ಅಮರ್ ದೀಪ್ ಅಂಕಣ

ತಾಳಿ ಕಟ್ಟಿದ ಶುಭ ವೇಳೆ ….ಕೊರಳಲ್ಲಿ ಅದ್ಯಾವ ಮಾಲೆ?: ಅಮರ್ ದೀಪ್ ಪಿ.ಎಸ್.

ಅದೊಂದು ಅದ್ಭುತವಾದ ಸಿನೆಮಾ.  "ಬೆಂಕಿಯಲ್ಲಿ ಅರಳಿದ ಹೂ "   ಬಹುಶಃ 1983 ರಲ್ಲಿ ಬಂದ ಕೆ. ಬಾಲ ಚಂದರ್ ಅವರ ನಿರ್ಧೇಶನದ ಸಿನೆಮಾ ಅದು.  ತನ್ನೊಳಗಿನ ವೈಯುಕ್ತಿಕ ಆಸೆ ಮತ್ತು ಬದುಕಿನ ಕನಸು ಗಳನ್ನು ಅದುಮಿಟ್ಟುಕೊಂಡು ತನ್ನ ಕುಟುಂಬದವರ ಹಿತಕಾಗಿಯೇ ತಾನು ತನ್ನ ನಗುವನ್ನು ಜೀವಂತವಾಗಿಟ್ಟು ದುಡಿಯಲು ಸಿಟಿ ಬಸ್ಸು ಹತ್ತುವುದರಲ್ಲೇ ಕೊನೆಗೊಳ್ಳುವ ಸಿನೆಮಾದಲ್ಲಿ ಸುಹಾಸಿನಿ ಎಂಬ ಚೆಲುವೆ ತನ್ನ ಕಣ್ಣಲ್ಲೇ ನಗುವನ್ನು  ಮತ್ತು ನಗುವಿನಲ್ಲೇ ದುಃಖವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ.  ನಿಜ ಬದುಕಿನ ಹಲವರ ಸನ್ನಿವೇಶಗಳನ್ನು ದೃಶ್ಯಕಾವ್ಯವಾಗಿಸಿದ ಕೀರ್ತಿ ಕೆ. ಬಾಲಚಂದರ್ ಅವರಿಗೆ ಸಲ್ಲಬೇಕು.  ಆ ಸಿನಿಮಾಕ್ಕೆ ಸುಹಾಸಿನಿ ಅವರಿಗೆ ಫಿಲಂ ಫೇರ್ ಪ್ರಶಸ್ತಿ ದೊರಕಿತು. ಅದರಲ್ಲಿನ ವಿಶೇಷವೆಂದರೆ ಸುಹಾಸಿನಿ ಅವರ ನಿಜ ಜೀವನದ ಚಿಕ್ಕಪ್ಪ ಕಮಲ್ ಹಾಸನ್ ಜೊತೆ ಅಭಿನಯಿಸಿದ್ದು.  

ಆ ಸಿನಿಮಾದಲ್ಲಿ ಎಂ. ಎಸ್. ವಿಶ್ವನಾಥನ್ ಅವರ ಸಂಗೀತವಿರುವ ಐದು ಹಾಡುಗಳಲ್ಲಿ ಒಂದಕ್ಕಿಂತ ಒಂದು ಅರ್ಥಪೂರ್ಣವಾಗಿವೆ . ಎಲ್ಲಾ ಹಾಡುಗಳು ಬಹಳ ಇಷ್ಟ.  ಮತ್ತವು ನಮ್ಮ ಸುತ್ತಮುತ್ತಲೂ ನಡೆವ ಸನ್ನಿವೇಶ ಗಳಿಗೆ ಆಗಾಗ ಹೊಂದುತ್ತಲೂ ಇರುತ್ತವೆ. ಕಮಲ್ ಹಾಸನ್ ಸಿಟಿ ಬಸ್ ಕಂಡಕ್ಟರ್ ಆಗಿ ಅಭಿನಯಿಸುತ್ತಾ ಹೇಳುವ ಎಸ್ ಪಿ .ಬಿ. ಅವರ ಧ್ವನಿಯ   "ಮುಂದೆ ಬನ್ನಿ … ಇನ್ನು ಮುಂದೆ ಬನ್ನಿ … ಬೇರೆ ಯಾರು ಈ ಮಾತನ್ನು ಹೇಳೋದಿಲ್ಲ ….. " ಎಂಬ ಹಾಡು ಖುಷಿ ಖುಷಿಯಾಗಿ ಜೀವನ ಕಳೆಯಲು ಪ್ರೇರೇಪಿಸುವಂಥದ್ದು. ಮತ್ತು ರಾಮಕೃಷ ಅವರು ಸಖತ್ ಆಗಿ ನಟಿಸಿದ  "ತಾಳಿ ಕಟ್ಟುವ ಶುಭ ವೇಳೆ ಕೈಯಲ್ಲಿ ಹೂವಿನ ಮಾಲೆ "…. ಎಂಬ ಹಾಡಿನಲ್ಲಿ ಪಾತ್ರಗಳಲ್ಲಿನ ಸಂಕೀರ್ಣತೆ ಮತ್ತು ಆ ಕ್ಷಣದ ಸತ್ಯಗಳನ್ನು ದೃಶ್ಯ ಸಹಿತವಾಗಿ ಬಿಂಬಿಸಿರು ವುದು ತುಂಬಾ ಇಷ್ಟವಾಗುತ್ತೆ.      

