ತಾಯ್ತನ ಮತ್ತು ಹೆಣ್ಣು: ನಾಗರೇಖಾ ಗಾಂವಕರ

nagarekha

ಅದುರವಿವಾರ. ಹಾಗಾಗಿ ಸಂತೆ ದಿನ. ಸಂತೆಯಲ್ಲಿ ತರಕಾರಿ ಕೊಳ್ಳುವ ಸಲುವಾಗಿ ಹೊರಟಾಗ ತರಕಾರಿ ಮಂಡಿಯ ಹೊರ ಪ್ರವೇಶ ದ್ವಾರದಲ್ಲೇ ಆ ಇಬ್ಬರು ದಂಪತಿಗಳು ಹುಣಸೇ ಹಣ್ಣುಇಟ್ಟು ಮಾರುತ್ತಿದ್ದರು.ತಾಯಿಯ ತೊಡೆಯೇರಿದ ಕಂದನನ್ನು ಸಂಭಾಳಿಸುತ್ತಾ ಆ ಮಹಾತಾಯಿ ಹುಣಸೇ ಹಣ್ಣು ತೂಗಿಕೊಡುತ್ತಿದ್ದರೆ ತಂದೆ ಗಿರಾಕಿಗಳ ಕಡೆಗಮನವಿಟ್ಟು  ಹಣಪಡೆದು ಜೇಬಿಗಿಳಿಸುತ್ತಿದ್ದ. ಮಗುವಿನ ಕಡೆ ತೂಕದ ಕಡೆ ಸಮ ಪ್ರಮಾಣದ ಗಮನದೊಂದಿಗೆ ಎರಡನ್ನು ನಿಭಾಯಿಸುತ್ತಿದ್ದ ಆಕೆ  ನನಗಾಗ ಆತನಿಗಿಂತ ಸಮರ್ಥಳಾಗಿ ಕಂಡಿದ್ದಳು.

ಹೌದು. ಏಕಕಾಲಕ್ಕೆ ಅಪಕರ್ಷಣೆಗೆ ಒಳಗಾಗದೇ ದ್ವಿಮುಖ ಕಾರ್ಯಗಳನ್ನು ಪುರುಷನಿಗಿಂತ ಸ್ತ್ರೀ ಸಮರ್ಥವಾಗಿ ಮಾಡಬಲ್ಲಳು. ಆದರೆ ಸಾಮಾಜಿಕ ಆರ್ಥಿಕ ಹೊಣೆಗಾರಿಕೆಯ  ವಿಷಯದಲ್ಲಿ ಸ್ತ್ರೀಯನ್ನು ದೂರವಿಟ್ಟು ಅಸಮರ್ಥತೆಯ ಪಟ್ಟಕಟ್ಟಿದ ಪುರುಷನಿಗೆ ದೃಷ್ಟಾಂತದಂತಿದ್ದ ಆ ತಂದೆ. ಆಕೆಯಾದರೋ ತನ್ನ ಕಂದನನ್ನ ಮುದ್ದಿಸುತ್ತಲೇ ಸಂತಸ ಪಡುತ್ತಲೇ ಆ ಇನ್ನೊಂದು ಕೆಲಸವನ್ನು ಮಾಡುತ್ತಿದ್ದಳು. ತಾಯ್ತನ ತಂದುಕೊಟ್ಟ ಸಬಲತೆ ಅದು ಆಗಿರಬಹುದು.

