ತರಾವರೀ ತರ್ಕ ಮತ್ತು ಹಾಸ್ಯ: ಎಂ.ಎಸ್. ನಾರಾಯಣ


‘ತರ್ಕ ಅಂದ್ರೇನಪ್ಪಾ?’ ಎಂದು ಬೆಳಬೆಳಗ್ಗೇನೇ ರಾಗ ಎಳೆದಳು ಮೊದಲ ಪೀಯೂಸಿ ಕಲಿಯುತ್ತಿರುವ ನನ್ನ ಮಗಳು. 
ಹಾಗೆಲ್ಲಾ ಅವಳು ಸುಮ್ಮ ಸುಮ್ಮನೆ ಏನನ್ನೂ ಕೇಳುವುದಿಲ್ಲವೆಂದರಿತಿದ್ದ ನಾನು ಓದುತ್ತಿದ್ದ ಪೇಪರಿನಿಂದ ತಲೆಯೆತ್ತದೆ ‘ಯಾಕೇ?’ ಅಂದೆ.
‘ಕನ್ನಡಾ ಮ್ಯಾಮ್ ಅಸೈನ್ಮೆಂಟ್ ಕೊಟ್ಟೀದಾರಪ್ಪ, ತರ್ಕದ ಬಗ್ಗೆ ಎಸ್ಸೆ ಬರ್ಕೊಂಡೋಗ್ಬೇಕು’ ಎಂದುಲಿಯಿತು ಕಾನ್ವೆಂಟಿನಲ್ಲಿ ಕಲಿತ ನನ್ನ ಕನ್ನಡದ ಕಂದ. 
‘ತರ್ಕ ಅಂದ್ರೆ ಲಾಜಿಕ್ಕು ಕಣಮ್ಮಾ’ ಎಂದೊಡನೆ ಅಸಡ್ಡೆಯಿಂದ ‘ಓ, ಲಾಜಿಕ್ಕಾ…?’ ಎಂದವಳೇ ಪ್ರಬಂಧ ಬರೆಯಲು ಸಿದ್ಧತೆ ನಡೆಸತೊಡಗಿದಳು. ಸೀದಾ ಲ್ಯಾಪ್ಟಾಪ್ ತೆಗೆದವಳೇ ಇಂಟೆರ್ನೆಟ್ಟಿನಲ್ಲಿ ‘ಎಸ್ಸೇಸ್ ಆನ್ ಲಾಜಿಕ್’ ಎಂದು ಟೈಪಿಸಿ ಗೂಗಲ್ಲಿಸಿದಳು. ತಕ್ಷಣವೇ ಕೊಟ್ಟ ವಿಷಯದ ಬಗ್ಗೆ ಅನೇಕ ಪ್ರಬಂಧಗಳನ್ನು ಎತ್ತೊಗೆಯಿತು ಗೂಗಲ್. ಸೂಕ್ತವಾದ ಪ್ರಬಂಧವೊಂದನ್ನು ಆಯ್ಕೆಮಾಡಿದವಳೇ, ಕಾಪಿ ಮಾಡಿಕೊಂಡು ಗೂಗಲ್ ಟ್ರಾನ್ಸ್ಲೇಟಿಗೆ ಹೋಗಿ ಪೇಸ್ಟ್ ಮಾಡಿದಳು. ಬಹು ಭಾಷಾತಜ್ಞ ‘ಗೂಗಲ್ ಟ್ರಾನ್ಸ್ಲೇಟ್’ ಕ್ಷಣಮಾತ್ರದಲ್ಲಿ ಈಡೀ ಪ್ರಬಂಧದ ಅನುವಾದವನ್ನು ಒದಗಿಸಿಬಿಟ್ಟಿತು. ಹಾಗೆ ದೊರೆತ ಅನುವಾದವನ್ನು ಕಾಪಿ ಮಾಡಿ, ಸೇವ್ ಮಾಡಿಕೊಂಡು, ಪುಟ್ಟಿ ಪ್ರಬಂಧದ ಸಿದ್ಧ ಪ್ರತಿಯನ್ನು ತಯಾರಿಸಲು ಕುಳಿತಳು. ನಾನು ಅಲ್ಲೇ ಕುಳಿತು ನನ್ನ ಪುಟ್ಟಿಯ ಪರದಾಟವನ್ನು ಓರೆಗಣ್ಣಿನಿಂದ ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದೆ. ಪುಟ್ಟಿ ಪೆನ್ನು ಪೇಪರ್ ತೆಗೆದುಕೊಂಡು ಗೂಗಲ್ ಅನುವಾದವನ್ನು ನಕಲಿಸುತ್ತಾ ಹೋದಳು. “ತರ್ಕಬದ್ಧವಲ್ಲದ ತಾರ್ಕಿಕ-ತರ್ಕಬದ್ಧವಲ್ಲದ ಇದು ನಿರ್ಣಾಯಕ ಚಿಂತನೆ ಮತ್ತು ತರ್ಕ ದೋಷಯುಕ್ತ ಆವರಣದಲ್ಲಿ, ನೈಜ ತಾರ್ಕಿಕ ಅಲ್ಲ. ತರ್ಕಬದ್ಧವಲ್ಲದ ತಾರ್ಕಿಕ ಕ್ರಿಯೆ ಎತ್ತರದ ಮಾಮಾ ಲಕ್ಷಣಗಳನ್ನು ಒಂದು ತಾರ್ಕಿಕ ಆಭಾಸ ಆಗಿದೆ. ಕಾರಣ ಒಂದು ತಪ್ಪು,………” ಹೀಗೇ ಸಾಗಿತ್ತು ಗೂಗಲ್ಲಿನ ಪ್ರಬಂಧಾನುವಾದ. ಮಗಳು ಯಾಕೋ ಏನೂ ತಿಳಿಯದೆ ಕಂಗಾಲಾದಳು. ಸ್ವಲ್ಪಹೊತ್ತು ತಲೆ ಕೆರೆದುಕೊಳ್ಳುವುದು, ಉಗುರು, ಪೆನ್ನು ಇತ್ಯಾದಿಗಳ ಕಚ್ಚುವಿಕೆ, ಎಲ್ಲವೂ ನಡೆದುವು. ಇದ್ದಕ್ಕಿದ್ದಂತೆ, ಸಿಸ್ಟಂ ಆಫ್ ಮಾಡಿ ಪ್ರಬಂಧ ಬರೆಯುವ ತನ್ನ ‘ಪ್ರಾಮಾಣಿಕ’ ಪ್ರಯತ್ನಕ್ಕೆ ತಿಲಾಂಜಲಿಯನ್ನಿತ್ತ ಪುಟ್ಟಿ ನೇರವಾಗಿ ನನ್ನ ಬಳಿ ಬಂದವಳೇ, ‘ಅಪ್ಪಾ, ಯಾಕೋ ಏನೋ ನಂಗೇನೂ ತೋಚ್ತಾನೇ ಇಲ್ಲಾಪ್ಪಾ, ಅಪ್ಪಾ ಅಪ್ಪಾ, ಪ್ಲೀಸ್ ಇದೊಂದೆಸ್ಸೆ ಬರ್ಯಕ್ ಸ್ವಲ್ಪ ಹೆಲ್ಪ್ ಮಾಡಪ್ಪಾ’ ಎಂದು ಓಲೈಸುತ್ತಾ ನನ್ನ ದುಂಬಾಲು ಬಿದ್ದಳು. ನನಗೆ ಒಳಗೊಳಗೇ ಖುಷಿಯಾಯಿತು.  ಇಂತಹ ವಿಷಯದ ಬಗ್ಗೆ ಪ್ರಬಂಧ ಬರೆಯಲು ಕೊಟ್ಟ ಕನ್ನಡ ಮ್ಯಾಮಿಗೆ ಫೋನು ಮಾಡಿ ಅಭಿನಂದಿಸಿ ಇನ್ನೂ ಹೆಚ್ಚು ಹೆಚ್ಚು ಇಂಥದ್ದೇ ಅಸೈನ್ಮೆಂಟ್ಸ್ ಕೊಡಬೇಕೆಂದು ವಿನಂತಿಸಿಕೊಳ್ಳಬೇಕೆನಿಸಿತು. ಯಾವಾಗಲೂ ಕಂಪ್ಯೂಟರಿನಲ್ಲಿ ಅದನ್ನು ಹೇಗೆ ಮಾಡುವುದು ಇದನ್ನು ಹೇಗೆ ಮಾಡುವುದೆಂದು ಮಕ್ಕಳನ್ನು ಕೇಳೀ ಕೇಳೀ ಹೇಳಿಸಿಕೊಳ್ಳುತ್ತಾ, ಸ್ವಲ್ಪ ಕೀಳರಿಮೆ ಬೆಳೆಸಿಕೊಳ್ಳುತ್ತಿದ್ದ ನನಗೆ ಈಗ ಈ ಹಠಾತ್ ಪಾತ್ರ ವಿನಿಮಯದ ಪ್ರಸ್ತಾಪ ತುಂಬಾನೇ ಇಷ್ಟವಾಯಿತು. ಫಾರ್ ಎ ಚೇಂಜ್ ದೊರೆತ ಪಾಠ ಹೇಳಿಕೊಡುವ ಪಾತ್ರದಿಂದ ಅನಿರೀಕ್ಷಿತವಾಗಿ ನಾಯಕನ ಪಾತ್ರ ದೊರೆತ ಖಳನ ಪಾತ್ರಧಾರಿಯಂತೆ  ನಾನು ಸ್ವಲ್ಪ ಹೆಚ್ಚೇ ಉತ್ತೇಜಿತನಾಗಿಹೋದೆ. ಆ ಉತ್ಸಾಹದಲ್ಲಿ ಪುಟ್ಟಿಯನ್ನು ಕುರಿತು, “ ಓಕೆ, ಮೊದಲು, ‘ತರ್ಕ’ ಎಂದರೇನೆಂದು ಸ್ವಲ್ಪ ತರ್ಕಮಾಡಿ ನೋಡೋಣವೇ?” ಎಂದು ಶುರುವಿಟ್ಟುಕೊಂಡೆ. ಪದಗಳೊಂದಿಗೆ ಆಟವಾಡುತ್ತಾ ಇಂಥ ವಾಕ್ಯರಚನೆಗಳನ್ನು ಮಾಡುವ ನನ್ನ ಸಾಮರ್ಥ್ಯದ ಬಗ್ಗೆ ನನಗೆ ಹೆಮ್ಮೆಯೆನಿಸದಿರಲಿಲ್ಲ.

