ತಿನ್ನುವ ಅನ್ನಕ್ಕೆ ಕಲ್ಲು ಹಾಕುವ ಮಂದಿ ಮತ್ತು ಇಂಗದ ಹಸಿವು: ಜೈಕುಮಾರ್ ಹೆಚ್.ಎಸ್.


ದೇಶದಲ್ಲಿ ಯಾರ ಹಸಿವು ಇಂಗುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸುವ ಮುನ್ನ ನಮ್ಮ ರಾಜ್ಯದ ಬಹುಸಂಖ್ಯಾತ ಜನತೆಯ ಪರಿಸ್ಥಿತಿಯತ್ತ ಕಣ್ಣು ಹಾಯಿಸೋಣ. 18 ವರ್ಷದೊಳಗಿನ ಲಕ್ಷಾಂತರ ಮಕ್ಕಳು ಇಂದಿಗೂ ಶಾಲೆಯಿಂದ ಹೊರಗುಳಿದಿವೆ. ಯೂನಿಸೆಫ್ ಸಂಸ್ಥೆಯ ಪ್ರಕಾರ ಶೇ. 50 ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅಲ್ಲದೆ 3 ವರ್ಷದೊಳಗಿನ ಮಕ್ಕಳ ಪೈಕಿ 10ರಲ್ಲಿ 8 ಮಕ್ಕಳು ರಕ್ತಹೀನತೆ ಹೊಂದಿದ್ದರೆ, 5 ವರ್ಷದೊಳಗಿನ ಮಕ್ಕಳ ಪೈಕಿ 10ರಲ್ಲಿ 4 ಮಕ್ಕಳ ಬೆಳವಣಿಗೆ ಸರಿಯಾದ ಆಹಾರ ಪೋಷಣೆಯಿಲ್ಲದೆ ಕುಂಠಿತಗೊಂಡಿದೆ. 

ನಮ್ಮ ರಾಜ್ಯವೂ ಒಳಗೊಂಡಂತೆ ಇಡೀ ದೇಶದಲ್ಲಿ ಹಸಿವಿನ ತೀವ್ರತೆ ಬಹುಸಂಖ್ಯಾತ ಜನತೆಯ ಬದುಕನ್ನು ಬಲಿತೆಗೆದುಕೊಳ್ಳುತ್ತಿದೆ. ನಮ್ಮ ದೇಶದ ಹಸಿವಿನ ಪ್ರಮಾಣ ಆಫ್ರಿಕಾದ ಬಡದೇಶಗಳಿಗಿಂತಲೂ ಕಠೋರ. ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ ಪ್ರಕಾರ ನಮ್ಮ ದೇಶದ ತಲಾವಾರು ಆಹಾರ ಧಾನ್ಯ ಲಭ್ಯತೆಯು ಈ ದೇಶಗಳಿಗಿಂತಲೂ ತೀರಾ ಕಡಿಮೆಯಿದೆ. 

ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೊಳಿಸಿದ ತರುವಾಯ ದೇಶದಲ್ಲಿ ತಲಾವಾರು ಆಹಾರ ಧಾನ್ಯ ಲಭ್ಯತೆ ತೀವ್ರತರದಲ್ಲಿ ಕುಂಠಿತಗೊಂಡಿದೆ. ಬ್ರಿಟಿಷ್ ಆಡಳಿತದಲ್ಲಿ ಅದು ವರ್ಷಕ್ಕೆ 200 ಕಿ.ಗ್ರಾಂ ಇತ್ತು. ಸ್ವಾತಂತ್ರ್ಯದ ಹೊತ್ತಿಗೆ 150 ಕೆ.ಜಿ ಗೆ ಕುಸಿಯಿತು. 1980ರ ಹೊತ್ತಿಗೆ ಹಲವು ಪರಿಶ್ರಮಗಳಿಂದಾಗಿ ಅದನ್ನು 200 ಕೆಜಿ ಗೆ ಹೆಚ್ಚಿಸಲಾಯಿತು. ಇದೀಗ ಅದು 161 ಕೆಜಿ ಇದ್ದು, 1930ರ ದಶಕದಲ್ಲಿದ್ದ ಮಟ್ಟ ತಲುಪಿದೆ. ಇದೇ ವೇಳೆ, ಅಮೇರಿಕಾದಲ್ಲಿ ನೇರ ಮತ್ತು ಪರೋಕ್ಷ ಆಹಾರ ಧಾನ್ಯ ತಲಾವಾರು ಸೇವನೆಯು 900 ಕೆಜಿ ಇರುವುದನ್ನು ಗಮನಿಸಬೇಕು. ಆಹಾರ ಧಾನ್ಯ ಲಭ್ಯತೆಯ ಪ್ರಮಾಣವು ಕಡಿಮೆಯಿರುವುದರಿಂದ ತಲಾವಾರು ದೈನಂದಿನ ಕ್ಯಾಲೊರಿ ಸೇವನೆ (ಕಿ.ಕ್ಯಾಲೊರಿ) 1993ರಲ್ಲಿ 2156 ಇದ್ದರೆ 2009ರಲ್ಲಿ 1981ಕ್ಕೆ ಕುಸಿದಿದೆ. ದುಡಿಯಲು ಕನಿಷ್ಟ ಆಹಾರಧಾನ್ಯವನ್ನೂ ನೀಡದೇ ದುಡಿಸಿಕೊಳ್ಳುವ ಕಾಲವಿದು.! ಏಕೆಂದರೆ, ದೇಶದ ಜಿಡಿಪಿ ಬೆಳವಣಿಗೆ ಹೆಚ್ಚುತ್ತಿದ್ದರೂ ಉದ್ಯೋಗಗಳನ್ನು ಹೆಚ್ಚಿಸುವ ಬದಲಿಗೆ ಅದು ‘ಉದ್ಯೋಗ ರಹಿತ’/’ಉದ್ಯೋಗ ನಾಶ’ ಬೆಳವಣಿಗೆಯ ಸ್ವರೂಪದಲ್ಲಿದೆ. 

