ತಾಯಿಯ ಗರ್ಭವೆಂಬ ಪುಟ್ಟ ಪ್ರಪಂಚದಲ್ಲಿ: ಸಿಂಧು ಭಾರ್ಗವ್


ಒಂದು ಮಗುವಿನ ಜನನ ಯಾವ ತಾಯಿಯ ಗರ್ಭದಲ್ಲಿ ಆಗುತ್ತದೆ ಎಂಬುದು ಹೇಳಬರದು. ಹುಟ್ಟು ನಮ್ಮ ಕೈಯಲ್ಲಿ ಇರುವುದಿಲ್ಲ. ಜನಿಸಿದ ಮೇಲೆ ಹಡೆದ ಜನನಿಯ ಮುಖ ದರುಷನವಾಗುವುದು. ಅವಳು ನಮಗಾಗಿ ಎಷ್ಟೆಲ್ಲ ಕಷ್ಟ ಪಡುತ್ತಾಳೆ. ಅವಳ ತ್ಯಾಗ ಸಹನೆಗೆ ನಾವು ಎಂದಿಗೂ ಋಣಿಗಳಾಗಿರಬೇಕು. ಒಬ್ಬ ತಾಯಿ ತಾನು ಗರ್ಭವತಿ ಎಂದು ತಿಳಿದ ತತ್ಕ್ಷಣದಿಂದ ಮುಂದೆ ಜನಿಸುವ ಮಗುವಿನ ಬಗೆಗೆ ನೂರಾರು ಕನಸುಗಳನ್ನು ಕಟ್ಟಿಕೊಳ್ಳಲು ಶುರುಮಾಡುತ್ತಾಳೆ. ಜೊತೆಗೆ ತಂದೆಯಾಗುವವನೂ ಕೂಡ ಆ ಮಗುವಿನ ಬಗೆಗೆ ಸಾಕಷ್ಟು ಕನಸುಗಳನ್ನು ಹೆಣೆಯುತ್ತಾನೆ. ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಆ ತಾಯಿ ತನಗಾಗದೇ ಇದ್ದ ಆಸೆ ಅಭಿರುಚಿಗಳನ್ನು ತಮ್ಮ ಮಗುವಾದರೂ ಈಡೇರಿಸಲಿ ಎಂಬ ಆಶಾಭಾವನೆಯನ್ನು ಹೊಂದಿರುತ್ತಾಳೆ‌. ಪ್ರತೀ ತಿಂಗಳು ವೈದ್ಯರ ಬಳಿಗೆ ತೆರಳಿ ಮಗುವಿನ ಯೋಗಕ್ಷೇಮ ವಿಚಾರಿಸುತ್ತಾಳೆ‌. ಆ ಬ್ರೂಣವು ಗರ್ಭದಲ್ಲಿ ಮಿಸುಕಾಡಿದಾಗೆಲ್ಲ ಕಚಗುಳಿಯ ಅನುಭವವನ್ನು ಆನಂದಿಸುತ್ತಾಳೆ. ಸುಸ್ತು ಆಯಾಸ, ಆಹಾರ ಸೇವಿಸಿದಾಗೆಲ್ಲ ಬರುವ ವಾಕರಿಕೆ, ವಾಂತಿಯಾಗುವಿಕೆ, ಕೈಕಾಲಿನಲ್ಲಿ ಜೋಂಪು ಹಿಡಿಯುವಿಕೆ ,ಮಾತ್ರೆ ಸೇವಿಸುವಿಕೆ, ನಿದಿರೆ ಬರದೇ ರಾತ್ರಿ ಪೂರಾ ರೂಮಿನಲ್ಲಿ ನಡೆದಾಡುವುದು, ಆಲಸ್ಯ, ಸಾಕಷ್ಟು ಬಯಕೆಗಳು, ಬೇಸರ, ಮನಸ್ಸಿನ ಮೂಲೆಯಲ್ಲಿದ್ದ ಹಳೆಯ ದುಃಖ ಉಮ್ಮಳಿಸಿ ಬರುವುದು ಹೀಗೇ ನಾನಾ ಬಗೆಯ ದೈಹಿಕವಾಗಿ ಹಾಗೂ ಮಾನಸಿಕವಾಗಿ ,ಭಾವನಾತ್ಮಕವಾಗಿ, ಒದ್ದಾಡುತ್ತಾ ಇರುತ್ತಾಳೆ.ಏಳು ಮಾಸವಾದಾಗ ಆ ಬ್ರೂಣವು ಇಂಚಿಂಚೂ ಬೆಳೆಯಲು ಶುರುಮಾಡುತ್ತದೆ‌. ಹೊಟ್ಟೆಯು ಭಾರವಾಗುತ್ತದೆ. ಅದೆಲ್ಲವನ್ನೂ ಸಹಿಸಿಕೊಂಡು ತನ್ನ ಮಗುವು ಒಳ್ಳೆಯ ವಿಚಾರವಂತ, ಗುಣವಂತ, ಬುದ್ಧಿವಂತ, ನೋಡಲು ಸುಂದರವಾಗಿಯೂ ಇರಬೇಕೆಂದು ಬಯಸುತ್ತಾಳೆ.