ಮುಂದುವರಿದು, “ಸ್ವಲ್ಪ ಎಡವಟ್ಟಾಗಿ ಕಾಣುವ ಈ ವಾಕ್ಯದಲ್ಲಿ, ಪುನರಾವರ್ತಿತವಾಗಿರುವ ‘ತರ್ಕ’ ಎಂಬ ಪದವನ್ನು ಮೊದಲು ನಾಮಪದವಾಗಿಯೂ ನಂತರ ಕ್ರಿಯಾಪದವಾಗಿಯೂ ಬಳಸಲಾಗಿದೆಯಷ್ಟೆ, ಆದರೆ ಸಾಮಾನ್ಯವಾಗಿ ಜನ, ಒಂದು ಪದದ ಕ್ರಿಯಾಪದ ರೂಪವನ್ನು ಗ್ರಹಿಸುವಷ್ಟು ಸುಲಭವಾಗಿ ನಾಮಪದ ರೂಪವನ್ನು ಅರ್ಥಮಾಡಿಕೊಳ್ಳುವುದಿಲ್ಲ.” ಎಂದು ವಿವರಿಸಿದೆ. ಯಾಕೋ ಮಗಳು, ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದಂತೆ ಅನ್ನಿಸಿತು. ಪ್ರಾರಂಭವೇ ಸರಿಯಾಗಲಿಲ್ಲವೇನೋ ಎಂದನುಮಾನವಾಯಿತು. ನಾನು ಹೇಳಿದ್ದರಲ್ಲೇನಾದರೂ ತಪ್ಪಿದೆಯೇನೋ ಎಂದು ಆತ್ಮವಿಮರ್ಶೆ ನಡೆಸಿದೆ. ನಾನೇನೂ ತಪ್ಪಾಗಿ ಹೇಳಲಿಲ್ಲವೆಂದನಿಸಿತು. ಇಲ್ಲ, ಇದೊಂದು ವಿಷಯದಲ್ಲಿ ಮಾತ್ರ ಅಂತಲ್ಲ, ನಾನು ಇನ್ನೂ ಅನೇಕ ನಿದರ್ಶನಗಳಲ್ಲಿ ಗಮನಿಸಿದ್ದೇನೆ, ಉದಾಹರಣೆಗೆ ‘ಮೇಕ್ ಲವ್, ನಾಟ್ ವಾರ್’ ಎಂಬ ಇಂಗ್ಲೀಷಿನ ಪ್ರಸಿದ್ಧ ಉಕ್ತಿಯನ್ನೇ ತೆಗೆದುಕೊಳ್ಳಬಹುದು. ಈ ಉಕ್ತಿಯ ತಪ್ಪುಗ್ರಹಿಕೆಯೇ ಇಂದು ಪ್ರಪಂಚದಲ್ಲಿ  ಆಗುತ್ತಿರುವ ನಿಗ್ರಹವಿಲ್ಲದ ಜನಸಂಖ್ಯಾ ಸ್ಫೋಟಕ್ಕೂ ಮತ್ತು ಎಲ್ಲೆಲ್ಲೂ ಹೆಚ್ಚುತ್ತಿರುವ ಅಶಾಂತಿ ಹಿಂಸಾಚಾರಗಳಿಗೂ ಕಾರಣವಾಗಿರಬಹುದು ಎಂದು ನಾನು ಕೆಲವೊಮ್ಮೆ ಅಂದುಕೊಂಡದ್ದಿದೆ. ಈ ಉಕ್ತಿಯಲ್ಲಿ  ‘ಲವ್’ ಶಬ್ದದ ಕ್ರಿಯಾಪದ ರೂಪವನ್ನು ಆಳವಾಗಿಯೇ ಗ್ರಹಿಸಿರುವ ಜನ, ಅದರ ನಾಮಪದ ರೂಪವನ್ನೂ ಹಾಗೇ ಅರ್ಥ ಮಾಡಿಕೊಂಡಿದ್ದಿದ್ದರೆ ಬಹುಶಃ ಈ ಜಗತ್ತು ಇಂದು ಈ ಸಮಸ್ಯೆಗಳಿಂದ ಮುಕ್ತವಾಗಿ ಸ್ವರ್ಗ ಸದೃಶವಾಗಿರುತ್ತಿತ್ತೇನೋ?! ಅನ್ನಿಸಿತು. 
ಅಷ್ಟರಲ್ಲಿ ಪುಟ್ಟಿ ಅಸಹನೆ ತೋರುತ್ತಾ, ‘ಬೇಗ್ಬೇಗ ಹೇಳಪ್ಪಾ, ನಾನಿನ್ನೂ ಮೈನ್ ಸಬ್ಜೆಕ್ಟ್ಸ್ ಓದ್ಕೋಬೇಕೂ, ಲ್ಯಾಂಗ್ವೇಜ್ಗೇ ಇಷ್ಟು ಟೈಮಾಗ್ಬುಟ್ರೆ ಗೋ……ವಿಂದ’ ಅಂದಳು.
ಲ್ಯಾಂಗ್ವೇಜ್ ಮೈನ್ ಸಬ್ಜೆಕ್ಟ್ ಅಲ್ಲವೆಂದರೆ ನನಗೆ ಸಾಮಾನ್ಯವಾಗಿ ಸಿಟ್ಟು ಬರುತ್ತದೆ ಆದರೆ ನನ್ನ ಈಗಿನ ಮನಸ್ಥಿತಿ ಸ್ವಲ್ಪ ಭಿನ್ನವಾಗಿತ್ತು. ಮಗಳಿಗೆ ಪಾಠ ಹೇಳುವಾಗ ಕೊಳಕು ಯೋಚನಾ ಲಹರಿಯಲ್ಲಿ ಕಳೆದುಹೋಗಿದ್ದಕ್ಕೆ ನನಗೆ ನನ್ನ ಬಗ್ಗೆಯೇ ಹೇಸಿಗೆಯೆನ್ನಿಸುತ್ತಿತ್ತು. ಆದರೂ ಏನನ್ನೂ ತೋರಿಸಿಕೊಳ್ಳದೆ ಗಂಭೀರ ಮುಖಚರ್ಯೆಯೊಂದಿಗೆ “ಮೊದಲು, ‘ತರ್ಕ’ ಎಂದರೇನೆಂದು ಸ್ವಲ್ಪ ತರ್ಕಮಾಡಿ ನೋಡೋಣವೇ?, ಎಂಬ ವಾಕ್ಯದಲ್ಲಿ ಸಾಧಾರಣವಾಗಿ, ಎಲ್ಲರಿಗೂ ಕ್ರಿಯಾಪದವು ಸುಲಭವಾಗಿ ಅರ್ಥವಾಗಿಬಿಡುತ್ತದೆ. ಈ ವಾಕ್ಯದಲ್ಲಿ ‘ತರ್ಕ’ ಎಂಬ ಕ್ರಿಯಾಪದವನ್ನು ‘ಊಹೆ/ಚರ್ಚೆ/ವಿಚಾರ/ಪರಾಮರ್ಶೆ/ಚಿಂತನೆ/ವಿವೇಚನೆ’ ಇತ್ಯಾದಿ ಪದಗಳಿಂದ ಬದಲಿಸಿದರೂ ವಾಕ್ಯದ ಒಟ್ಟಾರೆ ತಾತ್ಪರ್ಯದಲ್ಲಿ ವಿಶೇಷವಾದ ಬದಲಾವಣೆಯೇನೂ ಆಗುವುದಿಲ್ಲ, ಅಲ್ಲವೇ?, ನಾನು ಹೇಳುತ್ತಿರುವುದು ಅರ್ಥವಾಗುತ್ತಿದೆಯೇ ಪುಟ್ಟೀ?” ಎಂದು ಕಳಕಳಿಯಿಂದ ಖಾತ್ರಿ ಪಡಿಸಿಕೊಂಡೆ. ಮಗಳು ಗೋಣಲ್ಲಾಡಿಸಿದಳು. ಜಾಣೆಯಾದ ಪುಟ್ಟಿ ಸಂಕೀರ್ಣವಾದ ವಿಚಾರಗಳನ್ನೂ ಥಟ್ಟನೆ ಗ್ರಹಿಸಿಬಿಡುತ್ತಾಳೆ. ಎಷ್ಟಾದ್ರೂ ಅವರಪ್ಪನ ಜೀನ್ಸ್ ಅಲ್ವೇ, ಎಂದು ಹೆಮ್ಮೆಯಾಗದಿರಲಿಲ್ಲ.

