ತಾಯಿ ಭಾಗ್ಯ: ಸಾವಿತ್ರಿ ವಿ. ಹಟ್ಟಿ


-ಒಂದು-

ಅಂವ ರಾತ್ರಿ ಆದ್ರ ಸಾಕು ಹೆದರಿದ ಮೊಲ ಆಕ್ಕಿದ್ದ. ಆಕಿ ಏನು ಕೇಳೂದ ಬ್ಯಾಡ ಹಸಿದ ಹೆಣ್ಣು ಹುಲಿ ಆಕ್ಕಿದ್ಲು. ಆಕೀ ಮೂಲಭೂತ ಬೇಡಿಕೆ ಅಂವಂಗ ಅತಿ ದುಬಾರಿದಾಗಿ ಕಾಣ್ತಿತ್ತು. ರಾತ್ರಿಯಾದ್ರ ಸಾಕು; ಬಡವರು ಸಂತೀಗಿ ಹೋಗುವಾಗ ಪುಡಿಗಾಸ್ನ ಎಣಿಸಿ ಎಣಿಸಿ ನೋಡಿಕೊಂಡು ಹೋಗುವಂಗ ಅಂವ ಇದ್ದಷ್ಟು ತನ್ನ ಗಂಡಸ್ತನನೆಲ್ಲಾ ಒಟ್ಟುಗೂಡಿಸಿಕೊಂಡು ಇವತ್ತರ ಆಕೀನ್ನ ತೃಪ್ತಿಪಡಿಸಲೇಬೇಕು ಅಂತ ಹೋದ್ರೂ ಆಕೀ ಬೇಡಿಕೆಯ ಕಾಲು ಭಾಗನಾದ್ರೂ ಪೂರೈಸದಾ ಹೈರಾಣಾಕ್ಕಿದ್ದ. ‘ನಿನ್ನ ಹಾಡು ಇಷ್ಟಾ ಹೋಗಾ ಮೂಳ’ ಅಂತ ಆಕಿ ಮನಸ್ಸಿನ್ಯಾಗನಾ ಅಂದ್ಕೊಂಡ್ರೂನು ತೀಕ್ಷ್ಣವಾದ ಆ ನೋಟದಾಗ ತಿರಸ್ಕಾರದ ಪ್ರತಿಬಿಂಬ ಇರ್ತಿತ್ತು. ಆಕೀ ನೋಟ ಎದುರಿಸಾಕಾಗ್ದಾ ಅಂವ ಮೆಲ್ಲಕ ಮಾರಿ ಮ್ಯಾಲೆ ಮುಸುಗೆಳಕೊಂಡು ಬಾರದ ನಿದ್ದೀಗಿ ಶರಣು ಹೊಕ್ಕಿದ್ದ.  

