ತರಾವರೀ ತರ್ಕ ಮತ್ತು ಹಾಸ್ಯ (ಭಾಗ 2): ಎಂ.ಎಸ್. ನಾರಾಯಣ

(ಇಲ್ಲಿಯವರೆಗೆ)

ಯಾಕೋ ಏನೋ ಪುಟ್ಟಿಯನ್ನು ಬಿಡುಗಡೆಗೊಳಿಸಿದ ನಾನೇ ಯಾವುದೋ ಬಂಧನಕ್ಕೆ ಸಿಕ್ಕಿಕೊಂಡಿದ್ದ ಹಾಗೆ ಅನುಭವವಾಗಲಾರಂಭಿಸಿತು. ನನ್ನ ತಲೆಯನ್ನು ಹೊಕ್ಕಿದ್ದ ತರ್ಕವೆಂಬ ಹುಳದ ಗುಂಯ್ಗಾಟ ನಿಲ್ಲುವಂತೆಯೇ ಕಾಣಲಿಲ್ಲ. ನಿಜಕ್ಕೂ ತರ್ಕಶಾಸ್ತ್ರವೊಂದು ಮಹಾ ಸಾಗರ. ಆವರಣದ ಸತ್ಯಾಸತ್ಯತೆಯಲ್ಲಿ ತರ್ಕಶಾಸ್ತ್ರಕ್ಕೆ ಆಸಕ್ತಿ ಇಲ್ಲ. ತರ್ಕವು ಕೇವಲ ಸಾಕ್ಷೀ ಪ್ರಮಾಣ ಕೇಂದ್ರೀಕೃತವಾಗಿರುತ್ತದೆ. ಶುದ್ಧತರ್ಕವಲ್ಲದೆ, ತರ್ಕದೋಷಗಳೆನ್ನಬಹುದಾದ ಅತರ್ಕ, ವಿತರ್ಕ, ಕುತರ್ಕ, ಚಕ್ರತರ್ಕ, ವಕ್ರತರ್ಕ…..! ಎಂದು ಎಷ್ಟೆಲ್ಲಾ ವೈವಿಧ್ಯತೆ ಅನ್ನಿಸಿತು. ಪುಟ್ಟಿಯ ಲೆವೆಲ್ಲಿಗೆ ಇದೆಲ್ಲಾ ಟೂ ಮಚ್ಚೆಂದೂ ಅನಿಸಿತು. ತರ್ಕಶಾಸ್ತ್ರದಂಥಾ ಜಟಿಲವಾದ ವಿಷಯವನ್ನು ಕಠಿಣವಾದ ಭಾಷೆಯಲ್ಲಿ ಹೇಳಿ ನನ್ನ ಶಬ್ದ ಗಾರುಡಿಯಿಂದ ಇನ್ನಷ್ಟು ಸಂಕೀರ್ಣಗೊಳಿಸಿದ ಪಾಪಪ್ರಯೂ ಹಾದುಹೋಯಿತು. ಮಕ್ಕಳಿಗೆ ಹೇಳಿಕೊಡುವಾಗ ಇನ್ನೂ ಹೆಚ್ಚಾಗಿ ಉದಾಹರಣೆಗಳನ್ನು ಬಳಸಬೇಕು, ಅಂದುಕೊಂಡೆ.  ಈಗಿನ್ನೂ ಹದಿನಾರು ತುಂಬಿರುವ ಹುಡುಗಿಗೆ ತರ್ಕಶಾಸ್ತ್ರದ ಮೂಲಭೂತ ತತ್ವಗಳನ್ನು ಅರಗಿಸಿಕೊಳ್ಳುವ ಪ್ರಭುದ್ಧತೆ ಈಗಲೇ ಎಲ್ಲಿಂದ ಬರಬೇಕು ಅನ್ನಿಸಿತು. ಒಡನೆ ಪ್ರಭುದ್ಧರಾದ ನಿಮ್ಮ ನೆನಪಾಯಿತು. ಈ ಲೇಖನ  ಬರೆಯುವ ಮನಸ್ಸಾಯಿತು. ವಿಷಯದ ಕ್ಲಿಷ್ಟತೆಯಿಂದಾಗಿ ಲೇಖನ, ತರ್ಕಶಾಸ್ತ್ರದ ಪಠ್ಯದಂತೆ ಅತಿ ಗಾಂಭೀರ್ಯದಿಂದ ಭಾರವಾಗಿ, ಬೋರಾಗಿ ಬಿಡಬಹುದೆಂಬ ಭಯ ಕಾಡಿತು. ಸರಿಯಾದ ಹದದಲ್ಲಿ ವಿಷಯೋಚಿತವಾದ ಹಾಸ್ಯ ಚಟಾಕಿಗಳನ್ನು ಬಳಸಿಕೊಂಡು ಲೇಖನವನ್ನು ಹಗುರ ಗೊಳಿಸಬಹುದೆಂಬ ಪರಿಹಾರದ ಆಲೋಚನೆಯೂ ಮೂಡಿತು. ಗಮನವಿಟ್ಟು ಲೇಖನವನ್ನು ಓದಲು ತಮ್ಮ ಅಮೂಲ್ಯವಾದ ಸಮಯವನ್ನು ಸಮರ್ಪಿಸುವ ಓದುಗ ಮಹಾಶಯರಿಗೆ, ಶ್ಯಾಂಪೂ ಜೊತೆ ಬಾಚಣಿಗೆ ಫ್ರೀ ಕೊಟ್ಟಹಾಗೆ, ಈ ಸಂಕೀರ್ಣ ವಿಚಾರದೊಂದಿಗೆ ಸ್ವಲ್ಪ ಹಾಸ್ಯವನ್ನೂ ಕಟ್ಟಿಕೊಡುವುದು ಉಚಿತವೆನಿಸಿತು. ತಡಮಾಡದೆ, ಲ್ಯಾಪ್ಟಾಪ್ ತೆಗೆದವನೇ, “ತರಾವರೀ ತರ್ಕ ಮತ್ತು ಹಾಸ್ಯ” ಎಂದು ಟೈಟಲ್ಲಿಟ್ಟುಕೊಂಡು  ಟೈಪಿಸಲು ತೊಡಗಿದೆ. 

