ರಾಜೇಶನದು ಸುಂದರ ದಾಂಪತ್ಯ.ಮನ ಮೆಚಿದ್ದ ಮಡದಿ ಸ್ವಾತಿ. ಒಳ್ಳೆಯ ಉದ್ಯೋಗದಿಂದಾಗಿ ಕೈತುಂಬಾ ಸಂಬಳ, ಕಾರು ಬಂಗಲೆ ಎಲ್ಲ ಇದ್ದ ಶ್ರೀಮಂತ ಜೀವನ. ಕೊರತೆಯೊಂದೆ ಮದುವೆಯಾಗಿ ಹತ್ತು ವರುಷ ಕಳೆದರೂ ಅವರ ಹೆಸರು ಹೇಳೋ ವಂಶದ ಕುಡಿ ಮೂಡದಿರುವದು.
ಸ್ವಾತಿಗಾದರೋ ಮಕ್ಕಳುಎಂದರೆ ಪಂಚಪ್ರಾಣ. ದಿನಾಲೂ ಸಾಯಂಕಾಲ ತಮ್ಮ ಮನೆಯಿದಿರು ಇರುವ ಉದ್ಯಾನದಲ್ಲಿ ಆಡುವ ಮಕ್ಕಳನ್ನು ಕಿಟಕಿಯಿಂದ ಗಂಟೆಗಟ್ಟಲೇ ನೋಡುತ್ತಾ ಮೈಮರೆಯುತ್ತಿದ್ದಳು. ಆದರೂ ರಾಜೇಶನ ಮನಸ್ಸಿಗೆ ಬೇಸರವಾಗಬಾರದೆಂದು ತನ್ನ ನೋವನ್ನು ಅಡಗಿಸಿ ಸತ್ತ ನಗುವಿಗೆ ಜೀವತುಂಬೊ ಪ್ರಯತ್ನ ಮಾಡುತ್ತಿದ್ದಳು. ಮಡದಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ರಾಜೇಶನಿಗೆ ಪತ್ನಿಯ ನಗುವಿನ ಹಿಂದಿರುವ ನೋವನ್ನು ಅರಿಯುವದು ಕಷ್ಟವಾಗಿರಲಿಲ್ಲ. ಹೀಗಿರುವಾಗ ಒಂದು ದಿನ ರಾಜೇಶ ಒತ್ತಾಯ ಮಾಡಿ ಹೆಂಡತಿಯನ್ನ ವೈದ್ಯರ ಬಳಿ ಕರೆದೊಯ್ಯುತ್ತಾನೆ. ಇಬ್ಬರನ್ನು ಪರೀಕ್ಷಿಸಿದ ವೈದ್ಯರ ರಿಪೋರ್ಟ್ ಹೇಳಿದ್ದು ತೊಂದರೆ ಇರೋದು ರಾಜೆಶನಲ್ಲಿ ಎಂದು. ಎಷ್ಟೇ ಚಿಕಿತ್ಸೆ ಮಾಡಿಸಿದರೂ ಯಾವ ಪ್ರಯೋಜನವೂ ಆಗುವದಿಲ್ಲ. ರಾಜೇಶನಿಗೆ ಮನಸ್ಸಿನಲ್ಲಿ ಅಪರಾಧಿ ಪ್ರಜ್ಞೆ ಕಾಡುತ್ತದೆ.
ತನ್ನ ಸರ್ವಸ್ವವನ್ನು ದಾರೆಯೆರೆದು ತನ್ನ ಜೀವನವನ್ನು ಸ್ವರ್ಗ ಮಾಡಿದ ಹೆಂಡತಿಯ ಒಂದೇ ಒಂದು ಬಯಕೆಯನ್ನ ಈಡೇರಿಸುವಲ್ಲಿ ನಾನು ಸೋತುಹೋದೆ ಎಂದು ಅವನ ಮೇಲೆ ಅವನಿಗೆ ಬೇಸರ ಮೂಡುತ್ತದೆ. ಹೇಗಾದರೂ ತನ್ನ ಹೆಂಡತಿಯ ಆಸೆಯನ್ನ ಪೂರೈಸಲೇ ಬೇಕೆಂದು ನಿರ್ಧರಿಸಿದ. ಆಗ ಅವನಿಗೆ ನೆನಪಾದದ್ದು ತನ್ನ ಜೀವದ ಗೆಳೆಯ ಅವಿವಾಹಿತ ಶ್ಯಾಮ್. ಅವನ ಬಳಿ ಹೋಗಿ ತನ್ನ ಮನಸ್ಸಿನ ನೋವನ್ನೆಲ್ಲ ಎಳೆಎಳೆಯಾಗಿ ಬಿಚ್ಚಿಟ್ಟು ನನ್ನ ಹೆಂಡತಿಯ ಮೊಗದಲ್ಲಿ ನಗು ಚಿಮ್ಮುವಂತೆ ಮಾಡುವ ಕೆಲಸ ನಿನ್ನದು ಎಂದು ವಿನಂತಿಸಿದ. ಮೊದಲು ಒಪ್ಪದ ಶ್ಯಾಮ್ ಕೊನೆಯಲ್ಲಿ ಸ್ನೇಹಕ್ಕೆ ಮಣಿದು ಒಪ್ಪಿಕೊಂಡ. ಗೆಳೆಯನನ್ನೇನೋ ಒಪ್ಪಿಸಿಯಾಯ್ತು ಆದರೆ ಹೆಂಡತಿಯನ್ನು ಒಪ್ಪಿಸೋದು ಹೇಗೆ ಎಂದು ಚಿಂತಿತನಾದ. ಒಂದು ದಿನ ಗಟ್ಟಿ ಮನಸ್ಸಿಂದ ಉದ್ಯೋಗಕ್ಕೆ ರಜಾ ಹಾಕಿ ಹೆಂಡತಿಗೆ ತನ್ನ ಯೋಚನೆಯನ್ನ ಅರುಹಿದ. ವಿಷಯ ಕೇಳಿ ಹೆಂಡತಿ ಕೆಂಡಾಮಂಡಲವಾದಳು.
ಅವಳನ್ನ ರಮಿಸುತ್ತಾ ಇದಕ್ಕೆ ನೀನು ಒಪ್ಪಲೇ ಬೇಕೆಂದಾಗ ಹೆಂಡತಿ ಕೋಪದಲ್ಲಿ ಅವನಿಂದಲೂ ನನಗೆ ಮಕ್ಕಳಾಗದಿದ್ದರೆ ಇನ್ನೆಷ್ಟು ಜನರಿಗೆ ನನ್ನನ್ನು ಒಡ್ಡುವಿರಿ ಎಂದು ಮನಚುಚ್ಚುವಂತೆ ಪ್ರಶ್ನಿಸುತ್ತಾಳೆ.ಕೋಪ ನೋವು, ಅಪಮಾನದಿಂದ ಕಣ್ಣೀರಿಡುತ್ತಿರುವ ಹೆಂಡತಿಯನ್ನ ಒಪ್ಪಿಸುವದು ಸುಲುಭದ ಕೆಲಸವಾಗಿರಲಿಲ್ಲ.ಅವಳಿಗೆ ಮಹಾಭಾರತದ ಕುಂತಿಯ ಕಥೆ, ಪಾಂಚಾಲಿಯ ಕಥೆ ಹೀಗೆ ಹಲವು ಹತ್ತು ಉದಾಹರಣೆ ಕೊಟ್ಟು ಅವಳ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಾನೆ. ನೀನು ಇದಕ್ಕೆ ಒಪ್ಪದಿದ್ದರೆ ನಿನ್ನ ತಾಯ್ತನದ ಸೌಭಾಗ್ಯವನ್ನ ಕಿತ್ತುಕೊಂಡೆ ಎಂಬ ಕೊರಗಿನಲ್ಲೇ ನಾನು ಜೀವನ ಸವೆಸಬೇಕಾಗುತ್ತದೆ ಎಂದು ಪರಿಪರಿಯಾಗಿ ತಿಳಿ ಹೇಳಿದ.