ಹಾಗಾಗೆ ಸ್ತ್ರೀತ್ವದ ತಾಯಿ ಬೇರು ತಾಯ್ತನ. ಅದಕ್ಕೆ ಹಾತೊರೆಯದ ಹೆಣ್ಣು ಅಪರೂಪದಲ್ಲಿ ಅಪರೂಪ. ಹೆಣ್ಣು ಮಗು ತಾನು ಕೂಸಿರುವಾಗಲೇ ತನಗೊಂದು ಕೂಸುಮರಿಯ ಕೈಯಲ್ಲಿ ಲಾಲಿಸುವ ಪಾಲಿಸುವ ದೃಶ್ಯ ಸಾಮಾನ್ಯ. ಹಾಗಾಗಿ ಹೆಣ್ಣಿನ ಪಕ್ವತೆ  ಆಕೆ ತಾಯಿಯಾದಾಗಲೇ  ಪರಿಪೂರ್ಣಗೊಳ್ಳುವುದು ಎಂಬ ಮಾತು ಅಕ್ಷರಶಃ ಸತ್ಯ.. ಸ್ತ್ರೀ ಬದುಕಿನ ಅತಿ ದೊಡ್ಡ ತಿರುವು ಅದು.  ಅದಕ್ಕಾಗಿ ಹಂಬಲಿಸುವ ಪಡೆದಾಗ ಸ್ವರ್ಗದ ಬದುಕಿನ ಸುಖವನ್ನು ಮಗುವಿನ ಲಾಲನೆ ಪಾಲನೆಯಲ್ಲಿಕಾಣುವ ಆ ಸುಖ ತಾಯಿಗೆ ಹೆಚ್ಚು. ಅದವಳ ಆದ್ಯತೆಯೂಕೂಡ. ಮಗುವಾಗುತ್ತಲೇ ಸಹಜವಾಗಿ ಪತಿಯಿಂದ ಸ್ವಲ್ಪ ಪ್ರಮಾಣದಲ್ಲಿ ಹೆಣ್ಣು ವಿಮುಖಳಾಗುತ್ತಾಳೆ. ಇದು ಕೆಲವೊಮ್ಮೆ ಗಂಡನಾದವಗೆ ಕಿರಿಕಿರಿಯಾಗಲೂಬಹುದು. ತನ್ನ ಬಗ್ಗೆ ಕಾಳಜಿ ಕಡಿಮೆಯಾಯಿತೆಂದು ಮುನಿಸು ತೋರಬಹುದು. ಆದರದು ಅನಿವಾರ್ಯ ಕೂಡ ಎಂಬ ಪ್ರಜ್ಷೆ ಇದ್ದಾತ ಅರಿತು ಬಾಳುವ. ಗಂಡ ಒಳ್ಳೆಯವನಾದರೆ ಆಕೆಯ ಬದುಕಿನಲ್ಲಿ ದೊಡ್ಡ ಗಂಡಾಂತರ ಕಳೆದಂತೆ. ಆ ಪ್ರೀತಿಯ ಅಲೆಯಲ್ಲಿ ಆಕೆ ಕೊಚ್ಚಿ ಹೋಗಬಯಸುತ್ತಾಳೆ. ಪತಿ ಮಕ್ಕಳೊಂದಿಗೆ  ಸಂಸಾರವೆಂಬ ಸಾಗರದಲ್ಲಿ ಬಂದ ಅಡೆತಡೆಗಳ ನಿಭಾಯಿಸುವ ತಾಕತ್ತು ಆಕೆಗಿದೆ. ಸ್ತ್ರೀ ಎಂದಿಗೂ ಕುಟುಂಬದ ಸಹಕಾರವಿದ್ದಲ್ಲಿ ಬದುಕಿನಿಂದ ಪಲಾಯನ ಮಾಡಲಾರಳು. ಕುಟುಂಬವನ್ನು ಕಡೆಗಣಿಸಲಾರಳು.ಆಕೆಯಲ್ಲೊಂದು ಅಪೂರ್ವವಾದ ಹೃದಯವಿದೆ.

