ತಾ ಇದ್ದದ್ದು ಕಾಣಿಸ್ತು.  ಆ ಮನೆ ಮುದುಕಿ ಏನೋ ಸೀದಾ ನಾವು ಕುಂತಿದ್ದ ಕಡೆ ಕೈ ತೋರ್ಸಿ ಸಾಗ ಹಾಕಿದಳು.  ನಮಗೋ ಒಳಗೊಳಗೇ ಒಂದೊಂದು ಕೀಟಲೆ ಮಾಡಿದ್ದು ನೆನಪಾದವು. ಆ ಮುದುಕಿಗೆ ಕನ್ನಡ ಬರೋದಿಲ್ಲ ಅನ್ನೋದನ್ನೇ ನೆಪ ಮಾಡ್ಕೊಂಡು ಕನ್ನಡದಲ್ಲಿ ಎರ್ರಾ ಬಿರ್ರಿ ಮಾತಾಡಿ ತಪ್ಪಿಸಿಕೊಂಡು ಬಂದಿದ್ವು.  

ತಿಪ್ಪಣ್ಣ ಹಾಗೆ ಮುಂದೆ ಬಂದು ಜೆ. ಪಿ. ಮೇಷ್ಟ್ರು, ದೊಡ್ಮನಿ ಬಸಣ್ಣ,  ಪಿಗ್ಮಿ ಗೌಡ್ರು , ಬೋವಿ ಗಂಗಾಧರಪ್ಪ, ಸೊಸೈಟಿ ಕೊಟ್ರೇಶಪ್ಪ, ಅಯ್ನೋರು ಪೂರ್ಣಯ್ಯ, ಮುಂದಕ್ಕೆ ಕೆ. ಇ. ಬಿ. ವಿಜ್ಜಣ್ಣ , ಎ. ಪಿ. ಎಂ. ಸಿ. ತಮ್ಮಣ್ಣ, ಚಿಮ್ಮಣಿ ಎಣ್ಣಿ ಪೊಂಪಣ್ಣ ಎಲ್ಲರನ್ನೂ ಮಾತಾಡಿಸಿ ಅದೇನೋ ಕೊಡೋದು  ತಗಳ್ಳೋದು ಅನ್ನೋ ಥರ ಸನ್ನೆ ಮಾಡಿ, ಮಾತಾಡಿ ಏನೊಂದು ದಕ್ಕದೇ ನಮ್ಮ ಹತ್ತಿರಕ್ಕೆ ಬರುತ್ತಿದ್ದ. ಸಂಜಿ ಮುಂದೆ ಯಾರಾದಾದ್ರು ಮನೆ ಮುಂದೆ ನಿಂತು ತಾನು ಕೆಲ್ಸ ಮಾಡಿದ್ದರ ಕೂಲಿ ದುಡ್ಡು ಗಿಡ್ಡು ಕೇಳೋದು, ಏನಾದರೊಂದು ನೆಪ ಹೇಳಿಸಿ ಕೊಂಡು ಬರೀಗೈಯಲ್ಲಿ ಹಳ್ಳೆಣ್ಣೆ ಮೊರೆ ಮಾಡಿಕೊಂಡು  ವಾಪಸ್ಸು ಹೋಗೋದು ನಮ್ಮ ತಿಪ್ಪಣ್ಣನಿಗೆ ಹೊಸ ದೇನೂ ಅಲ್ಲ. ಆದ್ರೆ ಆತನ ಕೈಲಿ ಹಳೇ ಫ್ಯಾನ್  ರಿಪೇರಿ ಮಾಡಿಸಿಕೊಳ್ಳೋ ಅದ್ಭುತ ಅವಕಾಶ ನಾನು ತಪ್ಪಿಸಿಕೊಂಡಿದ್ದು ಮಾತ್ರ ನನ್ನ ದುರಾದೃಷ್ಟವೇ ಸರಿ.  ಯಾಕೆಂದ್ರೆ, ಹಿಂಗೆ ತಿರುಗೋ ಫ್ಯಾನನ್ನ ಉಲ್ಟಾ ಬೇಕಾದ್ರೂ ತಿರುಗಿಸಿ "ಹೆಂಗೆ?"  ಅಂದು ತನ್ನ ಟೆಸ್ಟರ್ ಜೇಬಿಗೆ ಮತ್ತು ಕಟ್ಟಿಂಗ್ ಪ್ಲೈರ್ ತನ್ನ ಸೊಂಟದ ಉಡದಾರ ಬಿಗಿದ ಪ್ಯಾಂಟಿನ ಸಂದಿಗೆ ತುರುಕಿ ಕೂಲಿ ಗಿಟ್ಟಿಸಿಕೊಂಡು ದಾರಿ ಬಿಡುತಿದ್ದ.    ಆದರೆ, ಇವತ್ತು ಅದೇನು ಕಥೆ ಹೇಳ್ಕೊಂಡು ಬರ್ತಾ ಇದ್ದಾನಂತ ಗೊತ್ತಾಗಲಿಲ್ಲ.   

