ಎಲ್ಲರೂ ತಮ್ಮ ತಮ್ಮ ಭಾವಚಿತ್ರಗಳಿಗೆ ಸಾಮಾನ್ಯವಾಗಿ ಕಟ್ಟನ್ನು ಹಾಕುತ್ತಾರೆ, ಹಾಕಿಸುತ್ತಾರೆ. ಯಾಕೆಂದರೆ ಎಲ್ಲರಿಗೂ ತಮ್ಮ ಭಾವಚಿತ್ರಗಳು ಸುಂದರವಾಗಿ ಕಾಣಬೇಕೆಂಬ ಆಸೆ. ಅದಕ್ಕೆ ಹಾಕಿಸುತ್ತಾರೆ. ಕಟ್ಟುಗಳು ಭಾವಚಿತ್ರದ ಶೋಭೆಯನ್ನು ಹೆಚ್ಚಿಸುತ್ತವೆ. ಭಾವಚಿತ್ರವನ್ನು ವಿರೂಪಗೊಳ್ಳದಂತೆ ಬಹಳ ವರುಷಗಳ ಕಾಲ ಹಾಳಾಗದಂತೆ ರಕ್ಷಿಸುತ್ತವೆ. ಕಟ್ಟು ಹಾಕಿದ ಭಾವಚಿತ್ರಗಳು ತಮ್ಮನ್ನು ಇರಿಸಿದ ಸ್ಥಳ, ಶೋಕೇಸಿನ, ನೇತು ಹಾಕಿದ ಗೋಡೆಯ, ತಾವಿರುವ ಟೇಬಲ್ಲಿನ ಅಂದವನ್ನು ಹೆಚ್ಚಿಸುತ್ತವೆ .
ಭಾವಚಿತ್ರಗಳು ಯಾವ ವಯೋಮಾನದಲ್ಲಿನ ಭಾವಚಿತ್ರಗಳೋ ಆ ವಯೋಮಾನದಲ್ಲಿನ, ಯಾವ ಸಂದರ್ಭದಲ್ಲಿನ ಭಾವ ಚಿತ್ರಗಳೋ ಆ ಸಂದರ್ಭದಲ್ಲಿನ ಭಾವಗಳನ್ನು ಹೊರಹೊಮ್ಮಿಸುತ್ತವೆ. ಬೇರೆ ಬೇರೆ ವಿಶೇಷ ಸಂದರ್ಭಗಳಲ್ಲಿ ಬೇರೆ ಬೇರೆ ಭಾವಗಳು ಭಂಗಿಗಳು ಹೊರ ಹೊಮ್ಮುವುದು ಸಹಜ. ಆಗ ಮುಖ ಭಿನ್ನವಾಗಿ ಕಾಣುತ್ತದೆ. ಅಂತಹ ಚಿತ್ರಗಳು ಭಾವಚಿತ್ರಗಳಾಗುತ್ತವೆ. ಅವುಗಳಲ್ಲಿ ಕೆಲವು ಅಪರೂಪದವಾಗಿರುತ್ತವೆ. ಕೆಲವು ಆಯಾ ವಯೋಮಾನಕ್ಕಷ್ಟೇ ಸೀಮಿತವಾಗಿ ಪುನರಾವರ್ತನೆಗೊಳ್ಳದವಾಗಿರುತ್ತವೆ. ಅವು ಆಕರ್ಷಿಸುತ್ತವೆ. ಬಹುಮಾನ ಸ್ವೀಕರಿಸುತ್ತಿರುವಾಗಿನ, ಓಟದ ಸ್ವರ್ದೆಯಲ್ಲಿ ಗೆಲುವಿನ ಗೆರೆ ದಾಟಿದಾಗಿನ, ಹಸೆಮಣೆ ಏರಿದಾಗಿನ, ಜನ್ಮದಿನಾಚರಣೆಯ ದಿನದ, ಇಷ್ಟವಾದವರಿಗೆ ಕೇಕು ತಿನಿಸುವ, ಇಷ್ಟವಾದವರಿಂದ ಕಾಣಿಕೆ ಪಡೆಯುವ. ಸಭೆ ಸಮಾರಂಭಗಳಲಿ ಸನ್ಮಾನಿತರಾಗುವ, ಶುಭ ಸಮಾರಂಭಗಳಲ್ಲಿನ ಮಧುರ ಕ್ಷಣಗಳ, ಪ್ರವಾಸ ಹೋದಾಗಿನ ಪ್ರಕೃತಿ ಹಿನ್ನೆಲೆಯಾಗಿರುವ, ಕುದುರೆ ಏರಿದ ಸಂದರ್ಭಗಳಲ್ಲಿನ … ಭಾವ ಚಿತ್ರಗಳು ಸುಂದರ ಸುಮಧುರ ನೆನಪುಗಳಾಗುತ್ತವೆ. ಶ್ರವಣ ಕುಮಾರ ಮಾತಾ ಪಿತೃಗಳ ತೀರ್ಥಯಾತ್ರೆಗೆ ಆಡ್ಡೆಯಲ್ಲಿ ಹೊತ್ತೊಯ್ಯುವ, ಶ್ರೀ ಕೃಷ್ಣ ಭಗವದ್ಗೀತೆ ಬೋಧಿಸುವ, ಜಟಾಯು ಒಂದು ಪಕ್ಷಿಯಾಗಿ ಸೀತೆಯ ಸೆರೆ ಬಿಡಿಸಲು ಹೋರಾಡುವ, ಹನುಮಂತ ಸಂಜೀವನಿ ಪರ್ವತವ ಹೊತ್ತು ಗಗನದಿ ಹಾರಿಬರುವ ದೃಶ್ಯದ ಭಾವಚಿತ್ರಗಳಿಗೆ ಕಟ್ಟುಗಳ ಹಾಕಿಸಿರುತ್ತಾರೆ. ಅವುಗಳು ಸಾರ್ವಕಾಲಿಕ ಮಾನವೀಯ ಮೌಲ್ಯಗಳ ಕಟ್ಟುಗಳಾದ್ದರಿಂದ ಆ ಚಿತ್ರಗಳು ವಿರಾಜಮಾನವಾಗಿ ಶೋಭಿಸುವಂತಾಗಿವೆ!
ಭಾವಚಿತ್ರದಲ್ಲಿನ ವ್ಯಕ್ತಿಯೇ ತನ್ನ ಭಾವಚಿತ್ರಕ್ಕೆ ಯಾವ ಕಟ್ಟು ಬೇಕೆಂದು ಆಯ್ಕೆ ಮಾಡಬೇಕು ಯಾವ ಯಾವುದೋ ಬಹಳಷ್ಟು ಬೆಲೆ ಬಾಳುವ ಕಟ್ಟುಗಳನ್ನು ಯಾರು ಯಾರೋ ತಂದು ಹಾಕುವುದರಿಂದ ಭಾವಚಿತ್ರದಲ್ಲಿರುವ ವ್ಯಕ್ತಿಗೆ ಅವು ಇಷ್ಟ ಆಗದೇ ಹೋಗಬಹುದು. ಅವು ಆ ಭಾವಚಿತ್ರಕ್ಕೆ ಶೋಭೆಯನ್ನುಂಟು ಮಾಡದಿರಬಹುದು. ಅಷ್ಟೇ ಅಲ್ಲ ಇರುವ ಶೋಭೆಯನ್ನು ಇಲ್ಲವಾಗಿಸಿಬಿಡಬಹುದು! ಹೀಗಾದಾಗ ಭಾವಚಿತ್ರದಲ್ಲಿರುವ ವ್ಯಕ್ತಿ ಅದನ್ನು ಕಿತ್ತೆಸೆಯುವಂತಾಗಿ ದು:ಖ ಮತ್ತು ನಷ್ಟಕ್ಕೆ ಕಾರಣವಾಗಬಹುದು. ಆದ್ದರಿಂದ ಭಾವಚಿತ್ರದಲ್ಲಿರುವ ವ್ಯಕ್ತಿಯೇ ತನ್ನ ಭಾವಚಿತ್ರಕ್ಕೆ ಸರಿ ಹೊಂದುವ ಕಟ್ಟುಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಕೆಲವರು ಸಿದ್ಧವಿರುವ ಯಾವುದಾದರೂ ಸೂಕ್ತ ಕಟ್ಟುಗಳನ್ನು ಆಯ್ಕೆ ಮಾಡಿ ಕಟ್ಟಿಕೊಂಡು ಶೋಭೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ತಮ್ಮ ಭಾವಚಿತ್ರಕ್ಕೆ ಹೊಸದೇ ಆದ ಪಟ್ಟಿಯ ತಾವೇ ತಯಾರಿಸಿ ಹಾಕಿಕೊಳ್ಳುತ್ತಾರೆ. ಹೀಗೆ ಹಾಕಿಕೊಂಡ ಕಟ್ಟುಗಳು ವಿಶಿಷ್ಟವಾಗಿರುತ್ತವಾದ್ದರಿಂದ ಭಾವಚಿತ್ರಕ್ಕೆ ಶೋಭೆಯನ್ನುಂಟು ಮಾಡಿ ಅದರ ಬೆಲೆ ಹೆಚ್ಚಿಸಿ ಬಹಳ ದಿನ ಬಾಳಿಕೆ ಬರುವಂತೆ ಮಾಡುತ್ತವೆ! ಇತರರೂ ಅಂತಹ ಕಟ್ಟುಗಳನ್ನು ಇಷ್ಟಪಡುವಂತಾಗುತ್ತದೆ. ಆ ಕಟ್ಟುಗಳ ಜತೆಗೆ ಅಂತಹ ಕಟ್ಟುಗಳ ಆವಿಷ್ಕರಿಸಿದುದಕ್ಕಾಗಿ ಆ ವ್ಯಕ್ತಿಯನ್ನೂ ಆರಾಧಿಸುವಂತಾಗುತ್ತದೆ!
ಚೌಕಾಕಾರದ, ಆಯತಾಕಾರದ, ವೃತ್ತಾಕಾರದ, ಅಂಡಾಕಾರದ, ಸಿಲಿಂಡರ್ ಆಕಾರದ, ತ್ರಿಭುಜಾಕಾರದ, ಶೆಡ್ಬುಜಾಕಾರದ, ಶಂಖುವಿನಾಕಾರದ, ಚಕ್ರಾಕಾರದ, ನಕ್ಷತ್ರಾಕಾರದ ಮುಂತಾದ ಆಕಾರಗಳ ಗಂಧ, ತೇಗ, ಹೊನ್ನೆ, ಮತ್ತಿ, ಚಂದನದ ಮರಗಳ ಕಟ್ಟುಗಳು, ಬೆಲೆಬಾಳುವ ಬೆಳ್ಳಿ, ಬಂಗಾರದ ಲೋಹಗಳ ಕಟ್ಟುಗಳು, ಅಗ್ಗದ ಮರ, ಪ್ಲಾಸ್ಟಿಕ್ಕಿನ ಮುಂತಾದ ಕಟ್ಟುಗಳು ಮಾರುಕಟ್ಟೆಯಲ್ಲಿ ಯಥೇಚ್ಚವಾಗಿ ದೊರೆಯುತ್ತವೆ. ಭಾವಚಿತ್ರದಲ್ಲಿನ ವ್ಯಕ್ತಿ ತನ್ನ ಭಾವಚಿತ್ರಕ್ಕೆ ಒಪ್ಪುವ ಕಟ್ಟುಗಳನ್ನು, ಶೋಭೆಯನ್ನುಂಟುಮಾಡುವ ಕಟ್ಟುಗಳನ್ನು, ತನ್ನ ಭಾವಚಿತ್ರದ ಆಕಾರಕ್ಕೆ ಹೊಂದುವ ಕಟ್ಟನು ತಾನೇ ಆಯ್ಕೆ ಮಾಡಿ ಕಟ್ಟಿಕೊಳ್ಳಬೇಕು. ತಾನೇ ಕಟ್ಟಿದ ಕಾರಣ ಎಂತಹ ಸಂದರ್ಭಗಳಲ್ಲೂ ಸಡಿಲಿಸಲಾಗಲಿ ಬಿಚ್ಚಲಾಗಲಿ ಇಷ್ಟಪಡುವುದಿಲ್ಲ!