“ಆದರೆ, ‘ತರ್ಕವೆಂದರೇನು?’ ಎಂಬ ಮೂಲಭೂತ ಪ್ರಶ್ನೆ ಎದುರಾದಾಗ ಈ ಮೇಲೆ ಉಲ್ಲೇಖಿಸಿದ ‘ಊಹೆ/ಚರ್ಚೆ/ವಿಚಾರ/ಪರಾಮರ್ಶೆ/ಚಿಂತನೆ/ವಿವೇಚನೆ’ ಇತ್ಯಾದಿ ಪದಗಳೆಲ್ಲವೂ ತರ್ಕದ ಗುಣಲಕ್ಷಣಗಳನ್ನು ಸಮಗ್ರವಾಗಿ ಕಟ್ಟಿಕೊಡುವಲ್ಲಿ ಸೋತುಹೋಗುವುದರಿಂದ ತರ್ಕದ ನಿಜವಾದ ಸ್ವರೂಪವನ್ನರಿಯಲು ಹೆಚ್ಚಿನ ಚಿಂತನೆ ಅನಿವಾರ್ಯ ಕಣಮ್ಮಾ” ಎಂದು ಪೀಠಿಕೆ ಮುಗಿಸಿದೆ.
ಮಗಳು ಮೈಮುರಿಯುತ್ತಾ ದೊಡ್ಡದಾಗಿ ಆಕಳಿಸಿದಳು. ನಾನು ಅವಳ ಇಂಥಾ ದೇಹ ಭಾಷಾ ತಂತ್ರಗಳಿಂದ  ವಿಚಲಿತನಾಗದಿರಲು ನಿರ್ಧರಿಸಿದೆ. “ಈಗ  ಒಂದು ನಾಮಪದವಾಗಿ ತರ್ಕದ ಅರ್ಥವನ್ನು ತಿಳಿದುಕೊಳ್ಳೋಣ. ತರ್ಕವೆಂದರೆ ಕಾರ್ಯಕಾರಣಗಳ ಸರಿಯಾದ ಪರಾಮರ್ಶೆಯೆನ್ನಬಹುದು. ಈ ಕಾರ್ಯಕಾರಣಗಳ ಪರಾಮರ್ಶೆಯ ಪ್ರಕ್ರಿಯೆಯು ಸಾಕ್ಷ್ಯಾಧಾರಿತ ಕ್ರಮವನ್ನಾಧರಿಸಿದ ಸತ್ಯ ಶೋಧನೆಯಾಗಿರುತ್ತದೆ. ಸಾಮಾನ್ಯವಾಗಿ ಈ ಪರಾಮರ್ಶೆಗಳು ವಾದಗಳ ರೂಪದಲ್ಲಿ ಅಭಿವ್ಯಕ್ತಗೊಳ್ಳುತ್ತವೆ” ಎಂದು ಪುಟ್ಟಿಯ ಸ್ಪಂದನಕ್ಕಾಗಿ ಒಂದು ಸಣ್ಣ Pause ನೀಡಿದೆ. ಪುಟ್ಟಿ ಅನ್ಯಮನಸ್ಕಳಾಗಿ ಗಡಿಯಾರ ನೋಡುತ್ತಿದ್ದಳು. ವಿನಾಕಾರಣ ಸಿಟ್ಟು ಮಾಡಿಕೊಂಡು ಬಹಳ ದಿನಗಳ ಮೇಲೆ ಅಪರೂಪಕ್ಕೆ ದಕ್ಕುತ್ತಿದ್ದ ಮಾತಿನ ಓಘವನ್ನು ಅನ್ಯಾಯವಾಗಿ ಕಳೆದುಕೊಳ್ಳಬಾರದೆಂದು ತೀರ್ಮಾನಿಸಿ ಸಂಯಮದಿಂದ ಮಾತು ಮುಂದುವರಿಸಿದೆ. “ಇನ್ನು ವಾದಗಳ ಸ್ವರೂಪವನ್ನು ಗಮನಿಸೋಣ. ವಾದಗಳು ಹಲವು ಘೋಷಣಾವಾಕ್ಯಗಳ ಅಥವಾ  ಹೇಳಿಕೆಗಳ ಸರಣಿಯಾಗಿದ್ದು, ಸಾಮಾನ್ಯವಾಗಿ ಕೊನೆಯ ಹೇಳಿಕೆಯು ತೀರ್ಮಾನವಾಗಿರುತ್ತದೆ. ಆ ತೀರ್ಮಾನಕ್ಕೆ ಬುನಾದಿಯನ್ನು ಒದಗಿಸುವ ಸರಣಿಯಲ್ಲಿನ ಉಳಿದ ಹೇಳಿಕೆಗಳನ್ನು ಆವರಣವೆಂದು ಕರೆಯುತ್ತಾರೆ. ವಾದಸರಣಿಯಲ್ಲಿನ ಹೇಳಿಕೆಗಳ ಸತ್ಯಾಸತ್ಯತೆಗಳು ಇಲ್ಲಿ ಪ್ರಸ್ತುತವಲ್ಲ.” ಎಂದು ಒಂದೇ ಉಸುರಿಗೆ ಒದರಿ ಒಣ ಹೆಮ್ಮೆಯ ನಗೆ ನಕ್ಕೆ. ಅದಕ್ಕೆ ತುಂಟ ಪುಟ್ಟಿಯು “ಅದನ್ನೇ ಸ್ವಲ್ಪ ಕನ್ನಡದಲ್ಲಿ ಹೇಳ್ಬುಡ್ತೀಯೇನಪ್ಪಾ?” ಎಂದು ಬಿಡಬೇಕೆ! 