ದಲಿತ ಬಂಡಾಯ ಸಾಹಿತ್ಯದಲ್ಲಿ ಗುರುತಿಸಿಕೊಂಡ ಮಹಿಳಾ ಸಾಹಿತಿಗೀತಾ ನಾಗಭೂಷಣ ಅವರದೊಂದು ಕಥೆ “ಅವ್ವ”. ಹೆತ್ತಮ್ಮನ ಅಸಹಾಯಕತೆಯನ್ನು ಕರಳು ಕಿತ್ತು ಬರುವಂತೆ ನಿರೂಪಿಸಿದ ಕಣ್ಣೀರಿನಕಥೆ. ಒಮ್ಮೆ ಓದಿದರೆ ಸಾಲದೆಂಬಂತೆ ಹಲವು ಸಲ  ಓದಿಸಿಕೊಂಡ ಕಥೆ. ನಿಜಕ್ಕೂ ತಾಯಿ ಎಂದರೆ ಹೇಗಿರುತ್ತಾಳೆ, ತಾಯ್ತನ ಎಂದರೇನು? ಅಕೆ ಮಗುವಿಗಾಗಿ ಎಂತಹ ತ್ಯಾಗಕ್ಕೆಲ್ಲಾ ಸಿದ್ಧ ಎಂಬುದನ್ನು ಕಣ್ಣಿಗೆಕಟ್ಟುವಂತೆ ಹೇಳಿದ್ದಾರೆ. ಮೇಲ್ಜಾತಿಯ ಪುರುಷ ಸಮುದಾಯದ ಭಂಡತನ ಶೋಷಣೆ ಕಥೆಯುದ್ದಕ್ಕೂ ಬಚ್ಚಿಕೊಂಡಿದೆ. ಕಲಬುರ್ಗಿಯ ಬಿಸಿಲು ನಾಡಿನಲ್ಲಿ ಬಸವಳಿದ ಜೀವವೊಂದು ಜ್ವರದಿಂದ ನರಳುತ್ತಿದ್ದ ತನ್ನ ಕೂಸಿನ ಪ್ರಾಣ ಉಳಿಸಲು ಕಂಡಕಂಡವರ ಕಾಡಿ ಬೇಡುವ ಕೊನೆಗೆ ಉಪಾಯವಿಲ್ಲದೇ ಆಗಂತುಕನೊಬ್ಬನಿಗೆ ಸೆರಗು ಹಾಸಿ,ಆತ ಕೊಟ್ಟ ಐವತ್ತು ರೂಪಾಯಿಗಳ ಪಡೆದು ಔಷಧಿ ಹಿಡಿದು ಬಂದರೆ ಆಕೆ ಬರುವ ಹೊತ್ತಿಗಾಗಲೇ ಇಹಲೋಕದ ಯಾತ್ರೆ ಮುಗಿಸಿದ ಕಂದ. ಆಕೆಯ ರೋದನ ಎಲ್ಲವೂ ಓದುಗನ ಕರುಣಾರಸವನ್ನು ಉದ್ದಿಪಿಸುವ ರೀತಿ ಆನನ್ಯ. ತಾಯಿಯನ್ನು ಯಾವ ದೃಷ್ಟಿಕೋನದಿಂದ ನೋಡಿದರೂ ಅಲ್ಲಿ ಕಾಣುವ ರೂಪ ಅನುಪಮ. ದವಾಖಾನೆ ದುಡ್ಡಿನ ದೆವ್ವದಖಾನೆಯಾಗಿರುವ ಚಿತ್ರವನ್ನೂ ಕಥೆ ತೆರೆದಿಟ್ಟಿದೆ. ಹಣವಿದ್ದರೆ ಎಲ್ಲವೂ ಇಲ್ಲದಿದ್ದರೆ ಜೀವಕ್ಕೆ ಇಲ್ಲಿ ಬೆಲೆ ಇಲ್ಲ ಎಂಬ ಸಾಮಾಜಿಕ ಸಮಸ್ಯೆಯೂ ಕಥೆಯ  ತಿರುಳು.ಅದೇನೇ ಇದ್ದರೂ ತಾಯಿಯ ಋಣ ತೀರಿಸಲಾಗದಂತಹುದು.

ತಾಯ್ತನಕ್ಕೆ ಬಡತನ ಸಿರಿತನದ ಬೇಧವಿಲ್ಲ. ಕುಲೀನ ಕುಟುಂಬದ ಮಹಿಳೆ  ರಾಜವೈಭೋಗದಲ್ಲಿ ಮಕ್ಕಳನ್ನು ಬೆಳೆಸಿದರೂ ಬಡವಿ ಗುಡಿಸಲಿನಲ್ಲಿ ಗಂಜಿಯುಣಿಸಿ ಬೆಳೆಸಿದರೂ ಅವರಿಬ್ಬರ ಹೃದಯದೊಳಗಣ ಪ್ರೀತಿ ಪರಿಶುದ್ಧ ಮಾತೃಪ್ರೇಮ. ಹೆಣ್ಣು ಮಗುವಾಗಲೀ ಗಂಡೇ ಆಗಲಿ ಅಲ್ಲಿಯೂ ಆಕೆಯ ಪ್ರೀತಿ ಭಿನ್ನವಿಲ್ಲ. ಆದರೆ ಪುರುಷ ಗಂಡಿಗಾಗಿ ಹಾತೊರೆದು ಆಕೆಯ ಹಂಗಿಸುವಾಗ ಮಾತ್ರ ಆಕೆ ವ್ಯಗ್ರಳಾಗುತ್ತಾಳೆ. ಅಸಹಾಯಕಳಾಗಿ ತನ್ನಂತೆ ಹುಟ್ಟಿದ ಹೆಣ್ಣು ನಿಂದನೆ ಒಳಗಾಗುವುದ ತಪ್ಪಿಸಲು ಹೆಣ್ಣು ಬೇಡವೆಂದು ಹೇಳಬಹುದು. ಯಾಕೆಂದರೆ ಹಿಂದಿನಿಂದಲೂ ಆಕೆ ಸದಾಇನ್ನೊಬ್ಬರಿಗಾಗಿ ಬದುಕುವ ಹೊರೆಯನ್ನು ಹೊತ್ತವಳು ಎಂಬಂತೆ ಆಕೆಯನ್ನು ಬೆಳೆಸಲಾಗುತ್ತಿದೆ. ಆಕೆಯ ಬದುಕು ಆಕೆಯದು ಎಂಬ ಚಿಂತನೆಯ ಕಾಲವಿನ್ನು ಭಾರತದಲ್ಲಿ ಸಂಪೂರ್ಣವಾಗಿ ಬೇರು ಬಿಟ್ಟಿಲ್ಲ. ದೊಡ್ಡದೊಡ್ಡ ಶಹರಗಳಲ್ಲಿ ಸ್ತ್ರೀಯರು ಸ್ವಚ್ಛಂದತೆಯ ಆನಂದ ಪಡೆವ ಪರಿಸ್ಥಿತಿ ಇನ್ನು  ಹಳ್ಳಿಗಳಲ್ಲಿ ಕಾಲೂರಿಲ್ಲ. 
 