ಈಗ ಅವನ ತಲೆಯಲ್ಲಿ ಇವರಿಬ್ಬರನ್ನು ಒಂದುಗೂಡಿಸುವ ಪರಿ ಹೇಗೆಂಬ ಯೋಚನೆ ಸುತ್ತತೊಡಗಿತು. ಎಷ್ಟೇ ಮನ ಒಲಿಸಿದರೂ ನನ್ನ ಉಪಸ್ಥಿತಿಯಲ್ಲಿ ಕಂಡಿತಾ ನನ್ನ ಹೆಂಡತಿ ಒಪ್ಪುವದಿಲ್ಲ,ಶ್ಯಾಮನಿಗೂ ಕಷ್ಟ ಅದಕ್ಕಾಗಿ ಇವರಿಬ್ಬರನ್ನೇ ಬಿಟ್ಟು ಎಲ್ಲಾದರೂ ಹೋಗಬೇಕು ಎಂದು ನಿರ್ಧರಿಸಿದ. ಅದಕ್ಕೆ ದೇವರೇ ದಾರಿ ತೋರಿದಂತೆ ಅವನಿಗೆ ಕಚೇರಿಯಿಂದ ಬೇರೆ ಊರಿಗೆ ವರ್ಗಾವಣೆಯಾಗಿತ್ತು. ಹೆಂಡತಿಗೆ ತನ್ನ ವರ್ಗಾವಣೆ ವಿಚಾರ ತಿಳಿಸಿ ತಾನು ಮೊದಲು ಅಲ್ಲಿ ಹೋಗಿ ಎಲ್ಲ ವ್ಯವಸ್ಥೆಮಾಡಿ ನಿನ್ನನ್ನು ಕರೆದೊಯ್ಯುತ್ತೇನೆ ಎಂದು ಹೇಳಿ ಸ್ವಾತಿಯನ್ನೊಬ್ಬಳನ್ನೇ ಮನೆಯಲ್ಲಿ ಬಿಟ್ಟು ತನ್ನ ಗೆಳೆಯ ಶ್ಯಾಮನಿಗೆ ಬಂದು ಸ್ವಾತಿ ಜೊತೆ ಇರುವಂತೆ ಹೇಳಿ ಹೊರಡುತ್ತಾನೆ. ಹೊರಟುನಿಂತ ರಾಜೇಶನಿಗೆ ಹೃದಯವೇಕೋ ಭಾರ ಅನಿಸುತ್ತಿತ್ತು.ಕಣ್ಣಿನ ಆಳದಲ್ಲಿ ತಿಳು ನೀರಿನ ಪೊರೆಯಿತ್ತು. ಆದರೂ ಏನನ್ನು ತೋರಗೊಡದೆ ಇದು ತನ್ನದೇ ನಿರ್ಧಾರ,ಸ್ವಾತಿ ನಿರಪರಾಧಿ ಎಂದು ಗಟ್ಟಿ ಮನಸ್ಸು ಮಾಡಿ ಹೆಂಡತಿಯ ಹಣೆಗೆ ಚುಂಬಿಸಿ ಹೊರಟ.ಸ್ವಾತಿಗೋ ಹೃದಯವೇ ಕಿತ್ತು ಬಾಯಿಗೆ ಬಂದ ಅನುಭವ. ಕಣ್ಣಲ್ಲಿ ಧಾರಾಕಾರ ನೀರು ಸುರಿಯುತ್ತಿತ್ತು. ರಾಜೇಶ ಹೊಸ ಪರಿಸರದಲ್ಲಿ,ಕೆಲಸದಲ್ಲಿ ತನ್ನನ್ನೆ ತಾನು ಮರೆತ. ಅಲ್ಲಿಯ ಅತೀ ಕೆಲಸದಿಂದ ಅವನಿಗೆ ಬೇಗನೆ ಹಿಂದಿರುಗಲು ಆಗಲಿಲ್ಲ.
