‘ತಾಯಿಯ ಮಡಿಲು’

ಬೇಡುವೆನು ವರವನ್ನು

ಕೊಡು ತಾಯಿ ಜನ್ಮವನು

ಕಡೆತನಕ ಮರೆಯೊಲ್ಲ ಜೋಗಿ…

ಕಡೆತನಕ ಮರೆಯೊಲ್ಲ ಜೋಗಿ…

ಎನ್ನುವ 'ಜೋಗಿ ಚಿತ್ರದ ಗೀತೆಯನ್ನು ನಾವೆಲ್ಲಾ ಟೀವಿ, ರೇಡಿಯೋಗಳಲ್ಲಿ ಕೇಳಿರುತ್ತೇವೆ. ಇದು ೨೦೦೫ ರಲ್ಲಿ ತೆರೆಕಂಡ 'ಶಿವರಾಜ್ ಕುಮಾರ್' ನಾಯಕ ನಟನ ಸೂಪರ್ ಹಿಟ್ ಚಲನ ಚಿತ್ರ.  ಈ ಚಿತ್ರ ಬಿಡುಗಡೆಯದಾಗ ಹೆಚ್ಚು ಸಿನೆಮಾ ಮಂದಿರಕ್ಕೆ ಹೋಗದವಳಾದ ನಾನು ಸಹ ಈ ಹಾಡಿಗೆ ಮನಸೋತು ಚಿತ್ರ ನೋಡಲು ಹೋಗಿದ್ದೆ.  ಚಿತ್ರ ತುಂಬಾ ಚೆನ್ನಾಗಿತ್ತು. ತಾಯಿ ಪ್ರೀತಿ ಪ್ರಧಾನವಾದ ಚಿತ್ರ, ಎಂತಹವರನ್ನು ಬರಸೆಳೆಯುವ ಪ್ರೀತಿಮೂರ್ತಿ "ತಾಯಿ". ಅಂತಹ ತಾಯಿಯನ್ನು ಜೀವನದಲ್ಲಿ ಪಡೆದು ಉಳಿಸಿಕೊಂಡವರೇ ನಿಜವಾದ ಅದೃಷ್ಟವಂತರು ಎಂದು ಭಾವಿಸುವವಳು ನಾನು.

ಹುಟ್ಟಿದ ಮಗುವಿನ ಲಾಲನೆ, ಪೋಷನೆಯನ್ನು ಮಾಡುವುದರಲ್ಲಿ ತಾಯಿಯು ತನ್ನ ಎಲ್ಲಾ ನೋವನ್ನು ಮರೆಯುತ್ತಾಳೆ. ನಿಸ್ವಾರ್ಥ ತಾಯಿ ಪ್ರೀತಿ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಅತೀ ಅವಶ್ಯಕ. ಹುಟ್ಟಿದ ಪ್ರತೀ ಮಗುವು ಭೂಮಿಯ ಮೇಲೆ ಕಾಲೂರಿ ನಿಲ್ಲಬೇಕಾದರೆ ಹೆತ್ತ ತಾಯಿಯ ಪರಿಶ್ರಮ ಅಷ್ಟಿಷ್ಟಲ್ಲ. ಮಗುವಿಗೆ ತಾಯಿಯೇ ಮೊದಲ 'ಗುರು'. ಮಾನವರಾಗಿ ಹುಟ್ಟಿದ ಮೇಲೆ ಮಾತು, ಸಂವಹನ ಅವಶ್ಯಕವಾಗಿದೆ. ಮಗುವಿಗೆ ಮೊದಲ ಮಾತನ್ನು ತಾಯಿಯೇ ನೀಡುರುತ್ತಾಳೆ. ಸದಾಕಾಲ ಮಗುವಿನೊಂದಿಗೆ ಸಮಯವನ್ನು ಕಳೆಯುವ ತಾಯಿ, ಮಾತು ಬಾರದ ಮಗುವಿನೊಂದಿಗೆ ಸಂಭಾಷಿಸುತ್ತಿರುತ್ತಾಳೆ. ಆಲಿಸುವುದರ ಮೂಲಕ ಮಗುವು ಶಬ್ದಗಳನ್ನು ಗ್ರಹಿಸುತ್ತಿರುತ್ತದೆ. ಒಂದು ವರ್ಷ ವಯಸ್ಸಿನ ನಂತರ ಮಗುವು ಪುನರ್ರುಚ್ಚರಿಸುವ ಪ್ರಯತ್ನದಿಂದ ಮಾತನ್ನಾಡುವುದನ್ನು ಕಲಿಯುತ್ತದೆ. ತಾಯಿಯು ಯಾವ ಭಾಷೆಯಲ್ಲಿ ಮಗುವಿನೊಂದಿಗೆ ಸಂಭಾಷಿಸುತ್ತಾಳೊ ಮಗುವು ಆ ಭಾಷೆಯನ್ನು ಕಲಿಯುಲು ಆರಂಭಿಸುತ್ತದೆ. ಇದನ್ನೇ "ಮಾತೃ ಭಾಷೆ" ಎನ್ನುವುದು. ಆದ್ದರಿಂದಲೇ ನಮಗೆ ಮಾತೃ ಭಾಷೆಯ ಮೇಲೆ ಎಲ್ಲಿಲ್ಲದ ಪ್ರೀತಿ ಹಾಗೂ ಭಾಷೆಯನ್ನು  ಹಚ್ಚಿಕೂಂಡುಬಿಡುತ್ತೇವೆ.

ತನ್ನ ತಾಯಿ ಕಲಿಸಿದ "ಭಾಷೆ", "ತಾಯ್ನಾಡಿನ ಭಾಷೆ" ಒಮ್ಮೆಲೆ ತಾಯಿಯ ಮೇಲಿನ ವ್ಯಾಮೋಹವನ್ನು ಪಡೆದುಕೊಂಡಬಿಡುತ್ತದೆ. "ತಾಯಿ" ಎಂದರೆ ಒಂದು ಬೆಂಬಲವಿದ್ದಂತೆ, ಜಗತ್ತಿನಲ್ಲಿನ ಅತೀ ಸಧೃಡ ಬೆಂಬಲವಾಗಿದೆ. ನಮ್ಮೊಂದಿಗೆ ಯಾರೇ ಇರಲೀ, ಇಲ್ಲದಿರಲೀ, ತಾಯಿಯ ಮಮತೆಯೊಂದೇ ನಮಗೆ ಬದುಕಲು ಆತ್ಮವಿಶ್ವಾಸವನ್ನು ತಂದುಕೊಡುತ್ತದೆ. ಜೀವನದಲ್ಲಿನ ಸೋಲು ಗೆಲುವನ್ನು ಸಮಾನವಾಗಿ ಕಾಣಲು ಈ ಆತ್ಮವಿಶ್ವಾಸವು ಸಹಕಾರಿಯಾಗಿರುತ್ತದೆ. ತಾಯಿಯೊಂದಿಗಿರುವವರಿಗೆ ನನ್ನ ಈ ಮಾತುಗಳು ಅಷ್ಟು ರುಚಿಸದಿರಬಹುದು. ಆದರೆ ತಾಯಿ ಪಾತ್ರವನ್ನು ಕಳೆದುಕೊಂಡ ವ್ಯಕ್ತಿ ಬಹುಶಃ ಹೌದೆನ್ನಬಹುದು. ಜೀವನದಲ್ಲಿನ ಯಾವುದೇ ರೀತಿಯ ಸೋಲಾದರೂ ತನ್ನ ತಾಯಿ ಮಡಿಲನ್ನು ಸೇರಿ, ಸುಮ್ಮನೆ ಮಲಗಿಬಿಟ್ಟರೂ, ಕಣ್ಣೀರ ಹನಿಗಳಲ್ಲಿ ಸೋಲೆಂಬ ನೋವು ಹರಿದು ಹೊರನಡೆದುಬಿಡುತ್ತದೆ. ತಾಯಿಯ ಕೈಗಳು ನಮ್ಮ ತಲೆಯನ್ನು ನೇವರಿಸಲು, ರಮಿಸಲು ನಾವು ಪುನಃಶ್ಚೇತನಗೊಳ್ಳಲಾರಂಭಿಸುತ್ತೇವೆ. ಮತ್ತೆ ಯಾವುದೇ ರೀತಿಯ ಸವಾಲಿಗೂ ಮೈಯೊಡ್ಡಲು ಸಿದ್ದರಾಗಿ ನಿಲ್ಲುತ್ತೇವೆ. ಅದುವೇ ತಾಯಿ ಎಂಬ ಪ್ರೀತಿ ಮತ್ತು ಬೆಂಬಲ.