ನನ್ನ ಮಗಳ ಪ್ರಬಂಧದಿಂದಾಗಿ, ಹೇಗೂ, ತರ್ಕದ ಮೂಲಭೂತ ತತ್ವಗಳನ್ನು ಈಗಾಗಲೇ ಅವಲೋಕಿಸಿದ್ದಾಗಿದೆ. ಇನ್ನು ತರ್ಕಕ್ಕೆ ಸಂಬಂಧಿಸಿದ ಇತರ ಪರಾಮರ್ಶೆಯ ಕ್ರಮಗಳ ತಾಂತ್ರಿಕ ವಿವರಗಳ ಉಸಾಬರಿಗೆ ಹೋಗದೆ, ಕೇವಲ ವಿವಿಧ ರೀತಿಯ ತರ್ಕಗಳನ್ನು ಉದಾಹರಣೆಯ ಸಹಿತ ನೋಡೋಣ.

ಅತರ್ಕ: ಕೆಲವರ ಮಾತುಗಳೇ ವಿಚಿತ್ರ. ಏನೋ ಹೇಳಿದರೆ ಇನ್ನೇನೋ ಹೇಳುತ್ತಾರೆ. ಸುಮ್ಮನೆ ತಲೆಬುಡವಿಲ್ಲದ  ಮಾತುಗಳನ್ನಾಡುತ್ತಿರುತ್ತಾರೆ. ಒಂದಕ್ಕೊಂದು ಅರ್ಥಾತ್ ಸಂಬಂಧವಿರುವುದಿಲ್ಲ. ಅವರ ಮಾತುಗಳಲ್ಲಿ ಅತರ್ಕ ಎದ್ದು ಕಾಣುತ್ತಿರುತ್ತದೆ.  “ಗೋಕುಲಾಷ್ಟಮಿಗೂ ಇಮಾಂ ಸಾಬಿಗೂ ಏನು ಸಂಬಂಧ?” “ಎತ್ತಿಗೆ ಜ್ವರ ಎಮ್ಮೆಗೆ ಬರೆ” ಎಂಬಂಥಾ ಉಕ್ತಿಗಳು ಇಂಥವರನ್ನು ನೋಡಿಯೇ ಹುಟ್ಟಿಕೊಂಡಿರಬಹುದೇನೋ ಅನ್ನಿಸುತ್ತದೆ. ಮೊನ್ನೆ ಆಫೀಸಿನಲ್ಲಿ ಹಾಗೆಯೇ ಅಯಿತು. ಆಫೀಸಿಗೆ ಲೇಟಾಗಿಬಂದ ಪದ್ಮನಾಭನನ್ನು ಮ್ಯಾನೇಜರ್, “ ಇದ್ಯಾಕಯ್ಯಾ ಆಫೀಸಿಗೆ ಲೇಟು?” ಎಂದರೆ, ಅದಕ್ಕೆ ಪದ್ಮನಾಭ, “ ಅದೇ ನೆನ್ನೆ ನಿಮ್ಮನ್ನ ಕೇಳ್ಕೊಂಡು ಸ್ವಲ್ಪ ಬೇಗ್ನೆ ಮನೇಗ್ ಹೋಗಿದ್ನಲ್ಲ ಸಾರ್, ಅದಕ್ಕೆ” ಎಂದು ಬಿಡುವುದೇ! ಅದೇ ರೀತಿ ಯಾರೋ, “ಕೋಣ ಈದೈತೆ ಅಂದ್ರೆ, ಕೊಟ್ಟಿಗೇಗ್ ಕಟ್ಟು” ಅಂದ್ರಂತೆ. ಇನ್ನೊಬ್ರು “ಅಂಜನಾ ಅಂದ್ರೆ ನನಗ್ಗೊತ್ತಿಲ್ವೇ? ಅದೇ ಅರುಷ್ಣದ್ ತರ ಬೆಳ್ಳಗಿರುತ್ತಲ್ವಾ?” ಅಂದ್ರಂತೆ. ಇಂಥಾ ವಾದ ಸರಣಿಗಳನ್ನು ಅತಾರ್ಕಿಕವೆನ್ನುತ್ತಾರೆ.

ವಿತರ್ಕ: ವಿತರ್ಕವೆಂದರೆ ವಿತಂಡ ವಾದ. ಮೊಲದ ಒಂದು ಕಾಲನ್ನು ಕೈಯಲ್ಲಿ ಹಿಡಿದವನೊಬ್ಬ, ತನ್ನ ಕೈಲಿ ಹಿಡಿದ ಕಾಲನ್ನು ಲೆಕ್ಕವೇ ಮಾಡದೆ, “ನಾನು ಹಿಡಿದ ಮೊಲಕ್ಕೆ ಮೂರೇ ಕಾಲು ಎಂದು ವಾದಿಸಿದನಂತೆ.” ಹೀಗೆ ಹುಂಬತನದಿಂದಲೋ ಅಮಾಯಕತೆಯಿಂದಲೋ ತರ್ಕದ ಆವರಣವನ್ನು ಸರಿಯಾಗಿ ಗ್ರಹಿಸದೇ ಹಠಮಾರಿತನದಿಂದ ತಮ್ಮದೇ ನಿಲುವಿಗಂಟಿಕೊಂಡು ಮಾಡುವ ತರ್ಕವನ್ನು ವಿತರ್ಕವೆನ್ನಬಹುದು. ವಿತರ್ಕದ ಒಂದು ಉದಾಹರಣೆಯನ್ನು ನೋಡೋಣ. 