ಆಗತಾನೇ ಗಣಪ್ಪನ ಹಬ್ಬ ಮುಗಿದಿತ್ತು.  ಓಣಿ ಹುಡುಗರು ಗಣಪ್ಪನ ಪಟ್ಟಿ ಎತ್ತಿ ಓಣಿಯಲ್ಲಿ ನಾಲ್ಕು ದಿನ ಮೈಕು ಒದರಿಸಿ, ಓಣಿ ಜನಗಳ ನಿದ್ದೆ ಹಾಳು ಮಾಡಿದ್ದೂ ಅಲ್ಲದೇ ನಾಲ್ಕು ದಿನಾನೂ ಗಣಪ್ಪನ ಮುಂದಿನ ದೀಪ ನಂದದೇ ಇರಲು ಪಾಳಿ ಮೇಲೆ "ಎಣ್ಣೆ"  ಹಾಕುತ್ತಾ ಸೇವೆ ಮಾಡಿದ್ದರು.  "ಚಪ್ಪಾಳೆ " ತಟ್ಟಿ ಭಜನೆ ಮಾಡಿದ್ದರು. ಐದನೇ ದಿನ  ಗಣಪ್ಪನ ವಿಸರ್ಜನೆಗೆ ಅಣಿ ಮಾಡಿ ಟ್ರ್ಯಾಕ್ಟರೀ  ತುಂಬಾ ದೊಡ್ಡ ಗಣಪ, ಸುತ್ತಲೂ ಮನೆಗಳ ಸಣ್ಣ ಸಣ್ಣ ಗಣಪಗಳನ್ನೂ ಇಟ್ಟುಕೊಂಡು  "ಗಣ್ಪತಿ ಬಪ್ಪಾ ಮೋರಯಾ, …… " ಎಂದು   ಹೊರಟಿದ್ರು.   ಮಧ್ಯೆ ಮಧ್ಯೆ ಡೊಳ್ಳು, ಸಮೇಳ, ನಂದಿ ಕೋಲು ಕುಣಿಸಿ ಸುಸ್ತಾದ ಮಂದಿ ಜೊತೆ ಒಂದಿಷ್ಟು ಹುಡುಗರೂ "ಗರಂ" ಆಗಿದ್ದರು.  ಗಣಪ್ಪನ್ನ ಕಳಿಸಿ ವಾಪಸ್ಸು ಆದಷ್ಟು ಬೇಗ ಯಾರೂ ಬರದಿದ್ದರೂ "ಗರಂ ಹವಾ" ಆಗಲೇ ಓಣಿ ತುಂಬಾ  ಹರಡಿತ್ತು.    "ಹಾಳಾದೋವು, ಗಣಪ್ಪಗಾ ಪಟ್ಟಿ ಕೊಟ್ರಾ ಅದ್ರಾಗ ಏಟ್ ಗಣಪ್ಪಗಾ ಖರ್ಚಾತೋ ಇವ್ರೆಷ್ಟು  'ಎಣ್ಣೆ' ದೀಪ ಹಚ್ಚಿದ್ರೋ  ಯಾವನಿಗ್ಗೊತ್ತು?" ಬಾಯಿ ಬಿಟ್ಟು ಹೇಳದಿದ್ದರೂ ಇದೇ ಕಾರಣಕ್ಕೇ  ಓಣಿ ಹುಡುಗರ ಮ್ಯಾಲೆ ಜನಕ್ಕೆ ಕೆಟ್ಟ  ಸಿಟ್ಟಿತ್ತು.  ಆ "ಗರಂ ಹವಾ" ಟೀಮ್ ನಲ್ಲಿ ಯಾರ್ಯಾರು ಇದ್ರು, ಏನ್ ಮಾಡಿದ್ರು, ಅಂತೆಲ್ಲಾ ರಸವತ್ತಾಗಿ ಹೇಳ್ಕೊಂಡು ನಮ್ ತಿಪ್ಪಣ್ಣ  ಬರ್ತಾ ಇದ್ದಾನಾ? ಬಗೇಹರೀಲಿಲ್ಲ.   ಅದು ಅಲ್ಲದೇ ಕಾಮನ ಹುಣ್ಣಿಮೆ ದಿನ ಕಾಮನ ಸುಡುವ ರಾತ್ರಿ ಅವರಿವರ ಮನೆ ಕಂಬಿ, ಗಳಾ, ಹುಲ್ಲಿನ  ನೆರಿಕೆ, ಒಣಗಿದ ತೆಂಗಿನ ಗರಿ  ಎಲ್ಲಾ ಕದ್ದು ತಂದು ಸುಟ್ಟು ಬೆಳಗಾದ್ರೆ ಅವರವೇ ಮನೆ ಮುಂದೆ ನಿಂತು ಲಬೋ ಲಬೋ ಅಂತ ಒದರಿ ಗಂಟಲು ಕೆರಕೊಂಡು, ಬಣ್ಣ ಸುರಕೊಂಡು  ಬಟ್ಟಿ ಹರಕೊಂಡು, ಧಾಂಧಲೆ ಮಾಡಿದ್ದು ಇನ್ನೂ ಯಾರೂ ಮರೆತಿದ್ದಿಲ್ಲ.  