ಅದೇ ರೀತಿ ತಾಯಿಯಿಲ್ಲದೇ ಬೆಳೆದ ವ್ಯಕ್ಠಿಗಳಲ್ಲಿ ನಾವು ಅನೇಕ ರೀತಿಯ ಸಮಸ್ಯೆಗಳನ್ನು ಕಾಣುತ್ತೇವೆ. ಎಲ್ಲರೆದುರು ಸಾಮಾನ್ಯರಾಗೆ ಕಾಣುವ ಅವರು ಮಾನಸಿಕವಾಗಿ ದುರ್ಬಲರಾಗಿರುತ್ತಾರೆ. ಯಾರೊಂದಿಗೂ ಹೆಚ್ಚು ಬೆರೆಯದಿರುವುದಕ್ಕೆ ಈ ದೌರ್ಬಲ್ಯವೇ ಕಾರಣವಾಗಿರುತ್ತದೆ. ಯಾರು ಹೇಗೋ? ಹೇಗೆ ಮಾತನಾಡಬೇಕು? ಮಾತನಾಡಿದರೆ ಏನು ತಪ್ಪಾಗುವುದೋ?ಎಂಬ ಪ್ರಶ್ನೆಗಳು ಮತ್ತು ಆತಂಕಗಳಲ್ಲಿಯೇ ಅವರು ಕಳೆದುಹೋಗಿರುತ್ತಾರೆ. ಇತರರೊಂದಿಗೆ ಬೆರೆಯುವ ಹೆಚ್ಚು ಪ್ರಸಂಗಗಳಿಂದ ದೂರವೇ ಉಳಿಯಲು ಆಶಿಸುತ್ತಾರೆ. ಇದರ ಪರಿಣಾಮವು ಅವರ ವೈಯಕ್ತಿಕ ಕೆಲಸ ಕಾರ್ಯಗಳ ಮೇಲೂ ಉಂಟಾಗಿ 'ಸೋಮಾರಿಗಳು', 'ಅಹಂಕಾರಿಗಳು' ಎಂಬ ಬಿರುದುಗಳಿಗೆ ಪಾತ್ರರಾಗಿಬಿಡುತ್ತಾರೆ. ಹೊರಗಿನ ಜನರಿಗೆ ಇಂತಹ ವ್ಯಕ್ತಿಗಳು ಅಹಂ ಉಳ್ಳವರು ಎಂದೇ ಭಾವಿಸಲ್ಪಡುತ್ತಾರೆ. ಒಮ್ಮೆ ಅಂತಹವರೊಂದಿಗೆ ಆತ್ಮೀಯವಾಗಿ ವ್ಯವಹರಿಸಿ ನೋಡಿ, ಅವರಲ್ಲಿನ ಮುಗ್ದ ಮನಸ್ಸು ನಮ್ಮರಿವಿಗೆ ಬರುವುದು. ಹಾಗೇಯೆ ಅವರಲ್ಲಿನ ಪ್ರತಿಭೆಗಳು. ಮೃದು ಮನವು ಪಕ್ವವಾಗಲು ಅನುಭವಗಳೊಂದಿಗೆ ತಾಯಿ ಪ್ರೀತಿ ಎಂಬ "ಭರವಸೆ"ಯೂ ಅಗತ್ಯವೆಂದು  ನನಗನಿಸುತ್ತದೆ.

ದೇವನು ಎಲ್ಲಾ ಸ್ಥಳಗಳಲ್ಲೂ ಇರಲು ಸಾಧ್ಯವಿಲ್ಲವೆಂದು ತಾಯಿಯ ರೂಪದಲ್ಲಿ ಅವನಿರುತ್ತಾನೆ ಎಂಬ ಮಾತಿದೆ. ಅದರಂತೆ ಮನುಷ್ಯನ ಜೀವನದಲ್ಲಿ ದೇವತೆಯಾಗಿ ತಾಯಿಯಿರುತ್ತಾಳೆ. ತಾಯಿಗೂ ಮಗುವಿಗೂ ಕನಿಷ್ಟ ೨೦ ವರ್ಷಗಳ ಅಂತರವಿರುತ್ತದೆ. ಆದಕಾರಣ ವ್ಯಕ್ತಿಯು ತನ್ನ ಜೀವನದಲ್ಲಿ ತಾಯಿಯ ನಂತರ ತನ್ನ ಹೆಂಡತಿಯ ರೂಪದಲ್ಲಿ ತಾಯಿಯ ಪ್ರೀತಿಯನ್ನು ಸವಿಯುತ್ತಾನೆ. ಗಂಡು ಜಾತಿಗೆ ಇದೊಂದು ವರದಾನವೇ ಸರಿ. ಯೌವ್ವನದಲ್ಲಿ ಗಂಡ-ಹೆಂಡಿರಾದವರು ಕಾಲಕಳೆದಂತೆ ವೃದ್ದರಾಗುವಾಗ, ವಯಸ್ಸಾದ ತನ್ನ ಹೆಂಡತಿಯು, ಯೌವ್ವನದಲ್ಲಿ ಕಂಡ ತನ್ನ ತಾಯಿಯೇ ಆಗಿ ಕಾಣುತ್ತಾಳೆ. ದೀರ್ಘ ಕಾಲದ ದಾಂಪತ್ಯದಿಂದ ಸಂಬಂಧದಲ್ಲಿ ಸಾಮರಸ್ಯವನ್ನು ಸಾಧಿಸಿದ ದಂಪತಿಗಳಲ್ಲಿ ಇಂತಹ ಅದ್ಬುತ ಪವಾಡವನ್ನು ನಾವು ಕಾಣಬಹುದು. ಈ ಕಾರಣದಿಂದಲೇ ವೃದ್ದರಾಗುತ್ತಾ ಬಂದಂತೆ ಕೆಲವರು ತಮ್ಮ ಹೆಂಡತಿಯನ್ನು ಮೊದಲಿಗಿಂತಲು ಹೆಚ್ಚು ಪ್ರೀತಿಸಲು ಪ್ರಾರಂಭಿಸುತ್ತಾರೆ. ಗಂಡನಿಗೆ ಹೆಂಡತಿಯೇ ತಾಯಿಯಾಗಿರುತ್ತಾಳೆ. ಅಂತಹ ಮಾತೃ ಹೃದಯ ಹೆಣ್ಣಿನದು. ಹೆಣ್ಣಿನಲ್ಲಿ ಸದಾ ಕಾಲ ಮಾತೃ ಹೃದಯವೊಂದು ಮಿಡಿಯುತ್ತಿರುತ್ತದೆ.