ತಕ್ಷಣ, ಅಲ್ಲೇ ಅಕ್ಕಿ ಆರಿಸುತ್ತಾ ಅಪ್ಪ ಮಗಳ ಸಂವಾದವನ್ನಾಲಿಸುತ್ತಿದ್ದ ಪುಟ್ಟಿಯ ತಾಯಿ ಘೊಳ್ಳೆಂದು ನಕ್ಕುಬಿಟ್ಟಳು. ನನಗೆ ಸ್ವಲ್ಪ ಅವಮಾನವಾದಂತಾದರೂ ತೋರಿಸಿಕೊಳ್ಳಲಿಲ್ಲ. ಆದರೂ ಇದೇಕೋ ಸರಿಹೋಗುತ್ತಿಲ್ಲವೆಂದು ತಿಳಿದುಹೋಯಿತು. “ ಮೊದ್ಲೇ ಮೂರ್ಹೊತ್ತೂ ಟೀವಿ, ಕಂಪ್ಯೂಟ್ರೂ ಅಂತಂದ್ಕೊಂಡಿರೋ ಈ ಪೀಳೀಗೆಗೆ ಓದೋ ಹವ್ಯಾಸವೇ ಇಲ್ದೆ ನಿಮಗೆಲ್ಲಾ ಸರಿಯಾಗಿ ಕನ್ನಡವೇ ಬರಲ್ಲ, ಇನ್ನು ನಮ್ಮನ್ಬೇರೆ ಆಡ್ಕೋಳಿ, ನಂಗೇನಾಗ್ಬೇಕು?  ನನ್ಕೆಲಸ ಇನ್ನೂ ಸುಲಭಾನೆ ಆಯ್ತು. ಒಂದೆರ್ಡುದಾಹರ್ಣೆ ಕೊಟ್ಟು ವಿಚಾರ ಹೇಳ್ಬುಟ್ಟು ಕೈ ತೊಳ್ಕೊಂಬುಡ್ತೀನಿ, ನಿಂ ಭಾಷೆ ತಾನೇ ಹಾಳಾಗೋಗೋದು, ನಂಗೇನು?” ಎಂದು ಮೆಲ್ಲನೆ ಉದಾಹರಣೆಗಳತ್ತ ಹೊರಳಿಕೊಂಡೆ.
“ಪುಟ್ಟೀ, ಈ ಉದಾಹರಣೆಯನ್ನು ಸ್ವಲ್ಪ ಗಮನಿಸು. ಇಲ್ಲಿ ಮೂರು ವಾಕ್ಯಗಳಿವೆ, 