ಮೊನ್ನೆ ಬ್ಯಾಂಕಿಗೆ ಹೋಗಿದ್ದೆ. ಬ್ಯಾಂಕಿನಲ್ಲಿ ತುಂಬಾ ರಷ್ಶಿತ್ತು. ಎಂಟ್ರಿ ಮಾಡಿಸಲು ಕೊಟ್ಟಿದ್ದ ಪಾಸ್ ಬುಕ್ಕನ್ನು ಮರಳಿ ಪಡೆಯಲು ಕಾಯುತ್ತಾ ಕುಳಿತಿದ್ದೆ. ಯಾರೋ ಇಬ್ಬರು ಬಂದು ಕೌಂಟರಿನಲ್ಲಿ ನಿಂತು ಬ್ಯಾಂಕಿನ ಸಿಬ್ಬಂದಿಯೊಂದಿಗೆ ಮಾತನಾಡತೊಡಗಿದರು. ಹತ್ತಿರದಲ್ಲೇ ಇದ್ದ ನನಗೆ ಅವರ ಮಾತುಗಳು ಸ್ಪಷ್ಟವಾಗಿ ಕೇಳುತ್ತಿದ್ದವು. ಅವರ ಸಂಭಾಷಣೆ ಹೀಗಿತ್ತು.

ಬ್ಯಾಂಕಿಗೆ ಬಂದವನು: “ನಮಸ್ಕಾರ ಸಾ.”

ಬ್ಯಾಂಕಿನ ಸಿಬ್ಬಂದಿ: “ನಮಸ್ಕಾರ, ನಮಸ್ಕಾರ.”

ಬ್ಯಾಂಕಿಗೆ ಬಂದವನು: “ನಾನ್ ಚಿಕ್ನಾಯ್ಕಾಂತ ಸಾ , ಇವ್ರು ಸಿವನಂಜಪ್ನೋರೂಂತ, ನಮ್ಮೂರ್ ಪಟೇಲ್ರು, ಸಾ”. ಎಂದ ಜೊತೆಯಲ್ಲಿ ಬಂದಿದ್ದ ವ್ಯಕ್ತಿಯನ್ನು ಪರಿಚಯಿಸುತ್ತಾ.

ಬ್ಯಾಂಕಿನ ಸಿಬ್ಬಂದಿ: “ಸಂತೋಷ, ಹೇಳಿ ಏನಾಗ್ಬೇಕಿತ್ತು?”

ಚಿಕ್ನಾಯ್ಕ: “ಒಂದ್ ಅಕೌಂಟೋಪನ್ ಮಾಡ್ಬೇಕಲ್ಲ ಸಾ”.

ಅದಕ್ಕೆ ಬ್ಯಾಂಕಿನವರು ಖಾತೆ ತೆರೆಯಲು ಇರುವ ರೀತಿ ನೀತಿಗಳನ್ನು ಚಿಕ್ನಾಯ್ಕನಿಗೆ ತಿಳಿಸಿ ಅದಕ್ಕೆ ಬೇಕಾಗುವ ಫೋಟೋಗಳು, ವಿಳಾಸದ ದಾಖಲೆ ಇತ್ಯಾದಿಗಳನ್ನು ತರಬೇಕಾಗುವುದೆಂದು ಹೇಳಿದರು. ಎಲ್ಲಕ್ಕೂ ಸಿದ್ಧನಾಗಿಯೇ ಬಂದಂತಿದ್ದ ಚಿಕ್ನಾಯ್ಕ, ಕೈಲಿ ಹಿಡಿದಿದ್ದ ಬ್ಯಾಗನ್ನು ತೆಗೆದವನೇ ಕ್ಷಣಮಾತ್ರದಲ್ಲಿ ಅಗತ್ಯವಾದ ದಾಖಲೆಗಳನ್ನೆಲ್ಲಾ ಒದಗಿಸಿಬಿಟ್ಟನು. ಇದರಿಂದ ಪ್ರಸನ್ನರಾದ ಬ್ಯಾಂಕಿನ ಸಿಬ್ಬಂದಿ ಚಿಕ್ನಾಯ್ಕನಿಂದ ಅಗತ್ಯ ವಿವರಗಳನ್ನು ಪಡೆದು ಚಕಚಕನೆ ಅರ್ಜಿ ಭರ್ತಿ ಮಾಡಿ, ಬೇಕಾದಲ್ಲೆಲ್ಲಾ ಅವನ ರುಜು ಮಾಡಿಸಿಕೊಂಡರು. ಕೊನೆಗೆ ಅರ್ಜಿಯಲ್ಲಿ ‘ಪರಿಚಯಿಸುವವರ ಸಹಿ’ ಎಂದಿದ್ದ ಜಾಗದಲ್ಲಿ ಪೆನ್ನಿಂದ ಒಂದು ಗುರುತು ಮಾಡಿ, “ ಈಗ ಯಾರಾದರೂ ಒಬ್ಬರು ನಿಮ್ಮನ್ನು ನಮ್ಮ ಬ್ಯಾಂಕಿಗೆ ಪರಿಚಯಿಸಬೇಕು. ಈ ಜಾಗದಲ್ಲಿ ಅವರ ಸಹಿ ಹಾಕಿಸಿಕೊಂಡು ಬಂದೊಡನೆ ನಿಮ್ಮ ಖಾತೆ ತೆರೆಯಬಹುದು” ಎಂದರು. ಅದಕ್ಕೆ ಚಿಕ್ನಾಯ್ಕ ನಗುತ್ತಾ “ ಎಲ್ಲಾತಕ್ಕೂ ತಯಾರಾಗೇ ಬಂದೀವ್ನಿ ಸಾ, ಇಲ್ಲೇ ಇಲ್ವ ನಂಪಟೇಲ್ರು” ಎಂದ ಹೆಮ್ಮೆಯಿಂದ. ಆಗ ಬ್ಯಾಂಕಿನವರು ಪಟೇಲರ ಖಾತೆಯ ಸಂಖೆಯನ್ನು ಕೇಳಲು ಪಟೇಲರಿಗೆ ಆ ಬ್ಯಾಂಕಿನಲ್ಲಿ ಖಾತೆಗಳಿಲ್ಲವೆಂದು ತಿಳಿದುಬಂತು. ಆಗ ಬ್ಯಾಂಕಿನವರು ಚಿಕ್ನಾಯ್ಕನನ್ನು ಕುರಿತು, “ನೋಡಿ ಚಿಕ್ನಾಯಕರೇ, ಯಾರಾದರೂ ನಿಮಗೂ, ನಮಗೂ ಇಬ್ಬರಿಗೂ ಪರಿಚಯವಿರುವವರು ನಿಮ್ಮನು ಪರಿಚಯಿಸಬೇಕು” ಎಂದರು.