ಯಾಕೆ ನಾನು ತಾಳಿ ಕಟ್ಟುವ ಶುಭ ವೇಳೆ ಹಾಡನ್ನು ಪದೇ ಪದೇ ಜ್ಞಾಪಿಸಿಕೊಳ್ಳುತ್ತೇನೋ ಗೊತ್ತಿಲ್ಲ. ಪ್ರತಿ ಮದುವೆ ಸಮಾರಂಭದಲ್ಲೂ ಆ ಹಾಡು at least ಒಮ್ಮೆಯಾದರೂ ಕೇಳಿರುತ್ತದೆ. ಇಲ್ಲವೇ? ನಾನೇ ಗುನುಗಿರು ತ್ತೇನೆ.   ಆದರೆ ಆ ಹಾಡು ಕೇಳಿದಾಗೆಲ್ಲ ಒಂದು ಸಣ್ಣ ಸಡಗರ, ಮನಸ್ಸಿನ ಮೂಲೆಯಲ್ಲೇ ಮುದುರಿ ಕುಳಿತ ಮುಟಿಗಿಯಷ್ಟು  ಸಂಕಟ, ನಮ್ಮ ಮತ್ತು ಹತ್ತಾರು ಬಂಧುಗಳಲ್ಲಿನ ಮುಖವಾಡದ ನಗೆ ಮತ್ತು ಮುಚ್ಚಿಟ್ಟ ದುಃಖ ಗಳು ಒಟ್ಟೊಟ್ಟಿಗೆ ಕಾಡಲಾರಂಭಿಸುತ್ತವೆ.. ಶುಭವಾಗಲಿ ಎಂದು ಹಾರೈಸಿ ಎಷ್ಟು ಜನ ಮದುವೆ ಆದ ನಂತರ ದಂಪತಿಯ ಕಷ್ಟ ಸುಖಕ್ಕೆ ಆಗಿಬರುತ್ತಾರೆ? ಬಂದರೂ ಅದು ಟೆಂಪರರಿ. ಅದೇನಿದ್ದರೂ ಗಂಡ ಹೆಂಡತಿಯ ನಂಬಿಕೆ ಮೇಲೆ ನಿಂತಿರುತ್ತೆ. ಮದುವೆಯನ್ನು ನಾವು ಎಷ್ಟು ಗ್ರಾಂಡ್ ಆಗಿ ಮಾಡಿದೆವು? ಮಾಡಿಕೊಂಡೆವು? ಅನ್ನುವುದಕ್ಕಿಂತ ಮದುವೆ ನಂತರ ಎಷ್ಟು ಗ್ರ್ಯಾಂಡ್ ಆಗಿ ಬದುಕಿದೆವು ಅನ್ನುವುದೇ ನಿಜವಾದ ಮದುವೆ ಜೀವನದ ಮೂಲ ಮಂತ್ರವೆನ್ನುತ್ತಾರೆ.  ಆದರೆ ಈಗೀಗಲ್ಲ, ಯಾವಾಗಲಾದರೂ ನಾವು ಯೋಚಿಸು ವುದೇನೆಂದರೆ, "ಕನಿಷ್ಠ ಪಕ್ಷ ಮದುವೆ ಆದ್ರೂ ಗ್ರ್ಯಾಂಡ್ ಆಗಿ ಮಾಡ್ಬೇಕು " ಅನ್ನುವುದು ಕೇವಲ ಸಂಭಂಧಿಕರು, ಬಂಧುಗಳು, ಅಕ್ಕಪಕ್ಕದವರು, ಏನಂದುಕೊಂಡಾರೋ? ಎಂಬಷ್ಟರ ಮಟ್ಟಿಗೆ ಮಾತ್ರ ಸೀಮಿತವಾಗಿರುತ್ತೆ. ನಮ್ಮ ಆರ್ಥಿಕ ಮಿತಿಗೆ, ಸ್ವಂತ ನಿಲುವಿಗೆ ನಾವು ಇಟ್ಟುಕೊಂಡ  ಬೆಲೆಯಿಂದಲ್ಲ.  