ನಿಟ್ಟುಸಿರು, ಸಿಟ್ಟು ಬುಸ್ಗುಟ್ಟೂದ್ರಾಗನಾ ರಾತ್ರಿ ರಾತ್ರಿಗಳು ಉಳ್ಕೊಂತಾ ಹೊಂಟ್ವು. ಅಮಾಸಿ ದಿನದಾಗ ಅವನ ಪಾಡು ಕಂಡು ಕತ್ಲಕ್ಕೂ ಕನಿಕರ ಬರ್ತಿತ್ತು. ಹುಣ್ಣಿವಿ ದಿನದಾಗ ಚಂದ್ರ ಅಂವನ ಪರದಾಟಾನೂ ಆಕೀ ಹೊಡೆದಾಟನೂ ಕಂಡು ಚಿಂತಿಗೀಡಾಕ್ಕಿದ್ದ. ನಾಕು ಮಂದಿ ಗೆಳೆಯಾರು ಇರೂ ಕಡೆ ಅಂವ ಮೊದಲಿನಂಗ ನಕ್ಕೊಂತ ಹೋಗಿ ಮಾತಾಡಲಾರ.. ‘ಏನ್ಲೇ ಏನೂ ಕೆಲಸಾನಾ ಆಗ್ವಲ್ದಾ ಏನು?’ ಅಂತ ಒಬ್ಬಾಂವಾದ್ರೂ ಅಣಕಿಸದಾ ಇರೂದುಲ್ಲ ಅಂತ ಅಂವಗ ಹೊಟ್ಟಿಕಡಿತ ಒಳಗ… ಆಕೀಗೂ ಅಷ್ಟಾ ಯಾರು ಕಂಡ್ರೂ ಒಂಥರಾ ನಾಚಿಕಿ. ಜೀವ ಹಿಡಿಯಾಗ ಹಿಡ್ಕೊಂಡು ಸೇದೂ ಬಾವೀಗಿ ಹೊಕ್ಕಾಳ. ಬಾವೀಕಟ್ಟಿ ಅಂದ್ರೇನು ವಾರ್ತಾ ಕಟ್ಟಿ!! ಅಲ್ಲಿ ಎಲ್ಲಾರ್ಗೂ ಎಲ್ಲಾರ್ದೂ ಸುದ್ದಿ ಗುಸು ಗುಸು ಹಬ್ಬಿ ಗಾಳ್ಯಾಗ ತೇಲ್ಕೊಂತ ಊರಿಡಿ ಗೊತ್ತಾಗುತ್ತ. ಹಂಗಾಗಿ ಆಕೀಗಿ ನೀರಿಗಿ ಹೋಗೂದಂದ್ರ ಬಲಿಗಂಬಕ್ಕ ಹೋದಂಗ. ದಿನಾಲೂ ಅಲ್ಲಿಗಿ ಹೋಗಿ ಕಂಡು ಕಂಡಾರ ಬಾಯಿಂದ ಕಂಡುಗ ಶಬ್ದ ಕೇಳಿ ಸತ್ತು ಮಾಜನ್ಮ ಪಡೆಯೂದ ದೊಡ್ಡ ಪಾಪ ಅಂತ ಆಕೀ ಅಂದ್ಕೊಂತಾಳ. ಆದ್ರ ಕುಡಿಯೂ ಸೀನೀರು ಬೇಕಾ ಬೇಕಲ್ಲಾ ಹೋಗದಿದ್ರ ನಡೆಯಂಗಿಲ್ಲ. 

ಹಂಗ ಬಾವೀ ನೀರು ತರಾಕ ಹೋದಾಗ ಅವತ್ತ ಕಡೀಮನಿ ಶಂಕ್ರವ್ವನ ಹೊಳೀಗಿ ಕಳುಸಾಕ ಬಂದಿದ್ರು. ಹೊಳೀಗಿ ಕಳುಸೂಂದ್ರ ಗಂಗವ್ವನ ಪೂಜಿ ಮಾಡೂದು. ಶಂಕ್ರವ ಹಡದು ಇಪ್ಪತ್ತಿನ ಆಗಿತ್ತು. ಅವತ್ತ ಗಂಗವ್ವಗ ಪೂಜಿ ಮಾಡಿಬಿಟ್ರಾತು, ಒಳ ಹೊರಗ ಓಡಾಡಿ ಮನಿ ಕೆಲಸ ಎಲ್ಲಾ ಮಾಡ್ಕೊಂತಾಳ ಇನ್ನ. ಎಷ್ಟು ದಿನಾ ಕುಂದ್ರುಸಿ ತಿನ್ಸೂದು ಅಂತ ಶಂಕ್ರವ್ವನ ಅತ್ತಿ ಬಸವ್ವಂದು ಲೆಕ್ಕಾಚಾರ ಆಗಿತ್ತು. ಅವತ್ತ ಗಂಗವ್ವನ ಪೂಜಿ ಮಾಡೂವಾಗ ಮಕ್ಕಳಿಲ್ಲದ ಆಕೀನೂ ಬಾವಿ ನೀರಿಗಿ ಹೋಗಿದ್ಲು. ಐದು ಮಂದಿ ಹೆಣ್ಣು ಮಕ್ಕಳ ಕೊಡ ತುಂಬಿಸಿ ಪೂಜಿಗಿ ಇಡೂದು ಪದ್ಧತಿ. ಅದರಾಗ ಪೂಜಿ ಮಾಡಾಕಿ ಹಾಲು ಕುಡಿಸೂ ತಾಯಿನೇ ಆಗಿರಬೇಕು. ಪೂಜೆಗೆ ಕೊಡ ತುಂಬಿಡಾರು ಮಕ್ಕಳನ್ನ ಪಡೆದಿರಬೇಕು ಅನ್ನೂದು ನಂಬಿಕಿ ಆ ಜನರದು. ಮಕ್ಕಳಿಲ್ಲದ ಆ ಆಕೀ ಸೈತ ಗೊತ್ತಿಲ್ಲದ ತನ್ನ ಕೊಡಾನೂ ತುಂಬಿ ಪೂಜೆಗೆ ಇಡಾಕ ಹೋದ್ಲು. ‘ಏ ತಂಗಿ ಬ್ಯಾಡ ತಗೀ ನಿನ್ನ ಕೊಡ… ಸಾಕು ಐದು ಮಂದಿ ಆದ್ರು’ ಅಂತ ಮತ್ತೊಬ್ಬಾಕಿ ಹೇಳೀದ್ಲು. ಆಕೀ ಕಪಾಳಿಗಿ ಜಾಡಿಸಿ ಬಡಿದಂಗಾಗಿ ಅಲ್ಲಿ ನಿಲ್ಲದಾ ತನ್ನ ಕೊಡ ಹೊತ್ಕೊಂಡು ಮನಿಗಿ ಬಂದ್ಲು. 