ತ್ಯಾಗ ಆಕೆಯ ಜನ್ಮತಃ ಬಂದ ಗುಣ ಅದರಿಂದಲೇ ಆಕೆ ಆತನಿಗಿಂತ ಮಿಗಿಲಾಗುತ್ತಾಳೆ. ತಾಯಿ ತ್ಯಾಗಗುಣವನ್ನು ಹಂಗಿಸುವ, ಜರೆಯುವ ಒಪ್ಪಿಕೊಳ್ಳದಿರುವ ಮಕ್ಕಳು ಅಪರೂಪ. ಕುಟುಂಬದ ಪ್ರೇಮ ವಾತ್ಸಲ್ಯದ ವಿಚಾರ ಬಂದಕೂಡಲೇ ಮೊದಲು ನೆನಪಾಗುವುದು ತಾಯಿ. ಹೆಣ್ಣಿನ ಮನೋಭೂಮಿಕೆ ವಿಚಿತ್ರ. ವಿವಿಧ ಸಂದರ್ಭಗಳಲ್ಲಿ ಪಾತ್ರಗಳಲ್ಲಿ ವಿಭಿನ್ನವಾಗಿ ಕಾಣಬರುವ ಆಕೆ ತಾಯಿಯಾಗಿ ಎಂದಿಗೂ ಕಠಿಣ ಮನಸ್ಕಳಾಗುವುದಿಲ್ಲ ಎಂಬುದು. ಇದಕ್ಕೆ ಕೆಲವೊಂದು ಅಪವಾದಗಳಿರಬಹುದು. ಅದು ಬೆರಳೆಣಿಕೆಯಷ್ಟೇ. ತಾಯ್ತನ ಪವಿತ್ರವಾದ ಮತ್ತು ಮಹತ್ವದಘಟ್ಟ.

ಅದಕ್ಕೆಂದೆ ಜಾನಪದ ಗರತಿತಾಯಿಯಾಗಲು ಬಯಸುವ ಅದಕ್ಕಾಗಿ ಶಿವನಲ್ಲಿ ಮೊರೆಯಿಡುವ ಈ ಹಾಡು ಬಹುಶಃ ಎಲ್ಲರಚಿರಪರಿಚಿತ

“ಬಾಲಕರಿಲ್ಲದ ಬಾಳಿದ್ಯಾತರ ಜನ್ಮ
ಬಾಡಿಗೆಎತ್ತು ದುಡಿದಂಗ್ಹ!
ಬಾಳೆಲೆಯ ಹಾಸ್ಯುಂಡು ಬೀಸಿ ಒಗೆದಂಗ್ಹ!!”

ಮಕ್ಕಳಿಲ್ಲದೇ ಹೋದರೆ ಆವಳ ಬದುಕು ಬಾಡಿಗೆ ಎತ್ತಿನಂತೆ. ಬದುಕಿದ್ದು ಸತ್ತಂತೆ, ಅವಳತನ ಕಾಣುವುದೇ ಆಕೆ ತಾಯಿಯಾದಾಗ. ಹಾಗಾಗಿ ಜಾನಪದ ಹೆಣ್ಣು ಮಕ್ಕಳನ್ನು ಕೊಡು ಶಿವನೇ ಎಂದೂ ಹಂಬಲಿಸುತ್ತಾಳೆ. ತಾಯ್ತನ ಅದೊಂದು ಹುದ್ದೆ. ಪಟ್ಟ. ಅದಕ್ಖಾಗಿ ಹಂಬಲಿಸದ, ಬಯಸದ, ಹೆಣ್ಣು ಇರುವಳೇ?. ಒಳ್ಳೆಯ ಹೆಣ್ಣಾಗಿ, ಮಗಳಾಗಿ, ಹೆಂಡತಿಯಾಗಿ ಜೊತೆಗೆ ತಾಯಿಯಾದಾಗಲೇ ಪರಿಪೂರ್ಣತೆ.
 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x