ಲೇಖನ

ತಾಯಿಯ ಮಮತೆ: ಲೋಕೇಶಗೌಡ ಜೋಳದರಾಶಿ


ಕಮಲಮ್ಮನಿಗೆ ಮೋಹನ ಒಬ್ಬನೆ ಮಗ. ಚಿಕ್ಕ ವಯಸ್ಸಿನಲ್ಲೆ ಗಂಡನ ಕಳೆದುಕೊಂಡ ಕಮಲಮ್ಮ ತನ್ನ ಮಗನನ್ನು ತುಂಬ ಕಷ್ಟದಲ್ಲಿ ಸಾಕಿ ಸಲುಹಿ ದೊಡ್ಡವನನ್ನಾಗಿ ಬೆಳೆಸಿದಳು. ಅವಳು ಕೂಲಿ ಕೆಲಸದ ಜೊತೆ ಅಕ್ಕಪಕ್ಕದ ಮನೆಗಳಲ್ಲಿ ಮನೆಕೆಲಸಗಳನ್ನ ಮಾಡಿ ಮೋಹನನನ್ನು ಹತ್ತನೆಯ ತರಗತಿಯವರೆಗೆ ಓದಿಸಿ ನಂತರ, ಅವನನ್ನು ಬೆಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷ ಓದಲು ಸೇರಿಸಿದಳು. ಮೋಹನ ಕಾಲೇಜು ಸೇರಿದ ನಂತರ ತಾಯಿಗೆ ವಾರಕ್ಕೆ ಒಂದು ಪತ್ರ ಬರೆಯುತ್ತಿದ್ದ. ಕಾಲಕ್ರಮೇಣ ತಾಯಿಗೆ ಪತ್ರ ಬರುವುದು ಕಮ್ಮಿಯಾಯಿತು. ಇದರಿಂದ ತಾಯಿಯ ಮನದಲ್ಲಿ ಅಸಮಾಧಾನದ ಗಾಳಿ ಬೀಸತೊಡಗಿತು.
 
ಒಂದು ದಿನ ಮೋಹನ ತನ್ನ ಆತ್ಮೀಯ ಗೆಳೆಯರ ಜೊತೆ ಬೇಸಿಗೆ ರಜೆಯಲ್ಲಿ ಊರಿಗೆ ಬರುವುದಾಗಿ ಪತ್ರದ ಮೂಲಕ ಅಮ್ಮನಿಗೆ ತಿಳಿಸಿದ. ತನ್ನ ಮಗ ಊರಿಗೆ ಬರುವ ವಿಷಯವನ್ನು ಜನರೆಲ್ಲರಿಗೆ ಸಂತಸದಿಂದ ಹೇಳತೊಡಗಿದಳು. ತಾನು ಕೆಲಸ ಮಾಡುವ ಕಡೆ ಸಾಲ ತೆಗೆದುಕೊಂಡು, ಮಗನಿಗೆ ಇಷ್ಟವಾದ ತಿಂಡಿ-ತಿನುಸುಗಳನ್ನು ತುಂಬಾ ಪ್ರೀತಿಯಿಂದ ಮಾಡಿ, ಮುಂಬಾಗಿಲಿನ ಸಂದಿಯಲ್ಲಿ ಇಣುಕಿ ನೋಡಿ ಮಗನ ದಾರಿ ಕಾಯುತ್ತ ಕುಳಿತಳು. ದೂರದಲ್ಲಿ ಮಗನ ನೆರಳು ಮಂಜುಮಂಜಾಗಿ ಕಾಣಿಸಲು, ಕಣ್ಣೀರು ಕಣ್ಣ ತುಂಬಿ ಮನವೆಲ್ಲಾ ಹರಿಯತೊಡಗಿತು. ಮಗನು ತನ್ನ ಸ್ನೇಹಿತರೊಡನೆ ಬರುವುದ ನೋಡಿ ಮುಂಬಾಗಿಲು ತೆಗೆದು, ಹಿತ್ತಲಲ್ಲಿ ಅವರಿಗೆ ಕೈ ಕಾಲು ತೊಳೆಯಲು ನೀರು ಹಾಗೂ ಮುಖ ಒರೆಸಲು ಪಂಚವಸ್ತ್ರವನ್ನು ಅಲಂಕರಿಸಿದಳು. ನಂತರ, ದೇವರ ಕೋಣೆಯಲ್ಲಿ ಊಟದ ಸಿದ್ಧತೆ ಮಾಡತೊಡಗಿದಳು. ಮಗ ತನ್ನ ಗೆಳೆಯರನ್ನ ಕೈ ಕಾಲು ತೊಳೆಯಲು ನೇರ ಹಿತ್ತಲಲ್ಲಿ ಕರೆದುಕೊಂಡು ಹೋದ. ವಿದ್ಯುತ್ ಇರದ ಕಾರಣ ಮನೆಯಲ್ಲಿ ಕತ್ತಲು ಕವಿದಿತ್ತು, ಕಮಲಮ್ಮ ದೀಪದ ಬೆಳಕಲ್ಲಿ ಮಗನನ್ನು ಕದ್ದು ನೋಡುತ್ತ ಖುಷಿಯಾದಳು. ಮೋಹನ ಮತ್ತು ಅವನ ಗೆಳೆಯರು ಪಡಸಾಲೆಯಲ್ಲಿ ಕುಳಿತು ಮನೆಯ ಹಾಗೂ ಕಾಲೇಜಿನ ವಿಷಯ ಕುರಿತು ಮಾತನಾಡತೊಡಗಿದರು. ಅಷ್ಟರಲ್ಲಿ ತಾಯಿ ಊಟ ಬಡಿಸಿ, ಮೋಹನನನ್ನು ಕೂಗಿ ಕರೆದಳು. ಮೋಹನ ತನ್ನ ಗೆಳಯರೊಡನೆ ದೇವರ ಕೋಣೆಯಲ್ಲಿ ಬಂದು ಕುಳಿತನು. ಅವನ ತಾಯಿ ಸೀರೆಯ ಸೆರೆಗಿನಿಂದ ಮೊಗವ ಮರೆಮಾಡಿ ಹಿತ್ತಲಿನ ಕಡೆ ನಡೆದಳು. ಎಲ್ಲರು ಊಟ ಮುಗಿಸಿದ ನಂತರ ಕೈ ತೊಳೆಯಲು ಹಿತ್ತಲಿನ ಕಡೆ ಹೊರಡುವ ಮುನ್ನ, ಮೋಹನ ತಟ್ಟೆಯಲ್ಲಿಯೇ ಕೈ ತೊಳೆಯಲು ಹೇಳಿದ. ಗೆಳೆಯರು ಕೈ ತೊಳೆಯುತ್ತ ಊಟ ತುಂಬಾ ಚೆನ್ನಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ತಾಯಿಗೆ ಹೋಗಿ ಬರುವುದಾಗಿ ಹೇಳಿ ಎಲ್ಲರು ಹೊರಟರು. 
 