ಕಟ್ಟುಗಳನ್ನು ಆಯ್ಕೆ ಮಾಡಿದ ಮೇಲೆ ಆ ಕಟ್ಟಿನ ಉದ್ದ, ದಪ್ಪ, ಅಗಲ, ಕೆತ್ತನೆ, ಚಿತ್ತಾರಗಳು, ಡಿಸೈನುಗಳು ಹೇಗಿರಬೇಕೆಂದು ನಿರ್ಧರಿಸಬೇಕು. ಅವುಗಳಿಗೆ ಒಪ್ಪುವ ಬಣ್ಣಗಳನ್ನು ಆಯ್ಕೆ ಮಾಡಬೇಕು. ಅನಂತರ ಅಂತಹ ಕಟ್ಟುಗಳನ್ನು ತನ್ನ ಭಾವಚಿತ್ರದ ಆಕಾರಕ್ಕೆ ಸರಿಯಾಗಿ ಕತ್ತರಿಸಿ ಕಟ್ಟುವ ಕಾರ್ಯಕ್ಕೆ ಕೈ ಹಾಕಬೇಕು. ಅವರವರ ಭಾವಚಿತ್ರಕ್ಕೆ ಅವರೇ ಕಟ್ಟುಗಳನ್ನು ಕಟ್ಟುವುದರಿಂದ ಅವರ ಭಾವಚಿತ್ರ ಕೆಡಬಾರದೆಂದು ವಿರೂಪಗೊಳ್ಳಬಾರದೆಂದು ಕಾಳಜಿಯಿಂದ ಕಟ್ಟುಗಳ ಆಯ್ಕೆ ಮಾಡಿ ಕಟ್ಟುತ್ತಾರೆ. ಗಟ್ಟಿಯಾದ ಯೋಗ್ಯವಾದ ಮೊಳೆಗಳ ಆಯ್ಕೆ ಮಾಡಿ ಪಟ್ಟಿಗಳ ಸರಿಯಾಗಿ ಸಂದು ಕಾಣದಂತೆ ಜೋಡಿಸಿ ಬಿಗಿಯಾಗಿ ಬಂಧಿಸಿ ಮೊಳೆ ಹೊಡೆಯುತ್ತಾರೆ. ತಾವೇ ಪ್ರೀತಿಯಿಂದ ಕಾಳಜಿಯಿಂದ ಹೀಗೆ ಕಟ್ಟನ್ನು ಕಟ್ಟುವುದರಿಂದ ಮಕ್ಕಳು ಮರಿ ಅಲುಗಾಡಿಸಿದರೂ ಕೆಳಗೆ ಕೆಡವಿದರೂ ನನಗೆ ಬೇಕು ಇಲ್ಲ ನನಗೆ ಬೇಕು ಎಂದು ಜಗ್ಗಾಡಿದರೂ ಮಿಸುಕಾಡದಂತೆ ಅಲುಗಾಡದಂತೆ ಮುರಿಯದಂತೆ ಭಾವಚಿತ್ರವನ್ನು ವಿರೂಪಗೊಳಿಸಲು ಅವಕಾಶವಾಗದಂತೆ ಬಿಗಿಯಾಗಿ ಕಟ್ಟುಗಳ ಕಟ್ಟುತ್ತಾರೆ. ಇಂತಹ ಕಟ್ಟು ಬಹಳ ದಿನ ಭಾವಚಿತ್ರವನ್ನು ರಕ್ಷಿಸುತ್ತದೆ. ಅದರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಸ್ವಯಂ ಕಟ್ಟುಗಳನ್ನು ಕಟ್ಟಿಕೊಳ್ಳುವುದು ಉತ್ತಮ.
