“ನೋಡಮ್ಮಾ ಆ ಕರು ಅಷ್ಟು ಹೊತ್ತಿಂದ ಅಲ್ಲಿ ಅಂಬೇ ಅಂತ ಕರೆಯುತ್ತಾ ಇತ್ತು. ನಾನು ಗಿಡಕ್ಕೆ ನೀರು ಹಾಕಲಿಕ್ಕೆ ಹೊರಗೆ ಹೋಗಿದ್ದೆನಲ್ಲಾ, ಬಡಬಡಾಂತ ನಮ್ಮ ಗೇಟಿನ ಹತ್ತಿರ ಬಂತು, “ಏನೂ ಇಲ್ಲ ಮುದ್ದೂ” ಅಂದೆ, ತನ್ನಷ್ಟಕ್ಕೆ ಹೋಯ್ತು. ಎಷ್ಟು ಅರ್ಥ ಆಗುತ್ತೆ ನೋಡಮ್ಮಾ. ಅದೇ ಆ ಕೆಂಪು ಕಣ್ಣಿನ ದನ ಬಂದಿದ್ದರೆ ಮೊಂಡಾಟ ಮಾಡಿಕೊಂಡು ಇನ್ನೂ ಇಲ್ಲೇ ನಿಂತಿರುತ್ತಿತ್ತು ಅಲ್ವಾ?” ಅಂದಳು ಮಗಳು. ಹೌದಲ್ಲವೇ ಅನ್ನಿಸಿತು.
ನಮ್ಮ ಏರಿಯಾದಲ್ಲಿ ಒಂದಷ್ಟು ದನ ಕಟ್ಟಿಕೊಂಡು ಹಾಲು ಪೂರೈಸುವವನೊಬ್ಬನಿದ್ದಾನೆ. ಪ್ರತಿದಿನ ಬೆಳಿಗ್ಗೆ ದನಗಳನ್ನ ರಸ್ತೆಬದಿಯ ಹುಲ್ಲು ಮೇಯಲಿಕ್ಕೆ ಅಂತ ಬಿಡುತ್ತಾನೆ. ಮೂರು ದನಗಳು ನಮ್ಮ ರಸ್ತೆಯನ್ನ ವರ್ತನೆ ಮಾಡಿಕೊಂಡದ್ದಾ, ನಾವು ಅವುಗಳನ್ನ ವರ್ತನೆ ಮಾಡಿಕೊಂಡದ್ದಾ ಅಂತೂ ಪ್ರತಿ ಮನೆಯ ಮುಂದೆ ನಿಂತು ಬಿಡದೆ ಕರೆದು ಮಿಕ್ಕುಳಿದದ್ದನ್ನೋ, ಕೆಲವೊಮ್ಮೆ ಬೆಳಿಗ್ಗೆ ಅಷ್ಟು ಹೊತ್ತಿಗೆ ಬಿಸಿಬಿಸಿ ತಯಾರಾಗುತ್ತಿರುವ ದೋಸೆ ಚಪಾತಿಗಳನ್ನೋ ಇಕ್ಕಿಸಿಕೊಂಡು ಮುನ್ನಡೆಯುತ್ತವೆ. ಆ ಮೂರು ದನಗಳದ್ದೂ ಢಾಳಾಗಿ ಬೇರೆಬೇರೆ ಅನಿಸುವಂಥ ವರ್ತನೆಗಳು ಅಂತ ನನಗೂ ಅನ್ನಿಸಿದ್ದುಂಟು. ಒಂದು ದಢೂತಿ ಕಪ್ಪು ದನ, ಉದ್ದ ಕೋಡು, ಕೆಂಪು ಕಣ್ಣು, ದೇಹಭಾರಕ್ಕೋ ಅಥವಾ ಅದರ ಸ್ವಭಾವಕ್ಕೆ ತಕ್ಕಂತೆ ಅಂತಲೋ ಧೀರಗಂಭೀರ ನಡಕೊಂಡು ಬಂದು ಗೇಟಿನ ಮುಂದೆ ನಿಲ್ಲುತ್ತದೆ. ಸ್ವಲ್ಪ ಹೊತ್ತಿನವರೆಗೆ ಯಾರೂ ಹೊರಬರದಿದ್ದರೆ ಗಟ್ಟಿ ಕರ್ಕಶವೇ ಅನ್ನಿಸುವ ಧಾಟಿಯಲ್ಲಿ ಒಂದೈದಾರು ಕೂಗು ಹಾಕಿ, ಆಗಲೂ ಯಾರೂ ಕಾಣಿಸಿಕೊಳ್ಳದಿದ್ದರೆ ಮುನ್ನಡೆಯುತ್ತದೆ.