ಮೋಹನ ಹಾಗೂ ಅವನ ಮಿತ್ರರು ಮನೆಯಿಂದ ಹೊರಗಡೆ ಹೋದ ನಂತರ, ದೇವರ ಕೋಣೆಯಲ್ಲಿ ಊಟ ಮಾಡಿದ ತಟ್ಟೆಗಳನ್ನ ತೆಗೆಯಲು ಅಮ್ಮ ಹೊರಟಳು. ಅಷ್ಟರಲ್ಲಿ, ಮಗನ ಗೆಳೆಯರಲ್ಲಿ ಒಬ್ಬ ತನ್ನ ಮೊಬೈಲನ್ನು ದೇವರ ಕೋಣೆಯಲ್ಲೆ ಬಿಟ್ಟು ಹೋದಕಾರಣ, ಅದನ್ನು ಹಿಂತೆಗೆದುಕೊಳ್ಳಲು ಬಂದ. ಕಮಲಮ್ಮ ತನ್ನ ತಲೆಯ ಮೇಲೆ ಸೀರೆಯ ಸೆರಗು ಹಾಕುವದನ್ನು ಮರೆತು ತಟ್ಟೆ ತೆಗೆಯುತ್ತಿದ್ದಳು. ಮೋಹನನ ಗೆಳೆಯ ದೇವರ ಕೋಣೆಯ ಒಳಗಡೆ ಬರುವ ಶಬ್ಧ ಕೇಳಿ, ಕಮಲಮ್ಮ ತನ್ನ ತಲೆಯ ಮೇಲೆ ಸೆರಗು ಸರಿಸುವ ಮುನ್ನ ಅವಳ ಅರ್ಧ ಸುಟ್ಟ ವಿಕಾರವಾದ ಮುಖವನ್ನು ಮೋಹನನ ಗೆಳೆಯ ನೋಡಿ ಬೆಚ್ಚಿಬಿದ್ದನು. ಅವಳ ಮುಖವನ್ನು ನೋಡಿ ಹೆದರಿದ ಮಿತ್ರನ ಪ್ರಶ್ನಾರ್ಥಕ ದೃಷ್ಟಿಯನ್ನು ಮೋಹನ ಎದುರಿಸದೆ ನಾಚಿಕೆ ಹಾಗೂ ಅವಮಾನದಿಂದ ತಲೆ ತಗ್ಗಿಸಿದ.
 