ಅದಕ್ಕೆ ಚಿಕ್ನಾಯ್ಕ, “ಚೆನ್ನಾಗೇಳುದ್ರಿ, ನಂಪಟೇಲ್ರು ನನ್ಕಾಣ್ರ, ನಂಗಿನ್ನೂ ಸರೀಗ್ ಚಡ್ಡೀನೆ ಇಕ್ಕಳಕ್ ಬತ್ತಿರ್ನಿಲ್ಲ, ಆಗ್ನಿಂದ್ಲೂ ಪರ್ಚಯ, ಅಲ್ವಾ ಪಟೇಲ್ರೇ” ಎಂದು ಹಲ್ಕಿರಿದನು. ಅದಕ್ಕೆ ಬ್ಯಾಂಕಿನವರು “ ಇರಬಹುದು, ಇರಬಹುದು, ಆದರೆ ನಮಗೆ ನಿಮ್ಮ ಪಟೇಲರ ಪರಿಚಯವಿಲ್ಲವಲ್ಲಾ” ಎಂದುಬಿಟ್ಟರು.

ಇದರಿಂದ ಚಿಕ್ನಾಯ್ಕ ಸ್ವಲ್ಪ ಬೇಸರದಿಂದಲೇ, “ಸರೋಯ್ತ್ಕಣಪ್ಪ, ಇದೇನ್ ಮಾತೂಂತಾಡೀರಿ ಸಾ, ನಾವಿಲ್ಲೀಗ್ ಬಂದಾಗ್ಲೆ ನಿಮಗ್ ನಾನೇ ಸ್ವತ ಪರ್ಚಯ ಮಾಡ್ಸೀವ್ನಿ, ಇವ್ರು ಸಿವನಂಜಪ್ನೋರೂ…., ನಮ್ಮೂರ್ ಪಟೇಲ್ರೂಂತ, ಈಗ್ನೋಡುದ್ರೆ ನಿಜದ್ ತಲೆಮೇಲೊಡ್ದಂಗೆ ಪಟೇಲ್ರು ಪರ್ಚಯನೇ ಇಲ್ಲಾಂತಿದೀರಲ್ಲ! ಸಿವ ಮೆಚ್ಚೋ ಮಾತಾ ಇದು?” ಎಂದು ವರಾತ ತೆಗೆದ. ಈ ವಿಚಾರವನ್ನು ಚಿಕ್ನಾಯ್ಕನಿಗೆ ಹೇಗೆ ಮನವರಿಕೆ ಮಾಡಿಕೊಡಬೇಕೆಂದು ತಿಳಿಯದೆ ಬ್ಯಾಂಕಿನ ಸಿಬ್ಬಂದಿ ಕಂಗಾಲಾಗಿದ್ದಂತೆ ಕಂಡರು. 

ಅಷ್ಟರಲ್ಲಿ ನನ್ನ ಪಾಸ್ಬುಕ್ಕಿನ ಎಂಟ್ರಿ ಮುಗಿಯಲಾಗಿ ಬ್ಯಾಂಕಿನಿಂದ ಹೊರನಡೆದೆ. ಬಹುಶಃ ಆ ಮುಗ್ಧ ಚಿಕ್ನಾಯ್ಕನು ಇಂದೆಲ್ಲಾ ಅವನದೇ ವಾದಕ್ಕಂಟಿಕೊಂಡು ತನ್ನ ವಿತರ್ಕದಿಂದ ಬ್ಯಾಂಕಿನವರನ್ನು ಕಾಡಬಹುದೇನೋ ಎಂದೆನಿಸಿ ನಗುಬಂತು. ಕುತರ್ಕ: ಕುತರ್ಕದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇರುತ್ತದೆ. ವಿತರ್ಕವು ಹುಂಬತನದಿಂದಲೋ ಅಮಾಯಕತೆಯಿಂದಲೋ ಉಂಟಾದರೆ, ಕುತರ್ಕದ ಮುಖ್ಯ ಲಕ್ಷಣವೇ ಅದರ ಹಿಂದಿರುವ ಕುತಂತ್ರಿಯ ದುರುದ್ದೇಶ. ಪ್ರಸಕ್ತ ಸಮಾಜದಲ್ಲಿ ಎಲ್ಲೆಲ್ಲೂ ಆವರಿಸಿರುವ ಕುತರ್ಕದ ಉದಾಹರಣೆಗಾಗಿ ವಿಶೇಷ ಹುಡುಕಾಟದ ಅಗತ್ಯವೇನಿಲ್ಲ.