ಅವತ್ತ ರಾತ್ರಿ ಇಡೀ ಆಕೀಗಿ ನಿದ್ದಿ ಬರಲಿಲ್ಲ. ಹುಟ್ಟಿದ ಮಕ್ಕಳಿಗಿ ಹೆಸರಿಡಾಕ ಕರೀತಾರ ಮಂದಿ. ಹೋದ್ರ ತೊಟ್ಟಿಲ ಸುತ್ತೂಕಡಿ ಮಕ್ಕಳಿದ್ದಾರಷ್ಟಾ ನಿಂತು ತನಗ ತೊಟ್ಟಲ ಹಿಡಿಯಾಕ ಜಾಗನ್ನಾ ಬಿಡೂದಿಲ್ಲ. ಒಂದ್ಸಲಾ ಯಾಡ್ಸಲಾ ಅಲ್ಲ. ಪ್ರತೀ ಸಲಾನೂ ಹಿಂಗ ಮಾಡ್ತಾರಂದ್ರ ತಾನು ಮಕ್ಕಳಿಲ್ಲದಾಕಿ ಅನ್ನೂದು ಕಾರಣ ಅಂತ ಭಾಳ ನೊಂದ್ಕೊಂಡ್ಲು. 

‘ಏ ತಂಗೀ ssಸುಮ್ಮವ್ವ ಹಿಂಗಾದ್ರ ಹೆಂಗಬೆ, ಹತ್ವರ್ಸಾದ್ರೂನು ಕುಡಿ ಒಡೀಲಿಲ್ಲ ಹಣ್ಣು ಬಿಡಲಿಲ್ಲಂದ್ರ ಹೆಂಗವ್ವಾ, ಚೆಕ್ ಮಾಡ್ಸೂನು ಡಾಕ್ಟರ್ ಕಡಿಗಿ ಹೋಗಿ’ ಅಂತ ಅತ್ತಿ ಹೇಳಿದಾಗ ಆಕೀಗಿ ಕಿರುಬೆಳ್ಳಿಂದ ನೆತ್ತೀತನಕ ಉರುದು ಹೋತು. ‘ನಿನ್ನ ಮಗನ ಚೆಕ್ ಮಾಡ್ಸು ಮೊದ್ಲು’ ಅಂತ ಹೇಳ್ಬೇಕಂದ್ರೂನು ಮಾತು ಹೊರಗ ಬರಲಿಲ್ಲ. ತನ್ನ ಕಡಿಗಿ ಕೈ ಮಾಡಿ ತೋರಿಸ್ತಾಳಲ್ಲ. ಅದೂ ಆಗ್ಲಿ. ಚೆಕ್ ಮಾಡ್ಸೀದ ಮ್ಯಾಲಾದ್ರೂ ಗೊತ್ತಾಗುತ್ತಲ್ಲ ಹಕೀಕತ್ತು ಅಂತ ಅತ್ತಿ ಕೂಡ ಡಾಕ್ಟರ್ ಕಡಿಗಿ ಹೋಗಿ ಚೆಕ್ ಮಾಡ್ಸಿದ್ದೂ ಆತು. ಆಕೀ ಕಡಿಗಿ ಏನೂ ದೋಷ ಇಲ್ಲಂತ ರಿಪೋರ್ಟ್ ಬಂದಾಗ ಅತ್ತಿಗಿ ದೊಡ್ಡ ಅವಮಾನಾಗಿತ್ತು. 