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎನ್ನುತ್ತಾರೆ, ಅದು ತಪ್ಪಲ್ಲ …. ಒಳ್ಳೆಯ ಕೆಲಸ… ಆಲ್ವಾ? ಆದರೆ ಅದೇ ಮದುವೆಯಲ್ಲಿ ತಿಳಿಯದೇ ಅಥವಾ ಪರಿಸ್ಥಿತಿ ಕೈ ಮೀರಿ ನಡೆವ ಘಟನೆಗಳು, ಯಾವೊದೋ ಒಂದು ಸಣ್ಣ ತಪ್ಪು ಜರುಗಿದರೂ ಅಹಮಿಕೆ ಅನ್ನುವುದು ಒಬ್ಬರಲ್ಲಾ ಒಬ್ಬರಲ್ಲಿ ಜಾಗೃತವಾಗಿಬಿಡುತ್ತೆ. ಅಥವಾ ಆ ತಪ್ಪುಗಳನ್ನು ಕೆಲವರು ಕೆಲವೊಂದು ಸಂಧರ್ಭದಲ್ಲಿ ಬೇಕೆಂದೇ ತಮ್ಮ ತಮ್ಮ ಅನುಕೂಲಕ್ಕೆ ಬಳಸಿಕೊಂಡು ಸಾಧಿಸಿಬಿಟ್ಟಿರುತ್ತಾರೆ.   ನಿಜವಾಗಲೂ ಹೇಳಬೇಕೆಂದರೆ ಆ ಮದುವೆಯಲ್ಲಿ "ಮದುವೆ ಗಂಡು ಮತ್ತು ಹೆಣ್ಣು" ಗಳ ಒಂದೇ ಒಂದು ಸಣ್ಣ ತಪ್ಪು ಇರದಿದ್ದರೂ ಆ ಮದುವೆಯಲ್ಲಿ ಆದ ಬೇರೆ ಬೇರೆ ಅವಘಡಗಳಿಗೆ ತಮ್ಮವರದೇ ಪರ ಮಾತು ವಿರೋಧ ಕಟ್ಟಿಕೊಳ್ಳಬೇಕಾಗುತ್ತೆ. ಆ ಸಂಧರ್ಭ  ತಮ್ಮ ಹೊಸದಾಗಿ ಮದುವೆ ಆದ ಸಂತಸ ಕ್ಷಣ ಗಳನ್ನು ಒತ್ತಟ್ಟಿಗಿಟ್ಟು ಮೂಕವಾಗಿರಬೇಕಾಗುತ್ತೆ.. ಅಥವಾ ಆ ಮದುವೆಯಲ್ಲಾದ ತಮ್ಮದಲ್ಲದ ತಪ್ಪುಗಳಿಗೆ ತಮ್ಮನ್ನು ಐ ವಿಟ್ನೆಸ್ ಗಳಂತೆ ಪ್ರತಿ ಬಾರಿಯ ಕಲಹಕ್ಕೆ ಎಳೆದು ತರುವುದನ್ನು ನಿಲ್ಲಿಸಲು ಪ್ರೊಟೆಸ್ಟ್ ಮಾಡಿ ದರೂ ಮಾಡಬಹುದು. ಇನ್ನು ದುರ್ಬಲ ಮನಸ್ಸಿನ ಹೆಂಗಸರಾದರಂತೂ ಆತ್ಮಹತ್ಯೆಯಂಥ ದೊಡ್ಡ ತಪ್ಪುಗಳಿಗೆ ತಲೆ ಕೊಟ್ಟುಬಿಡುತ್ತಾರೆ. 