ಒಂದೂರಿನಲ್ಲಿ ಶಿವಬಸವಯ್ಯನೆಂಬ ಹಾಲು ವ್ಯಾಪಾರಿ ಇದ್ದ. ಯಾವಾಗಲೂ ಮೈಕೈಗೆಲ್ಲಾ ವಿಭೂತಿ ಧರಿಸಿಕೊಂಡಿರುತ್ತಿದ್ದ ಆ ಹಾಲಪ್ಪನು ಮಹಾ ದೈವಭಕ್ತನಾಗಿದ್ದನು. ಆಣೆ ಪ್ರಮಾಣಗಳಲ್ಲಿ ಶಿವಬಸಪ್ಪನಿಗೆ ಅತಿಯಾದ ವಿಶ್ವಾಸವಿದ್ದುದು ಊರಿನಲ್ಲಿ ಎಲ್ಲರಿಗೂ ತಿಳಿದ ವಿಷಯವಾಗಿತ್ತು. ಅಂಥಾ ಹಾಲಪ್ಪನ ಮೇಲೆ ಒಂದು ಆರೋಪವಿತ್ತು. ಶಿವಬಸಪ್ಪನು ಹಾಲಿಗೆ ನೀರು ಬೆರೆಸುತ್ತಾನೆಂದೂ, ಹಾಲು ಬಹಳ ತೆಳ್ಳಗಿರುತ್ತದೆಂದೂ ಆಗಾಗ ಅವನ ಗ್ರಾಹಕರು ತಕರಾರು ತೆಗೆಯುತ್ತಿದ್ದರು. ಅಂತಹ ತಕರಾರುಗಳು ಹೆಚ್ಚಾದಾಗೆಲ್ಲಾ ಶಿವಬಸಪ್ಪನು ಊರಜನರ ಮುಂದೆ,  ತನ್ನ ಎಂಟು ವರುಷದ ಒಬ್ಬನೇ ಮಗನ ತಲೆಯ ಮೇಲೆ ಕೈಯಿಟ್ಟು “ ನಾನೇನಾದರೂ ಹಾಲಿಗೆ ನೀರು ಬೆರಸಿದ್ದೇನೆಂಬುದು ನಿಜವೇ ಆಗಿದ್ದಲ್ಲಿ ನನ್ನ ಮಗನು ರಕ್ತ ಕಾರಿಕೊಂಡು ಸಾಯಲಿ” ಎಂದು ಪ್ರಮಾಣ ಮಾಡಿಬಿಡುತ್ತಿದ್ದನು. ಆಣೆ ಪ್ರಮಾಣಗಳನ್ನು ಬಹಳವಾಗಿ ನಂಬುವ ಶಿವಬಸಪ್ಪನು ತನ್ನ ಏಕಮಾತ್ರ ಪುತ್ರನ ಮೇಲೆ ಕೈಯಿಟ್ಟು ಇಂಥಾ ಪ್ರಮಾಣಮಾಡಿದ ಮೇಲೆ ಜನರು ಅನಿವಾರ್ಯವಾಗಿ ಅವನನ್ನು ನಂಬಿ, ಬಹುಶಃ, ಹಸುಗಳೇ ನೀರಾದ ಹಾಲು ಕೊಡುತ್ತಿರಬಹುದೆಂದುಕೊಂಡು ಸುಮ್ಮನಾಗುತ್ತಿದ್ದರು. ಹೀಗಿರುವಾಗ ಒಮ್ಮೆ ಊರ ಪಟೇಲರು ಬೀದೀ ನೆಲ್ಲಿಯ ಬಳಿ ನಿಂತಿದ್ದ ಶಿವಬಸಪ್ಪನು ಕಲಬೆರಕೆಯಲ್ಲಿ ನಿರತನಾಗಿದ್ದುದನ್ನು ನೋಡಿಬಿಟ್ಟರು. ತಮ್ಮದೇ ಹಸುಗಳನ್ನು ಹೊಂದಿದ್ದ ಪಟೇಲರು ಶಿವಬಸಪ್ಪನ ಗ್ರಾಹಕರೇನಾಗಿರಲಿಲ್ಲ. ಹಾಗಾಗಿ, ಮೊದಲು ತನಗೆ ಸಂಬಂಧ ಪಡದ ಸಮಾಚಾರವೆಂದುಕೊಂಡು ಸುಮ್ಮನಾದರಾದರೂ, ಶಿವಬಸಪ್ಪನ ಪ್ರಮಾಣದ ವಿಷಯ ನೆನಪಿಗೆ ಬರಲಾಗಿ ಕುತೂಹಲದಿಂದ, “ಅಲ್ಲಾ ಕಣಯ್ಯಾ ಹಾಲಪ್ಪಾ, ನೀನು ಊರವರ ಮುಂದೆಲ್ಲಾ ‘ನಾನೇನಾದರೂ ಹಾಲಿಗೆ ನೀರು ಬೆರಸಿದ್ದೇನೆಂಬುದು ನಿಜವೇ ಆಗಿದ್ದಲ್ಲಿ ನನ್ನ ಮಗನು ರಕ್ತ ಕಾರಿಕೊಂಡು ಸಾಯಲಿ’ ಎಂದು ಪ್ರಮಾಣ ಮಾಡುವುದನ್ನು ನಾನೇ ಹಲವು ಬಾರಿ ಕಣ್ಣಾರೆ ಕಂಡಿದ್ದೇನೆ, 