ಅತ್ತಿ ಹೇಳಿದಂಗ ದೇವರೂ ದಿಂಡ್ರೂ ಅಂತ ವೃತ ಉಪವಾಸ ಎಲ್ಲಾ ಮಾಡೀದ್ಲು. ಆದ್ರೂ ಆಕಿಗಿ ಸಂತಾನ ಭಾಗ್ಯ ನೀಡೂ ತಾಕತ್ತು ಅಂವಗ ಬರಲಿಲ್ಲ. ಹೆಂಗ ಬಂದೀತು ಅಂವಗ ಆ ತಾಕತ್ತು! ದಿನಕ್ಕ ಐದಾರು ತಂಬಾಕು ಚೀಟು ಸಾಲಂಗಿಲ್ಲ ಅಂವಗ ತಿನ್ನಾಕ. ಕೆಟ್ಟ ಖಾರ ಸುರಿದು ಸಾರು ಪಲ್ಯ ಮಾಡ್ಬೇಕು ಅಂವಗ. ಚೂರು ಖಾರ ಕಡಿಮಿ ಆದ್ರ ಮನಿ ಮಾಡು ಎಲ್ಲಾ ಹಾರಿ ಹೋಗೂವಂಗ ಒದರಾಡ್ತಾನ. ಅದಕ್ಕಾ ಹೊಸದಾಗಿ ಬಂದಾಗ ಆಕಿ ಕೆಲವು ದಿನ ಅಂವನ ಕೈಲಿ ಕಡುಬು ತಿಂದಿದ್ದೂ ಉಂಟು. ಅಂವನ ಚಾಳಿ ಗೊತ್ತಾದ ಮ್ಯಾಲೆ ಪಲ್ಯ ಸಾರು ಮಾಡಿ ಸ್ವಲ್ಪ ತನಗ ಬ್ಯಾರೆ ತಕ್ಕೊಂಡು ಉಳಿದ ಪದಾರ್ಥಕ್ಕ ಮತ್ತೊಂದೀಟು ಖಾರ ಜಾಸ್ತಿ ಹಾಕಿ ಇಡಾಕಿ. 