ಬಾಗಿಲು ತೆರೆದಿದ್ದರೆ ಅಥವಾ ಮನೆಯವರು ಕಣ್ಣಿಗೆ ಕಾಣಿಸಿಕೊಂಡರೆ ಮಾತ್ರ ಏನಾದರೂ ಕೊಡುವವರೆಗೆ ಬಿಡುವುದೇ ಇಲ್ಲವೆಂಬಂತೆ, ಆಮೇಲೂ ಇನ್ನೂ ಬೇಕೆಂಬಂತೆ, ಹೀಗೆ ಬರೀ ಮೊಂಡಾಟ ಮಾಡುತ್ತದೆ. ಒಮ್ಮೆ ಇದರ ಗಲಾಟೆ ನಿಲ್ಲಲಿ ಎಂದು ಏನಾದರೂ ತಂದೇನೋ ತಿನ್ನಿಸುತ್ತೇವೆ. ಆದರೆ ಮಕ್ಕಳಿರಲಿ, ನಾವು ದೊಡ್ಡವರಿಗೂ ಗೇಟಿಂದಾಚೆಗೆ ಹೋಗಲು ಧೈರ್ಯವಾಗುವುದಿಲ್ಲ. ಕಣ್ಣಿಗೆ ಕಣ್ಣು ಕೂಡಿಸಿದರೂ ಎದೆ ಝಲ್ಲೆನ್ನುತ್ತದೆ. ಇನ್ನೊಂದು ಚಂದದ ವೈಯ್ಯಾರಿ ದನ. ಬಿಳಿ, ಕಂದು ಬಣ್ಣದ ಪ್ರಮಾಣಬದ್ದ ದೇಹ, ಬರೀ ಬೆಳ್ಳಗಿನ ಉದ್ದ ಮುಖ, ಉದ್ದುದ್ದ ಶಾಂತವೆನಿಸುವ ಕಣ್ಣು, ಕಿವಿ ಕೋಡುಗಳೆಲ್ಲವೂ ಅದರ ಚಂದಕ್ಕೆ ಒತ್ತು ಕೊಡುತ್ತಿವೆ ಅನಿಸುತ್ತಿರುತ್ತದೆ. ನಿಧಾನ ನಡೆದುಹೋಗುತ್ತಿರುತ್ತದೆ. ಬಾಗಿಲು ತೆರೆದಿದ್ದರಷ್ಟೆ ಆ ಮನೆಯ ಮುಂದೆ ನಿಲ್ಲುತ್ತದೆ. ಅಪ್ಪಿತಪ್ಪಿಯೂ ಕೂಗುವುದಿಲ್ಲ. ಸುಮ್ಮನೆ ಕಣ್ಣೋಟದಲ್ಲೇ ಏನಾದರೂ ಸಿಕ್ಕೀತೇನೋ ಅನ್ನುತ್ತಿದೆಯೆನಿಸುವಂತೆ. “ಏನೂ ಇಲ್ಲ, ಹೋಗು” ಅಂದರೆ ಸಾಕು, ಅರ್ಥವಾದಂತೆ ತಟ್ಟನೆ ಮುನ್ನಡೆಯುತ್ತದೆ ಬಳುಕುತ್ತಾ. ಮೂರನೆಯದು ಒಂದು ಅಚ್ಚಬಿಳಿಯ ಮುದ್ದು ಕರು. ಪಟಪಟನೆ ಏನೋ ಮಹತ್ತರ ಕೆಲಸವಿದ್ದ ಹಾಗೆ ರಸ್ತೆಯ ಇಳಿಜಾರಲ್ಲಿ ಬೇಗಬೇಗ ಬರುತ್ತಿರುತ್ತದೆ. ಯಾರದಾದರೂ ಮುಖ ಕಂಡರಷ್ಟೇ ಪುಟುಪುಟು ನೆಗೆಯುತ್ತಾ ಗೇಟಿನೆದುರು ಬಂದು ನಿಲ್ಲುವ ಚಂದಕ್ಕೆ ಮುದ್ದಿಸಬೇಕನಿಸುತ್ತದೆ. ಇಡೀ ದೇಹದಲ್ಲೊಂದೇ ಕಡೆ ಕಂದು ಬೊಟ್ಟಿರುವ ಹಣೆ ಸವರಿ ಒಂದಷ್ಟು ಮುದ್ದು ಮಾಡಿದರೆ ಮಾಡಿಸಿಕೊಳ್ಳುತ್ತದೆ. ಕೊಟ್ಟರೆ ತಿನ್ನುತ್ತದೆ, ಕೊಡದಿದ್ದರೆ ಒಂದೆರಡು ಸಲ ಅಂಬೇ ಅನ್ನುತ್ತದೆ. ತಿನ್ನಿಸಿದರೂ, ತಿನ್ನಿಸದಿದ್ದರೂ “ಆಯ್ತಿನ್ನು ಹೋಗು” ಅಂದರೆ ತಲೆಯನ್ನೊಮ್ಮೆ ಚುರುಕಾಗಿ ಕೊಡವಿ ಮತ್ತದೇ ವೇಗದಲ್ಲಿ ಮುನ್ನಡೆಯುತ್ತದೆ.