ಈ ಸಮಯದಲ್ಲಿ ಹುಟ್ಟಿಕೊಳ್ಳುವ ಮತ್ತೊಂದು ಸಂಕಟವೆಂದರೆ, ಮದುವೆಯಾಗಿನ್ನು ತಿಂಗಳಾಗಿಲ್ಲ ಆಗಲೇ ಗಂಡನ ಪರ ಅಥವಾ ಹೆಂಡತಿ ಪರ ವಹಿಸಿ ಮಾತಾಡುತ್ತಾರೆಂಬ ಆಪಾದನೆ.  ನಿಜವಾಗಿಯೂ ಆ ಸಮಯದಲ್ಲಿ ಯಾರ ಪರ ಯಾರು ವಕಾಲತ್ತು ವಹಿಸುತ್ತಾರೆಂಬುದಕ್ಕಿಂತ ಹೆಚ್ಚಾಗಿ ಆ ಕ್ಷಣದಲ್ಲಿ ಹಾಗೂ ಮುಂದಿನ ಜೀವನಕ್ಕೆ ಅವಶ್ಯವಿರುವ ಸಂಯಮದ ಬಗ್ಗೆ ಯಾರು ಮಾತಾಡುತ್ತಾರೆಂಬದು ಅರ್ಥಪೂರ್ಣ.   ನಾನು ಕಂಡಂತೆ ಕೆಲ ಮದುವೆಗಳು ಸಂತೋಷದಲ್ಲಿ ಮುಗಿದಿವೆ, ಕೆಲವು ಕಲಹಗಳಲ್ಲಿ ಮುಂದುವರೆದಿವೆ, ಇನ್ನು ಕೆಲವು ಸಮಾಧಾನ ಚಿತ್ತದಿಂದ ಇರಲು ಬಿಟ್ಟು ನಿರುಮ್ಮಳವಾಗಿವೆ. ದುರಾದೃಷ್ಟವೆಂದರೆ "ಈ ಮದುವೆ ಅಂದ್ರೇನೆ ಮೈ ಉರಿಯುತ್ತೆ" ಅನ್ನುವವರು ಇದ್ದಾರೆ.  ಅದು ಅವರು ಆಗುವ "ಮದುವೆ" ಹೆಣ್ಣು ಅಥವಾ ಗಂಡಿನ  ಬಗ್ಗೆ ಅಲ್ಲ… ಈ ಮದುವೆ ಎನ್ನುವ ಸಂಪ್ರದಾಯದ ಹೆಸರಿನಲ್ಲಿ ಉಂಟಾಗುವ ಸಣ್ಣ ಸಣ್ಣ ರಿಪಿರಿಪಿಗಳನ್ನು ತಮ್ಮದೇ ಪ್ರತಿಷ್ಠೆಗೆ ಬಂದ ಧಕ್ಕೆ ಎನ್ನುವಂತೆ ಹಲುಬುವವರ ನಡವಳಿಕೆಯಿಂದ. ಮತ್ತು ಸಿಕ್ಕ ಅವಕಾಶಗಳನ್ನೇ ತಮ್ಮ ಅನುಕೂಲಕ್ಕೆ ಬಳಸಿ ಕೊಳ್ಳುವ ಜನರ ಯೋಚನೆಯಿಂದ… 

ಇಂಥಹುದೇ  ಮದುವೆ ಆದ ನಂತರ ಆ ದಂಪತಿಗೆ ಧರಿಸುವ  ಗರ್ಭಕ್ಕೆ, ಅದರ ಬೆಳವಣಿಗೆಗೆ, ಹುಟ್ಟುವ ಮಗುವಿಗೆ ಏನೆಲ್ಲಾ ಪರಿಣಾಮ ಬೀರಬಹುದು ಅಂದಾಜಿಸುವುದೂ ಇಲ್ಲ; ಇಸಂ ಮತ್ತು ಅಹಂ ಸಾಧಿಸುವವರು. ಇದೆಲ್ಲದರ ಪರಿಣಾಮದ ನಂತರ ಒಂದೋ ಆ ದಂಪತಿ ಪ್ರತ್ಯೇಕಕ್ಕೆ ಇಚ್ಚೆ ಪಡಬಹುದು. ಅಥವಾ ಪ್ರತಿಭಟಿಸಲೂ ಆಗದೇ ಅನುಭವಿಸಲೂ ಆಗದೇ ಒದ್ದಾಡಬಹುದು. ಕೆಲವು ಸಂಧರ್ಭದಲ್ಲಿ ಹೆಣ್ಣು ಗರ್ಭ ಧರಿಸಿದ ದಿನದಿಂದ ಹೆರಿಗೆ ಆಗಿ ವರ್ಷಗಳಾದರೂ hysterical  ಕಂಡೀಶನ್ ನಲ್ಲೇ ಇದ್ದು ಬಿಡುವ ಅಪಾಯವೂ ಎದುರಾಗಬಹುದು. ಹಾಗೇನಾದರೂ ಆದರೆ ಆಕೆಯ ಗಂಡನಾದವನ ಪರಿಸ್ಥಿತಿ ಹೇಳತೀರದು… ಹಾಗಂತ ನನ್ನ ಸ್ನೇಹಿತರೊಬ್ಬರು ಹೇಳುತ್ತಿದ್ದರು. ನಿಜಾನಾ? ವೈದ್ಯ ಸಂಭಂಧಿ ಪರಿಣಿತರು ಈ ಬಗ್ಗೆ ಹೆಚ್ಚು ಬಲ್ಲರು.. 