ಅಂಬೇಡ್ಕರ್ ಅವರು ತನ್ನ ಭಾವಚಿತ್ರಕ್ಕೆ ಕಟ್ಟನ್ನು ಕಟ್ಟಿಕೊಳ್ಳಲು ತುಂಬಾ ಶ್ರಮಿಸಿದರು. ದೇಶದ ಗಡಿದಾಟಿ ಶ್ರಮಿಸಿದರು! ಅಲ್ಲೆಲ್ಲಾ ತನ್ನ ಭಾವಚಿತ್ರಕ್ಕೆ ಶೋಭೆಯುಂಟುಮಾಡುವ ಮರಗಳು, ಕಟ್ಟುಗಳು ಇವೆಯೇ ಎಂದು ಹುಡುಕಿದರು ತಡಕಾಡಿದರು. ಎಲ್ಲೂ ಸಿಗದಾದಾಗ ತನ್ನ ಭಾವ ಚಿತ್ರದ ಶೋಭೆಯನ್ನು ಹೆಚ್ಚಿಸುವಂತಹ ಹೊಚ್ಚ ಹೊಸ ಕಟ್ಟುಗಳ ತಾವೇ ತಯಾರಿಸಲು ಮುಂದಾದರು. ಶ್ರೇಷ್ಠ ಮರವ ಆಯ್ಕೆ ಮಾಡಿ ಕಟ್ಟುಗಳ ತಯಾರಿಸುವಾಗ, ಚಿತ್ತರಿಸುವಾಗ, ಜೋಡಿಸುವಾಗ ಅನೇಕ ಎಡರು ತೊಡರುಗಳು ಬಂದವು, ಕೆಲವರು ಅಡ್ಡಿಪಡಿಸಿದರು, ಕೈ ಕಟ್ಟಿದರು, ಉಳಿ ಕಿತ್ತುಕೊಂಡರು, ತಯಾರಿಸಲಾಗದಂತೆ ಉಸಿರುಗಟ್ಟಿಸಿದರು, ಸಮಸ್ಯೆಗಳ ಮಳೆಗರೆದರು, ನೊಂದರೂ ಬೆಂದರೂ ಇವೆಲ್ಲವುಗಳ ದೈರ್ಯದಿಂದ ದಾಟಿ, ಸಮರ್ಥವಾಗಿ ಎದುರಿಸಿ, ಬಹುವಾಗಿ ಶ್ರಮಿಸಿ ಅಸಮಾನ ಕಟ್ಟುಗಳ ಸಮಾನವಾಗಿ ಕತ್ತರಿಸಿ ಸಮಾನತೆಯ ಕಟ್ಟ ತಯಾರಿಸಿದರು, ಸ್ವಾಭಿಮಾನದ ಕಟ್ಟುಗಳ ಬಿಗಿಯಾಗಿ ಹಿಡಿದು ಹೊಂದಿಸಿ, ಆತ್ಮಾಭಿಮಾನದ ಮೊಳೆಯ ಜಡಿದು ತಯಾರಿಸಿಯೇಬಿಟ್ಟರು ತನ್ನ ಭಾವಚಿತ್ರಕ್ಕೆ ಶೋಭೆಯುಂಟುಮಾಡುವ ಸಮಾನತೆ, ಸ್ವಾಭಿಮಾನದ, ಆತ್ಮಾಭಿಮಾನದ ಅಪರೂಪದ ಕಟ್ಟ! ಗಟ್ಟಿಯಾಗಿ ನಿಂತು, ಕಟ್ಟನ್ನು ಬಿಗಿಯಾಗಿ ಹಿಡಿದು ಇಷ್ಟಪಟ್ಟು