ಶ್ಯಾಮ್ ಗೆಳೆಯನಿಗೆ ಮಾತುಕೊಟ್ಟಂತೆ ಹದಿನೈದು ದಿನ ಸ್ವಾತಿ ಜೊತೆ ಇದ್ದು ಹೊರಟು ಹೋಗುತ್ತಾನೆ ಸ್ವಾತಿ ತನ್ನ ತಾಯಿ ಮನೆಗೆ ಹೋಗಿ ಅವರ ಜೊತೆ ಇರುತ್ತಾಳೆ. ಹೀಗೆ ಒಂದೂವರೆ ತಿಂಗಳು ಕಳೆದಾಗ ಸ್ವಾತಿ ಗರ್ಭಿಣಿ ಎಂದು ವೈದ್ಯರ ಪರೀಕ್ಷೆಯಿಂದ ತಿಳಿದುಬರುತ್ತದೆ. ವಿಷಯವನ್ನ ರಾಜೇಶ್ ಗೆ ಫೋನ್ ಮೂಲಕ ತಿಳಿಸುತ್ತಾಳೆ. ಸಂತೋಷಗೊಂಡ ರಾಜೇಶ್ ಹೆಂಡತಿ ನೋಡಲು ಬರುತ್ತಾನೆ. ಜೊತೆಗೆ ಶ್ಯಾಮ್ ಗೂ ವಿಷಯ ತಿಳಿಸುತ್ತಾನೆ. ಗರ್ಭಿಣಿ ಯರ ಸಹಜ ಸುಸ್ತು ಮತ್ತು ಮನದ ಮೂಲೆಯಲ್ಲೆಲ್ಲೋ ತಪ್ಪಿತಸ್ಥ ಭಾವನೆ ಎಲ್ಲವೂ ಸೇರಿ ಸ್ವಾತಿ ತುಂಬಾನೇ ನಿಶ್ಯಕ್ತಳಾಗಿದ್ದಳು. ರಾಜೇಶ್ ಎರಡು ದಿನ ಅವಳ ಜೊತೆಗೆ ಇದ್ದು ವಾಪಸ್ ಊರಿಗೆ ಹೊರಡುತ್ತಾನೆ.ಹಾಗೂ ಹೀಗೂ ನವ ಮಾಸಗಳು ತುಂಬಿ ನಿರೀಕ್ಷೆಯ ಕ್ಷಣಗಳು ಹತ್ತಿರ ಬಂದೇ ಬಿಡುತ್ತವೆ. ಶ್ಯಾಮ್ ಗೆ ಯಾಕೋ ಮನದಲ್ಲಿ ಗೊಂದಲ.
ತಾನು ಇನ್ನು ಯಾವದೇ ಕಾರಣಕ್ಕೂ ರಾಜೇಶ್ ಮತ್ತು ಸ್ವಾತಿ ಬಾಳಲ್ಲಿ ಅಡ್ಡ ಬರಬಾರದು ಅವರು ಸಂತೋಷವಾಗಿರಬೇಕು ಎಂದು ತನ್ನ ಕೆಲಸಕ್ಕೆ ರಾಜಿನಾಮೆ ಕೊಟ್ಟು ವಿದೇಶಕ್ಕೆ ಹೊರಡಲು ಸಿದ್ಧನಾಗುತ್ತಾನೆ. ಹೋಗುವಾಗ ಒಮ್ಮೆ ರಾಜೇಶ ಗೆ ಕೊನೆವಿದಾಯ ಹೇಳಿ ಹೋಗೋಣ ಅಂತ ರಾಜೇಶನನ್ನು ಕಾಣಲು ಬರುತ್ತಾನೆ. ಇಬ್ಬರೂ ಮಾತನಾಡುತ್ತ ಹೋಟೆಲೊಂದರಲ್ಲಿ ಊಟ ಮುಗಿಸಿ ಇನ್ನೇನು ಹೊರಡಬೇಕೆನ್ನುವಾಗ ರಾಜೇಶನಿಗೆ ಸ್ವಾತಿಯ ತಂದೆಯಿಂದ ಫೋನ್ ಕರೆ ಬರುತ್ತದೆ. ಅವಳ ತಂದೆ ಸ್ವಾತಿಗೆ ಹೆರಿಗೆ ನೋವು ಬಂದಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವಿಷಯ ತಿಳಿಸುತ್ತಾರೆ. ಆಗ ಶ್ಯಾಮ್ ತನ್ನ ಕಾರ್ ಅಲ್ಲೇ ರಾಜೇಶ್ ನನ್ನು ಬಸ್ ನಿಲ್ದಾಣಕ್ಕೆ ಬಿಡುತ್ತೇನೆ ಎಂದು ಹೇಳಿ ಇಬ್ಬರೂ ಕಾರಲ್ಲಿ ಹೊರಡುತ್ತಾರೆ.ಆದರೆ ಇವರ ಸ್ನೇಹ ನೋಡಿ ಆ ದೇವರಿಗೂ ಅಸೂಯೆ ಆಯ್ತೇನೋ ಎಂಬಂತೆ ಎದುರಲ್ಲಿಯ ವಾಹನವೊಂದು ಇವರ ಕಾರಿಗೆ ಗುದ್ದಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತರಾಗುತ್ತಾರೆ.