ಸೋನಿ ಚಾನೆಲ್ ನಲ್ಲಿ ಇಂಡಿಯನ್ ಐಡಲ್ ಅನ್ನುವ ಕಾರ್ಯಕ್ರಮವೊಂದರಲ್ಲಿ ಇಬ್ಬರು ಹುಡುಗರು ಖುದಾ ಬಕ್ಷ್ ಮತ್ತು ಮೋಹಿತ್, ಡೆಲ್ಲಿ 6 ಸಿನೆಮಾದ ಮೌಲಾ ಮೌಲಾ ಮೌಲಾ ಮೆರೆ ಮೌಲಾ ಅನ್ನುವ ಒಂದು ಅದ್ಭುತ ಹಾಡನ್ನು ಇನ್ನಷ್ಟು ಅದ್ಭುತವಾಗಿ ಹಾಡುತ್ತಿದ್ದರು. ಕೇಳುತ್ತಾ ಮಗಳ ಮಾತು ಮತ್ತು ಈ ದನಗಳ ನೆನಪಾಯಿತು. ಆ ಹಾಡನ್ನು ಶುರು ಮಾಡುವ ಮೊದಲು ಖುದಾ ಬಕ್ಷ್ ಶೇರಾವಾಲೀ ಕಿ ಜಯ್ ಅಂತ ಒಂದು ಉದ್ದದ ಆಲಾಪ್ ತರಹದ ಪ್ರಸ್ತುತಿಯನ್ನಿಟ್ಟರು. ಈ ಖುದಾ ಬಕ್ಷ ಪಂಜಾಬಿನ ಒಂದು ಅತಿ ಬಡತನದ ಬೇಸಾಯದ ಮನೆಯ ತಂದೆಯಿಲ್ಲದ ಮಗ. ತಾಯಿ ಇಳಿವಯಸ್ಸಲ್ಲು ಗದ್ದೆ ಕೆಲಸ ಮಾಡುತ್ತಾರೆ. ಇದುವರೆಗೆ ಕೆಲಸವೊಂದಕ್ಕೆ ಇಷ್ಟು ಸಂಭಾವನೆ ಅಂತ ಸಂಪಾದನೆಯ ರುಚಿ ನೋಡಿಲ್ಲದ ಬರೀ ಗದ್ದೆ ಕೆಲಸ ಮಾಡುವ ಹುಡುಗನಿಗೆ ಸ್ಪರ್ಧೆ ಗೆದ್ದು ಹಣವೊಂದಷ್ಟು ಗಳಿಸಿ ಅಮ್ಮನ ಕಷ್ಟಗಳಿಂದ ಪಾರು ಮಾಡುವ ಕನಸು.