ಈಗ ಹಸಿವು ಏಕೆ ಇಂಗದು ಎಂಬುದನ್ನು ಅರಿತುಕೊಳ್ಳಲು ಕೆಲವು ಅಂಕಿ ಅಂಶಗಳನ್ನು ನೋಡೋಣ. 2006ರಿಂದ 2014ರವರೆಗೆ ಈ ದೇಶದಲ್ಲಿ ಕಾರ್ಪೊರೇಟ್ ರಂಗಕ್ಕೆ ನೀಡಿರುವ ತೆರಿಗೆ ವಿನಾಯಿತಿ ಮತ್ತು ಸಹಾಯಧನಗಳ ಪ್ರಮಾಣ (ಕಾರ್ಪೊರೇಟ್ ತೆರಿಗೆ, ಅಬಕಾರಿ ಸುಂಕ, ಸೀಮಾ ಸುಂಕ, ಇತ್ಯಾದಿ) ರೂ.   36.5 ಲಕ್ಷ ಕೋಟಿ. ಗ್ಲೋಬಲ್ ಫೈನಾನ್ಸಿಯಲ್ ಇಂಟಿಗ್ರಿಟಿ ಎಂಬ ಸಂಸ್ಥೆ ಪ್ರಕಾರ 1948ರಿಂದ ಇಲ್ಲಿಯವರೆಗೆ ನಮ್ಮ ದೇಶದಿಂದ ಕಾನೂನುಬಾಹಿರವಾಗಿ ಹೊರದೇಶಗಳಲ್ಲಿ ಅಡಗಿಸಿಟ್ಟಿರುವ ಹಣ ರೂ. 21 ಲಕ್ಷ ಕೋಟಿ. ರಾಜ್ಯದ ಬಡಜನತೆಯ ಅಷ್ಟೇ ಏಕೆ, ಇಡೀ ಜನತೆಗೆ ಅನ್ನ ಒದಗಿಸಲು ಕೇವಲ ರೂ. 6000 ಕೋಟಿ ಸಾಕು. ಆದರೆ, ಶ್ರೀಮಂತರ ಹಸಿವು ಇಂಗಿಸಲಾದೀತೇ?

ಇವತ್ತಿನ ದುರಂತವೆಂದರೆ, ರೋಮ್ ದೊರೆ ನೀರೋನ ಅತಿಥಿಗಳು ಬಡವರು ತಿನ್ನುವ ಅನ್ನಕ್ಕೂ ಕಲ್ಲು ಎಸೆಯುತ್ತಿರುವುದು. ಮತ್ತೊಂದೆಡೆ, ಆಳುವವರು ಕೇವಲ 5 ಕೆಜಿ ಅಕ್ಕಿ ನೀಡಿ ಅದೇ ಬಡವರ ಭಾಗ್ಯ ಎಂದು ಬಣ್ಣಿಸುತ್ತಿರುವುದು. 

ಜನರ ಬದುಕನ್ನು ಹಸನು ಮಾಡಲು ಕೇವಲ ಅನ್ನ ನೀಡಿದರೆ ಸಾಲದು, ಉತ್ತಮ ಪೋಷಕಾಂಶವುಳ್ಳ ಆಹಾರ ಭದ್ರತೆ ನೀಡಬೇಕು, ಗೌರವಯುತ ಉದ್ಯೋಗ ಒದಗಿಸುವ ಮೂಲಕ ಜನರ ಕೊಳ್ಳುವ ಶಕ್ತಿ ಹೆಚ್ಚಿಸಬೇಕು, ಸಾರ್ವತ್ರಿಕ ಗುಣಮಟ್ಟದ ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಬೇಕು.  
                
ಆಧಾರ:
1.    Global Financial Integrity report
2.    Growth and Hunger  : Prabhat Patnaik
3.    Psainath.org
4.    Unicef website

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x