ತನಗಿಂತ ಹಿರಿಯರಾಗಲೀ; ಕಿರಿಯರಾಗಲೀ, ಅವಳನ್ನು ಮಾತೃ ಸ್ವರೂಪಿಯಾಗಿ ಕಂಡರೆಂದರೆ ಅವರಿಗಾಗಿ ಆಕೆ ಮಾತೃವೇ ಆಗಿಬಿಡುವಳು. ಅಂತಹ  ಹೃದಯ ವೈಶಾಲ್ಯತೆ ಹೆಣ್ಣಿನಲ್ಲಿದೆ. ಹೆಣ್ಣಿನ ಜೀವನದಲ್ಲಿನ ಅತೀ ಸುಖಕರ ಗತಿಯೆಂದರೆ ತಾಯಿಯಾಗುವುದು ಎಂದೇ ಅವಳು ಭಾವಿಸುತ್ತಾಳೆ. ಮಾತೃ ಹೃದಯೀ ಹೆಣ್ಣಿನಲ್ಲಿ ಸದಾ ಕಾಲ ಮಾತೃತ್ವದ ಹಂಬಲವೊಂದಿರುತ್ತದೆ. ನಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ನಾವಿದ್ದನ್ನು ನೋಡಿರುತ್ತೇವೆ. ಕೆಲವೊಮ್ಮೆ ಅನುಭವಿಸಿರುತ್ತೇವೆ. ಮಾತೃ ಪ್ರೇಮದಿಂದ ಯಾರೆಡೆಗೋ ಮಗ, ಮಗಳು. ಮಕ್ಕಳು ಎಂದು ಮಿಡಿದಾಗ ಮರುಕ್ಷಣ ಸಣ್ಣ ನಾಚಿಕೆಯೊಂದು ನಮ್ಮನ್ನು ನಾಚಿಸಿರುತ್ತದೆ. ಮತ್ತೆ ವಾಸ್ತವಕ್ಕೆ ಮರುಳಬೇಕಾಗುತ್ತದೆ.. ಇವುಗಳೆಲ್ಲಾ ಹೆಣ್ಣಿನಲ್ಲಿನ ಸಹಜ ಗುಣಗಳು ಎಂದೇ ನಾನು ಭಾವಿಸುತ್ತೇನೆ.

'ಹೆತ್ತವರಿಗೆ ಹೆಗ್ಗಣ ಮುದ್ದು', ಎನ್ನುವಂತೆ 'ತಾಯಿ'ಯು ನಮ್ಮ ಓರೆ-ಕೋರೆಗಳನ್ನು ತನ್ನವೆಂದು ಪ್ರೀತಿಸುತ್ತಾಳೆ. ಪ್ರಪಂಚದೆದುರು ನಿಲ್ಲುವಾಗ ನಮ್ಮ ಓರೆ-ಕೋರೆಗಳು ನಮ್ಮ ಕೀಳೆರಿಮೆಗಳಾಗಿ ಭಾದಿಸದಂತೆ ತಾಯಿ ಪ್ರೀತಿ ನಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಯಾವಾಗ ಈ ಪ್ರೀತಿಯ ಕೊರತೆಯುಂಟಾಗುತ್ತದೆಯೋ ಅಂದು ಸಕಲ ಸುಗುಣಗಳನ್ನು ಹೊಂದಿದ್ದರೂ, ಮನದ ಮೂಲೆಯಲ್ಲೊಂದು 'ಅಳುಕು' ಅಡಗಿ ಕುಳಿತುಬಿಡುತ್ತದೆ. ಈ ಕಾರಣದಿಂದ ವ್ಯಕ್ತಿ ದುರ್ಬಲನಾಗುತ್ತಾ ಹೋಗುತ್ತಾನೆ. ಆದ್ದರಿಂದಲೇ ಹೇಳುವುದು, ಪ್ರತೀ ಯಶಸ್ವೀ ಗಂಡಿನ ಹಿಂದೆ ಒಬ್ಬಳು ಮಾತೃ ಸ್ವರೂಪಿ ಹೆಣ್ಣಿರುವಳೆಂದು. ನೀವು ಪ್ರಶ್ನಿಸಬಹುದು "ಎಲ್ಲಾ ಹೆಣ್ಣುಗಳು ಮಾತೃ ಸ್ವರೂಪಿಯೇ ಆಗಿರುತ್ತಾರೆಯೇ? ಹೆಂಡತಿ, ಮಗಳು, ಗೆಳತಿ- ಇವರು ಯಾಕಾಗಬಾರದು?" ಎಂದು. ಹೌದು ಅವರೂ ಆಗಿರಲು ಸಾಧ್ಯವಿದೆ. ಅವರು ನಿಮ್ಮೆಡೆಗೆ ಮಾತೃತ್ವವನ್ನು ಹೊಂದಿದ್ದೇ ಆದರೆ ಖಂಡಿತ ಸಾಧ್ಯ. ಗೆಳೆಯರೊಬ್ಬರ ಲೇಖನದಲ್ಲಿ ಓದಿದ್ದೆ, "ಹುಡುಗಿಯರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ, ಅವರನ್ನು ಅರ್ಥ ಮಾಡಿಕೊಳ್ಳಲು ಹೋಗಲೇಬಾರದು" ಎಂದು. ಇಲ್ಲಿಯವರೆಗೂ ಈ ಲೇಖನ ಓದಿದ ನಿಮಗೆ ಹಾಗೇಯೇ ಅನ್ನಿಸುತ್ತದೆಯೇ? ಚಿಂತಿಸಿ.

ತಾಯಿಯು ಕಲಿಸಿದ ಭಾಷೆ ಮಾತೃಭಾಷೆ ಎಂದು ಈಗಾಗಲೇ ಪ್ರಸ್ತಾಪಿಸಲಾಗಿದೆ. ತಾಯಿಯಂತೆ ಪ್ರೀತಿಸಿ, ಮುದ್ದಿಸಿ, ನಗಿಸಿ, ಕೆಣಕಿಸುವ ಅನೇಕ ಪುಸ್ತಕಗಳು ಕನ್ನಡ ತಾಯಿಯ ಕೈಗಳಿದ್ದಂತೆ. ತಾಯಿಯ ಮೇಲಿನ ವ್ಯಾಮೋಹವು ಸಹಜವಾಗಿಯೇ ಮಾತೃಭಾಷೆಯ ಮೇಲಿರುತ್ತದೆ ಎಂದು ಭಾವಿಸುತ್ತೇನೆ. ಪುಸ್ತಕ ರೂಪಿ ತಾಯಿಯ ಕೈಗಳು ಇಂದು ನಮ್ಮನ್ನು ಮುದ್ದಿಸಿವೆ, ಕೆಣಕಿದೆ, ಪ್ರೀತಿಸಿದೆ, ನಗಿಸಿ ನಮ್ಮೇಲ್ಲಾ ನೋವುಗಳನ್ನು ಮರೆಯಿಸಿ ಕ್ರಮೇಣ ನಮ್ಮಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದೆ. ಎಲ್ಲರನ್ನೂ ಪ್ರೀತಿಸುವ ಕನ್ನಡಮಾತೆಯು ಇಂದಿಗೂ ಪರಭಾಷಾ ಮಕ್ಕಳನ್ನು ತನ್ನ ಮಡಿಲಿನಲ್ಲಿ ಪೋಷಿಸುತ್ತಿದ್ದಾಳೆ. ಕನ್ನಡ ತಾಯಿಯ ಮಡಿಲಿನಲಿ ಎಷ್ಟು ಹೊತ್ತು ಕಳೆದರೂ ಸುಖವೇ ಸರಿ. ಕನ್ನಡಾಂಬೆಯ ಕೈಗಳು ನಮ್ಮ ತಲೆಯನ್ನು ತಡವುತ್ತಿರುವವರೆಗೂ ನಾವು ಸೋಲಿಗಂಜದ ಪುತ್ರ-ಪುತ್ರೀಯರು. ಈ ತಾಯಿಯು ನಮ್ಮನ್ನು ಎಂದೆಂದಿಗೂ ತೊರೆಯಳು, ನಮ್ಮ ಕೊನೆಯುಸಿರಿರುವವರೆಗೂ ನಮ್ಮನ್ನು ಹರಸುವಳು. ಈ ತಾಯಿಯ ಕೀರ್ತಿಯನ್ನು ಕಾಪಾಡುವ ಮತ್ತು ಬೆಳಗಿಸುವ ಕರ್ತವ್ಯ ಬದುಕಿರುವಾಗ ನಮ್ಮದಲ್ಲವೇ? ಇದುವರೆಗೂ ನನ್ನಂತರಾಳದ ದನಿಗೆ ಕಿವಿಕೊಟ್ಟ ನಿಮಗೆ ಧನ್ಯವಾದಗಳು ಸ್ನೇಹಿತರೇ.