A good hang is better than a bad marriage, ಹಾಗಂತ ವಿಲಿಯಂ ಶೇಕ್ಸ್ ಪೀಯರ್ ಬಹುಶಃ  ತನ್ನ ಜೂಲಿಯಸ್ ಸೀಜರ್ ನಲ್ಲಿ ಒಂದು ಸಾಲು  ಬರೆಯುತ್ತಾರೆ.. ಆ ಪುಸ್ತಕವನ್ನು ಓದಲೆಂದೇ ನಾನು ಕೊಂಡಿದ್ದೆ.  ಆದರೆ ನನ್ನ ಗೆಳೆಯನೊಬ್ಬನ ಮದುವೆ ಆಮಂತ್ರಣ ಬಂದಿತು. ಇನ್ನೇನು ಸ್ಟೇಜ್ ಹತ್ತಿ ವಿಶ್ ಮಾಡಲು ಹೊರಡ ಬೇಕು; ಸುಮ್ಮನೆ ಒಂದು ಸುತ್ತು ಪುಸ್ತಕವನ್ನು ಬರ್ ಅಂತ ತಿರುವಿದೆ, ಫಕ್ಕನೆ ಆ ಸಾಲು ಕಣ್ಣಿಗೆ ಬಿದ್ದಿತ್ತು.  ಉಡು ಗೊರೆಯಾಗಿ ಓದದೇ ಇದ್ದ ಆ ಪುಸ್ತಕವನ್ನು ಕೈಗಿಟ್ಟು ಬಂದಿದ್ದೆ.  

ಇರಿ, ಒಂದು ಮಾತಿದೆ.  ಮದುವೆ ಆದ ಮೇಲೆ ಬಸಿರು, ಸೀಮಂತ ಕಾರ್ಯ, ಬಾಣಂತನ, ತಾಯ್ತನ, ಎಲ್ಲಾ ಸಹಜ ತಾನೇ? ಈ ಎಲ್ಲಾ ಸಂಪ್ರದಾಯದ ಹೆಸರಿನಲ್ಲಿ ಕೆಲವರು ತಮ್ಮ ತಮ್ಮ ಸಿದ್ಧ ಹಕ್ಕು ಮತ್ತು ego ಗಳನ್ನೂ ತೃಪ್ತಿ ಪಡಿಸಿಕೊಳ್ಳಲು ಕಾಯುತ್ತಿರುತ್ತಾರೆ.  ಒಂದು ಪ್ರಸಂಗ ಹೇಳುತ್ತೇನೆ.  ಮದುವೆಯಾದ ಜೋಡಿಗೆ  ತಮ್ಮೆಲ್ಲಾ ಇಲ್ಲಗಳ ನಡುವೆ "ಇರಲು" ನಗು ತರಿಸುವಂತೆ ಹೊಟ್ಟೆಯಲ್ಲಿ ಭ್ರೂಣ ಬೆಳೆಯುತ್ತದೆ. ಅದಕ್ಕೀಗ  ಐದು ತಿಂಗಳು, ತವರಿನವರು ಬಯಕೆ ಬುತ್ತಿ ತರಬೇಕು,   ನಂತರ ಅದಕ್ಕೀಗ ಎಂಟು ತಿಂಗಳು, ಈಗ ಸೀಮಂತ ಕಾರ್ಯ ಮಾಡಬೇಕು, ಅದು ಒಬ್ಬ ಬಸಿರು ಹೊತ್ತ  ಹೆಂಗಸಿನ  ಸಹಜ ಆಸೆ ಮತ್ತು ಖುಷಿ ಕೂಡ.  ಆದರೆ, ಅದೇ ಕಾರ್ಯಗಳು ಆ ಗಂಡ ಹೆಂಡತಿಯು  ಮತ್ತೊಂದು ಕಾಳಗ ಸನ್ನಿವೇಶ ನೋಡಲು ಅಥವಾ ಅನುಭವಿಸಲು ಇಷ್ಟವಿರದೇ ಗರ್ಭ ಧರಿಸುವ ಮುನ್ನವೇ ನಿರ್ಧರಿಸಿದವರಂತೆ, "ಸಾಕು ನಮಗಿನ್ನು, ನಮ್ಮ ಸಲುವಾಗಿಯೇ ನೀವು ಮಾಡುವ ಯಾವುದೇ ಸಮಾರಂಭ ಬೇಡ..  " ಎನ್ನುವಂತೆ "ಬಯಕೆ ಬುತ್ತಿ"ಯನ್ನೂ "ಸೀಮಂತ ಕಾರ್ಯ" ವನ್ನೂ ಧಿಕ್ಕರಿಸಿ ತಣ್ಣಗೆ ಪ್ರತಿಕ್ರಯಿಸಿದ ದಂಪತಿಯ ಉದಾಹರಣೆಯೂ ನನ್ನ ಸ್ಮೃತಿಗಿದೆ. 