ಅಭಿಮಾನದಿಂದ, ಆತ್ಮಾಭಿಮಾನದಿಂದ, ಹೆಮ್ಮೆಯಿಂದ ಕಟ್ಟಿಕೊಂಡರು ಸ್ವಾಭಿಮಾನ ಸಮಾನತೆ ಆತ್ಮಾಭಿಮಾನದ ಕಟ್ಟು! ಸ್ವಾಭಿಮಾನದ ಸಮಾನತೆಯ ಕಟ್ಟನ್ನು ಕಟ್ಟಿಕೊಂಡಿದ್ದರಿಂದ ತನ್ನ ಭಾವ ಚಿತ್ರವಷ್ಟೇ ಅಲ್ಲ ತನ್ನವರ ಭಾವಚಿತ್ರಗಳು ದೇಶದಾದ್ಯಂತ ಶೋಭಿಸಲು, ತನ್ನ ಭಾವಚಿತ್ರ ದೇಶದ ಗಡಿಯ ಆಚೆ ಸೂರ್ಯನಾಗಿ ಪ್ರಜ್ವಲಿಸಲು ಕಾರಣರಾದರು!
ನ್ಯಾಯ, ನೀತಿ, ಸತ್ಯ, ಧರ್ಮ, ಪ್ರಾಮಾಣಿಕತೆ, ಸ್ವಾತಂತ್ರ್ಯ, ಸಮಾನತೆ, ಮಾನವತೆ, ದೇಶಾಭಿಮಾನ, ಶಾಂತಿ, ಸಹನೆ, ಅಹಿಂಸೆ … ಮುಂತಾದ ಶೋಭೆಯನ್ನುಂಟುಮಾಡುವ ಎಲ್ಲಾ ಕಟ್ಟುಗಳನ್ನು ಸೃಜಿಸಿ, ತನ್ನ ಭಾವಚಿತ್ರಕ್ಕೆ ಒಂದರ ಮೇಲೊಂದು ಕಟ್ಟಿಕೊಂಡು ವಿಶ್ವದಾದ್ಯಂತ ತಮ್ಮ ಭಾವಚಿತ್ರಗಳು ಶೋಭಿಸುವಂತೆ ಮಾಡಿದರು ಗಾಂಧಿ. ಎಲ್ಲಾ ಅಪರೂಪದ, ಶೋಭೆಯನ್ನು ಹೆಚ್ಚಿಸುವ ಕಟ್ಟುಗಳನ್ನು ಗಾಂಧಿಯೊಬ್ಬರೇ ಹಾಕಿಕೊಂಡು ಶೋಭಿಸಿದ್ದರಿಂದ ನಾವು ಅವುಗಳನ್ನು ಮತ್ತೇಕೆ ಹಾಕಿಕೊಳ್ಳಬೇಕೆಂದು ಇಂದಿನ ಜನ, ಜನನಾಯಕರು ಅಂತಹ ಕಟ್ಟುಗಳನ್ನು ಹಾಕಿಕೊಳ್ಳದೆ ತಮ್ಮ ಭಾವಚಿತ್ರಗಳ ಆಲ್ಬಂಗಳಲ್ಲೇ ಮುಚ್ಚಿಟ್ಟಿದ್ದಾರೆ! ಕಟ್ಟುಗಳೇ ಇಲ್ಲದ, ಸಹಜ ಭಾವಗಳಿಲ್ಲದ ಚಿತ್ರಗಳೇ ಎಲ್ಲಾಕಡೆ ಇರುವಂತಾಗಿವೆ! ಆ ಭಾವ ಚಿತ್ರಗಳು ಅಂತರಂಗದ ಸಹಜ ಭಾವ ಹೊರ ಹೊಮ್ಮಿಸದೆ ಯಾವುದೋ ಬಯಕೆಗಳ ಈಡೇರಿಸಿಕೊಳ್ಳುವ ಕೃತಕ ಭಾವ ಹೊರ ಹೊಮ್ಮಿಸುತ್ತಿರುವ ಕೃತಕ ಭಾವಚಿತ್ರಗಳಾಗಿವೆ! ಅಂತರಂಗದ ಭಾವವ ಹೊರಹೊಮ್ಮಿಸದ ಭಾವಚಿತ್ರಗಳು ಭಾವಚಿತ್ರಗಳು ಹೇಗೆ ಆಗುತ್ತವೆ? ಕೆಲವರು ಅಂಬೇಡ್ಕರ್, ಗಾಂಧೀ, ಬುದ್ದ ಒಬ್ಬೊಬ್ಬರು ಅವರದೇ ಆದ ಸಮಾನತೆ, ಆತ್ಮಾಭಿಮಾನ, ಅಹಿಂಸೆ, ಧರ್ಮ, ನ್ಯಾಯ, ನೀತಿ, ಶಾಂತಿ, ಇಂತಿಂಥಹ ಕಟ್ಟುಗಳ ಹಾಕಿಕೊಂಡು ಶೋಭಿಸಿದರು. ನೀವೂ ಹಾಕಿಕೊಳ್ಳಿ ಎಂದು ಜನರಿಗೆ ಸಾರುತ್ತಾ ತಾವು ಮಾತ್ರ ಅಂತಹ ಕಟ್ಟುಗಳ ಹಾಕಿಕೊಳ್ಳದೆ ಶೋಭಿಸದೆ ಶೋಭಿಸುವವರ ಹೊಗಳುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ತನ್ನದಲ್ಲದ ಬೆವರಿನ ಫಲ ತಿನ್ನುತ್ತಾ ಮೆರೆಯುತ್ತಿದ್ದಾರೆ! ಸೌಂದರ್ಯ ಸ್ವಯಂ ಕಟ್ಟಿನ ಮಿತಿಯೊಳಗೇ ಅಡಗಿದೆ, ಅನನ್ಯ ಆತ್ಮಾನಂದ, ಜೀವನ್ಮುಕ್ತಿ ಅದರಲ್ಲಿದೆಯೆಂದು ಅರಿಯದ ಕಣ್ಣಿದ್ದರೂ ಬಿಟ್ಟು ನೋಡದ ಇಂತಹ ನತದೃಷ್ಟರಿಗೆ ಹೇಗೆ ಅರ್ಥ ಮಾಡಿಸುವುದು? ನಾಡೆಲ್ಲಾ ಆ ಕಟ್ಟುಗಳ ತಮ್ಮ ಭಾವಚಿತ್ರಗಳಿಗೆ ಹಾಕಿಕೊಂಡು ಆನಂದಿಸಲೆಂದು ಕೆಲವರು ಅಂತಹ ಕಟ್ಟುಗಳ ತಯಾರಿಸಿ ಕಟ್ಟಿಕೊಡಲು ತುದಿಗಾಲಲಿ ನಿಂತಿದ್ದಾರೆ. ಯಾರೂ ಬರುತ್ತಿಲ್ಲ! ನಿರಾಶರಾಗದೆ ಇಂದಲ್ಲ ನಾಳೆ ಬಂದಾರೆಂದು ಕಾಯುತ್ತಿದ್ದಾರೆ. ಬರುವಂತಾಗಲಿ!
* ಕೆ ಟಿ ಸೋಮಶೇಖರ ಹೊಳಲ್ಕೆರೆ.