-ದಿವ್ಯ ಆಂಜನಪ್ಪ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

13 Comments
Oldest
Newest Most Voted
Inline Feedbacks
View all comments
ಈಶ್ವರ ಭಟ್

ತಾಯಿ, ತಾಯ್ನುಡಿ.. ಚಂದದ ಲೇಖನ.

praveenkumar Daivajnacharya
praveenkumar Daivajnacharya
11 years ago

ಮಾತೃತ್ವದ ಕುರಿತು ಅರ್ಥಪೂರ್ಣ ಮಾತುಗಳನ್ನೇ ಆಡಿದ್ದೀರಿ. ಚೆನ್ನಾಗಿದೆ..

Utham
11 years ago

Thayiya prathi sukshma vicharagallu nimma lekanadalive
Thumba chenagi bardidira shubhavagali

Santhoshkumar LM
11 years ago

ಅಮ್ಮನ ಕನ್ನಡಮ್ಮನ ಬಗ್ಗೆ ಪ್ರೀತಿ ತುಂಬಿದ ಲೇಖನ. ಚೆನ್ನಾಗಿದೆ!!

ಹರಳಹಳ್ಳಿ ಪುಟ್ಟರಾಜು ಪಾಂಡವಪುರ.
ಹರಳಹಳ್ಳಿ ಪುಟ್ಟರಾಜು ಪಾಂಡವಪುರ.
11 years ago

ದಿವ್ಯ ಮೇಡಂ…
ನಿಮಗೆ ಹ್ಯಾಟ್ಸ್‌ಹಾಪ್‌…
ನಿಮ್ಮ “ತಾಯಿಯಮಡಿಲು” ಲೇಖನ ನಿಜಕ್ಕೂ ಚೆನ್ನಾಗಿದೆ. ಆರಿಸಿಕೊಂಡ ವಿಷಯ ವಸ್ತು ಕೂಡ ಮಹತ್ವದ್ದು. ನಿಮ್ಮ ಬರವಣಿಗೆ ಶೈಲಿ ತುಂಬಾನೇ ಅಚ್ಚುಕಟ್ಟು ಹಾಗೂ ಆಕರ್ಷಕ.. ನೀವೂ ಹೀಗೇ ಬರೀತಾ ಇರಿ. ಓದುವ ಸೌಭಾಗ್ಯ ನಮ್ಮದಾಗಲಿ..
ಧನ್ಯವಾದಗಳು.

chinmay mathapati
chinmay mathapati
11 years ago

ಅಮ್ಮ… ತಾಯಿ…ಅವ್ವ…ಮಾತೆ ….!!! ಅವಳು(ರು) ಏನಿದ್ದರೂ ಒಂದು ವಾತ್ಸಲ್ಯಭರಿತ ಅನುಭವ (ಖನಜ) , ಅನುಭವಿಸಬೇಕಷ್ಟೆ. ಸರಿ, ನಿಮ್ಮ ಬರಹದಲ್ಲಿನ ಮಾತೃ ವಾತ್ಸಲ್ಯಕ್ಕೆ ನನ್ನ ನಮನ. ಆ ಮಾತೃ ವಾತ್ಸಲ್ಯವನ್ನು ಎಷ್ಟು ಚೆನ್ನಾಗಿ  ಬಣ್ಣಿಸಿದ್ದೀರಿ..!! ಚೆಂದದ ಲೇಖನ ಮೇಡಮ್..ನಿಮ್ಮಲ್ಲಿಯೂ ಒಬ್ಬ ಮಹಾ ತಾಯಿಯ ಗುಣಗಳು ಇದ್ದುದ್ದರಿಂದಲೇ ಇಂತಹ ಚೆಂದದ ನುಡಿಗಳನ್ನು  ನಮಗೆ ಉಣಬಡಿಸಿದ್ದೀರಿ ಎನ್ನುವುದು ನನ್ನ ಪ್ರಾಮಾಣಿಕ ಅಭಿಪ್ರಾಯ…..!! ಎಲ್ಲರಿಗೂ ಆ ಮಹಾ ಮಾತೆಯ ಪ್ರೀತಿ , ವಾತ್ಸಲ್ಯ, ಮಮಕಾರ ಸಿಗಲಿ ಎನ್ನುವ ಶುಭ ಹಾರೈಕೆಯೊಂದಿಗೆ….. ಧನ್ಯವಾದಳು………