ಬ್ರೂಣದ ಬೆಳವಣಿಗೆ ಏಳನೇ ಮಾಸದಿಂದ ಅಧಿಕವಾಗಿರುತ್ತದೆ‌ ತಾಯ ಗರ್ಭಚೀಲದಲ್ಲಿ ಭದ್ರವಾಗಿ ಕುಳಿತು ಹೊರಗಿನ ಆಗುಹೋಗುಗಳನ್ನು ಗಮನಿಸುತ್ತಾ ಇರುತ್ತದೆ. ನಿಮಗೆ ಗೊತ್ತಿದೆಯೋ ಇಲ್ಲವೋ ಬಯಕೆ ಎನ್ನುವ ಹೆಸರಿನಲ್ಲಿ ತಾಯಿ ಏನೇನನ್ನು ತಿನ್ನುತ್ತಾಳೆ, ನೋಡುತ್ತಾಳೆ, ಓದುತ್ತಾಳೆ. ಅಂದರೆ ಅವಳಿಗೆ ಇಷ್ಟವಾಗುವುದನ್ನೆಲ್ಲ ಬಯಕೆ ಎಂಬ ಹೆಸರಿನಲ್ಲಿ ಗರ್ಭಿಣಿಯಾಗಿದ್ದಾಗ ಪೂರೈಸಿಕೊಳ್ಳುತ್ತಾಳೆ. ಹಾಗೆಯೇ ಗರ್ಭದೊಳಗಿರುವ ಭ್ರೂಣವೂ ಅವುಗಳನ್ನೇ ಇಷ್ಟಪಡುತ್ತದೆ.

ಉದಾ: ತಾಯಿಗೆ ಕುರುಕಲು ತಿಂಡಿ, ತುಂಬಾ ಖಾರವೋ, ಹುಳಿಯಿರುವ ತಿಂಡಿ ಪದಾರ್ಥಗಳು ತಿನ್ನಲು ಇಷ್ಟವಾದರೆ ಹುಟ್ಟುವ ಮಗುವೂ ಅದನ್ನೇ ತಿನ್ನಲು ಇಚ್ಛೆಪಡುತ್ತದೆ. ತಾಯಿಗೆ ಭಯಾನಕ ಇಲ್ಲ ಅಶ್ಲೀಲ ಕಥೆಯುಳ್ಳ ಸಿನೇಮಾ, ಧಾರಾವಾಹಿ ಇಲ್ಲ ಕಥೆ- ಕಾದಂಬರಿಗಳನ್ನು ಓದುವ ಬಯಕೆ ಇದ್ದರೆ ಭ್ರೂಣವು ಕೂಡ ಅದನ್ನೇ ಇಚ್ಛಿಸುತ್ತದೆ. ಅಲ್ಲದೇ ಅದರ ಮನಸ್ಥಿತಿ ಕೂಡ ಕೆಟ್ಟದಾಗಿ ಬೆಳವಣಿಗೆಯಾಗುತ್ತದೆ. ಮುಂದೆ ತನ್ನ ಜೀವನದಲ್ಲಿ ಅಪರಾಧಿ ಕೃತ್ಯಗಳನ್ನು ಮಾಡಲು ಮನಸ್ಸು ತೋರಿಸಲೂ ಬಹುದು. ವೈದ್ಯಕೀಯ ಮೂಲಗಳ ಪ್ರಕಾರ ೮೦% ಶೇಕಡಾದಷ್ಟು ಭಾಗ ಹುಟ್ಟುವ ಮಗುವಿನ ಮನಸ್ಥಿತಿ ತಾಯಿಯ ಗರ್ಭದಲ್ಲಿರುವಾಗಲೇ ಬೆಳವಣಿಗೆಯಾಗಿರುತ್ತದೆ. ಉಳಿದದ್ದು ಸುತ್ತಲಿನ ಪರಿಸರದಿಂದ ಬೆಳೆಯುತ್ತಾರೆ ಎಂದು.