ಅದೊಂದು ರಾತ್ರಿ ಕೆಟ್ಟ ರಾತ್ರಿ. ಅದೂ ಇನ್ನೂ ನೆನಪೈತಿ ಆಕೀಗಿ. ಕ್ವಾಣೀ ಅಗಳಿ ಹಾಕದಾ ಮಕ್ಕೊಂಡಿದ್ಲು. ನಿದ್ದಿ ಹತ್ತಿ ಬಿಟ್ಟಿತ್ತು. ಸ್ವಲ್ಪ ಹೊತ್ತಿನ ಮ್ಯಾಲೆ ಕಾಲು ಸಪ್ಪಳ ಕೇಳಿ ಎಚ್ಚರಾತು. ದಡಕ್ಕನಾ ಎದ್ದು ತಲಿದೆಸೀಲಿಟ್ಟಿದ್ದ ಕಡ್ಡಿ ಪೆಟ್ಟಿಗಿ ತಗೊಂಡಾಕಿನಾ ಪರಕ್‍ನ ಕೆರೆದ್ಲು. ಎದಿ ದಸಕ್ ಅಂತು. ಬಂದಾತ ಗಂಡಲ್ಲ. ಅಂವ ಇವತ್ತ ಬರಂಗಿಲ್ಲ ಅಂತ ಹೇಳಿ ಚಿಗವ್ವನ ಊರಿಗಿ ಏನಾ ಕೆಲಸಕ್ಕಂತ ಹೋದಾಂವ ಬಂದಿಲ್ಲ. ಈಗ ಬಂದಾಂವ ಗಂಡನ ಅಣ್ಣ. ಅಂವ ವಜ್ರಮುನಿಯಂಗ ನಗೂದು ನೋಡಿ ಮೈಯೆಲ್ಲಾ ಥರಗುಟ್ಟಿ ಹೋತು ಆಕೀಗಿ. ತಕ್ಷಣಾ ಧೈರ್ಯ ತಗೊಂಡ್ಲು. ಈಗ ಸೋತ್ನೆಂದ್ರ ನನ್ನ ಇಡೀ ಜೀವನಾನ ಸೋಲುತ್ತ ಅಂದ್ಕೊಂಡ್ಲು. ಚಿಮಣಿ ಬಾಯಿ ತಗದಾಕಿನಾ ಮೈಮ್ಯಾಲೆ ಸುರ್ಕೊಂಡು ಕಡ್ಡಿ ಗೀರಿ, “ಹಚ್ಕೊಂಡ್ ಬಿಡ್ತೀನಿ ಮಾವ. ನೀನು ನನ್ನ ಮುಟ್ಟು ಕೂಡದು. ಮುಟ್ಟಿದಿ ಅಂದ್ರ ನನ್ನ ಕಥಿ ಮುಗಿಸ್ಕೊಂತೀನಿ. ನೀನು ಸುಖವಾಗಿರು… ನಿನಗ್ಯಾಕ ಈ ದುರ್ಬುದ್ಧಿ ಬಂತು” ಅಂತ ಕೇಳೀದ್ಲು. ಧ್ವನಿ ನಡುಗಾಕ್ಹತ್ತಿತ್ತು. ಮಾವ ಹೇಳೀದ, “ನಿನಗೂ ಆಸೇ ಇಲ್ಲೇನು ಒಂದು ಮಗೂನ್ನ ಹಡೀಬೇಕು ಅಂತ, ಅದ್ಕಾ ಬಂದೆ..” ಅಂದ. “ನೀನು ಅಷ್ಟು ಪಾಪ ಅನ್ನೂದು ಬ್ಯಾಡ ನನಗ. ಈ ಜಲಮದಾಗ ಮಕ್ಕಳಾಗ್ದಿದ್ರೂ ಅಡ್ಡೀ ಇಲ್ಲ. ನಾನು ನಾನಾ ಆಗಿರ್ಬೇಕು. ಇಲ್ಲಿ ನಿಲ್ಲಬ್ಯಾಡ. ಇನ್ನೊಮ್ಮಿ ಈ ಪ್ರಯತ್ನ ಮಾಡಬ್ಯಾಡ. ನೀನು ಗಂಡಸು. ನನ್ನ ತೆಕ್ಕಿಬಿದ್ದು ಮುಗಿಸೀದ್ರ ನಾನು ಏನೂ ಮಾಡಾಕಾಗೂದುಲ್ಲ ಮಾವ. ಆದ್ರ ನೆನಪಿಡು ಆಮ್ಯಾಲೆ ನಾನು ಬಂಡ ಜೀವ ಹರಿಯೂದಿಲ್ಲ…” ಅಂದ್ಲು. ಮಾವನಿಗೆ ಬರೂವಾಗ ಇದ್ದ ಧೈರ್ಯ ಆಕೀ ಮಾತು ಕೇಳಿದ ಮ್ಯಾಲೆ ಉಳಿದಿರಲಿಲ್ಲ. “ತಪ್ಪಾತು… ಇನ್ನೊಮ್ಮಿ ಹಿಂಗ ಯೋಚ್ನೆ ಮಾಡಂಗಿಲ್ಲ…” ಅಂತ ಅಲ್ಲಿ ನಿಲ್ಲದಾ ಕತ್ತಲದಾಗ ಸರಿದು ಹೊರಗ್ಹೋದ… 