ಜ್ಞಾನೇಂದ್ರ ಕುಮಾರ್ ಪ.ಬ

ಒಂದು ವಿಸ್ಮಯ ರೂಪಿ ತಾಯಿ. ಹಾಗೂ ಕಾಲಗಟ್ಟ ಹೇಗೆ ಬದಲಾದರೂ ಮೌಲ್ಯವೇನಾದರೂ ಉಳಿದಿದೆ ಎಂದರೆ ಬಹುಶಃ ಅದು ತಾಯಿ ಎಂಬ ಮಮತಾ ಮಯಿಗೆ ಮಾತ್ರ.  ತಾಯಿ ಗೆ ಹೋಲಿಸ ಬಹುದಾದ ನಿಸ್ವಾರ್ಥವಾದುದು ಬಹುಶಃ ಯಾವುದೂ ಇಲ್ಲ. ರಕ್ತಗತವಾಗಿ ಪರಂಪರಾಗತವಾಗಿ ಪುನರಾವರ್ತನೆ ಆಗುತ್ತಿರುವ ಯಾವುದಾದರೂ ಸಂಬಂದವೆಂದರೆ ತಾಯಿಮಾತ್ರ. ಎಷ್ಟೇ ಕೂಡಿ,ಗುಣಿಸಿ,.ಕಳೆದರೂ ಬರುವ ಮೊತ್ತ ತಾಯಿಗೆ ತಾಯಿ ಮಾತ್ರ. ಚೆಂದದ ಲೆಖನ. ಬರವಣಿಗೆಯ ಶೈಲಿ ಹಿಡಿಸಿತು. ಈ ಲೆಖನದ ಮುಖೆನ 'ಪಂಜು' ಗೆ ಜ್ಞಾನೇಂದ್ರ ಅಲಿಯಾಸ್ ಮಯಾಸನ ಮನಪೂರ್ವಕ ಅಭಿನಂದನೆಗಳು.

M.S.Krishna Murthy
M.S.Krishna Murthy
11 years ago

ತಾವು ಎಂದಿನಂತೆ ತುಂಬ ಮುತುವರ್ಜಿ ವಹಿಸಿ,ಶ್ರದ್ದೆಯಿಂದ ಸಿದ್ದಪಡಿಸಿದ ತುಂಬಾ ಭಾವುಕತೆಯ ಲೇಖನ. ಬಲ್ಲವರೆ ಬಲ್ಲರು ತಾಯ ಮಮತೆಯ, ಪ್ರೀತಿಯ,ವಾತ್ಸಲ್ಯವ. ಅಮ್ಮನ ಬಗ್ಗೆ ಎಷ್ಟು ಬರೆದರೂ ಎಷ್ಟು ಹೊಗಳಿದರೂ ಸಾಲದು. ತಾಯ ಋಣ ತೀರಸಲು ಏಳೇಳು ಜನ್ಮಗಳು ಎತ್ತಿ ಬಂದರೂ ಸಾಲದು. ತಾಯಿ ಇಲ್ಲದವರ ಗುಣ ಲಕ್ಷಣಗಳ ಬಗ್ಗೆ ಬರೆದಿದ್ದೀರಿ ಅದು ಮನಃಶಾಸ್ತ್ರಕ್ಕೆ ಸಂಬದಿಸಿದ್ದಾದ್ದರಿಂದ ಕೆಲವೊಂದು ಅಧ್ಯಯನದ ಅಗತ್ಯ ಇದೆ. Generalise ಆಗಿ ಹೀಗೆ ಇರುತ್ತಾರೆಂದು ಹೇಳುವುದು ಕಷ್ಟವಾದರೂ ತುಂಬಾ ಮಂದಿ ಹಾಗಿರಬಹುದು. ನನಗೊ ಈ ವಿಷಯದಲ್ಲಿ ಕುತೂಹಲ ಇದೆ. ಇನ್ನೂ ತಮ್ಮಿಂದ ಇಂತಹದೆ ಹಲವಾರು ವಿಷಯಗಳ ಬಗ್ಗೆ ಲೇಖನಗಳು ಬರಲಿ ಎಂದು ಆಶಿಸುತ್ತೇನೆ. ಧನ್ಯವಾದಗಳು ದಿವ್ಯ. ಶುಭವಾಗಲಿ ತಮಗೆ.