ಇತ್ತ ಸ್ವಾತಿಗೆ ಹೆರಿಗೆನೋವು ಜಾಸ್ತಿ ಆಗುತ್ತದೆ. ವೈದ್ಯರು ಸ್ವಾತಿ ತಂದೆಯ ಬಳಿ ಬಂದು ಸ್ವಾತಿಯ ಸ್ಥಿತಿ ತುಂಬಾ ಗಂಭೀರವಾಗಿದ್ದು ಹೊಟ್ಟೆಯಲ್ಲಿ ಅವಳಿ ಮಕ್ಕಳಿದ್ದ ಕಾರಣ ಒಂದೋ ತಾಯಿ ಅಥವಾ ಮಕ್ಕಳು ಬದುಕುತ್ತಾರೆ ಎಂದು ಒಪ್ಪಿಗೆ ಪತ್ರ ಬರೆಸಿಕೊಳ್ಳುತ್ತಾರೆ. ಅಂತು ಕಷ್ಟದಲ್ಲಿ ಸ್ವಾತಿ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ.ಆದರೆ ಇಬ್ಬರೂ ಮಕ್ಕಳಲ್ಲಿ ಯಾವದೇ ಚಲನೆ ಇಲ್ಲದೆ ಇರುವದನ್ನು ಕಂಡು ತತ್ತರಿಸಿದ ಸ್ವಾತಿ ತಂದೆಗೆ ಇನ್ನೊಂದು ಶಾಕ್ ಕಾದಿರುತ್ತದೆ. ಅವರ ಮೊಬೈಲ್ ಗೆ ಪೋಲಿಸ್ ಕರೆ ಮಾಡಿ ರಾಜೇಶ್ ಮತ್ತು ಶ್ಯಾಮ್ ಅಪಘಾತ ದಲ್ಲಿ ತೀರಿ ಹೋದ ವಿಷಯ ತಿಳಿಸುತ್ತಾರೆ.ಅವರು ತಡೆಯಲಾರದ ನೋವಿನಿಂದ ಕುಸಿಯುತ್ತಾರೆ. ಅದೇ ಸಮಯಕ್ಕೆ ಸತ್ತಂತಿದ್ದ ಎರಡು ಮಕ್ಕಳೂ ಒಮ್ಮೆಲೇ ಕಾಲನ್ನು ಅಲ್ಲಾಡಿಸುತ್ತ ಕೂಗುತ್ತವೆ.
ಮಾರನೆ ದಿವಸ ವಿಷಯ ತಿಳಿದ ಸ್ವಾತಿಯ ಅಳು ಮುಗಿಲು ಮುಟ್ಟುತ್ತದೆ ಆದರೆ ಎಷ್ಟು ಅತ್ತರೂ ಹೋದವರು ತಿರುಗಿ ಬರಲಾರರು ಅಲ್ಲವೇ? ಸ್ವಾತಿ ನಿಧಾನಕ್ಕೆ ತನ್ನ ಮಕ್ಕಳ ಆಟ ಲೀಲೆ ಗಳನ್ನು ನೋಡಿ ದುಃಖ ಕಡಿಮೆ ಮಾಡಿಕೊಳ್ಳುತ್ತಾಳೆ. ಜೀವದ ಗೆಳೆಯರಾದ ರಾಜೇಶ್ ಶ್ಯಾಮ್ ಸಾವಿನಲ್ಲೂ ಒಂದಾಗಿ ತನ್ನ ಮಕ್ಕಳಲ್ಲೇ ಸೇರಿದ್ದಾರೆ ಎಂದು ಸ್ವಾತಿ ಭಾವಿಸುತ್ತಾಳೆ.
*****
ಏನೆಂದು ಪ್ರತಿಕ್ರಿಯೆ ತೋರಿಸುವುದು ಎಂತಲೇ ಗೊತ್ತಾಗುತ್ತಿಲ್ಲ!