ಹಿಡಿದು ಹಣಿಯೋಕೆ ಒಬ್ರಾ ಇಬ್ರಾ ಹುಡುಗ್ರು?.  ಎಣಿಸಿದ್ರೂ ನಾಲ್ಕು ಮನಿಗೊಬ್ರು ಮಹಾನುಭಾವ ಸಿಗ ಲಾರದ ಇರ್ತಿದ್ದಿಲ್ಲ.  ಅಂಥಾದ್ರಾಗ  ಜೋರು ಮಾಡಿ ಎದುರಿಗೆ ನಿಂದಿರಿಸಿ ಹೇಳೋದೆಂಗೆ?  ಓಣಿಯಲ್ಲಿ ಅಚ್ಛಾ ಅಚ್ಚಾ ಅನ್ನಿಸಿಕೊಂಡ ಒಂದಿಷ್ಟು ಮಂದಿಗೆ ಇದೇ ಪೀಕಲಾಟ. ಅದರಲ್ಲೂ ವಿಶೇಷವಾಗಿ ಕೆಲ ಮಂದಿ ಗದ್ಲದವರಲ್ಲ ಪಾಪ.  ಸುಮ್ಮನೆ ಒಂದೇ ಒಂದ್ ಎಲೆಗೆ ಇಷ್ಟೇ ಇಷ್ಟು ತಂಬಾಕು ತುಂಬಿ ಅಗೆದು ಪಿಚಕ್ಕಂತ ಉಗುಳಿ ಮನೆ, ಶಾಲೆ, ಗುಡಿ ಗೋಡೆಗಳಿಗೆ ಚಿತ್ತಾರ ಬಿಡಿಸೋರು, ಇಬತ್ತಿ (ವಿಭೂತಿ) ಒರೆಸಿಕೊಂಡು ಬಂದು, ಸಾವಜಿ ಖಾನಾವಳಿ ಯಲ್ಲಿ ಮಟ್ಟಸವಾಗಿ ಕೊಳ್ಳಾಗಿನ ಲಿಂಗಪ್ಪ ಕಾಣದಂತೆ ಕುಂತು ಕೋಳಿ ಕಾಲು ಮುರಿಯುವವರು. ಖುಷಿ ಯಾದ್ರೆ  ಆಸ್ರಕ್ಕೆ, ಬ್ಯಾಸ್ರಾದ್ರೆ  ದುಃಖಕ್ಕೆ  ಜೊತೆಗೊಬ್ರು ಕಂಪ್ನಿ ಇದ್ರ ಪಿಟೀಲು ಕುಯ್ಬೋದಲ್ವಾ? ಅಂಥ ದುಃಖಿತರೊಂದಿಗೆ  ಸಾಂತ್ವಾನ ಹೇಳೋಕೆ ಮಾತ್ರ "ಮದ್ಯ" ಪ್ರದೇಶಕ್ಕೆ ಹೋಗೋರು ಅಷ್ಟೇ.  ಅದಿಲ್ದೇ  ಇದ್ರೆ ಎಲ್ರೂ ಬಿಲ್ಕುಲ್ ಜೆಂಟಲ್ ಮೆನ್ ಗಳೇ.  ಏನೇ ಹೇಳಿ, ಆಚಾರ ವಿಚಾರ, ಮಡಿವಂತಿಕೆ, ಪೂಜೆ, ಪುನಸ್ಕಾರ ಭಕ್ತಿ ಅಂದ್ರೆ ಭಾಳ ಮಂದಿಗೆ ಹೆದ್ರಿಕೆ ಇದ್ದಿದ್ದ.   