ಹಾಗಾದರೆ ಗರ್ಭಿಣಿ ಮಹಿಳೆ ತನ್ನ ಗರ್ಭಾವಸ್ಥೆಯಲ್ಲಿ ಏನು ಮಾಡಬೇಕು?

ಮಹಾಭಾರತದಲ್ಲಿ ಉಲ್ಲೇಖಿಸಿದಂತೆ ಭಗವಾನ್ ಶ್ರೀಕೃಷ್ಣನು ಗರ್ಭಿಣಿಯಾದ ತನ್ನ ಸಹೋದರಿ ಸುಭದ್ರೆಗೆ ದಿನವೂ ಕಥೆಯನ್ನು ಹೇಳುತ್ತಿದ್ದನು. ರಾಜನೀತಿ, ಯುದ್ಧದ ಬಗೆಗೆ ಮಾಹಿತಿ, ಚಕ್ರವ್ಯೂಹವನ್ನು ಹೇಗೆ ಬೇಧಿಸಬೇಕು ಎಂದು. ಒಮ್ಮೆ ಸುಭದ್ರೆಯು ಕಥೆಯನ್ನು ಕೇಳುತ್ತಲೇ ನಿದ್ದೆಗೆ ಜಾರಿದ್ದಳು. ಸ್ವಲ್ಪ ಆಲಸ್ಯವೂ ಆಗಿತ್ತು. ಆದರೆ ಗರ್ಭದಲ್ಲಿದ್ದ ಶಿಶುವು ಹೂಂ..ಹೂಂ.. ಗುಟ್ಟುತ್ತಿತ್ತು. ಅವಳನ್ನು ಗಮನಿಸಿದ ಕೃಷ್ಣನು ಕಥೆಯನ್ನು ಅರ್ಧಕ್ಕೆ ನಿಲ್ಲಿಸಿ ಅವಳಿಗೆ ಮಲಗಲು ಅನುವು ಮಾಡಿದನು. ಅಲ್ಲದೇ ಗರ್ಭದಲ್ಲಿದ್ದ ಶಿಶುವಿಗೆ ಎಲ್ಲವೂ ಕೇಳಿಸಿದ್ದು ಅವನ ಅರಿವಿಗೆ ಬಂದಿತು. ಇದರ ಪರಿಣಾಮವಾಗಿ ಕೌರವರು ಕಟ್ಟಿದ ಚಕ್ರವ್ಯೂಹವನ್ನು ಹೇಗೆ ಭೇದಿಸಿ ಒಳನುಗ್ಗುವುದು ಎಂದು ಅಭಿಮನ್ಯು( ಸುಭದ್ರೆಯ ಮಗ) ವಿಗೆ ತಿಳಿದಿತ್ತೇ ಹೊರತು ಹೊರಗೆ ಬರುವ ಮಾರ್ಗ ತಿಳಿಯಲಿಲ್ಲ. ತತ್ಪರಿಣಾಮ ಯುದ್ಧ ಭೂಮಿಯಲ್ಲಿ ವೀರಮರಣವನ್ನಪ್ಪಿದನು.

ಇದರರ್ಥ ಇಷ್ಟೇ. ಗರ್ಭದಲ್ಲಿ ಇರುವ ಶಿಶುವಿಗೆ ಹೊರಗಿನ ಶಬ್ದ ಸದ್ದು ಗದ್ದಲ ಕೇಳಿಸುತ್ತದೆ. ಅಲ್ಲದೇ ತಾಯಿ ಅಡುಗೆಮನೆಯಲ್ಲಿ ಮಿಕ್ಸಿ ತಿರುಗಿಸಿದಾಗ ಅದರ ಕರ್ಕಶ ದನಿಯೊ ಇಲ್ಲ ಪ್ರಯಾಣಿಸುವಾಗ ಕೇಳಿರುವ ಗಟ್ಟಿಯಾದ ಶಬ್ಧವೊ ಮಗುವಿಗೆ ಭಯವನ್ನು ಉಂಟುಮಾಡುತ್ತದೆ. ಗರ್ಭಿಣಿಯು ಮಗುವಿಗೆ ಹಾಡು ಕೇಳಿಸಿದಾಗ ಅದು ಹೊಟ್ಟೆಯಲ್ಲಿ ಚಲಿಸುವುದ ಗಮನಿಸಿ ಪುಳಕಗೊಳ್ಳುವುದು ನೀವು ಗಮನಿಸಬಹುದು. ಅವಳು ಮಾತನಾಡಿದಾಗಲೂ ಅದು ಒದೆಯುವುದು ನೀವು ನೋಡಿರಬಹುದು.