ಮೋಹಿತ್ ಉತ್ಸವಗಳಲ್ಲಿ, ಮದುವೆ ಮುಂತಾದ ಸಂಭ್ರಮಗಳಲ್ಲಿ ಹಾಡಿ ಸಂಪಾದಿಸುತ್ತಾನೆ. ಅವನಿಗಿಂತ ಇವ ಒಂದಿಷ್ಟೇ ಇಷ್ಟು ದುಡ್ಡುಕಾಸಿನ ವಿಷಯದಲ್ಲಿ ಜಾಸ್ತಿ ಸ್ವತಂತ್ರ! ನಾನು ನಿನ್ನ ಸೃಷ್ಠಿ ನೀನೇ ಕಾಪಾಡುತ್ತೀಯಾ ಅನ್ನುವ ಅರ್ಥದ ಮೊದಲ ಕೆಲ ಸಾಲುಗಳನ್ನು ಹಾಡುವಾಗ ಖುದಾಬಕ್ಷ್ಅದೇ ಮಾತನ್ನ ಅತಿ ದೈನ್ಯನಾಗಿ ತುಂಬು ಕೃತಜ್ಞತೆಯಲ್ಲಿ ಕಣ್ಮುಚ್ಚಿ ಮೈಮನಸು ಬಾಗಿ ಆ ಮೌಲಾನಲ್ಲಿ ನಿವೇದಿಸಿಕೊಂಡಂತನಿಸಿದರೆ, ಮೋಹಿತ್ ನ ದನಿಯಲ್ಲಿ ಅದೇ ಮಾತು ಒಂದು ಹೆಮ್ಮೆಯೆಂಬಂತೆ ಸಂಭ್ರಮಿಸಲ್ಪಡುತ್ತಾ ಧನ್ಯತೆಯ ಧಾಟಿಯಲ್ಲಿ ತಲೆಯೆತ್ತಿ ಅದೇ ಮೌಲಾನಿಗೆ ಅರ್ಪಿಸಿದ ಧನ್ಯವಾದ ಅನಿಸಿತು. ನಿರ್ಣಾಯಕ ಸೋನುನಿಗಮ್ ಒಂದು ಮಾತು ಹೇಳುತ್ತಾರೆ, “ನಮಾಜ್ ಓದುವ ಖುದಾಬಕ್ಷ್ ಶೆರಾವಾಲಿ ಕಿ ಜೈ ಅಂತ ಹಾಡಿದಾಗ ಅಥವಾ ಮೋಹಿತ್ ಮೌಲಾನನ್ನು ಕೂಗಿ ಕೂಗಿ ಧನ್ಯವಾದ ಅರ್ಪಿಸುವಾಗ ಒಂದೇ ಅತ್ಯುತ್ಕೃಷ್ಟ ಪ್ರಾಮಾಣಿಕತೆ ಕಾಣಿಸಿತು”
ಹೌದು, ನಿಜವಾಗಿಯೂ ಅಲ್ಲಿ ಶೇರಾವಾಲಿ ಯಾರು ಮೌಲಾ ಯಾರು, ಹೇಗೆ ಕಾಣಿಸುತ್ತಾರೆ, ಎಲ್ಲಿರುತ್ತಾರೆ, ಅನ್ನುವ ಭೇದವಿಲ್ಲದೆ ಯಾರಿಂದ ನಾವು ಉಪಕೃತರೋ ಆ ಶಕ್ತಿಗೆ ನಿವೇದನೆ, ಅದಕ್ಕೆ ಧನ್ಯವಾದ ಅನ್ನುವ ಭಾವವಷ್ಟೇ ಕಾಣುತ್ತಿತ್ತು.
ಕುಲಜಾತಿ ಅನ್ನುವ ಬೆಳೆದ ಮನುಷ್ಯನೊಬ್ಬನಿಂದ ಬೇರ್ಪಡಿಸಲಾಗದ ಅವನ ತನ್ನತನದ ಒಂದು ಗುರುತನ್ನ ಇಂಥ ದೈವೀಕಕಲೆಗಳಲ್ಲಾಗಲಿ ಅಥವಾ ಇನ್ಯಾವುದೋ ಅನುಭೂತಿಯಲ್ಲಿ ಮುಳುಗಿ ಮೈ ಮರೆತಾಗ ಮನಸುಗಳು ಮರೆತುಬಿಡುತ್ತವೆ. ಬಹುಶಃ ಪ್ರತಿ ಜೀವಿಗೂ ಅದರದ್ದೇ ಅನ್ನಿಸುವ ಆತ್ಮದ ಗುಣಗಳು ಯಾವುವು ಬರೀ ಇಲ್ಲಿ ನಾವಾಗಿ ಉಳಿದುಕೊಳ್ಳುವೆಡೆಗೆ ತುಡಿಯುತ್ತಿರುತ್ತವೋ, ಆ ಅತಿಸಹಜಗುಣಗಳು, ನಮ್ಮನ್ನು ಪ್ರತಿನಿಧಿಸುವ, ನಾವು ರೂಢಿಸಿಕೊಂಡ ನಮ್ಮ ಮೂರ್ತ ಗುರುತುಗಳು, ಗುಣಗಳು ಮೌನವಾದಾಗ ಅಂದರೆ ನಾವು ಪೂರ್ತಿಯಾಗಿ ಮೈಮರೆತಾಗ ಪ್ರಕಟವಾಗುತ್ತವೆ.