ಬಿಡಿ,  ನಮ್ ತಿಪ್ಪಣ್ಣನ್ನೇ ಮರಿತಿದೀನಿ.  ತಿಪ್ಪಣ್ಣ ಬರೋ ದಾರೀಲಿ ಎಡಕ್ಕಿದ್ದ ರಸಿಕ, ವಯಸ್ಸಾದ, ಆದರೆ ದೇಹಕ್ಕೆಂದು ವಯಸ್ಸೇ ಆಗದಿರುವಂತಿದ್ದ ಶೆಟ್ರು ಅಂಗಡಿಗೆ ಕಾಲಿಟ್ಟ.  ಕೈಯಲ್ಲಿ ಚೀಲ ಇಲ್ಲ.  ಅದೇನು  ದಿನಸಿ ತಗಂತಾನೋ ಅಂತ ನೋಡಿದ್ವಿ.  ಉಹೂ, ಏನು ಇಲ್ಲ.  ಶೆಟ್ರು ಹೆಗಲ ಮೇಲೆ ಕೈ ಹಾಕಿ ಮೆಟ್ಲು  ತನಕ ತಿಪ್ಪಣ್ಣನ್ನ ಬಿಟ್ಟು, ಬೀದಿ ನಲ್ಲಿಗೆ ಬೆನ್ನು ಮಾಡಿ "ವಯಸ್ಸಿಗೆ ಬಂದ" ಮೀಸೆಗೆ ಕತ್ತರಿ ಇಡುವ ನೆಪದಲ್ಲಿ ಎದುರಿಗಿದ್ದ ಬೀದಿ ನಲ್ಲಿಗೆ ಬರೋ ಹೆಂಗಸರನ್ನು ತನ್ನ ಕೈಲಿದ್ದ ಚೋಟುಗನ್ನಡಿಯಲ್ಲೇ ಕಣ್ಣಗಲಿಸಿ ಕಂಡು ಭಾವ ಭಂಗಿಗಳನ್ನು ಆನಂದಿಸಿ  ನೋಟಚಾಪಲ್ಯದ ತೃಪ್ತಿ ಹೊಂದುತ್ತಿದ್ದ.  