ಹಾಗಾದರೆ ಗರ್ಭಾವಸ್ಥೆಯಲ್ಲಿ ತಾಯಿ ಏನೇನು ಮಾಡಬೇಕು?

> ಉತ್ತಮವಾದ ಮಾಹಿತಿಯಿರುವ ಅಂದರೆ ಆಧ್ಯಾತ್ಮಿಕ, ವೈಚಾರಿಕ ಲೇಖನ ಕಥಾಪುಸ್ತಕಗಳನ್ನು ಓದಬೇಕು.
> ಮೆಲುದನಿಯ ಸಂಗೀತ ಕೇಳಬೇಕು.
> ಪ್ರತೀದಿನ ವಾಕಿಂಗ್ ಮಾಡಬೇಕು. ಸುಸ್ತಾಗುವಾಗ ಸ್ವಲ್ಪ ಕುಳಿತು ವಿಶ್ರಾಂತಿ ಪಡೆಯಬಹುದು.
> ಸುಂದರ ಪ್ರಕೃತಿಯಲ್ಲಿ ಕಾಲ ಕಳೆಯಬೇಕು.
> ಆಲಸ್ಯತನದಿಂದ ದೂರವಿರಬೇಕು. ಆಲಸ್ಯವಿದ್ದರೂ ಅದನ್ನು ಬದಿಗೊತ್ತಿ ಸಮಯಕ್ಕೆ ಸರಿಯಾಗಿ ತಿಂಡಿ ,ಊಟ, ನಿದ್ದೆ , ಸ್ನಾನ ,ಸಣ್ಣ ಪುಟ್ಟ ಕೆಲಸ ಮಾಡುವುದು ಹೀಗೆ ಶಿಸ್ತಿನ ಜೀವನ ನಡೆಸಬೇಕು.
> ಆಹಾರವಾಗಿ ಒಣಹಣ್ಣುಗಳು, ಹಣ್ಣುಹಂಪಲುಗಳು, ಹಾಲು, ಮೊಟ್ಟೆ, ಬೇಳೆಕಾಳುಗಳು, ಸೊಪ್ಪು ತರಕಾರಿಗಳನ್ನು ಸೇವಿಸಬೇಕು. ಅತಿಯಾದ ಹುಳಿ, ಖಾರ, ಸಿಹಿ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕು.
> ದ್ರವಪದಾರ್ಥ ಅಂದರೆ ಎತೇಷ್ಛವಾಗಿ ಸರಿಸುಮಾರು ಮೂರು-ಮೂರುವರೆ ಲೀಟರ್ ನೀರು ಕುಡಿಯಬೇಕು . ‌
> ವಿಶ್ರಾಂತಿ ಅಗತ್ಯ. ಚೆನ್ನಾಗಿ ನಿದ್ದೆ ಮಾಡಬೇಕು. ಬೇಡದ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ತನ್ನ ಮಗುವಿನ ಬಗೆಗೆ ಕಾಳಜಿ ವಹಿಸಬೇಕು.
> ಅಗತ್ಯವಾಗಿ ಬಿಗಿ ಉಡುಪುಗಳ ಧರಿಸಬಾರದು.

ಹೀಗೆ ಮಾಡಿದರೆ ಮುಂದೆ ಜನಿಸುವ ಮಗುವು ಸದೃಢವಾಗಿಯೂ, ಸುಸಂಸ್ಕೃತ ವ್ಯಕ್ತಿಯಾಗಿ ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ. ತಾಯಿ ಮತ್ತು ತಾಯಗರ್ಭವೇ ಮೊದಲ ಪಾಠಶಾಲೆ. ಹಾಗಾಗಿ ಗರ್ಭಧರಿಸಿದ ದಿನದಿಂದ ಹೆರಿಗೆಯಾಗುವ ತನಕ ಗರ್ಭಿಣಿಗೆ ಉತ್ತಮ ವಾತಾವರಣ ಕಲ್ಪಿಸಿಕೊಡುವುದು ಮನೆಯವರ ಕರ್ತವ್ಯವಾಗಿದೆ.

ಸಿಂಧು ಭಾರ್ಗವ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x