ಈಗ ನೋಡಿದರೆ ಇಲ್ಲಿ ನೀನು ಇಂಥಾ ನೀಚ ಕೆಲಸ ಮಾಡುತ್ತಿದ್ದೀಯಲ್ಲೋ”, ಎಂದರು. ಅದರಿಂದ ಭಯಭೀತನಾದ  ಶಿವಬಸಪ್ಪನು “ಸ್ವಾಮಿ ಬಡವನ ಹೊಟ್ಟೆಯ ಮೇಲೆ ಹೊಡೆಯ ಬೇಡಿ, ಯಾರಿಗೂ ಈ ವಿಷಯ ಹೇಳಬೇಡಿ, ಹೇಗೋ ಬದುಕಿಕೊಳ್ಳುತ್ತೇನೆ” ಎಂದು ಅಂಗಲಾಚಿದನು. ಅದಕ್ಕೆ ಪಟೇಲರು, “ಅದಿರಲಿ ಕಣಯ್ಯಾ, ನಾಳೆ ಪಾಪ ನಿನ್ನ ಮಗನಿಗೆ ಏನಾದರೂ ಹೆಚ್ಚು ಕಮ್ಮಿ ಆದರೇನಯ್ಯಾ ಗತಿ?”  ಎಂದು ಕೇಳಿದಾಗ, ಶಿವಬಸಪ್ಪನು, “ನನಗೆ ಆಣೆ ಪ್ರಮಾಣಗಳಲ್ಲಿ ವಿಶ್ವಾಸವಿರುವುದು ನಿಜವಾದರೂ, ನನ್ನ ಮಗನ ಯೋಗಕ್ಷೇಮದ ಬಗ್ಗೆ ನನಗಾವ ಚಿಂತೆಯೂ ಇಲ್ಲ” ಎಂದಾಗ ಪಟೇಲರು ಗೊಂದಲಕ್ಕೊಳಗಾಗಿ, “ಏನೋ ನಿನ್ನ ಮಾತಿನ ಅರ್ಥ, ನನಗೊಂದೂ ತಿಳಿಯುತ್ತಿಲ್ಲವಲ್ಲೋ, ಸ್ವಲ್ಪ ಬಿಡಿಸಿ ಹೇಳಬಾರದೇನು?” ಎಂದು ಕೇಳಿದರು. ಆಗ ಶಿವಬಸಪ್ಪನು ಪಟೇಲರಿಂದ, ಅವರು ಈ ರಹಸ್ಯವನ್ನು ಊರಿನಲ್ಲಿ ಯಾರಿಗೂ ಹೇಳುವುದಿಲ್ಲವೆಂದು ಪ್ರಮಾಣ ಮಾಡಿಸಿಕೊಂಡು, “ನೋಡಿ ಪಟೇಲ್ರೇ, ‘ನಾನೇನಾದರೂ ಹಾಲಿಗೆ ನೀರು ಬೆರಸಿದ್ದೇನೆಂಬುದು ನಿಜವೇ ಆಗಿದ್ದಲ್ಲಿ ನನ್ನ ಮಗನು ರಕ್ತ ಕಾರಿಕೊಂಡು ಸಾಯಲಿ’ ಎಂದು ನಾನು ಪ್ರಮಾಣ ಮಾಡಿರುವುದು ಮಾತ್ರವಲ್ಲ, ಆ ಪ್ರಮಾಣಕ್ಕೆ ಚ್ಯುತಿ ಬರದಂತೆ ನಡೆದುಕೊಂಡಿರುವುದೂ ಸಹ ನಿಜ. ಏಕೆಂದರೆ ನಾನು ಯಾವಾಗಲೂ ನೀರಿಗೆ ಹಾಲು ಬೆರೆಸಿದ್ದೇನೆಯೇ ಹೊರತು ಎಂದೂ ಹಾಲಿಗೆ ನೀರು ಬೆರೆಸಿದವನಲ್ಲ, ಹಾಗಾಗಿ ನನ್ನ ಮಗನ ಪ್ರಾಣಕ್ಕೇನೂ ಅಪಾಯವಿಲ್ಲ” ಎಂದು ಹೇಳಿ ಪಟೇಲರನ್ನು ಬೇಸ್ತು ಬೀಳಿಸಿದನು. ಇಂತಹ ದುರುದ್ದೇಶಪೂರಿತ, ಕುಟಿಲತೆಯಿಂದ ಕೂಡಿದ ತರ್ಕವನ್ನು ಕುತರ್ಕವೆಂದು ಕರೆಯುತ್ತಾರೆ.

ಚಕ್ರತರ್ಕ: ಚಕ್ರ ತರ್ಕದಲ್ಲಿ ಆವರಣದಲ್ಲಿಯೇ ತೀರ್ಮಾನವು ಅಡಗಿ ಕುಳಿತಿರುತ್ತದೆ.ಅಲ್ಲದೆ ಚಕ್ರತರ್ಕವು ಆವರಣದ ನಿಜವಾದ ಸಾಕ್ಷೀ ಪ್ರಮಾಣದ ಮೂಲಕ ತೀರ್ಮಾನವನ್ನು ಸಾಬೀತುಗೊಳಿಸುವುದಿಲ್ಲ.  ಬದಲಿಗೆ, ಒಂದೇ ಮಾತನ್ನು ಚರ್ವಿತ ಚರ್ವಣವಾಗಿಸಿ ತರ್ಕಕ್ಕೆ ಮೌಲ್ಯ ತಂದುಕೊಟ್ಟ ಭ್ರಮೆಯನ್ನುಂಟು ಮಾಡುತ್ತವೆ. ವೃತ್ತಾಕಾರದಲ್ಲಿ ಸುಮ್ಮನೆ ಒಂದೇ ಆಲೋಚನೆಯ ಸುತ್ತ ಗಿರಕಿ ಹೊಡೆಸುತ್ತದೆ. ಕೆಳಗಿನ ಚಿತ್ರದಲ್ಲಿ ಬಿಂಬಿಸಿರುವಂತೆ, ಅನಾದಿಯೂ ಅನಂತವೂ ಆದ ಚಕ್ರದೊಳಗಿನ ನಿರಂತರ ಯಾನದಲ್ಲಿ ತೊಡಗಿಸಿ ಬಿಡುತ್ತದೆ. ಚಕ್ರತರ್ಕದಲ್ಲಿ ತರ್ಕಶಾಸ್ತ್ರಜ್ಞನು ತನ್ನ ಚಾತುರ್ಯದಿಂದ ತನಗೆ ಬೇಕಾದ ತೀರ್ಮಾನವನ್ನು ತಲುಪಲು ಆವರಣದ ಬಳಕೆ ಮಾಡಿಕೊಳ್ಳುತ್ತಾನೆ.                