***

-ಎರಡು-

‘ನಿಂಗಪ್ಪ ಕಾಕನ ತಿಪ್ಪಿ ಮ್ಯಾಲೆ ಒಂದು ಕೂಸು ಹಾಕಿ ಹೋಗ್ಯಾರ ಯಾರಾ’ ಅಂತ ಕಸ ಚೆಲ್ಲಾಕ ಹೋಗಿದ್ದ ನಿಮ್ಮಿ ಚೀರ್ಕೊಂತ ಹೆದರಿ ಓಡೋಡಿ ಬಂದಿದ್ದು ಕಂಡು ಐದಾ ನಿಮಿಷದಾಗ ಆ ತಿಪ್ಪಿ ಹತ್ರ ಜನಾ ಜಾತ್ರಿ. ಕೂಸಿಗಿ ಹೊಚ್ಚಿದ್ದ ಬಿಳಿ ಕಾಟನ್ ಒಲ್ಲೀ ಅರಬಿ ಸರಿಸಿ ನೋಡೀದ್ರ ಅದು ಗಂಡು ಕೂಸು. ನಾ ಕೂಡು ನೀ ಕೂಡು ಅಂತ ಸೂರ್ಯ ಹುಟ್ಟುಗೊಡದಾ ಅಲ್ಲಿ ಇಡೀ ಊರಿಗಿ ಊರಾ ಸೇರಿತ್ತು. ಸಕ್ರಮ್ಮ ಕೂಸಿನ ಎತ್ಕೊಂಡು ಅದಕ್ಕ ಕಚ್ಚಿದ್ದ ಕೆಂಪಿರಿಬಿಗೊಂದೀಟು, ಅದನ್ನ ಹಾಕಿ ಹೋಗಿದ್ದ ಮಹಾತಾಯಿಗೊಂದೀಟು ಮಂಗಳಾರತಿ ಮಾಡ್ಕೊಂತ ಕೂಸಿನ ಬಾಯಿಗಿ ಬೆಲ್ಲದ ನೀರು ಬಿಟ್ಲು. 

ಪಂಚಾಯತಿ ಸೇರಿಸಿ ಕೂಸು ಯಾರದು ಅಂತ ವಿಚಾರಣೆ ನಡೆಸಿದ್ರೂನೂ ಅದು ಆ ಊರಿನ ಯಾರದೂ ಅಲ್ಲ ಅಂತ ಗೊತ್ತಾತು. “ಅದು ಯಾರದಾರ ಆಗ್ಲಿ, ಯಾವ ಊರಿಂದಾರ ಆಗ್ಲಿ, ಯಾವ ಪಾಪದ್ದಾರ ಆಗ್ಲಿ, ಅದು ನನಗ ಬೇಕು. ನನ್ನ ಮಗ ಅಂತ ಸಾಕ್ತೀನಿ. ನನಗ ಅದನ್ನ ಕೊಟ್ಟು ಪುಣ್ಯ ಕಟ್ಟಿಕೊಬೇಕು ನೀವು” ಅಂತ ಸುಮ್ಮವ್ವ ಕೇಳಿದಾಗ ಇಡೀ ಸಭೆ ಬಿಟ್ಟ ಬಾಯಿ ಬಿಟ್ಟಂಗ ನೋಡಿತು. ಪಂಚರು, “ಏನ್ ಅಂತೀರಪ್ಪಾ ಸುಮ್ಮವ್ವನ ನಿರ್ಧಾರಕ್ಕ” ಅಂತ ಕೇಳೀದ್ರು. ಇಡೀ ಊರಿಗಿ ಊರೇ ಜೈ ಅಂದಿತ್ತು. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Shreemanth Yanagunti
Shreemanth Yanagunti
8 years ago

Wonderful story Savitriyavare. 

lokesh
8 years ago

supar

2
0
Would love your thoughts, please comment.x
()
x