ಇನ್ನೇನು ನಾನು, ನನ್ನ ಪಕ್ಕದ ಮಿತ್ರನ  ಹತ್ರ ತಿಪ್ಪಣ್ಣ  ಅದೇನ್ ಕೇಳ್ಕಂಡು ಬರ್ತಾನೋ ಅಂತ  ಗೊಂದ ಲಾತು. ನಮ್ಮತ್ರ ಕೇಳೋಕೇನಿದೆ ಮಣ್ಣು?  ದುಡ್ಡಾ, ದುಗ್ಗಾಣ್ಯಾ?  ಬರಲಿ, ಬಂದ್ರೆ ನೋಡಿದ್ರಾಯ್ತು  ಬಿಡು ಅಂತಂದು ನ್ಯೂಸ್ ಪೇಪರ್ ನ ಪುಗಸಟ್ಟೆ ಓದಿನ ಕೊನೆ ಪುಟಕ್ಕೆ ಕಣ್ಣಾಕಿದೆ.  ಕ್ರಿಕೆಟ್ಟು,  ಫುಟ್ಬಾಲು, ಟೆನ್ನಿಸು, ಇವೆಲ್ಲಾ ನಮ್ ಪಾಲಿನ ಸೆಳ್ತಾನೇ ಅಲ್ಲ, ನಮ್ದೇನಿದ್ರು ಚಾವಿ (ಚೌಕಬಾರ), ಗೋಲಿ, ಚಿನ್ನಿದಾಂಡು, ಲಗೋರಿ, ಸೈಕಲ್ಲು ಕಡೆಗೆ ಮರಕೋತಿ.   ನನ್ನ ಎಡಗೈನಂಥ ಮಲ್ಲಿ ಸೈಕಲ್ಲು ತುಳಿಯೋದಿಕ್ಕೋಗಿ ಬಿದ್ದು  ತನ್ನ ಎಡಗೈ ಮುರ್ಕೊಂಡಿದ್ದ. ಈ ಮರಕೋತಿ ಯಾಕ್ ನೆಪ್ಪಾತಂದ್ರ ಅದನ್ನ ಆಡದಿಕ್ಕೋಗಿ ನಾನು ಬಲಗೈ ಮುರ್ಕೊಂಡಿದ್ದೆ. ಈ, ಕಡೆ ಪೇಜ್ ಓದಲು ಮನಸ್ಸೇ ಇದ್ದಿಲ್ಲ.  ಓದೋವ್ರು ತರ ನಾವಂತೂ ಕೂಡೋ ಜರೂರ ತ್ತಿತ್ತು.  ತಿಪ್ಪಣ್ಣನ ಎಂಟ್ರಿಯಿಂದ ಏನ್ ಕತೆ ಶುರುವಾಗುತ್ತೋ  ಅನ್ನುವುದಿತ್ತಲ್ಲ? 

"ಏನ್ ಪಾಟಿ ಪೇಣಿ ( ಸ್ಲೇಟು, ಬಳಪ ) ಜೋಡು ತರ ಇಬ್ರೂ ಗುಡಿ ಕಟ್ಟೆಗೆ  ಕುಂತೀರಿ?  ಗೌರ್ಮೆಂಟ್ನವ್ರು ಯಾವಾಗ್ ಮೇಷ್ಟ್ರು ಕೆಲ್ಸ ತುಂಬ್ತಾರಂತೆ? "  ತಿಪ್ಪಣ್ಣ ಅಲ್ಲಿದ್ದ ಒದರಿಕ್ಯಂತಾನೇ ಬಂದ.  ಅಂತೂ ನಾವು ಪೇಪರ್ ಮಡಿಚಿಟ್ಟು  "ಏನ್ ತಿಪ್ಪಣ್ಣ, ಅಲ್ಲಿಂದ ನೋಡಕ್ಕತ್ತೀವಿ, ಎಲ್ರತ್ರ ಒಂದ್ಕಡೆ ಕಿವಿ ಊದ್ತೀದಿ, ಇನ್ನೊಂದ್ಕಡೆ ಕೈ ಹಿಂಡ್ತೀದಿ? ಏನ್ ಕತೆ?"ಕೇಳಿದೆವು.    