ಇದೆಲ್ಲದರ ಹೊರತಾಗಿ ಗೊಡ್ಡು ಸಂಪ್ರದಾಯಗಳ ಜೋತು ಬೀಳದೇ ವಿಶಾಲ ಮನಸ್ಥಿತಿಯಿಂದ ಮಕ್ಕಳು ಇಷ್ಟ ಪಟ್ಟ ಹುಡುಗಿಯನ್ನೋ ಹುಡುಗನನ್ನೋ ಜಾತಿ ಗೀತಿ ಬಗ್ಗೆ ಮಡಿವಂತಿಕೆ ಮಾಡದೇ ಮದುವೆ ಮಾಡಿ ಕೊಟ್ಟು ಅವರವರ ಪಾಡಿಗೆ ದುಡಿದು ತಿನ್ನಲು ಮತ್ತು ತಮ್ಮ ಸ್ವಂತ ನಿರ್ಧಾರದಿಂದ ಜೀವನ ನಡೆಸಲು ಲಿಬರ್ಟಿ ನೀಡಿ ಖುಷಿ ಪಡುವ ಪೋಷಕರೂ ಇದ್ದಾರೆ. ಆ ಸಂಖ್ಯೆ ತೀರ ಹೆಚ್ಚೇನೂ ಇಲ್ಲ. ನಾನು ಕಳೆದೆರಡು ವರ್ಷದಲ್ಲಿ ಕಂಡಂತೆ  ಈ ತರಹ ಮದುವೆಯ ಸಡಗರವನ್ನು ಇಂಟೆನ್ಸ್ ಆಗಿ ಅನುಭವಿಸಿ ಮಗಳ ಮದುವೆ ಮಾಡಿದ ತಾಯಿಯೊಬ್ಬಳು ಮಗಳ ಮದುವೆ ಜೀವನ ಅರಳುವ ಮುಂಚೆಯೇ ತಟ್ಟಂಥ ಕಣ್ಣು ಮುಚ್ಚಿದರು.. 

ನನ್ನ ಸ್ನೇಹಿತನೊಬ್ಬನ ಮದುವೆ ವೃತ್ತಾಂತವೊಂದನ್ನು ಹೇಳಬೇಕೆನಿಸಿದೆ.. ನನಗಿಂತ ಎರಡು ವರ್ಷಕ್ಕೆ ದೊಡ್ಡವನು. ಆದರೆ, "ಹೋಗಲೇ" "ಬಾರಲೇ" ಎನ್ನುವಷ್ಟು ಸಲುಗೆ. ರೂಮೇಟ್ ಕೂಡ.  ನನ್ನ ಮದುವೆ ಆದ ಒಂದೂವರೆ ವರ್ಷಕ್ಕೆ ಅವನ ಮದುವೆ ಆಯಿತು. ಅದೇನಾಗಿತ್ತೆಂದರೆ, ಅವನ ಸೋದರ ಮಾವನ ಮಗಳನ್ನು ಅವನಿಗೆ ಕೊಡಬೆಕೆನ್ನುವುದು ಅವನ ಮಾವನ ಮತ್ತು ಅವನ ತಂದೆ ತಾಯಿಯ ಒತ್ತಾಸೆ.  ಸಂಭಂಧದಲ್ಲಿ ಬೇಡ ಅಂತ ಇವನು … ಒಂದಿಡೀ ವರ್ಷ ಅಥವಾ ಎರಡು ವರ್ಷ ಇದೇ ಹಗ್ಗ ಜಗ್ಗಾಟವಾಯಿತು. ಕೊನೆಗೆ ಅವನ ಇಷ್ಟಕ್ಕೆ ವಿರುದ್ಧವಾಗಿ ಬೇಡವೆಂದು ಎಲ್ಲರೂ ಕೈ ಬಿಟ್ಟಿದ್ದರು. ಅದಕ್ಕೂ ಮುಂಚೆ ಒಂದು ಅಫೇರ್ ಕೂಡ ಇತ್ತು. ಆ ಹುಡುಗಿಯನ್ನಾದರೂ ಮದುವೆ ಆಗುತ್ತಾನಾ? ಅಂತ ಗೆಳೆಯರು ಕಾದಿದ್ದರು. ಅದೂ ಬರಕ್ಕಾತ್ತಾಗಲಿಲ್ಲ. 