ಅಷ್ಟರಲ್ಲಿ ಕಮಲಮ್ಮ ತನ್ನ ಸೀರೆಯ ಸೆರಗನ್ನು ಮುಖದ ಮೇಲೆ ಸರಿಸಿಕೊಂಡಳು. ಮೋಹನನ ಮೌನ ಅರಿತು, ತಾನು ಅವನ ತಾಯಿಯೆಂದು ಹೇಳಲಾಗದೆ, ತಾನೊಬ್ಬ ಅನಾಥೆ, ಮೋಹನ ಸಾಹೇಬ್ರೇ ತನ್ನ ಮೇಲೆ ದಯಮಾಡಿ ಊಟ ಬಟ್ಟೆ ಕೊಟ್ಟು ಸಾಕುತ್ತಿದ್ದಾರೆ ಎಂದು ಹೇಳಿ ಕಣ್ಣಮೇಲಿನ ನೀರನ್ನು ಹೃದಯಕ್ಕಿಳಿಸಿದಳು. ಮೋಹನನ ಸ್ನೇಹಿತರೆಲ್ಲರು ಅಮ್ಮ ನೀವು ಚಿಂತಿಸದಿರಿ, ಮೋಹನ ನಿಮ್ಮನು ತುಂಬಾನೆ ಚೆನ್ನಾಗಿ ನೋಡ್ಕೊಳ್ತಾನೆ ಎಂದು ಕನಿಕರದಿಂದ ನುಡಿದರು. ಅವರಿಗೆ ಗೊತ್ತಿರದ ವಿಷಯವವೇನಂದ್ರೆ, ಕಮಲಮ್ಮನ ಮನೆಗೆ ಬೆಂಕಿ ಬಿದ್ದ ಸಮಯದಲ್ಲಿ ತನ್ನ ಜೀವದ ಮೇಲೆ ಆಸೆ ಬಿಟ್ಟು ಮಗ ಹಾಗೂ ಗಂಡನನ್ನು ಆ ಅನಾಹುತದಿಂದ ಹೊರಗೆ ತೆಗೆದಳು. ಆದರೆ, ತನ್ನ ಮಗನನ್ನ ಮಾತ್ರ ಜೀವಾಪಾಯದಿಂದ ಪಾರುಮಾಡಲಾಯಿತು. ಅವರಿಗೇನು ಗೋತ್ತು? ತನ್ನ ಸುಖ ಸಂತೋಷಗಳನ್ನು ಕತ್ತಿಸಿಕಿ, ಸ್ವಾಭಿಮಾನಕ್ಕೆ ಸಮಾಧಿ ಕಟ್ಟಿ, ಊರ ಜನರ ಮನೆಯಲ್ಲಿ ಕೂಲಿ ಕೆಲಸ ಹಾಗೂ ಮನೆ ಕೆಲಸ ಮಾಡಿ ಬಂದ ಹಣದಿಂದ ಮೋಹನನ ಓದಿಸಿ ಬೆಳೆಸಿ ದೊಡ್ಡವನ್ನನಾಗಿ ಮಾಡಿದ "ಮಹಾತಾಯಿ" ಇವಳು ಎಂದು. ಕೊನೆಗೆ ಮೋಹನ ಅವನ ಗೆಳೆಯರ ಜೊತೆ ಬೆಂಗಳೂರಿಗೆ ಹೊರಡುವ ದಾರಿಯಲ್ಲಿ, ತನ್ನ ತಾಯಿಯನ್ನು ನೆನೆದು ತನಗೆ ತಾನೆ ಮನವರಿಕೆ ಮಾಡಿಕೊಳ್ಳರಂಭಿಸಿದ. ಗೆಳೆಯರ ಮುಂದೆ ನಾನೇನೋ ನನ್ನ ತಾಯಿಯನ್ನ ಸುಲಭವಾಗಿ ಬಿಟ್ಟುಕೊಟ್ಟುಬಿಟ್ಟೆ. ಆದರೆ, ನನ್ನ ತಾಯಿ ನನ್ನನ್ನ ಬಿಟ್ಟುಕೊಡಲ್ಲಿಲ್ಲ ಎಂಬುವ ಸತ್ಯವ ಅರಿತು ಅವನ ಹೃದಯ ಕರಗಿ ಕಣ್ಣಿರಾಗಿ, ತಾಯಿಯ ಮಮತೆಗೆ ಪುನಃ ಪ್ರೀತಿ ಅವನಲ್ಲಿ ಚಿಗುರಲಾರಂಭಿಸಿತು.

ಮೂಲ ಕಥೆ: ಸೀಮಾ ಶಾಸ್ತ್ರಿ

ಚಿತ್ರ ಕಥೆ: ಲೋಕೇಶಗೌಡ ಜೋಳದರಾಶಿ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ತಾಯಿಯ ಮಮತೆ: ಲೋಕೇಶಗೌಡ ಜೋಳದರಾಶಿ

  1. ತಂಬಾ ಚನ್ನಾಗಿ ಬರಿದಿದ್ದೀರಾ ದನ್ಯವಾದಗಳು
    ಹೀಗೆ ಇನ್ನೂ ಅನೇಕ ಬರಹಗಳು ನಿಮ್ಮಿಂದ ಹರಿದು ಬರಲಿ..

Leave a Reply

Your email address will not be published. Required fields are marked *