ನಿಮ್ಮ ಹರೀಶ್ ನಾಗರಾಜ್.
ನಿಮ್ಮ ಹರೀಶ್ ನಾಗರಾಜ್.
11 years ago

ಯಾವ ತಾಯಿ ಎಷ್ಟರ ಮಟ್ಟಿಗೆ ಅವಳ ಕರ್ತವ್ಯವನ್ನು ಮುಗಿಸಿ ಹೋಗುತ್ತಾಳೋ ಇಲ್ಲವೋ ಅನ್ನೋದು ಆ ತಾಯಿಯ ಪರಿಸ್ಥಿತಿ. ಅದರೆ ತಾಯಿಯೆಂದರೇನು ಅವಳ ಮೂಲ ಕರ್ತವ್ಯವೇನು ಎಂಬುದರ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದೀರ. ಇಂದಿನ ಯಾಂತ್ರಿಕರಣ ಜೀವನಕ್ಕೆ ಅತಿ ಮುಖ್ಯವಾದ ಲೇಖನ. ಶುಭವಾಗಲಿ.

ಚೇತನ್ ಕುಮಾರ್.ವಿ
ಚೇತನ್ ಕುಮಾರ್.ವಿ
11 years ago

ತುಂಬ ಚೆನ್ನಾಗಿದೆ…….

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
11 years ago

ಆತ್ಮೀಯ ಗುರು ಹಿರಿಯರೇ ಮತ್ತು ಸ್ನೇಹಿತರೇ ನಿಮ್ಮ ಮೆಚ್ಚುಗೆಗಳಿಗೆ ಹಾಗೂ ಹಿತ ನುಡಿಗಳಿಗೆ ನಾ ಮೂಕಳಾದೆ. ನಿಮ್ಮೆಲ್ಲರ ಪ್ರೀತಿ-ಪ್ರೊತ್ಸಾಹಕ್ಕೆ ನನ್ನ ಅನಂತ ವಂದನೆಗಳು. ಪಂಜು ಪತ್ರಿಕೆಯ ಸಂಪಾದಕರಿಗೂ ಮತ್ತು ತಂಡದವರಿಗೂ ನನ್ನ ಅನಂತ ವಂದನೆಗಳು:-) 

ಹಿಪ್ಪರಗಿ ಸಿದ್ದರಾಮ್, ಧಾರವಾಡ
ಹಿಪ್ಪರಗಿ ಸಿದ್ದರಾಮ್, ಧಾರವಾಡ
11 years ago

ತಾಯಿಯ ಮಡಿಲು….ಪ್ರಕಟಗೊಂಡ ನಂತರ ತಡವಾಗಿ ಓದಿ ಪ್ರತಿಕ್ರಿಯಿಸುತ್ತಿರುವುದಕ್ಕೆ ನನಗೇನು ಮುಜುಗರವಿಲ್ಲ. ಯಾಕಂದರೆ ಇಲ್ಲಿ ಲೇಖಕಿಯು ಆಯ್ಕೆ ಮಾಡಿಕೊಂಡಿರುವ ವಸ್ತು ವಿಷಯವು ಸಾರ್ವಕಾಲಿಕವಾದುದು ಮತ್ತು ಪ್ರತಿಯೊಬ್ಬರ ಜೀವನದಲ್ಲಿ ಅಮ್ಮನೆಂಬ ವ್ಯಕ್ತಿಯಿಂದಲೇ ಜೀವನ ಆರಂಭಗೊಂಡಿರುತ್ತದೆ. ಇಲ್ಲಿ ಪ್ರಸ್ತಾಪಿಸಿರುವ ಮತ್ತು ಚರ್ಚಿಸಿರುವ ಎಲ್ಲಾ ಅಂಶಗಳು ಚೆನ್ನಾಗಿ ಹೇಳಲ್ಪಟ್ಟಿವೆ. ಧನ್ಯವಾದಗಳು ದಿವ್ಯ ಅಂಜನಪ್ಪ ಅವರಿಗೆ….

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
11 years ago

🙂 ಧನ್ಯವಾದಗಳು ಸರ್

13
0
Would love your thoughts, please comment.x
()
x