ಆದರೆ, ಅದೇನಾಯಿತೋ ಏನೋ ಒಮ್ಮೊಂದೊ ಮ್ಮೇಲೆ ನಾನು "ಸೋದರ ಮಾವನ ಮಗಳನ್ನು ಮದುವೆ ಆಗಲು ಒಪ್ಪಿದ್ದೇನೆ" ಅಂದುಬಿಟ್ಟ. ವಯಸ್ಸಾದ ತಂದೆ ತಾಯಿಯ ಮನಸ್ಸಿಗೆ ನೋವಾಗಬಾರದೆಂದು ಒಪ್ಪಿ ದನೋ?  ಮನಸಾರೆ ಹೇಳಿದ್ದನೋ ಒಂದೂ ಗೊತ್ತಿಲ್ಲ. ಮನೆಯವರಲ್ಲಿ ಆಶ್ಚರ್ಯ ಮತ್ತು ಸಂತೋಷ. ಗೆಳೆಯ ರೆಲ್ಲ ಸೇರಿ ಅವನ ಮದುವೆಗೆ ಹೋಗಿ ಬಂದದ್ದಾಯಿತು. ಅದು ಪಕ್ಕಾ ಹಿಂದೂ ಸಂಸ್ಕೃತಿಯಂತೆ ನಡೆದ ಮದುವೆ.  ಅದೇ ಅದೇ …. ಮಟಮಟ ಮಧ್ಯಾಹ್ನ "ಅರುಂಧತಿ ನಕ್ಷತ್ರ" ತೋರಿಸಿದ್ದನ್ನು ನೋಡಿ  ಕೈ ಕೈ ಜೋಡಿಸಿ ಮಂಟಪ ಹಂಚಿಕೊಂಡು ಮದುವೆಗೆ ಬಂದವರಿಂದ ಹಾಲೆರೆದು ಹಾರೈಸಿಕೊಂಡದ್ದೂ  ಆಯಿತು. ಬಹ ಳಷ್ಟು ಸಂಧರ್ಭದಲ್ಲಿ ನಾವು ಮುಲಾಜಿಗೆ ಬಿದ್ದು ಒಪ್ಪಿಕೊಳ್ಳುವ, ಇಷ್ಟವಿಲ್ಲದ ಕೆಲಸ ಮಾಡುವಾಗ, ಇಷ್ಟವಿಲ್ಲ ದವರ  ಸಹವಾಸಕ್ಕೆ ಬಿದ್ದಾಗ ತೊಂದರೆಗೆ ಸಿಲುಕುವ ಮೊದಲೇ ಅಲರ್ಟ್ ಆಗಿರಬೇಕು.  "When you want to say "NO" don't say "YES"….ಅನ್ನುತ್ತಾರೆ. 

ವರ್ಷವೆರಡು ಆಗಿದ್ದವೋ ಇಲ್ಲವೋ ಏನೇನೋ ಸುದ್ದಿ ಕಿವಿಗೆ ಬಿದ್ದವು.  ನೇರವಾಗಿ ಕೇಳಿದೆ; ಸ್ನೇಹಿತ ತುಟಿ ಬಿಚ್ಚಲಿಲ್ಲ.  ಆಮೇಲೆ ತಿಳಿದದ್ದೇನೆಂದರೆ, ಆ ಹುಡುಗಿಗೆ ವಿಚ್ಚೇದನ ನೀಡಿದ ಗೆಳೆಯ, ತಾನು ತನ್ನ ಪಾಡಿಗೆ ನೌಕರಿ ಮಾಡಿ ಕೊಂಡು ಇದ್ದುಬಿಟ್ಟಿದ್ದ.  ಆಗಲೂ ಗೆಳೆಯರೊಂದಿಷ್ಟು ಜನ ಕೇಳಿದರು… ಆಗಲೂ ಗೆಳೆಯ ಮೌನಿ. ಇಷ್ಟರಲ್ಲಿ ನನ್ನ ದೊಡ್ಡ ಮಗ ಮೂರನೇ ಕ್ಲಾಸಿಗೆ ಬಂದಿದ್ದ.  ಕಳೆದ ವರ್ಷ ನವೆಂಬರ್ ೧೨ರಂದು ಇದ್ದಕ್ಕಿದ್ದಂತೆ ಕರೆ ಮಾಡಿದ್ದ ಗೆಳೆಯ."ಮಗಾ, ನಾಡಿದ್ದು ನನ್ನ ಮದುವೆ, ಕಾರ್ಡು ಕಳಿಸುವಷ್ಟು ಪುರುಸೊತ್ತಿಲ್ಲ. ಬಂದು ಬಿಡು ಅಷ್ಟೇ"ಅಂದು ಅಡ್ರೆಸ್ sms ಮಾಡಿದ.  ವಿಳಾಸ ನೋಡುತ್ತಲೇ ಅನುಮಾನ ಶುರುವಾಗಿತ್ತು.  ಮದುವೆಗೆ ಹೋದಾಗಲೇ confirm ಆಯಿತು.  ಅವನು ಮದುವೆ ಆಗಿದ್ದು; ಒಬ್ಬ ಕ್ರಿಶ್ಚಿಯನ್ ಹುಡುಗಿಯನ್ನು, ಅದಾಗಿದ್ದು ಒಂದು ಚರ್ಚ್ನಲ್ಲಿ.   ನಾವೆಲ್ಲ ಗೆಳೆಯರು ಒಬ್ಬನೇ ಗೆಳೆಯನ ಎರಡನೆ ಮದುವೆಗೆ ಮತ್ತೊಮ್ಮೆ ಹಾಜರಾಗಿದ್ದಾಯಿತು.   ಅದೂ ಎರಡೆರಡು ಸಂಪ್ರದಾಯದಂತೆ.    