ಪ್ರಸಿದ್ಧ ನಾಟಕಕಾರ ಜಾರ್ಜ್ ಬರ್ನಾರ್ಡ್ ಷಾ, ಉಡುಗೆ ತೊಡುಗೆಗಳ ವಿಷಯದಲ್ಲಿ ಬಹಳ ಕೆಟ್ಟದಾದ ಅಭಿರುಚಿ ಹೊಂದಿದ್ದನಂತೆ. ಅವನ ಗೆಳಯರು ಇದರ ಬಗ್ಗೆ ಅವನನ್ನು ಹಾಸ್ಯ ಮಾಡುತ್ತಾ ಅವನಿಗೆ ಟಾಕೂಟೀಕಾಗಿ ಉಡುಪು ಧರಿಸಲು ಆಗ್ರಹಿಸಿದರೆ, ಷಾ “ ಅಯ್ಯೋ, ನಮ್ಮೂರಿನಲ್ಲಿ ನಾನು ಬರ್ನಾರ್ಡ್ ಷಾ ಎಂದು ಹೇಗೂ ಎಲ್ಲರಿಗೂ ಗೊತ್ತು, ಹಾಗಾಗಿ ನಾನು ಟಾಕೂಟೀಕಾಗಿ ಉಡುಪು ಧರಿಸಿ ಏನಾಗಬೇಕಿದೆ?” ಎನ್ನುತ್ತಿದ್ದನಂತೆ.        ಹೀಗಿರುವಾಗ ಷಾಗೆ ಒಮ್ಮೆ ಪರಸ್ಥಳಕ್ಕೆ ಹೋಗಬೇಕಾಗಿ ಬಂತು. ಆಗ ಅವನ ಗೆಳಯರು, “ಹೇಗೂ ಈಗ ನೀನು ಬೇರೆ ಊರಿಗೆ ಹೋಗುತ್ತಿದ್ದೀಯೆ, ಈಗಲಾದರೂ ಸ್ವಲ್ಪ ಟಾಕೂಟೀಕಾಗಿ ಉಡುಪು ಧರಿಸಿ ಹೋಗಬಾರದೇ?” ಎಂದು ಕೇಳಲು, ಜಾಣ ಷಾ, “ಹೇಗೂ ಬೇರೆ ಊರಿನಲ್ಲಿ ನಾನು ಬರ್ನಾರ್ಡ್ ಷಾ ಎಂದು ಯಾರಿಗೂ ಗೊತ್ತೇ ಇಲ್ಲವಲ್ಲ, ಹಾಗಾಗಿ ನಾನು ಟಾಕೂಟೀಕಾಗಿ ಉಡುಪು ಧರಿಸಿ ಏನಾಗಬೇಕಿದೆ?” ಎಂದನಂತೆ!

ಚಕ್ರ ತರ್ಕವನ್ನು ಲಘು ಹಾಸ್ಯದಿಂದ ಹಿಡಿದು ಗಂಭೀರವಾದ ಧಾರ್ಮಿಕ ತತ್ವಗಳನ್ನು ಪ್ರತಿಪಾದಿಸಲು ಬಳಸುತ್ತಾರೆ. ಎರಡೂ ಇಕ್ಕೆಲಗಳಲ್ಲಿ “ಪು. ತಿ. ನೋ” ಎಂದು ಬರೆದ ಹಾಳೆಯೊಂದನ್ನು ಹಿಡಿದು ದಿನವಿಡೀ ತಿರುವುತ್ತಾ ಕುಳಿತ ಸರ್ದಾಜಿಯ ಜನಪ್ರಿಯ ನಗೆಹನಿ, ಚಕ್ರತರ್ಕವನ್ನು ಆಧರಿಸಿದೆ. ಸರಿಯಾದ ಉತ್ತರ ಗೊತ್ತಿಲ್ಲದಿದ್ದರೂ, ಏನಾದರೂ ಕತೆ ಹೊಡೆದು ಪರೀಕ್ಷೆಯ ಉತ್ತರ ಪತ್ರಿಕೆಗಳ ಪುಟಗಳನ್ನು ತುಂಬಿಸಿ ಪಾಸಾಗುವಷ್ಟು ಅಂಕಗಳಿಸಲು ಹವಣಿಸುವ ವಿದ್ಯಾರ್ಥಿಗಳ ಪಾಲಿಗಂತೂ, ಚಕ್ರ ತರ್ಕವು ಆಪದ್ಬಾಂಧವನೇ ಸರಿ. ಪಾಠದಲ್ಲಿ ಬರುವ ನರಹರಿಯು ಬಡವನೆಂದಲ್ಲದೇ ಬೇರೇನೂ ಗೊತ್ತಿಲ್ಲದಿದ್ದರೂ ಆಶಾವಾದಿಗಳಾದ ವಿದ್ಯಾರ್ಥಿಗಳು ಅಷ್ಟು ಸುಲಭವಾಗಿ ಸೋಲೊಪ್ಪುವುದಿಲ್ಲ. ಪ್ರಶ್ನಪತ್ರಿಕೆಯಲ್ಲಿ ನರಹರಿಯ ಕುರಿತಾದ ಏನೇ ಪ್ರಶ್ನೆಬಂದರೂ ತಮ್ಮ ಅದ್ವಿತೀಯ ಸೃಜನಶೀಲತೆಯನ್ನು ಬಳಸಿ, “ಬಡವನಾಗಿದ್ದ ನರಹರಿಯು ಶ್ರೀಮಂತನೇನೂ ಆಗಿರಲಿಲ್ಲ. ನರಹರಿಯು ಸಿರಿವಂತನಲ್ಲದಿದ್ದ ಕಾರಣ ಅವನಿಗೆ ದಾರಿದ್ರ್ಯದ ಬದುಕು ನಡೆಸುವುದು ಅನಿವಾರ್ಯವಾಗಿಹೋಗಿತ್ತು. ಅದಲ್ಲದೆ ನರಹರಿಗೆ ಬೇರೆ ಗತ್ಯಂತರವೂ ಇರಲಿಲ್ಲ. ಕಡುಬಡವನಾಗಿದ್ದ ನರಹರಿಗೆ  ಸಿರಿವಂತರ ದುಂದುವೆಚ್ಚದ ಜೀವನ ಶೈಲಿಯನ್ನು ನಿರ್ವಹಿಸುವ ಚೈತನ್ಯ ಇರುತ್ತಿರಲಿಲ್ಲ. ಆದ್ದರಿಂದ ಪಾಪ ನರಹರಿಯು ಸಹಜವಾಗಿ ಇತರ ಬಡವರಂತೆಯೇ ಬಡತನದ ಬದುಕಿಗೆ ಒಗ್ಗಿಹೋಗಿದ್ದನು. ಈಗಾಗಲೇ ಹೇಳಿದಂತೆ ನರಹರಿಯು ಬಡವನಾಗಿದ್ದ ಕಾರಣ………….” ಎಂದು ಅಗಿದದ್ದನ್ನೇ ಅಗಿಯುತ್ತಾ ಪುಟಗಳನ್ನು ತುಂಬಿಸುತ್ತಾ ಹೋಗುತ್ತಾರೆ. ಇಂತಹ ಸೃಜನಶೀಲ ವಿದ್ಯಾರ್ಥಿ ವರ್ಗವನ್ನು ಚಕ್ರ ತರ್ಕದ ಮಹಾ ಪಂಡಿತರೆಂದರೂ ತಪ್ಪಿಲ್ಲ. ಅದೇ ರೀತಿ ಚಕ್ರ ತರ್ಕವು ಬಹಳ ಮಹತ್ವದ ಗಂಭೀರ ವಿಷಯಗಳ ಪ್ರತಿಪಾದನೆಯಲ್ಲಿಯೂ ಉಪಯುಕ್ತವಾಗಿದೆ. ‘ಮರಳಿ ಮಣ್ಣಿಗೆ’, ‘ಕೆರೆಯನೀರನು ಕೆರೆಗೆ ಚೆಲ್ಲಿ’, ‘ಪುನರಪಿ ಜನನಂ ಪುನರಪಿ ಮರಣಂ’ ನಂತಹ ಅನೇಕ ಅರ್ಥಗರ್ಭಿತ ತತ್ವಗಳಿಗೆ ಚಕ್ರ ತರ್ಕವು ಬುನಾದಿಯನ್ನು ಒದಗಿಸುತ್ತದೆ. ಹಾಗೆಯೇ ಎಂದಿಗೂ ತೃಪ್ತಿಕರ ಉತ್ತರ ಸಿಗದ ‘ಬೀಜ ವೃಕ್ಷ ನ್ಯಾಯ’, ‘ಕೋಳಿ ಮೊದಲೋ ಮೊಟ್ಟೆ ಮೊದಲೋ?’ `ಆಲಯವು ಬಯಲೊಳಗೋ, ಬಯಲು ಆಲಯದೊಳಗೋ?’ ‘ಮಾನವನು ದೈವ ಸೃಷ್ಟಿಯೋ, ಇಲ್ಲ ದೈವವು ಮಾನವ ಸೃಷ್ಟಿಯೋ?’ ಎಂಬ ಗೊಂದಲಕಾರೀ ವಿಸ್ಮಯಗಳಿಗೂ ಚಕ್ರ ತರ್ಕವೇ ತಳಹದಿಯಾಗಿದೆ.  