            ೧. ಮನುಷ್ಯರೆಲ್ಲರೂ ಒಂದಲ್ಲ ಒಂದು ದಿನ ಸತ್ತೇ ಸಾಯುತ್ತಾರೆ.
            ೨. ಸುಬ್ಬಾವಧಾನಿ ಒಬ್ಬ ಮನುಷ್ಯ.
            ೩. ಹಾಗಾಗಿ, ಸುಬ್ಬಾವಧಾನಿ ಸತ್ತೇ ಸಾಯುತ್ತಾನೆ.

ಈ ಉದಾಹರಣೆಯಲ್ಲಿನ ಮೊದಲೆರಡು ಹೇಳಿಕೆಗಳನ್ನು ಆವರಣವೆಂದು ಕರೆಯುತ್ತಾರೆ. ಈ ವಾಕ್ಯಗಳು ನಾವು ಕೊನೆಯಲ್ಲಿ ಮಾಡುವ ತೀರ್ಮಾನದತ್ತ ನಮ್ಮನ್ನು ಕೊಂಡೊಯ್ಯುತ್ತವೆ. ಕೊನೆಯ ವಾಕ್ಯವನ್ನು ತೀರ್ಮಾನವೆಂದು ಕರೆಯುತ್ತಾರೆ. ಸಾಮಾನ್ಯವಾಗಿ ತೀರ್ಮಾನದ ವಾಕ್ಯವು, ‘ಹಾಗಾಗಿ’ ಅಥವಾ ‘ಆದ್ದರಿಂದ’ ಮುಂತಾದ ಪದಗಳಿಂದ ಪ್ರಾರಂಭವಾಗುತ್ತದೆ. ತಿಳಿಯಿತೇ” ಎಂದು ವಿವರಣೆ ಮುಂದುವರಿಸಿದೆ. “ಯಾವುದೇ ವಾದಕ್ಕೆ ಯಶಸ್ಸು ದೊರೆಯಬೇಕಾದರೆ. ಅದರ ಆವರಣಗಳು ನಿಜವಾಗಿರಬೇಕು ಮತ್ತು ಅವುಗಳ ಪರಾಮರ್ಶೆ ನ್ಯಾಯಸಮ್ಮತವಾಗಿರಬೇಕು. ಆವರಣವು ಯಾವಾಗಲೂ ತೀರ್ಮಾನಕ್ಕೆ ಸಾಕ್ಷಿಗಳನ್ನೊದಗಿಸುತ್ತದೆ. ಹಾಗಾಗಿ ಆವರಣವನ್ನೊಪ್ಪಿಕೊಂಡ ಯಾವುದೇ ವಿಚಾರವಂತನು ತೀರ್ಮಾನವನ್ನೂ ಒಪ್ಪಲೇಬೇಕಾಗುತ್ತದೆ.” ಎಂದು ಮನವರಿಕೆ ಮಾಡಿಕೊಟ್ಟೆ. ಪುಟ್ಟಿಗೆ ಈಗ ಸ್ವಲ್ಪ ಸ್ವಲ್ಪ ಅರ್ಥವಾದಂತಾಗಿ ಪೆನ್ನು ಪೇಪರ್ ತೆಗೆದುಕೊಂಡು ಉದಾಹರಣೆಯ ಟಿಪ್ಪಣಿಮಾಡಿಕೊಂಡಳು. ಕೊಂಚ ಹಿನ್ನಡೆ ಕಂಡಿದ್ದ ನನ್ನ ಆತ್ಮವಿಶ್ವಾಸಕ್ಕೆ ಸ್ವಲ್ಪ ಪುನಶ್ಚೇತನ ದೊರೆತಂತಾಯಿತು. ಧೈರ್ಯದಿಂದ ಇನ್ನೊಂದು ಉದಾಹರಣೆಯನ್ನು ತೆಗೆದುಕೊಂಡು ವಿಶ್ಲೇಷಣೆಗೆತೊಡಗಿದೆ. 