ಮೂರು ತಾಸಿನ ಸಿನೆಮಾ ನಮ್ಮನ್ನು ರಂಜಿಸಬಹುದು. ಅಳಿಸಬಹುದು. ಆ ಸಿನಿಮಾದ ತ್ಯಾಗಿಯೊಬ್ಬನ/ಳ ಜೀವನದ ತೊಳಲಾಟ, ಸೆಂಟಿಮೆಂಟನ್ನು ನಮ್ಮ ಕಣ್ಣೀರಿನ ಸಮೇತ ಒಪ್ಪಿಕೊಂಡು ಥೀಯೇಟರ್ ನಿಂದ ಹೊರ ಗೇನೋ ಬರಬಹುದು.  ನಿಜ ಬದುಕಿನ ಆಟವೇ ಬದಲಿ ಇರುತ್ತದೆ.  ದಿನನಿತ್ಯದ ನಮ್ಮ ಕಣ್ಣೆದುರಿನ  ಸನ್ನಿವೇಶ ಗಳಿಗೆ ಯಾರೂ ಆಕ್ಷನ್ ಕಟ್ ಹೇಳುವುದಿಲ್ಲ.  ಹಾಗಾಗಿ ನಾವು ಅವುಗಳಿಂದ ಹೊರಬರಲಾಗುವುದಿಲ್ಲ. its  sure.  ವಿಭಿನ್ನ ಮತ್ತು ವಿಚಿತ್ರವಾಗಿ ಕಾಡುವ ಬದುಕಿನಲ್ಲಿ ನಮ್ಮ ದಾರಿಗೆ, ಗುರಿಗೆ ನಮ್ಮ ವಿವೇಚನೆಯೇ ದಿಕ್ಕು. ನಾವೇ ಎದುರಿಸುವ, ಸುಧಾರಿಸುವ ತಾಳ್ಮೆ ಇಟ್ಟುಕೊಂಡಿರಬೇಕು.  ನಮಗೆ ನಾವೇ ಹೇಳಿಕೊಳ್ಳಬೇಕು; "ಇನ್ನಾದರೂ ಜೀವನದಲ್ಲಿ ಮುಂದೆ ಬನ್ನಿ "  ಅಂತ…. 

ಪ್ರತಿ ಮದುವೆ ಸಮಾರಂಭವೂ ಸಡಗರದ ಗೂಡಾಗಲಿ. ಸಂಕಟಗಳದ್ದೋ, ಸಮಸ್ಯೆಗಳದ್ದೋ ಅಲ್ಲ. ಅದಿಲ್ಲ
ದಿದ್ದರೆ ತಾಳಿ ಕಟ್ಟಿದ ಶುಭ ವೇಳೆ ….ಕೊರಳಲ್ಲಿ ಅದ್ಯಾವ ಮಾಲೆ? ಅನ್ನಿಸಿಬಿಡುತ್ತದೆ;  ಹಾರದ ಬದಲು.  

****

ಕನ್ನಡದ ಬರಹಗಳನ್ನು ಹಂಚಿ ಹರಡಿ

10 thoughts on “ತಾಳಿ ಕಟ್ಟಿದ ಶುಭ ವೇಳೆ ….ಕೊರಳಲ್ಲಿ ಅದ್ಯಾವ ಮಾಲೆ?: ಅಮರ್ ದೀಪ್ ಪಿ.ಎಸ್.

  1. Nanna prakara maduve jeevanada ondu pramuka ghatta namma anthyadavarege iruva ondu sambanda.  ondu bari maduve adre adu anthima adakke paryaya dari iralla.    adaralli suka dukka idde iruthe.   dukka bandaga divorce kodohagidre maduve anno kriyege arthane iralla hagu anthavaru mathondu bari prayathna madodu mathondu divorcege nandi aguthe. 

  2. Its real all will feel  situations but can't express , those feelings are comeout by people like you,  realy a good article.

  3. sir,it is exellent.pl mentain a seperate folder of your collection.in future it will be a big novel.

  4. Nimma prabuddhateya chikka minchu ee lekhnadalli sulidide Amar! Complex issue and you have handled it nicely. Get going!!

  5. ಸ್ವಾಮಿ ಇದು ಯಾರ ಜೀವನದ ಕಥೆ ಕಣ್ರೀ ಅಮರ್ ನನಗೆ ಗೊತ್ತಾಗ್ತಾ ಇಲ್ಲ, ನಿಜ ಮದುವೆ ಅನ್ನೋದು ಒಂದು ಅಡ್ಜಸ್ಟ್ಮೆಂಟ್ ಅಂತ ಅನ್ನಿಸುತ್ತೆ.

    ರಾಜ್

Leave a Reply

Your email address will not be published. Required fields are marked *