ಈ ಪ್ರಾಣಿಗಳು ಒಂದೇ ಹಟ್ಟಿಯಲ್ಲಿ ಬೆಳೆದವು. ಇನ್ನು ಮನುಷ್ಯರಲ್ಲಾದಂತೆ ನೋಡಿ ಕಲಿಯುವ, ನೋಡಿ ನಿರ್ಧರಿಸಿಕೊಳ್ಳುವ, ಆವಾಹಿಸಿಕೊಳ್ಳುವ ಸಂದರ್ಭ ಅವುಗಳಲ್ಲಿ ಇಲ್ಲ. ಹಾಗಾಗಿ ಅವುಗಳಲ್ಲಿ ತನ್ನತನವನ್ನ ಮ್ಯಾನಿಪ್ಯುಲೇಟ್ ಮಾಡಿಕೊಳ್ಳುವ ಅಗತ್ಯ ಇಲ್ಲ. ಒಳಗಿರುವ ಆತ್ಮ ಅವುಗಳಲ್ಲಿ ಸದಾ ತನ್ನನ್ನ ಪ್ರಕಟಗೊಳಿಸಿಕೊಳ್ಳುತ್ತಿರುತ್ತದೆ. ಹಾಗಾಗಿಯೇ ಇಷ್ಟು ಸ್ಪಷ್ಟ ಕರಾರುವಕ್ಕಾಗಿ ಯಾವತ್ತೂ ನಾವು ಎದುರುನೋಡಬಲ್ಲ, ಮತ್ತು ಬದಲಾಗದೆ ಉಳಿಯುವ ಭಿನ್ನತೆಗಳಲ್ಲಿನ ಸ್ವಂತಿಕೆ ಅವುಗಳ ವರ್ತನೆಯಲ್ಲಿ!
ಹೆಚ್ಚುಹೆಚ್ಚು ನಮ್ಮನ್ನೂ ಪ್ರಪಂಚವನ್ನೂ ತಿಳಿದುಕೊಳ್ಳುತ್ತಾ, ಹೊರಗಿನ ಸಂದರ್ಭಗಳಿಗೆ ತಕ್ಕ ಹಾಗೆ ನಮ್ಮೊಳಗನ್ನು ಮಾರ್ಪಡುಗೊಳಿಸುತ್ತಾ, ನಮ್ಮದೇ ಆತ್ಮಗುಣದಿಂದ ದೂರಾಗುತ್ತಾ ಹೋಗಿ ಕೊನೆಗೊಮ್ಮೆ ಯಾವುದೋ ಹಂತದಲ್ಲಿ ಇದು ನಾನೇನಾ ಅನ್ನಿಸುವಷ್ಟರಮಟ್ಟಿಗೆ ಅಪರಿಚಿತರಾಗುವ ನಮ್ಮ ಜನ್ಮ ದೊಡ್ಡದಾ; ನಾನೆಂದರೇನು ನೀನೆಂದರೇನೆಂಬ ಅರಿವಿಲ್ಲದೆ ಪ್ರಾಣವುಳಿಸಿಕೊಳ್ಳುವ ಪರಿಯೊಂದನ್ನು ಬಿಟ್ಟು ಇನ್ನೇನನ್ನೂ ತಿಳಕೊಳ್ಳಬಯಸದ, ತಿಳಕೊಳ್ಳಲಾಗದ ಸೀದಾ ಆತ್ಮಗುಣವನ್ನೇ ಬದುಕುವ ಪ್ರಾಣಿಜನ್ಮ ದೊಡ್ಡದಾ?
ಅಮ್ಮ ಸದಾ ಹೇಳುವ ಮಾತು, “ಒಂದು ನುಸಿಯ ಜನ್ಮವಾದರೂ ಆದೀತು, ಇನ್ನು ಈ ಮನುಷ್ಯಜನ್ಮ ಬೇಡಪ್ಪಾ” ಮತ್ತು ದಾಸರು ಹೇಳಿದ ಮಾತು “ಮಾನವಜನ್ಮ ದೊಡ್ಡದು ಇದಕ್ಹಾನಿ ಮಾಡದಿರಿ ಹುಚ್ಚಪ್ಪಗಳಿರಾ” ಎರಡೂ ಏಕಕಾಲಕ್ಕೆ ಮನಸ್ಸಲ್ಲಿ ಹಾದು ಹೋದವು.