            ೧. ರಾಜಕಾರಣಿಗಳೆಲ್ಲರೂ ಭ್ರಷ್ಟಾಚಾರಿಗಳು.
            ೨. ಸುಬ್ಬಾವಧಾನಿ ಒಬ್ಬ ರಾಜಕಾರಣಿ.
            ೩. ಹಾಗಾಗಿ, ಸುಬ್ಬಾವಧಾನಿ ಭ್ರಷ್ಟಾಚಾರಿ. 

“ಈ ಎರಡನೆಯ ಉದಾಹರಣೆಯಲ್ಲಿನ ಆವರಣವು ಸಂಪೂರ್ಣ ಸತ್ಯವಲ್ಲ. ಎಲ್ಲ ರಾಜಕಾರಣಿಗಳೂ ಭ್ರಷ್ಟರಲ್ಲದಿರಬಹುದು. ಅವರಲ್ಲೂ ಬೆರಳೆಣಿಕೆಯಷ್ಟು ಜನರಾದರೂ ಪ್ರಾಮಾಣಿಕರಿರಬಹುದು. ಆ ಪಂಕ್ತಿಯಲ್ಲಿ ಸುಬ್ಬಾವಧಾನಿಯೂ ಸೇರಬಹುದು. ಹಾಗಾಗಿ ಈ ವಾದವನ್ನು ಒಪ್ಪಲಾಗುವುದಿಲ್ಲ. ಈ ಪ್ರಕರಣದಲ್ಲಿ ನಮ್ಮ ಪರಾಮರ್ಶೆ ಸರಿಯಿದ್ದರೂ ಆವರಣವು ಸತ್ಯವಲ್ಲದ ಕಾರಣ ವಾದವು ಸೋತುಹೋಗುತ್ತದೆ” ಎಂದು ವ್ಯಾಖ್ಯಾನ ಮಾಡಿದೆ. “ಶುದ್ಧ ತರ್ಕವೆಂದು ಗುರಿತಿಸಲಾಗುವ ಈ ಪದ್ಧತಿಗೆ ಅನುಮಾನಾತ್ಮಕ ತರ್ಕವೆನ್ನುತ್ತಾರೆ. ಇದರಲ್ಲಿ ಊಹೆಗಳ ಸಹಾಯದಿಂದ ವಿವೇಚನೆ ನಡೆಸಿ ತೀರ್ಮಾನಗಳಿಗೆ ಬರುತ್ತಾರೆ.” ಎಂದೂ ಸೇರಿಸಿದೆ. ಪುಟ್ಟಿಗೆ ತನ್ನ ಪ್ರಬಂಧಕ್ಕೆ ಸ್ವಲ್ಪ ಸರಕು ಸಿಕ್ಕ ಸಮಾಧಾನ ಮೂಡಿದಂತೆ ಕಂಡಿತು. ನನ್ನ ಉತ್ಸಾಹವೂ ಹೆಚ್ಚಿದಂತೆ ತೋರುತ್ತಿತ್ತು. “ಇದೇ ರೀತಿ ತರ್ಕಶಾಸ್ತ್ರದಲ್ಲಿ ಅನುಗಮನಾತ್ಮಕ ತರ್ಕ ಎನ್ನುವ ಪದ್ಧತಿಯೊಂದಿದೆ. ಅದರಡಿಯಲ್ಲಿ, ದೃಷ್ಟಾಂತಗಳನ್ನೂ, ದೈನಂದಿನ ಆಗುಹೋಗುಗಳನ್ನು ಗಮನಿಸಿ ತೀರ್ಮಾನಗಳಿಗೆ ಬರುತ್ತಾರೆ, ‘ಬೆಂಕಿ ಸುಡುತ್ತದೆ’, ‘ಕೈಕೆಸರಾದರೆ ಬಾಯ್ಮೊಸರು’, ‘ಹೊಳೆಯುವುದೆಲ್ಲಾ ಚಿನ್ನವಲ್ಲ’, ‘ಬೆಳ್ಳಗಿರುವುದೆಲ್ಲಾ ಹಾಲಲ್ಲ’ ಎಂಬಂಥಾ ತೀರ್ಮಾನಗಳು ಅನುಗಮನಾತ್ಮಕ ತರ್ಕದ ಆಧಾರದಮೇಲೆ  ಮಾಡಲ್ಪಡುತ್ತವೆ” ಎಂದು ಉದಾಹರಣೆಗಳ ಸಹಿತ ವಿವರಿಸಿದೆ. “ಇಷ್ಟ್ ಬರೆದ್ರೆ ಎರಡ್ಪೇಜಾಗತ್ತಲ್ವೇನಪ್ಪ?” ಎಂದು  ವಿನೀತಳಾಗಿ ಕೇಳಿದ ಪುಟ್ಟಿಯು ನನಗೆ ರವಾನಿಸಬೇಕಾಗಿದ್ದ ಸಂದೇಶವನ್ನು ಯಶಸ್ವಿಯಾಗಿ ರವಾನಿಸಿದ್ದಳು. ಬೇರೆ ದಾರಿಯಿಲ್ಲದ ನಾನು, “ ಆಗತ್ತಾಗತ್ತೆ, ನಿನ್ನ ಲೆವೆಲ್ಗೆ ಇಷ್ಟು ಸಾಕು” ಎಂದು ಸಿಕ್ಕ ಅವಕಾಶದಲ್ಲಿ ಅವಳ ಲೆವೆಲ್ಲು ಮತ್ತು ನನ್ನ ಲೆವೆಲ್ಲುಗಳ ವ್ಯತ್ಯಾಸವನ್ನು ಸೂಚ್ಯವಾಗಿ ತಿಳಿಸಿ, ಪುಟ್ಟಿಯನ್ನು ಬಿಡುಗಡೆಗೊಳಿಸಿದೆ.