(ಮುಂದುವರೆಯುವುದು…)

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
Santhoshkumar LM
9 years ago

Very interesting article sir. Not even a single line bored me.

Narayan Sankaran
Narayan Sankaran
9 years ago

Thank you so much santhu 🙂

natesh
natesh
9 years ago

very nice intro to the topic Nana.. , well written, it has inspired me to write too…

.

" ree, elli tarkaree… "

marethu banda nanna golu yaava tarka'dindalu bageharisadanthaha golu…

" tarkari tarakke helidnalla… yen thandree… "

there is no logic or even assumptions – in a relationship between human beings who have agreed on a lifetime journey of togetherness…   in fact it breaks all boundaries of logical and even legal limitations to achieve that priceless communion which only humanity can bring about…

that much understood – lets see how this topic of logic was reviewed by our Rishis…

of the Shat'Darshanas – Nyaya – is the First…

essentially , Nyaya is the finest result of logic…  from an inference based on what is seen, known , debated, experimented, polarised in opposites , rationalised and realised – logic is the bridge on which a person travels towards That which logic itself cannot explain…

what is right and what is wrong… is there anything always right or always wrong… what lies beyond right and wrong… what is its source and why does it prevail across time and people and situations…  

these questions lead to the next Darshana called Vaisheshika , or the study of inherent qualities of the universe…

Guruprasad Kurtkoti
9 years ago

ತುಂಬಾ ಚೆನ್ನಾಗಿ ಮುಂದುವರಿಸಿದ್ದೀರಾ. ಸುಮಾರು ಜನ 'ತರ್ಕಿ'ಗಳನ್ನು ನಮ್ಮ ನಿಜ ಜೀವನದಲ್ಲಿ ನೋಡಿ ಆಶ್ಚರ್ಯ ಪಟ್ಟಿದ್ದೇವಾದರೂ… ಅದರಲ್ಲೂ ಇಷ್ಟೊಂದು ನಮೂನೆಗಳಿರ್ತವೇ ಅಂತ ಯೋಚಿಸಿರಲಿಲ್ಲ! ಮುಂದಿನ ಕಂತಿಗೆ ಎಂದಿನಂತೆ ಕಾಯುತ್ತಿರುವೆ!

Narayan Sankaran
Narayan Sankaran
9 years ago

ಧನ್ಯವಾದಗಳು ಗುರುಪ್ರಸಾದ್.

trackback

[…] ತರಾವರೀ ತರ್ಕ ಮತ್ತು ಹಾಸ್ಯ (ಕೊನೆಯ ಭಾಗ): ಎಂ.ಎಸ್.ನಾರಾಯಣ. May 5th, 2014 editor https://www.panjumagazine.com/?p=7242 ಇಲ್ಲಿಯವರೆಗೆ […]

arathi ghatikar
9 years ago

ತರ್ಕಗಳ ಬಗ್ಗೆ ಸ್ವಾರಸ್ಯಕರ ಮಾಹಿತಿ ಕೊಟ್ಟಿದೀರಿ . ನಮ್ಮ ಕಡೆ ನಾನು ಎಸ್ತು ಸಲ ಕೇಳಿದ್ದೇನೆ ಸುಮ್ನೆ ವಿತ್ತಂಡ ವಾದ

ಹಾಕೊಕೋದು   ಅಂತ . ಈಗ ಅದೂ ಒಂದು ತರ್ಕದ ಕಟಗರಿ ಅಂತ ನಾನು ತರ್ಕ ಐ ಮೀನ್  ಚಕ್ರ ತರ್ಕ ಮಾಡಬಹುದು 🙂

7
0
Would love your thoughts, please comment.x
()
x