"ಏನಿಲ್ಲಾ ಪಾಟೀಲಣ್ಣಾ,  ನಿಮ್ ಹತ್ರ ಐಯ್ನೂರ್ ರುಪಾಯ್ದು ಚಿಲ್ರ ಐತಾ?"  ಗರಿಯಾದ ನೋಟು ಹಿಂದು ಮುಂದೂ ತಿರುವುತ್ತಾ  ತಿಪ್ಪಣ್ಣ ತನ್ನ ತಿಪ್ಪಲ ಕಕ್ಕಿದ.  "ನಾವೇ ದೇವ್ರನ್ನು ಹೊರಾಗ್ ಬರ್ಲಾರದಂಗ್ ಕೂಡಿ ಹಾಕಿದ ಗುಡಿ ಕಟ್ಟಿಗೆ ಕಂಡವರ ಮನೆಯಿಂದ ಪುಗಸಟ್ಟೆ ಪೇಪರ್ ತಂದು ತಂಗಳ ಸುದ್ದಿ ಒದಕ್ಕತ್ತೀವಿ, ನಮ್ಮತ್ರ ಎಲ್ಲಿ ಬರುತ್ತೋ ತಿಪ್ಪಣ್ಣಾ ದುಡ್ಡು?  ಎಂಕಣ್ಣನ ಸಿನ್ಮಾ ಟಾಕೀಜಿನ ಎದುರಿಗೆ ರುಪಾಯಿಗೊಂದ್ ಬಟ್ಲು ಮಂಡಕ್ಕಿ ಐದು ಚೋಟು ಮಿರ್ಚೀ ರುಚಿಗೆ ಇವತ್ತು ನಮ್ಮ ಜೇಬು ನಮಗೇ ಹಣಕಿ ಹಾಕಿ ನೋಡ್ತಾ ಇದೆ, ಏನ್ ಮಾಡಾನಪ್ಪಾ?"ಅಂದು ಸಮಾಧಾನ ಮಾಡಿಕೊಂಡೆವು.    

ನಮ್ ತಿಪ್ಪಣ್ಣ ಐದು ನೂರ್ ರುಪಾಯಿ ನೋಟು ಹಿಡ್ಕಂಡು  ಓಣಿ ತುಂಬಾ ಅಡ್ಯಾಡಿದ್ರೂ ಚಿಲ್ರ ಸಿಗ್ಲಿಲ್ಲ ಅನ್ನೋದು ಬೇಜಾರಲ್ಲ.  ಆಗತಾನೇ ಐದ್ ನೂರರ ನೋಟು ಚಾಲ್ತಿಗೆ ಬಂದಿತ್ತು. ಓಣಿಯಲ್ಲಿ ಒಬ್ರ ಹತ್ರಾನೂ ಚಿಲ್ರೆ ಇರ್ಲಿಲ್ಲ.  ಆದರೆ, ಅದನ್ನ ತಾನು ತನ್ನ ಅದ್ಭುತ ಕೌಶಲ್ಯವಾದ ಕರೆಂಟ್ ರಿಪೇರಿ ಕೆಲ್ಸದಲ್ಲಿ ಒಂದೇ ದಿನದಲ್ಲಿ ದುಡಿದು ತಂದು  ತೋರ್ಸಿದ್ರೂ  ಯಾರೂ ಆಶ್ಚರ್ಯದಿಂದ ಕೇಳ್ಲಿಲ್ಲ ಮತ್ತು  ಮೆಚ್ಚಲಿಲ್ಲ ಅನ್ನೋದೇ ಅವತ್ತಿನ ರಾತ್ರಿಯ ತಿಪ್ಪಣ್ಣನ "ಶೋಕಾಚರಣೆ"ಯ ಮೊದಲ ಮತ್ತು ಕೊನೆ ಅಜೆಂಡಾವಾಗಿತ್ತು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

9 thoughts on “ತಿಪ್ಪಣ್ಣ ಸರ್ಕಲ್: ಅಮರ್ ದೀಪ್ ಪಿ.ಎಸ್.

  1. ತಿಪ್ಪಣ್ಣನ ಶೋಕಾಚರಣೆಯಲ್ಲಿ "ಮಧ್ಯ" ಪ್ರವೇಶವಿತ್ತೊ?
    ಬರಹ ಚೆನ್ನಾಗಿದೆ.

  2. ತಿಪ್ಪಣ್ಣನ ಸುತ್ತಲೇ ತಿರುಗುವ ಕತೆ ತುಂಬಾ ರೋಚಕವಾಗಿದೆ.

  3. Good and funny… 🙂 Good old days… Now everyone has five hundred note… thanks to inflation not much value to it…

Leave a Reply

Your email address will not be published. Required fields are marked *