*****

(ಮುಂದುವರೆಯುವುದು…)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

16 Comments
Oldest
Newest Most Voted
Inline Feedbacks
View all comments
mukunda s
mukunda s
10 years ago

Tarka tumba chennagide continue maafi please

Vasuki
10 years ago

ವಿಷಯ ಮತ್ತು ನಿರೂಪಿಸಿರುವ ರೀತಿ ಎರಡೂ ತುಂಬಾ ಚನ್ನಾಗಿದೆ!

Raghu V
Raghu V
10 years ago

Tarkada bagge ishtondu vishaya erotte anta evatte gottagiddue! Tumba Chennagide!!

Ramacharan
Ramacharan
10 years ago

Waiting to read the second part… Article has really created curiosity

Narayan Sankaran
Narayan Sankaran
10 years ago

Thanks Mukunda, Raghu, Ram & Vasuki, please read the following parts also. I think I've really churned out something funny in this one 🙂 

Guruprasad Kurtkoti
10 years ago

ನಾರಾಯಣ, ತುಂಬಾ ಚೆನ್ನಾಗಿದೆ! ಜ್ನಾನದ ಜೊತೆಗೆ ಹಾಸ್ಯವೂ ಬೆರೆತ ನಿಮ್ಮ ಬರಹ ಒಳ್ಳೆ ನಳಪಾಕದಂತಿದೆ!

Santhoshkumar LM
10 years ago

Sir….Loved this article.
What a sense of humour you have….great…pls continue 🙂

Narayan Sankaran
Narayan Sankaran
10 years ago

ತುಂಬಾ ಸಂತೋಷ ಸಂತೋಷ್, ಧನ್ಯವಾದಗಳು

Jairam
Jairam
10 years ago

Sir, the topic took me bak to times. Many a times I have gone to my father requesting him to help out on "tough" kannada topics. It reminded me of those days.

I have said this before, your writings transport the reader to the cavas you are painting. A rare feat indeed.

Please keep writing & if possible please give a link where all your articles are compiled, I shall take a print. If you plan to come out with a book- I'll be first in line to get a autographed copy 🙂

best wishes

Jairam Krishna Kulkarni

Jairam
Jairam
10 years ago

~~Sir, the topic took me back in time. Many a times I have gone to my father requesting him to help out on "tough" kannada topics. It reminded me of those days 🙂

I have said this before, your writings transport the reader to the cavas you are painting. A rare feat indeed.

Please keep writing & if possible please give a link where all your articles are compiled, I shall take a print. If you plan to come out with a book- I'll be first in line to get an autographed copy 🙂

best wishes

Jairam Krishna Kulkarni

 

Narayan Sankaran
Narayan Sankaran
10 years ago
Reply to  Jairam

Thanks Jairam.

 

Santosh Mulimani
Santosh Mulimani
10 years ago

ತುಂಬಾ ಒಳ್ಳೆಯ ಬರಹ, ಓದುಗರನ್ನು ಹಿಡಿದಿಡುತ್ತದೆ.

Narayan Sankaran
Narayan Sankaran
10 years ago

Thank you santosh mulimani 🙂

 

SHYLAJA
SHYLAJA
9 years ago

Tharka thumba chennagide .

SHYLAJA
SHYLAJA
9 years ago

tharka chennagide

16
0
Would love your thoughts, please comment.x
()
x